ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಟೀ ಬ್ಯಾಗ್ಸ್ ಮತ್ತು ಕವಿತೆಗಳು

ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಒಮ್ಮೆ ಕಲ್ಪಿಸಿಕೊಳ್ಳಿ. ನೀವು ಮಾಡಬೇಕಾದ ಕೆಲಸ ಮುಗಿಸಿ ಸಲ್ಪ ವಿರಾಮಕ್ಕಾಗಿ ಆಚೀಚೆ ನೋಡುತ್ತಿದ್ದಾಗ ನಿಮ್ಮ ಮೇಜಿನ ಮೇಲೆ ಹಬೆಯಾಡುವ ಬಿಸಿನೀರು ಮತ್ತು ಏಲಕ್ಕಿ ಸಾರದ ಚಿಕ್ಕ ಟೀ ಬ್ಯಾಗ್ ತಂದಿಟ್ಟರೆ ಹೇಗಿರುತ್ತದೆ. ಬಿಸಿನೀರಲ್ಲಿ ಅದ್ದಿದ ಕೆಲ ಕ್ಷಣಗಳಲ್ಲೇ, ಪರಿಮಳದ ಚಹಾದ ಜೊತೆ ಬೆಚ್ಚಗಿನ ಹಬೆಯನ್ನೂ ಹೀರುತ್ತಿದ್ದಂತೆ ನಿಮಗದು ಎಂತಹ ಸುಖ…!

ಇದನ್ನು ಓದುವ ಹೊತ್ತಿಗೆ ದೂರದ ಇಟಲಿಯ ಪಿಯಾಸೆಂಜಾ ಎಂಬ ಊರಿನ, ಸಂಗ್ರಹಾಲಯವಾಗಿ ರೂಪುಗೊಂಡ ಹಳೆಯ ಚರ್ಚ್ ಒಂದರಲ್ಲಿ ವಿಭಿನ್ನ ಪ್ರದರ್ಶನವೊಂದು ಆರಂಭವಾಗುತ್ತಿದೆ. ಅಲ್ಲಿ ಎರಡು ಬಗೆಯ ಪ್ರದರ್ಶನ ಘಟಕಗಳಿದ್ದು, ಒಂದು-ಅನೇಕರು, ಬಳಸಿದ, ಒಣಗಿದ ಚಿಕ್ಕ ಚಿಕ್ಕ ಟೀ ಬ್ಯಾಗ್ ಗಳಿಂದ ಮಾಡಿದ ಬೃಹತ್ ಕಲಾತ್ಮಕ ಬೆನ್ನು ಚೀಲ (RUCKSACK) ಹಾಗೂ ೨೫೦ ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಕವಿತೆಗಳ ಸಂಗ್ರಹ.

ರಕ್ ಸ್ಯಾಕ್ ಮತ್ತು ಪುಟ್ಟ ಕವಿತೆಗಳ ಪ್ರದರ್ಶನ ಕಮ್ಮಟ

ಎಲ್ಲವೂ ಜಗತ್ತಿನ ಮೂಲೆಗಳಿಂದ ಬಂದಂತವುಗಳೆ..
ಹಾಗಾದರೆ, ಈ ಟೀ ಬ್ಯಾಗ್ ಗಳಿಗೂ, ಕವಿತೆಗಳಿಗೂ ಎತ್ತಣೆತ್ತಣಾ ಸಂಬಂಧ?

ಟೀ ಬ್ಯಾಗ್

ನಿಮ್ಮ ಮುಂದೆ ಮೈ ಕೊಡವಿನಿಂತ ಟೀ ಬ್ಯಾಗ್ ಅನ್ನು ಒಮ್ಮೆ ದಿಟ್ಟಿಸಿ ನೋಡಿ.. ಅದೊಂದು ಚಿಕ್ಕ ಬ್ಯಾಗ್,ಆದರೆ ಒಳಗೆ ಚಹಾ ಪುಡಿ ಸರಕು. ಎಲ್ಲಿಂದಲೋ ಬಂತು..ಯಾರೋ ಎಲೆಯನ್ನು ಕೊಯ್ದರು,ಕೂಡಿಸಿದರು,ಒಣಗಿಸಿದರು,ಪುಡಿ ಮಾಡಿದರು, ಪರಿಮಳ, ತಾಜಾತನ ತುಂಬಿ,ಪ್ಯಾಕ್ ಮಾಡಿ ಕಳಿಸಿದರು.. ಹಾಗೆ ಬಂದು ಈದೀಗ ನಿಮ್ಮ ಮೇಜಿನ ಮೇಲೆ ಚಿಕ್ಕ ಚೀಲವಾಗಿ ಪ್ರಸ್ತುತವಾಗಿದೆ..

ಶತಮಾನಗಳಷ್ಟು ಹಿಂದೆ,ಚಹಾ ಕಂಡುಹಿಡಿದ ಚೀನಿಗರೂ ಟಿಬೆಟ್ ಗೆ ಬರುವಾಗ ಮತ್ತೆ ಬುದ್ಧ ಧರ್ಮ ಕಲಿಯಲು ಬಂದ ಲಾಮಾಗಳು ಜಪಾನ್ ಗೆ ಹಿಂತಿರುಗುವಾಗ ಚಹಾಗಳಷ್ಟೇ ಅಲ್ಲದೆ ಇತರ ವಿಚಾರ, ಆಚಾರಗಳನ್ನೂ ಬೆನ್ನಿನ ಚೀಲಕ್ಕೆ ಕಟ್ಟಿಕೊಂಡೇ ಬಂದಿದ್ದರು. ಇದು ಒಂದು ದೇಶದ ಸಾಂಸ್ಕೃತಿಕ, ಬೌದ್ಧಿಕ ಪ್ರಕಾರಗಳು ತಮ್ಮ ಗಡಿ ದಾಟಿ ಹೊರಕ್ಕೆ ಪಸರಿಸಲೂ,ಹಲವು ಸ್ಥಿತ್ಯಂತರಗಳಿಗೂ ಕಾರಣ ವಾಗಿತ್ತು.

ಸಿರಿಯಾದಿಂದ ಸ್ವೀಡನ್ ಗೆ 2000 ಮೈಲಿ ನಡೆದುಬಂದ ನಿರಾಶ್ರಿತ. ಮಾಹಿತಿ ಕೃಪೆ: ಬಿಬಿಸಿ

ಹಾಗೆಯೇ ಯಾವತ್ತಿಗೂ ವಲಸೆ ಹೊರಡುವರ ಬೆನ್ನುಗಳ ಮೇಲಿನ ಚೀಲಗಳನ್ನು ನೋಡಿ.. ಕಾಣದ ಭಯ,ತವಕ,ಉಮೇದು, ಉಮ್ಮೀದು,ನನಸಾಗದೇ ಉಳಿದ ಕನಸುಗಳು, ಬಿಟ್ಟು ಬಂದ ಕೆಲಸಗಳು, ಅನಿರ್ದಿಷ್ಟತೆಗಳೂ ತುಂಬಿ ತುಳುಕುತ್ತಿರುತ್ತವೆ. ಒಬ್ಬ ತಂದೆ, ಸಂಜೆ ಮನೆಗೆ ಮರಳಿದಾಗ ತರುವ ಚಿಕ್ಕ ಚೀಲಗಳಲ್ಲೂ ಎಂಥ ಕಾಳಜಿ,ಪ್ರೀತಿಗಳು ತುಂಬಿರುತ್ತವೆ.
ಏನೇ ಇದ್ದರು, ದೊಡ್ಡದೋ, ಚಿಕ್ಕದೋ, ಈ ಬ್ಯಾಗ್ ಗಳೆಲ್ಲ ಇವೆಯಲ್ಲ ಇವೆಲ್ಲ ಒಂದು ಲೈಫ್ ನ ಸಮ್ಮಿಶ್ರ ಕಾಂಪ್ಯಾಕ್ಟ್ ಬ್ಯಾಗೆಜ್ (compact baggage) ಗಳು. ಚಿಕ್ಕ ಟೀ ಬ್ಯಾಗ್ ಒಂದು abstract , ಪ್ರತೀಕ. ಇದು ಚೀಲ ಚೀಲಗಳ ಕಥೆ.

ಟೀ ಬ್ಯಾಗ್ ಮತ್ತು ಕವಿತೆ

ಚಿಕ್ಕ ಚಿಕ್ಕ ಟೀ ಬ್ಯಾಗ್ ಗಳ ಸಂಗ್ರಹದ ಪಕ್ಕವೇ ಎಲ್ಲಿಂದಲೋ ಬಂದ,ಯಾವುದೋ ಭಾಷೆಯ,ದೂರದ ಕವಿಗಳ ಹತ್ತು ಸಾಲುಗಳನ್ನು ಮೀರದ ಚಿಕ್ಕ ಚಿಕ್ಕ ಕವಿತೆಗಳ ಪ್ರದರ್ಶನ.. ಈ ಕವಿತೆಗಳೆಲ್ಲ ಬೇರೆ ಬೇರೆ ಆಯಾಮ, ಸ್ಥಿತಿಗತಿ, ಮನಸ್ಥಿತಿ ಸಂಚಲನಗಳ ಹಿಡಿದಿಟ್ಟ ಚಿಕ್ಕ-ಚಿಕ್ಕ ಚೀಲಗಳು. ಒದ್ದೆಯಾಗಿ ಒಣಗಿದ ಪುಟ್ಟ ಪುಟ್ಟ ಟೀ ಬ್ಯಾಗ್ ಗಳಂತ ಕವಿತೆಗಳು. ಬಗೆ ಬಗೆಯ ಅರೋಮ, ಫ್ಲೇವರ್ ಗಳು.. ! ಟೀ ಬ್ಯಾಗ್ ಗಳ ಚೀಲ ಮತ್ತು ಪುಟ್ಟ ಕವಿತೆಗಳ ಸಂಗ್ರಹ -ಈ ಸಂಬಂಧದ ಕಾನ್ಸೆಪ್ಟ್, ಕಲ್ಪನೆ ವಿಭಿನ್ನ. ಉದಾಹರಣೆಗೆ ಇಲ್ಲಿ ಒಂದು ಕನ್ನಡ ಕವಿತೆ ನೋಡಿ. ಬರೆದವರು ಮಮತಾ ಸಾಗರ.

ಪ್ರದರ್ಶನಗೊಳ್ಳುತ್ತಿರುವ ಕವಿತೆಗಳಲ್ಲಿ ಒಂದು: ಶಬ್ದಗಳು ಯಾತಕ್ಕೆ ಹೀಗೆ? ಕವಯತ್ರಿ ಮಮತಾ ಸಾಗರ

ಬಹುತೇಕ ಭಾರತದ ಎಲ್ಲಾ ಭಾಷೆಗಳ ಕವಿತೆಗಳು ಇಟಲಿಗೆ ಪ್ರಯಾಣಿಸಿವೆ. ಟೀ ಬ್ಯಾಗ್ ಗಳ ಹಾಗೆ.ಎಲ್ಲಾ ನುಡಿ ನಡೆ, ಗಡಿ,ಎಲ್ಲೆಗಳ ಮೀರಿ.ಇನ್ನೊಂದು ಟಿಬೆಟಿಯನ್ ಕವಿತೆ ನೋಡಿ.

ಟಿಬೆಟಿಯನ್ ಕವಿ ಟೆಂಜಿನ್ ಸುಂಡು ವಿರಚಿತ ಕವಿತೆ
ತಮಿಳು ಕವಯಿತ್ರಿ ಸಲ್ಮಾ ಅವರ ಕವಿತೆ

ಹೀಗೆ ಹಲವು ಟೀ ಬ್ಯಾಗ್ ಗಳಿಂದ ಮಾಡಿದ RUCKSACK (ಬೆನ್ನು ಚೀಲ) ಹಾಗೂ ಜಾಗತಿಕ ಚಿಕ್ಕ ಕವಿತೆಗಳ ಕಾವ್ಯ ಸಂಗ್ರಹ ಗಳ ಪ್ರದರ್ಶನ ಇವತ್ತು ಅಂದರೆ ಸಪ್ಟೆಂಬರ್ ೨೬ ರಂದು, ಸಂಜೆ ೬.೪೫ ರಿಂದ ಶುರುವಾಗಲಿದೆ.

ಕ್ಯುರೇಟರ್ಸ: ಅಂಟ್ಯೆ ಸ್ಟೆಹ್ನ್, ಇಟಲಿ ಮತ್ತು ಮಮತಾ ಸಾಗರ, ಭಾರತ

ಈ ಸೃಜನಶೀಲ ಪ್ರದರ್ಶನದ ರೂವಾರಿಗಳು ಇಟಲಿಯ ಕಲಾವಿದೆ, ಕವಯಿತ್ರಿ ಅಂಟ್ಯೆ ಸ್ಟೆಹ್ನ್ ಹಾಗೂ ನಮ್ಮ ಭಾರತೀಯರಾದ ಅದರಲ್ಲೂ ಕನ್ನಡದವರೇ ಆದ ಕವಯಿತ್ರಿ,ಲೇಖಕರಾದ ಮಮತಾ ಸಾಗರ.
ಮಮತಾ ಸಾಗರ ಅವರ ಪರಿಶ್ರಮದಿಂದಾಗಿ ಟಿಬೆಟ್,ಅಸ್ಸಾಂ, ಕಾಶ್ಮೀರಿ,ತಮಿಳುನಾಡು ಸೇರಿದಂತೆ ಅನೇಕ ಭಾರತೀಯ ಭಾಷೆಗಳ ಕವಿತೆಗಳನ್ನು ಕಾವ್ಯ ಸಂಗ್ರಹವಾಗಿ ಜಾಗತಿಕ ಪ್ರದರ್ಶನವಾಗಲಿದೆ ಎನ್ನುವುದು ಅಭಿನಂದನಾರ್ಹ. ಕೈಬರಹದಲ್ಲಿ ಪ್ರಸ್ತುತಪಡಿಸಿದ ಕವಿತೆ, ಮೂಲ ಕವಿತೆಯ ಇಂಗ್ಲಿಷ್ ಅನುವಾದ [ಪಿಡಿಎಫ್ ನಲ್ಲಿ],ಕವಿ ವಾಚಿಸಿದ ಆ ಕವಿತೆಯ ವಿಡಿಯೋ, ಕವಿ ತೆಗೆದ ಟೀ ಬ್ಯಾಗ್ ನ ಸೃಜನಶೀಲ ಛಾಯಾಚಿತ್ರ,ಸೃಜನಾತ್ಮಕ ಪರಿಚಯ ಪತ್ರ, ಕವಿಯ ಭಾವಚಿತ್ರ – ಇವೆಲ್ಲವೂ ಕಾಣಸಿಗಲಿದೆ.

ಡಿಸೆಂಬರ್ ವರೆಗೂ ಇರಲಿರುವ ಪಿಯಾಸೆಂಜಾ ಸಂಗ್ರಹಾಲಯದಲ್ಲಿ ಟೀ ಬ್ಯಾಗ್ ruksack ಹಾಗೂ ಚಿಕ್ಕ ಕವಿತೆಗಳ ಪ್ರದರ್ಶನ ಹಾಗೂ ಕಾರಣೀಭೂತರಾದ, ಸೃಜಿಸಿದವರ (curators) – ಮಮತಾ ಸಾಗರ,ಅಂಟ್ಯೆ ಸ್ಟೆಹ್ನ್ ,ಎಲ್ಲಾ ಕವಿಗಳ ಸೃಷ್ಟಿಶೀಲತೆಗೆ ಹ್ಯಾಟ್ಸ್ ಆಫ್ ಹೇಳುತ್ತಾ, ಈ ನಿರಾಶಾದಾಯಕ ಕಾಲದಲ್ಲೂ ಸೃಜನಶೀಲತೆಯನ್ನು ಜೀವಂತವಾಗಿ ಇರಿಸಿದ್ದಕ್ಕಾಗಿ ಧನ್ಯವಾದ ಹಾಗೂ ಹಾರ್ದಿಕ ಶುಭಾಶಯಗಳು..

https://www.facebook.com/PiccoloMuseodellaPoesia/