ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚಿತ್ರಕಲೆಯ ಒಂದು ಪಾಠ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ನನ್ನ ಮಗ ಅವನ ಬಣ್ಣದ ಡಬ್ಬಿಯನ್ನು ನನ್ನ ಮುಂದಿಡುತ್ತಾನೆ
ಕೇಳುತ್ತಾನೆ ತನಗಾಗಿ ಹಕ್ಕಿಯೊಂದನ್ನು ಬರೆಯಲು
ಬೂದು ಬಣ್ಣದಲ್ಲಿ ನಾನು ಕುಂಚವ ಅದ್ದುವೆ
ಕಂಬಿ, ಬೀಗಗಳ ಒಂದು ಚಚ್ಚೌಕವನ್ನು ಬರೆಯುವೆ
ಅಚ್ಚರಿ ಅವನ ಕಣ್ಣುಗಳ ತುಂಬುತ್ತದೆ
‘…ಆದರೆ ಇದು ಜೈಲು, ಅಪ್ಪ,
ಹಕ್ಕಿಯನ್ನು ಬರೆಯುವುದು ಹೇಗೆ, ಗೊತ್ತಿಲ್ಲವೇ ನಿನಗೆ?’
ನಾನು ಹೇಳುವೆ: ‘ಮಗೂ, ನನ್ನ ಕ್ಷಮಿಸು.
ನಾನು ಹಕ್ಕಿಗಳ ಚಹರೆಗಳನ್ನು ಮರೆತಿದ್ದೇನೆ’

ನನ್ನ ಮಗ ಚಿತ್ರಕಲೆಯ ಪುಸ್ತಕವನ್ನು ಇದಿರಿಗಿಡುತ್ತಾನೆ
ಕೇಳುತ್ತಾನೆ, ಒಂದು ಗೋಧಿಯ ರಾಶಿ*ಯನ್ನು ಬರೆಯುವಂತೆ.
ತೆಗೆದುಕೊಳ್ಳುತ್ತೇನೆ ಪೆನ್ನು
ಬರೆಯುವೆ- ಒಂದು ಗನ್ನು
ನನ್ನ ಮಗ ನನ್ನ ಅಜ್ಞಾನವನ್ನು ಅಣಕಿಸುತ್ತಾನೆ
ಕೇಳುತ್ತಾನೆ
‘ನಿಂಗೆ ಗೊತ್ತಿಲ್ವಾ, ಅಪ್ಪ, ಗೋಧಿಯ ರಾಶಿ ಮತ್ತು ಗನ್ನಿನ ಅಂತರ?’
ನಾನು ಹೇಳುವೆ, ‘ ಮಗನೇ,
ನನಗೆ ತಿಳಿದಿದ್ದ ಕಾಲವಿತ್ತು,ಗೋಧಿಯ ರಾಶಿಯ ಆಕಾರ
ಬ್ರೆಡ್ ನ ತುಣುಕಿನ ಆಕಾರ
ಗುಲಾಬಿಯ ಚಹರೆ
ಆದರೆ ಈ ಕಠಿಣ ಕಾಲದಲ್ಲಿ
ಕಾಡಿನ ಮರಗಳು ಮಿಲಿಟರಿ ಮಂದಿಯ ಜೊತೆಗೂಡಿವೆ
ಮತ್ತು ಗುಲಾಬಿಗೆ ದಣಿವಿನ ಮಂಕು ಆವರಿಸಿದೆ
ಆಯುಧ ಹಿಡಿದ ಸಂಪತ್ತಿನ ಕಾಲ ಇದು
ಆಯುಧಧಾರಿ ಹಕ್ಕಿಗಳು
ಆಯುಧಧಾರಿ ಸಂಸ್ಕೃತಿ
ಮತ್ತು ಆಯುಧ ಹಿಡಿದ ಮತ
ಒಳಗೆ ಒಂದು ಗನ್ ಇರದ
ಬ್ರೆಡ್‌ನ ತುಣುಕನ್ನು ನೀನು ಕೊಳ್ಳಲಾರೆ
ಅದರ ಮುಳ್ಳುಗಳು ನಿನ್ನ ಮುಖವನ್ನು ಚುಚ್ಚದೆ
ಹೊಲದಲ್ಲಿ ಗುಲಾಬಿಯೊಂದನ್ನು ನೀನು ಕೀಳಲಾರೆ
ನಿನ್ನ ಬೆರಳುಗಳ ನಡುವೆ ಆಸ್ಪೋಟಿಸದ
ಒಂದೂ ಪುಸ್ತಕವನ್ನು ನೀನು ಕೊಳ್ಳಲಾರೆ’

ನನ್ನ ಮಗ ನನ್ನ ಹಾಸಿಗೆಯಂಚಿಗೆ ಕುಳಿತು
ಕವಿತೆಯೊಂದನ್ನು ವಾಚಿಸುವಂತೆ ಕೇಳುತ್ತಾನೆ
ನನ್ನ ಕಣ್ಣಿಂದ ಹನಿಯೊಂದು ಜಾರಿ ತಲೆದಿಂಬಿನ ಮೇಲೆ ಬೀಳುತ್ತದೆ
ನನ್ನ ಮಗ ಅದನ್ನು ನೆಕ್ಕುತ್ತಾನೆ, ಅಚ್ಚರಿಯಿಂದ, ಹೇಳುತ್ತಾನೆ:
‘ಇದೊಂದು ಕಂಬನಿ, ಅಪ್ಪ, ಕವಿತೆಯಲ್ಲ!’
ಹೇಳುತ್ತೇನೆ ಅವನಿಗೆ:
‘ಮಗಾ, ನೀನು ಬೆಳೆದು,
ಅರಬ್ಬಿ ಮಹಾಕಾವ್ಯಗಳನ್ನು ಓದುವಾಗ,
ಕಂಡುಕೊಳ್ಳುವೆ, ಶಬ್ದ ಮತ್ತು ಕವಿತೆ ಅವಳಿಗಳೆಂದು
ಹಾಗೂ ಅರಬ್ಬಿ ಕವಿತೆ, ಬರೆಯುವ ಬೆರಳುಗಳ
ಕಂಬನಿಯೇ ಹೊರತು ಇನ್ನೇನೂ ಅಲ್ಲ, ಎಂದು’

ನನ್ನ ಮಗ ಅವನ ಪೆನ್ನುಗಳನ್ನು ಕ್ರೆಯಾನುಗಳ ಪೆಟ್ಟಿಗೆಯನ್ನು ನನ್ನೆದುರು ಇಡುತ್ತಾನೆ
ತನಗಾಗಿ ತಾಯ್ನೆಲವನ್ನು ಬರೆಯುವಂತೆ ಕೇಳುತ್ತಾನೆ
ಕುಂಚ ನನ್ನ ಕೈಗಳಲ್ಲಿ ಕಂಪಿಸುತ್ತದೆ
ಕುಸಿಯುತ್ತೇನೆ ನಾನು, ಅಳುತ್ತ.

★ ನಿಜಾ಼ರ್ ಖಬ್ಬಾನಿ

A LESSON IN DRAWING

ಕನ್ನಡಕ್ಕೆ- ಡಾ. ಗೋವಿಂದ ಹೆಗಡೆ

*ಗೋಧಿಯ ರಾಶಿ – Wheatstalk ಪರಂಪರಾಗತವಾಗಿ ಸಮೃದ್ಧಿಯನ್ನು, ಸಂಪತ್ತನ್ನು ಸಂಕೇತಿಸುತ್ತದೆ.