ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕನ್ನಡ ಕಲಿಯಲು ಉಚಿತ ಬೇಸಿಗೆ ಶಿಬಿರ

30 ದಿನಗಳಲ್ಲಿ ಕನ್ನಡ ಮಾತನಾಡಲು, ಓದಲು ಹಾಗೂ ಬರೆಯಲು ಉಚಿತ ಬೇಸಿಗೆ ಶಿಬಿರವೊಂದು ಬೆಂಗಳೂರಿನ ವೈಟ್ಫೀಲ್ಡ್ ನಲ್ಲಿ ಪ್ರಾರಂಭವಾಗಿದೆ. 15 ವರ್ಷಗಳಿಂದ ಶ್ರೀ ಸರಸ್ವತಿ ಎಜುಕೇಷನ್ ಟ್ರಸ್ಟ್ ಎಂಬ ವಿದ್ಯಾ ಸಂಸ್ಥೆಯಲ್ಲಿ ನಡೆಯುತ್ತಿರುವ ಈ ಬೇಸಿಗೆ ಶಿಬಿರದಿಂದ ಈಗಾಗಲೇ ಸಾವಿರಾರು ಮಂದಿ ಕನ್ನಡೇತರರು ಕನ್ನಡವನ್ನು ಕಲಿತಿದ್ದಾರೆ.

“ಈ ನೆಲ. ಜಲ, ಉಸಿರು, ಅನ್ನ, ವಿದ್ಯೆ, ಉದ್ಯೋಗ ಎಲ್ಲವೂ ಬೇಕು! ಕನ್ನಡ ಭಾಷೆ ಮಾತ್ರ ಬೇಡವೇ?” ಎಂದು ಕನ್ನಡೇತರರಿಗೆ ಪ್ರಶ್ನಿಸುತ್ತಾ ಕನ್ನಡ ಕಲಿಯಲು ಪ್ರೇರೇಪಿಸುವವರು ಡಾ. ಸುಷ್ಮಾ ಶಂಕರ್ ಎಂಬ ಮಲಯಾಳಿ ಮಹಿಳೆ. ಆಂಗ್ಲ ಭಾಷೆಗೆ ಆದ್ಯತೆ ನೀಡಿ ಎರಡನೆಯ ಭಾಷೆಯಾಗಿ ಹಿಂದಿ, ಸಂಸ್ಕೃತ, ಫ್ರೆಂಚ್ ಮುಂತಾದ ಭಾಷೆಗಳನ್ನು ಆಯ್ಕೆಮಾಡಿಕೊಂಡಿರುವ ಶಾಲಾ ಮಕ್ಕಳು ಪ್ರತಿವರ್ಷವು ಈ ಶಿಬಿರದಲ್ಲಿ ಕನ್ನಡವನ್ನು ಕಲಿಯುತ್ತಿದ್ದಾರೆ. ಮಾತೃಭಾಷೆ ಕನ್ನಡವಾದರೂ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿದ್ದರೂ ಸ್ವಂತ ಹೆಸರು, ವಿಳಾಸವನ್ನೂ ಸಹ ಬರೆಯಲಾಗದ ಕನ್ನಡ ಓದಲು ಬಾರದ ಸಾವಿರಾರು ಮಂದಿ ನಮ್ಮಲ್ಲಿದ್ದಾರೆ ಎಂಬುದು ಕನ್ನಡದ ಮಹಾದುರಂತವೆಂದು ಡಾ. ಸುಷ್ಮಾ ಶಂಕರ್ ಹೇಳಿದ್ದಾರೆ. ಅಂಥ ಮಕ್ಕಳು ಈ ಉಚಿತ ಬೇಸಿಗೆ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.

ಪ್ರತಿವರ್ಷ ಮೇ 1ರಿಂದ ಆರಂಭಿಸಿ 31ರಂದು ಮುಕ್ತಾಗೊಳ್ಳುವ ಈ ಉಚಿತ ಬೇಸಿಗೆ ಶಿಬಿರದಲ್ಲಿ 10 ವಯಸ್ಸಿಗಿಂತ ಮೇಲ್ಪಟ್ಟ ಯಾರು ಬೇಕಾದರು ಸ್ವಯಿಚ್ಛೆಯಿಂದ ಕನ್ನಡ ಕಲಿಯಲು ಸೇರಬಹುದು. ಅವರಿಗೆ ಬೇಕಾಗಿರುವ ಪುಸ್ತಕ, ಪೆನ್ಸಿಲ್ ಮುಂತಾದವುಗಳನ್ನು ಸಂಸ್ಥೆಯ ವತಿಯಿಂದ ಉಚಿತವಾಗಿ ನೀಡಲಾಗುತ್ತದೆ.

ಎರಡು ವರ್ಷದ ಕೋವಿಡ್ ಮಹಾದುರಂತದಿಂದ ನಡೆಸಲಾಗದಿದ್ದ ಈ ಶಿಬಿರವು ಹೆಚ್ಚು ಸಂತಸ ಸಡಗರದಿಂದ, ಆವೇಶ ಅಭಿಮಾನದಿಂದ ಇಂದು ಪ್ರಾರಂಭವಾಗಿದೆ. ಇಂದು (01/05/2022) ನಡೆದ, ಈ ಬಾರಿಯ ಶಿಬಿರದ ಉದ್ಘಾಟಣಾ ಕಾರ್ಯಕ್ರಮವನ್ನು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ತೊದಲ್ನುಡಿ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಸುಷ್ಮಾ ಶಂಕರ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಈಸ್ಟ್ ಪಾಯಿಂಟ್ ಉನ್ನತ ಶಿಕ್ಷಣ ಸಂಸ್ಥೆಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾದ ಶ್ರೀಮತಿ ಶೈಲಜಾರವರು ಜ್ಯೋತಿ ಬೆಳಗಿ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪಿ. ಎಂ. ಎ. ಡಬ್ಲ್ಯೂನ ಚೇರ್ಮಾನ್ ಆದ ಶ್ರೀ ರಮೇಶ್ ಕುಮಾರ್ ವಿ ರವರು ಸಭೆಯನ್ನು ಕುರಿತು ಮಾತನಾಡುತ ವೈಟ್ಫೀಲ್ಡ್ ನಲ್ಲಿರುವ ಎಲ್ಲಾ ಮಲಯಾಳಿಗಳಿಗೂ ಈ ಶಿಬಿರ ಕನ್ನಡ ಕಲಿಯಲು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು. ರಾಕೇಶ್ ವಿ. ಎಸ್. ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

ಈ ಶಿಬಿರದಲ್ಲಿ ಶ್ರೀ ಸರಸ್ವತಿ ಎಜುಕೇನ್ ಟ್ರಸ್ಟ್ ನ ಎಲ್ಲಾ ಶಿಕ್ಷಕರು ಹಾಗೂ ತೊದಲ್ನುಡಿ ಮಾಸಪತ್ರಿಕೆಯ ಎಲ್ಲಾ ಕಾರ್ಯನಿರ್ವಾಹಕರು ಒಂದು ತಿಂಗಳ ಕಾಲ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ಬಾರಿಯ ಶಿಬಿರದಲ್ಲಿ ತೆಲುಗು, ಮಲಯಾಳಂ, ತಮಿಳು, ಗುಜರಾತಿ, ಮರಾಠಿ, ಬಿಹಾರಿ, ಒಡಿಯಾ, ಉರ್ದು ಮುಂತಾದ ಮಾತೃಭಾಷೆಯುಳ್ಳ ಅಭ್ಯರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಹಾಗೂ ಸುತ್ತಮುತ್ತಲಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಹಲವು ಮಕ್ಕಳು ಕನ್ನಡ ಓದಲು, ಬರೆಯಲು ಕಲಿಯಲು ಸೇರಿಕೊಂಡಿದ್ದಾರೆ ಎಂದು ಡಾ. ಸುಷ್ಮಾ ಶಂಕರ್ ತಿಳಿಸಿದರು.