ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾ ಕಂಡಂತೆ ಕಸ್ತೂರ್ ಬಾ: ಭಾಗ-೨

ಎಚ್ಚಾರೆಲ್
ಭಾಗ ೨ ಈ ಅಂಕಣದಲ್ಲಿ

ನಾ ಕಂಡಂತೆ ಕಸ್ತೂರ್ ಬಾ: ಭಾಗ-೨

ಪುಟ 10, 5

೧೯೩೧ ರಲ್ಲಿ ನಾನು ಆಶ್ರಮಕ್ಕೆ ಬೇಸಿಗೆ ರಜೆಯಲ್ಲಿ ಬಂದಿದ್ದೆ. ಗಾಂಧೀಜಿ ಆಗ ಬಹುಶಃ ಜೈಲುವಾಸದಲ್ಲಿದ್ದರು ಅನ್ನಿಸುತ್ತದೆ. ಸ್ವಲ್ಪ ಸಮಯದ ನಂತರ ಅವರು ಸಾಬರ್ಮತಿ ಆಶ್ರಮಕ್ಕೆ ಬಂದರು. ಆಶ್ರಮದಲ್ಲಿ ಹೆಚ್ಚುದಿನ ಇರಲಿಲ್ಲ. ದಾಂಡಿ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಗಾಂಧೀಜಿಯವರು ತಮ್ಮ ಸಹಯೋಗಿಗಳ ಜತೆ ಸೇರಿ ಸ್ವಾತಂತ್ರ್ಯಗಳಿಸುವವರೆವಿಗೂ ಆಶ್ರಮಕ್ಕೆ ಕಾಲಿಡುವುದಿಲ್ಲವೆಂದು ಶಪಥಮಾಡಿದ್ದರು. ಅವರು ಹತ್ತಿರದಲ್ಲಿಯೇ ಒಂದು ಮೈಲಿ ದೂರದಲ್ಲಿದ್ದ ಗುಜರಾತ್ ವಿದ್ಯಾಪೀಠದಲ್ಲಿ ತಂಗಿದ್ದರು. ದಿನವೂ ಬೆಳಿಗ್ಯೆ ಸಾಯಂಕಾಲ ಕೆಲವು ನಿಮಿಷ ಆಶ್ರಮಕ್ಕೆ ಬಂದು ಹೋಗುತ್ತಿದ್ದರು. ಪತ್ನಿಯಾಗಿ ಕಸ್ತೂರ್ ಬಾರವರೂ ಸಬರಮತಿ ಆಶ್ರಮಕ್ಕೆ ಬಂದರೂ, ಗಾಂಧೀಜಿಯ ಜತೆ ಇರಲು ಸಾಧ್ಯವಾಗುತ್ತಿರಲಿಲ್ಲ.

ಹೆಣ್ಣು ಮಕ್ಕಳು ವಿದ್ಯಾಪೀಠದಲ್ಲಿ ರಾತ್ರಿ ಹೊತ್ತು ಉಳಿಯಲು ಅವಕಾಶವಿರಲಿಲ್ಲ. ನಮ್ಮಂತೆ ಬಾ ಸಹಿತ ದಿನದಲ್ಲಿ ಪತಿಯ ಹತ್ತಿರ ಬಂದು ಸ್ವಲ್ಪಹೊತ್ತು ಮಾತಾಡಿ ಹೋಗುತ್ತಿದ್ದರು. ಮೂರುನಾಲ್ಕು ದಿನಗಳ ನಂತರ ಬಾಪು ವೈಸ್ರಾಯ್ ರನ್ನು ಕಾಣಲು ಶಿಮ್ಲಾಕ್ಕೆ ಹೋಗಬೇಕಾಗಿ ಬಂತು. ಬಾ ಅವರ ಜತೆ ಹೋಗಲು ಸಾಧ್ಯವಾಗಲಿಲ್ಲ. ಶಿಮ್ಲಾದಿಂದ ಒಂದು ವಿಶೇಷ ರೈಲಿನಲ್ಲಿ ಗಾಂಧೀಜಿಯವರಿಗೆ ಬಾಂಬೆಗೆ ಹೋಗಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ‘ಸ್ಟೀಮರ್’ ನಲ್ಲಿ ಲಂಡನ್ ಗೆ ೨ ನೆಯ ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿತ್ತು’. ಬಾಗೆ ಗಾಂಧೀಜಿಯವರ ಜತೆಗೆ ಹೋಗುವ ಪ್ರಮೇಯ ಬರಲಿಲ್ಲ. ಬಾಪುರವರನ್ನು ಮತ್ತು ನಮ್ಮ ಅಣ್ಣನನ್ನು ಇಂಗ್ಲೆಂಡ್ ಗೆ ಕಳಿಸಿಕೊಡಲು ವಿದಾಯ ಹೇಳಲು, ನಾನು ಬೊಂಬಾಯಿಗೆ ಹೋದೆ.

ಕಸ್ತೂರ್ಬಾ ಪತಿಯನ್ನು ಬೀಳ್ಗೊಡಲು ಬೊಂಬಾಯಿಗೆ ಹೋಗಲೂ ಇಷ್ಟಪಡಲಿಲ್ಲ. ಅನೇಕ ವರ್ಷಗಳಿಂದ ಮಾತೃಭೂಮಿಗೆ ತಮ್ಮನ್ನು ಸಮರ್ಪಿಸಿಕೊಂಡು ಸೇವೆಮಾಡುತ್ತಿದ್ದರು. ಭಾರತ ವರ್ಷದ ೪೦೦ ಮಿಲಿಯನ್ ದೇಶಭಕ್ತರು ಬಾಪುರವರ ಮೇಲಿಟ್ಟಿದ್ದ ಅಪಾರ ನಂಬಿಕೆ, ಪ್ರೀತಿಯನ್ನು ಸಾಕಾರಗೊಳಿಸುವ ಮಾರ್ಗದಲ್ಲಿ ಕಸ್ತೂರ್ ಬಾ ಮುಂಚೂಣಿಯಲ್ಲಿದ್ದರು. ಈ ತರಹದ ಅಗಲಿಕೆ ಮೊದಮೊದಲು ಬಹಳ ಕಷ್ಟಕರವಾಗಿದ್ದರೂ, ವರ್ಷಗಳು ಉರುಳಿದಂತೆ ನೈಜತೆ ಅವರಿಗೆ ಅರಿವಾಗತೊಡಗಿತ್ತು. ಪತಿಯ ಜತೆಗೆ ಕೇವಲ ಅವರ ಆದರ್ಶಗಳನ್ನು ನಿಜಗೊಳಿಸುವ ವ್ಯಕ್ತಿಗಳಿಗೆ ಮಾತ್ರ ಮುಡಿಪಾಗಿಟ್ಟಿರುವಂತಹ ಜಾಗದಲ್ಲಿ, ಬೇರೆಯವರಿಗೆ ಅದು ಅಸಾಧ್ಯ.

೧೯೩೨ ರಲ್ಲಿ ಲಂಡನ್ ನಿಂದ ‘Round Table Conference’ ಮುಗಿದು ವಾಪಸ್ ಬಂದಮೇಲೆ, ಗಾಂಧಿಯವರನ್ನು ಪುನಃ ಬಂಧಿಸಿ, ಕಾರಾಗೃಹದಲ್ಲಿ ಇಡಲಾಯಿತು. ನನ್ನ ತಾಯಿಯೂ ಗಾಂಧಿಯವರ ಸಹಿತ ಮಗ ಪ್ಯಾರೇಲಾಲ್ ಮೊದಲಾದವರನ್ನು ಸ್ವಾಗತಿಸಲು ಬೊಂಬಾಯಿಗೆ ಬಂದಿದ್ದರು.

ಬಾಂಬೆಯಲ್ಲಿ ಒಂದೆರಡು ದಿನವಿದ್ದು ಗಾಂಧೀಜಿಯವರಿಗೆ ತಮ್ಮ ವಂದನೆಗಳನ್ನು ತಿಳಿಸಿ, ಅವರ ಅಪ್ಪಣೆ ಪಡೆದು ಊರಿಗೆ ವಾಪಾಸ್ ಹೋಗುವ ಇಚ್ಛೆ ಅವರದು. ಆದರೆ ಬಾಪು, ‘ನೀವು ನಮ್ಮನ್ನು ಸ್ವಾಗತಿಸಲು ಬಂದಿರಿ. ಈಗ ನಮಗೆ ಜೈಲಿಗೆ ಹೋಗಲು ವಿಶ್ ಮಾಡಿ, ನಮ್ಮ ಜತೆಗೇ ಇರಿ. ಸಾಧ್ಯವಾದರೆ ಜೈಲುವಾಸದ ಅನುಭವವನ್ನೂ ಗಳಿಸಬೇಕಾಗುತ್ತದೆ’. ಎಂದು ಹೇಳಿದಾಗ, ನಮ್ಮ ತಾಯಿಯವರಿಗೆ ಅವರ ಮಾತನ್ನು ತೆಗೆದುಹಾಕುವ ಧರ್ಯವಿರಲಿಲ್ಲ. ತಮ್ಮ ಸೂಟ್ ಕೇಸ್ ನಿಂದ ಸಾಮಾನುಗಳನ್ನೆಲ್ಲ ಹೊರಗೆ ತೆಗೆದಿಟ್ಟರು. ಸತ್ಯಾಗ್ರಹದಲ್ಲಿ ಭಾಗವಹಿಸಿ, ತಾವು ಜೈಲುವಾಸ ಅನುಭವಿಸಿದರು. ಕೆಲ ಕಾಲ ಬಾರವರು ಇದ್ದ ಜೈಲಿನಲ್ಲೇ ಅವರೂ ಇದ್ದರು. ಬಾರವರ ಬಗ್ಗೆ ಅಮ್ಮನಿಗೆ ಒಳ್ಳೆಯ ಅಭಿಪ್ರಾಯವಿತ್ತು. ಬಾರವರಿಗೆ ಜೈಲಿಗೆ ಹೋದಾಗ ಮುಖದಲ್ಲಿ ಎಳ್ಳಷ್ಟೂ ಬೇಸರ ಕಾಣಿಸುತ್ತಿರಲಿಲ್ಲ.

ಪುಟ 11

ಕಸ್ತೂರ್ ಬಾಗೆ ಅನೇಕಸಲ ಜೈಲುವಾಸದ ಅನುಭವಿಸಿ, ಇವೆಲ್ಲಾ ಸಾಮಾನ್ಯವೆನ್ನುವಂತೆ ಭಾವಿಸುತ್ತಿದ್ದರು. ಜೈಲಿನಲ್ಲಿ ಪ್ರತಿದಿನವೂ ಅದೇ ತರಹದ ಜನರ ಭೇಟಿ ಅವರ ಆತಂಕದ ಮುಖಗಳನ್ನು ದಿನ, ವಾರ, ತಿಂಗಳುಗಳ ಕಾಲ ನೋಡಬೇಕಾದ ಅನಿವಾರ್ಯತೆ ಅವರಿಗೆ ಬೇಸರವನ್ನೇನೂ ಕೊಡಲಿಲ್ಲ. ಜೈಲಿನಲ್ಲಿದ್ದಷ್ಟು ದಿನ ಹೊರ ಪ್ರಪಂಚದ ದರ್ಶನವಿಲ್ಲದೆ, ಬಾ ಅನೇಕ ಬಾರಿ ಉಪವಾಸಗಳನ್ನು ಅನುಭವಿಸಿ ಗಟ್ಟಿ ಮನಸ್ಸಿನವರಾಗಿದ್ದರು. ಜೈಲಿನಲ್ಲಿ ಅವರು ತಮ್ಮ ಜತೆಯಲ್ಲಿದ್ದರೆ ಬೇರೆ ಕೈದಿಗಳಿಗೆ ಒಂದು ವಿಧದ ನೆಮ್ಮದಿ ಇರುತ್ತಿತ್ತು, ಎಂದು ಅಮ್ಮ ಜ್ಞಾಪಿಸಿಕೊಳ್ಳುತ್ತಾರೆ.

6

೧೯೩೫ ನೇ ಇಸವಿಯ ನನ್ನ ಕಾಲೇಜಿನ ಬೇಸಿಗೆ ರಜದಲ್ಲಿ ನಾನು ವಾರ್ಧಾಕ್ಕೆ ಬಂದು ಬಾಪೂರವರ ಜತೆ ‘ಮಗನ್ ಲಾಲ್ ವಾಡಿ’ಯಲ್ಲಿ ಎರಡು ವಾರವಿದ್ದೆ. ಬಾ ದಿನವಿಡೀ ಆಶ್ರಮದ ಎಲ್ಲ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಕಾಯಿಲೆಬಿದ್ದವರನ್ನು ಉಪಚರಿಸುವುದು, ಕೆಲಸಗಾರರ ಮನೆಯ ಕಷ್ಟದ ವಿಷಯಗಳ ಪರಿಹಾರ, ಅವರ ವೈಯಕ್ತಿಕ ತೊಡಕುಗಳ ಸುಧಾರಣೆ, ಇವುಗಳ ಮಧ್ಯೆ ವಯಸ್ಸಾದ ಪತಿಯನ್ನೂ ನೋಡಿಕೊಳ್ಳುವುದು ಇತ್ಯಾದಿಗಳನ್ನು ಎಳ್ಳಷ್ಟೂ ಬೇಸರವಿಲ್ಲದೆ ನಿಭಾಯಿಸಿಕೊಂಡು ಹೋಗುತ್ತಿದ್ದರು.

ಅದೇ ವರ್ಷದಲ್ಲಿ ನವೆಂಬರ್ ತಿಂಗಳಿನಲ್ಲಿ ಮತ್ತೆ ವಾರ್ಧಾಕ್ಕೆ ಹೋಗಬೇಕಾಯಿತು. ಆಗ ಬಾರವರ ಕಿರಿಯ ಮಗ ದೇವದಾಸ್ ಗಾಂಧಿ, ನರ-ದೌರ್ಬಲ್ಯದಿಂದ ನರಳುತ್ತಿದ್ದರು. ಬಾರವರು, ಅವರನ್ನು ತಾಯಿಯಾಗಿ ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದರು.

೧೯೩೬ ರ ಬೇಸಿಗೆ ಕಾಲದಲ್ಲಿ ಕಸ್ತೂರ್ಬಾ ಮಗನನ್ನು ಕರೆದುಕೊಂಡು ಶಿಮ್ಲಾಕ್ಕೆ ಹೋದರು. ಬಾಪು, ನನ್ನ ಅಣ್ಣ ಪ್ಯಾರೇಲಾಲ್ ರನ್ನೂ ಜೊತೆಮಾಡಿ ಕಳಿಸಿದರು. ದೇವದಾಸ್ ಗಾಂಧಿ ಮತ್ತು ಪ್ಯಾರೇಲಾಲ್ ಬಹಳ ಅನ್ನೋನ್ಯವಾಗಿದ್ದರು. ಅವರನ್ನು ಎಲ್ಲರೂ ಅವಳಿ-ಜವಳಿಗಳೆಂದು ಕರೆಯುತ್ತಿದ್ದರು. ಇಬ್ಬರನ್ನು ಬಾ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅಣ್ಣನ ಪ್ರಕಾರ ಡಾಕ್ಟರ್ ರವರ ಔಷಧಕ್ಕಿಂತ ಪ್ರೀತಿಯ ತಾಯಿಯ ಆದರ, ವಿಶ್ವಾಸಗಳು ಅವರ ಆರೋಗ್ಯ ವರ್ಧನೆಯಲ್ಲಿ ದೊಡ್ಡ ಪರಿಣಾಮ ಮಾಡಿದವೆಂದು. ಬಾ ಮಗನನ್ನು ಅಪಾಯದಿಂದ ಉಳಿಸಿಕೊಂಡರು. ದೇವದಾಸ್ ಗಾಂಧಿ ಅರೋಗ್ಯ ಉತ್ತಮಗೊಂಡು ಶಿಮ್ಲಾದಿಂದ ವಾಪಸ್ಸಾಗಿ ತಮ್ಮ ತಂದೆಯ ಬಳಿಗೆ ಬಂದು ಸೇರಿದರು.

7

ಡಿಸೆಂಬರ್ ೧೯೩೭ ರಲ್ಲಿ ಗಾಂಧೀಜಿಯವರು ಕಲ್ಕತ್ತದಲ್ಲಿದ್ದಾಗ ಕಾಯಿಲೆ ಬಿದ್ದರು. ಡಾ ಬಿ. ಸಿ. ರಾಯ್, ಗಾಂಧೀಜಿಯವರು ಅಹ್ಮದಾಬಾದಿಗೆ ವಪಾಸ್ ಹೋಗುವಾಗ, ಒಬ್ಬ ಡಾಕ್ಟರ್ ಜೊತೆಯಲ್ಲಿರುವುದು ಅತ್ಯಾವಶ್ಯಕವೆಂದು ಅಭಿಪ್ರಾಯಪಟ್ಟರು. ಆಗ, ಕಲ್ಕತ್ತಾದ ‘All-India Institute of Hygiene & Public Health’, ನಲ್ಲಿ ಓದುತ್ತಿದ್ದ ನಾನು, ಬಾಪೂರವರ ಯೋಗಕ್ಷೇಮವನ್ನು ನೋಡಿಕೊಳ್ಳಲು ಒಂದು ತಿಂಗಳಿಗಾಗಿ ರಜಪಡೆದು ಹೊರಟುಬಂದೆ. ಇದಾದ ನಂತರ, ಹಲವಾರು ಹೊಸ ಹೊಸ ಬೆಳವಣಿಗೆಗಳಿಂದಾಗಿ, ನಾನು ಸುಮಾರು ೨ ವರ್ಷಗಳಕಾಲ ಗಾಂಧೀಜಿಯವರ ಪರಿವಾರದ ಜತೆ ಇರಬೇಕಾಗಿ ಬಂತು. ಸೇವಾಗ್ರಾಮಕ್ಕೆ ಹೋದಾಗ, ಬಾ ತಮ್ಮ ಪತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.

ಪುಟ 12

ಆಶ್ರಮದಲ್ಲಿ ಕಸ್ತೂರ್ಬಾ ರವರಿಗಾಗಿಯೇ ನಿರ್ಮಿಸಿದ ಒಂದು ಪ್ರತ್ಯೇಕ ಚಿಕ್ಕ ಕೊಠಡಿಯಿತ್ತು. ಬಚ್ಚಲು ಮನೆ, ವರಾಂಡವೂ ಅದಕ್ಕೆ ಸೇರಿತ್ತು. ನನ್ನ ಲಗೇಜ್ ನಾನು ಅಲ್ಲಿಯೇ ಇಟ್ಟು ರಾತ್ರಿ ಬಾ ರವರ ಜತೆಯಲ್ಲಿ ಮಲಗಿದ್ದೆ. ಮೊದಲ ಬಾರಿಗೆ ವರಾಂಡದಲ್ಲಿ ಮಲಗಿದ್ದ ನಾನು, ಬೆಳಿಗ್ಯೆ ಎದ್ದವಳು ನನ್ನ ಹಾಸಿಗೆಯನ್ನು ಹಾಗೆಯೇ ಬಿಟ್ಟು, ಹೊರಗೆ ನಡೆದೆ. ಬಾ ಅದನ್ನು ಕಂಡು, ಒಂದು ಮಾತೂ ಆಡದೆ, ಹಾಸಿಗೆಯನ್ನು ಅಚ್ಚುಕಟ್ಟಾಗಿ ಸುತ್ತಿ ಒಳಗೆ ತೆಗೆದುಕೊಂಡು ಹೋಗಿ ಇಟ್ಟರು. ಇದು ನನಗೆ ಗೊತ್ತಾದಾಗ ಬಹಳ ಬೇಸರವಾಯಿತು. ನಾಚಿಕೆಯೂ ಆಯಿತು. ಮತ್ತೆ ಆ ತರಹದ ಮುಜುಗರದ ಸನ್ನಿವೇಶಗಳು ನಡೆಯಲು ನಾನು ಅವಕಾಶ ಕೊಡಲಿಲ್ಲ. ಅವರ ಹಾಸಿಗೆಯನ್ನೂ ಮಡಿಸಿ ಸುತ್ತಿಡಲು ನಾನು ಪ್ರಯತ್ನಿಸಿದೆ. ಆದರೆ ಬಾ ಎಲ್ಲರಿಗಿಂತ ಮೊದಲೇ ಅವರ ಕೆಲಸಗಳನ್ನು ಅವರೇ ಮಾಡಿ ಮುಗಿಸುತ್ತಿದ್ದರು. ಅವರ ಹಾಸಿಗೆಯನ್ನು ಮಡಿಸಲು ನಾನು ಹೋದರೆ, ನನ್ನ ಹಾಸಿಗೆಯನ್ನೂ ಅವರೇ ಮಡಿಸಿಡಲು ಮಂದಾಗುತ್ತಿದ್ದರು. ತಮಗೆ ಸಾಧ್ಯವಾಗುವಾಗ, ಬೇರೆಯಾರಿಂದಲೂ ಸೇವೆಯನ್ನು ಅವರು ನಿರೀಕ್ಷಿಸುತ್ತಿರಲಿಲ್ಲ. ಅವರ ಸ್ವಚ್ಛತೆ ಮತ್ತು ಅಚ್ಚುಕಟ್ಟುತನ ಬಹಳ ಮೇಲ್ಮಟ್ಟದ್ದಾಗಿತ್ತು.

ಆಶ್ರಮವಾಸಿಗಳು ಯಾರಾದರೂ ಹೇಗಂದರೆ ಹಾಗೆ ಎಸೆದ ಹಾಸಿಗೆ, ಮಗ್ಗಲು ಹಾಸಿಗೆ ಮತ್ತಿತರ ವಸ್ತುಗಳನ್ನು ಅವರು ತಾವೇ ನಿಂತು, ಸರಿಪಡಿಸುತ್ತಿದ್ದನ್ನು ನಾನು ನೋಡಿದ್ದೆ. ಭಾರವಾದ ಹಾಸಿಗೆಗಳನ್ನೂ ತಾವೇ ಕಷ್ಟಪಟ್ಟು ಎತ್ತಿ ಅವುಗಳ ಕೆಳಗೆ ಬೆಡ್ ಶೀಟ್ಸ್ ಅವ್ಯವಸ್ಥಿತವಾಗಿದ್ದರೆ, ಸರಿಪಡಿಸುವುದರಲ್ಲಿ ಆಸಕ್ತಿವಹಿಸುತ್ತಿದ್ದರು. ಅಣ್ಣ ಹೇಳಿದ್ದು ಇವತ್ತಿಗೂ ನೆನಪಿದೆ. ಆಶ್ರಮಕ್ಕೆ ಸೇರಿದಕೂಡಲೇ ಅವನು ಅಡುಗೆಮನೆ ಕೆಲಸದ ಸಹಾಯಕ್ಕೆ ನಿಯುಕ್ತನಾದನಂತೆ. ಬಾ ಒಬ್ಬ ಶಿಸ್ತಿನ ಸಿಪಾಯಿ. ಕೆಲಸ ಹೊಸದು. ಮೊದಮೊದಲು ಸ್ವಲ್ಪ ಕಷ್ಟಗಳನ್ನು ಎದುರಿಸಬೇಕಾಯಿತು. ಯಾರಿಗೂ ರಿಯಾಯಿತಿ ತೋರಿಸುತ್ತಿರಲಿಲ್ಲ. ಕೊಳೆ, ಮತ್ತು ಅವ್ಯವಸ್ಥೆ ಅವರಿಗೆ ಹಿಡಿಸುತ್ತಿರಲಿಲ್ಲ. ಹಾಗೆಯೇ ಜ್ಞಾಪಕಶಕ್ತಿ ಮತ್ತು ಸಮಯಪ್ರಜ್ಞೆಗೆ ಬಹಳ ಆದ್ಯತೆ. ಮುಂದೆ ಆಗಾಖಾನ್ ಪ್ಯಾಲೇಸ್ ಬಂದೀ ಗೃಹದಲ್ಲಿದ್ದಾಗ, ಒಂದು ದಿನ ಯಾವುದೋ ಒಂದು ಸಾಮಾನನ್ನು ಪೆಟ್ಟಿಗೆಯಿಂದ ತೆಗೆದುಕೊಡಲು ಕೇಳಿದರು. ಪೆಟ್ಟಿಗೆಗೆ ಎರಡು ಲ್ಯಾಚ್ ಗಳಿದ್ದವು. ಅದರಲ್ಲಿ ಒಂದು ಸ್ವಲ್ಪ ಹಾಳಾಗಿತ್ತು. ಅದನ್ನು ಜೋರಾಗಿ ಎಳೆದು ಮುಚ್ಚಲು ಸ್ವಲ್ಪ ಬಲ ಉಪಯೋಗಮಾಡಬೇಕಾಗಿತ್ತು. ನಾನು ಅವರಿಗೆ ಬೇಕಾದ ವಸ್ತುವನ್ನು ಪೆಟ್ಟಿಗೆಯಿಂದ ಹೊರಗೆ ತೆಗೆದುಕೊಟ್ಟು ಸರಿಯಾಗಿ ಕೆಲಸಮಾಡುತ್ತಿದ್ದ ಲ್ಯಾಚನ್ನು ಮಾತ್ರ ಮುಚ್ಚಿದೆ. ಇನ್ನೊಂದು ಲ್ಯಾಚನ್ನು ಹಾಗೆಯೇ ಬಿಟ್ಟಿದ್ದು ನನ್ನ ಗಮನಕ್ಕೆ ಬರಲಿಲ್ಲ. ಸ್ವಲ್ಪ ದಿನಗಳ ನಂತರ ಬಾರವರಿಗೆ ಅದೇ ಪೆಟ್ಟಿಗೆಯಿಂದ ಮತ್ತೆ ಕೆಲವು ವಸ್ತುಗಳು ಬೇಕಾಯಿತು. ಬಾ ಗೆ ಮೈಸರಿಯಿರಲಿಲ್ಲ. ‘ಆ ಪೆಟ್ಟಿಗೆ ಇಲ್ಲಿ ತೊಗೊಂಡ್ಬಾರಮ್ಮ’ ಎಂದರು. ಆಮೇಲೆ ಅವರು ಆದರ ಮುಚ್ಚಳವನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾಗ, ‘ಬೇಡ ಬಾ ನಾನು ಮಾಡ್ತೇನೆ ‘ಎಂದು ನಾನು ಹೇಳಿದಾಗ, ‘ಒಂದ್ ಲ್ಯಾಚ್ ನ್ನು ಹಾಕಲು ನೀನು ಮರೆಯಲ್ಲ ಆಲ್ವಾ’ ? ಎಂದು ಕಣ್ಣು ಮಿಟುಕಿಸಿ ಹೇಳಿದಾಗ, ನನ್ನ ತಪ್ಪಿನ ಅರಿವಾಗತೊಡಗಿತು.

8

ಬಾ ಬೆಳಿಗಿನ ೪ ಗಂಟೆಯ ಪ್ರೇಯರ್ ಹೊತ್ತಿಗೆ ತಪ್ಪದೆ ಏಳುತ್ತಿದ್ದರು. ಆ ದಿನಗಳಲ್ಲಿ ಪ್ರೇಯರ್ ನಂತರ ಬಾಪು ಸುಮಾರು ಒಂದು ಗಂಟೆಯ ತನಕ ಮಲಗಿರುತ್ತಿದ್ದರು. ಅಷ್ಟು ಹೊತ್ತಿಗೆ ಬಾ ತಿಂಡಿ ಸಿದ್ಧಪಡಿಸಿರುತ್ತಿದ್ದರು. ಆಗ ಆಶ್ರಮದ ಹುಡುಗಿಯರು ಬಾಪೂರವರಿಗೆ ಸೇವೆ ಸಲ್ಲಿಸಲು, ನಾನು ಮುಂದೆ ತಾನು ಮುಂದೆ ಎಂದು ಪೈಪೋಟಿ ಮಾಡುತ್ತಿದ್ದರು. ಬಾ ಎಲ್ಲ ಸೇವೆಯನ್ನೂ ತಾವೇ ಮಾಡಲು ಸಿದ್ಧರಿದ್ದರೂ, ಹುಡುಗಿಯರ ಮನಸ್ಸನ್ನು ನೋಯಿಸುವುದು ಅವರಿಗೆ ಸರಿಹೋಗುತ್ತಿರಲಿಲ್ಲ.

ಪುಟ 13

ಕಸ್ತೂರ್ ಬಾ ಪ್ರತಿಯೊಬ್ಬ ವಿಶ್ವಾಸನೀಯ ನಿಷ್ಠಾವಂತ ವ್ಯಕ್ತಿಗೂ ಪ್ರತ್ಯೇಕ ಕೆಲಸಗಳನ್ನು ವಹಿಸಿ ಕೊಡುತ್ತಿದ್ದರು. ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿಗಳು ಕೊಟ್ಟ ಕೆಲಸಗಳನ್ನು ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಮಾಡುವುದನ್ನು ದೂರದಿಂದ ನೋಡಿ, ಖಾತ್ರಿಮಾಡಿಕೊಳ್ಳುತ್ತಿದ್ದರು. ಮುಖ್ಯವಾಗಿ ಶುಚಿತ್ವದ ನಿಯಮಗಳನ್ನು ಸರಿಯಾಗಿ ಪಾಲಿಸುವುದು ಅವರ ಮುಖ್ಯ ಆದ್ಯತೆಗಳಲ್ಲೊಂದಾಗಿತ್ತು. ಗಾಂಧೀಜಿಯವರಿಗೆ ತಿಂಡಿಯನ್ನು ಸಿದ್ಧಪಡಿಸಿದ ಬಳಿಕ ಅವರ ರೂಮಿಗೆ ಒಬ್ಬ ಹುಡುಗಿಗೆ ತೆಗೆದುಕೊಂಡು ಹೋಗಿ ಕೊಡಲು ವ್ಯವಸ್ಥೆ ಮಾಡಿದ್ದರು. ಬಾಪೂಜೀವರು ತಿಂಡಿ ತಿನ್ನುತ್ತಿರುವಾಗ ಅವರನ್ನು ನೋಡುತ್ತಿದ್ದರು. ಇದಾದ ಮೇಲೆ ಹುಡುಗಿಯರು ತಮಗೆ ವಹಿಸಿದ್ದ ಕೆಲಸಗಳನ್ನು ಸರಿಯಾಗಿ ಮಾಡಿದ್ದಾರೆಯೇ ಇಲ್ಲವೇ, ಎಂದು ಉಸ್ತುವಾರಿ ಮಾಡುತ್ತಿದ್ದರು. ಉದಾಹರಣೆಗೆ ತಟ್ಟೆಗಳನ್ನು ಶುಚಿಯಾಗಿ ತೊಳೆದರೇ, ಇತ್ಯಾದಿ. ನಾನು ಕೆಲವು ಸಲ, ಬಾ ಹುಡುಗಿಯರು ತೊಳೆದ ತಟ್ಟೆಗಳನ್ನು ಮತ್ತೊಮ್ಮೆ ತಾವೇ ತೊಳೆದು, ಮರು-ಶುಚಿಗೊಳಿಸಿದ್ದನ್ನು ಕಂಡಿದ್ದೇನೆ. ಬಾರವರಿಗೆ ಪಾತ್ರೆಗಳು ತೊಳೆದಮೇಲೆ ಮಿಂಚುತ್ತಿರಬೇಕು.

ಬಾ ತಮ್ಮ ಸ್ನಾನ ಮುಗಿಸಿದ್ದಾರೆ. ಗಾಂಧೀಜಿಯವರು ಬೆಳಗಿನ ವಾಕ್ ಮುಗಿಸಿ ಬಂದಮೇಲೆ ಅವರು ರಾಮಾಯಣ ಇಲ್ಲವೇ ಭಗವದ್ಗೀತೆಯನ್ನು ಸುಮಾರು ಒಂದೂವರೆ ಗಂಟೆ ಪಾರಾಯಣ ಮಾಡುತ್ತಿದ್ದರು. ಪತಿಗೆ ಮಧ್ಯಾನ್ಹದ ಊಟದ ತಯಾರಿಗೆ ಅಡುಗೆಮನೆಗೆ ಹೋಗಿ ಮೇಲ್ವಿಚಾರಣೆ ನಡೆಸುತ್ತಿದ್ದದ್ದಲ್ಲದೆ ಅಡುಗೆ ಸಿದ್ಧವಾಗಿದೆಯೇ, ಎಂದು ಅವಲೋಕಿಸುತ್ತಿದ್ದರು. ಎಲ್ಲರ ಜತೇ ಕೂತು ಗಾಂಧೀಜಿ ಊಟಮಾಡುತ್ತಿದ್ದರು. ಬಾ ತಾವೇ ತಮ್ಮ ಪತಿಗೆ ಮತ್ತು ಅವರನ್ನು ನೋಡಲು ಬಂದ ಅತಿಥಿಗಳಿಗೆ ಉಣ ಬಡಿಸುತ್ತಿದ್ದರು. ನಂತರ ಅವರು ಟೇಬಲ್ ನ ವಿರುದ್ಧ ದಿಕ್ಕಿನಲ್ಲಿ ಕುಳಿತು ಊಟಮಾಡುತ್ತಿದ್ದರು. ಆದರೆ ಅವರ ಕಣ್ಣೆಲ್ಲ ತಮ್ಮ ಪತಿಯ ಊಟದ ತಟ್ಟೆಯಮೇಲೇ ಇರುತ್ತಿತ್ತು. ಸರಿಯಾಗಿ ಊಟಮಾಡುತ್ತಿದ್ದಾರೆಯೇ ಇಲ್ಲವೇ ಎಂದು ಯಾವಾಗಲೂ ಆತಂಕಕ್ಕೆ ಒಳಗಾಗುತ್ತಿದ್ದರು. ಸದಾ ಅವರ ಕೈಲಿ ಒಂದು ಬೀಸಣಿಗೆ ಇದ್ದೇ ಇರುತ್ತಿತ್ತು. ಅದರಿಂದ ಅವರು ತಮ್ಮ ಪತಿ ಮತ್ತು ಬಂದ ಅತಿಥಿಗಳಿಗೆ ಗಾಳಿ ಬೀಸುತ್ತಿದ್ದರು. ಊಟಕ್ಕಾಗಿ ಸುಮಾರು ಒಂದು ಗಂಟೆ ತಗುಲುತ್ತಿತ್ತು. ಊಟದನಂತರ ಬಾಪು ಜತೆಗೆ ಅವರ ಕುಟೀರಕ್ಕೆ ಹೋಗಿ ಅವರು ಮಲಗಿದಮೇಲೆ ಕೈಕಾಲುಗಳಿಗೆ ಮಸಾಜ್ ಮಾಡುತ್ತಿದ್ದರು. ಅವರಿಗೆ ಕಣ್ಣು ಹತ್ತಿದಮೇಲೆ ತಮ್ಮ ರೂಮಿಗೆ ಬಂದು ಆಯಾಸ ತಣಿಸಿಕೊಳ್ಳುತ್ತಿದ್ದರು. ಬಾರವರು ಮದ್ಯಾನ್ಹ ಮಲಗಿ ಎದ್ದಮೇಲೆ, ಪ್ರತಿದಿನವೂ ಚರಖಾದಲ್ಲಿ ೪೦೦-೫೦೦ round ನೂಲನ್ನು ನೂಲುತ್ತಿದ್ದರು. (1 round ಅಂದರೆ ೪ ಅಡಿ) ಅನೇಕ ಸಲ ನಾನು, “ಬಾ ನಿಮ್ಮ ಆರೋಗ್ಯವೇ ಸರಿಯಿಲ್ಲ ; ನೀವು ಮದ್ಯಾನ್ಹದ ಹೊತ್ತಿನಲ್ಲಿ ಹೆಚ್ಚು ಆರಾಮ್ ಮಾಡಬೇಕು. ” ಅಷ್ಟೊಂದು ದಾರವನ್ನು ನೀವೇ ಯಾಕೆ ನೂಲಬೇಕು” ? ಆದರೆ ಬಾ ಏನೂ ಹೇಳದೆ ನಸುನಗುತ್ತಾ, ತಮ್ಮ ಪತಿಗೆ ಓದು-ಬರಹಗಳ ಕೆಲಸದಲ್ಲಂತೂ ಸಹಾಯ ಮಾಡುತ್ತಿಲ್ಲ; ಅಥವಾ ರಾಜಕೀಯದಲ್ಲೂ ಸಹಿತ. ಆದರೆ, ಚರಖಾದಲ್ಲಿ ನೂಲುವ ಕೆಲಸದಲ್ಲಾದರೂ ನೆರವಾದರೆ ತಮಗೆ ಸಮಾಧಾನ. ‘ಬಾಪುರವರೇ ಒಮ್ಮೆ ಹೇಳಿದ್ದಾರಲ್ಲ, ನಮ್ಮ ಸ್ವರಾಜ್ಯದ ಕಲ್ಪನೆ, ಚರಖಾದಲ್ಲಿ ನೂಲುವ ದಾರದ ಮೇಲಿದೆ’ ಎಂದು ; ಇದು ಅವರ ಉತ್ತರವಾಗಿತ್ತು.

ಸಾಯಂಕಾಲ ಅವರು ಪುನಃ ಅಡುಗೆಮನೆ ಸೇರಿದರೆಂದರೆ, ತಮ್ಮ ಪತಿಗೆ ಅಡುಗೆ ಮಾಡಿ ಅವರಿಗೆ ಬಡಿಸಿ, ಊಟಮಾಡುತ್ತಿರುವಾಗ ಅಲ್ಲಿಯೇ ಕುಳಿತು ವೀಕ್ಷಿಸುತ್ತಿದ್ದರು. ಅನೇಕ ವರ್ಷಗಳಿಂದ ಬಾ ರಾತ್ರಿಯ ಊಟವನ್ನು ಮಾಡುತ್ತಿರಲಿಲ್ಲ. ಒಂದು ‘ಕಪ್ ಕಾಫಿ’ಯನ್ನು ಮಾತ್ರ ಸಾಯಂಕಾಲ ಕುಡಿಯುತ್ತಿದ್ದರು. ಆಮೇಲೆ ಅದನ್ನೂ ನಿಲ್ಲಿಸಿ, ಕೇವಲ ಒಂದು ‘ಕಪ್ ಕಷಾಯ’ವನ್ನು ಸೇವಿಸುತ್ತಿದ್ದರು.

ಪುಟ 14

ಗಾಂಧೀಜಿಯವರು ಸಾಯಂಕಾಲ ವಾಕ್ ಹೋದಾಗ, ಕಸ್ತೂರ್ ಬಾ ಆಶ್ರಮದ ರೋಗಿಗಳ ಮತ್ತು ಮಕ್ಕಳ ಯೋಗಕ್ಷೇಮವನ್ನು ವಿಚಾರಿಸಲು ರೂಮುಗಳಿಗೆ ಹೋಗುತ್ತಿದ್ದರು. ಅನೇಕ ಸಲ ಆಶ್ರಮದ ಹಿರಿಯ ಮಹಿಳೆಯರ ಜತೆಗೂಡಿ ವಾಕ್ ಮಾಡಲು ಹೋಗುತ್ತಿದ್ದರು. ಗಾಂಧೀಜಿ ವಾಕ್ ಮಾಡಿ ವಾಪಸ್ ಬರುತ್ತಿರುವಾಗ, ಮಹಿಳೆಯರ ಹಿಂಡು ಅವರ ಜತೆ ಸೇರಿಕೊಂಡು ಒಟ್ಟಾಗಿ ವಾಪಸ್ ಆಶ್ರಮಕ್ಕೆ ಬರುತ್ತಿದ್ದರು. ಈಗ ಪ್ರಾರ್ಥನಾ ಸಮಯ. ಬಾರವರು ಪ್ರಾರ್ಥನೆಯಲ್ಲಿ ರಾಮಾಯಣ ಪಾರಾಯಣವೂ ಸೇರಿದಂತೆ, ಸಂಪೂರ್ಣವಾಗಿ ಪಾಲ್ಗೊಳ್ಳುತ್ತಿದ್ದರು. ಒಬ್ಬ ಪರೀಕ್ಷೆಗೆ ಸಿದ್ಧಪಡಿಸಿಕೊಳ್ಳುವ ಪ್ರಾಮಾಣಿಕ ವಿದ್ಯಾರ್ಥಿನಿಯಂತೆ ಬಾ ಅತ್ಯಂತ ಶ್ರದ್ಧೆಯಿಂದ, ಜಾಗರೂಕತೆಗಳಿಂದ ಬೆಳಿಗ್ಯೆ ಮತ್ತು ಸಾಯಂಕಾಲದ ಪ್ರಾರ್ಥನೆಗಳಿಗೆ ರಾಮಾಯಣದ ಶ್ಲೋಕಗಳನ್ನು ಪಠಿಸಿ ಸಿದ್ಧರಾಗುತ್ತಿದ್ದರು. ಅಷ್ಟೇ ಉತ್ಸಾಹ, ಶ್ರದ್ಧಾಸಕ್ತಿಗಳಿಂದ ಭಗವದ್ಗೀತೆಯ ಶ್ಲೋಕಗಳನ್ನೂ ಅಭ್ಯಾಸಮಾಡಿದರು.

೧೯೩೧-೩೩ ರಲ್ಲಿ ಕಸ್ತೂರ್ ಬಾ ೩ ಬಾರಿ ಜೈಲುವಾಸಮಾಡಬೇಕಾಯಿತು. ಅವರ ಜೊತೆಯವರು ರಾಮಾಯಣ, ಭಾಗವತ ಓದಿ ಹೇಳುತ್ತಿದ್ದರು. ನಾವು ಆಗಾಖಾನ್ ಪ್ಯಾಲೇಸ್ ಬಂದಿಗೃಹದಲ್ಲಿದ್ದಾಗ ತುಳಸೀದಾಸ್ ರಾಮಾಯಣದಿಂದ ೨ ಶ್ಲೋಕಗಳನ್ನು ಪಠಿಸಿದೆವು. ಬಾ ಆ ಶ್ಲೋಕಗಳ ಅರ್ಥ ವಿವರಣೆಗಳನ್ನು ಕೇಳಿದರು. ಸಾಯಂಕಾಲ ಹೇಳಬೇಕಾದ ಶ್ಲೋಕಗಳನ್ನು ಮನದಟ್ಟು ಮಾಡುತ್ತಿದ್ದರು. ಇದು ಸೇವಾಗ್ರಾಮ ಆಶ್ರಮದಲ್ಲೂ ಮುಂದುವರೆಯಿತು. ನಮಗೆ ಸಿಕ್ಕ ಅರ್ಥ-ತಾತ್ಪರ್ಯಗಳ ಪುಸ್ತಕ ಸರಿಯಿರಲಿಲ್ಲ. ಹಿಂದಿಯಲ್ಲಿ ಬರೆದದ್ದು. ಬಾ ಗೆ ಹಿಂದಿಭಾಷೆ ಅಷ್ಟಕ್ಕಷ್ಟೇ. ಗಾಂಧಿಯವರು ಅರ್ಥಹೇಳಿದರೆ, ಬಾ ಬಹಳ ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದರು. ರಾಮಾಯಣ ಅವರ ಪ್ರೀತಿಯ ಪುಸ್ತಕ. ಆದರೂ ಕತೆಯನ್ನು ಕೇಳಿದ ಮೇಲೆ ಅವರು ಕೆಲವು ಟೀಕೆಗಳನ್ನು ಮಾಡುತ್ತಿದ್ದರು. ಅವನ್ನು ಬಾಪು ಒಬ್ಬರೇ ಪರಿಹಾರ ಮಾಡುತಿದ್ದದ್ದು. ಕತೆಯಲ್ಲಿ ಬರುತ್ತಿದ್ದ ಮಾಯಾಜಾಲ ಪ್ರಸಂಗಗಳನ್ನು ಕೇಳಿ, ಇದೆಲ್ಲ ಊಹಾಪೋಹ ; ಖಂಡಿತ ಇದು ನಿಜವಿರಲಾರದು. ದಶರಥ ಮಹಾರಾಜ, ಜನಕಮಹಾರಾಜನ ಆಸ್ಥಾನದ ವೈಭವಗಳು, ಒಡ್ಡೋಲಗ, ಸುಂದರ ನರ್ತಕಿಯರು, ಮಂತ್ರಿ ಮಾಗಧರು, ಮತ್ತು ಅವರ ಅಪಾರ ಸಂಪತ್ತು, ಸೀತಾರಾಮರ ಮದುವೆಯ ಸಂದರ್ಭ, ಮೊದಲಾದವುಗಳನ್ನು ತುಳಸಿದಾಸರಿಗೆ ವಿವರವಾಗಿ ಹೇಳಲು ಪುರುಸೊತ್ತೆಲ್ಲಿತ್ತು ? ಎಂದು ಆಶ್ಚರ್ಯಪಡುತ್ತಿದ್ದರು.

ಸಾಯಂಕಾಲದ ಪ್ರಾರ್ಥನೆಯ ಬಳಿಕ, ‘ಬಾ ದರ್ಬಾರ್’ ಪ್ರೇಯರ್ ಸಭಾಂಗಣದಲ್ಲಿ ಸೇರಿ ನಡೆಯುತ್ತಿತ್ತು. ಆಶ್ರಮದ ಮಹಿಳೆಯರೆಲ್ಲ ಅಲ್ಲಿಗೆ ಬಂದು ಬಾರವರ ಸಂಗಡ ಕುಳಿತು ಮಾತಾಡುತ್ತಿದ್ದರು. ಕೆಲವರು ಅವರ ಕಾಲು ಒತ್ತುತ್ತಿದ್ದರು. ಮತ್ತೆ ಕೆಲವರು ಅವರ ಬೆನ್ನಿಗೆ ‘ಮಸಾಜ್’ ಮಾಡುತ್ತಿದ್ದರು. ದಿನದ ವಿಷಯಗಳನ್ನು ಬಾರ ಜತೆ ಹಂಚಿಕೊಂಡು ಹರಟೆಹೊಡೆಯುವುದರಲ್ಲಿ ಅವರು ಸಾರ್ಥಕತೆ ಕಾಣುತ್ತಿದ್ದರು. ಈ ತರಹದ ಮಾತುಕತೆ ಸುಮಾರು ಮುಕ್ಕಾಲುಗಂಟೆ ನಡೆಯುತ್ತಿತ್ತು. ಬಾರವರು, ರಾತ್ರಿಮಲಗಲು, ಪತಿಗೆ, ಮತ್ತು ಕಾನುಗಾಂಧಿ ಮತ್ತು ತಮಗೆ ಹಾಸಿಗೆಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

9

ಅಂದಿನ ದಿನಗಳಲ್ಲಿ ಕಸ್ತೂರ್ ಬಾ ಹಾಗೂ ಗಾಂಧೀಜಿಯವರು ತಮ್ಮ ಮೊಮ್ಮಗ (ರಾಮದಾಸ್ ಗಾಂಧಿಯವರ ಮಗ) ಪುಟ್ಟ ಬಾಲಕ, ‘ಕಾನುಗಾಂಧಿ’ಯನ್ನು ತಮ್ಮ ಬಳಿ ಇಟ್ಟುಕೊಂಡು ಸಾಕುತ್ತಿದ್ದರು. ಬಾರವರು, ಒಬ್ಬ ಯುವ ತಾಯಿಯ ಎಚ್ಚರಿಕೆ, ಪ್ರೀತಿಗಳಿಂದ ಹಾಗೂ ನವಯುವತಿಯ ಸಂಭ್ರಮದಿಂದ, ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಅನುಭವಿಯಾದ ಬಾ ಗೆ ಮಕ್ಕಳ ಮನಃಶಾಸ್ತ್ರವೂ ಚೆನ್ನಾಗಿ ಗೊತ್ತಿತ್ತು. ಈ ಕಾರಣಗಳಿಂದಾಗಿ ಪುಟ್ಟ ಮಗು ಕಾನುಗಾಂಧಿ, ತನ್ನ ಸ್ವಂತ ತಾಯಿಯ ಅನುಪಸ್ಥಿತಿಯನ್ನು ಎಂದೂ ಮನಗಾಣಲಿಲ್ಲ. ಅವನಿಗೆ ‘ಮೋತಿಬಾ ಅಜ್ಜಿ’ ಯೇ ಸರ್ವಸ್ವವಾಗಿದ್ದರು.

೧೯೩೮ ರಲ್ಲಿ ಕಸ್ತೂರ್ ಬಾರಿಗೆ ರಾಜಕೋಟ್ ಸತ್ಯಾಗ್ರಹದಲ್ಲಿ ಭಾಗವಹಿಸಬೇಕಾಗಿ ಬಂತು. ಕಸ್ತೂರ್ ಬಾ ರವರು ತಮ್ಮ ಪುಟ್ಟ ಮೊಮ್ಮಗು ಕಾನು ಗಾಂಧಿಯನ್ನು, ಅಜ್ಜ ಗಾಂಧಿಯವರ ಸುಪರ್ದಿಗೆ ಬಿಟ್ಟುಹೋಗಿದ್ದರು. ಕೆಲವು ವೇಳೆ ‘ಮೋತಿ ಬಾ’ ಎಂದು ಕರೆಯುತ್ತಿದ್ದ ತನ್ನ ಪ್ರೀತಿಯ ಅಜ್ಜಿ ಸ್ವಲ್ಪಹೊತ್ತೂ ಕಾಣಿಸದಿದ್ದರೆ, ಕಾನು ಗಾಂಧಿ ಬಹಳ ಆಳುತ್ತಿದ್ದನು. ಮಗುವನ್ನು ಸಮಾಧಾನ ಮಾಡುವುದು ಬಹಳ ಕಷ್ಟವಾಗುತ್ತಿತ್ತು. ಬಾಪು ತಾವೇ ಮಗುವನ್ನು ನೋಡಿಕೊಳ್ಳಬಹುದೆಂದು ಧರ್ಯದಿಂದ ಒಪ್ಪಿಕೊಂಡಿದ್ದರು. ಈಗ ಅವರಿಗೆ ತಮ್ಮ ತಪ್ಪಿನ ಅರಿವಾಗತೊಡಗಿತು. ‘ಮೋತಿ ಬಾ ಬೇಕು’, ‘ಮೋತಿ ಬಾ ಬೇಕು’, ಎಂದು ಅಜ್ಜಿಯನ್ನು ಜ್ಞಾಪಿಸಿಕೊಂಡು ಮಗು ರೋದಿಸಲು ಪ್ರಾರಂಭಿಸಿತು.

ಗಾಂಧಿಯವರು ಒಂದು ಉಪಾಯಮಾಡಿದರು. ಮುಗುಳು ನಗುತ್ತಾ, ಬಾಪೂರವರು, ಒಂದು ಜಪದ ಸರವನ್ನು ಕಾನುಗಾಂಧಿ ಕೈಗೆ ಕೊಟ್ಟು, ಅದರ ಮಣಿಗಳನ್ನು ಒಂದೊಂದಾಗಿ ಎಣಿಸಲು ಹೇಳಿದರು. ‘ಪ್ರತಿಮಣಿಯನ್ನು ಎಣಿಸುವಾಗಲೂ ‘ಮೋತಿಬಾ’ ಎಂದು ಹೇಳುತ್ತಾ ಎಣಿಸಿದರೆ, ಕೊನೆಯಲ್ಲಿ ನಿನ್ನ ಮೋತಿಬಾ ಅಜ್ಜಿ ನಿನ್ನ ಮುಂದೆ ಪ್ರತ್ಯಕ್ಷರಾಗುತ್ತಾರೆ’. ಮಗು ಕಾನುಗೆ ಇದನ್ನು ಕೇಳಿ ಅವನ ಮುಖ ಅರಳಿತು. ಬಹಳ ಸಂತೋಷವಾಯಿತು. ತಕ್ಷಣವೇ ಅಜ್ಜನಿಂದ ಜಪಮಾಲೆಯನ್ನು ಪಡೆದು, ನೆಲದಮೇಲೆ ಚಕ್ಕಳು-ಮಕ್ಕಳು ಹಾಕಿಕೊಂಡು ಕಣ್ಣು ಮುಚ್ಚಿ ಕುಳಿತು ಜಪದ ಮಣಿಗಳನ್ನು ಎಣಿಸಲು ಆರಂಭಿಸಿದನು. ಆದರೆ ಬಾ ಬರದೇ ಇದ್ದಾಗ, ಅವನು ಅಜ್ಜ ಗಾಂಧಿಯವರ ಹತ್ತಿರ ಬಂದು, ಜೋರಾಗಿ ಅಳಲು ಪ್ರಾರಂಭಿಸಿದನು. ಯಾರಿಗೂ ಅವನನ್ನು ಸಮಾಧಾನ ಮಾಡಲು ಸಾಧ್ಯವಾಗಲಿಲ್ಲ.

ಪುಟ 15

ಇದಾದ ಮೇಲೆ ಗಾಂಧೀಜಿಯವರು ತಮ್ಮ ತಪ್ಪನ್ನು ಒಪ್ಪಿಕೊಂಡು ಡೆಹ್ರಾಡೂನ್ ನಲ್ಲಿದ್ದ ಕಾನುವಿನ ತಾಯಿಯ ಬಳಿಗೆ ಕಳಿಸಿಕೊಡಲು ಏರ್ಪಾಡುಮಾಡಿದರು. ಆಗ ಸೊಸೆ ನಿರ್ಮಲ, ಡೆಹ್ರಾಡೂನ್ ನ ‘ಕನ್ಯಾ ಗುರುಕುಲ’ದಲ್ಲಿ ಇದ್ದುಕೊಂಡು ಒಂದು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

10

೧೯೩೭ ರಲ್ಲಿ ಮಹಾತ್ಮಾ ಗಾಂಧಿಯವರು ಕಲ್ಕತ್ತಾದಿಂದ ವಾಪಸ್ಸಾಗಿದ್ದರು. ಅವರ ಅರೋಗ್ಯ ಸರಿಯಿರಲಿಲ್ಲ. ರಕ್ತದೊತ್ತಡ ಏರುಪೇರಾಗಿರುತ್ತಿತ್ತು. ಆಶ್ರಮದವರೆಲ್ಲ ಗಾಭರಿಯಾಗಿದ್ದರು. ಬಾ ಮಾತ್ರ ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಳ್ಳಲಿಲ್ಲ. ಡಿಸೆಂಬರ್ ತಿಂಗಳಲ್ಲಿ ವಾಪಾಸ್ ಬಂದೆವು. ಸೇವಾಗ್ರಾಮದಲ್ಲಿ ವಿಪರೀತ ಚಳಿ. ಬಾಪೂಜಿ ಅನೇಕ ವರ್ಷಗಳಿಂದ ಹೊರಗೆ ಮಲಗುತ್ತಿದ್ದರು. ಈಗ ಚಳಿ ಮತ್ತು ಕೆಲಸದ ಒತ್ತಡಗಳೆಲ್ಲಾ ಸೇರಿ ಅವರ ‘ಬ್ಲಡ್ ಪ್ರೆಶರ್’ ಹೆಚ್ಚಾಗುತ್ತಿತ್ತು. ಡಾಕ್ಟರುಗಳು ಅವರಿಗೆ ಕೆಲಸಮಾಡುವುದನ್ನು ನಿಲ್ಲಿಸಿ, ಮತ್ತು ‘ಮನೆಯೊಳಗೆ ಮಲಗಿ’ ಎಂದು ಹೇಳುತ್ತಲೇ ಇದ್ದರು. ನಾವೆಲ್ಲ ಅವರನ್ನು ಬೇಡಿಕೊಂಡಮೇಲೆ ಬಾಪು ಒಪ್ಪಿ, ಒಳಗೆ ಮಲಗಲು ನಿರ್ಧರಿಸಿದರು. ಕಲ್ಕತ್ತಕ್ಕೆ ಹೋಗುವ ಮೊದಲು ಒಂದು ದೊಡ್ಡ ಹಾಲಿನ ಮೂಲೆಯೊಂದರಲ್ಲಿ ಮಲಗುತ್ತಿದ್ದರು. ಅವರ ಜತೆಯಲ್ಲಿ ಹಲವಾರು ಜನ ಮಲಗುತ್ತಿದ್ದರು.

ಮೀರಾಬೆನ್ ಗೆ ಬಾಪೂಜಿ ಕಲ್ಕತ್ತದಲ್ಲಿ ಕಾಯಿಲೆಬಿದ್ದ ವಿಷಯ ಗೊತ್ತಾಗಿ, ತಮ್ಮಕುಟೀರದ ವಸ್ತುಗಳನ್ನೆಲ್ಲ ಒಂದು ಕಡೆ ವ್ಯವಸ್ಥಿತವಾಗಿ ಇಟ್ಟು, ಬಾಪೂರವರಿಗೆ ತಮ್ಮ ರೂಮನ್ನು ತೆರವುಮಾಡಿಕೊಟ್ಟರು. ಮೀರಾಬೆನ್ ಮಾಡಿದ ಬದಲಾವಣೆಗಳನ್ನು ತಿಳಿದ ಬಾಪು, ಅವರ ರೂಮಿಗೆ ಹೋಗಲು ಸಾಧ್ಯವಿಲ್ಲವೆಂದು ಹೇಳಿದರು. ಏಕೆಂದರೆ ಅದು ಮೀರಾಬೆನ್ ರಿಗೋಸ್ಕರವೇ ನಿರ್ಮಿಸಿದ ಕುಟೀರ. ಅಲ್ಲಿ ಖಾದಿಪ್ರಚಾರದ ಬಗ್ಗೆ ಕೆಲಸಕಾರ್ಯಗಳು ಜರುಗುತ್ತಿದ್ದವು. ಆ ಜಾಗವನ್ನು ನನಗೋಸ್ಕರ ಹೇಗೆ ಬಳಸಲಿ ? ನನಗೆ ತಿಳಿಸದೇ ಈ ಹೊಸ ಮಾರ್ಪಾಡುಗಳನ್ನು ಯಾಕೆ ಮಾಡಿದಿರಿ ? ಎಂದು ಸಿಟ್ಟಾದರು. ನನಗೆ ನಾನು ಮಲಗುತ್ತಿದ್ದ ನನ್ನ ಹಳೆಯ ಜಾಗವೇ ಸರಿಯಾಗಿದೆ ಎಂದು ಹೇಳುತ್ತಿದ್ದರು. ದೊಡ್ಡ ಹಾಲಿನ ಒಂದು ಭಾಗ, ನನಗೆ ಪ್ರಿಯ. ಆದರೆ ಅವರಿಗೆ ಗೊತ್ತಿಲ್ಲದಂತೆ ಈಗ ಅಲ್ಲಿ ಮಲಗಲು ಸ್ಥಳವಿರಲಿಲ್ಲ. ಅಲ್ಲಿ ಮಲಗಲು ಈಗ ಹೆಚ್ಚು ಜನ ಬಂದು ಸೇರಿದ್ದಾರೆ. ಬೇಕಾದರೆ, ಬಾಪುರವರಿಗೋಸ್ಕರವಾಗಿಯೇ ಅವರು ತಮ್ಮ ಜಾಗವನ್ನು ಬಿಟ್ಟುಕೊಡಲು ಸಿದ್ಧರಾಗಿದ್ದಾರೆ. ಬಾಪೂಜಿಗೆ ಅವರನ್ನು ಎಬ್ಬಿಸಿ ತೊಂದರೆಕೊಡಲು ಇಷ್ಟವಿಲ್ಲ. ಈಗ ಉಳಿದಿರುವ ಜಾಗವೆಂದರೆ, ಮೀರಾಬೆನ್ ರವರ ಕುಟೀರ. ಯಾರಿಗೂ, ‘ಬಾಪು ಹೋಗಿ ಅಲ್ಲಿ ಮಲಗಿ’ ಎಂದು ಹೇಳುವ ಧೈರ್ಯವಿರಲಿಲ್ಲ. ಅಷ್ಟುಹೊತ್ತಿಗೆ ಎಲ್ಲಿಗೋ ಹೋಗಿದ್ದ ಕಸ್ತೂರ್ ಬಾ ರವರು ವಾಪಸ್ ಬಂದರು. ಸೂಕ್ಷ್ಮಮತಿಯಾದ ಬಾರವರಿಗೆ ತಕ್ಷಣ ಪರಿಸ್ಥಿತಿಯ ಅರಿವಾಯಿತು. “ಎಲ್ಲೂ ಬೇಡ ; ಬಾಪು ನನ್ನ ಕುಟೀರದಲ್ಲಿ ಮಲಗುತ್ತಾರೆ” ಎಂದು ಘೋಷಿಸಿದಾಗ, ಸಮಸ್ಯೆ ಸುಲಭವಾಗಿ ಪರಿಹಾರವಾಯಿತು.

ಕಸ್ತೂರ್ಬಾ ರೂಮು ಚಿಕ್ಕದು. ಬಾಪೂಜಿಯವರ ಜತೆಗೆ ಒಂದಿಬ್ಬರು ಮಲಗಲು ಬರುವರಿದ್ದರು. ಬಾ ತಮ್ಮ ರೂಮನ್ನು ಪತಿಗೆ, ಮತ್ತು ಅವರ ಅನುಯಾಯಿಗಳಿಗೆ ಬಿಟ್ಟುಕೊಟ್ಟು ವರಾಂಡದಲ್ಲಿ ತಾವು ಮಲಗಿದರು. ಅವರ ಪಕ್ಕದಲ್ಲಿ ಮೊಮ್ಮಗ ಕಾನು ಗಾಂಧಿಯೂ ಇದ್ದನು. ಬಾಪು ಜತೆಯಲ್ಲಿ ಅವರ ಮಿತ್ರರೂ ಬಂದು ತಮ್ಮ ರೂಮಿನಲ್ಲಿ ಮಲಗುವುದನ್ನು ಎಂದೂ ಬಾ ವಿರೋಧಿಸಿರಲಿಲ್ಲ. ಮಾರನೆಯ ದಿನ ಬಾಪು ಎದ್ದು ತಮ್ಮ ಹಾಸಿಗೆಯ ಮೇಲೆ ಕುಳಿತೇ ತಿಂಡಿ ತಿಂದರು. ಏನೋ ಯೋಚನೆಯಲ್ಲಿದ್ದರು. ಅವರ ಮನಸ್ಸಿನಲ್ಲಿ ಬಾ ಬಗ್ಗೆ ಕನಿಕರ ಜಾಗೃತವಾಯಿತು. ‘ಪಾಪ, ಬಾ ಗೆ ನಾನು ಎಂದೂ ಪ್ರತ್ಯೇಕವಾದ ಕೊಠಡಿ ಮಾಡಿಕೊಡಲಿಲ್ಲ. ಈಗ ಆಕೆಗೋಸ್ಕರವಾಗಿಯೇ ಸ್ವಲ್ಪ ನೆಮ್ಮದಿ, ಶಾಂತಿ, ಏಕಾಂತತೆ ಅವರ ವಯಸ್ಸಿನಲ್ಲಿ ಇರಲೆಂದು, ನಾನೇ ಮುಂದೆ ನಿಂತು ಮೇಲ್ವಿಚಾರಣೆ ಮಾಡಿ, ಈ ರೂಮನ್ನು ಕಟ್ಟಿಸಿಕೊಟ್ಟರೆ, ಅದನ್ನೂ ಈಗ ನಾನೇ ಬಳಸುತ್ತಿದ್ದೇನೆ’. ಎಂದು ಬೇಸರಪಟ್ಟುಕೊಂಡರು.

ಪುಟ 16

ಒಮ್ಮೆಯೂ ಕಸ್ತೂರ್ಬಾ ತಮ್ಮ ಕುಟೀರದಲ್ಲಿ ತಾವೊಬ್ಬರೇ ಇದ್ದ ನೆನಪಿಲ್ಲ. ಯಾರಾದರೂ ಹೊಸ ಹುಡುಗಿಯರು ಆಶ್ರಮಕ್ಕೆ ಬರುತ್ತಲೇ ಇದ್ದರು. ಅವರಿಗೂ ತಮ್ಮ ರೂಮಿನಲ್ಲಿ ಇರಲು ಅನುಕೂಲಮಾಡಿಕೊಡುತ್ತಾರೆ. ಈಗ ನನ್ನ ಆಗಮನದಿಂದ ಪೂರ್ತಿ ಕೊಠಡಿಯನ್ನೇ ನನಗಾಗಿ ಮೀಸಲಿಟ್ಟಂತೆ ಆಗುತ್ತಿದೆ. ನಾನು ಎಲ್ಲೇ ಹೋದರೂ, ಅದೊಂದು ಧರ್ಮಶಾಲೆಯ ತರಹ ಆಗುತ್ತದೆ. ಇದರಿಂದ ಮನಸ್ಸಿಗೆ ಬೇಜಾರು. ಆದರೆ ಬಾ, ಎಂದೂ ಇದರ ಬಗ್ಗೆ ಚಕಾರವನ್ನೂ ಎತ್ತಿದವರಲ್ಲ. ಯಾವ ಅತಿಥಿಯನ್ನು ಕರೆತಂದರೂ, ಆಕೆಯ ವಸ್ತುಗಳನ್ನು ನಾನೇ ಬಳಸಿಕೊಂಡರೂ, ಎಂದೂ ಬೇಸರಮಾಡಿಕೊಂಡ ವ್ಯಕ್ತಿಯಲ್ಲ. ಎಲ್ಲವನ್ನೂ ನಗುಮುಖದಿಂದ ಒಪ್ಪಿಕೊಳ್ಳುವ ಅವರ ಸದ್ಗುಣ ನನಗೆ ಹೆಮ್ಮೆಯೆನ್ನಿಸುತ್ತದೆ. ಈ ವಿಷಯವನ್ನು ಹೇಳುತ್ತಿರುವಾಗಲೇ, ಬಾ ಅಲ್ಲಿಗೆ ಬಂದರು. ಆಕೆಯ ಮುಖವನ್ನು ನೋಡಿ ಬಾಪು ಮುಗುಳ್ನಕ್ಕರು. ‘ಸರಿ, ಎಲ್ಲವೂ ಹೀಗೆಯೇ ಆಗತಕ್ಕದ್ದು. ‘ಗಂಡ ಒಂದು ಹೇಳಿದಾಗ, ಹೆಂಡತಿ ಮತ್ತೊಂದು ಹೇಳಿದರೆ, ಜೀವನ ದುರ್ಭರವಾಗುತ್ತದೆ. ನಮ್ಮಲ್ಲಿ ಗಂಡ ಮಾತ್ರ ಏನೇ ಹೇಳಿದರೂ ಪತ್ನಿ ಶಿರಸಾವಹಿಸಿ ಅದನ್ನು ಮಾಡಲು ಸಿದ್ಧಳಾಗುತ್ತಾಳೆ ; ಅದು ಭಾರತೀಯ ನಾರಿಯ ದೊಡ್ಡತನ.’ ಈ ಜಾಣತನದ ಮಾತುಗಳನ್ನು ಕೇಳಿದಮೇಲೆ ಬಾ ಗೆ ನಗು ತಡೆಯಲಾಗಲಿಲ್ಲ.
ಗಾಂಧೀಜಿಯವರಿಗೆ ಮನೆಯ ಒಳಗೆ ಮಲಗಿದ್ದರೂ ರಕ್ತದೊತ್ತಡ ಹೆಚ್ಚಾಗುತ್ತಿತ್ತು. ದಿನದ ಅತಿ ಚಳಿಯ ಸಮಯದಲ್ಲಿ ಅದು ಅತಿ ಹೆಚ್ಚಾಗುತ್ತಿತ್ತು. ಡಾಕ್ಟರ್ ರವರ ಸಲಹೆಯಂತೆ ಹವಾ ಬದಲಾವಣೆಗೆ ಯಾವುದಾದರೂ ಸಮುದ್ರ ತಟದಲ್ಲಿ ಹೋಗಿ ಸ್ವಲ್ಪದಿನ ಕಳೆದು ಬರುವುದು ಒಳ್ಳೆಯದೆಂದು ಗೊತ್ತಾಯಿತು. ಕೆಲವು ಆಶ್ರಮವಾಸಿಗಳು ಇದನ್ನು ಕೇಳಿ ಭಯಭೀತರಾದರು. ‘ಅಂದರೆ ಬಾಪೂರವರ ಆರೋಗ್ಯ ಅಷ್ಟೊಂದು ಚಿಂತಾಜನಕವಾಗಿದೆಯೇ’ ? ಎಂದು ಒಬ್ಬರನ್ನೊಬ್ಬರು ಪ್ರಶ್ನಿಸಲಾರಂಭಿಸಿದರು. ‘ಗುಣಮುಖರಾಗಿ ವಾಪಸ್ ಬರುತ್ತಾರೆಯೇ’ ? ಮೊದಲಾದ ಪ್ರಶ್ನೆಗಳು ಕೇಳಲ್ಪಡುತ್ತಿದ್ದವು. ಇಂತಹ ಅಧೀರತೆಯ ಮಾತುಗಳು, ಬಾ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಒಬ್ಬ ನುರಿತ ನರ್ಸ್ ತರಹ, ಅವರು ತಮ್ಮ ಪತಿಯ ಔಷಧೋಪಚಾರಗಳನ್ನು ನಿಷ್ಠೆಯಿಂದ ಮಾಡಿಕೊಂಡು ಹೋಗುತ್ತಿದ್ದರು. ಅವರು ಕಲ್ಕತ್ತಾದಿಂದ ವಾಪಸ್ ಬಂದಮೇಲಂತೂ ಸ್ವಲ್ಪವೂ ವಿರಾಮನ್ನೂ ತೆಗೆದುಕೊಳ್ಳದೆ ದುಡಿಯುತ್ತಿದ್ದರು. ಮುಂಬಯಿಯ ಜುಹೂಸಮುದ್ರ ತಾಣಕ್ಕೆ ಅವರೂ ಪತಿಯ ಜತೆ ಹೊರಟರು.

ಬೊಂಬಾಯಿನಲ್ಲಿ ಗಾಂಧೀಜಿಯವರು ಜುಹೂ ಜಿಲ್ಲೆಯಲ್ಲಿ ಸುಮಾರು ಎರಡು ತಿಂಗಳಿದ್ದರು. ಇಲ್ಲಿ ಪಡೆದ ಆರೈಕೆ, ಅವರ ಆರೋಗ್ಯವರ್ಧನೆಗೆ ಬಹಳ ಸಹಕಾರಿಯಾಯಿತು. ಬಾ ಮತ್ತು ಗಾಂಧೀಜಿಯವರು ಎರಡೂ ಹೊತ್ತೂ ಜುಹೂ ಸಮುದ್ರ ಬೀಚಿನಲ್ಲಿ ‘ವಾಕ್’ ಹೋಗುತ್ತಿದ್ದರು. ೧೯೩೯ ರ ಪ್ರಾರಂಭದಲ್ಲಿ ಬಾಪು ಸೇವಾಗ್ರಾಮಕ್ಕೆ ಹೋದರು. ಅಷ್ಟು ಹೊತ್ತಿಗಾಗಲೇ ಅವರ ಆರೋಗ್ಯ ಗಮನಾರ್ಹವಾಗಿ ಉತ್ತಮಗೊಂಡಿತ್ತು. ಪುನಃ ಅವರಿಗೆ ಕಲ್ಕತ್ತಕ್ಕೆ ಹೋಗಬೇಕಾಗಿ ಬಂತು.

11

೧೯೩೯ ರಲ್ಲಿ ಬಾಪು ಒರಿಸ್ಸಾದ ‘ದೇಲಾಂಗ್’ ಗೆ ‘ಗಾಂಧಿ ಸೇವಾ ಸಂಘದ ವಾರ್ಷಿಕ ಮೀಟಿಂಗ್’ ನಲ್ಲಿ ಪಾಲ್ಗೊಳ್ಳಲು ಹೋದರು. ಬಾ, ಮತ್ತು ಕೆಲವು ಆಶ್ರಮವಾಸಿಗಳು ಸಹಿತಾ ಅಲ್ಲಿಗೆ ಬಂದಿದ್ದರು. ‘ಜಗನ್ನಾಥ ಸ್ವಾಮಿ ದೇವಾಲಯ’, ಬಹಳ ಹತ್ತಿರದಲ್ಲೇ ಇತ್ತು. ಮೀಟಿಂಗ್ ಮುಗಿದ ನಂತರ, ಬಾ, ದುರ್ಗಾ ಬೆನ್, ನಾರಾಯಣ್, ಮತ್ತು ಕೆಲವರು ಪುರಿನಗರವನ್ನೂ ನೋಡಲು ಇಷ್ಟಪಟ್ಟರು. ಬಾ ಬಹಳ ಧರ್ಮ ಶ್ರದ್ಧೆಯುಳ್ಳವರು. ಯಾವ ದೇವಸ್ಥಾನಕ್ಕೆ ಹೋದರೂ ದೇವರ ಬಗ್ಗೆ, ಅಪಾರ ಭಕ್ತಿ-ಶ್ರದ್ಧೆಗಳಿಂದ ಪೂಜಿಸುತ್ತಿದ್ದರು.

ಪುಟ 17

ಕಸ್ತೂರ್ಬಾ ಪುರಿ ದೇವಸ್ಥಾನದ ಒಳಗೆ ಜಗನ್ನಾಥ ದೇವರಿಗೆ ಅಭಿಷೇಕ ಮಾಡಿಸಿದರು. ದುರ್ಗಾಬೆನ್ ಸಹಿತ ಅವರ ಜತೆಗಿದ್ದರು. ಅವರ ಮಗ ಯುವ ನಾರಾಯಣ್ ದೇಸಾಯ್, ದೇವಸ್ಥಾನದ ಹೊರಗೇ ನಿಂತಿದ್ದನು. ಸಾಯಂಕಾಲ ಅವರು ದೇಲಾಂಗ್ ಗೆ ವಾಪಸ್ಸಾದರು. ಗಾಂಧೀಜಿಯವರು, ಬಾ ಮತ್ತು ದುರ್ಗಾಬೆನ್, ಜಗನ್ನಾಥ ದೇವಸ್ಥಾನಕ್ಕೆ ಹೋಗಿದ್ದಾರೆಂದು ತಿಳಿದು ಬೇಸರ ಪಟ್ಟುಕೊಂಡರು. ದೇವಸ್ಥಾನದ ಪ್ರಾಧಿಕಾರ, ಹರಿಜನರಿಗೆ ದೇವಸ್ಥಾನದೊಳಗೆ ಪ್ರವೇಶಕ್ಕೆ ಸಮ್ಮತಿಸಿರಲಿಲ್ಲ. ಬಾಪು ಮೊದಲು ಪತ್ನಿಯನ್ನು ತರಾಟೆಗೆ ತೆಗೆದುಕೊಂಡರು. ಸಾಯಂಕಾಲ ಬಾಪು ವಾಕ್ ಮಾಡುವ ಸಮಯದಲ್ಲಿ ತಮ್ಮ ಪತ್ನಿಯ ಭುಜಕ್ಕೆ ಒರಗಿಕೊಂಡು ಸ್ಪಷ್ಟೀಕರಣ ಕೇಳಿದರು. ಬಾ ಮುಗ್ಧ ಮಗುವಿನ ತರಹ, ‘ತಪ್ಪಾಗಿ ಹೋಯಿತು ಕ್ಷಮಿಸಿ’ ಎಂದು ಬೇಡಿದರು. ಪ್ರೀತಿಯ ಮಡದಿ ಕ್ಷಮಾಪಣೆ ಕೇಳಿದಾಗ, ಬಾಪು ಕರಗಿ ನೀರಾದರು. ತಪ್ಪು ನನ್ನದು ಎಂದು ಹೇಳಿ, ನಾನು ನಿನ್ನ ಗುರುವಾದೆ ; ಆದರೆ ನಿನಗೆ ನ್ಯಾಯವಾಗಿ ಕೊಡಬೇಕಾಗಿದ್ದ ಸಮಯ, ಮತ್ತು ಸರಿಯಾದ attention ಕೊಡಲಿಲ್ಲ. ನಿನ್ನ ವಿದ್ಯಾಭ್ಯಾಸವನ್ನೂ ಮುಂದುವರೆಸಲು ಸಹಾಯ ಮಾಡಲಿಲ್ಲ. ನೀವು ಏನು ಮಾಡಬಹುದಿತ್ತು ? ಎಂದು ಸ್ವಲ್ಪ ಸಮಯದ ನಂತರ ಬಾಪು ಮಹದೇವ್ ದೇಸಾಯ್ ರಿಗೆ ಅದೇ ವಿಷಯದಮೇಲೆ ಪ್ರಶ್ನಿಸಿದರು. ‘ಬಾ ರ ಮಗುವಿನ ತರಹದ ತಪ್ಪೊಪ್ಪಿಗೆ ನನ್ನ ಮನಸ್ಸನ್ನು ಕರಗಿಸಿತು’, ಎಂದು ಹೇಳಿದರು. ‘ಪುರಿ ದೇವಸ್ಥಾನದ ಪ್ರಕರಣ ನನಗೆ ಬಹಳ ದುಖಃವನ್ನು ತಂದುಕೊಟ್ಟಿತು. ಅದಕ್ಕೆ ನಾವಿಬ್ಬರೂ ಕಾರಣಕರ್ತರು. ಬಾ ಆಗಲಿ ದುರ್ಗಾ ಬೆಹೆನ್ ಆಗಲಿ ಅಲ್ಲ.’

ನನ್ನ ತಪ್ಪನ್ನು ಅನೇಕ ಸಲ ಹೇಳಿದ್ದೇನೆ. ಇವನ್ನು ನಿಮ್ಮ ಬಗ್ಗೆ ಸಮಾಲೋಚಿಸಲು ಇಷ್ಟಪಡುತ್ತೇನೆ. ನೀವು ಹಾಗೂ ದುರ್ಗಾಬೆನ್ ಅಸಾಧಾರಣ ವ್ಯಕ್ತಿಗಳು. ನೀವು ನಮ್ಮ ಆಪ್ತ ಸ್ನೇಹಿತರು. ದುರ್ಗಾಬೆನ್ ವಿದ್ಯಾಭ್ಯಾಸವನ್ನು ಏಕೆ ಕಡೆಗಣಿಸಿದಿರಿ ? ನಿಮ್ಮ ಚಿಕ್ಕ ಮಗನ ಬಗ್ಗೆ ಕೊಟ್ಟ ಕಾಳಜಿಯನ್ನು ದುರ್ಗಾಬೆನ್ ಓದಿಗೆ ಕೊಡಲಿಲ್ಲವೇಕೆ ? ಪಾಪ ಮಹದೇವ್ ದೇಸಾಯ್ ಏನು ತಾನೇ ಜವಾಬು ಕೊಟ್ಟಾರು ? ಉತ್ತರ ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಬಾಪು ರವರ ಕೋಪ ಇನ್ನೂ ಹೆಚ್ಚಾಗುತ್ತಿತ್ತು. ಮಹದೇವ್ ತಮ್ಮ ತಪ್ಪನ್ನು ಕಂಡುಕೊಂಡು ವಿಚಲಿತರಾದರು. ಇನ್ನುಮೇಲೆ ಗಾಂಧೀಜಿಯವರ ಜತೆಯಲ್ಲಿ ಇರಲು ತಮಗೆ ಯೋಗ್ಯತೆಯಿಲ್ಲವೆಂದು ಬೇಸರಪಟ್ಟುಕೊಂಡರು. ನಾವು ಮಾಡಿದ ಉಪೇಕ್ಷೆಯಿಂದ ಗಾಂಧೀಜಿಯವರ ಮನಸಿಗೆ ಅಷ್ಟೊಂದು ದುಃಖವಾಗಿರುವುದನ್ನು ಅವರಿಗೆ ಸಹಿಸಲಾಗುತ್ತಿಲ್ಲ. ಆದರೆ ಅಷ್ಟು ಸುಲಭವಾಗಿ ಬಾಪು ಅವರನ್ನು ಕ್ಷಮಿಸುತ್ತಿಲ್ಲ. ಒಂದು ಚಿಕ್ಕ ತಪ್ಪಿಗಾಗಿ ಅಷ್ಟೊಂದು ವರ್ಷ ಜತೆಯಲ್ಲಿ ದುಡಿದ ವ್ಯಕ್ತಿಯನ್ನು ದೂರಮಾಡಲು ಸಾಧ್ಯವಿಲ್ಲ. ಇದರ ಬಗ್ಗೆ ದೊಡ್ಡ ವಾದ-ಪ್ರತಿವಾದಗಳು ನಡೆದವು. ಇಬ್ಬರ ಮಧ್ಯೆ ಪತ್ರವ್ಯವಹಾರಗಳೂ ಜರುಗಿದವು. ಬಾಪು ಮತ್ತು ಪಾರ್ಟಿ ಕಲ್ಕತ್ತಾಗೆ ವಾಪಸ್ಸಾದರು. ಕಸ್ತೂರ್ ಬಾ ಮತ್ತು ದುರ್ಗಾ ಬೆನ್ ಸೇವಾಗ್ರಾಮಕ್ಕೆ ವಾಪಸ್ಸಾದರು. ಕಲ್ಕತ್ತಾದಲ್ಲೂ ಚರ್ಚೆಗಳು ನಡೆದವು. ಮಹದೇವ್, ‘ಹರಿಜನ್ ಪತ್ರಿಕೆ’ಯಲ್ಲಿ ಒಂದು ‘ತಪ್ಪೊಪ್ಪಿಗೆ ಕಾಲಂ’ ಬರೆದರು. ಇದರಿಂದ ಅವರ ಮನಸ್ಸಿಗೆ ಸ್ವಲ್ಪ ನೆಮ್ಮದಿ ದೊರೆತಂತಾಗಿ ಆ ವಿಷಯ ಅಲ್ಲಿಗೆ ಮುಕ್ತಾಯವಾಯಿತು.

ಪುಟ 18

12

೧೯೩೮-೧೯೩೯ ರ ಬೇಸಗೆಯಲ್ಲಿ ಕಾಲರಾ ಬೇನೆ ಸೇವಾಗ್ರಾಮದಲ್ಲಿ ಕಾಣಿಸಿಕೊಂಡಿತು. ನಾನು ಆಶ್ರಮ ನಿವಾಸಿಗಳೆಲ್ಲರೂ anti-cholera inoculations ಹಾಕಿಸಿಕೊಳ್ಳಬೇಕೆಂದು ಆಗ್ರಹಿಸಿದೆ. ಬಾಪುರವರಿಗೂ ನಾನು ಮನವರಿಕೆ ಮಾಡಿ, ಪಕ್ಕದ ಗ್ರಾಮಗಳಿಂದ ಬೇಕಾದಷ್ಟು ಜನ ಕೃಷಿಕರು ಆಶ್ರಮಕ್ಕೆ ಯಾವುದಾದರೂ ಸಹಾಯಕ್ಕೆ ಬರುತ್ತಲೇ ಇರುತ್ತಾರೆ. ಅವರಿಂದ ಖಂಡಿತ ಸೋಂಕು ಹರಡುತ್ತದೆ. ಆಗ ಸಿಕ್ಕ ವರದಿಗಳ ಪ್ರಕಾರ ವಾರ್ಧಾಶ್ರಮದಲ್ಲಿ ‘ಕಾಕಾ ಸಾಹೇಬ್ ಕಾಳೇಕರ್’, ಈಗ ನರಳುತ್ತಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಅಲ್ಲಿನ ತರಹ ನಮ್ಮ ಆಶ್ರಮದಲ್ಲೂ ಪುನರಾವೃತ್ತಿಯಾಗುವುದು ನಮಗೆ ಸಮ್ಮತವಲ್ಲ. ಮಹಾತ್ಮಗಾಂಧಿಯವರು ತಮ್ಮ ಸಾಯಂಕಾಲದ ಪ್ರಾರ್ಥನೆಯ ಸಮಯದಲ್ಲಿ ಹಬ್ಬುತ್ತಿರುವ ಕಾಲರಾ ಮಾರಿ ತಡೆಯಲು, ಲಸಿಕೆ ಹಾಕಿಸಿಕೊಳ್ಳುವ ಕ್ರಮದ ಬಗ್ಗೆ ತಿಳುವಳಿಕೆ ಕೊಡುವ ರೀತಿಯನ್ನು ಅನುಮೋದಿಸಿದರು. ಆದರೆ ಕಸ್ತೂರ್ಬಾ ಸೇರಿದಂತೆ ಆಶ್ರಮ ವಾಸಿಗಳಲ್ಲನೇಕರು ಲಸಿಕಾಕರಣದಲ್ಲಿ ನಂಬಿಕೆ ತೋರಿಸಲಿಲ್ಲ. ಆದರೆ ಅದನ್ನು ಹೊರಗೆ ಹೇಳುವುದಕ್ಕೂ ಧೈರ್ಯವಿಲ್ಲದೆ ಇದ್ದರು. ಕೊನೆಗೆ ಬಾ ರವರೇ ‘ಏನೇ ಆದರೂ ನಾನು ಮಾತ್ರ ಲಸಿಕೆ ಹಾಕಿಸಿಕೊಳ್ಳುವುದಿಲ್ಲ’ವೆಂದು ಘೋಷಿಸಿದರು. ಈ ನಿರ್ಧಾರವನ್ನು ಕೇಳಿಸಿಕೊಂಡ ಮೇಲೆ ಬಾಪು, ‘ಹಾಗಾದರೆ ಅಂಥವರು, quarantine ನಲ್ಲಿ ಇರಬೇಕಾಗುತ್ತದೆ’. ಎಂದು ಹೇಳಿದರು.

‘ಯಾರು ತಮಗೆ inoculation ಬೇಡವೆನ್ನುವರೋ ಅವರು quarantine ನಲ್ಲಿರಬೇಕಾಗುವುದು. ಇದನ್ನು ಮಾಡಲೇ ಬೇಕೆಂದರೆ ಮಾಡೋಣ’; ‘ಆದರೆ ನಾನು ಭಾಗ ತೆಗೆದುಕೊಳ್ಳುವುದಿಲ್ಲ’. ಎಂದರು. ಆಶ್ರಮದಲ್ಲಿ ಕೆಲವರು ಮಾತ್ರ inoculation ಹಾಕಿಸಿಕೊಂಡರು. ನಾವು ಕೈಗೊಂಡ ಕಾಲರಾ ವಿರುದ್ಧದ ಅಭಿಯಾನದಲ್ಲಿ ಗ್ರಾಮದ ಪ್ರತಿಯೊಬ್ಬರಿಗೂ inoculation ಹಾಕಿಸಿದೆವು. ಇದರಿಂದ ಗ್ರಾಮಸ್ಥರಿಗೆ ನೆಮ್ಮದಿಯಾಯಿತು ; ಹಾಗು ಆಶ್ರಮವಾಸಿಗಳಿಗೂ ಸಹ.

13

ಗಾಂಧೀಜಿಯವರು ೧೯೩೮ ರಲ್ಲಿ ಸರ್ದಾರ್ ವಲ್ಲಭ್ ಭಾಯಿ ಪಟೇಲ್ ರವರ ಆದೇಶದ ಮೇಲೆ ಒಂದು ತಿಂಗಳು ಬಾರ್ಡೋಲಿಗೆ ಹೋದರು. ರಾಜಕೋಟ್ ಸತ್ಯಾಗ್ರಹ ಅವರಿದ್ದಾಗಲೇ ಅಲ್ಲಿ ಪ್ರಾರಂಭವಾಗಿತ್ತು. ರಾಜಕೋಟ್ ನ ಠಾಕುರ್ ಸಾಹೇಬರು ಕೆಲವು ರಾಜಕೀಯ ಅಧಿಕಾರಗಳನ್ನು ಅವರ ಪ್ರಜೆಗಳಿಗೆ ಪ್ರದಾನಮಾಡುವುದಾಗಿ ಹೇಳಿಕೆ ಕೊಟ್ಟಿದ್ದರು. ಆದರೆ ತಮ್ಮ ಮಾತಿನಂತೆ ನಡೆದುಕೊಳ್ಳಲಿಲ್ಲ, ಮಾತಿಗೆ ತಕ್ಕಹಾಗೆ ನಡೆಯದೆ ಇದ್ದರಿಂದ ಈ ಪ್ರತಿಭಟನೆ ನಡೆಸಬೇಕಾಗಿ ಬಂತು. ಈ ವಿಷಯ ಕಿವಿಗೆ ಬಿದ್ದಕೂಡಲೇ ಕಸ್ತೂರ್ ಬಾ ಪತಿಯ ಹತ್ತಿರ ಬಂದು, ‘ರಾಜಕೋಟ್ ನನ್ನ ತವರುಮನೆ. ಆದ್ದರಿಂದ ಏನೇ ಆದರೂ ಸತ್ಯಾಗ್ರಹದಲ್ಲಿ ತಾವು ಭಾಗಿಯಾಗಲೇ ಬೇಕು’.ಎಂದು ಸ್ಪಷ್ಟವಾಗಿ ತಮ್ಮ ಅಭಿಮತವನ್ನು ಹೇಳಿಕೊಂಡರು. ಬಾಪುಗೆ ಇದು ನ್ಯಾಯವಾದ ಬೇಡಿಕೆಯೆನ್ನಿಸಿತು. ಸರ್ಕಾರ, ಕಸ್ತೂರ್ ಬಾ ರನ್ನು ಅರೆಸ್ಟ್ ಮಾಡಿ ಜೈಲಿನಲ್ಲಿಟ್ಟರು. ಅವರೇ ಆರಿಸಿಕೊಂಡದ್ದು ಚಿಕ್ಕ ಹಳ್ಳಿಯ ಜೈಲೊಂದನ್ನು. ಮಗ ದೇವದಾಸ್ ಭಾಯಿ ತಾಯಿಯನ್ನು ನೋಡಲು ಹೋದರು. ವಯಸ್ಸಾದ ತಾಯಿಯವರು ಒಬ್ಬರೇ ಆ ಹಳ್ಳಿಯ ಕಾರಾಗೃಹದಲ್ಲಿ ಯಾವ ಅನುಕೂಲತೆಗಳೂ ಇಲ್ಲದ ರೂಮಿನಲ್ಲಿ ಬಂದಿಯಾಗಿರುವುದನ್ನು ಕಂಡು ಅವರಿಗೆ ಬಹಳ ವೇದನೆಯಾಯಿತು.

ಪುಟ 19

ಅನಾನುಕೂಲಗಳು, ಆವಶ್ಯಕತೆಗಳ ಕೊರತೆ, ಎಂದೂ ಕಸ್ತೂರ್ ಬಾರಿಗೆ ಬೇಸರ ತರಲಿಲ್ಲ. ಸ್ವಾತಂತ್ರ್ಯ ಸಮರದ ಸೇನಾನಿಯೊಬ್ಬಳಾಗಿ ಹೋಗಿರುವಾಗ, ತಮಗೆ ಎಲ್ಲಾ ಸುವಿಧತೆಗಳು ಬೇಕೆಂದು ಅಪೇಕ್ಷಿಸುವುದು ತರವಲ್ಲ. ಬಾರವರಿಗೆ ಸರಕಾರ ವಿಧಿಸುತ್ತಿರುವ ಹಿಂಸೆಗಳನ್ನು ಕಂಡು ಜನರು ವಿರೋಧಿಸಿದರು. ಬಾ ರ ಅನಾರೋಗ್ಯ ಎಲ್ಲರಿಗೂ ಚಿಂತೆಗೆ ಕಾರಣವಾಗಿತ್ತು. ಇದಾದಮೇಲೆ ಸರಕಾರದವರು ಬಾರನ್ನು ರಾಜಕೋಟ್ ಜೈಲಿಗೆ ಕರೆತಂದು ಅಲ್ಲಿಂದ ೧೦-೧೫ ಮೈಲಿಗಳ ದೂರದಲ್ಲಿದ್ದ ಹಳೆಯ ಬಂದಿಖಾನೆಯಲ್ಲಿ ಇಟ್ಟರು. ಅಲ್ಲೇನೋ ಒಂದು ಒಳ್ಳೆಯ ಉದ್ಯಾನವಿತ್ತು. ಮಣಿ ಬೆನ್ ಪಟೇಲ್, ಮೃದುಲಾಬೆನ್ ಸಾರಾಭಾಯಿ, ಬಾ ರ ಜತೆಯಲ್ಲಿರಲು ಸೇರಿಕೊಂಡರು. ಕಸ್ತೂರ್ ಬಾ ಇಲ್ಲಿಂದ ಸ್ವಾರಸ್ಯಕರವಾದ ಪತ್ರಗಳನ್ನು ತಮ್ಮ ಪತಿಗೆ, ಹುಡುಗಿಯರ ಸಹಾಯದಿಂದ ಹೇಳಿ ಬರೆಸುತ್ತಿದ್ದರು.