ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತುಳು ಸಾಹಿತ್ಯ ಹಾಗೂ ಬಾಸೆಲ್ ಮಿಶನರಿಗಳು

ರೆವರೆಂಡ್ ಎಬ್ನೇಜರ್ ಜತ್ತನ್ನ
ಇತ್ತೀಚಿನ ಬರಹಗಳು: ರೆವರೆಂಡ್ ಎಬ್ನೇಜರ್ ಜತ್ತನ್ನ (ಎಲ್ಲವನ್ನು ಓದಿ)

ತುಳು ಸಾಹಿತ್ಯಕ್ಕೆ ಬಾಸೆಲ್ ಮಿಶನರಿಗಳ ಕೊಡುಗೆ ಅಪಾರವಾದದ್ದು. ಈ ನೆಲದ ಮಣ್ಣಿನ ವಾಸನೆಯ ಫಲವೋ ಅಥವಾ ತುಳುವಿನ ಆಕರ್ಷಣೆಯೋ ಬಾಸೆಲ್ ಮಿಶನರಿಗಳನ್ನು ತನ್ನತ್ತ ಸೆಳೆದು ಸಾಹಿತ್ಯ ಕೃಷಿ ಮಾಡುವಲ್ಲಿ ಹಾಗೂ ಮಹತ್ವದ ಕೊಡುಗೆ ಕೊಡುವಲ್ಲಿ ಮುನ್ನಡೆಸಿತು ಎನ್ನುವುದು ಸತ್ಯಸಂಗತಿ. ತುಳುಭಾಷೆ ಮತ್ತು ಬಾಸೆಲ್ ಮಿಶನರಿಗಳ ಕಿರುಪರಿಚಯವನ್ನು ಪೀಠಿಕೆಯಾಗಿ ಕೊಡುವುದು ಹೆಚ್ಚು ಸೂಕ್ತ. ತುಳು ಭಾಷೆ ಕರ್ನಾಟಕದ ಪಶ್ಚಿಮ ಕರಾವಳಿಯ ಜನರ ಭಾಷೆಯಾಗಿದೆ. ತುಳು ಶಬ್ದದ ಮೂಲದ ಬಗ್ಗೆ ವಿವರಗಳಿದ್ದರೂ ಈ ಪದದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ತುಳು ಶಬ್ದದ ನಿಷ್ಪತ್ತಿಯ ಕುರಿತಾದ ಐತಿಹ್ಯ ಇಂತಿದೆ:-

ತುಳು‘ತೂಳು-ಯುದ್ಧ ಮಾಡು’ ಎಂಬ ಮೂಲದಿಂದ ಬಂದ ಈ ಶಬ್ದ. ತುಳುವರ ಶೌರ್ಯ ಪರಾಕ್ರಮಗಳನ್ನು ಸೂಚಿಸುತ್ತದೆ ಎನ್ನುತ್ತಾರೆ ಕೆಲವರು . ಕರಾವಳಿಯ ಹಲಸಿನ ಕಾಯಿಯ ಸೋಳೆಯಂತೆ ತುಳುವರು ‘ಮೃದು’ ಸ್ವಭಾವದವರಾದುದರಿಂದ ಅವರಿಗೆ ಈ ಹೆಸರು ಬಂತು ಎಂಬ ಅಭಿಪ್ರಾಯವೂ ಇದೆ . ತುರುಗಳನ್ನು ಅಂದರೆ ಜಾನುವಾರುಗಳನ್ನು ಸಾಕುವವರಾದುದರಿಂದ ಈ ಹೆಸರು ಬಂತೆನ್ನುತ್ತಾರೆ. ತುಳು ಎಂಬುವುದು ಜನವಾಚಕ ಪದವಾದುದರಿಂದ ಜಲಾವೃತವಾದ ಈ ಪ್ರದೇಶ ತುಳು ಪ್ರದೇಶವೆಂದು ಪ್ರಸಿದ್ಧಿ ಪಡೆಯಿತು ಎಂದು ಕೆಲವರ ವಾದ. ಪರಶುರಾಮನು ಸಮುದ್ರದಿಂದ ಈ ದೇಶವನ್ನು ಪಡೆದುಕೊಳ್ಳುತ್ತಲೇ ಅದನ್ನು ಪಾಲಿಸುವುದಕ್ಕಾಗಿ ರಾಮ ಭೋಜನೆಂಬ ಅರಸನನ್ನು ನೇಮಿಸಿದನು. ಈ ಅರಸನು ಆಳ್ವಿಕೆ ಮಾಡಿದಂದಿನಿಂದ ಆತನಿಗೆ ತುಲಾಭಾರ, ತುಲಾರಾಜ, ತುಲಾ ದೇಶಾಧಿಪತಿಯೆಂದೂ ಆತನ ದೇಶದಲ್ಲಿದ್ದ ಜನರಿಗೆ ‘ತೌಳವ’ರೆಂದೂ ಹೆಸರಾಯಿತು ಎಂಬುವುದು ತುಳು ಪದದ ನಿಷ್ಪತ್ತಿಗೆ ದೊರಕಿರುವ ಉಲ್ಲೇಖಗಳಾಗಿವೆ.

ನಮ್ಮ ಕರ್ನಾಟಕ ರಾಜ್ಯದವರು ಮಾತ್ರವಲ್ಲದೆ ಬೇರೆ ಬೇರೆ ರಾಜ್ಯದವರು, ವಿದೇಶಿಯರೂ ಕೂಡಾ ತುಳುವಿನ ಬಗ್ಗೆ ಅಭಿಮಾನ ತೋರಿ ಭಾಷೆಯ ಬೆಳವಣಿಗೆಗೆ ಕಾರಣರಾಗಿದ್ದಾರೆ. 19ನೇ ಶತಮಾನದಲ್ಲಿ ಅಂದರೆ 1856 ರಷ್ಟು ಹಿಂದೆಯೇ ದ್ರಾವಿಡ ಭಾಷಾ ವಿಜ್ಞಾನದ ಪಿತಾಮಹನಾದ ರೆವೆ. ಕಾಲ್ಡ್‍ವೆಲ್‍ರು – ತುಳುವು ದ್ರಾವಿಡ ಪರಿವಾರದ ಒಂದು ಸ್ವತಂತ್ರ ಭಾಷೆ ಯೆಂದೂ ಅದು ತಮಿಳಿನಷ್ಟೇ ಪ್ರಾಚೀನ ಭಾಷೆಯೆಂದೂ ಹೇಳಿದ್ದಾರೆ.

ತುಳುವಿಗೆ ಮೊದಲು ಅದರದ್ದೇ ಆದ ಲಿಪಿಯಿದ್ದಿತು. ದಕ್ಷಿಣ ಕನ್ನಡ ಮತ್ತು ಕೇರಳದವರು ಸೇರಿ ಗ್ರಂಥ ಲಿಪಿಯನ್ನು ಪರಿಷ್ಕರಿಸಿ ತುಳು – ಮಲೆಯಾಳಿ ಲಿಪಿಯೆಂದು ಮಾಡಿಕೊಂಡಿದ್ದರು. ಸಂಸ್ಕೃತ ಬರೆಯಲಿಕ್ಕೆ ರೂಪಿಸಿ ಇದನ್ನು ‘ಆರ್ಯ ಲಿಪಿ’ ಎಂದೂ ಹೆಸರಿಸಿದ್ದರು. ಮುಂದಕ್ಕೆ ಅದರ ರೂಪ ಮಲೆಯಾಳಿ ಲಿಪಿಯಾಗಿ ವಿಕಾಸಗೊಂಡು ಮಲೆಯಾಳಿ ಸಾಹಿತ್ಯ ರಚನೆಯಲ್ಲಿ ಬಳಕೆಯಾಯಿತು . ಆದರೆ ತುಳುವಿಗೆ ಸ್ವಂತವಾದ ಲಿಪಿಯಿದೆ. ಆದರೆ ಅದನ್ನು ಇಂದು ಜನಸಾಮಾನ್ಯರು ಬಳಸುತ್ತಿಲ್ಲ. ಆದರೆ ಈಗ ತುಳು ಭಾಷೆಯ ಬಗ್ಗೆ ಹೆಚ್ಚಿನವರು ಒಲವು ತೋರಿರುವುದು ಹಾಗೂ ತುಳು ಲಿಪಿಯನ್ನು ಕಲಿಯುತ್ತಿರುವುದು ಶ್ಲಾಘನೀಯ. 19ನೇ ಶತಮಾನದಲ್ಲಿ ಬಂದ ಬಾಸೆಲ್ ಮಿಶನರಿಗಳು ಕನ್ನಡ ಲಿಪಿಯನ್ನೇ ತುಳುವಿಗೆ ಬಳಸುವ ಸಂಪ್ರದಾಯವನ್ನು ಪ್ರಾರಂಭಿಸಿದರು. ನಂತರದಲ್ಲಿ ತುಳುವನ್ನು ಕನ್ನಡದಲ್ಲೇ ಬರೆಯುವುದು ಸೂಕ್ತವೆಂದು ಎಣಿಸಿ ಕನ್ನಡ ಲಿಪಿಯಲ್ಲೇ ತುಳು ಭಾಷೆಯ ಸಾಹಿತ್ಯ ಮುಂದುವರೆಯಿತು . ಕೆಲವೊಮ್ಮೆ ತುಳುವನ್ನು ಇಂಗ್ಲಿಷ್ ಲಿಪಿಯಲ್ಲಿ ಕೂಡಾ ಬಳಸಲಾಗಿದೆ . ಇಂದು ತುಳು ಸಾಹಿತ್ಯ ಅಕಾಡೆಮಿ, ತುಳುಕೂಟ, ತುಳುಸಾಹಿತ್ಯ ಕಮ್ಮಟಗಳು ತುಳುಭಾಷೆಗಾಗಿ ಶ್ರಮಿಸುತ್ತಿದೆ. ತುಳುವನ್ನು ಶಾಸ್ತ್ರೀಯ ಭಾಷೆಯಾಗಿ ಪರಿಗಣಿಸಬೇಕು ಎಂಬ ಹೋರಾಟಗಳು ಕೇಳಿಬರುತ್ತಿದೆ. ಯಾಕೆಂದರೆ ತುಳು ದ್ರಾವಿಡ ಭಾಷೆಗಳಲ್ಲೊಂದು. ಇದರ ಭಾಷಿಗರು ದೇಶವಿದೇಶಗಳಲ್ಲಿ ಹರಡಿಕೊಂಡಿದ್ದಾರೆ.

ಬಾಸೆಲ್ ಮಿಶನರಿಗಳು ಅಥವಾ ಬಾಸೆಲ್ ಮಿಶನ್ ಈ ಹೆಸರು ಕೆಲವು ತಲೆಮಾರುಗಳ ಹಿಂದೆ ಅವಿಭಜಿತ ದಕ್ಷಿಣಕನ್ನಡದಲ್ಲಿ ಮಾತ್ರವಲ್ಲದೆ ಭಾರತಾದಾದ್ಯಂತ ಜನಜನಿತವಾಗಿದೆ. 1815 ರಲ್ಲಿ ಬಾಸೆಲ್ ಇವ್ಯಾಂಜಲಿಕಲ್ ಮಿಶನರಿ ಸೊಸೈಟಿ ಸ್ವಿರ್ಜರ್‍ಲ್ಯಾಂಡಿನಲ್ಲಿ ಸ್ಥಾಪನೆಯಾಯಿತು. ಅಲ್ಲಿಂದ ಮಿಶನರಿಗಳನ್ನು ಭಾರತಕ್ಕೆ ಕಳುಹಿಸಲಾಯಿತು.

ದಕ್ಷಿಣ ಕನ್ನಡದಲ್ಲಿ ಬಾಸೆಲ್ ಮಿಶನರಿಗಳ ಆಗಮನ

31 ಅಕ್ಟೋಬರ್ 1834 ರಲ್ಲಿ ಮೂವರು ಮಿಶನರಿಗಳು ಭಾರತಕ್ಕೆ ಕಾಲಿರಿಸಿದರು. ಮಿಶನರಿಗಳು ಕೇವಲ ಧರ್ಮ ಪ್ರಚಾರಕ್ಕೆ ಸೀಮಿತವಾಗಿರುವವರು ಎಂಬ ಮನೋಭಾವವನ್ನು ಬಾಸೆಲ್ ಮಿಶನರಿಗಳು ತಳ್ಳಿ ಹಾಕಿದರು. ಅವರು ‘ಮಿಶನರಿ’ ಎಂಬ ಪದವನ್ನೇ ವಿಶಾಲಗೊಳಿಸಿದರು. ಇವರ ನಿಯೋಗ ಕೇವಲ ಧರ್ಮ ಪ್ರಚಾರ ಮಟ್ಟದಲ್ಲಿರದೆ ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಡೆಸುವ ನಿಯೋಗವು ಇವರದಾಯಿತು. Daneil von Allem ನಿಯೋಗದ ಬಗ್ಗೆ ಹೀಗೆ ಹೇಳುತ್ತಾರೆ :-

‘ನಿಯೋಗ’ ಎಂದರೆ ಕೇವಲ ಮಿಶನರಿಗಳನ್ನು ಬೇರೆ ದೇಶಕ್ಕೆ ಕಳುಹಿಸುವುದು ಎಂದರ್ಥವಲ್ಲ; ಬದಲಾಗಿ ಮಿಶನರಿಯು ಒಬ್ಬನ/ಒಬ್ಬಳ ದಿಗಂತವನ್ನು ವಿಶಾಲಗೊಳಿಸಲು ಪ್ರಯತ್ನಿಸುವುದೇ ಆಗಿದೆ . ಈ ರೀತಿಯಾದ ವಿಶಾಲತೆಯನ್ನು ಬಾಸೆಲ್ ಮಿಶನರಿಗಳು ತುಳುವನಾಡಿನಲ್ಲಿ ಕಂಡುಕೊಂಡರು ಮತ್ತು ಆ ನಿಟ್ಟಿನಲ್ಲಿ ಜನರನ್ನು ಮುನ್ನಡೆಸಿದರು.

Daneil von Allem

ಮಿಶನರಿಗಳು ಮಾಡಿದ ಮೊದಲ ಕೆಲಸ ತುಳು ಭಾಷೆಯನ್ನು ಕಲಿತದ್ದು. ಈ ಕಲಿಕೆ ಧಾರ್ಮಿಕ ರಂಗದಲ್ಲಿ ಮಾತ್ರವಲ್ಲದೆ ಭಾಷಾರಂಗದಲ್ಲೂ ಜಾನಪದ ನೆಲೆಯಲ್ಲೂ ತಮ್ಮ ಕಾಣಿಕೆ ಕೊಡಲು ಸಾಧ್ಯವಾಯಿತು. ಮಿಶನರಿಗಳ ತುಳು ಕಾರ್ಯವು ತುಳು ಜಾಗೃತಿಯ ಮೊದಲ ಹಂತವಾಗಿದೆ. ತುಳು ಸಾಹಿತ್ಯ ಕಲ್ಲಚ್ಚಿನ ಮುದ್ರಣದಿಂದ ಮೊಳೆಗಳ ಮುದ್ರಣದವರೆಗೆ ತಲುಪುವಲ್ಲಿನ ಪ್ರತೀ ಹೆಜ್ಜೆಯೂ ಒಂದೊಂದು ಕಥೆಯನ್ನು ಹೇಳುತ್ತದೆ.

ತುಳು ಭಾಷೆಯ ಮೊದಲ ಬೈಬಲ್

ಇವರ ಕೊಡುಗೆ ತುಳು ಸಾಹಿತ್ಯಕ್ಕೆ ಗಟ್ಟಿಯಾದ ಅಡಿಪಾಯ ಒದಗಿಸಿದೆ. ತುಳು ಲಿಖಿತ ಸಾಹಿತ್ಯಕ್ಕೆ ನಾಂದಿ ಹಾಡಿದ ಮಿಶನರಿಗಳು ಅಕ್ಷರಶಃ ತುಳುವರಲ್ಲ. ಯಾವುದೇ ನುಡಿಯ ಸೇವೆ, ಬೆಳವಣಿಗೆಯು ಕೇವಲ ‘ಮಮ’ ಕಾರದಿಂದಲೇ ನಡೆಯಲಾರದು. ವಸ್ತು ನಿಷ್ಠವಾದ ಬಲವುಳ್ಳ ಯಾರಿಂದಲೂ ಚೆನ್ನಾಗಿ ನಡೆಯಬಲ್ಲದು ಎನ್ನುವುದಕ್ಕೆ ತುಳು ಭಾಷಾ ಸಾಹಿತ್ಯದ ವ್ಯವಸಾಯವು ಒಂದು ಉದಾಹರಣೆಯಾಗಿದೆ. ಇವರ ಸಾಹಿತ್ಯ ವ್ಯವಸಾಯದಿಂದಲೇ ಇವರಿಗೆ ‘ತುಳುವರಿವರು’ ಎಂಬ ಪಟ್ಟ ಕೂಡಾ ದೊರಕಿರುತ್ತದೆ.

ಮಂಗಳೂರಿನ ಬಾಸೆಲ್ ಮಿಶನ್ ಬುಕ್ ಶಾಪ್


ಮಿಶನರಿಗಳು ಬರುವ ಮೊದಲೇ ತುಳುವಿನಲ್ಲಿ (ತುಳು ಲಿಪಿಯಲ್ಲಿ) ಶಿಷ್ಟ ಸಾಹಿತ್ಯಗಳು ಇದ್ದವು ಎಂಬುವುದನ್ನು ಅಲ್ಲಗಳೆಯುವಂತಿಲ್ಲ. ಪ್ರಾಚೀನ ಸಾಹಿತ್ಯಗಳಾದ ‘ಶ್ರೀ ಭಾಗವತೋ ಮತ್ತು ಕಾವೇರಿ’ – ಮಹಾ ಕಾವ್ಯ ಹದಿನೇಳನೆಯ ಶತಮಾನದಲ್ಲಿ ರಚಿತವಾದ ಮೇರುಕೃತಿಗಳೆಂದು ಅನೇಕ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಆದರೆ ಲಿಖಿತ ಪರಂಪರೆಯಲ್ಲಿ ಅಂದರೆ ಮುದ್ರಣ ಪರಂಪರೆಯಲ್ಲಿ ಸಾಧನೆಯನ್ನು ತೋರಿದವರು ಮಿಶನರಿಗಳು. ಮಿಶನರಿಗಳು ಬರೆದ ಮೊದಲ ತುಳು ಪುಸ್ತಕವಾದ ‘ಮತ್ತಾಯನ ಸುವರ್ತಮಾನ’ವು ((The Gospel of Matthew -1842)) ತುಳು ಸಾಹಿತ್ಯ ಪ್ರಪಂಚಕ್ಕೆ ಬರೆದ ಮುನ್ನುಡಿ ಎ0ದು ಹೇಳಬಹುದಾಗಿದೆ. ಈ ದಿಸೆಯಲ್ಲಿ ಯೋಚಿಸುವುದಾದರೆ ಮಿಶನರಿಗಳ ಸಾಹಿತ್ಯದ ನಡಿಗೆ ಅಭಿವೃದ್ಧಿ ಪಥದೆಡೆಗೆ ನಡೆಯಿತು. ಈ ಅಭಿವೃದ್ಧಿ ಮುಂದಿನ ಸಾಹಿತ್ಯ ರಚನೆಗೆ ಪ್ರೇರಣೆ ನೀಡಿತು ಎಂಬುವುದು ಸರ್ವವಿಧಿತ.

ಮಿಶನರಿಗಳ ಸಾಹಿತ್ಯ ಕೊಡುಗೆಯು ಭಾಷಾ ದೃಷ್ಟಿಕೋನದಿ0ದ ಸಾಮರಸ್ಯದ ಬೆಸುಗೆಯನ್ನು ಮೂಡಿಸಿತು. ಮಿಶನರಿಗಳ ತುಳು ಸಾಹಿತ್ಯವೆಲ್ಲವೂ ಸ್ವರಚಿತವಾದ ಪುಸ್ತಕಗಳಲ್ಲ. ಕೆಲವು ಭಾಷಾಂತರವಾದ ಪ್ರಕಟಣೆಗಳಾಗಿವೆ. ಆದುದರಿಂದ ಇಲ್ಲಿ ಭಾಷೆ – ಭಾಷೆಯ ನಡುವೆ ಸಾಮರಸ್ಯ ಮೂಡಿದೆ. ಹಲವಾರು ಭಾಷೆಗಳಾದ – ಹಿಬ್ರೂ, ಗ್ರೀಕ್, ಜರ್ಮನ್, ಲ್ಯಾಟಿನ್, ರೋಮನ್, ಇಂಗ್ಲಿಷ್, ಕನ್ನಡ ಇವೆಲ್ಲವೂ ತುಳು ಸಾಹಿತ್ಯದಲ್ಲಿ ಹಾಸುಹೊಕ್ಕಾಗಿದೆ. ಅದು ವಿವಿಧ ರೀತಿಯಿಂದ ಇರಬಹುದು. ಉದಾ : ಗ್ರೀಕ್-ಹಿಬ್ರೂ ಬೈಬಲ್ ಭಾಷಾಂತರದಲ್ಲಿ, ಲ್ಯಾಟಿನ್-ಇಂಗ್ಲಿಷ್ ನಿಘಂಟು ರಚನೆಯಲ್ಲಿ ಹೀಗೆ ಇನ್ನೂ ಅನೇಕ ಸಂದರ್ಭಗಳಲ್ಲಿ ತುಳು ಭಾಷೆಯು ಇತರ ಭಾಷೆಗಳೊ0ದಿಗೆ ‘ಸೋದರಿ’ ಸಂಬಂಧವನ್ನು ಬೆಳೆಸಿಕೊಂಡಿದೆ. ಈ ಸಂಬಂಧವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಮಿಶನರಿಗಳು ಬೆಳೆಸಿದರು. ಇಲ್ಲಿ ಭಾಷೆ – ಭಾಷೆಗಳ ನಡುವೆ ಸಂವಾದ ನಡೆದಿದೆ. ವಾಕರಣ, ನಿಘಂಟು ಭಾಷೆಗೆ ಸಂಬಂಧಿಸಿ ಹೊಸ ಪದಪುಂಜಗಳು ರಚನೆಯಾದವು. ಹೀಗೆ ತುಳುವನ್ನು ಇನ್ನೊಂದು ಭಾಷೆಯಿಂದ ಅರ್ಥವಿಸಲ್ಪಡುವ ವ್ಯಾಕರಣ ನಿಘಂಟು ಬರೆಯಲ್ಪಟ್ಟಿತು. ಹೀಗೆ ತುಳುಸಾಹಿತ್ಯಕ್ಕೆ ಬಾಸೆಲ್ ಮಿಶನರಿಗಳು ಕೈಗಂಬವಾದರು ಎಂದರೆ ಅತಿಶಯೋಕ್ತಿಯಾಗಲಾರದು. ತುಳುವಿಗೆ ಬಾಸೆಲ್ ಮಿಸನರಿಗಳ ಕೊಡುಗೆ ಬಗೆಗಿನ ಈ ಲೇಖನ ಅವರನ್ನು ವೈಭವೀಕರಿಸುವದಕ್ಕಲ್ಲ ಬದಲಾಗಿ ಅವರು ಈ ಮಣ್ಣಿನಲ್ಲಿ ಮಾಡಿದ ಕೃಷಿಯನ್ನು ತಿಳಿಯುವಲ್ಲಿ ಮುನ್ನುಡಿ ಹಾಗೂ ನಾವೂ ಕೂಡಾ ನಮ್ಮ ಭಾಷೆ ಹಾಗೂ ಸಾಹಿತ್ಯಕ್ಕೆ ಕೊಡುಗೆ ನೀಡಲು ಸಹಾಯವಾಗಲಿ ಎಂಬುದೇ ಮೂಲ ಆಶಯವಾಗಿದೆ.



ಲೇಖಕರು: ರೆವರೆಂಡ್ ಎಬ್ನೇಜರ್ ಜತ್ತನ್ನ
ebnezarj@gmail.com

ಯು. ಪಿ ಉಪಧ್ಯಾಯ, ತುಳು ಭಾಷೆ, ಸಾಹಿತ್ಯ ಸ0ಸ್ಕೃತಿ, ತುಳುವ ತ್ರೈಮಾಸಿಕ 1/2 (ಅಕ್ಟೋಬರ್ – ಡಿಸೆ0ಬರ್, 2005),3
2ಯು. ಪಿ ಉಪಧ್ಯಾಯ, ತುಳು ಭಾಷೆ, ಸಾಹಿತ್ಯ ಸ0ಸ್ಕೃತಿ, ತುಳುವ ತ್ರೈಮಾಸಿಕ 1/2 (ಅಕ್ಟೋಬರ್ – ಡಿಸೆ0ಬರ್, 2005),3
3ಹೆರೆ0ಜ್ ಕೃಷ್ಣ ಭಟ್ಟ, ಮುರಳೀಧರ ಉಪಾಧ್ಯ ಹಿರಿಯಡಕ, ಸ0. ಗೋವಿ0ದ ಪೈ ಸ0ಶೋಧನಾ ಸ0ಪುಟ (ಉಡುಪಿ : ರಾಷ್ಟ್ರಕವಿ ಗೋವಿ0ದ ಪೈ ಸ0ಶೋಧನ ಕೇ0ದ್ರ, 1995), 588
4ಯು. ಪಿ ಉಪಧ್ಯಾಯ, ತುಳು ನಿಘಂಟು; ಭಾಷೆ, ಸ0ಸ್ಕೃತಿಯ ಆಕರ ಗ್ರಂಥ, ತುಳುವ ಪ್ರಜಾವಾಣಿ 23 ಎಪ್ರಿಲ್ 1995, 5
5ಯು. ಪಿ ಉಪಧ್ಯಾಯ, ತುಳು ನಿಘಂಟು; ಭಾಷೆ, ಸ0ಸ್ಕೃತಿಯ ಆಕರ ಗ್ರಂಥ, ತುಳುವ ಪ್ರಜಾವಾಣಿ 23 ಎಪ್ರಿಲ್ 1995, 5
64ನೇ ಅಧ್ಯಾಯದಲ್ಲಿ ತುಳು ಲಿಪಿಯ ಬಗ್ಗೆ ವಿಮರ್ಶೆ ಮಾಡಲಾಗಿದೆ.
7A.C. Burnell The Devil Worship of the Tuluvas (The Indian Antiquary : Journal of Oriental Reserch Vo.XXXIII 1894)

8.ಯು. ಪಿ ಉಪಧ್ಯಾಯ, ತುಳು ನಿಘಂಟು; ಭಾಷೆ, ಸಂಸ್ಕೃತಿಯ ಆಕರ ಗ್ರಂಥ, ತುಳುವ ಪ್ರಜಾವಾಣಿ 23 ಎಪ್ರಿಲ್ 1995, 5
99Godwin shiri, ed., Wholeness in Christ (Mangalore: The Karnataka Theological Research Institute Balmatta, 1985),Message
10ಪಾದೇಕಲ್ಲು ವಿಷ್ಣು ಭಟ್ಟ ಸ0. ತುಳುವರಿವರು (ಉಡುಪಿ : ರಾಷ್ಟ್ರ ಕವಿ ಗೋವಿ0ದ ಪೈ ಸ0ಶೋಧನ ಕೇ0ದ್ರ 1997), ಪ್ರಸ್ತಾವನೆಯಲ್ಲಿ
11ಹೊಸಬೆಟ್ಟು ಸೀತಾರಾಮಚಾರ್ಯ, ‘ಸ್ವಾತ0ತ್ರ್ಯ ಪೂರ್ವದ ತುಳು ಸೃಜನ ಸಾಹಿತ್ಯ/ – ಸ್ವಾತ0ತ್ರ್ಯ ಪೂರ್ವ ತುಳು ಸಾಹಿತ್ಯ ಕು. ಶಿ. ಹರಿದಾಸ ಭಟ್ಟ ಸ0. (ಉಡುಪಿ : ರಾಷ್ಟ್ರ ಕವಿ ಗೋವಿ0ದ ಪೈ ಸ0ಶೋಧನಾ ಕೇ0ದ್ರ 1982), 2
 ತುಳುವರಿವರು ಪುಸ್ತಕದಲ್ಲಿ ಬಾಸೆಲ್ ಮಿಶನರಿಗಳು ಚಿತ್ರಿಸಲ್ಪಟ್ಟ ಆಧಾರದಲ್ಲಿ.
12 ಯು. ಪಿ. ಉಪಾಧ್ಯಾಯ ‘ತುಳು ನಿಘ0ಟು’ ಸ0ಪುm – 1 (ಉಡುಪಿ : ರಾಷ್ಟ್ರ ಕವಿ ಗೋವಿ0ದ ಪೈ ಸ0ಶೋಧನ ಕೇ0ದ್ರ, 1988),1.