ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕೊರೊನ ಕಾಲದ ಹಳಹಳಿಕೆಗಳು ಮತ್ತು ಬದುಕು

ಡಾ. ಪ್ರೀತಿ ಕೆ.ಎ.
ಇತ್ತೀಚಿನ ಬರಹಗಳು: ಡಾ. ಪ್ರೀತಿ ಕೆ.ಎ. (ಎಲ್ಲವನ್ನು ಓದಿ)

ಒಂದು ವರ್ಷದ ಹಿಂದಿನ ಮಾತು. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಆದಿತ್ಯನಿಗೆ ಕೈ ತುಂಬಾ ಸಂಬಳ ಮತ್ತು ಜನ್ಮ ಪೂರ್ತಿ ಮಾಡಿದರೂ ಮುಗಿಯದಷ್ಟು ಕೆಲಸ ! ಕೆಲಸದ ಒತ್ತಡದಲ್ಲಿರುವಾಗಲೇ ಮನೆಯಿಂದ ಫೋನು ಬಂದಿತ್ತು. ‘ದೊಡ್ಡಪ್ಪನ ಮಗನ ಮದುವೆ. ಎರಡು ದಿನ ಮೊದಲೇ ಬರುತ್ತೀಯಲ್ಲ? ‘ ಅಮ್ಮನ ಉತ್ಸಾಹದ ದನಿ. ಆದಿತ್ಯನಿಗೆ ಮದುವೆಗೆ ಹೋಗುವ ಆಸೆ ಇದ್ದರೂ ಮದುವೆ ಡೇಟ್ ಗಿಂತ ಪ್ರಾಜೆಕ್ಟ್ ಡೆಡ್ ಲೈನ್ ಡೇಟ್ ಢಾಳಾಗಿ ಕಂಡು ಇಲ್ಲವೆಂದಿದ್ದ. ಸುಕನ್ಯಳ ಬಾಲ್ಯದ ಗೆಳತಿಯರು ಹಲವು ಸಲ ಅವಳನ್ನು ಕರೆದಿದ್ದರು ಭೇಟಿಯಾಗೋಣವೆಂದು. ಅವಳು ಪ್ರತೀ ಸಲವೂ ಕೆಲಸದ ನೆಪ ಹೇಳಿ ಮುಂದೂಡುತ್ತಲೇ ಬಂದಿದ್ದಳು. ಮನೀಷಾಳಿಗೆ ಮೊದಲಿಂದಲೂ ಸಾಹಿತ್ಯ ಓದುವ ಗೀಳು. ಹಿಂದೆಲ್ಲಾ ಎಲ್ಲೆಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಬೋರ್ಡು ಕಾಣುತ್ತದೋ ಅಲ್ಲೆಲ್ಲ ಹೋಗಿ ತನ್ನಿಷ್ಟದ ಪುಸ್ತಕಗಳನ್ನು ಕೊಂಡು ತಂದು ಓದುತ್ತಿದ್ದವಳಿಗೆ ಮದುವೆ ಮಕ್ಕಳಾದ ಮೇಲೆ ಇದ್ದ ಪುಸ್ತಕ ಓದಲೇ ಪುರುಸೊತ್ತಿಲ್ಲ. ಇದು ಆದಿತ್ಯ, ಸುಕನ್ಯ, ಮನಿಷಾರ ಕಥೆ ಮಾತ್ರವಲ್ಲ. ಬಹುತೇಕ ನಮ್ಮೆಲ್ಲರದ್ದೂ ಹೌದು.

ಸೋದರತ್ತೆ ಮಗಳ ಮದುವೆ, ಚಿಕ್ಕಪ್ಪನ ಮಗನ ಮುಂಜಿ, ಮಾವನ ಮನೆಯ ಗೃಹಪ್ರವೇಶ, ತೀರಾ ಹತ್ತಿರದ ಸಂಬಂಧಿಕರ ಮನೆಗೆ ಭೇಟಿ, ಆತ್ಮೀಯ ಗೆಳೆಯ ಗೆಳತಿಯರೊಂದಿಗೆ ಬೈಟೂ ಕಾಫಿ, ಊರ ಜಾತ್ರೆ, ಪುಸ್ತಕ ಮೇಳ, ಛಾಯಾ ಚಿತ್ರ ಪ್ರದರ್ಶನ, ನಾಟಕ ಪ್ರದರ್ಶನ, ಯಕ್ಷಗಾನ, ಸಂಗೀತ ಕಛೇರಿ………….ಹೀಗೆ ಎಷ್ಟೊಂದು ಭೇಟಿಗಳನ್ನು, ಸಭೆ ಸಭಾರಂಭಗಳನ್ನು ನಾವು ತಪ್ಪಿಸಿಕೊಂಡಿಲ್ಲ? ಒಂದೊಂದಕ್ಕೂ ಒಂದೊಂದು ನೆಪ, ಒಂದೊಂದು ತೊಡಕು. ಈ ಕೊರೊನ ಎಲ್ಲವನ್ನೂ ಮತ್ತೆ ನೆನಪಿಸುತ್ತಿದೆ. ಈಗ ಬಂಧುಗಳು ಮನೆಗೆ ಕರೆಯಲೂ ಹಿಂಜರಿಯುತ್ತಿದ್ದಾರೆ. ಯಾವ ಸಭೆ ಸಮಾರಂಭಗಳೂ ನಡೆಯುತ್ತಿಲ್ಲ. ನಡೆದರೂ ನೂರು ಜನರ ಲಿಸ್ಟ್ ನಲ್ಲಿ ನಮ್ಮ ಹೆಸರೇ ಇಲ್ಲ! ಇನ್ನು ಸಾರ್ವಜನಿಕ ಕಾರ್ಯಕ್ರಮಗಳಂತೂ ದೂರದ ಮಾತು.

ಅದಕ್ಕೇ ಇವತ್ತು ಒಬ್ಬೊಬ್ಬರೂ ಒಂದೊಂದು ದ್ವೀಪವಾಗಿ ಕುಳಿತುಕೊಂಡ ಹೊತ್ತಲ್ಲಿ, ಹಿಂದೆ ಹಲವು ನೆಪವೊಡ್ಡಿ ಹೋಗದ ಮದುವೆ ಮುಂಜಿಗಳಿಗೆಲ್ಲ ಪಶ್ಚಾತಾಪ ಪಡುತ್ತಿದ್ದೇವೆ. ಸಂಗೀತ ಕಛೇರಿಗೋ, ಪುಸ್ತಕ ಬಿಡುಗಡೆಗೋ ಕಾತರದಿಂದ ಕಾಯುತ್ತಿದ್ದೇವೆ. ಪ್ರೀತಿಪಾತ್ರರ ಒಂದೇ ಒಂದು ಭೇಟಿಗೆ ತಹತಹಿಸುತ್ತಿದ್ದೇವೆ. ಆತ್ಮೀಯರ ಒಂದು ಸ್ಪರ್ಶ, ಬೆಚ್ಚನೆಯ ಅಪ್ಪುಗೆಗೆ ಬಾಯಾರಿದ್ದೇವೆ.

ಛೇ! ಮೊದಲೇ ಹೀಗಾಗಬಹುದೆಂದು ಗೊತ್ತಿರುತ್ತಿದ್ದರೆ….ಹಲವು ಸಂಭ್ರಮಗಳಿಗೆ ಸಾಕ್ಷಿಯಾಗಬಹುದಿತ್ತು..ಇನ್ನೊಬ್ಬರ ಸೂತಕದ ದಿನಗಳಿಗೆ ಹೆಗಲಾಗಬಹುದಿತ್ತು..ಇನ್ನಷ್ಟು ಸಾರ್ಥಕ ಕ್ಷಣಗಳನ್ನು ಅನುಭವಿಸಬಹುದಿತ್ತು..ಬದುಕನ್ನು ಮತ್ತಷ್ಟು ಚಂದವಿಟ್ಟುಕೊಳ್ಳಬಹುದಿತ್ತು ಎಂದೆಲ್ಲ ಹಳಹಳಿಸುತ್ತಿದ್ದೇವೆ.

ಅಷ್ಟಕ್ಕೂ ಏನಾಗಿತ್ತು ನಮಗೆ? ನಿಜಕ್ಕೂ ಇತ್ತೇ ಬದುಕಲ್ಲಿ ಅಷ್ಟು ಧಾವಂತದಿಂದ ಓಡುವ ಜರೂರತ್ತು? ಆ ಪರಿಯ ನಾಗಾಲೋಟಕ್ಕೆ ಕಾರಣವಾದರೂ ಏನಿತ್ತು? ಜಗತ್ತೇ ಓಡುವಾಗ ನಾನೊಬ್ಬ ನಿಂತರೆ ನಾನೆಲ್ಲಿ ಹಿಂದೆಯೇ ಉಳಿದು ಬಿಡುತ್ತೇನೆಂಬ ಭಯವಾ? ಪ್ರತಿಸ್ಪರ್ಧಿಗಳಿಗಿಂತ ಮೇಲಕ್ಕೆ ಏರಲೇಬೇಕೆಂಬ ಶಪಥವಾ? ಇರುವ 30-40 ವರ್ಷಗಳಲ್ಲಿ ಸಾಧ್ಯವಾದಷ್ಟು ಗಳಿಸಿ ಕೂಡಿಡುವ ಚಪಲವಾ? ಮಹಡಿ ಮೇಲೊಂದು ಮಹಡಿ ಕಟ್ಟಿ ನೋಡಿದವರು ಕರುಬುವಂತೆ ಮಾಡುವ ಹಪಾಹಪಿಯಾ? ನಮ್ಮನ್ನು ನಮ್ಮ ಚಿಪ್ಪಿನೊಳಗೇ ಕೂರುವಂತೆ ಮಾಡಿದ ಇಂದ್ರಜಾಲ ಯಾವುದು?

ನಮ್ಮ ಮೆಚ್ಚಿನ ಸಂಗೀತ ಕೇಳಲು, ಇಷ್ಟದ ಪುಸ್ತಕ ಓದಲು, ಮನಸ್ಸಿಗೆ ಹಾಯೆನ್ನಿಸುವ ಒಂದು ಪುಟ್ಟ ವಾಕ್ ಹೋಗಲು, ಪ್ರಕೃತಿಯ ಸೊಬಗನ್ನು ಕಣ್ಣುತುಂಬಿಕೊಳ್ಳಲು, ಆತ್ಮೀಯರೊಂದಿಗೆ ಮನ ಬಿಚ್ಚಿ ಮಾತಾಡಲು ನಿಜಕ್ಕೂ ಸಮಯದ ಅಭಾವವಿತ್ತಾ? ಸಣ್ಣ ಪುಟ್ಟ ಸಂಗತಿಗಳಲ್ಲೇ ಖುಷಿಯನ್ನು ಕಂಡುಕೊಳ್ಳುವ ಬಗೆಯನ್ನು ಏಕೆ ಮರೆತೆವು? ಮನುಷ್ಯ ಮೂಲತಃ ಸಂಘಜೀವಿ ಎಂಬುವುದನ್ನೇ ಮರೆಯುವಂತೆ ಮಾಡಿದ ಮೋಹನ ಮುರಳಿ ಯಾವುದದು? ಇವು ಉತ್ತರವಿಲ್ಲದ ಪ್ರಶ್ನೆಗಳೇನಲ್ಲ. ನಮ್ಮನ್ನೇ ನಾವು ಪರಾಮರ್ಶಿಸಿಕೊಂಡರೆ ಉತ್ತರ ಸಿಗುತ್ತದೆ.

ಅಷ್ಟಕ್ಕೂ ನಮ್ಮ ಬದುಕಿನ ಅತ್ಯಂತ ಸುಂದರ ಕ್ಷಣಗಳು ಯಾವುವೆಂದು ಕೇಳಿದರೆ ನಮ್ಮ ಉತ್ತರ ಬಾಲ್ಯದ ಕೀಟಲೆಗಳು, ಅಮ್ಮನ ಮಡಿಲಲ್ಲಿ ಮಗುವಾದದ್ದು, ಅಪ್ಪನ ಹೆಗಲೇರಿ ನೋಡಿದ ಜಾತ್ರೆ, ಒಡ ಹುಟ್ಟಿದವರೊಂದಿಗಿನ ಹುಸಿ ಜಗಳಗಳು, ಬಂಧುಗಳ ಒಡನಾಟ, ಗೆಳೆಯ ಗೆಳತಿಯರೊಂದಿಗೆ ಹೋದ ಟ್ರಿಪ್ಪುಗಳು, ಸಂಗಾತಿಯ ಸಾಮೀಪ್ಯತೆ, ಮಗುವನ್ನು ಮೊಟ್ಟ ಮೊದಲ ಬಾರಿ ಎತ್ತಿ ಹಿಡಿದದ್ದು, ಗುರುತೇ ಗೊತ್ತಿಲ್ಲದವರಿಗೆ ನೆರವಾದದ್ದು……….. ಇಂಥವೇ ಆಗಿರುತ್ತವೆ. ಮೊದಲು ಸಿಕ್ಕಿದ ಕೆಲಸ ಮತ್ತು ಸಂಬಳ ಕೊಟ್ಟಿದ್ದ ಖುಷಿಯನ್ನು ಮುಂದೆ ಏರುತ್ತಾ ಹೋದ ಸಂಬಳ, ಪ್ರಮೋಶನ್ನುಗಳು ಕೊಟ್ಟಿರುವುದಿಲ್ಲ.. ಇದ್ದರೂ ಅವು ನೆನಪಿನಲ್ಲಿ ಉಳಿಯುವಂಥದ್ದಾಗಿರುವುದಿಲ್ಲ. ವೃತ್ತಿಯಿಂದ ದುಡ್ಡು ಗಳಿಸಬಹುದಾದರೂ ಕೊನೆ ತನಕ ನಮ್ಮ ಜೊತೆ ಇರುವುದು ನಾವು ಬೆಳೆಸಿಕೊಂಡ ಪ್ರವೃತ್ತಿಗಳೇ ಆಗಿರುತ್ತದೆ.ಆರ್ಥಿಕವಾಗಿ ಪೊರೆಯುವುದು ಉದ್ಯೋಗವಾದರೂ ಭಾವನಾತ್ಮಕವಾಗಿ ನಮ್ಮನ್ನು ಪೊರೆಯುವುದು ಮನುಷ್ಯ ಸಂಬಂಧಗಳೇ ಎನ್ನುವುದು ಗೊತ್ತಿದ್ದರೂ ಮರೆಯುತ್ತೇವೆ.

ನಮ್ಮದೇ ಒಳಿತಿಗೆ ನಾವು ಬದಲಾಗಬೇಕಿದೆ. ಧಾವಂತದ ಓಟಕ್ಕೆ ಸ್ವಲ್ಪ ಬ್ರೇಕು ಹಾಕಬೇಕಿದೆ. ಒತ್ತಡದ ಬದುಕಿನಲ್ಲೂ ಜೀವಂತಿಕೆಯನ್ನು ತಂದುಕೊಳ್ಳಬೇಕಿದೆ. ನಮ್ಮ ಮತ್ತು ನಮ್ಮವರ ದನಿಗಳಿಗೆ ಕಿವಿಯಾಗಬೇಕಿದೆ. ನಮ್ಮತನವನ್ನು ಕೊನೆವರೆಗೂ ಹಿಡಿದಿಟ್ಟುಕೊಳ್ಳುವ ಹವ್ಯಾಸಗಳಿಗೆ ಒಂದಷ್ಟು ಸಮಯ ಎತ್ತಿಡಬೇಕಾಗಿದೆ. ಚೂರೇ ಚೂರು ಸಮಯವನ್ನಾದರೂ ನಮ್ಮ ಕುಟುಂಬ ಮತ್ತು ಸಮಾಜಕ್ಕೆ ಮೀಸಲಿಡಬೇಕಾಗಿದೆ.

ಕೊರೊನ ಕಾಲದ ಹಳಹಳಿಕೆಗಳು ಬರೆಯ ಆ ಕ್ಷಣದ ಹಳಹಳಿಕೆಗಳಾಗಿ ಉಳಿಯದಿರಲಿ. ಎಲ್ಲರೂ ಕಾಯುತ್ತಿರುವ ಆ ಗಳಿಗೆಗಳು ಬೇಗ ಬರಲಿ..ಬದುಕು ಮತ್ತೆ ಅರಳಲಿ..