ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಡಿ ಕಾರಣ ೧೪

ಗೋನವಾರ ಕಿಶನ್ ರಾವ್
ಇತ್ತೀಚಿನ ಬರಹಗಳು: ಗೋನವಾರ ಕಿಶನ್ ರಾವ್ (ಎಲ್ಲವನ್ನು ಓದಿ)

ಬಭ್ರುವಾಹನ : ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ
ಸಮರದೋಳ್ ಆರ್ಜಿಸಿದ ಆ ನಿನ್ನ ವಿಜಯಗಳ ಮರ್ಮ
ಎಲ್ಲದಕು ಕಾರಣನು ಶ್ರೀಕೃಷ್ಣ ಪರಮಾತ್ಮ
ಹಗಲಿರುಳು ನೆರಳಂತೆ ತಲೆ ಕಾಯ್ದು ಕಾಪಾಡಿ
ಜಯವ ತಂದಿತ್ತ ಆ ಯದುನಂದನ
ಅವನಿಲ್ಲದೆ ಬಂದ ನೀನು ತೃಣಕ್ಕೆ ಸಮಾನ

೧೯೭೭ರಲ್ಲಿ ಬಿಡುಗಡೆಯಾದ ಬಭ್ರುವಾಹನ ಚಿತ್ರದ ಈ ಹಾಡನ್ನು ಇಷ್ಟಪಡದವರೇ ವಿರಳ. ಸೀಸ ಪದ್ಯ ಎಂದು ಕರೆಯಲ್ಲಡುವ ಈ ಪದ್ಯ ಪ್ರಕಾರ ಹಳಗನ್ನಡ ಕಾವ್ಯಗಳಲ್ಲಿ ಆಗಲೀ ಚಂಪೂ ಕಾವ್ಯ ಗಳಲ್ಲಿ ಆಗಲಿ ಕಂಡುಬಂದಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಕನ್ನಡ ಸಾಹಿತ್ಯದಲ್ಲಿ ಈ ಸೀಸ ಪ್ರಕಾರದ ಮೊದಲ ರೂಪವನ್ನು ಹನ್ನರಡನೆಯ ಅನುಭಾವ​ ಹಾಗೂ ಅಧ್ಯಾತ್ಮಿಕ ಗೀತೆಗಳಲ್ಲಿ ಕಾಣುತ್ತೇವೆ. ಛಂದೋವಿಕಾಸ​ ಕೃತಿಯಲ್ಲಿ ಡಾ.ಕರ್ಕಿ ಯವರು ಸೂಚಿಸುವಂತೆ ಜಾನಪದದಲ್ಲಿ ಅಂಶಗಣ ರೂಪದಲ್ಲಿದ್ದ ಇದು ಹನ್ನೆರಡನೆಯ ಶತಮಾನದಲ್ಲಿ ಮಾತ್ರಾಗಣ ಬಂಧವಾಗಿ ಪರಿವರ್ತನೆಯಾಗಿರಬೇಕು.

ಮಾತ್ರಾಗಣ , ಅಕ್ಷರಗಣ ಮತ್ತು ಅಂಶಗಣಗಳ ಬಗ್ಗೆ. ಸ್ಥೂಲವಾಗಿ ಹೇಳುವದಾದರೆ,

ಮಾತ್ರಾಗಣ
ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬಹುದು.

ಮಾತ್ರೆ
ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಎಂಬ ಮಾನದಿಂದ ಅಳೆಯಲಾಗುವುದು.

ಲಘು
ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ( U) ಎನ್ನುವರು.

ಗುರು
ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ( – ) ಎಂದು ಕರೆಯುವರು.

ಪ್ರಸ್ತಾರ
ಲಘು ಗುರುಗಳನ್ನು ಗುರುತಿಸುವ ಕ್ರಿಯೆಯನ್ನು ಪ್ರಸ್ತಾರ ಹಾಕುವುದು ಎನ್ನುವರು.

ಅಕ್ಷರಗಣ
ಅಕ್ಷರಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಕ್ಷರಗಣ.

ಮೂರು ಮೂರು ಅಕ್ಷರಗಳಿಗೆ ಒಂದೊಂದರಂತೆ ಗಣ ವಿಂಗಡಣೆ ಮಾಡಲಾಗುವುದು. ಪದ್ಯದ ಸಾಲುಗಳಲ್ಲಿರುವ ಎಲ್ಲ ಅಕ್ಷರಗಳೂ ಗಣಗಳಾಗಿ ವಿಂಗಡಿಸಲ್ಪಡಬೇಕೆಂಬ ನಿಯಮವಿಲ್ಲ. ಗಣ ವಿಂಗಡಣೆಯ ನಂತರ ಒಂದು ಅಥವಾ ಎರಡು ಅಕ್ಷರಗಳು ಶೇಷವಾಗಿ ಉಳಿಯಬಹುದು.

ಅಕ್ಷರಗಣಗಳಲ್ಲಿ ಒಟ್ಟು ಎಂಟು ವಿಧಗಳಿವೆ.

ಯಗಣ
ಮಗಣ
ತಗಣ
ರಗಣ
ಜಗಣ
ಭಗಣ
ನಗಣ
ಸಗಣ

ಯಮಾತಾರಾಜಭಾನ ಸಲಗಂ ಸೂತ್ರ
ಅಕ್ಷರಗಣಗಳನ್ನು ಯಮಾತಾರಾಜಭಾನಸಲಗಂ ಎಂಬ ಸೂತ್ರದ ಆಧಾರದಿಂದ ನಿರ್ಣಯಿಸಬಹುದಾಗಿದೆೆ.

ಸೂತ್ರದ ಮೊದಲ ಅಕ್ಷರ ಒಂದೊಂದು ಗಣವನ್ನು ಪ್ರತಿನಿಧಿಸುತ್ತದೆ.

ಅಕ್ಷರಗಣದಲ್ಲಿ ಬರುವ ಎಂಟು ಗಣಗಳನ್ನು ಗುರುತಿಸಲು ಕೆಳಗಿನ ಪದ್ಯವು ಸಹಕಾರಿಯಾಗಿದೆ.

ಗುರು ಲಘು ಮೂರಿರೆ ಮ – ನ – ಗಣ
ಗುರು ಲಘು ಮೊದಲಲ್ಲಿ ಬರಲು ಭ – ಯ – ಗಣಮೆಂಬರ್
ಗುರು ಲಘು ನಡುವಿರೆ ಜ – ರ – ಗಣ
ಗುರು ಲಘು ಕೊನೆಯಲ್ಲಿ ಬರಲು ಸ – ತ – ಗಣಮಕ್ಕುಂ

ಅಂಶಗಣ
ಅಂಶಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಅಂಶಗಣ.ಇದನ್ನು ನಾಗವರ್ಮನು “ಕರ್ಣಾಟಕ ವಿಷಯಜಾತಿ” ಎಂದೂ ಹಾಗೇ ಜಯಕೀರ್ತಿಯು “ಕರ್ಣಾಟಕವಿಷಯಭಾಷಾಜಾತಿ” ಎಂದೂ ಕರೆದಿದ್ದಾರೆ.
ಇದು ಅಪ್ಪಟ ದೇಸೀ ಛಂದಸ್ಸಿನ ಪ್ರಕಾರವಾಗಿದೆ.
ಒಂದು ಅಂಶ ಎಂದರೆ ಒಂದು ಮಾತ್ರಾ ಕಾಲವೂ ಆಗಬಹುದು, ಅಥವಾ ಎರಡು ಮಾತ್ರಾಕಾಲವೂ ಆಗಬಹುದು. ಗಣದ ಆರಂಭದಲ್ಲಿ ಮಾತ್ರ ಎರಡು ಮಾತ್ರೆಗಳಿಗೆ ಒಂದು ಅಂಶವನ್ನು ಪರಿಗಣಿಸಬೇಕು.
ಉದಾ:- “ಕವಿತೆ” ಈ ಶಬ್ದದಲ್ಲಿ ಎರಡು ಅಂಶಗಳಾಗುತ್ತವೆ. ‘ಕವಿ’ ಎಂಬುದು ಒಂದು ಅಂಶವಾದರೆ ‘ತೆ’ ಎಂಬುದು ಇನ್ನೊಂದು ಅಂಶವಾಗುತ್ತದೆ,
ಇದರಲ್ಲಿ ಮೂರು ವಿಧ. ಅವನ್ನು ಬ್ರಹ್ಮಗಣ,ವಿಷ್ಣುಗಣ,ರುದ್ರ ಗಣ ಎಂದು ಕರೆಯುವರು.

ಪ್ರಾರಂಭದಲ್ಲಿ ಇದನ್ನು ಕಲಿಯುವುದು ಬಹಳ ಕಠಿಣ ಎನ್ನುವುದು ತಿಳಿದ ಸಂಗತಿ. ಭೌತಶಾಸ್ತ್ರ ಗಣಿತಶಾಸ್ತ್ರದ ನಿಯಮಗಳಿದ್ದಂತೆ. ಮಕ್ಕಳಿಗೆ ಹೇಗೆ ಗಣಿತ ಎಂದರೆ ಕಬ್ಬಿಣದ ಕಡಲೆಯೋ ಹಾಗೆ ಭಾಷೆ ಕಲಿಯುವರಿಗೆ ಇದು ಕಬ್ಬಿಣದ ಕಡಲೆಯೇ ಸರಿ.ಬಹುಶಃ ಎಂಟನೆಯ ತರಗತಿಯಲ್ಲಿ ಪ್ರಸ್ತಾರ ಹಾಕುವುದನ್ನು ಮೊದಲು ಕಲಿಸಲಾಗಿರಬೇಕು ಪದವಿ ಬರುವವರೆಗೂ ಒಂದು ಪ್ರಸ್ತಾರವನ್ನು ಸರಿಯಾಗಿ ಹಾಕಿಲ್ಲ ಎಂದು ಇಂದು ಹೇಳಿಕೊಳ್ಳಲು ಯಾವ ನಾಚಿಕೆಯೂ ಬೇಡ.ಇರಲಿ ನಂತರ ಇದು ಯಾಕೆ ಬರುತ್ತಿಲ್ಲ ಬರಲೇ ಬೇಕು ಎಂದು ಬೆನ್ನು ಹತ್ತಿದಾಗ ಒಳಗಿಳಿಯಲು ಸಾಧ್ಯವಾಗಿ ಹಿಡಿತ ಬರಲಾರಂಭಿಸಿತು. ಸೀಸ ಪದ್ಯದ ಲಕ್ಷಣಗಳನ್ನು ನಾಗವರ್ಮ ಈ ಕೆಳಗಿನಂತೆ ವಿವರಿಸಿದ್ದಾನೆ :

ಪುರಹೂತ ಗಣಗಳಾರುಂ
ಸರಸಿಜ ಭವಗಣಗಳೆರಡು ಸಂಧಿಸಿ ಬಕ್ಕುಂ |
ಚರಣಕ್ಕೆ ಸೀಸದಂತದೊ
ಳೊರಗಿಂತಹ ಸರಳ ತನ್ನೊಳೊಪ್ಪುವ ತರದಿಂ.||

ಇದರಲ್ಲಿ ಹೇಳಿದಂತೆ, ನಾಲ್ಕು ಪಾದಗಳುಳ್ಳ ಸೀಸದ ಪ್ರತಿ ಚರಣಗಳಲ್ಲಿ ಪ್ರಾರಂಭದಲ್ಲಿ ೬ ವಿಷ್ಣು ಗಣಗಳು,ಕೊನೆಗೆ ೨ ಬ್ರಹ್ಮಗಣಗಳು ಬರುತ್ತವೆ.

ಸೀಸ ಪದ್ಯ ಮೂಲತಃ ಶೀರ್ಷಕ ಎಂಬ ಪದದಿಂದ ಹುಟ್ಟಿಕೊಂಡಿದೆ. ಶೀರ್ಷಕ ಹೆಸರಿನ ಪ್ರಾಕೃತ ಭಾಷೆಯ ಮಾತ್ರಾವೃತ್ತವೊಂದು ನಾಟ್ಯಶಾಸ್ತ್ರ, ಜಾನಾಶ್ರಯೀ, ವೃತ್ತಜಾತಿಸಮುಚ್ಚಯ ಸ್ವಯಂಭುಚ್ಛಂದಸ್ಸು ,ಹೇಮಚಂದ್ರಕೃತ ಛಂದೋನುಶಾಸನ ಇವುಗಳಲ್ಲಿ ಲಕ್ಷಣಿಸಲ್ಪಟ್ಟಿದೆ.

ಶೀರ್ಷಕ ಕ್ರಮೇಣ ಸೀಸ ಪದ್ಯವಾಗಿರಬಹುದು ಎಂದು ಹೇಳಲಾಗುತ್ತದೆ.

ಆದರೊಂದು ಮಾತು. ಈ ಸೀಸ ಪದ್ಯ ತೆಲುಗಿನ ಪ್ರಭಾವದಿಂದ ಕನ್ನಡಕ್ಕೆ ಪ್ರವೇಶ ಪಡೆದಿದೆ ಎನ್ನುವ ಸಂಗತಿಯಲ್ಲಿ ವಾಸ್ತವಾಂಶಗಳಿವೆ.ತೆಲುಗಿನ ಯಾವುದೇ ಪೌರಾಣಿಕ ಚಿತ್ರಗಳನ್ನು ನೋಡಿ. ಅಲ್ಲಿ ಸೀಸ ಪದ್ಯಗಳಿಗೆ ಮಹತ್ವದ ಸ್ಥಾನ.
ಶ್ರೀ ಕೃಷ್ಣ ಪಾಂಡವೀಯಂ,ಶ್ರೀ ಕೃಷ್ಣಾರ್ಜುನ ಯುದ್ಧಮು,ಪಾಂಡವ ವನವಾಸಮು,ಮುಂತಾದ ತೆಲುಗು ಚಿತ್ರಗಳ ಸೀಸ ಪದ್ಯಗಳು ನಮ್ಮ ಭಾಗದ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.

ಬಸವ ಯುಗ ಹರಿದಾಸ ಯುಗಗಳಲ್ಲಿ ಈ ಸೀಸ ತನ್ನ ಪ್ರಭಾವ ಹೊಂದಿದೆ ಎಂದು ಛಂದಸ್ಸಕಾರರು ಅಭಿಪ್ರಾಯ ಪಡುತ್ತಾರೆ. ಅದನ್ನು ಅವರು’ ಕಿರಿ ಸೀಸ ‘ಎಂದು ಕರೆದರು. ಕಿರಿ ಸೀಸದ ಉದಾಹರಣೆಗೆ ನಿಜಗುಣ ಶಿವಯೋಗಿ ಗಳ ಈ ಸಾಲುಗಳನ್ನು ನೋಡಿ.

ನಿಂದಿಸಿ ನುಡಿಯದಿರಾರನು ಮನಸಿಗೆ
ಬಂದಂತೆ ನಡೆಯರಿಹದಲ್ಲಿ
ಕುಂದುವಡೆಯದಿರು ಕಾಮಾದಿಗಳನು ಜೈ
ಸೆಂದು ಕೈ ವಿಡಿದಿಹನು ಗ್ರಹಿಸುವ |

ಆಧುನಿಕ ಕನ್ನಡಕ್ಕೆ ಬಂದಾಗ ಡಿವಿಜಿ, ಕುವೆಂಪು, ಬೆಂದ್ರೆಯವರು ಸೀಸ ಪದ್ಯ ಗಳ ಲಕ್ಷಣಗಳುಳ್ಳ ಕವಿತೆಗಳನ್ನು ರಚಿಸಿರುವದನ್ನು ಕಾಣಬಹುದು.

ಅವರ ‘ಶ್ರೀ ರಾಮಪರೀಕ್ಷಣಂ’ ‘ಅಂತಃಪುರಗೀತೆಗಳು’ ‘ಶೃಂಗಾರ ಮಂಗಳಂ’ ಮೊದಲಾದ ಕೃತಿಗಳಲ್ಲಿ ವಿಫುಲವಾಗಿ ಸೀಸ ಪದ್ಯಗಳು ಸಿಗುತ್ತವೆ.

ಅಂತಃಪುರ ಗೀತೆಗಳ ಈ ಕವಿತೆ :
ಏನೀ ಮಹಾನಂದವೇ – ಓ ಭಾಮಿನೀ |
ಏನೀ ಸಂಭ್ರಮದಂದವೇ – ಬಲ್ಚಂದವೇ ||ಪ||

ಏನೀ ನೃತ್ತಾಮೋದ – ಏನೀ ಮೌರಜನಾದ |
ಏನೀ ಜೀವೋನ್ಮಾದ-ವೇನೀ ವಿನೋದ || ಅ.ಪ||

ಢಕ್ಕೆಯ ಶಿರಕೆತ್ತಿ – ತಾಳಗೋಲಿಂ ತಟ್ಟಿ |
ತಕ್ಕಿಟ ಧಿಮಿಕಿಟ – ತಕಝಣುರೆನಿಸಿ ||
ಕುಕ್ಕುತೆ ಚರಣವ – ಕುಲುಕುತೆ ಕಾಯವ |
ಸೊಕ್ಕಿದ ಕುಣಿತವ – ಕುಣಿವೆ ನೀನೆಲೆ ಬಾಲೆ ||೧||

ಆರೋ ನಿನ್ನಯ ಹೃದಾ-ಗಾರದಿ ನರ್ತಿಸಿ|
ಮಾರ ಶೂರತೆಯ ಪ್ರ-ಚಾರಿಸುತಿರ್ಪನ್ ||
ಸ್ಮೇರವದನ ನಮ್ಮ – ಚೆನ್ನಕೇಶವರಾಯ- |
ನೋರೆಗಣ್ಣಿಂ ಸನ್ನೆ – ತೋರುತಲಿಹನೇನೆ ||೨||

ಕುವೆಂಪು ಅವರ ಸುಪ್ರಸಿದ್ಧ ಸೋಮನಾಥಪುರದ ದೇವಾಲಯ ಕವಿತೆಯಲ್ಲಿ ಸೀಸ ಪದ್ಯದ ಲಕ್ಷಣಗಳು ಇವೆ ಎಂದು ಗುರುತಿಸಲಾಗಿದೆ.

ಬಾಗಿಲೊಳು ಕೈಮಗಿದು ಒಳಗೆ ಬಾ, ಯಾತ್ರಿಕನೆ,
ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು !
ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು
ಧನ್ಯತೆಯ ಕುಸುಮಗಳನರ್ಪಿಸಿಲ್ಲಿ.

ಛಂದಸ್ಸಿನ ಪ್ರಯೋಗಶೀಲತೆಯಲ್ಲಿ ಬೇಂದ್ರೆಯವರಂತೂ ಅಗ್ರಗಣ್ಯರು. ಅವರ ಉಯ್ಯಾಲೆ ಕವನ ಸಂಕಲನದಲ್ಲಿ ಸೀಸ ಪದ್ಯಗಳಿಗೆ ಮೀಸಲಾದ ತರಂಗ ಎನ್ನುವ​ ವಿಭಾಗವಿದೆ. ಅದರೊಳಗಿನ ‘ ಎಣಿಕೆ ‘ ಕವನದ ಈ ಕೆಳಗಿನ ಸಾಲುಗಳು ನಿಮ್ಮ ಅವಗಾಹನೆಗಾಗಿ :

ನಡುಹಗಲಿನಲಿ ಗಮ್ಮನೆಣಿಕೆ ಇಣುಕುವದೊಂದು,
“ಇಂದು ಬಂದದ್ದು ಹೋದದ್ದು ಏನು ?”
ಬರಿಗೈಲಿ ಮೊಳಹಾಕಿ ಬಯಲ ಸುತ್ತಿದೆನಷ್ಟೆ !
” ಹಾರುತ್ತ ಹೊರಟಿರುವೆನೆತ್ತ ನಾನು ? “


೦-೦-೦-೦

ಕೃತಜ್ಞತೆ:

ಛಂದೋವಿಕಾಸ : ಡಾ.ಡಿ.ಎಸ್.ಕರ್ಕಿ
ಕನ್ನಡ ಛಂದಸ್ಸು : ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ.
ನಾದಲೀಲೆ : ದ.ರಾ.ಬೇಂದ್ರೆ
ಆಯ್ದ ಕವನಗಳು : ಕುವೆಂಪು.