ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

————-“————-

ನಿಜಾ಼ರ್ ಖಬ್ಬಾನಿ ಸಿರಿಯನ್ ಕವಿ, ಪ್ರಕಾಶಕ, ರಾಜತಾಂತ್ರಿಕ, ಅತ್ಯಂತ ಮಹತ್ವದ ಅರಬ್ ಕವಿಗಳಲ್ಲಿ ಒಬ್ಬರು. ಅವರು ಆಧುನಿಕ ಅರೇಬಿಕ್ ಕಾವ್ಯದ ಸ್ಥಾಪಕರಲ್ಲಿ ಒಬ್ಬರು. ಖ​ಬ್ಬಾನಿಯ ಕವಿತೆಗಳನ್ನು ಹೆಚ್ಚಾಗಿ ಸರಳ ಭಾಷೆಯಲ್ಲಿ ಬರೆಯಲಾಗಿದೆ, ಇದು ಸಮಕಾಲೀನ ಕವಿಯಾದ ಸಿರಿಯಾಕ್ ಮಾತನಾಡುವ ಭಾಷೆಯ ನೈಜತೆಯನ್ನು ಪ್ರತಿಬಿಂಬಿಸುತ್ತದೆ. ಕಬ್ಬಾನಿ ೩೫ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ನಿಜಾ಼ರ್ ಖಬ್ಬಾನಿ

ನಿಜಾ಼ರ್ ಖಬ್ಬಾನಿಯವರ ‘Between Us‘ ಕವಿತೆಯನ್ನು ಡಾ. ಗೋವಿಂದ ಹೆಗಡೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.

————-“————-

ನಮ್ಮ ನಡುವೆ ಇವೆ ಇಪ್ಪತ್ತು ವರ್ಷಗಳು
ನಿನ್ನ ಮತ್ತು ನನ್ನ ತುಟಿಗಳ ನಡುವೆ
ಅವು ಪರಸ್ಪರ ಬೆಸೆದು ನಿಂತಾಗ
ಆ ವರ್ಷಗಳು ಮುರಿದು ಬೀಳುತ್ತವೆ
ಒಂದು ಇಡೀ ಬದುಕೆಂಬ ಗಾಜು ಪುಡಿಪುಡಿ

ನಾನು ನಿನ್ನ ಸಂಧಿಸಿದ ದಿನ ನನ್ನೆಲ್ಲ
ನಕಾಶೆಗಳ ಹರಿದೆಸೆದೆ, ನನ್ನೆಲ್ಲ ದೈವಿಕ ಸಂದೇಶಗಳನ್ನು ಕೂಡ.
ಅರಬ್ಬಿ ಕುದುರೆಯಂತೆ ನಾನು
ನೀನೆಂಬ ಮಳೆಯನ್ನು ಮೂಸಿದೆ
ಅದು ನನ್ನನ್ನು ನೆನೆಸುವ ಮೊದಲು
ನಿನ್ನ ಸ್ವರದ ಶ್ರುತಿಯನ್ನು ಕೇಳಿದೆ
ನೀನು ಉಸುರುವ ಮೊದಲೇ
ನನ್ನ ಕೈಗಳಿಂದ ನಿನ್ನ ಕುರುಳನ್ನು
ಕೆದರಿದೆ ನೀನು ಬಾಚುವ ಮೊದಲು

ನಾನೂ ಏನನ್ನೂ ಮಾಡಲಾರೆ
ನೀನೂ ಏನನ್ನೂ ಮಾಡುವಂತಿಲ್ಲ
ಗಾಯವೊಂದು ಏನು ಮಾಡೀತು
ಚೂರಿ ಅದರತ್ತಲೇ ಬರುತ್ತಿರುವಾಗ

ಹಡಗುಗಳು ಮುಳುಗುತ್ತಿರುವ
ಮಳೆಯ ರಾತ್ರಿಯಂತೆ ನಿನ್ನ ಕಣ್ಣುಗಳು
ನಾನು ಬರೆದಿದ್ದೆಲ್ಲ ಮರೆತುಹೋಗಿದೆ
ಕನ್ನಡಿಯಲ್ಲಿ ನೆನಪುಗಳು ಇರುವುದಿಲ್ಲ

ದೇವರೇ! ಹೇಗೆ ನಾವು ಪ್ರೇಮಕ್ಕೆ ಶರಣಾಗುತ್ತೇವೆ
ನಮ್ಮ ಪಟ್ಟಣದ ಕೀಲಿಕೈ ಒಪ್ಪಿಸುತ್ತ
ಮೇಣದ ಬತ್ತಿಯನ್ನು ಅಗರುಬತ್ತಿಗಳನ್ನು ಒಯ್ಯುತ್ತ
ಕ್ಷಮಿಸಿ ಬಿಡು ಎಂದು ಅದರ ಕಾಲಿಗೆ ಬೀಳುತ್ತ
ಅದಕ್ಕಾಗಿ ನಾವೇಕೆ ಅರಸುತ್ತೇವೆ
ಸಹಿಸುತ್ತಾ
ಅದು ನಮಗೆ ಮಾಡಿದ ಎಲ್ಲವನ್ನು
ಅದು ನಮಗೆ ಮಾಡಿದ ಎಲ್ಲವನ್ನು

ಮಳೆಯಲ್ಲಿ
ಬೆಳ್ಳಿ ಬಟ್ಟಲಿನಲ್ಲಿ ಎರೆದ ಮದಿರೆಯಂಥ
ದನಿಯ ಹೆಣ್ಣು
ನಿನ್ನ ಮೊಣಕಾಲಿನ ಕನ್ನಡಿಯಲ್ಲಿ
ದಿನ ಪಯಣವನ್ನು ಆರಂಭಿಸುತ್ತದೆ
ಬದುಕು ಕಡಲಿಗೆ ಇಳಿಯುತ್ತದೆ

ನನಗೆ ಗೊತ್ತಿದೆ- “ನಿನ್ನ ಪ್ರೀತಿಸುವೆ”
ಎಂದಾಗ ನಾನು
ಹೊಸ ಅಕ್ಷರ ಒಂದನ್ನು ಅನ್ವೇಷಿಸುತ್ತಿದ್ದೆ
ಓದಲು ಅರಿಯದವರ ನಗರದಲ್ಲಿ
ನಾನು ಕವಿತೆಗಳನ್ನು ಹೇಳುತ್ತಿದ್ದೆ
ಖಾಲಿ ರಂಗಮಂದಿರದಲ್ಲಿ
ಮತ್ತು ನನ್ನ ಮಧುವನ್ನು ಎರೆಯುತ್ತಿದ್ದೆ
ಅದರ ಸವಿಯನ್ನು ಅರಿಯದವರಿಗೆ

ದೇವರು ನನಗೆ ನಿನ್ನನ್ನು ಕೊಟ್ಟಾಗ
ನನ್ನ ದಾರಿಯಲ್ಲಿ ಎಲ್ಲವನ್ನು ತುಂಬಿದ,
ಹೇಳದೆ ಉಳಿದ ಅವನ ಎಲ್ಲ ಪವಿತ್ರ ಗ್ರಂಥಗಳನ್ನು ಕೂಡ

ಯಾರು ನೀನು
ನನ್ನ ಬದುಕನ್ನು ಕಿರುಗತ್ತಿಯಂತೆ
ಹೊಗುತ್ತಿರುವ ಹೆಣ್ಣು
ಮೊಲದ ಕಣ್ಣುಗಳಂತೆ ಮೃದು
ಪ್ಲಮ್‌ನ ಸಿಪ್ಪೆಯಂತೆ ಮಿದು
ಮಲ್ಲಿಗೆಯ ಮಾಲೆಯಂತೆ ಶುದ್ಧ
ಮಕ್ಕಳ ಬಿಬ್‌ನಂತೆ ಮುಗ್ಧ
ಮತ್ತು ಶಬ್ದಗಳಂತೆ ಮುಕ್ಕುವವಳು?

ನಿನ್ನ ಪ್ರೀತಿ ನನ್ನನ್ನು ವಿಸ್ಮಯದ ಲೋಕದಲ್ಲಿ ಬೀಳಿಸಿತು
ಅದು ಎಲಿವೇಟರ್ ಅನ್ನು ಹೊಕ್ಕ ಹೆಣ್ಣಿನ ಸುಗಂಧದಂತೆ ಆಕ್ರಮಿಸಿತು
ನನ್ನನ್ನು ಕಾಫಿ ಬಾರಿನಲ್ಲಿ ಅಚ್ಚರಿಗೊಳಿಸಿತು
ಕವಿತೆಯೊಂದರ ಮೇಲೆ ಕೂತು
ನಾನು ಕವಿತೆಯನ್ನು ಮರೆತುಬಿಟ್ಟೆ
ಅದು ನನ್ನ ಅಂಗೈಯ ರೇಖೆಗಳನ್ನು
ಓದುತ್ತ ಅಚ್ಚರಿ ಪಡಿಸಿತು
ನಾನು ನನ್ನ ಅಂಗೈಯನ್ನು ಮರೆತೆ
ಅದು ಕುರುಡ ಕಿವುಡ ಕಾಡುಕೋಳಿಯಂತೆ
ನನ್ನ ಮೇಲೆ ಬಿತ್ತು
ತನ್ನ ಪುಕ್ಕಗಳನ್ನು ನನ್ನದರಲ್ಲಿ ಹೆಣೆಯುತ್ತ
ಅದರ ಕೇಕೆಗಳು ನನ್ನದರಲ್ಲಿ ಸೇರಿದವು

ಅದು ನನ್ನ ಅಚ್ಚರಿಗೊಳಿಸಿತು
ದಿನಗಳ ರೈಲಿಗಾಗಿ ಸೂಟ್‌ಕೇಸಿನ ಮೇಲೆ
ಕೂತು ಕಾಯುವಾಗ
ನಾನು ದಿನಗಳ ಮರೆತೆ
ನಿನ್ನೊಂದಿಗೆ ಪಯಣಿಸಿದೆ ನಾನು
ಅಚ್ಚರಿಯ ಲೋಕಕ್ಕೆ

ನಿನ್ನ ಚಿತ್ರವನ್ನು ಎರಕಹೊಯ್ದಾಗಿದೆ
ನನ್ನ ಕೈಗಡಿಯಾರದ ಮೇಲೆ
ಅದರ ಎರಡೂ ಮುಳ್ಳುಗಳ ಮೇಲೆ
ಅದು ಎರಕವಾಗಿದೆ ವಾರ ತಿಂಗಳು
ವರ್ಷಗಳ ಮೇಲೆ
ನನ್ನ ವೇಳೆ ನನ್ನದಾಗಿ ಉಳಿದಿಲ್ಲ
ಅದು ನೀನು