- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಹೈದರಾಬಾದ್: ನವಂಬರ್ 12:
ಸ್ಥಳೀಯ ಹೋಟಲ್ ಉದ್ಯಮಿ ಶ್ರೀ ಮಾರನಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಕರ್ನಾಟಕ ಸರಕಾರ ನೀಡಿದ ಸಂದರ್ಭವಾಗಿ ಜಂಟಿನಗರಗಳ ಕನ್ನಡ ಸಂಸ್ಥೆಗಳು ಈ ದಿನ “ತಾಜ್ ಅಬಿಡ್ಸ್” ನಲ್ಲಿ ಅವರ ಸತ್ಕಾರ ಸಮಾರಂಭವನ್ನು ಆಯೋಜಿಸಿದ್ದವು. ಶ್ರೀ ಕೃಷ್ಣಮೂರ್ತಿಯವರ ಅಭಿಮಾನಿಗಳು, ಹಿತೈಷಿಗಳೇ ಅಲ್ಲದೇ ಹೈದರಾಬಾದ್ ಗೆ ಸದ್ಯ ಭೇಟಿ ನೀಡುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ಮಠದ ಸ್ವಾಮಿಗಳಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥರು ಉಪಸ್ಥಿತರಿದ್ದರು. ನಗರದ ಮಧ್ಯದಲ್ಲಿರುವ ತಾಜ್ ಅಬಿಡ್ಸ್ ಹೋಟಲ್ ನಲ್ಲಿ ನಡೆದ ಈ ಸಮಾರಂಭವು ಬಂದ ಅತಿಥಿಗಳಿಂದ ತುಂಬಿ ತುಳುಕಾಡಿತು.
ಕನ್ನಡ ನಾಟ್ಯ ರಂಗದ ಶ್ರೀಮತಿ ರಮಾ ಗೋಪಾಲಕೃಷ್ಣ ಅವರು ನಿರೂಪಕರಾಗಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಅತಿಥಿಗಳು ವೇದಿಕೆಗೆ ಬಂದ ನಂತರ ದೀಪ ಪ್ರಜ್ವಲನದೊಂದಿಗೆ ಸಭೆ ಪ್ರಾರಂಭವಾಯಿತು. ಶ್ರೀಮತಿ ವಿನಯಾ ಅನಂತಕೃಷ್ಣ ಅವರು ತಮ್ಮ ಮಧುರ ಕಂಠಸಿರಿಯಲ್ಲಿ ಪ್ರಾರ್ಥನಾ ಗೀತೆ ಆಲಾಪಿಸಿದರು.
ಪ್ರಿಯದರ್ಶಿನಿ ಹೋಟಲ್ಸ್ ನ ಮಾಲೀಕರು ಮತ್ತು ಕನ್ನಡ ನಾಟ್ಯರಂಗದ ಉಪಾಧ್ಯಕ್ಷರು ಆದ ಶ್ರೀ ರಾಮಮೂರ್ತಿ ಭಟ್ ಅವರು ವೇದಿಕೆಯ ಗಣ್ಯರನ್ನು ಮತ್ತು ಬಂದ ಸಭಿಕರನ್ನು ಸ್ವಾಗತಿಸಿದರು. ನಂತರ ಸ್ವಾಮೀಜೀ ಅವರು ತಮ್ಮ ಆಶೀರ್ವಚನದಲ್ಲಿ ಹಿಂದೂ ಧರ್ಮದಲ್ಲಿಯ ಮಂಗಳ ಸಂಕೇತವಾದ ಸ್ವಸ್ತಿಕದ ಮಹತ್ವವನ್ನು ವಿವರಿಸುತ್ತ ಅದರಲ್ಲಿ ಕಾಣುವ ಅಡ್ಡ ಮತ್ತು ಉದ್ದ ಗೆರೆಗಳು ಏನನ್ನು ಸೂಚಿಸುತ್ತವೆ ಎಂದು ಸಭೆಗೆ ತಿಳಿಸಿದರು. “ಉದ್ದ ಗೆರೆಯಂತೆ ಆಧ್ಯಾತ್ಮಿಕವಾಗಿ ಮತ್ತು ಅಡ್ಡಗೆರೆಯಂತೆ ವಿಸ್ತಾರವಾಗಿ ಮನುಷ್ಯ ಬೆಳೆಯಬೇಕೆಂದು ಸೂಚಿಸಿದರು. ವಿಸ್ತಾರವಾಗಿ ಬೆಳೆಯುವುದೆಂದರೆ, ಮನುಷ್ಯ ಸಮಾಜಕ್ಕೆ ತನ್ನ ವಂತಿಗೆಯನ್ನು ಕೊಡುತ್ತ, ಎಲ್ಲರನ್ನು ತನ್ನವರಾಗಿಸಿಕೊಂಡು ಬೆಳೆಯುವುದು ಎಂದರು. ಕೃಷ್ಣಮೂರ್ತಿಗಳಿಗೆ ಬಂದ ಈ ಪ್ರಶಸ್ತಿ ಅವರ ಈ ನಿಟ್ಟಿನಲ್ಲಿಯ ಬೆಳವಣಿಗೆಯನ್ನು ಸಾರುತ್ತಿದೆ. ಈ ರೀತಿಯ ವ್ಯಕ್ತಿಗಳಿಗೆ ಪ್ರಶಸ್ತಿ ಬರುವುದರಿಂದ ಪ್ರಶಸ್ತಿಯ ಪ್ರತಿಷ್ಟೆ ಹೆಚ್ಚುತ್ತದೆ. ” ಎನ್ನುತ್ತ ಕೃಷ್ಣಮೂರ್ತಿ ದಂಪತಿಗಳನ್ನು ಆಶೀರ್ವದಿಸಿದರು.
ನಂತರ ಮಾತನಾಡಿದ ಸಭೆಯ ಮುಖ್ಯ ಅತಿಥಿಗಳು, ರಾಜ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕನ್ನಡಿಗರು ಆದ ಶ್ರೀಯುತ ವಿ.ಸಿ ಸಜ್ಜನರ್ ಅವರು ಮಾತನಾಡುತ್ತ “ಕೃಷ್ಣಮೂರ್ತಿಯವರ ಸರಳ ಜೀವನ ಶೈಲಿ ಮತ್ತು ದಾನ ಪ್ರವೃತ್ತಿಯೇ ಅವರಿಗೆ ಈ ಪ್ರಶಸ್ತಿಯನ್ನು ತಂದುಕೊಟ್ಟಿವೆ” ಎನ್ನುತ್ತ ಅವರಿಗೆ ಇನ್ನೂ ಅನೇಕ ಪ್ರಶಸ್ತಿಗಳು ಅವರಿಗೆ ಸಲ್ಲಬೇಕು ಎಂದು ಹಾರೈಸಿದರು. ಸಭೆಗೆ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕನ್ನಡಿಗರಾದ ಶ್ರೀ ಬಿ.ಆರ್. ರಾವ್ ಅವರು ಮಾತನಾಡಿ ಕೃಷ್ಣಮೂರ್ತಿಯವರು ತುಂಬಾ ಕಷ್ಟದ ಹಾದಿಯನ್ನು ಕ್ರಮಿಸಿ ಈ ಮಟ್ಟಕ್ಕೆ ಬಂದಿದ್ದನ್ನು ನೆನೆಸಿಕೊಂಡರು. ಅವರ ಸಮಾಜ ಸೇವೆ ಹೀಗೆ ಮುಂದುವರೆಯಬೇಕು ಎಂದು ಬಯಸುತ್ತ ಅಭಿನಂದಿಸಿದರು.
ನಂತರ ಕೃಷ್ಣಮೂರ್ತಿ ದಂಪತಿಗಳಿಗೆ ಸನ್ಮಾನ ಮಾಡಲಾಯಿತು. ಸನ್ಮಾನಪತ್ರ, ಚಂದನದ ಹಾರ, ಗೌರವದ ಪೇಟಗಳೊಂದಿಗೆ ಅವರಿಬ್ಬರನ್ನೂ ಸತ್ಕರಿಸಲಾಯಿತು. ನಂತರ ಸತ್ಕಾರ ಮಾಡಿದ ಸಂಸ್ಥೆಗಳ ವತಿಯಿಂದ ಶ್ರೀ ಕೃಷ್ಣಮೂರ್ತಿ ಅವರಿಗೆ “ಧರ್ಮ ಭೂಷಣ” ಎಂಬ ಬಿರುದನ್ನು ಕೊಡಲಾಯಿತು. ಅನೇಕ ಇತರೆ ಸಂಸ್ಥೆಗಳು, ವ್ಯಕ್ತಿಗಳು ವೇದಿಕೆಗೆ ಬಂದು ಅವರನ್ನು ಅಭಿನಂದಿಸುತ್ತ ತಮ್ಮ ಸಂತೋಷ ವ್ಯಕ್ತಪಡಿಸಿದರು. ನಂತರ ಕೃಷ್ಣಮೂರ್ತಿಗಳು ಮಾತನಾಡಿ 1974 ರಲ್ಲಿ ಹೈದರಾಬಾದಿಗೆ ಕಾಲಿಟ್ಟಂದಿನಿಂದ ತಮ್ಮ ದಿನಗಳನ್ನು ನೆನೆಸಿಕೊಳ್ಳುತ್ತ, ಹೇಗೆ ತಾನು ಈಗ ಭಾಗ್ಯನಗರದಲ್ಲಿ 25 ಸುಪ್ರಭಾತ ಹೋಟಲ್ ಗಳನ್ನು ಮಾಡಲು ಕಷ್ಟಪಟ್ಟಿದ್ದು ಎಂದು ತಿಳಿಸಿದರು. ಹಾಗೇ ತಾನು ಗಳಿಸಿದ ಹಣದಲ್ಲಿ ತನ್ನ ಕುಟುಂಬದ ಖರ್ಚಿಗೆ ಇಟ್ಟುಕೊಂಡು ಉಳಿದದ್ದನ್ನು ಸಮಾಜಕ್ಕೆ ಕೊಡುತ್ತಿರುವುದಾಗಿ ಹೇಳುತ್ತ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ದಾಸರ ಪದವನ್ನು ನೆನಪಿಸಿದರು. ತಮ್ಮ ಸೇವೆ ಅಳಿಲು ಸೇವೆ ಎನ್ನುತ್ತ ಈ ರೀತಿ ತಮ್ಮನ್ನು ಬೆಳೆಸಿದ ಹೈದರಾಬಾದ್ ನಗರಕ್ಕೆ ತಮ್ಮ ಕೃತಜ್ಞತೆ ಸೂಚಿಸಿದರು. ಶ್ರೀಮತಿ ಜ್ಯೋತಿಯವರು ಕೃಷ್ಣಮೂರ್ತಿಯವರ ಬಗ್ಗೆ ತಾವು ಬರೆದ ಒಂದು ಚುಟುಕು ಕವನ ಓದಿ ತಮ್ಮ ಅಭಿನಂದನೆ ಸಲ್ಲಿಸಿದರು.ನಂತರ ಕೆಲ ಗಣ್ಯರು ಕೃಷ್ಣಮೂರ್ತಿಯವರ ಉದಾರ ಗುಣವನ್ನು ಮತ್ತು ಅವರು ಧಾರ್ಮಿಕ, ಶೈಕ್ಷಣಿಕ ಮತ್ತು ಅನಾಥಾಲಯಗಳಿಗೆ ಮಾಡುತ್ತಿರುವ ಸೇವೆಯನ್ನು ಕೊಂಡಾಡಿದರು.
ಸ್ಥಳೀಯ ಉದ್ಯಮಿ ಮತ್ತು ಕನ್ನಡ ನಾಟ್ಯ ರಂಗದ ಉಪಾಧ್ಯಕ್ಷರಾದ ಶ್ರೀ ರತ್ನಾಕರ ರೈ ಅವರ ವಂದನಾರ್ಪಣೆಯೊಂದಿಗೆ ಸಭೆ ಮುಗಿಯಿತು. ಅಂದು ಸಭೆಗೆ ತಡವಾಗಿ ಬಂದ ಕೇಂದ್ರ ಪ್ರವಾಸ ಮಂತ್ರಿಗಳಾದ ಶ್ರೀ ಕಿಶನ್ ರೆಡ್ಡಿಯವರು ಸಹ ತಮ್ಮ ಅಭಿನಂದನೆ ತಿಳಿಸಿ ಶುಭ ಹಾರೈಸಿದರು.
ನಂತರ ತಾಜ್ ಅಬಿಡ್ಸ್ ಅವರು ಏರ್ಪಡಿಸಿದ ಭೋಜನ ಕೂಟ ತುಂಬಾ ರುಚಿಕಟ್ಟಾಗಿದ್ದು ಎಲ್ಲರ ಮನ ಮತ್ತು ಹೊಟ್ಟೆಗಳನ್ನು ತಣಿಸಿತ್ತು.
ಹೆಚ್ಚಿನ ಬರಹಗಳಿಗಾಗಿ
ಗಾಂಧಿ-ಸಿದ್ಧಾರೂಢರ ಭೇಟಿಗೆ ನೂರಾ ಮೂರು ವರ್ಷ
ಚಿಂತಾಮಣಿ ಕೊಡ್ಲೆಕೆರೆ ಹೊಸ ಕಥಾ ಸಂಕಲನ
ಕ್ರಿಯೇಟಿವಿಟಿ ಇದ್ದೆಡೆ ಸಾಮರಸ್ಯ ಇರುತ್ತದೆ..