ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಜಿ ಎಸ್ ಎಸ್

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)


(ಗಜಲ್)
ಒಂದು ಸಂಜೆಯ ಹೊತ್ತು ಬೈಗಿನಲಿ ಬೆಳಗು ಕಂಡವರು
ದೀಪವಿಲ್ಲದ ದಾರಿಯಲ್ಲಿ ಪ್ರಜ್ಞೆಯ ಹಣತೆ ಹಚ್ಚಿದವರು

ತಕ್ಕಡಿಯಿಂದ ತಂಬೂರಿ ತನಕ ಇದೆ ಕಂಬನಿ ಕವಿತೆ
ಒಡೆದ ಕನ್ನಡಿಯಲ್ಲಿ ಕತ್ತಲು-ಬೆಳಕುಗಳ ಪಡಿ ಮೂಡಿಸಿದವರು

ಗೂಡಿನ ಸುತ್ತ ಆಕ್ರಮಣ ಸುಲಿಗೆ ಪ್ರೇಮದಹನ ದುರಂತ
ಹೂವುಗಳ ನಿಟ್ಟುಸಿರಿಗೆ ಅಶ್ರುಗಾನ ಹಿಡಿದವರು

ಕನಸಿನಿಂದ ನನಸಿಗೆ ಪಯಣ ಅರೆ ಮುಗಿದ ಕವನ
ನೆರಳಿಲ್ಲದ ದಾರಿಯಲ್ಲಿ ನಿಯತಿಯ ರೆಕ್ಕೆ ಅರಸಿದವರು

ಪ್ರೀತಿ ಇಲ್ಲದ ಮೇಲೆ ಏನಿದೆ, ಅಭಾವಗೀತ- ನಿಟ್ಟುಸಿರು
ಮುಗಿದ ಕತೆಯಲ್ಲೂ ಬಂತು ಬೆಳಕೆಂದವರು

ಹೊಸ ವರ್ಷದ ಕೊಡುಗೆಗೆ ದೀಪದ ಹೆಜ್ಜೆ ಹುಡುಕಿ
ಬೆಂಗಾಡಿನಲ್ಲಿ ಔತಣದ ಗಾರುಡಿ ತೋರಿದವರು

ಪಯಣದ ತುಂಬ ಶಾರದೆಯ ಆವಾಹನೆ ಕೊಳಲು ಮೋಡಿ
ಹಿನ್ನುಡಿಯಲ್ಲೂ ಬೆಳಕು ಹರಿಯಿತೆ? ಎಂದು ಕಾತರಿಸಿದವರು

ತೆರೆದ ದಾರಿಯ ಸಾಲು ಮರಗಳ ಕೆಳಗೆ ಕಂಪಿನ ಕರೆ ಕೇಳಿಸಿ
ಕಾವ್ಯೋದಯ ತಂದವರು,ಮಾಗಿ ಬೆಳಕಾದವರು

( ಇಂದು ರಾಷ್ಟ್ರಕವಿ ಜಿ ಎಸ್ ಶಿವರುದ್ರಪ್ಪ ಅವರ ಜನ್ಮದಿನ.
ಆ ಪ್ರಯುಕ್ತ ಅವರಿಗೆ ಗಜಲ್ ನಮನ.

ಈ ಗಜಲ್ ನಲ್ಲಿ ಜಿ ಎಸ್ ಎಸ್ ಅವರ ನಲವತ್ತಕ್ಕೂ ಹೆಚ್ಚು ಕವಿತೆಗಳ ಹೆಸರುಗಳನ್ನು ಸಂಯೋಜಿಸಲಾಗಿದೆ).