ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತೆಲುಗಿನ ನವ್ಯ ಕವಿತೆಯ ಹರಿಕಾರ ದೇವರಕೊಂಡ ಬಾಲಗಂಗಾಧರ ತಿಲಕ್

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಬಾಲಗಂಗಾಧರ ತಿಲಕ್ (1921-1966)

ಈ ವರ್ಷ ತನ್ನ ಜೀವನದ ಶತಮಾನೋತ್ಸವವನ್ನು ಆಚರಿಸಿಕೊಂಡ ತೆಲುಗು ಭಾಷೆಯ ಮಹಾನ್ ಅಭ್ಯುದಯ ಕವಿ ಶ್ರೀ ದೇವರಕೊಂಡ ಬಾಲಗಂಗಾಧರ ತಿಲಕ್. ಕನ್ನಡದಲ್ಲಿ ನವ್ಯ ಕಾವ್ಯ ಉದಯಿಸಿದ ಸಮಯದಲ್ಲೇ ತೆಲುಗಿನಲ್ಲೂ ಇದರ ಸಮಾಂತರ ರೂಪವಾದ ಅಭ್ಯುದಯ ಕಾವ್ಯ ಹುಟ್ಟುಕೊಂಡಿತು. ಅದರ ಹರಿಕಾರರು ಮೂರು ಕವಿಗಳೆಂದು ತೆಲುಗು ಸಾಹಿತ್ಯ ಗುರುತಿಸಿಕೊಂಡಿದೆ. ಅದರಲ್ಲಿ ತಿಲಕ್ ರವರೂ ಒಬ್ಬರು. ಅಲ್ಲಿಯ ವರೆಗೆ ಛಂದೋಬದ್ಧವಾದ ಗ್ರಾಂಧಿಕ ಶೈಲಿಯಲ್ಲಿಯ ಪದ್ಯ ರಚನೆಯೇ ಮನ್ನಣೆ ಹೊಂದಿದ್ದ ಕಾಲಘಟ್ಟದಲ್ಲಿ ತಿಲಕ್ ಅವರು ತಮ್ಮ ವಚನ ಕವಿತಾ ಪ್ರಕ್ರಿಯೆಯಿಂದ ಭಿನ್ನ ಹಾದಿ ತುಳಿದರು.ಪ್ರಸಿದ್ಧರೂ ಆದರು.

ಅವರ ಕವನ ಸಂಕಲನ “ಅಮೃತಂ ಕುರಿಸಿನ ರಾತ್ರಿ” ಒಂದು ಅದ್ಭುತ ಕವಿತೆಗಳ ಸರಮಾಲೆಯಾಗಿತ್ತು. ಆ ಸಂಕಲನದಲ್ಲಿ ಅವರು ಮಿಡಿದ ಅನೇಕ ಭಾವನೆಗಳ ಪ್ರತಿಫಲನಗಳು ಕಂಡಿದ್ದವು. ಎಲ್ಲರೂ ಮಲಗಿದಾಗ ಒಬ್ಬನೇ ಹೋಗಿ ಬೆಳದಿಂಗಳ ಮೈದಾನದಲ್ಲಿ ಸುರಿದ ಅಮೃತದ ಸೋನೆಯಲ್ಲಿ ನೆನೆದು ಬೊಗಸೆಗಳಲ್ಲಿ ಕುಡಿದು ತಿರುಗಿ ಬಂದವನ ಅನುಭವವನ್ನು ರಮ್ಯವಾಗಿ ವರ್ಣಿಸಿದ್ದಾರೆ ಶೀರ್ಷಿಕೆಯ ಕವನದಲ್ಲಿ. ಅವರ ಕವಿತೆಗಳಲ್ಲಿ ನವಿರಾದ ಒಲವು, ವಿರಹ,ಯುದ್ಧದ ಉನ್ಮಾದ, ನೊಂದವರ ಬಗ್ಗೆ ಅನುಕಂಪ, ದೇಶದ ಬಗ್ಗೆ ಅಭಿಮಾನ, ಮಾನವತೆಗೆ ಮಿಡಿಯುವ ಮನಸ್ಸು ಎಲ್ಲಾ ಮುಖಗಳು ಕಾಣುತ್ತವೆ. ತನ್ನನ್ನು ತಾನು ಅನುಭೂತಿವಾದಿ ಎಂದು ಗುರುತಿಸಿಕೊಂಡದ್ದು ಸಾರ್ಥಕವೆನಿಸುವಷ್ಟು ಅನೇಕ ಪಾರ್ಶ್ವಗಳ ಅನುಭವ ಸಂಪತ್ತು ಅವರ ಕಾವ್ಯಗರ್ಭದಲ್ಲಿ ಕಂಡು ಬರುತ್ತದೆ. ಅವರ ಈ ಕೃತಿಗೆ ರಾಜ್ಯದ ಮತ್ತು ಕೇಂದ್ರ ಸಾಹಿತ್ಯ ಅಕೆಡೆಮಿಗಳ ಪ್ರಶಸ್ತಿ ಸಿಕ್ಕಿದೆ.
ಈ ತರದ ನವ್ಯ ಕಾವ್ಯದ ಹರಿಕಾರರೇ ಅಲ್ಲದೆ ತಿಲಕ್ ಅವರು ಕಥೆಗಳನ್ನು ಸಹ ತಮ್ಮದೇ ಆದ ಅನುಭೂತಿ ವಾದದ ನೆರಳಿನಲ್ಲೇ ಬರೆದಿದ್ದಾರೆ. ಒಬ್ಬ ಸಾಹಿತಿಯ ಪ್ರಕಾರ “ ತಿಲಕ್ ಅವರು ಬರೆದ ಕಥೆಗಳನ್ನು ಮತ್ಯಾರೂ ಬರೆಯಲಾರರು ಅನಿಸುತ್ತೆ, ಅಷ್ಟೇಕೆ ಅವರೇ ಮತ್ತೊಮ್ಮೆ ಬರೆಯಲಾರರು ಅನಿಸುತ್ತೆ” ಎಂದಿದ್ದಾರೆ. “ ನಲ್ಲಜರ್ಲ ರೋಡ್ಡು, ದೇವುಣ್ಣಿ ಚೂಸಿನ ವಾಡು, ಊರಿ ಚಿವರಿ ಇಲ್ಲು, ದೊಂಗ” ಮುಂತಾದವುಗಳು ಮೈಲುಗಲ್ಲುಗಳಾಗಿ ನಿಂತಿವೆ. ಅವುಗಳಲ್ಲಿಯ ಕ್ಲಿಷ್ಟತೆ ಅವುಗಳಲ್ಲಿಯ ಕಥಾಶಿಲ್ಪದಲ್ಲಿಯೇ ಕಾಣುತ್ತದೆ.

ತೆಲುಗಿನ ಮತ್ತೊಬ್ಬ ಮಹಾನ್ ಕವಿಯಾದ ಶ್ರೀ ಶ್ರೀ ಅವರು ತಿಲಕರ ಬಗ್ಗೆ ಹೇಳುತ್ತಾ ” ತನ್ನ ವಯಸ್ಸು ಅರ್ಧವಾದರೂ ಸವೆಯುವುದಕ್ಕೆ ಮುಂಚೆಯೇ ನಭಕ್ಕೆ ಸೇರಿದ ಪ್ರಜಾ ಕವಿ, ಪ್ರಭಾರವಿ” ಅಂದಿದ್ದರು. ಅಭ್ಯುದಯ ಭಾವಗಳಿಗೆ ಕಡು ರಮ್ಯವಾದ ಶೈಲಿಯನ್ನು ಒದಗಿಸುವುದರಲ್ಲಿ ತಿಲಕ್ ಅವರು ವಿಜಯಿಯಾಗಿದ್ದರು. ಅವರದೆಷ್ಟು ಅಭ್ಯುದಯದ ಮಾತು ಮಾತನಾಡಿದರೂ ತನ್ನಲ್ಲೇ ತಾನೊಂದು ಏಕಾಂತ ಸೌಂದರ್ಯವನ್ನು ರಚಿಸಿಕೊಂಡ ಸ್ವಾಪ್ನಿಕ ಅಂತ ಅವರ ಬಗ್ಗೆ ಪ್ರಶಂಸೆ ಇದೆ. ಮಾರ್ಕ್ಸ್, ಬುದ್ಧ, ಶಂಕರ ಎಲ್ಲರನ್ನೂ ಒಪ್ಪಿದ ತಿಲಕ್ ರಲ್ಲಿ ಸಮನ್ವಯ ದೃಷ್ಟಿಕೋನವಿದೆ., ವಿಶ್ವತತ್ವವಿದೆ. ಮನುಷ್ಯನ ಮೌಲ್ಯಗಳ ಮೇಲೆ ಒಂದು ತಾತ್ತ್ವಿಕ ದೃಷ್ಟಿ ಕಾಣುತ್ತದೆ. ಪ್ರೀತಿ, ಕರುಣೆ ಮೊದಲಾದ ಮಾನವೀಯ ಗುಣಗಳ ಬಗ್ಗೆ ವಿಶ್ವಾಸವಿದೆ. ಜನ್ಮ ಕೊಟ್ಟ ದೇಶವನ್ನು, ಸಂಸ್ಸ್ಕೃತಿಯನ್ನು ಕಳಿದುಕೊಳ್ಳಲಾರದ ದುಗುಡವಿದೆ. ಎಲ್ಲ ತರದ ಭಾವಜಾಲಗಳ ಅತಿರೇಕಗಳ ಬಗ್ಗೆ, ಮಾನಸಿಕ ಜಾಡ್ಯಗಳ ಬಗ್ಗೆ ತಿರಸ್ಕಾರವಿದೆ.

ಅಲ್ಪಾಯುಷಿಯಾದ ಅವರು ತಮ್ಮ 44 ನೆಯ ವಯಸ್ಸಿನಲ್ಲಿ, ತಮ್ಮ ಕೃತಿ ಪ್ರಶಸ್ತಿಗಳನ್ನು ಕಾಣುವುದಕ್ಕೆ ಮುಂಚೆಯೇ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಶಾರೀರಿಕವಾಗಿ ಮತ್ತು ಮಾನಸಿಕವಾಗಿಯೂ ರೂಪಸಿ, ಸ್ನೇಹಶೀಲಿ, ಕವಿ, ರಸಜ್ಞರು ಅದ ತಿಲಕ್ ಅವರ ಅಕಾಲ ಮರಣ ತೆಲುಗು ಕಾವ್ಯಕ್ಕೆ ಒಂದು ತೀರಲಾಗದ ನಷ್ಟ ಎನ್ನಬಹುದು ಇಂದಿಗೂ ತೆಲುಗು ಭಾಷೆಯ ಯಾವ ವಾದಕ್ಕೂ ಸೇರದ ಕವಿಯಾಗಲಿ ಎಷ್ಟೋ ಒಂದಿಷ್ಟು ಅಂತರ್ಮುಖನಾಗುತ್ತಿದ್ದಾನೆ ಮತ್ತು ತನ್ನ ಭಾವನೆಗಳನ್ನು ನಿರ್ಭಯವಾಗಿ ಹೊರಗೆ ಹೇಳಬಲ್ಲವನಾಗಿದ್ದಾನೆಂದರೆ ಅದು ತಿಲಕ್ ಅವರು ಅಂದು ತಮ್ಮ ಕಾವ್ಯದ ಮೂಲಕ ಕೊಟ್ಟ ಧೈರ್ಯ ಎನ್ನಬಹುದು. ಎಲ್ಲರಿಗೂ ತಲುಪ ಬಹುದಾದ ಕಾವ್ಯಕ್ಕೆ ತಾನು ಪ್ರಾತಿನಿಧ್ಯ ವಹಿಸುತ್ತಲೇ ಬೇರೇ ಬೇರೇ ಭಾವಧಾರೆಗಳಿಗೆ, ಮಾನವಾನುಭಾವಗಳಿಗೆ, ಸಿದ್ಧಾಂತಗಳಿಗೆ ತನ್ನ ಕಾವ್ಯದಲ್ಲಿ ಸ್ಥಾನ ಕೊಡುವುದರ ಮೂಲಕ ಬಹುಳತ್ವದ ಕವಿ ಎನಿಸಿದ ಮಹಾನ್ ಕವಿ ಶ್ರೀ ದೇವರಕೊಂಡ ಬಾಲಗಂಗಾಧರ ತಿಲಕ್.
ಇವರಿಗೆ ಪ್ರಶಸ್ತಿ ತಂದುಕೊಟ್ಟ ಕೃತಿ “ಅಮೃತಂ ಕುರಿಸಿನ ರಾತ್ರಿ” ಕವನ ಸಂಕಲನದ ಕೆಲ ಆಯ್ದ ಕವನಗಳನ್ನು ಕನ್ನಡಕ್ಕೆ ತಂದ ಅನುವಾದ ಕೃತಿ ” ಸುಧೆ ಸುರಿದ ರಾತ್ರಿ” ಇದೀಗ ಲೋಕಾರ್ಪಣೆಗೊಂಡು ಲಭ್ಯವಿದೆ. ಆಸಕ್ತಿಯಿರುವ ಓದುಗರು ತರಿಸಿಕೊಳ್ಳಬಹುದು.