ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿ.ಜಿ.ಭಟ್ಟ
ಇತ್ತೀಚಿನ ಬರಹಗಳು: ವಿ.ಜಿ.ಭಟ್ಟ (ಎಲ್ಲವನ್ನು ಓದಿ)

ಗುಬ್ಬಿಯೊಂದು ಹಾರಿ ಬಂದು
ಹುಲ್ಲುಕಡ್ಡಿ ಕಚ್ಚಿತಂದು
ಗೂಡು ಕಟ್ಟಿತು
ಗೋಡೆ ಮೇಲೆ ಪಟದ ಹಿಂದೆ
ಗೂಡು ಕಟ್ಟಿತು

ನುಚ್ಚುಕಾಳು ಹೆಕ್ಕಿತಂದು
ಮದುವೆ ಗಿದುವೆ ಮಾಡಿಕೊಂಡು
ಗುಬ್ಬಿ ಬಾಳಿತು
ಕೆಲವು ಕಾಲ ಕಳೆದ ಮೇಲೆ
ಗೂಡಿನಲ್ಲಿ ಮರಿಯ ಚಿಂವ್ವು
ಚಿಂವ್ವು ಕೇಳಿತು

ಮರಿಯು ಬೆಳೆದು ಗೂಡಿನಿಂದ
ಇಣಕಿ ನೋಡಿತು
ಗುಬ್ಬಿ ಆಗ ತನ್ನ ಮರಿಯ
ಹೊರಗೆ ದೂಡಿತು

“ ಮರಿಯೆ ಹೋಗು ಗಟ್ಟಿಯಾಗು
ಮನೆಯ ಮಾಡಿಕೊ
ನಿನ್ನ ಅನ್ನ ಬದುಕು ಎಲ್ಲ
ನೀನೆ ನೋಡಿಕೊ”

ಎಂದು ಹೇಳಿ ಗುಬ್ಬಿ ಮರಿಯ
ಹೊರಗೆ ನೂಕಿತು
ಕೆಳಗೆ ಬಿದ್ದ ಮರಿಯು ತಪ್ಪು-
ಹೆಜ್ಜೆ ಹಾಕಿತು.

ಪಕ್ಕ ಬಲಿತು ಹಾರ ಕಲಿತು
ಮರಿಯು ಹೋಯಿತು
ಗೂಡು ಗೀಡು ಕಟ್ಟಿಕೊಂಡು
ಮದುವೆ ಗಿದುವೆ ಮಾಡಿಕೊಂಡು
ತನ್ನ ತಂದೆ ತಾಯಿಗಿಂತ
ಸುಖದಿ ಬಾಳಿತು .