ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನುಡಿ ಬಾಗಿನ – ಪುಸ್ತಕದ ಕುರಿತು

ಸಿ. ಎಸ್. ಭೀಮರಾಯ

ನುಡಿ ಬಾಗಿನ: ಎಚ್. ಎಸ್. ಆರ್. ಸಾಹಿತ್ಯ ವಿಮರ್ಶೆ ಮತ್ತು ಅನುವಾದ ಕೃತಿಗಳ ಕುರಿತು ಅಧ್ಯಯನ
ನುಡಿ ಬಾಗಿನ
ಸಂ: ಪ್ರೊ. ಅಮರೇಶ ನುಗಡೋಣಿ, ಪ್ರೊ. ವಿಕ್ರಮ ವಿಸಾಜಿ
ಪುಟ: 376, ಬೆಲೆ: 290/-
ಪ್ರಕಾಶನ: ಕಾವ್ಯಮನೆ ಪ್ರಕಾಶನ, ಕಲಬುರ್ಗಿ

ಪ್ರೊ. ಎಚ್. ಎಸ್. ರಾಘವೇಂದ್ರ ರಾವ್ ಕನ್ನಡ ಪ್ರಾಧ್ಯಾಪಕ, ವಿಮರ್ಶಕ, ವಿದ್ವಾಂಸ, ಸಂಸ್ಕೃತಿ ಚಿಂತಕ ಮತ್ತು ಅನುವಾದಕರಾಗಿ ಪರಿಚಿತರು. ಅವರು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಅಪಾರ ಪರಿಣತಿಯನ್ನು ಪಡೆದಿದ್ದು, ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಪ್ರೊ. ಎಚ್. ಎಸ್. ರಾಘವೇಂದ್ರ ರಾವ್

ಪ್ರಸ್ತುತ ‘ನುಡಿ ಬಾಗಿನ’ ಪ್ರೊ. ಎಚ್. ಎಸ್. ರಾಘವೇಂದ್ರ ರಾವ್ ಅವರ ಸಾಹಿತ್ಯ ವಿಮರ್ಶೆ ಮತ್ತು ಅನುವಾದ ಕೃತಿಗಳನ್ನು ಕುರಿತು ನಾಡಿನ ಅನೇಕ ವಿಮರ್ಶಕರು ಬರೆದ ಲೇಖನಗಳ ಬೃಹತ್ ಸಂಪುಟ. ಈ ಗ್ರಂಥ ಪ್ರೊ. ಅಮರೇಶ ನುಗಡೋಣಿ ಮತ್ತು ಡಾ. ವಿಕ್ರಮ ವಿಸಾಜಿಯವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಈ ಸಂಪುಟದಲ್ಲಿ ಎಸ್. ಎಫ್. ಯೋಗಪ್ಪನವರ್, ಶ್ರೀ ಹರ್ಷಕುಮಾರ ಕುಗ್ವೆ, ಗಿರೀಶ್ ಕಾಸರವಳ್ಳಿ, ಅಮರೇಶ ನುಗಡೋಣಿಯವರು ಎಚ್. ಎಸ್. ರಾಘವೇಂದ್ರ ರಾವ್ ಅವರೊಂದಿಗೆ ನಡೆಸಿದ ನಾಲ್ಕು ಪ್ರತ್ಯೇಕ ಸಂದರ್ಶನಗಳು ಮತ್ತು ಬೇರೆ ಬೇರೆ ವಿಮರ್ಶಕರು ಬರೆದಿರುವ ಮೂವತ್ತೈದು ವಿಮರ್ಶಾ ಲೇಖನಗಳು ಸಂಕಲಿತಗೊಂಡಿವೆ. ಈ ವಿಮರ್ಶಾ ಲೇಖನಗಳು ಎಚ್.ಎಸ್. ಆರ್. ಅವರ ಬರವಣಿಗೆಯ ಹಲವು ಆಯಾಮಗಳನ್ನು ತೋರುವಂತೆ ಕನ್ನಡ ಸಾಹಿತ್ಯ ವಿಮರ್ಶೆ ಮತ್ತು ಅನುವಾದದ ವಿಚಾರಗಳನ್ನು ಒಂದು ಮಟ್ಟದಲ್ಲಿ ಪ್ರತಿನಿಧಿಸುತ್ತವೆ. ಮುಖ್ಯವಾದ ಮಾತೆಂದರೆ ‘ನುಡಿ ಬಾಗಿನ’ವು ಎಚ್. ಎಸ್. ಆರ್. ಅವರಿಗೆ ಅರ್ಪಿಸಲಾದ ‘ಅಭಿನಂದನ ಗ್ರಂಥ’ವಲ್ಲ. ಇದೊಂದು ಗಂಭೀರ ಸ್ವರೂಪದ ಅಧ್ಯಯನ ಗ್ರಂಥ.

ಕನ್ನಡದ ಪ್ರಮುಖ ವಿಮರ್ಶಕ ಮತ್ತು ಅನುವಾದಕರಲ್ಲೊಬ್ಬರಾದ ಎಚ್. ಎಸ್. ರಾಘವೇಂದ್ರ ರಾವ್ ಮೂಲತಃ ಚಿತ್ರದುರ್ಗ ಜಿಲ್ಲೆಯವರು. ಎಚ್. ಎಸ್. ಆರ್. ಅವರು ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜು, ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಮತ್ತು ಮೈಸೂರಿನ ಸೆಂಟ್ರಲ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್‍ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ವೃತ್ತಿ ಜೀವನಕ್ಕೆ ಘನತೆ ತಂದುಕೊಟ್ಟವರು. ಅವರು ಬೇಂದ್ರೆ, ಕುವೆಂಪು ಮತ್ತು ಪು.ತಿ.ನ. ಅವರ ಕಾವ್ಯದ ತೌಲನಿಕ ಅಧ್ಯಯನಕ್ಕಾಗಿ ಪಿಎಚ್. ಡಿ. ಪಡೆದಿದ್ದಾರೆ.

ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹ-ಮೊದಲಾದ ಪ್ರಕಾರಗಳಲ್ಲಿ ತೊಡಗಿಸಿಕೊಂಡಿರುವ ಎಚ್. ಎಸ್. ರಾಘವೇಂದ್ರ ರಾವ್ ಇದುವರೆಗೆ ಮೂವತ್ತೈದಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ವಿದ್ವತ್ತು, ಪ್ರತಿಭೆ, ಜೀವನದೃಷ್ಟಿಗಳು, ಸಾಹಿತ್ಯ ವಿಮರ್ಶೆ ಮತ್ತು ಅನುವಾದಗಳ ಹೊರತಾಗಿ ಪ್ರವಾಸಕಥನ, ವಿಚಾರ ಸಾಹಿತ್ಯದ ಪ್ರಕಾರಗಳಲ್ಲೂ ಅವರ ಮಹತ್ವದ ಕೃತಿಗಳು ಪ್ರಕಟವಾಗಿವೆ. ನೇರ, ದಿಟ್ಟ ಮತ್ತು ವಸ್ತುನಿಷ್ಠ ವಿಮರ್ಶೆಗೆ ಹೆಸರಾದ ಎಚ್.ಎಸ್. ಆರ್. ಹೊಸ ತುಡಿತ ಮತ್ತು ಅಭಿವ್ಯಕ್ತಿ ವಿಧಾನಗಳನ್ನು ರೂಪಿಸಿದವರು. ಪ್ರಸ್ತುತ ದೇಶದ ಸಮಸ್ಯೆಗಳಾದ ಧರ್ಮ, ಜಾತೀಯತೆ, ಭ್ರಷ್ಟಾಚಾರಗಳ ಕುರಿತು ಗಂಭೀರವಾಗಿ ಅವರು ಮಾತನಾಡುವವರಾಗಿದ್ದಾರೆ. ಕವಿತೆ, ಕಾದಂಬರಿ, ಕಥೆಗಳಂಥ ಸೃಜನ ಕೃತಿಗಳನ್ನು ಬರೆಯದೆ ಕೇವಲ ತಮ್ಮ ವಿಮರ್ಶಾ ಕೃತಿಗಳು ಮತ್ತು ಅನುವಾದ ಕೃತಿಗಳಿಂದಲೆ ಎಚ್. ಎಸ್. ರಾಘವೇಂದ್ರ ರಾವ್ ಅವರಷ್ಟು ಪ್ರಸಿದ್ಧಿ ಪಡೆದವರು ಬಹಳ ವಿರಳ. ಕನ್ನಡದ ವಿಮರ್ಶೆಗೆ ಶಿಸ್ತಿನ ರೂಪವನ್ನು ಕೊಡುವಲ್ಲಿ ಅವರ ಕೊಡುಗೆ ಅಪಾರವಾದುದು.

ವಿಮರ್ಶೆ: ಎಚ್. ಎಸ್. ಆರ್. ಈವರೆಗೆ ವಿಮರ್ಶಾ ಕ್ಷೇತ್ರದಲ್ಲಿ ಹತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ವಿಶ್ಲೇಷಣೆ’, ‘ನಿಲುವು’, ‘ಪ್ರಗತಿಶೀಲತೆ’, ‘ಹಾಡೆ ಹಾದಿಯ ತೋರಿತು’, ‘ತರು ತಳೆದ ಪುಷ್ಪ’, ‘ನಮಸ್ಕಾರ’, ‘ಸಂಗಡ’, ‘ಚಕ್ರವರ್ತಿಯ ಬಟ್ಟೆಗಳು’, ‘ಕಣ್ಣ ಹನಿಕೆಗಳೆ ಕಾಣಿಕೆ’, ‘ಬಗೆ’ ವಿಮರ್ಶಾ ಕೃತಿಗಳಲ್ಲಿ ವಿಮರ್ಶೆಯೂ ಸೃಜನಶೀಲ ಕೃತಿಯಷ್ಟೇ ಮಹತ್ವದ್ದು ಎನ್ನುವುದನ್ನು ಅವರು ತೋರಿಸಿದ್ದಾರೆ. ಅವರ ವಿಮರ್ಶಾ ಬರಹಗಳಲ್ಲಿ ಕಾಣುವುದು ಹಲವು ಭಾಷೆಗಳ, ದೇಶಗಳ ಸಾಹಿತ್ಯ ಮತ್ತು ಹಲವು ವಿಮರ್ಶಾ ಪಂಥಗಳ ಅಧ್ಯಯನದಿಂದ ಶ್ರೀಮಂತವಾಗಿರುವ ಮನಸ್ಸು.

ಅನುವಾದ: ‘ಬಾಲಮೇಧಾವಿ’ (ಜರ್ಮನ್ ಕಥೆಗಳು), ‘ಇರುವೆಗಳು ಮತ್ತು ಇತರ ಕಥೆಗಳು’ (ಗೋಪಿನಾಥ ಮೊಹಂತಿಯವರ ಒರಿಯಾ ಕಥೆಗಳು), ‘ಪ್ರೀತಿಸುವುದೆಂದರೆ’ ಎರಿಕ್ ಫ್ರಾಂ ಅವರ ‘ಆರ್ಟ್ ಆಫ್ ಲವಿಂಗ್’, (ಕೆ. ವಿ. ನಾರಾಯಣ ಅವರೊಂದಿಗೆ), ‘ಸಂಸ್ಕøತಿ ಸಂಗತಿ’ ಜಿಡ್ಡು ಕೃಷ್ಣಮೂರ್ತಿಯವರ (ದಿಸ್ ಮ್ಯಾಟರ್ ಆಫ್ ಕಲ್ಚರ್), ‘ಶಿಕ್ಷಣ ಮತ್ತು ಜೀವನ’, ಜಿಡ್ಡು ಕೃಷ್ಣಮೂರ್ತಿಯವರ ‘ಎಜುಕೇಷನ್ ಆ್ಯಂಡ್ ದಿ ಸಿಗ್ನಿಫಿಕೆನ್ಸ್ ಆಫ್ ಲೈಫ್’, ‘ಕಪ್ಪು ಕವಿತೆ’ (ನೂರು ಆಫ್ರೀಕನ್ ಕವಿತೆಗಳ ಅನುವಾದ), ‘ಮಂಜು ಮಣ್ಣು ಮೌನ’ (ಟೆಡ್ ಕೂಸರ್ ಅವರ ಕವಿತೆಗಳ ಅನುವಾದ), ‘ಹತ್ತು ದಿಕ್ಕಿನ ಬೆಳಕು’ (ವೈಚಾರಿಕ ಲೇಖನಗಳು), ‘ರಿಲ್ಕ್ ಕವಿತೆಗಳು’-ಹೀಗೆ ಅನುವಾದ ಕ್ಷೇತ್ರದಲ್ಲಿ ಎಚ್. ಎಸ್. ಆರ್. ಅವರು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಪಾಶ್ಚಾತ್ಯ ಸಾಹಿತ್ಯ ಕೃತಿಗಳನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿದ, ವ್ಯಕ್ತಿಯ ಮತ್ತು ಸಮಾಜದ ವಿಕಸನದಲ್ಲಿ ಗಾಢವಾಗಿ ಆಸಕ್ತಿ ಇರುವ ಮನಸ್ಸು ಇಲ್ಲಿ ಕೆಲಸ ಮಾಡಿರುವುದನ್ನು ಗಮನಿಸಬಹುದು. ಅವರು ಅನುವಾದ ಕಾರ್ಯವನ್ನು ಒಂದು ಗಂಭೀರ ವ್ರತವನ್ನಾಗಿ ಪರಿಗಣಿಸಿದ್ದಾರೆ. ಅವರು ಮಾಡಿರುವ ಕವಿತೆ ಮತ್ತು ಕಥೆಗಳ ಅನುವಾದಗಳು ಕನ್ನಡ ಕಾವ್ಯ ಮತ್ತು ಕಥನಗಳಿಗೆ ಬೇಕಾದ ಹೊಸ ಉತ್ಸಾಹ ಮತ್ತು ಹೊಸ ನೋಟಗಳನ್ನು ಒದಗಿಸುವ ಪ್ರೇರಣೆಯಿಂದ ರೂಪುಗೊಂಡಿವೆ. ಅವರು ಅಧ್ಯಾಪನ, ಉಪನ್ಯಾಸ ಮತ್ತು ಕಮ್ಮಟಗಳ ಮೂಲಕ ಯುವ ಲೇಖಕರಲ್ಲಿ ವಿಮರ್ಶೆಯ ವಿವೇಕವನ್ನು ಬಿತ್ತುವ, ಬೆಳೆಸುವ ಪ್ರಯತ್ನ ಮಾಡುತ್ತ ಮನ್ನಡೆದಿದ್ದಾರೆ.

ಸಂಪಾದಿತ ಕೃತಿಗಳು: ‘ಶತಮಾನದ ಕನ್ನಡ ಸಾಹಿತ್ಯ ವಿಮರ್ಶೆ’, ‘ಭೃಂಗಮಾರ್ಗ’, ‘ಅವಗಾಹ’, ‘ಪ್ರಾಚೀನ ಕಾವ್ಯಮಾರ್ಗ-1’, ಪ್ರಾಚೀನ ಕಾವ್ಯಮಾರ್ಗ-2’, ‘ಪ್ರಾಚೀನ ಕಾವ್ಯಮಾರ್ಗ-3,’ ‘ಇಂದಿನ ಕವಿತೆ’, ‘ಕನ್ನಡ ಶೈಲಿ ಕೈಪಿಡಿ ಸಹ ಲೇಖಕ’, ‘ಸಾಹಿತ್ಯ ವಿಮರ್ಶೆ-1994’, ‘ಸಾಹಿತ್ಯ ಸಂವಾದ’ –ಮುಂತಾದ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಅವರ ಸಂಪಾದಿತ ಕೃತಿಗಳೂ ಕೂಡ ಮೌಲಿಕವಾದವುಗಳೇ.

‘ನುಡಿ ಬಾಗಿನ’ ಗ್ರಂಥದಲ್ಲಿನ ವಿಮರ್ಶಾ ಲೇಖನಗಳು ಎಚ್. ಎಸ್. ರಾಘವೇಂದ್ರ ರಾವ್ ಅವರ ವ್ಯಕ್ತಿತ್ವ ಪರಿಚಯದೊಂದಿಗೆ ಸಾಹಿತ್ಯ ವಿಮರ್ಶಕರಾಗಿ ಮತ್ತು ಅನುವಾದಕರಾಗಿ ಮಾಡಿರುವ ಕೆಲಸಗಳನ್ನು ದಾಖಲಿಸಲು ಪ್ರಯತ್ನಿಸಿವೆ. ಈ ಗ್ರಂಥವನ್ನು ‘ವಿಮರ್ಶೆ ವಿಭಾಗ’, ‘ಅನುವಾದ ವಿಭಾಗ’ ಮತ್ತು ‘ಸಂದರ್ಶನ ವಿಭಾಗ’ಗಳೆಂದು ವಿಂಗಡಿಸಲಾಗಿದೆ.

ವಿಮರ್ಶೆ ವಿಭಾಗದಲ್ಲಿ ಸಿ. ಎನ್. ರಾಮಚಂದ್ರನ್ ಅವರ ‘ನವ್ಯರಾಗಿದ್ದೂ ನವ್ಯರಂತಿರದೆ’, ರಾಜೇಂದ್ರ ಚೆನ್ನಿಯವರ ‘ಅಭಿರುಚಿಯ ನಿರ್ಮಾಣವಾಗಿ ವಿಮರ್ಶೆ: ಎಚ್. ಎಸ್. ಆರ್. ಮಾದರಿ’, ಬಸವರಾಜ ಕಲ್ಗುಡಿಯವರ ‘ಆಧುನಿಕ ಕನ್ನಡ ವಿಮರ್ಶಾ ಪರಂಪರೆ ಮತ್ತು ಎಚ್. ಎಸ್. ಆರ್. ಅವರ ವಿಶಿಷ್ಟತೆ’, ರಹಮತ್ ತರೀಕೆರೆಯವರ ‘ಎಚ್ಚೆಸ್ಸಾರ್ ಸಾಹಿತ್ಯ ಚಿಂತನೆಯ ತಾತ್ವಿಕತೆ’, ಜಿ. ಗಂಗರಾಜು ಅವರ ‘ಎಚ್. ಎಸ್. ಆರ್. ಅವರ ವಿಮರ್ಶೆ ಮತ್ತು ಸಂಸ್ಕøತಿ ಚಿಂತನೆ’, ಆನಂದ ಝಂಜರವಾಡರ ‘ಕಾಡಿಗೆ ಬಂದ ರಾಜ ಋಷಿ’, ಕೆ. ಸತ್ಯನಾರಾಯಣರ ‘ತಾಯಿಗುಣದ ಪೋಷಕ, ಸಂಗಡಿಗನಾಗಿ ವಿಮರ್ಶಕ’, ಓ. ಎಲ್. ನಾಗಭೂಷಣ ಸ್ವಾಮಿಯವರ ‘ಪ್ರೀತಿಯ ಎಚ್. ಎಸ್. ಆರ್’, ಎಸ್. ಆರ್. ವಿಜಯಶಂಕರರ ‘ಜನ ಗಣ ಮನ,’ ಚಿಂತಾಮಣಿ ಕೊಡ್ಲೆಕೆರೆಯವರ ‘ಸಂಗಡ’, ಸಬಿತಾ ಬನ್ನಾಡಿಯವರ ‘ಚಕ್ರವರ್ತಿಯ ಬಟ್ಟೆಗಳು’ ಮೊದಲಾದ ವಿಮರ್ಶಕರು ಬರೆದ ವಿಮರ್ಶಾ ಲೇಖನಗಳು ಉಲ್ಲೇಖಾರ್ಹವಾಗಿವೆ.

ಅನುವಾದ ವಿಭಾಗದಲ್ಲಿ ರಾಜಲಕ್ಷ್ಮೀ ಎನ್. ಕೆ. ಅವರ ‘ತೆರೆಯ ಮಬ್ಬನು ಹರಿದ ಬೆಳಕು’, ಕೆ. ಸತ್ಯನಾರಾಯಣರ ‘ಜಿ. ಕೆ. ಚಿಂತನೆ’, ಅರುಣ ಜೋಳದಕೂಡ್ಲಿಗಿಯವರ ‘ಕ್ಲಾಸಿಕಲ್ ಕನ್ನಡ ವೆಬ್‍ಸೈಟಿನ ಎಚ್. ಎಸ್. ಆರ್. ಬರಹಗಳ ಸ್ವರೂಪ ಮತ್ತು ಮಹತ್ವ’, ಓ.ಎಲ್. ನಾಗಭೂಷಣ ಸ್ವಾಮಿಯವರ ‘ಮಂಜು, ಮಣ್ಣು, ಮೌನ’, ಪುರುಷೋತ್ತಮ ಬಿಳಿಮಲೆಯವರ ‘ಕನ್ನಡದ ಭವಿಷ್ಯಕ್ಕೆ ಬರೆದ ಮುನ್ನುಡಿ ಆಫ್ರೀಕಾದ ಕನ್ನಡ ಹಾಡುಗಳು’, ಶೂದ್ರ ಶ್ರೀನಿವಾಸರ ‘ಕಪ್ಪು ಕವಿತೆ’, ಸುರೇಶ ನಾಗಲಮಡಿಕೆಯವರ ‘ಆಫ್ರೀಕಾದ ಬಿದರಿನಲ್ಲಿ ಕನ್ನಡದ ಗಾನ: ಕಪ್ಪು ಕಾವ್ಯ’-ಮುಂತಾದ ವಿಮರ್ಶಕರು ಬರೆದ ವಿಮರ್ಶಾ ಲೇಖನಗಳಿವೆ. ಎಚ್.ಎಸ್. ಆರ್. ಕನ್ನಡದಿಂದ ಇಂಗ್ಲಿಷಿಗೆ, ಇಂಗ್ಲಿಷ್‍ದಿಂದ ಕನ್ನಡಕ್ಕೆ ನೀರು ಹರಿದಂತೆ ಸಮರ್ಥವಾಗಿ ಅನುವಾದ ಮಾಡಬಲ್ಲರು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳ ಸೂಕ್ಷ್ಮ ಪರಿಜ್ಞಾನದ ಜೊತೆ, ವಿಮರ್ಶಕನ ತೀಕ್ಷ್ಣ ಒಳಗಣ್ಣನ್ನು ಅಧ್ಯಯನ ಅನುಭವಗಳಿಂದಾಗಿ ಅವರು ಬೆಳೆಸಿಕೊಂಡಿದ್ದಾರೆ.

ಸಂದರ್ಶನ ವಿಭಾಗದಲ್ಲಿ ಎಸ್. ಎಫ್. ಯೋಗಪ್ಪನವರ್ ನಡೆಸಿದ ಸಂದರ್ಶನ ‘ಅವಸಾನದಂಚಿನ ಅಮೃತ ಗರುಡ ಮಾತು-ಮಂಥನ’, ಶ್ರೀ ಹರ್ಷಕುಮಾರ್ ಕುಗ್ವೆಯವರು ನಡೆಸಿದ ಸಂದರ್ಶನ ‘ಸಾಮಾಜಿಕ ನ್ಯಾಯವನ್ನು ಬಲಿಪಶು ಮಾಡುವುದು ಸಲ್ಲದು’, ಅಮರೇಶ ನುಗಡೋಣಿಯವರು ನಡೆಸಿದ ಸಂದರ್ಶನ ‘ಎಚ್.ಎಸ್. ಆರ್. ಅವರೊಂದಿಗೆ ಮಾತುಕತೆ’, ಗಿರೀಶ್ ಕಾಸರವಳ್ಳಿಯವರು ನಡೆಸಿದ ಸಂದರ್ಶನ ‘ಕಲೆ, ಸಾಹಿತ್ಯ, ಸಿನೆಮಾ…… ಇತ್ಯಾದಿ’ ಲೇಖನಗಳಲ್ಲಿ ಎಚ್. ಎಸ್. ಆರ್. ಅವರ ವ್ಯಾಪಕವಾದ ಅಧ್ಯಯನ, ವಿಭಿನ್ನ ಆಸಕ್ತಿ, ಸಾಮಾಜಿಕ ಕಾಳಜಿ, ಸಂಶೋಧನ ದೃಷ್ಟಿ, ಅರ್ಥಪೂರ್ಣವಾದ ವಿವೇಚನೆ, ಆಧಾರಸಹಿತವಾದ ಚರ್ಚೆ, ತೌಲನಿಕ ವಿಮರ್ಶೆ ಇತ್ಯಾದಿ ವಿಷಯಗಳು ತಿಳಿದುಬರುತ್ತವೆ. ಸಾಹಿತ್ಯ ವಿಮರ್ಶಕರಾಗಿ, ಅನುವಾದಕರಾಗಿ ಮತ್ತು ಸಂಸ್ಕೃತಿ ಚಿಂತಕರಾಗಿ ಎಚ್. ಎಸ್. ಆರ್. ಅವರು ಮಾಡಿರುವ ಸಾಧನೆಗಳು ಈ ಸಂಪುಟದಲ್ಲಿ ದಾಖಲಾಗಿವೆ. ಅವರ ಸಾಹಿತ್ಯಿಕ ವಿಮರ್ಶೆ ಮತ್ತು ಅನುವಾದ ಕೃತಿಗಳ ವೈಶಿಷ್ಟ್ಯತೆಗಳನ್ನು ಕುರಿತು ಇಲ್ಲಿನ ಲೇಖನಗಳು ತೆರೆದಿಟ್ಟಿವೆ.

ಎಚ್. ಎಸ್. ಆರ್. ಅವರು ನವೋದಯ, ಪ್ರಗತಿಶೀಲ, ನವ್ಯ ಮತ್ತು ನವ್ಯೋತ್ತರ ಸಾಹಿತ್ಯದ ಬಗ್ಗೆ ವಿಮರ್ಶಿಸಿದ್ದಾರೆ. ನವ್ಯ ಪಂಥದ ನಿಲುವಿನಿಂದ ಮೊದಲುಗೊಂಡ ಅವರ ಆಲೋಚನಾಕ್ರಮ ವ್ಯಕ್ತಿಕೇಂದ್ರಿತ, ವಸ್ತುನಿಷ್ಠ ಎಂಬ ಬಗೆಯ ನಿಷ್ಠುರ ನಿಲುವುಗಳು ಪರಂಪರೆ, ಸಮಷ್ಟಿ ಪ್ರಜ್ಞೆ, ಸಾಂಸ್ಕೃತಿಕ ಬಹುತ್ವಗಳನ್ನು ಒಳಗೊಂಡ ಪಳಗಿದ ದಾರಿಯಾಗಿದೆ. ಅವರ ವಿಮರ್ಶಾ ಕೃತಿಗಳಲ್ಲಿ ರಾಜಕೀಯ, ತತ್ವಶಾಸ್ತ್ರ, ಮಾನವಶಾಸ್ತ್ರ, ಸಾಮಾಜಿಕ ಮತ್ತು ಸಾಂಸ್ಕøತಿಕ ನೆಲೆಯಲ್ಲಿ ಕೃತಿಯನ್ನು ಬೆಲೆಗಟ್ಟುವ ವಿಧಾನವನ್ನು ಕಾಣುತ್ತೇವೆ. ಸಮಕಾಲೀನ ಸಮಸ್ಯೆಗಳಿಗೆ ಅಗತ್ಯವಾಗಿರುವ ಮಾನವತಾ ಆಶಯಗಳನ್ನು ಸಾಹಿತ್ಯ ಕೃತಿಗಳ ಅಧ್ಯಯನ ಮತ್ತು ವಿಶ್ಲೇಷಣೆಗಳ ಮೂಲಕ ಅವರು ಅನಾವರಣಗೊಳಿಸುತ್ತಾರೆ. ಅವರ ವಿಮರ್ಶಾ ಲೇಖನಗಳಲ್ಲಿ ವಿಮರ್ಶೆ ಮತ್ತು ಸಂಶೋಧನೆ ಹದವಾಗಿ ಬೆರೆತಿದೆ. ಕೃತಿಯಲ್ಲಿ ಅಂತರ್ಗತವಾಗಿರುವ ಸಮಾಜ ಮತ್ತು ಸಂಸ್ಕøತಿಗಳನ್ನು ಅವರು ಅನೇಕ ಜ್ಞಾನ ಶಾಖೆ ಹಾಗೂ ವಿಮರ್ಶಾ ವಿಧಾನಗಳ ಸಹಾಯದಿಂದ ಶೋಧಿಸುತ್ತಾರೆ. ಅವರು ಭಾರತೀಯ ಕಾವ್ಯ ಮೀಮಾಂಸೆ ಮತ್ತು ಪಾಶ್ಚಾತ್ಯ ಕಾವ್ಯ ಮೀಮಾಂಸೆಗಳನ್ನು ಆಳವಾಗಿ ಅಧ್ಯಯನ ಮಾಡಿದ್ದಾರೆ. ಎಚ್. ಎಸ್. ರಾಘವೇಂದ್ರ ರಾವ್ ಅವರ ವಿಮರ್ಶಾ ಬೆಳವಣಿಗೆ ಒಂದು ಹಂತದಲ್ಲಿ ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆಯ ಬೆಳವಣಿಗೆಯೂ ಆಗಿದೆ. ವಸ್ತುನಿಷ್ಠತೆ ಅವರ ವಿಮರ್ಶೆಯಲ್ಲಿ ಎದ್ದು ಕಾಣುವ ಅಂಶ. ಹೊಸ ತಲೆಮಾರಿನ ಲೇಖಕರ ಬಗೆಗಿನ ವಿಮರ್ಶಾತ್ಮಕ ಬರಹಗಳು ಮತ್ತು ನೂತನ ಲೇಖಕರ ಕೃತಿಗಳಿಗೆ ಬರೆದ ಮುನ್ನುಡಿಗಳೂ ಸೇರಿದಂತೆ ಎಚ್. ಎಸ್. ಆರ್. ಹೊಸ ಬರಹಗಾರರನ್ನು ಕನ್ನಡದಲ್ಲಿ ಬಹು ಎಚ್ಚರದಿಂದ ಗಮನಿಸುತ್ತ ಬಂದ ವಿಮರ್ಶಕರು. ಅವರು ಹೊಸ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುವುದರೊಂದಿಗೆ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಸಾಹಿತ್ಯ ಬೆಳೆಯಲು ಅಗತ್ಯವಾದ ವಾತಾವರಣ ಸೃಷ್ಟಿಗೆ ನೆರವಾಗಿ ವಿವೇಚನೆಯಿಂದ ತರುಣ ಪ್ರತಿಭೆಯನ್ನು ಗುರುತಿಸುವುದು ಪ್ರತಿಯೊಬ್ಬ ವಿಮರ್ಶಕನ ಸಾಂಸ್ಕøತಿಕ ಜವಾಬ್ದಾರಿ. ಹಿರಿಯ ಲೇಖಕರಾಗಿ ಕಿರಿಯರಿಗೆ ಮಾರ್ಗದರ್ಶನ ಮಾಡುವುದು ತಮ್ಮ ಕರ್ತವ್ಯ ಎಂದು ಅವರು ಭಾವಿಸಿಕೊಂಡಿದ್ದಾರೆ. ಅದೇ ರೀತಿ ಅವರು ಹಿಂದಿನ ಸಾಹಿತ್ಯವನ್ನು ನಿರಂತರವಾಗಿ ಪುನರ್ ಅಧ್ಯಯನಕ್ಕೂ ಒಳಪಡಿಸುತ್ತಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಸಂಬಂಧಪಟ್ಟ ಪ್ರಚಲಿತ ಸಮಸ್ಯೆಗಳನ್ನು ಕುರಿತು, ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದನ್ನು ನೋಡಿದರೆ, ಕನ್ನಡ ಕುರಿತಂತೆ ಅವರ ಚಿಂತನದ ಅರಿವಾಗದಿರದು. ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡಗಳನ್ನು ಅವುಗಳ ಮೂಲಕ್ಕಿಳಿದು ಅಧ್ಯಯನ ಮಾಡಿದವರಲ್ಲಿ ಎಚ್. ಎಸ್. ಆರ್. ಅವರ ಅರ್ಹತೆ ಬಹಳ ದೊಡ್ಡದಾಗಿ ಕಾಣುತ್ತದೆ.

ಪ್ರೊ. ಎಚ್. ಎಸ್. ರಾಘವೇಂದ್ರ ರಾವ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ, ಡಾ. ಜಿ. ಎಸ್. ಶಿವರುದ್ರಪ್ಪ ಪ್ರಶಸ್ತಿ, ವಿ. ಎಂ. ಇನಾಂದಾರ್ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಎಲ್. ಬಸವರಾಜು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ಕುವೆಂಪು ಭಾಷಾಭಾರತಿ ಪ್ರಶಸ್ತಿ, ಬರಗೂರು ಪ್ರಶಸ್ತಿ, ಪ್ರೊ. ಎಲ್. ಎಸ್. ಶೇಷಗಿರಿ ರಾವ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಂದಿವೆ.

ಎಚ್. ಎಸ್. ಆರ್. ಅವರ ಓದು ಬಹು ವಿಸ್ತಾರವಾದದ್ದು. ಒಬ್ಬ ಶ್ರೇಷ್ಠ ವಿಮರ್ಶಕನಿಗೆ ಅಗತ್ಯವಾಗಿ ಇರಬೇಕಾದ ಬಹುಶ್ರುತತೆ, ವ್ಯುತ್ಪತ್ತಿಜ್ಞಾನಗಳು ಅವರಲ್ಲಿ ಮೇಳೈಸಿವೆ. ನಾಡಿನ ಪ್ರಮುಖ ವಿಮರ್ಶಕರು ಎಚ್. ಎಸ್. ಆರ್. ಅವರ ಸಾಹಿತ್ಯ ವಿಮರ್ಶೆ ಮತ್ತು ಅನುವಾದ ಕೃತಿಗಳ ಕುರಿತು ಬರೆದ ಇಲ್ಲಿನ ಲೇಖನಗಳು ತುಂಬಾ ಮೌಲ್ಯಯುತವಾಗಿವೆ. ಅವರ ಸಾಹಿತ್ಯ ವಿಮರ್ಶೆಯ ಸ್ವರೂಪ ಮತ್ತು ನಿಲುವುಗಳ ಸ್ವಂತಿಕೆ ಮತ್ತು ಖಚಿತತೆಯನ್ನು ಹಲವಾರು ವಿಮರ್ಶಕರು ವಸ್ತುನಿಷ್ಠವಾಗಿ ಗುರುತಿಸಿದ್ದನ್ನು ನಾವಿಲ್ಲಿ ಕಾಣುತ್ತೇವೆ. ಗಂಭಿರ ಅಧ್ಯಯನ ಕೈಗೊಳ್ಳಬಯಸುವ ಸಾಹಿತ್ಯದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಈ ಗ್ರಂಥ ಉಪಯುಕ್ತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

-ಸಿ. ಎಸ್. ಭೀಮರಾಯ (ಸಿಎಸ್ಬಿ)