ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಾವ್ಯ ಮತ್ತು ಅಧ್ಯಾತ್ಮ

ಚಿಂತಾಮಣಿ ಕೊಡ್ಲೆಕೆರೆ
ಇತ್ತೀಚಿನ ಬರಹಗಳು: ಚಿಂತಾಮಣಿ ಕೊಡ್ಲೆಕೆರೆ (ಎಲ್ಲವನ್ನು ಓದಿ)

ಕಾವ್ಯಾನಂದವು ಬ್ರಹ್ಮಾನಂದದ ಸಹೋದರ ಎಂದು ಭಾರತೀಯ ಕಾವ್ಯಮೀಮಾಂಸಕರು ತೀರ್ಮಾನಿಸುವ ಹೊತ್ತಿಗಾಗಲೇ ಕಾವ್ಯ ಮತ್ತು ಅಧ್ಯಾತ್ಮದ ಸಂಬಂಧದ ಸ್ವರೂಪ ನಮ್ಮ ಮಟ್ಟಿಗೆ ಸಿದ್ಧವಾಗಿಬಿಟ್ಟಿತ್ತು! “ಸಾಹಿತ್ಯವು ಅಧ್ಯಾತ್ಮ ದೀಕ್ಷಿತವಾಗಬೇಕು ” ಎಂಬ ಬೆಂದ್ರೆಯವರ ಸುಪ್ರಸಿದ್ಧ ನುಡಿ ಕನ್ನಡ ಸಾಹಿತ್ಯ ಜಗತ್ತಿನ ಅಪೇಕ್ಷೆಯನ್ನು ಹೇಳುವಂಥದು. ಪ್ರಸಕ್ತ ಲೇಖನವು ಈ ವಿಷಯದ ಕುರಿತು ನಾನು “ಧರ್ಮಭಾರತೀ ” ವಿಶೇಷ ಸಂಚಿಕೆಗೆ ಬರೆದ ದೀರ್ಘ ಪ್ರಬಂಧದ ಕೆಲವು ಭಾಗಗಳನ್ನೂ ಮತ್ತು ಒಬ್ಬ ಸಕ್ರಿಯ ಕಾವ್ಯ ರಸಿಕನಾಗಿ ನನ್ನ ವೈಯಕ್ತಿಕ ಬರಹಗಳ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಮಾಡಿದ ಟಿಪ್ಪಣಿಗಳನ್ನೂ ಒಳಗೊಂಡಿದೆ.

ಲೇಖಕ ಡಾ.ಚಿಂತಾಮಣಿ ಕೊಡ್ಲೆಕೆರೆ

-೧-

ಕವಿಯ ಕೃತಿ ಕಾವ್ಯ. ಅಧ್ಯಾತ್ಮವು ಆತ್ಮದ ಕುರಿತಾದುದು. ಇವೆರಡರ ಸಂಬಂಧ ಗಹನವಾದುದು, ಅಷ್ಟೇ ರಹಸ್ಯಪೂರ್ಣವಾದುದು ಹಾಗೂ ದೀರ್ಘ ಅವಲೋಕನ ಬಯಸುವಂಥದು. ಕಾವ್ಯದಲ್ಲಿ ಅಧ್ಯಾತ್ಮವು ಕರಗುವುದೆಂತು? ಅಥವಾ ಕಾವ್ಯವು ಅಧ್ಯಾತ್ಮದ ಒಂದು ಹೊರರೂಪವೋ? ಆತ್ಮ ಶೋಧನೆ ಆಧ್ಯಾತ್ಮಿಕ ಜಿಜ್ಞಾಸುಗಳ ಸ್ವತ್ತು, ಕಾವ್ಯವೊಂದು ಕ್ರೀಡೆ, ವಿನೋದವಲ್ಲವೆ? ಭಾಷೆಯ ಕೈ ಹಿಡಿದು ಹೊರಹೊಮ್ಮುವ ಕಾವ್ಯವೂ, ಆತ್ಮಾಭಿಮುಖವಾಗಿ ಆಂತರ್ಯದ ಆಳದಾಳಕ್ಕೆ ಒಳಹೊಗುವ ಅಧ್ಯಾತ್ಮವೂ ವಿರುದ್ಧಮುಖಿ ಪಯಣಗಳಲ್ಲವೆ? ಇತ್ತೀಚಿನ ಅನೇಕರ ಕವಿ ಕಾವ್ಯ ಸಿದ್ಧಾಂತಗಳನ್ನೇ ಪರಿಶೀಲಿಸಿರಿ. ಇಹದ ಬಾಳೇ, ಭೂಮಿಯ ಬದುಕೇ ಸರ್ವಸ್ವವೂ ಸರಿ ಎನ್ನುವ ಅವರ ನಿಲುವಿಗೂ, ಆಗಸದತ್ತ ಕೈಚಾಚುವ, ಅಗಮ್ಯವೆನ್ನಿಸುವ ಅಪಾರಕ್ಕೆ ಹಸಿವ ಅಧ್ಯಾತ್ಮದ ಒಲವಿಗೂ ಸಂಬಂಧ ಕಲ್ಪಿಸುವುದು ಹೇಗೆ? ಅಂದರೆ, ಅದನ್ನು ‘ಕಲ್ಪ್ಪಿಸಬೇಕಾಗುತ್ತದೆಯೋ’ ಹೇಗೆ? ಇಂಥ ಅನೇಕ ಪ್ರಶ್ನೆಗಳನ್ನು ಮೇಲೆ ನಿಂತೇ ಕೇಳಿಕೊಳ್ಳುತ್ತಲಿದ್ದರೆ ಈಸಲಾರೆವು, ಈಸದೇ ಆಚೆ ದಡ ಸೇರಲಾರೆವು.

ಅಧ್ಯಾತ್ಮವು ಆತ್ಮದ ಕುರಿತಾದ ಜಿಜ್ಞಾಸೆ. ಬದುಕಿನ ಮೂಲ ಸಂಗತಿ ಕುರಿತಾದ ಆ ಅನ್ವೇಷಣೆಯು ಆತ್ಮವನ್ನು ಕಂಡುಕೊಳ್ಳುವಲ್ಲಿ, ತನ್ನನ್ನು ತಾನು ಅರಿಯುವಲ್ಲಿ ಅಥವಾ ‘ಅಹಂ ಬ್ರಹ್ಮಾಸ್ಮಿ’ ಎಂಬಂಥ ಸ್ವಾನುಭವದಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಬಹುದು. ‘ಬ್ರಹ್ಮವಸ್ತು’ ಎಂಥದೆಂದರೆ ‘ಯತೋ ವಾಚೋ ನಿವರ್ತಂತೇ, ಅಪ್ರಾಪ್ಯ ಮನಸಾ ಸಹ’- ಮಾತು, ಮನಸ್ಸು ಅದನ್ನು ಅರಿಯಲಾಗದೆ ವಾಪಾಸು ಬರುವವಂತೆ. ಅಂದರೆ ಅಧ್ಯಾತ್ಮದ ಅನುಭವಗಳೆಲ್ಲವೂ ಶಬ್ದಾತೀತವಾದವೇ ಆಗಿರಬೇಕು. ಅಂಥ ಅನೇಕ ಆತ್ಮಜ್ಞಾನಿಗಳು ಬ್ರಹ್ಮಾನುಭವವು ಮಾತಿಗೆ ನಿಲುಕದ್ದು. ಅನುಭವದಿಂದಲೇ ಪಡೆದುಕೊಳ್ಳುವಂಥದು ಎಂದು ಹೇಳಿದ್ದಾರೆ. ಆದರೂ ಲೋಕದ ಅನುಕೂಲಕ್ಕೋಸ್ಕರ ಕೆಲ ಪರಿಭಾಷೆಗಳಲ್ಲಿ ಅವರು ಮಾತನಾಡುವುದು ಕಾಣುತ್ತ ದೆ. ಲೋಕದಲ್ಲಿ ಕಾಣುವ ಸಂಗತಿಗಳನ್ನು ಉಪಯೋಗಿಸಿಕೊಂಡು ಕಾಣದ ಸಂಗತಿಗಳನ್ನು ಸೂಚಿಸಲೆತ್ನಿಸುವುದು ಒಂದು ವಿಧಾನ. ಬ್ರಹ್ಮವನ್ನು ಅರಿಯುವುದೆಂದರೆ ಬ್ರಹ್ಮವೇ ಆಗುವಂಥ ಪ್ರಕ್ರಿಯೆ ಎನ್ನುವುದನ್ನು ಶ್ರೀ ರಾಮಕೃಷ್ಣ ಪರಮಹಂಸರು ಉಪ್ಪಿನ ಗೊಂಬೆಯ ದೃಷ್ಟಾಂತದ ಮೂಲಕ ವಿವರಿಸುತ್ತಾರೆ. ಉಪ್ಪಿನ ಗೊಂಬೆಯು ಉಪ್ಪಿನ ಸಮುದ್ರ ಅಳೆಯಲು ಹೋಗಿ ತಾನೇ ಸಮುದ್ರವಾಗಿ ಬಿಟ್ಟಿತು ಎಂಬುದು ಅವರ ದೃಷ್ಟಾಂತ ವಾಕ್ಯ. ಬ್ರಹ್ಮ ಮತ್ತು ತಾನೆಂಬ ತನ್ನ ಸಾರವಸ್ತುವು ಒಂದೇ ಆಗಿದೆ ಹಾಗೂ ಬ್ರಹ್ಮವನ್ನು ಅರಿಯುವ ಪ್ರಕ್ರಿಯೆಯು ತಾನೇ ಬ್ರಹ್ಮನೆಂಬ ಗಾಢಾನುಭವಕ್ಕೆ ಕಾರಣವಾಗುತ್ತದೆ ಹಾಗೂ ತನ್ನ ಸದ್ಯದ ನಾಮ ಮತ್ತು ರೂಪಗಳು ಪ್ರಾತಿಭಾಸಿಕ ಸತ್ಯವೆಂಬ ಅರಿವನ್ನುಂಟುಮಾಡುತ್ತದೆ. ಇದು ಪರಮಹಂಸರು ಹೇಳುವ ಕಥೆಯಿಂದ ಹುಟ್ಟುವ ತಿಳಿವಳಿಕೆ.

ಆತ್ಮವೆಂಬುದು ‘ಜೀವ’ ಎಂಬ ವಸ್ತುವಿನ ಒಳಗಡೆ ಇರುವ ‘ಮೂಲಚೈತನ್ಯ.’ ಚೈತನ್ಯವೆಂದರೆ ಜ್ಞಾನ ಸಮೇತವಾದ ಶಕ್ತಿ. ಚೈತನ್ಯವು ಸ್ವತಸ್ಸಿದ್ಧವಾದದ್ದು. ಯಾರಿಂದಲಾದರೂ ತಯಾರಾದದ್ದಲ್ಲ. ಅದು ತಾನೇ ತಾನಾಗಿರುತ್ತದೆ. ಜೀವದಲ್ಲಿ ಅಂತರ್ಗತವಾದದ್ದು ಆತ್ಮ. ಆತ್ಮವು ಕೇವಲ ತಾನೇ ತಾನಾಗಿ ಯಾವ ಕಾರ್ಯವನ್ನೂ ಮಾಡುವುದಿಲ್ಲ. ಅದು ದೇಹಾದಿ ಸಾಧನಗಳನ್ನು ಧರಿಸಿ ಜೀವವಾದಾಗಲೇ ಅದರ ಕೆಲಸ. ಆತ್ಮವು ದೇಹ, ಇಂದ್ರಿಯ, ಮನಸ್ಸು ಮೊದಲಾದ ಉಪಕರಣಗಳನ್ನು ಧರಿಸಿ ಕಾರ್ಯಸಿದ್ಧವಾದಾಗ ಮತ್ತು ಆ ಕಾರ್ಯದ ಫಲಭೋಗದ ಕಾಲದಲ್ಲಿ-ಅದು ಜೀವವೆಂಬ ಹೆಸರಿನಿಂದ ಗುರುತಿಗೆ ಸಿಕ್ಕುತ್ತದೆ.
ಯಾವ ಸತ್ತ್ವವು ದೇಹೇಂದ್ರಿಯ ಸಹಿತವಾದಾಗ (ದೇಹ, ಇಂದ್ರಿಯಗಳು ಇದ್ದಾಗ) ಜೀವವೋ, ಆ ಸತ್ತ್ವವು ದೇಹೇಂದ್ರಿಯರಹಿತವಾದಾಗ (ದೇಹ, ಇಂದ್ರಿಯಗಳು ಇಲ್ಲದಿದ್ದಾಗ) ಆತ್ಮ. ಜೀವದಶೆಯಲ್ಲಿ ಇರುವ ಆತ್ಮವು ಜೀವಾತ್ಮ. ಜೀವದಶೆ ಬಿಟ್ಟಾಗ ಅದೇ ‘ಪರಮಾತ್ಮ.’
‘ಆತ್ಮ, ಅಂತರಾತ್ಮ, ಪರಮಾತ್ಮ, ಬ್ರಹ್ಮ, ಪರಬ್ರಹ್ಮ, ಈಶ್ವರ, ಜಗದೀಶ್ವರ, ಭಗವಂತ, ದೇವರು-ಇವೆಲ್ಲ ಒಂದೇ ಮಹಾವಸ್ತುವಿನ ಹೆಸರುಗಳು. ಜನರು ಆ ವಸ್ತುವಿನೊಡನೆ ತಾವು ಇರಿಸಿಕೊಂಡಿರುವ ಸಂಬಂಧವನ್ನು ಅನುಸರಿಸಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ’.
‘ಆತ್ಮ, ಜೀವ, ಜಗತ್ತು, ಬ್ರಹ್ಮ-ಈ ನಾಲ್ಕು ತತ್ತ್ವಗಳನ್ನು ಕುರಿತಾದ್ದು ಅಧ್ಯಾತ್ಮವಿದ್ಯೆ. ಅದೇ ಅಧ್ಯಾತ್ಮ ಯೋಗ. ಅದೇ ಬ್ರಹ್ಮವಿದ್ಯೆ. ಅದೇ ವೇದಾಂತ ಶಾಸ್ತ್ರ’.
ಇವು(ಮೇಲಿನ ಮೂರು ಅವತರಣಿಕೆಗಳು) ಜ್ಞಾನ ಗಂಗೋತ್ರಿಯ ಮೊದಲ ಸಂಪುಟ ‘ಮನುಕುಲದ ಕಥೆ’ಯಲ್ಲಿ ಅಧ್ಯಾತ್ಮದ ಕುರಿತು ನೀಡಿರುವ ಪ್ರಾಥಮಿಕ ವಿವರಗಳು.
ಕಾವ್ಯ ಮತ್ತು ಅಧ್ಯಾತ್ಮದ ಸಂಬಂಧ, ಅನುಬಂಧಗಳ ಕುರಿತು ಮಾತನಾಡುವಾಗ ಅಧ್ಯಾತ್ಮ ವಿದ್ಯೆಯ ಕುರಿತು ನಮ್ಮ ಹಿರಿಯರು ಗೈದ ಚಿಂತನೆಗಳ ಕೆಲವಂಶಗಳನ್ನು ಮಾಹಿತಿಗಾಗಿ ಉಲ್ಲೇಖಿಸಿದೆ.
ಭಾರತೀಯ ಕಾವ್ಯ ಮೀಮಾಂಸೆಯ ತಿರುಳೆಲ್ಲವೂ ರಸ-ಧ್ವನಿ-ಔಚಿತ್ಯಗಳ ತ್ರಿವಳಿಯಲ್ಲಿದೆ. ‘ಕಾವ್ಯಸ್ಯಾತ್ಮಾ ರಸಃ’, ‘ಕಾವ್ಯಸ್ಯಾತ್ಮಾ ಧ್ವನಿಃ.’ ಮುಂತಾದ ವಿವೇಚನೆಯ ಮಾತುಗಳನ್ನು ಇಲ್ಲಿ ನೆನೆಯಬಹುದು. ಕಾವ್ಯದ ಶರೀರವನ್ನೂ, ಆತ್ಮವನ್ನೂ ಬೇರ್ಪಡಿಸಿ ನೋಡುವ ಚಿಂತನೆ ಕಾವ್ಯ ಮೀಮಾಂಸಕ ವಾಮನನ ಕಾಲಕ್ಕಿಂತಲೂ ಹಳೆಯದು. ಕಾವ್ಯದ ಆತ್ಮವನ್ನು ಅರಿಯದೆ ಅಧ್ಯಾತ್ಮದೊಡನೆ ಅದರ ಸಂಬಂಧವನ್ನು ಅರಿಯಲಾರೆವು! ಆನಂದವರ್ಧನನು ಧ್ವನ್ಯಾಲೋಕದಲ್ಲಿ ಹೇಳಿದ ಮಾತಿದು.

‘ಕಾವ್ಯಸ್ಯಾತ್ಮಾ ಸ ಏವಾರ್ಥಃ ತಥಾ ಚಾದಿಕವೇಃ ಪುರಾ|
ಕ್ರೌಂಚದ್ವಂದ್ವವಿಯೋಗೋರ್ಥಃ ಶೋಕಃ ಶ್ಲೋಕತ್ವಮಾಗತಃ”||

ಜೋಡಿ ಪಕ್ಷಿಯ ಸಾವಿನ ನೋವನ್ನು ತಾಳಲಾರದೆ ಆಕ್ರಂದನ ಮಾಡಿದ ಕ್ರೌಂಚ ಪಕ್ಷಿ; ಅದನ್ನು ಕಂಡು, ಕೇಳಿ ವಿಹ್ವಲನಾದ ವಾಲ್ಮೀಕಿ; ಪಾದಬದ್ಧವಾಗಿ ಲಯಾನ್ವಿತವಾಗಿ ‘ಮಾ ನಿಷಾದ…’ಎಂದು ಹೊಮ್ಮಿದ ಕವಿವಾಣಿ…. ಈ ಇಡೀ ಸನ್ನಿವೇಶ ಕಾವ್ಯದ ಆತ್ಮ ರಸ ಎಂದು ಸಿದ್ಧಪಡಿಸುವಂತಿದೆ. ಧ್ವನಿ ಪ್ರಸ್ಥಾನದವರು ಇನ್ನಷ್ಟು ಆಳವಾಗಿ ಶೋಧಿಸಿ “ಕಾವ್ಯಸ್ಯಾತ್ಮಾ ಧ್ವನಿ:”ಎಂದು ಸಾಧಿಸಿದರು. ಇದೂ ಕಾವ್ಯದ ರಸಾತ್ಮವನ್ನೇ ಅಂತಿಮವಾಗಿ ಸಿದ್ಧಪಡಿಸುವುದೆಂದು ಮೀಮಾಂಸಕರ ಪ್ರತಿಪಾದನೆ. ‘ಧ್ವನಿ ಪ್ರಸ್ಥಾನದ ತತ್ತ್ವವನ್ನು ಮೂರು ಶಬ್ದಗಳಲ್ಲಿ ಅಡಕ ಮಾಡಬಹುದು. ಕಾವ್ಯದ ಆತ್ಮ ರಸ, ಅದನ್ನು ಕಾವ್ಯ ಶರೀರವು ಅಭಿವ್ಯಕ್ತಿಪಡಿಸುವ ಮಾರ್ಗ ಧ್ವನಿ; ಆತ್ಮ ಶರೀರಗಳ ಹೊಂದಿಕೆಯೇ ಔಚಿತ್ಯ; ಇದೇ ಕಾವ್ಯಗಾಯತ್ರೀ’ (ಭಾ.ಕಾ.ಮೀ.: ತೀ.ನಂ.ಶ್ರೀ: ಪುಟ 55)

ಕಾವ್ಯದ ಆತ್ಮ ರಸವೋ, ದ್ವನಿಯೋ ಎಂಬ ಕುರಿತು ಎಷ್ಟೇ ಚರ್ಚೆಗಳಿರಲಿ, ಅದರ ಶರೀರ ‘ಮಾತು’ ಅಥವಾ’ ಶಬ್ದ’ ಎಂಬ ಕುರಿತು ಭಿನ್ನಾಭಿಪ್ರಾಯವಿರಲಾರದು. ಕಾವ್ಯಾದರ್ಶದಲ್ಲಿ ದಂಡಿ ಭಾಷೆಯ ಮಹತ್ವವನ್ನು ಮನಗಾಣಿಸಿರುವುದು ಹೀಗೆ:

ಇಹ ಶಿಷ್ಟಾನುಶಿಷ್ಟಾನಾಂ ಶಿಷ್ಟಾನಾಮಪಿ ಸರ್ವಥಾ|
ವಾಚಾಮೇವ ಪ್ರಸಾದೇನ ಲೋಕಯಾತ್ರಾ ಪ್ರವರ್ತತೇ||

ಇದಮಂಧಂ ತಮಃ ಕೃತ್ಸ್ನಂ ಜಾಯೇತ ಭುವನತ್ರಯಂ|
ಯದಿ ಶಬ್ದಾಹ್ವಯಂ ಜ್ಯೋತಿರಾಸಂಸಾರಾನ್ನ ದೀಪ್ಯತೇ||

(‘ಭಾಷೆಗಳು ವಿದ್ವಾಂಸರ ಅನುಶಾಸನಕ್ಕೆ ಒಳಪಟ್ಟವಾಗಿರಬಹುದು, ಬಿಟ್ಟವಾಗಿರಬಹುದು; ಎಲ್ಲರೀತಿಯಲ್ಲೂ ಅವುಗಳ ಅನುಗ್ರಹ ಮಾತ್ರದಿಂದಲೇ ಲೋಕ ವ್ಯವಹಾರ ಸಾಗುತ್ತಿದೆ. ಮಾತಿನ ಜ್ಯೋತಿ ಸಂಸಾರದ ಉದ್ದಕ್ಕೂ ಬೆಳಗದೆ ಇದ್ದರೆ ಅಶೇಷ ಭುವನತ್ರಯವೂ ಕಗ್ಗತ್ತಲಾಗಿ ಬಿಟ್ಟೀತು’-ಭಾ.ಕಾ.ಮೀ/ಪುಟ 7)

ಭಾಷಾ ಶರೀರಿಯಾದ ಕಾವ್ಯದ ವಿಶಿಷ್ಟತ್ವವನ್ನು ಅರಿಯಲು ತೀ.ನಂ.ಶ್ರೀಯವರ ಕೆಳಗಿನ ವಿಶ್ಲೇಷಣೆಯನ್ನೊಮ್ಮೆ ಪರಿಶೀಲಿಸೋಣ:

‘….ಬಹು ಮುಖವಾಗಿರುವ ವಾಙ್ಮಯವನ್ನು ಸಂಸ್ಕøತದ ಆಲಂಕಾರಿಕರು ವೇದ, ಶಾಸ್ತ್ರ, ಕಾವ್ಯ ಎಂದು ಮೂರು ವರ್ಗವಾಗಿ ವಿಂಗಡಿಸುತ್ತಾರೆ. ವೇದವು ಅಪೌರುಷೇಯವೂ, ಅದರ ಮಂತ್ರಗಳಿಗೆ ಅಲೌಕಿಕ ಪ್ರಭಾವ ಉಂಟೆಂದೂ ನಂಬಿಕೆಯಾದುದರಿಂದ ಅವನ್ನೇ ಒಂದು ಪ್ರತ್ಯೇಕ ವರ್ಗವಾಗಿ ನಿಲ್ಲಿಸಿದರು. ವೇದವು ಶಬ್ದ ಪ್ರಧಾನ. ಅಂದರೆ ಇದರಲ್ಲಿ ಅರ್ಥವು ಮಾತ್ರ ಮುಖ್ಯವಲ್ಲ; ಅದನ್ನು ಒಳಗೊಂಡ ಶಬ್ದವು ಒಂದು ರೀತಿಯಲ್ಲಿ ಅದಕ್ಕಿಂತಲೂ ಮುಖ್ಯ….. ಈ ಅಲೌಕಿಕ ಮಹಿಮೆ ಶಾಸ್ತ್ರಕ್ಕಿಲ್ಲ! ಇವುಗಳಲ್ಲಿ ಶಬ್ದಕ್ಕಿಂತಲೂ ಅದರಿಂದ ತಿಳಿಯಬರುವ ವಿಷಯಕ್ಕೆ ಬೆಲೆ ಹೆಚ್ಚು. ಇಲ್ಲಿ ಪದಗಳನ್ನು ಬದಲಾಯಿಸಿದರೂ ದೋಷವೇನೂ ಇಲ್ಲ. ಆದ ಕಾರಣ ಶಾಸ್ತ್ರವು ಅರ್ಥಪ್ರಧಾನ….ಕಾವ್ಯ ಮೂರನೆಯದನ್ನು ಹಿಡಿಯುತ್ತದೆ. ಇದರಲ್ಲಿ ಶಬ್ದವೂ ಮುಖ್ಯವಲ್ಲ, ವಾಚ್ಯಾರ್ಥವೂ ಮುಖ್ಯವಲ್ಲ. ಈ ಎರಡೂ ಅನುಕ್ತವಾದ ಬೇರೊಂದು ಅರ್ಥಕ್ಕೆ ಅಧೀನವಾಗಿ ಅದನ್ನು ತ್ಯಜಿಸುತ್ತದೆ. ಹೀಗೆ ಕಾವ್ಯದಲ್ಲಿ ವ್ಯಂಗ್ಯಾರ್ಥವೇ ತಿರುಳಾಗಿರುವುದರಿಂದ ಅದನ್ನು ಧ್ವನಿಪ್ರಧಾನವೆಂದು ಕರೆಯುತ್ತಾರೆ. ರಸಪ್ರಧಾನ ಎಂದೂ ಹೇಳಬಹುದು….. ಈ ಮೂರರಿಂದಲೂ ಮಾನವನಿಗೆ ಕರ್ತವ್ಯಾಕರ್ತವ್ಯಗಳ ತಿಳಿವಳಿಕೆ ಒದಗುತ್ತದೆ.

ಶಾಸ್ತ್ರ ಮತ್ತು ಕಾವ್ಯಗಳನ್ನು ವಾಗ್ದೇವಿಯ ಎರಡು ಮಾರ್ಗಗಳೆಂದು ಭಟ್ಟತೌತ ಸೂಚಿಸಿದ. ಶಾಸ್ತ್ರವು ಪ್ರಜ್ಞೆಯಿಂದ ಜನಿಸಿದ್ದು. ಕಾವ್ಯವು ಪ್ರತಿಭೆಯಿಂದ ಉದ್ಭವಿಸಿದ್ದು. ಪ್ರಜ್ಞೆಯು ಅರಿಯುವ ಶಕ್ತಿ. ವಿಚಾರ, ಅನುಶೀಲನ, ಊಹೆ, ಪರೀಕ್ಷೆ ಮುಂತಾವ ವಿಭಜನೆಗಳ ದಾರಿ ಪ್ರಜ್ಞೆಯದು. ಚಿತ್ತವೃತ್ತಿಯ ಉದ್ರೇಕಕ್ಕೆ ಇಲ್ಲಿ ಅವಕಾಶವಿಲ್ಲ. ಕಾವ್ಯದಲ್ಲಿ ಇವೆಲ್ಲ ವ್ಯತ್ಯಾಸವಾಗುತ್ತವೆ. ಕಾವ್ಯಕ್ಕೆ ಬೀಜವಾದ ಪ್ರತಿಭೆಯೂ ಮೂಲತಃ ಪ್ರಜ್ಞೆಯೇ. ಆದರೆ ಇದು ಉದಿಸುವುದು ಚಿತ್ತವೃತ್ತಿ ಪ್ರಧಾನವಾಗಿದ್ದಾಗ, ಇದು ಕೆಲಸ ಮಾಡುವುದು ಸಂಯೋಜನೆಯ ಮಾರ್ಗದಲ್ಲಿ’

‘ಶಾಸ್ತ್ರದ ಉದ್ದೇಶವು ತತ್ತ್ವಪ್ರತಿಪಾದನೆ ತನ್ನಿಂದ ಹೊರಗಿರುವ ಪ್ರಮಾಣಗಳ ಪರೀಕ್ಷೆಗೆ ಅದು ಒಳಪಡುತ್ತದೆ. ಕಾವ್ಯದ ಗುರಿ ರಸಾನುಭವ. ಅನುಭವಕ್ಕೆ ಅನುಭವವೇ ಪ್ರಮಾಣ..’

‘ಶಾಸ್ತ್ರ, ಕಾವ್ಯಗಳ ಗುರಿಯೂ, ದಾರಿಯೂ ಬೇರೆಯಾದ ಮಾತ್ರಕ್ಕೆ ಶಾಸ್ತ್ರದ ವಸ್ತುವಿಗೆ ಕಾವ್ಯದಲ್ಲಿ ಪ್ರವೇಶವಿಲ್ಲದೆ ಹೋಗಿಲ್ಲ. ಆದರೆ ಕಾವ್ಯಮಂದಿರವನ್ನು ಹೊಕ್ಕ ಕೂಡಲೆ ಅವುಗಳ ಬಣ್ಣವೇ ಬದಲಾಯಿಸುತ್ತದೆ!….ತರ್ಕಕರ್ಕಶವಾದ ಯಾವ ಅರ್ಥಗಳಿಗೆ ಕವಿ ತನ್ನ ಸೂಕ್ತಿಯಲ್ಲಿ ಆದರದಿಂದ ಎಡೆಗೊಡುತ್ತಾನೋ, ಅವೆಲ್ಲ ಚಂದ್ರಮಂಡಲದಲ್ಲಿ ಬಿದ್ದ ಸೂರ್ಯಕಿರಣಗಳಂತೆ ಅತಿಶಯವಾದ ರಮಣೀಯತೆಯನ್ನು ಹೊಂದುತ್ತವೆ’.

‘ಶಾಸ್ತ್ರವೂ, ಕಾವ್ಯವೂ ಒಂದೇ ಭಾಷೆಯ ಎರಡು ಪ್ರವೃತ್ತಿ ಪ್ರಕಾರಗಳು; ಒಂದೇ ವಾಙ್ಮಯದ ಎರಡು ಶಾಖೆಗಳು ಶಾಸ್ತ್ರ, ಕಾವ್ಯ ಎಂಬುದು ಆದರ್ಶ ದೃಷ್ಟಿಯಿಂದ ಮಾಡಿದ ಶುದ್ಧವಿಭಾಗ. ಒಂದರ ಪ್ರಭಾವಕ್ಕೆ ಇನ್ನೊಂದು ಸ್ವಲ್ಪವೂ ಸಿಗದಂತಿರಲು ಹೇಗೆ ಸಾಧ್ಯ?’
(ಭಾ.ಕಾ.ಮೀ.ಎಂಟನೆ ಅಧ್ಯಾಯ)

ಶಾಸ್ತ್ರ ಮತ್ತು ಕಾವ್ಯಗಳ ಸ್ವರೂಪದ ಕುರಿತು ನಮ್ಮ ಕಾವ್ಯಮೀಮಾಂಸಕರು ನಡೆಸಿದ ಚರ್ಚೆಯ ಕೆಲವಂಶಗಳನ್ನು ಈ ಪ್ರಬಂಧದ ಆರಂಭದಲ್ಲೇ ಗಮನಿಸುವುದರ ಉದ್ದೇಶವಿಷ್ಟೇ:ಭಾರತೀಯ ಸಾಹಿತ್ಯ, ಸಂಸ್ಕøತಿಯ ಸಂದರ್ಭದಲ್ಲಿ ಈ ಕುರಿತ ವಿವೇಚನೆಗೊಂದು ಸುದೀರ್ಘ ಇತಿಹಾಸವಿದೆ ಎಂಬುದನ್ನು ತೋರುವುದು. ಹಾಗೆಯೇ ಇಂಥ ವಿಂಗಡನೆಗಳನ್ನು ಮಾಡಿಕೊಂಡಾಗಲೂ ಇವು ಒಂದರೊಳಗೊಂದು ಹೇಗೋ ಬೆರೆತುಬಿಡುವ ಸಂದರ್ಭಗಳು ಇರುತ್ತವೆ ಎಂಬುದೂ ನಮ್ಮ ಮೀಮಾಂಸಕರ ಗಮನಕ್ಕೆ ಬಂದಿದೆ. ಕಾವ್ಯ, ಶಾಸ್ತ್ರಗಳ ಜೊತೆ ಕ್ಷೇಮೇಂದ್ರನು ಶಾಸ್ತ್ರಕಾವ್ಯ, ಕಾವ್ಯಶಾಸ್ತ್ರಗಳನ್ನೂ ಸೇರಿಸಿದ್ದಿದೆ.(ಸುವೃತ್ತ ತಿಲಕ)

ಕಾವ್ಯವು ಪ್ರತಿಭೆಯ ಫಲ ಎಂದೆವು. ಭಟ್ಟತೌತನ ಕೆಳಗಿನ ಮಾತುಗಳು ಸುಪ್ರಸಿದ್ಧವಾಗಿವೆ.

ಪ್ರಜ್ಞಾ ನವನವೋನ್ಮೇಷಶಾಲಿನೀ ಪ್ರತಿಭಾ ಮತಾ|
ತದನು ಪ್ರಾಣನಾ ಜೀವದ್ವರ್ಣನಾ ನಿಪುಣಃ ಕವಿಃ||
ತಸ್ಯ ಕರ್ಮ ಸ್ಮ್ರತಮ್ ಕಾವ್ಯಂ
(ಹೊಸ ಹೊಸ ಭಾವಗಳನ್ನು ಸತತವಾಗಿ ಕಾಣುವ, ಕಟ್ಟುವ ಪ್ರಜ್ಞೆಯೇ ಪ್ರತಿಭೆ. ಈ ಪ್ರತಿಭೆಯ ಉಸುರಿನಿಂದ ಜೀವ ತುಂಬಿ ವರ್ಣಿಸಬಲ್ಲ ನಿಪುಣನೇ ಕವಿ. ಕವಿ ಕರ್ಮವೇ ಕಾವ್ಯ)-

ತೀನಂಶ್ರೀ(ಅನುವಾದ)

ಪ್ರತಿಭೆ ಎಂದರೆ ಹೊಳಹು.ಅದು ರವಿಕಾಣದ್ದನ್ನೂ ಕವಿಗೆ ಕಾಣಿಸಬಲ್ಲುದು!. ‘ಅದು ಬುದ್ಧಿಯ ಕಣ್ಣಲ್ಲ; ಹೃದಯದ ಕಣ್ಣು’ ಎನ್ನುತ್ತಾರೆ ತೀನಂಶ್ರೀ. ಈ ಕುರಿತು ದೀರ್ಘವಾಗಿ ಪರ್ಯಾಲೋಚಿಸಿ ಭಟ್ಟತೌತನು ಹೇಳುವುದು ಹೀಗಿದೆ.

ನಾನೃಷಿ: ಕವಿರಿತ್ಯುಕ್ತಂ ಋಷಿಶ್ಚ ಕಿಲ ದರ್ಶನಾತ್|
ವಿಚಿತ್ರಭಾವ ಧರ್ಮಾಂಶ ತತ್ತ್ವ ಪ್ರಖ್ಯಾ ಚ ದರ್ಶನಂ||
ಸತತ್ತ್ವದರ್ಶನಾದೇವ ಶಾಸ್ತ್ರೇಷು ಪಠಿತಃ ಕವಿಃ|
ದರ್ಶನಾದ್ವರ್ಣನಾಚ್ಯಾಥ ರೂಢಾ ಲೋಕೇ ಕವಿ ಶ್ರುತಿಃ||
ತಥಾ ಹಿ ದರ್ಶನೇ ಸ್ವಚ್ಛೇ ನಿತ್ಯೋಪ್ಯಾದಿಕವೆ ರ್ಮು(ನೇ)ಃ|
ನೋದಿತಾ ಕವಿತಾ ಲೋಕೇ ಯಾವಜ್ಜಾತಾ ನ ವರ್ಣನಾ|(ಕಾವ್ಯಾನುಶಾಸನ)

‘ಋಷಿಯಲ್ಲದ ಕವಿಯಿಲ್ಲ ಎನ್ನುವರು; ದರ್ಶನವುಳ್ಳವನು ತಾನೆ ಋಷಿ! ಜಗತ್ತಿನ ವಿವಿಧ ವಸ್ತುಗಳ ಧರ್ಮಾಂಶದ ತತ್ತ್ವವನ್ನು ಕಾಣುವುದೇ ದರ್ಶನ. ತತ್ತ್ವದರ್ಶನವನ್ನು ಹೊಂದಿರುವಷ್ಟಕ್ಕೇ ಒಬ್ಬನಿಗೆ ‘ಕವಿ’ ಎಂಬ ಹೆಸರು ಶಾಸ್ತ್ರಗಳಲ್ಲಿ ಉಕ್ತವಾಗಿದೆ. ಆದರೆ ದರ್ಶನ ಮತ್ತು ವರ್ಣನೆ ಇವೆರಡೂ ಇದ್ದರೇ ಲೋಕದಲ್ಲಿ ಕವಿಯೆಂದು ಕರೆಯುವುದು. ಹೀಗೆ ಆದಿ ಕವಿಯಾದ ವಾಲ್ಮೀಕಿಮುನಿಗೆ ನಿರ್ಮಲವಾದ ದರ್ಶನವು ನಿತ್ಯವಾಗಿದ್ದರೂ ಕೂಡ, ವರ್ಣನೆಯೂ ಅವನಲ್ಲಿ ಒದಗುವ ತನಕ (ಎಂದರೆ ಅವನು ‘ರಾಮಾಯಣ’ವನ್ನು ರಚಿಸುವ ತನಕ) ಕವಿಪಟ್ಟವು ಲೋಕದಲ್ಲಿ ದೊರೆಯಲಿಲ್ಲ’ (ಭಾಕಾಮೀ, ಹತ್ತನೇ ಅಧ್ಯಾಯ). ಹೃದಯದ ಕಣ್ಣು (ಪ್ರತಿಭೆ) ತೆರೆದಾಗಲೇ ದರ್ಶನಕ್ಕೆ ವರ್ಣನದ ಸ್ನೇಹ ಸಂಬಂಧ ಪ್ರಾಪ್ತವಾಗುವುದು. ಇಲ್ಲಿ ಪ್ರಸ್ತುತ ನಮಗೆ ತುಂಬ ಮಹತ್ವದ ಮಾತೆಂದರೆ ಋಷಿಯಲ್ಲದವನು ಕಾವ್ಯ ರಚಿಸಲಾರ, ಕವಿಯಾಗಲಾರ ಎಂಬ ಸ್ಪಷ್ಟ ನಿಲುವು. ಇದು ಕವಿಗಿರಬೇಕಾದ ಸಿದ್ಧತೆ, ಸಾಧನೆಯ, ತಪದ ಅಗತ್ಯಗಳ ಕುರಿತು ಬೆಳಕು ಚೆಲ್ಲುತ್ತದೆ. ಬರಿಯ ದರ್ಶನವಾಗಲೇ, ಬರಿಯ ವರ್ಣನವಾಗಲೀ ಒಬ್ಬನನ್ನು ಕವಿಯಾಗಿಸಲಾರದು. ಎಲ್ಲ ಋಷಿಗಳೂ ಕವಿಗಳಲ್ಲ. ಆದರೆ ಋಷಿಯಾಗದೆ ಒಬ್ಬಾತ ಕವಿಯಾಗಲಾರ-ಋಷಿ ಆತ್ಮ ದರ್ಶನ ಮಾಡಿದವನು, ವರ್ಣನ ಮಾಡಬಲ್ಲವನು!

ಶ್ರೀ ವಿವೇಕಾನಂದರು


ಶ್ರೀ ವಿವೇಕಾನಂದರು ಒಂದೆಡೆ ಬರೆಯುತ್ತಾರೆ. ‘ನಾನು ನಾನು ಎಂದುಕೊಂಡರೆ ನನ್ನ ಮುಂದಿರುವ ಭಾವವೇನು? ಈ ದೇಹದ ಭಾವವೆ? ನಾನು ಈ ಜಡ ಪದಾರ್ಥಗಳ ಸಮ್ಮಿಶ್ರಣವೆ? ವೇದಗಳು ಹೇಳುತ್ತವೆ: ‘ಅಲ್ಲ’. ದೇಹದಲ್ಲಿ ವಾಸಿಸುವ ಚೇತನ ನಾನು. ದೇಹ ಸಾಯುತ್ತದೆ, ನಾನು ಸಾಯುವುದಿಲ್ಲ. ಈ ಚೇತನವನ್ನು ಖಡ್ಗ ಕತ್ತರಿಸಲಾರದು, ಬೆಂಕಿ ಸುಡಲಾರದು, ನೀರು ಕರಗಿಸಲಾರದು, ವಾಯು ಒಣಗಿಸಲಾರದು. ಆತ್ಮ ಅಮರ, ಅಚ್ಯುತ ಹಾಗಾದರೆ ಈ ಮಾನವ ಬಿರುಗಾಳಿಯಲ್ಲಿ ಸಿಕ್ಕ ಅಲ್ಪ ದೋಣಿಯೆ? ನಿಸ್ಸಹಾಯಕನೂ, ನಿಶ್ಶಕ್ತನೂ, ಕಾರ್ಯಕಾರಣಗಳ ನಿಷ್ಕರುಣೆಯ ಪ್ರವಾಹದಲ್ಲಿ ಕೊಚ್ಚಿ ಹೋಗುವುದೇ ಇವನ ಗತಿಯೇ? ಇದರಿಂದ ಬಿಡುಗಡೆಯಿಲ್ಲವೆ? ವೇದ ಋಷಿ ಸಾರಿದ: ‘ಕೇಳಿ, ಅಮೃತ ಪುತ್ರರೇ, ನಾನು ಆ ಸನಾತನವನ್ನು ಕಂಡಿದ್ದೇವೆ. ಯಾರು ಆ ಅಂಧಕಾರದ ಆಚೆಗೆ ಇದ್ದಾರೊ, ಅವನನ್ನು ಕಂಡಿದ್ದೇನೆ. ಅವನನ್ನು ತಿಳಿದರೆ ಈ ಮೃತ್ಯುವಿನಿಂದ ಪಾರಾಗುವಿ.’

ಆತ್ಮ ದೈವೀ ಸ್ವರೂಪದ್ದು ಎಂದೂ, ಆದರೆ ಅದು ಜಡದಿಂದ ಭಾಧಿಸಲ್ಪಟ್ಟಿದೆಯೆಂದೂ ವೇದಗಳು ಬೋಧಿಸುತ್ತವೆ. ಈ ಬಂಧನ ಕಳಚಿ ಬಿದ್ದಾಗ ಆತ್ಮ ಪರಿಪೂರ್ಣತೆ ಪಡೆಯುತ್ತದೆ. ಈ ಮಾತಿನ ಅರ್ಥ, ‘ಪರಿಪೂರ್ಣತೆ’ಯನ್ನು ಎಲ್ಲೋ ಬೇರೆಡೆಯಿಂದ ಅದು ‘ಪಡೆಯುವುದು’ ಎಂದಲ್ಲ. ಅದು ತನ್ನ ಪರಿಪೂರ್ಣ ಸ್ಥಿತಿಯನ್ನು ‘ಕಂಡುಕೊಳ್ಳುತ್ತದೆ’ ಎಂಬುದು ಉಚಿತ ಪ್ರಯೋಗವಾದೀತು. ಬಂಧನ ಕಳಚುವುದು ಭಗವತ್ ಕೃಪೆಯಿಂದ. ‘ನೀನೇನನ್ನು ಅರಸುತ್ತಿದ್ದೀಯೋ, ನೀನು ಅದೇ ಆಗಿದ್ದೀಯೆ , ‘ತತ್ ತ್ವಂ ಅಸಿ’-ಹೀಗೆಂದಾಗ ದಾನವ ತನ್ನ ದೇಹವನ್ನು ನೋಡಿಕೊಂಡು ಸುಮ್ಮನಾಗಿ ಬಿಟ್ಟನಂತೆ. ಆದರೆ ದೇವತೆಗೆ ಅನುಮಾನ ಬಂತು. ತಾನು ಈ ದೇಹವೆ, ಪ್ರಾಣವೆ, ಮನಸ್ಸೆ – ಶೋಧಿಸುತ್ತಾ ಹೋದ. ಆತ್ಮವು ಇವೆಲ್ಲವುಗಳಿಗೂ ಆಚೆಯದು. ಆತ್ಮದ ಕುರಿತಾದ ಈ ಶೋಧವು ಅಧ್ಯಾತ್ಮ. ಆತ್ಮ ಜ್ಞಾನವೇ ನಿಜವಾದ ಜ್ಞಾನ. ಅದೇ ನಿಜವಾದ ವಿದ್ಯೆ. ಉಪನಿಷತ್ಕಾರರು ಮಿಕ್ಕುದೆಲ್ಲವನ್ನೂ ಅವಿದ್ಯೆ ಎಂದು ಕರೆದರು. ಈ ಜ್ಞಾನ, ಈ ವಿದ್ಯೆ ಹಳತರಲ್ಲಿ ಹಳತಾದರೂ ಹೊಸದರಲ್ಲಿ ಅತಿ ಹೊಸದು. ಇದು ಅನುಭವವಾಗುವವರೆಗೂ ನಾವು ಮಾಯೆಯಿಂದ ಬಂಧಿತರು. ಅಧ್ಯಾತ್ಮಕ್ಕೆ ವೇದದ ತಿಳಿವಳಿಕೆ ಒಂದು ಮಾರ್ಗ. ಪ್ರಪಂಚದಾದ್ಯಂತವನ್ನು ಗಮನಿಸಿದರೆ ಅಧ್ಯಾತ್ಮಕ್ಕೆ ಸಾವಿರ ಪಥಗಳಿದ್ದಾವು. ವಾಸ್ತವಿಕವಾಗಿ ಅಧ್ಯಾತ್ಮವು ಒಂದು ಕ್ರಿಯೆ. ತನ್ನನ್ನು ತಾನು ಅರಿಯುವುದು, ಅದರ ಕುರಿತು ನಡೆಸುವ ಪ್ರಶ್ನೆ, ಶೋಧನೆ ಇವೆಲ್ಲವೂ ಸತತ ಕ್ರಿಯಾಶೀಲತೆಯನ್ನು ಅಪೇಕ್ಷಿಸುತ್ತವೆ. ವೇದಗಳೂ, ಶಾಸ್ತ್ರಗಳೂ, ಕಾವ್ಯಗಳೂ ಅರಿಯಬಯಸುವ ಸಂಗತಿ ಅಧ್ಯಾತ್ಮ. ಸಕಲ ವಾಙ್ಮಯವೂ ಅದನ್ನೇ ಅರಿಯಹೊರಟಿದೆ.

ನಮ್ಮ ನಾಡಿನ ಎರಡು ಮಹಾಕಾವ್ಯಗಳನ್ನೂ ಬರೆದವರು ಋಷಿಗಳು. (ವ್ಯಾಸ, ವಾಲ್ಮೀಕಿ). ಕವಿ ಅತೀತವಾದುದನ್ನು ಕಾಣುವವನು, ಸರ್ವವನ್ನೂ ಕಾಣುವವನು. ‘ಕವಿ: ಕ್ರಾಂತದರ್ಶಿ ಸರ್ವದೃಕ್ ‘ (ಈಶಾವಾಸ್ಯ, ಭಾಷ್ಯ). ‘ಕವಿರ್ಮನೀಷೀ ಪರಿಭೂ:’ (ಈಶಾವಾಸ್ಯೋಪನಿಷತ್). ಅಮಂಗಳ ನಿವಾರಣೆ, ಶಿವೇತರಕ್ಷತಿ, ‘ಸದ್ಯ ಪರ ನಿರ್ವೃತಿ ಮುಂತಾದವನ್ನು ಕಾವ್ಯದ ಪ್ರಯೋಜನಗಳೆಂದು ವರ್ಣಿಸುವಾಗಲೂ, ‘ಕಾವ್ಯಮಾನಂದಾಯ’ ಎನ್ನುವಾಗಲೂ ನಮ್ಮ ಲಾಕ್ಷಣಿಕರು ಕಾವ್ಯವನ್ನು ಬಹುಮಹತ್ವದ ಸ್ಥಾನದಲ್ಲಿಟ್ಟು ಗೌರವಿಸಿದರು. ಕಾವ್ಯಾನಂದವು ಬ್ರಹ್ಮಾನಂದದ ಸಮೀಪ ಬಂಧು(ಸಹೋದರ). ಕವಿಯ ಋಷಿತ್ವ ಹೀಗೆ ಮತ್ತೆ ಮತ್ತೆ ಸಿದ್ಧಗೊಂಡಿದೆ. ಈಗ ತಾನೇ ಹೇಳಿದ್ದು ರಸಗಂಗಾಧರದಲ್ಲಿ ಜಗನ್ನಾಥ ಪಂಡಿತ ಹೇಳುವ ಮಾತು. ರಸಾನುಭವವು ಅಲ್ಲವಾದರೂ ಅದಕ್ಕಿಂತ ಕಿಂಚಿದೂನವಾಗಿದ್ದು ಅದಕ್ಕೆ ಸಮೀಪದ್ದು ಎಂದು ಗ್ರಹಿಸಬಹುದಾದುದು ಒಂದು ಕ್ರಮವಾದರೆ ಬ್ರಹ್ಮಾನಂದದ ಸಹೋದರತ್ವವು ಕಾವ್ಯಾನಂದಕ್ಕೆ ಬ್ರಹ್ಮಾನಂದದ ಸಾಮ್ಯ, ಸಖ್ಯವನ್ನು ಸೂಚಿಸುತ್ತಿದೆ ಎಂದು ತಿಳಿಯಬಹುದಾದದ್ದು ಇನ್ನೊಂದು ಬಗೆ. ಇದೂ ಕೂಡ ನಿಲುಗಡೆಯಿಲ್ಲದ ವಾದವಾಗಿ ಕಾವ್ಯ ಮೀಮಾಂಸೆಯುದ್ದಕ್ಕೂ ಆಗಾಗ ಕಾಣಿಸಿಕೊಂಡಿದೆ. ಪೂರ್ಣ ಜೀವನದ ಗಂಭೀರ ಮೌಲ್ಯಗಳ ಅನುಸಂಧಾನಕ್ಕೆ ಕಾರಣವಾಗುವ ಆಂತರಿಕ ಆನಂದವೇ ಈ ರಸಾನುಭವದ ಸ್ವರೂಪ ಎಂದು ಮೀಮಾಂಸಕಾರರು ರಾಮಾಯಣ, ಮಹಾಭಾರತಗಳ ನಿದರ್ಶನಗಳೊಂದಿಗೆ ಸಮರ್ಥಿಸಿದ್ದಾರೆ.

ಅಭಿನವ ಗುಪ್ತನಲ್ಲಿ ಈ ಚಿಂತನೆ ಇನ್ನೂ ಸ್ಫುಟವಾದ ಸ್ವರೂಪ ಪಡೆಯಿತು. ಆತನದು ರಸವಿವೇಚನೆಯ ಆಂತರಿಕ ದೃಷ್ಟಿ. ದಾರ್ಶನಿಕ ದೃಷ್ಟಿ ವೈಯಕ್ತಿಕತೆಯನ್ನು ಕಳೆದುಕೊಂಡು ಆನಂದಾನುಭವವು ಅವನಲ್ಲಿ ಹೆಚ್ಚು ಸಂಕೀರ್ಣ ರೂಪ ಪಡೆಯಿತು. ‘ಅಪೂರ್ವಂ ಯದ್ವಸ್ತು ಪ್ರಥಯತಿ ವಿನಾಕಾರಣಕಲಾಂ’ ಎಂದು ಮೊದಲಾಗುವ ಸ್ತುತಿ ಪದ್ಯದಲ್ಲಿ ಅವನು ಸೂಚಿಸುವ ಮೊದಲನೆಯ ಅಂಶ ಕಾವ್ಯ ಯಾವ ಕಾರಣವನ್ನೂ ಅಪೇಕ್ಷಿಸುವುದಿಲ್ಲ. ಇದು ತನಗೆ ತಾನೇ ಅಭಿವ್ಯಕ್ತಗೊಳ್ಳುವ ಅಪೂರ್ವ ವಸ್ತು ನಿರ್ಮಾಣ. ಇದರಿಂದ ಲಭಿಸುವ ಆನಂದ ಲಘು ಮನರಂಜನೆಯಲ್ಲ. ಆ ಆನಂದ ಮೂಡಿ ಬರುವುದು ದಾರ್ಶನಿಕತೆಯ ಅಂತರ್‍ದೃಷ್ಟಿಯಿಂದ. ಆನಂದದ ಸ್ವರೂಪದ ಮೇಲೆ ಕಾವ್ಯದ ಮಹತ್ವ ನಿಲ್ಲುತ್ತದೆ. ಆತ್ಮ ಸ್ವರೂಪದ ಅರಿವೂ ಅದಕ್ಕೆ ಬಾಹಿರವಾದುದಲ್ಲ. ವಾಸ್ತವಿಕವಾಗಿ ಅದು ಕಾವ್ಯದ ಆಶಯವನ್ನೂ, ಆಕೃತಿಯನ್ನೂ ಸಾರ್ಥಕಗೊಳಿಸುವಂಥದ್ದು.

ಟಿ.ಎಸ್ ಎಲಿಯಟ್

ಆಧುನಿಕ ಕನ್ನಡ ನವ್ಯ ಕಾವ್ಯದ ಮೇಲೆ ಗಾಢ ಪ್ರಭಾವ ಬೀರಿದ ಟಿ.ಎಸ್ ಎಲಿಯಟ್
‘Religion and literature’ (ಧರ್ಮ ಮತ್ತು ಸಾಹಿತ್ಯ) ಎಂಬ ತನ್ನ ಸುಪ್ರಸಿದ್ಧ ಲೇಖನದಲ್ಲಿ ಹೇಳುತ್ತಾನೆ: ‘ಒಂದು ಕೃತಿ ಸಾಹಿತ್ಯ ಕೃತಿ ಹೌದೋ ಅಲ್ಲವೋ ಎಂಬುದನ್ನು ನಿರ್ಣಯಿಸಲು ಸಾಹಿತ್ಯಕ ಬೇಕು. ಆದರೆ ಆ ಕೃತಿಯ ಶ್ರೇಷ್ಠತೆಯನ್ನು ನಿರ್ಣಯಿಸಲು ಸಾಹಿತ್ಯೇತರ ಮಾನದಂಡಗಳೇ ಬೇಕಾಗುತ್ತವೆ.’ ತತ್ತ್ವ ಶಾಸ್ತ್ರ ಅಂಥ ಮಾನದಂಡಗಳನ್ನು ಒದಗಿಸಲು ಸಾಧ್ಯವೆಂದು ಎಲಿಯಟ್ ವಾದಿಸಿದ. ಸಾಹಿತ್ಯ ಕೃತಿಯು ಮಾಡುವ ಪ್ರಭಾವದ ಬಗೆಗೆ ಸರಿಯಾದ ತಿಳಿವಳಿಕೆ ಹೊಂದಿರುವುದು ಅಗತ್ಯವೆಂದೂ ಪ್ರತಿಪಾದಿಸಿ ಎಲಿಯಟ್‍ನ ಕಾವ್ಯ ಮೀಮಾಂಸೆಯಲ್ಲಿ ಕಾವ್ಯದ ಸ್ವರೂಪವನ್ನು ಸೂಚಿಸುವ vision(ದರ್ಶನ) ಎಂಬ ಪರಿಕಲ್ಪನೆಯಿದೆ. ದರ್ಶನದ ಪರಿಪೂರ್ಣತೆಗಾಗಿ ಅವನು ಹಂಬಲಿಸುತ್ತಾನೆ. ಎಲಿಯಟ್ ಪ್ರಕಾರ ಕವಿಯು ತತ್ತ್ವಜ್ಞಾನವನ್ನು ಎಲ್ಲಿಂದಲೂ ಎರವಲು ತೆಗೆದುಕೊಳ್ಳಬಹುದು. ಆದರೆ ಕವಿಯ ದರ್ಶನ ವೈಯಕ್ತಿಕ ಶೋಧದ ಫಲ.

ತತ್ತ್ವಚಿಂತಕರು ಎದುರಿಸುವ ಮಾನವನ ಕುರಿತಾದ ಮೂಲ ಪ್ರಶ್ನೆಗಳು ಕವಿಗಳನ್ನೂ ಕಾಡಿವೆ. ಹುಟ್ಟು, ಸಾವು, ಮಾನವ, ಮಾನವ ಮತ್ತು ಈ ಭೂಮಿ, ಮಾನವ ಮತ್ತು ಆಕಾಶ, ಮಾನವ ಮತ್ತು ಅವನ ಅದೃಷ್ಟ, ಸಹಮಾನವರು, ಸಹಬಾಳುವೆ, ಬಾಳುವೆಗೆ ಸಾರ್ಥಕತೆ ತಂದುಕೊಡುವುದು ಯಾವುದು, ಸಾವಿನ ನಂತರ ಮನುಷ್ಯ ಏನಾಗುತ್ತಾನೆ. ಇವೆಲ್ಲವನ್ನೂ ಕಾವ್ಯವು ತನ್ನ ಸಹಜ ಕುತೂಹಲ, ಅನ್ವೇಷಕ ಮನೋಧರ್ಮದಿಂದಲೇ ಅರಿಯಬಯಸುತ್ತದೆ . ಅಂಥ ಅರಿವಿನ ಯತ್ನದಲ್ಲೇ ಕಾವ್ಯದ ಅಧ್ಯಾತ್ಮ ಪ್ರವೃತ್ತಿಯೂ ಪ್ರಕಟವಾಗುತ್ತದೆ. ಅಧ್ಯಾತ್ಮವನ್ನು ಕಾವ್ಯವು ಎದುರಿಸುವ, ಒಳಗೊಳ್ಳುವ ಬಗೆ ವಿಶಿಷ್ಟವಾದುದು. ತನ್ನ ಸಹಜ ಸ್ವಭಾವದಿಂದಲೇ ‘ರಸ ಪೂರ್ಣ’ ವಾದ ಕಾವ್ಯವು ಅಧ್ಯಾತ್ಮಕ್ಕೆ ತೀರ ಆಗಂತುಕ ಸಂಗತಿಯಾಗಿ ಉಳಿಯಲು ಸಾಧ್ಯವಿಲ್ಲ. ಲೋಕದ ಹೊರಮೈಯನ್ನು ಕಾಣುತ್ತಲೇ ಲೋಕೋತ್ತರಕ್ಕೆ ಅದು ಕ್ಷಣಮಾತ್ರದಲ್ಲಿ ಹಾರಿಬಿಡಬಲ್ಲುದು. ಕಾವ್ಯದ ಕುರಿತ ಚಿಂತನೆಗಳೆಲ್ಲವೂ ಅಂತಿಮವಾಗಿ ಅದನ್ನೊಂದು ‘ಅಲೌಕಿಕ’ ನೆಲೆಯಲ್ಲಿ ನಿಲಿಸುತ್ತವೆ ಎಂಬುದನ್ನು ಈ ವರೆಗಿನ ಉಲ್ಲೇಖ, ವಾದಗಳಿಂದ ಮನಗಂಡಿದ್ದೇವೆ. ಆ ‘ಅಲೌಕಿಕತೆ’ಯ ವ್ಯಾಖ್ಯಾನಗಳು ಬೇರೆ ಇರಬಹುದು. ಆದರೆ ಕಾವ್ಯದ ಹಸಿವು, ‘ರಹಸ್ಯ’ದ ಕುರಿತು ಅದರ ಹುಡುಕಾಟ, ಆ ಹುಟುಕಾಟದ ತೀವ್ರತೆ ಇವೆಲ್ಲವೂ ಅಧ್ಯಾತ್ಮ ಸಾಧನೆಯ ಸ್ವರೂಪದವೇ ಆಗಿವೆ.

ಶಾಸ್ತ್ರವು ಪ್ರವೇಶಿಸಲಾರದ ಬಾಗಿಲುಗಳಲ್ಲಿ ಕಾವ್ಯವು ಪ್ರವೇಶಿಸಬಲ್ಲುದು, ತರ್ಕಕ್ಕೆ ನಿಲುಕಲಾರದ ಕಾಣ್ಕೆಗಳನ್ನು ಕಂಡುಕೊಳ್ಳಬಲ್ಲುದು. ಪ್ರತಿಭೆಯೂ ಪ್ರಜ್ಞೆಯೇ, ಆದರೆ ಅದಕ್ಕೆ ರೆಕ್ಕೆಗಳಿವೆ! ಪ್ರತಿಭಾ ಪಕ್ಷಿ ದರ್ಶನ, ವರ್ಣನಗಳ ರೆಕ್ಕೆಗಳನ್ನು ಬಡಿಯುತ್ತ ಸೀಮೆಯಿಲ್ಲದ ಆಕಾಶದಲ್ಲಿ, ವಿಶ್ವದಲ್ಲಿ ನಿಸ್ಸೀಮವಾಗಿ ಚಲಿಸಬಲ್ಲುದು. ತಾರ್ಕಿಕನ ಬುದ್ಧಿ ಒಂದು ದಾರಿಯಲ್ಲಿ ಸತ್ಯವನ್ನು ಸಮೀಪಿಸಿದರೆ, ಕವಿಯ ಪ್ರತಿಭೆ ಅದೇ ಸತ್ಯವನ್ನು ಫಕ್ಕನೆ ‘ಹಾರಿ’ ತಲುಪಿ ಬಿಡಬಹುದು. ಅಂತಃಸ್ರೋತದಲ್ಲಿ ಚಲಿಸುತ್ತ ಸತ್ಯದ ಅಂತರಂಗವನ್ನೇ ಕೈಹಿಡಿದು ಬಿಡಬಹುದು. ಪ್ರಜ್ಞೆ ಮತ್ತು ಪ್ರತಿಭೆಗಳು ಮನುಷ್ಯನ ಎರಡು ಕಣ್ಣುಗಳೆಂದೇ ಆನಂದವರ್ಧನ ಹೇಳಿದ. ಅಭಿನವಗುಪ್ತನು ಈ ಕುರಿತು ವ್ಯಾಖ್ಯಾನ ಮಾಡುತ್ತಾ ‘ಒಂದೇ ಕಣ್ಣಿನಿಂದ ಸತ್ಯದ ಪೂರ್ಣ ದರ್ಶನ ವಾಗಲಾರದು ’ ಎಂಬರ್ಥದ ಮಾತಾಡಿದ. ವಾಸ್ತವಿಕವಾಗಿ ಶಬ್ದ ಮತ್ತು ಅರ್ಥಗಳು ಕಾವ್ಯದಲ್ಲಿ ಪಡೆಯುವ ಶಕ್ತಿ, ಸಾಮಥ್ಯಗಳು ಅಗಣಿತ. ವ್ಯಾವಹಾರಿಕ ಜಗತ್ತಿನಲ್ಲಿ ಶಬ್ದಕ್ಕೆ ನಿರ್ದಿಷ್ಟ ಅರ್ಥ ಇದ್ದರೆ ಕಾವ್ಯದಲ್ಲ್ಲಿ ಅದಕ್ಕೆ ಅಪಾರ ಅರ್ಥಗಳು ಲಭಿಸುತ್ತವೆ. ಪ್ರತಿಭಾಸ್ಪರ್ಶ ಲಭಿಸಿದರೆ ಶಬ್ದದ ಸಾಮರ್ಥಕ್ಕೆ ಕೊನೆ ಎಂಬುದೇ ಇಲ್ಲ. ಆನಂದವರ್ಧನ ‘ನ ಕಾವ್ಯಾರ್ಥ ವಿರಾಮೋಸ್ತಿ’ ಎಂದು ಹೇಳಿದ. ಕಾವ್ಯವೊಂದರ ಅರ್ಥ ಪರಂಪರೆ ಅಖಂಡವಾಗಿ ಮುಂದುವರಿಯುತ್ತಲೇ ಹೋಗುತ್ತದೆ.
ದರ್ಶನ, ವರ್ಣನ, ಪತ್ರಿಭೆ, ಉತ್ಪತ್ತಿಗಳು ಕವಿಯ ಅತ್ಯಗತ್ಯ ಲಕ್ಷಣಗಳೆಂದು ಈ ವರೆಗಿನ ವಿವೇಚನೆಯಿಂದ ಗ್ರಹಿಸಬಹುದು. ಭಾರತೀಯ ಕಾವ್ಯ ಮೀಮಾಂಸೆಯ ಪ್ರಕಾರ ರಸಾನುಭವವೇ ಕಾವ್ಯದ ಆತ್ಯಂತಿಕ ಫಲವಾಗಿದೆ. ಕಾವ್ಯದಲ್ಲಿ ಶಬ್ದ,ಅರ್ಥ,ಅಲಂಕಾರ,ರೀತಿಗಳು ಪರಿಣಾಮಕ್ಕಾಗಿ ಪ್ರಯುಕ್ತವಾಗಿದ್ದರೂ ಇದಕ್ಕೆಲ್ಲ ಸಾರಭೂತವಾದುದು ‘ರಸ’. ಕಾವ್ಯದ ಪರಮಾರ್ಥವೆಂದು ‘ರಸ’ವನ್ನು ಗುರುತಿಸಲಾಗುತ್ತದೆ. ಈ ಕುರಿತು ಡಾ.ಕೆ.ಕೃಷ್ಣಮೂರ್ತಿಯವರು ಹೇಳುವ ಕೆಳಗಿನ ಮಾತುಗಳನ್ನು ಗಮನಿಸುವುದು ಅವಶ್ಯಕ.

‘ಭಾರತೀಯ ಕಾವ್ಯಮೀಮಾಂಸೆ ರಸವೇ ಮುಖ್ಯತತ್ತ್ವವೆಂದು ಪ್ರತಿಪಾದಿಸುತ್ತದೆ. ಆದರೆ ಈ ಕುರಿತು ಕೆಲ ತಪ್ಪು ಗ್ರಹಿಕೆಗಳಿವೆ. ಮಾನಸಿಕ ಸ್ಥಿತಿ ಮತ್ತು ಭಾವನೆಗಳಿಗೆ ಅದು ಸಂಬಂಧಿಸಿದೆ ನಿಜ, ಆದರೆ ರಸವೆಂದರೆ ‘ಅದೇ’ ಎಂದು ತಿಳಿಯಬಾರದು. ರಸಸಿದ್ಧಾಂತ ಬರಿಯ ಮನಃಶಾಸ್ತ್ರೀಯವಾದುದಲ್ಲ. ಅದು ಇಡೀ ಭಾರತೀಯ ಸೌಂದರ್ಯಶಾಸ್ತ್ರವನ್ನು ಒಳಗೊಂಡಿದೆ. ಆನಂದವರ್ಧನನಂಥವರು ಅದನ್ನು ಮಹಾಕಾವ್ಯಗಳ ಏಕೈಕ ತತ್ತ್ವವೆಂದೇ ತಿಳಿದರು. ಇದು ಮಾನವ ಜಗತ್ತನ್ನು ವ್ಯಾಪಿಸಿದ ಪ್ರಬಲಗುಣಗಳ ಕುರಿತು ತೊಡಗಿಕೊಂಡಿದ್ದು, ಆ ಕುರಿತ ಕವಿಯ ದೃಷ್ಟಿ, ದರ್ಶನಗಳನ್ನೊಳಗೊಂಡಿದ್ದು. ಮಹಾಕವಿಗಳ ಕೃತಿಗಳಿಗೆ ಜೀವನ ವಿಮರ್ಶೆಯ ವ್ಯಾಪಕತೆಯನ್ನು ತಂದುಕೊಡುವುದು ರಸವೇ’ (ಮಮ್ಮಟನ ಕಾವ್ಯ ಪ್ರಕಾಶ). ಈ ವಾದದ ಪ್ರಕಾರ ಅಂತಿಮವಾಗಿ ರಸವು ಜೀವನ ದರ್ಶನವಾಗುತ್ತದೆ. ರಸದ ತಿರುಳು ಅದೇ. ಕವಿಯ ಭಾವನಾ ಮೂಲ ಅಲ್ಲಿ ಮಹತ್ವದ್ದಲ್ಲ. ಅದು ಸಾಧಾರಣೀಕರಣಗೊಂಡು ವೇದ್ಯವಾದಾಗ ರಸಾನುಭವ. ಈ ಹಿನ್ನಲೆಯಲ್ಲಿ ರಸವು ಕೇವಲ ಸೌಂದರ್ಯಶಾಸ್ತ್ರೀಯ ಅಂಶವಾಗಿ ಉಳಿಯುವುದಿಲ್ಲ. ಅದಕ್ಕೆ ಬಹು ವಿಶಾಲವಾದ ಅರ್ಥ ಪರಂಪರೆ ಲಭ್ಯವಾಗುತ್ತದೆ. ಅಭಿನವಗುಪ್ತ ರಸಕ್ಕೆ ಭದ್ರವಾದ ಆಧ್ಯಾತ್ಮಿಕ ಚೌಕಟ್ಟನ್ನೇ ಒದಗಿಸಿದನೆಂದು ಹೇಳಬಹುದು. ರಸ ಸಿದ್ಧಾಂತವು ಕಾವ್ಯದ ಕುರಿತ ಸೌಂದರ್ಯಾತ್ಮಕ, ನೈತಿಕ ಮತ್ತು ಆಧ್ಯಾತ್ಮಿಕ ಗ್ರಹಿಕೆಗಳೆಲ್ಲವನ್ನೂ ಮುಪ್ಪುರಿಗೊಳಿಸಬಲ್ಲುದಾಗಿದೆ.

‘ರಸವು ಕಾಲ, ದೇಶಗಳ ಮಿತಿಯನ್ನು ಮೀರಿದ ಅನುಭವ, ಅದು ವಿಶ್ವಕರ್ತಾರನ ಸಂತೋಷದಂತೆ ಶುದ್ಧ ಮತ್ತು ಅನಂತವಾದುದು’ ಎಂದು ತಿಳಿಯುವ ಲಾಕ್ಷಣಿಕರು ಕಲಾಜಗತ್ತು ಸ್ವತಂತ್ರವಾದುದು ಎಂದು ತಿಳಿಯುತ್ತಾರೆ. ತಾತ್ತ್ವಿಕನು ವಸ್ತು ವಿಭಜನೆಯ ಹಾದಿ ಹಿಡಿದರೆ ಕವಿ-ಸಂಯೋಜನೆಯ ಹಾದಿ ಹಿಡಿಯುತ್ತಾನೆ. ಕಾವ್ಯ ಸೃಷ್ಟಿ ಬರಿಯ ಭೌತಿಕ, ಬೌದ್ಧಿಕ ಕ್ರಿಯೆಯಲ್ಲ. ಅದರಲ್ಲಿ ಆಂತರಂಗಿಕ ಸ್ಫೂರ್ತಿ ಇದೆ. ಕವಿ ಸೃಷ್ಟಿಸುವ ಜಗತ್ತಿನೊಳಗೆ ಅವನ ಪ್ರತಿಭೆಯೇ ದಿಗ್ದರ್ಶಿ. ಒಂದು ಸಮಗ್ರ ಹಾಗೂ ಸಂಕೀರ್ಣ ಅನುಭವವೇ ಕಾವ್ಯದ ಲಕ್ಷ್ಯ. ಆ ಸಿದ್ಧಿಗೆ ಕವಿಯು ಋಷಿಯಾಗುವುದು ಅವಶ್ಯ ಹಾಗೂ ಅನಿವಾರ್ಯ.

ಕಾವ್ಯ ಮತ್ತು ಅಧ್ಯಾತ್ಮದ ರಕ್ತ ಸಂಬಂಧದ ಕುರಿತ ನನ್ನ ಬಹು ವರ್ಷಗಳ ಜಿಜ್ಞಾಸೆಗೂ, ಸ್ವತಃ ನಾನು ಬರೆಯುತ್ತ ಬಂದಿರುವ ಕವಿತೆಗಳ ಮೂಲಕ ಮಾಡುತ್ತಿರುವ ಹುಡುಕಾಟಗಳಿಗೂ ಇರುವ ನಂಟು ಸಹಜವಾಗಿಯೇ ಶೋಧಿಸಿಕೊಳ್ಳಬೇಕಾದುದು, ಕಡೇ ಪಕ್ಷ ನನ್ನ ತಿಳಿವಳಿಕೆಗಾಗಿ. ಕೆಳಗಿನ ಟಿಪ್ಪಣಿ ಅಂಥದೊಂದು ಸಂದರ್ಭದಲ್ಲಿ ಬರೆದುದು.

ಹಕ್ಕಿಗಳು ಮತ್ತು ಆಕಾಶ
ಭಕ್ತಿಯು ಭಕ್ತ ಮತ್ತು ದೇವರ ಸಂಬಂಧ. ಭಕ್ತಿಯ ಕುರಿತು ಹೇಳಲು ಹೊರಟಾಗ ಅದನ್ನು ಕೇಳುವ ಸಹೃದಯನೂ ಅಲ್ಲಿ ಸೇರಿಕೊಳ್ಳುತ್ತಾನೆ. ನಮ್ಮ ಭಕ್ತಿಪಂಥಗಳು ಹಾಡು, ವಚನ, ಅನುಭಾವದ ಸತ್ಸಂಗ ಮುಂತಾದ ಅನೇಕ ರೂಪಗಳಲ್ಲಿ ಅಂತರಂಗದ ಕಷಾಯ, ಲೋಕದ ಡೊಂಕುಗಳನ್ನು ಎದುರಿಸುತ್ತ ಬೆಳೆದವು. “ಸಾಹಿತ್ಯಕವಿಗಳಿಗಿಂತ ಭಕ್ತಕವಿಗಳ ಸತ್ವ ಹಿರಿದು” ಎಂದರು ಬೇಂದ್ರೆಯವರು. “ಬಸವನ ವಚನಗಳೇ ಆಗಲಿ, ಮಹಾದೇವಿಯ ವಚನಗಳೇ ಆಗಲಿ, ಪ್ರಭುವಿನ ವಚನಗಳೇ ಆಗಲಿ- ಅವುಗಳಲ್ಲಿ ಮಹತ್ತರವಾದ ಪ್ರಾಣಶಕ್ತಿಯು ಸ್ಪಂದಿಸುವುದು…ಸಾಹಿತ್ಯ ಕವಿಗಳ ಶೃಂಗಾರರತಿಯು ಭಕ್ತಕವಿಗಳಲ್ಲಿ ಆತ್ಮರತಿಯಾಗುವುದು. ಸಾಹಿತ್ಯವು ಚಾರಿತ್ರ್ಯವಾಗುವುದು. ಭಾವವು ಅನುಭಾವವಾಗುವುದು….ಅದು ರಸವಲ್ಲ, ರುಚಿ, ಕಣ್ಣಲ್ಲ, ಬೆಳಕು..ಕನ್ನಡಿಗರ ಜಾತಿಯು ಕನ್ನಡ ಅನುಭಾವಿಗಳ ಫಲ..”ಮುಂತಾದ ಮಾತುಗಳಲ್ಲಿ ಅವರು ನಮ್ಮ ಭಕ್ತಕವಿಗಳ ಕಾವ್ಯವನ್ನು ತುಂಬ ಘನವಾದ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಅಪ್ಪಟ ವ್ಯಾವಹಾರಿಕತೆಯ, ಖಾಸಗೀಕರಣ ,ವಾಣಿಜ್ಯೀಕರಣದ, ದಿನವೂ ಕೊಲೆ, ಕಳುವು, ಅನೈತಿಕ ಸಂಬಂಧಗಳ ನೂರು ಸಾವಿರ ವರದಿಗಳ ದಾಳಿಯ ಈ ದಿನಗಳಲ್ಲಿ ನಮ್ಮ ಅನುಭಾವಿ ಕವಿಗಳು ಬದುಕಿದ್ದರೆ ಏನು ಮಾಡುತ್ತಿದ್ದರೋ! ಧರ್ಮ, ಅಧ್ಯಾತ್ಮದಂಥ ದೊಡ್ಡ ಸಂಗತಿಗಳ ಕುರಿತು ವ್ಯಾಪಾರದ ಭಾಷೆಯಲ್ಲಿ ಮಾತಾಡುವದನ್ನು ಕಂಡು ಏನನುತಿದ್ದರೋ! ದೇವರು ಮತ್ತು ಲೋಕದ ಸಂಬಂಧ ಗಟ್ಟಿಗೊಳ್ಳಬೇಕಾದುದು ಇಂಥ ಕೆಂಡ ಹಾಯುವ ಪರೀಕ್ಷೆಗಳಲ್ಲಿ.

ಪರಮಹಂಸ ರಾಮಕೃಷ್ಣ

ಜ್ಞಾನ ಮತ್ತು ಭಕ್ತಿಗಳನ್ನು ನಮ್ಮ ಹಿರಿಯರು ಎಂದೂ ವಿರುದ್ಧ ಪಥಗಳೆಂದು ತಿಳಿಯಲಿಲ್ಲ. “ಜ್ಞಾನ ಸೂರ್ಯನ ಬೆಳಕು, ಭಕ್ತಿ ಚಂದ್ರನ ಬೆಳಕು” ಎಂಬ ಪರಮಹಂಸರ ನುಡಿ ಇಲ್ಲಿ ನೆನಪಿಗೆ ಬರುತ್ತಿದೆ. ಜ್ಞಾನವಿಲ್ಲದ ಭಕ್ತಿ ಕುರುಡು, ಭಕ್ತಿಯಿಲ್ಲದ ಜ್ಞಾನ ಶುಷ್ಕ ಎಂಬುದು ಶಂಕರರ ನಿಲುವು. ನಮ್ಮ ದೊಡ್ಡ ಭಕ್ತ ಕವಿಗಳು ದೊಡ್ಡ ಬಂಡಾಯಕಾರರೂ ಹೌದು! ಭಾಷೆ, ಬದುಕು, ಬಡತನ, ಆಚರಣೆ,ರಾಜಕಾರಣ ಯಾವುದನ್ನೂ ಅವರು ಇರುವಂತೆಯೇ ಇರಗೊಡಲಿಲ್ಲ. ಆಧುನಿಕ ಕಾಲದಲ್ಲಿ ಭಕ್ತಕವಿಗಳು ಇರಬಲ್ಲರೆ ಎಂಬುದೊಂದು ಕುತೂಹಲದ ಪ್ರಶ್ನೆ. ಇದ್ದರೆ ಒಳ್ಳೆಯದಾಗುತ್ತಿತ್ತು ಎಂಬುದರಲ್ಲಿ ಮಾತ್ರ ಸಂದೇಹವಿಲ್ಲ. ನನ್ನಲ್ಲಿ ಈ ಕುರಿತು ಆಸ್ಥೆ ಹುಟ್ಟಿದ ಕುರಿತು ಕೆಲವು ಮಾತುಗಳನ್ನು ಹೇಳಬಯಸುವೆ. ಕಾಲೇಜು ದಿನಗಳಲ್ಲಿ ಒಮ್ಮೆ ನಾನು “ಶ್ರೀರಾಮಕೃಷ್ಣವಚನವೇದ”ವನ್ನು ಓದಿದೆ. ನಮ್ಮ ಪಠ್ಯಗಳಲ್ಲೋ, ಬೇರೆ ಪುಸ್ತಕಗಳಲ್ಲೋ ಓದಿದಾಗ ನಮಗೆ ನಿಲುಕದ ಮಹಾನ್ ಸಂತ, ಅವತಾರಪುರುಷ ಎಂದೆಲ್ಲ ಅನಿಸಿದ್ದ ಪರಮಹಂಸರು ಆ ಪುಸ್ತಕದಲ್ಲಿ ಸ್ವತಃ ಮಾತನಾಡತೊಡಗಿದರು. ಅವರ ಕಡೆಯ ಕೆಲವು ವರ್ಷಗಳ ಮಾತುಕತೆಗಳು ಅಲ್ಲಿ ಸಾಕಷ್ಟು ದೀರ್ಘವಾಗಿ ದಾಖಲಾಗಿವೆ. ನಾನು ಬೆಳೆಯುತ್ತಿದ್ದ ಚಿಕ್ಕ ಊರಿಗೆ ಹೋಲಿಸಿಕೊಳ್ಳಬಹುದಾಗಿದ್ದ ಪುಟ್ಟ ಗ್ರಾಮದಲ್ಲೆ ಪರಮಹಂಸರು ವಾಸವಾಗಿದ್ದುದು, ಸಾಧನೆ ಮಾಡಿದುದು. ನದಿತೀರದ ವರ್ಣನೆ, ದೋಣಿಪ್ರವಾಸ ಮುಂತಾದ ವಿವರಗಳಿಂದ ಆ ಪುಸ್ತಕ ಪರಮಹಂಸರನ್ನು ಮನಸಿಗೆ ತೀರಹತ್ತಿರವಾಗಿಸಿತು. ಅತೀತವಾದುದರ, ನಿಗೂಢವಾದುದರ ಆಕರ್ಷಣೆ ನನಗೆ ಅದಕ್ಕೂ ಮೊದಲಿನಿಂದಲೂ ಇತ್ತು. ವಚನವೇದದ ಓದು ಅದನ್ನು ಇನ್ನಷ್ಟು ಗಾಢವಾಗಿಸಿತು. ಆ ಅದೇ ಎಪ್ಪತ್ತೈದು-ಎಂಬತ್ತರ ದಶಕ ಕನ್ನಡ ಸಾಹಿತ್ಯ ಪುನಃ ಸಾಮಾಜಿಕ ಪ್ರಶ್ನೆಗಳನ್ನು ಕೇಂದ್ರದಲ್ಲಿಟ್ಟುಕೊಂಡು ಹೊಸ ಅಲೆಗಳನ್ನು ಹುಟ್ಟಿಸುತ್ತಿದ್ದ ಕಾಲ. ಬಂಡಾಯ, ದಲಿತ ಸಾಹಿತ್ಯದ ಮಹತ್ವದ ಸೃಷ್ಟಿಯ ಮುನ್ನುಡಿಯ ದಿನಗಳು.ಈ ಚರ್ಚೆಗಳು ನನ್ನಲ್ಲಿ ಮೂಡಿಸಿದ ಎಚ್ಚರ, ಹುಟ್ಟಿಸಿದ ತಿಳಿವಳಿಕೆ ಅಪಾರವಾದದ್ದು.ಪ್ರಾಥಮಿಕ ಶಾಲೆಯ ದಿನಗಳಿಂದಲೇ ಪ್ರಾಸ,ಪದ್ಯ ಕಟ್ಟುತ್ತ ಬಂದಿದ್ದ ನಾನು ಡಿವಿಜಿ, ರಾಜರತ್ನಂ, ಕುವೆಂಪು, ಬೇಂದ್ರೆ ಮುಂತಾಗಿ ಓದಿಕೊಳ್ಳುತ್ತ ಕ್ಲಾಸಿಕಲ್ ಸಾಹಿತ್ಯದ ರುಚಿಗೆ ಸಜ್ಜುಗೊಂಡವನು. ಪ್ರತಿಭಟನಾ ಸಾಹಿತ್ಯದವರ ಬಹುಪಾಲು ರಚನೆಗಳು ಮತ್ತು ನಾನು ಆದ್ಯರೆಂದು ಭಾವಿಸಿದ್ದವರ ಕುರಿತು ಅವರಲ್ಲಿ ಅನೇಕರು ಆಡುತ್ತಿದ್ದ ಮಾತುಗಳು ಬೇಸರ ಹುಟ್ಟಿಸಿದವೆಂಬುದರಲ್ಲಿ ಸಂದೇಹವಿಲ್ಲ. ಆದರೆ ದೇವನೂರು ಮಹಾದೇವ ಎಂದರೆ ಯಾರು ಎಂದೂ ತಿಳಿಯದಿದ್ದ ನಾನು ಆಕಸ್ಮಿಕವಾಗಿ ‘ಒಡಲಾಳ” ಓದಿದೆ. ನಮ್ಮೂರುಗಳಿಗೆ ಏನೂ ಪರಿಚಿತವಲ್ಲದ ಮೈಸೂರು ಕಡೆಯ ಗ್ರಾಮಾಂತರ ದಲಿತರ ಆಡುಭಾಷೆಯ ಕೃತಿ ಅಂಥ ಎಲ್ಲ ಎಲ್ಲೆಗಳನ್ನೂ ಮೀರಿ ನನ್ನನ್ನು ಆಕರ್ಷಿಸಿತು. ಅದು ತೋರಿದ್ದು ಒಂದು ಹೊಸಲೋಕವನ್ನು. ಇವತ್ತಿಗೂ ದಲಿತ ಸಾಹಿತ್ಯದ ಒಂದು ಅತ್ಯುತ್ತಮ ಸಾಧನೆಯಾಗಿ ನಿಂತಿರುವ ಕೃತಿಯಿದು.

ಕನ್ನಡ ಸಾಹಿತ್ಯದ ಕೇಂದ್ರದಲ್ಲಿ ಪ್ರತಿಭಟನಾ ಸಾಹಿತ್ಯಪರ ಸೃಷ್ಟಿ ಮತ್ತು ಧೋರಣೆ ಮಿಂಚುತ್ತಿದ್ದ ಕಾಲದಲ್ಲಿ ನನ್ನ ಸಾಹಿತ್ಯ ಜೀವನದ ಉದಯ. “ಸೊಗಸಾಗಿ ಬರೆಯಬಲ್ಲರು, ಶೈಲಿ ಚೆನ್ನಾಗಿದೆ, ಅಷ್ಟೇ” ಎಂದರೆ ನಾನು ಏನೆಂದು ತಿಳಿಯಬೆಕು? ನನಗೆ ಬದ್ಧತೆ ಇಲ್ಲವೆಂದು ನನ್ನ ಪರವಾಗಿ ಕೆಲ ಸ್ನೇಹಿತರು ಆಗಲೇ ನಿರ್ಧರಿಸಿಯಾಗಿತ್ತು. ಹಿಂದುಳಿದ ಅಥವಾ ದಲಿತವರ್ಗದ ಅನುಭವಗಳನ್ನು ಕಾಳಜಿಯಿಂದ ಕೇಳಿಸಿಕೊಳ್ಲಬಲ್ಲೆವಷ್ಟೆ ಹೊರತೂ ನಾನೂ ಅದನ್ನೇ ಬರೆಯಲು ಸಾಧ್ಯವೆ? ಸಾಧುವೆ? ಆದರೆ ಪ್ರತಿಭಟನಾ ಸಾಹಿತ್ಯದ ಪರ ನಿಂತು ಚರ್ಚಿಸುವ ಗೆಳೆಯರಿಂದ ನಾನು ಅನೇಕ ಸಂಗತಿಗಳನ್ನು ಕಲಿತಿದ್ದೇನೆ. ಸುತ್ತಣ ಸಮಾಜ ಮತ್ತು ಸಾಹಿತ್ಯದ ಸಂಬಂಧಗಳ ಕುರಿತು ತೀವ್ರವಾಗಿ ಯೋಚಿಸುವಂತೆ ಅ ಸಂವಾದಗಳು ಪ್ರೇರೇಪಿಸಿದವು. ಕಳೆದ ಮೂರು ದಶಕಗಳಿಂದ ನಗರವಾಸಿಯಾಗಿರುವ ನಾನು ಸಾಮಾಜಿಕ ಬದಲಾವಣೆಗಳ ತೀವ್ರಗತಿ ಮತ್ತು ಅದರ ಸಾಹಿತ್ಯವಿಮುಖೀ ಚಲನೆಗಳನ್ನು ಹತ್ತಿರದಿಂದ, ಆತಂಕದಿಂದ ಗಮನಿಸುತ್ತಲೂ, ಸಾಧ್ಯವಾದ ಮಟ್ಟಿಗೆ ಕಥೆ, ಕವಿತೆಗಳಲ್ಲಿ ಅಂಥ ಅನುಭವಗಳನ್ನು ಆವಾಹಿಸಿಕೊಳ್ಳುತ್ತಲೂ ಬಂದಿದ್ದೇನೆ.

ಇದು ನನ್ನ ಸಾಹಿತ್ಯ ಯಾತ್ರೆಯ ಒಂದು ಮುಖ. ಅದರ ಅಂತರಂಗದಲ್ಲಿ ಸುಲಭವಾಗಿ ತೆಕ್ಕೆಗೆ ಸಿಕ್ಕದ ನಿಸ್ಸೀಮದ ಹುಡುಕಾಟ ನಡೆದೇ ಇದೆ. ಮಾನವ ಎದುರಿಸಲೇಬೇಕಾದ ಸತ್ಯವದು. ಅಸ್ತಿತ್ವವಾದಿಗಳು ಬದುಕಿನ ಅಸಂಬದ್ಧತೆ ಮತ್ತು ನಿರರ್ಥಕತೆಗಳ ಕುರಿತು ಮಾತಾಡುತ್ತಲೇ ಅದನ್ನು’ಅರ್ಥಪೂರ್ಣ ಆಕೃತಿ’ಯಾಗಿಸುವ ದಿಕ್ಕಿನಲ್ಲೂ ಚಿಂತನೆಗಳನ್ನು ಪ್ರಕಟಿಸುತ್ತ ಬಂದಿದ್ದಾರೆ. ಕನ್ನಡದ ವಚನಕಾರರು ಆ ನಿಬ್ಬೆರಗಿನ ಜಗತ್ತನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಣಲೆತ್ನಿಸಿದರು. ಅಕ್ಕ ಅಡವಿಯ ಗಿಡ, ಮರ, ಶುಕ, ಪಿಕಗಳನ್ನೆಲ್ಲ ಆ ಸತ್ಯಕ್ಕಾಗಿ ಯಾಚಿಸುತ್ತ ಹಾಡಿ ನಡೆದರೆ ಅಲ್ಲಮ ತನ್ನ ಕಾಯದಲ್ಲೇ ಕೈಲಾಸ ಕಾಣಲು ಯತ್ನಿಸಿದ. ಬಸವಣ್ಣ ಸಮಾಜಮುಖಿಯಾಗಿದ್ದು ಆ ಸತ್ಯದ ಅನುಸಂಧಾನಕ್ಕೆ ತೊಡಗಿದ. ಇದಕ್ಕೂ ಹಿಂದಿನ ವೈದಿಕ ಋಷಿಯ ಆರ್ತತೆ, ಪ್ರಾರ್ಥನೆ, ನಿವೇದನೆಗಳೂ ಆ ಬ್ರಹ್ಮಕ್ಕಾಗಿಯೇ. ಗಾಂಧಿ, ರಮಣ, ಶರೀಫ, ಜೆಕೆ, ಯೂಜಿ, ಪುತ್ತೂರು ಅಜ್ಜ, ದೊಡ್ಡೇರಿಯ ಮಲ್ಲಣ್ಣನವರು(ಶ್ರೀಸತ್ ಉಪಾಸಿಯವರು) ತುಡಿದಿದ್ದು,ತುಡಿಯುತ್ತಿರುವುದು ಆ ತತ್ವಕ್ಕಾಗಿ. ಆಗ ಸಾಹಿತ್ಯ ಬರಿಯ ಶಬ್ದಗಳ ಆಕೃತಿಯ ಸೃಷ್ಟಿಯಾಗಿ ಮಾತ್ರ ಉಳಿಯುವುದಿಲ್ಲ. ಅದು ಲೋಕದ ಬದಲಾವಣೆಯನ್ನು ತನ್ನಿಂದಲೇ ಆರಂಭಿಸತೊಡಗುತ್ತದೆ. “ಹಕ್ಕಿ ಹಾರಿದಷ್ಟೂ ಆಕಾಶ ಇನ್ನೂ ಎತ್ತರದಲ್ಲೇ ಉಳಿದಿರುತ್ತದೆ” ಎಂಬುದು ಪರಮಹಂಸರ ಇನ್ನೊಂದು ನುಡಿ. ಆ ಯತ್ನದಲ್ಲಿ ಅದರ ಆತ್ಮವಿಶ್ವಾಸ ಬಲಿತೀತು, ರೆಕ್ಕೆಗಳು ಚುರುಕುಗೊಂಡಾವು, ಅಸೀಮವಾದುದು ಅದಕ್ಕೆ ಎಟುಕಿಯೇ ಬಿಡಬಹುದು ಅಥವಾ ನಿಲುಕಲಾರದು ಎಂದಿಟ್ಟುಕೊಂಡರೂ ಆ ಸಾಹಸ ಅದರ ಗುರಿಯೆಡೆ ಸಾಕಷ್ಟು ಹತ್ತಿರಕ್ಕೆ ಒಯ್ಯುವುದೆಂಬುದರಲ್ಲಿ ಸಂದೇಹವಿಲ್ಲ.