ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಂತೋಷ ತಮ್ಮಯ್ಯ ಅವರ ಪುಸ್ತಕ ಸಮರ ಭೈರವಿ ವಿಮರ್ಶೆ ಶ್ರೀ ಎಸ್ಸಾರ್ ಎನ್ ಮೂರ್ತಿ ಅವರಿಂದ.
ಎಸ್.ಆರ್.ಎನ್. ಮೂರ್ತಿ
ಇತ್ತೀಚಿನ ಬರಹಗಳು: ಎಸ್.ಆರ್.ಎನ್. ಮೂರ್ತಿ (ಎಲ್ಲವನ್ನು ಓದಿ)


ನಮ್ಮ ಸೈನಿಕರ ಸಾಹಸ ಗಾಥೆ – ಸಮರ ಭೈರವಿ
ಯುದ್ಧ ಅಥವಾ ಸಮರಗಳ ಬಗ್ಗೆ ಇತಿಹಾಸಕಾರರುಗಳು ತರಹೇವಾರಿ ವ್ಯಾಖ್ಯಾನಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಲೇ ಇದ್ದಾರೆ. ಹೌದು ಸಮರದಿಂದ ಆಯಾ ದೇಶಕ್ಕೆ ನಷ್ಟ ಆಗೇ ಆಗುತ್ತದೆ ಮತ್ತು ಜೊತೆಗೆ ಲಾಭವೂ ಆಗುತ್ತದೆ. ಶತ್ರುಗಳು ಧಮನವಾದರೆ ಧನಕನಕ ಸ್ಥಿರತೆಯನ್ನು ಕಂಡುಕೊಳ್ಳುತ್ತದೆ ಆದರೆ ಯುದ್ಧದಾಹವಂತೂ ಆಗಬಾರದು. “ನಮ್ಮ ರಕ್ಷಣೆ – ನಮ್ಮ ಹೊಣೆ” ಎಂಬ ನೀತಿಯಿಂದ ದೇಶ ಸುಭಿಕ್ಷಯಾಗುವುದಂತೂ ಅಕ್ಷರಶಃ ಸತ್ಯ.ನಮ್ಮ ಇತಿಹಾಸ ಪರಂಪರೆಯನ್ನು ಗಮನಿಸಿದರೆ ರಾಜ್ಯದಾಹಕ್ಕಾಗಿ ವಿಸ್ತಾರವಾಗುವ ಹಂಬಲದಿಂದ ಮಾಡಿದ ಯುದ್ಧಗಳು ಎಂದೂ ಶಾಂತಿಯನ್ನು ಕಂಡಿಲ್ಲ ಮತ್ತು ಸ್ವರಕ್ಷಣೆಗಾಗಿ ಮಾಡಿದ ಸಮರ ಅಥವಾ ಯುದ್ಧಗಳು ಅಪಾಯವನ್ನಂತೂ ತಂದಿಕ್ಕಿಲ್ಲ. ಸಮರ ಕಲೆ ಗೊತ್ತಿದ್ದವನಿಗೆ ಸೋಲೂ ಇಲ್ಲ.

ಸಮರ ಕಲೆಯನ್ನು ತೋರಿಸಿದ ಸಿನೆಮಾಗಳು ನಮ್ಮ ಕಣ್ಣ ಮುಂದೆ ಬರುತ್ತವೆ.ಇಂಗ್ಲೀಷ್ ಭಾಷೆಯಲ್ಲಿ ಹಲವಾರು ಸಿನೆಮಾಗಳು ಬಂದಿವೆ ಅದರಲ್ಲಿ ವಾರ್ಶಿಪ್ ಎಂಬ ಚಿತ್ರ ಪ್ರೇಕ್ಷಕರನ್ನು ಹಿಡಿದಿರಿಸುವಲ್ಲಿ ಯಶಸ್ಸನ್ನು ಕಂಡಿತ್ತು ಅಲ್ಲಿನ ತಾಂತ್ರಿಕತೆಗೆ ಜನ ಮರುಳಾಗಿದ್ದರು ಅಂತೆಯೇ ಅಲ್ಲಿನ ಸೈನ್ಯವೂ ಕೂಡಾ ಹೆಚ್ಚೆಚ್ಚು ತಾಂತ್ರಿಕತೆಯನ್ನೂ ಹೊಂದಿವೆ ಮತ್ತು ಬಳಸಿಕೊಳ್ಳುತ್ತವೆ. ಆದರೆ ನಮ್ಮ ದೇಶದ ನಮ್ಮ ಸೈನ್ಯವು ಇನ್ನೂ ಆ ಪ್ರಮಾಣದಲ್ಲಿ ತಾಂತ್ರಿಕತೆಯನ್ನು ಹೊಂದಿಲ್ಲ ಹಾಗೂ ತಕ್ಕನಾದ ಯುದ್ಧಸಾಮಾಗ್ರಿಗಳನ್ನೂ ಹೊಂದಿಲ್ಲ ಅದಕ್ಕೆ ಮುಖ್ಯ ಕಾರಣ ರಾಜಕಾರಣ.ಸೈನ್ಯಕ್ಕೆ ಅಷ್ಟಾಗಿ ಪ್ರಾಮುಖ್ಯತೆಯನ್ನು ಕೊಡದೇ ನಾಮಕೇವಾಸ್ಥೆಗೆ ಏನು ಬೇಕೋ ಅದನ್ನು ಕೊಡುತ್ತಾ ಶಾಂತಿಯ ಮಾತು ಕತೆ ಆಡುತ್ತಾ ಭಯೋತ್ಪಾದಕರುಗಳಿಗೆ ನೆಲೆನೀಡುವಂತಾ ಕೆಲಸ ಮಾಡುತ್ತಲೇ ಬಂದಿದ್ದ ರಾಜಕಾರಣ ಈಗ ಕೊಂಚ ಮೈದಡವಿಕೊಂಡು ಎದ್ದು ನಿಂತಿದೆ. ವಿದೇಶಗಳಲ್ಲಿ ತಾಂತ್ರಿಕತೆಯನ್ನು ಬಳಸಿಕೊಂಡು ಯುದ್ಧ ಮಾಡಿ ಹಲ ದೇಶಗಳನ್ನು ಗೆದ್ದರೆ ನಮ್ಮ ದೇಶದ ಸೈನಿಕರಿಗೆ ದೇಶಪ್ರೇಮವೇ ಯುದ್ಧವನ್ನು ಗೆಲ್ಲುವ ತಂತ್ರ. ಉರಿ,ಬಾರ್ಡರ್ ಮುಂತಾದವು ಇವಕ್ಕೆ ಉದಾಹರಣೆ. ದೇಶಪ್ರೇಮದ ತಂತ್ರದಿಂದ ನಮ್ಮ ಸೈನ್ಯ ಅಂದು ಪಾಕಿಸ್ಥಾನವನ್ನು ಮಣಿಸಿತ್ತು ಚೈನಾವನ್ನೂ ಹಿಮ್ಮೆಟ್ಟಿಸಿತ್ತು ಆದರೆ ರಾಜಕಾರಣ ಅದನ್ನು ನಿಕೃಷ್ಟಗೊಳಿಸಿತ್ತು.ಹಾಗಾಗಿ ನಮ್ಮ ಸೈನಿಕರಿಗೆ ಆಧುನಿಕ ತಂತ್ರಗಳನ್ನೊಳಗೊಂಡ ಯುದ್ದ ಪರಿಕರಗಳಿಗಿಂತ ದೇಶ ಪ್ರೇಮವೇ ಮಹಾ ಅಸ್ತ್ರ. ಎಂತೆಂತಾ ಸಂದಿಗ್ಧ ಪರಿಸ್ಥಿತಿಗಳನ್ನೂ ನಿಭಾಯಿಸಿಕೊಂಡು ಬರುವ ತಾಕಾತ್ತು ನಮ್ಮ ಸೈನಿಕನಿಗೆ ಇದೆ.ಹಾಗಾಗಿ ಎಂಥ ಯುದ್ಧ ಎದುರಾದರೂ ನಾವು ರೆಡಿ ಎನ್ನುವ ಸೈನಿಕನ ಮನಸ್ಥಿತಿಯೇ ನಮಗೆ ರಕ್ಷಣೆಯನ್ನು ಕೊಡುತ್ತದೆ ಅವನ ಗಂಡೆದೆಯ ಮುನ್ನಡೆಯು ನಮ್ಮ ಅಭಿವೃದ್ಧಿಗೆ ಮುನ್ನುಡಿಯಾಗುತ್ತದೆ ಅವನು ಗಟ್ಟಿಯಾದರೆ ನಾವು ಗಟ್ಟಿಯಾಗುತ್ತೇವೆ.ಅವನು ಶತ್ರುಗಳನ್ನು ಸೆದೆಬಡಿದರೆ ದೇಶದೊಳಗೆ ನಮ್ಮ ಮಿತ್ರತ್ವ ಗಟ್ಟಿಗೊಂಡಿರುತ್ತದೆ ಇಲ್ಲದಿದ್ದರೆ ನಾವ್ಯಾರು ಎಂಬುದೇ ಗೊತ್ತಾಗುವುದಿಲ್ಲ. ಸೈನಿಕರ ಸಾಹಸಮಯ ಬದುಕು,ಕಷ್ಟವನ್ನು ಇಷ್ಟಪಟ್ಟು ಪಡೆದುಕೊಂಡರೇನೋ ಎಂಬಂಥಾ ಅನಿಸಿಕೆ, ಏನಾದರಾಗಲೀ ದೇಶ ಉಳಿಯಲಿ ಎಂಬ ದೃಢ ನಿರ್ಧಾರ, ಉಕ್ಕಿನಂತಾ ದೇಹ /ಸೊಕ್ಕಿಲ್ಲದಾ ಗೇಹ/ ಹೊಕ್ಕಿಸಿಕೊಂಡಿತು ದೇಶದ ಮೋಹ/ ಶತ್ರುಗಳ ಸೆದೆಬಡಿಯುವ ದಾಹ /ಈ ತಾಯ ಮಡಿಲಲ್ಲಿ ಹುಟ್ಟಿದುದಕೆ/ ಸೈನ್ಯದ ಕರ್ತವ್ಯವೇ ನನ್ನ ಕಿರುಕಾಣಿಕೆ/ ಎಂದು ಸದಾ ಗಡಿಯಲ್ಲಿ ಗೋಡೆಯಂತೆ ನಿಂತಿರುವ ಒಬ್ಬೊಬ್ಬ ಸೈನಿಕನ ಸಮರಾನುಭವದ ವಿಷಯಗಳನ್ನು ಕಥನ ರೂಪದಲ್ಲಿ ನೀಡಿರುವ ಪತ್ರಕರ್ತ ಸಂತೋಷ್ ತಮ್ಮಯ್ಯನವರು ತಮ್ಮ ಕೃತಿಗೆ “ಸಮರ ಭೈರವಿ” ಎಂದು ಹೆಸರಿರಿಸಿರುವುದು ಅತ್ಯುತ್ತಮ ಎನಿಸಿದೆ.

ಸಮರದ ಸಾಹಸವನ್ನು ಕಥನ ರೂಪದಲ್ಲಿ ಕೊಡುವಾಗ ಯುದ್ಧವನ್ನು ವರ್ಣಿಸುವುದು, ಕಷ್ಟನಷ್ಟಗಳ ಲೆಕ್ಕ ತಾಳೆ ಇವೆಲ್ಲವನ್ನು ಹೇಳುವುದು ಸಾಮಾನ್ಯ ಸಂಗತಿ. ಆದರೆ ಸಮರದ ಹಿಂದಿನ ಕಾರಣಗಳೇನು ಹಾಗೂ ಮುಂದೇನು..? ಇವೆಲ್ಲಕ್ಕೂ ಮತ್ತು ಸಮರದಲ್ಲಿ ಸಾಹಸ ಮೆರದ ಹಾಗೂ ಅದಕ್ಕೊಂದಿಷ್ಟು ಸಾಹಿತ್ಯಿಕ ಮೌಲ್ಯಗಳನ್ನೂ ಸೇರಿಸಿದ್ದು ಮತ್ತು ಸಾಹಿತ್ಯವನ್ನು ಶಾರದೆಯ ರೂಪದಲ್ಲಿ ನಾವು ನೋಡುತ್ತಿರುವುದರ ಕಾರಣಕ್ಕೂ ಯುದ್ಧದ ಅನುಭವ ಮಾತ್ರವಲ್ಲದೇ ಅದರ ಹಿಂದಿನ ಬದುಕು,ಬವಣೆಗಳ ನಡುವೆ ದೇಶ ಭಕ್ತಿ, ಸಾಹಸ ನಮ್ಮಲ್ಲಿ ಮೂಡಲು ಇಂಥ ಹೆಸರನ್ನು ಇಟ್ಟಿದ್ದಾರೆ ಎಂಬುದು ಹೆಚ್ಚು ಸೂಕ್ತ ಎನಿಸಿದೆ.ಅಲ್ಲದೇ ಸೈನಿಕರಿಗೆ ಅಂತಃಶಕ್ತಿ ತುಂಬಿದಾ ಜಗನ್ಮಾತೆ ದುರ್ಗೆಯ ಶಕ್ತಿಯು ಪ್ರತೀ ಸೈನಿಕನಲ್ಲಿ ಅವಾಹನೆಯಾಗಿ ಯುದ್ದದಲ್ಲಿ ವಿಜಯವನ್ನು ತಂದು ಕೊಟ್ಟ ವಿಜಯಗಾಥೆಗೆ ತಕ್ಕ ಹೆಸರೆಂದರೆ ಅದು”ಸಮರ ಭೈರವಿ”ಯೇ.

ಸಮರ ಭೈರವಿ ಕೃತಿಯಲ್ಲಿ ಒಬ್ಬೊಬ್ಬ ಸೈನಿಕನೂ ಮಾತಾಡುತ್ತಾನೆ ಅವನ ಅನುಭವವನ್ನೂ ಹೇಳಿಕೊಳ್ಳುತ್ತಾನೆ.ಸಿಪಾಯಿಯಿಂದ ಹಿಡಿದು ಸೈನ್ಯದ ಅಧಿಕಾರಿಗಳ ಸಾಹಸ ಅನುಭವದ ಸಾರವನ್ನು ಹೊಂದಿರುವ ಮೂವತ್ತು ಲೇಖನಗಳಿದ್ದು ಒಂದೊಂದು ಲೇಖನವೂ ಅನುಭವ ಸಾರದ ಪಾಠ ಎಂದೇ ಕರೆಯುವುದು ಹೆಚ್ಚು ಸೂಕ್ತ. ಸ್ವಾತಂತ್ರ್ಯ ಪೂರ್ವದ ಬ್ರಿಟೀಷರ ಅಧೀನದಲ್ಲಿದ್ದ ಸೈನಿಕರ ಮತ್ತು ಜಾಗತಿಕ ಯುದ್ಧದಲ್ಲಿ ಭಾಗವಸಿದ್ದ ಸಿಪಾಯಿಗಳಿಂದ ಹಿಡಿದು ಇಂದಿನ ಕಾರ್ಗಿಲ್,ಉರಿ ವರೆಗಿನ ಹಾಗೂ ಬಾಲಾಕೋಟ ಏರ್ ಸ್ಟ್ರೈಕ್ ಸಮರ ಸಾಹಸವನ್ನು ಮೆರೆದ ಅಭಿನಂದನ್ ವರೆಗೂ ಯಾವುದೇ ವರ್ಣನೆ ವಿಜ್ರಂಭಣೆ ಇಲ್ಲದೇ ಸರಳವಾದ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವ ಹಾಗೆ ಪಾಠಗಳನ್ನು ಬರೆದಿದ್ದಾರೆ ಸಂತೋಷ್. ಸೈನಿಕ ತನ್ನ ಸಂಬಂಧದ ಬಂಧವನ್ನು ಬಿಡಿಸಿಕೊಂಡ ಬಗೆ ಉಳಿಸಿಕೊಳ್ಳುವ ಬಗೆ ದೇಶವೇ ನನ್ನ ಆಸ್ತಿ ಅದೇ ನನಗೆ ಎಲ್ಲವೆನ್ನುವ ಹೊಸ ಸಂಬಂಧ, ಸೈನ್ಯದೊಡನಾಡಿಗಳ ಹಿತವಾದ ಅನುಬಂಧ ಇವೆಲ್ಲವನ್ನೂ ಹೇಳಿಕೊಳ್ಳುವುದರ ನಮಗೆ ಯಾರೂ ವಿಜಯದ ಮಾಲೆ ಹಾಕುವುದಿಲ್ಲವೆಂದು ಗೊತ್ತಿದ್ದರೂ ಕಾರ್ಪಣ್ಯಗಳ ಮಾಲೆ ಖಂಡಿತವಾಗಿ ದೊರೆಯುತ್ತದೆ ಅದೇ ನಮಗೆ ಸುಖ ಎಂದುಕೊಳ್ಳುವ ಕಠಿಣವಾದ ನಿರ್ಧಾರ.ಆಗಾಗ ತಮ್ಮ ಸಿಹಿ ನುಡಿಗಳನ್ನು ಹೊತ್ತು ತರುವ ಪತ್ರಗಳೇ ಏಕತಾನತೆಯನ್ನು ನೀಗುವ ಜೀವಜಲವನ್ನು ಒಸರಿದಂತಾಗುವ ಅನುಭವ ಇಂಥವೆಲ್ಲವನ್ನೂ ಚಿತ್ರಿಸಿದ್ದಾರೆ.ಮೂರು ದಿನ ಕಳೆದ ಮೇಲೆ ಸಿಕ್ಕ ಪತ್ರ ಅಪ್ಪನ ಸಾವನ್ನು ಹೇಳಿತ್ತು ಆದರೆ ಅವರ ತಿಥಿಯ ಶ್ರಾದ್ಧ ಮುಗಿದಿತ್ತು ಎಂದು ಹವಾಲ್ದಾರ್ ನರೇಂದ್ರರವರು ಹೇಳಿದ್ದನ್ನು ಓದಿದಾಗ ಕಣ್ಣಲ್ಲಿ ನೀರು ಬರದಿದ್ದರೆ ಅವ ಮನುಷ್ಯನೇ ಅಲ್ಲ..! ಎಂಬುದು ಸತ್ಯ.

ಸಂತೋಷ್ ರ ಮುನ್ನುಡಿ- ಇದನ್ನೇಕೆ ಬರೆದೆ ಎಂಬುವ ಪಾಠವೇ ಸಾಕು ಸೈನಿಕರ ಬದುಕು ಬವಣೆ ಕಷ್ಟ ನಷ್ಟ ಭಾವಾತಿರೇಕದ ಬದುಕು, ಅವರಲ್ಲಿನ ಶಿಸ್ತು ಸಂಯಮ ಯಾವುದಕ್ಕೂ ರಾಜೀ ಮಾಡಿಕೊಳ್ಳದೇ ಬದುಕುವ ಛಲ,ಎಲ್ಲವನ್ನೂ ತಿಳಿಸುತ್ತದೆ.

ಮಿಲಿಟರಿ ಕಂಟೋನ್ಮೆಂಟು/ ಹುಟ್ಟಿಸುತ್ತದೆ ಎಂಥವನಿಗೂ ದೇಶಭಕ್ತಿಯ ಅಂಟು/ ಮತ್ತು ಮೆತ್ತುತ್ತದೆ ಎಲ್ಲರ ನಡುವೆ ಪ್ರೀತಿಯ ನಂಟು/

ಎಂಬುದನ್ನು ಹವಾಲ್ದಾರ್ ಬೋಪಯ್ಯನವರ ಪತ್ನಿ ಕಂಡುಕೊಂಡ ಬಗೆಯನ್ನು ನವುರಾಗಿ ಹೇಳುತ್ತಾರೆ.ಸೈನಿಕರ ಪತ್ನಿಯರೂ ಕೂಡಾ ಗೊತ್ತಿಲ್ಲದಂತೇ ದೇಶಪ್ರೇಮವನ್ನು ಬೆಳಸಿಕೊಂಡು ಅವರೂ ಕೂಡಾ ಸೈನಿಕರೇ ಅಗಿಬಿಡುತ್ತಾರೆ ಕಾರಣ ಸೈನಿಕರಂತೆ ಗಟ್ಟಿಯಾಗುತ್ತಾರೆ ಮನಸ್ಸೂ ಕೂಡ ಗಟ್ಟಿಯಾಗುತ್ತಾ ಹೋಗುತ್ತದೆ ಮತ್ತು ದೇಶದ ಸೇವೆ ನಮ್ಮದೂ ಕೊಡುಗೆ ಇದೆ ಎಂಬುದನ್ನು ಸರಳವಾಗಿ ಹೇಳುವ ಅವರಂತಾ ಹೆಣ್ಣುಮಕ್ಕಳು ಇದ್ದಾರೆಂಬುದನ್ನು ತಿಳಿಸಿದ್ದಾರೆ.


ಸೈನ್ಯಕ್ಕೆ ಮೇಜರ್ ಧ್ಯಾನ್ ಚಂದ್ ಅವರ ಕೊಡುಗೆಯಂತೆಯೇ ಸಿಪಾಯ ಅಣ್ಣಯ್ಯನವರ ಪಾತ್ರವೂ ಕೂಡಾ ಮುಖ್ಯವಾಗಿದೆ.ಹಾಕಿಯನ್ನು ಆಡುತ್ತಲೇ ಸೈನಿಕರಿಕೆ ಸ್ಪೂರ್ತಿಯನ್ನು ತರುತ್ತಿದ್ದ ಅಣ್ಣಯ್ಯನವರು ಕೋವಿಯನ್ನು ಸರಿಸುವಾಗ ತಮ್ಮ ಸ್ನೇಹಿತ ಅದರ ಬಗ್ಗೆ ನಿಗಾ ವಹಿಸದಿದ್ದ ಕಾರಣ ಗುಂಡು ಹೊರಬಂದು ಕಣ್ಣನ್ನು ಕಳಕೊಂಡರು.ದೇಶಕ್ಕೆ ಏನೇನೋ ಕಳಕೊಂಡವರು ಅನೇಕರಿದ್ದಾರೆ ನಾನು ಮಾತ್ರ ಕೇವಲ ಒಂದು ಕಣ್ಣನ್ನು ಮಾತ್ರ ಕಳಕೊಂಡಿದ್ದೇನೆ ಅನ್ನುವ ಅವರ ಮಾತು ಎಷ್ಟು ಸ್ಪೂರ್ತಿದಾಯಕ ಅವರ ಈ ಘಟನೆಯಿಂದ ಹೊಸಹೊಸ ಕೋವಿಗಳು ಸೈನ್ಯಕ್ಕೆ ಬಂದುದನ್ನು ಸ್ಮರಿಸಿಕೊಳ್ಳುತ್ತಾರೆ. ಮಹಾ ಯುದ್ಧದ ಸಂದರ್ಭದಲ್ಲಿ ಇಂಫಾಲನ್ನು ಮುಕ್ತಗೊಳಿಸದ ಅರ್ಜುನ್ ಸಿಂಗರ ಪಾತ್ರವನ್ನು ಕಣ್ಣಿಗೆ ಕಟ್ಟುತ್ತಾರೆ. ಸ್ವಾತಂತ್ರೋತ್ಸವದ ಸಂದರ್ಭದಲ್ಲಿ ನಮ್ಮ ಮುಖ್ಯಮಂತ್ರಿಗಳು ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಪರೇಡ್ ಸ್ವೀಕರಿಸುತ್ತಾರೆ ಆದರೆ ಷಾ ಬಗ್ಗೆ ಅವರಿಗೆ ಗೊತ್ತಿರುತ್ತೋ ಇಲ್ಲವೋ ಪೋಲೀಸರಿಂದ ಪರೇಡ್ ಅನ್ನು ಪಡೆದೇ ಪಡೆಯುತ್ತಾರೆ.ಬಾಂಗ್ಲಾ ವಿಮೋಚನಗೆ ಸಂಬಂಧಿಸಿದಂತೆ ಇಂದಿರಾ ಕೇಳಿದಾಗ ನನಗೇನೂ ಗೊತ್ತಿಲ್ಲ ವಿಜಯವನ್ನಷ್ಟೇ ತಂದುಕೊಡುತ್ತೇನೆ ಎಂದು ಹೇಳಿ ಅದರಂತೆ ವಿಜಯವನ್ನು ತಂದುಕೊಟ್ಟ ಈ ಮಾಣಿಕ್ ಷಾ ಅವರ ಸಾಹಸವನ್ನು ಸಂಕ್ಷಿಪ್ತವಾಗಿ ಬರೆದಿದ್ದಾರೆ.

ಶತ್ರು ಕೂಟಕ್ಕೆ ಬಾಂಬುಗಳನ್ನಿಡುವಾಗ ಹುತಾತ್ಮನಾದ ಮಂದಣ್ಣನ ಬದುಕಿನ ಹಿಂದಿನ ಕಥೆ,ಬುದ್ಧಿಜೀವಿಗಳಿಂದ ಯುದ್ಧ ವ್ಯಸನಿ ಎಂದು ಕರೆಸಿಕೊಂಡಿದ್ದ ಜನರಲ್ ಕೃಷ್ಣಸ್ವಾಮಿ ಸುಂದರ್ ಜೀಯವರ ಸಾಹಸವನ್ನು ತಿಳಿಯಲೋಸುಗ ಓದಲೇಬೇಕು,ಜಾಫ್ನಾ ತೆರವಿಗೆ ತ್ಯಾಗ ಬಲಿದಾನ ಮಾಡಿದ ಮೇಜರ್ ಪಿ ಎಸ್ ಗಣಪತಿಯವರ ತಂಡದ ಸಾಹಸ ಗಾಥೆ ಮನಸ್ಸನ್ನು ನಾಟುತ್ತದೆ. ಡಾ.ಎ ಪಿ ಜೆ ಅಬ್ದುಲ್ ಕಲಾಂ ಪೃಥ್ವಿರಾಜ ಆದದ್ದು,ಕನ್ನಡದ ಕಾರ್ಯಪ್ಪನವರ ನೆನಕೆಗಳು ಮರುಕಳಿಸುವುದರ ಜೊತೆಗೆ ರಾಜಕಾರಣ ಮತ್ತು ಸೈನ್ಯದ ಆಂತರಿಕ ಗುದ್ದಾಟದ ನಡುವೆಯೇ ಸಾಹಸ ಮೆರದ ಜ.ತಿಮ್ಮಯ್ಯನವರು ಮತ್ತು ಅವರ ರಾಜೀನಾಮೆಯ ಹಿಂದಿನ ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ ಇವುಗಳನ್ನು ತಿಳಿದಾಗ ಹೀಗೂ ಆಗುವುದು ಉಂಟೇ ಎಂದು ನಮಗನ್ನಿಸುತ್ತದೆ. ಕುಂದಗೋಳದ ಹನುಮಂತ ಕೊಪ್ಪದ ಅವರ ವಿಷಯ ತಿಳಿದಾಗ, ಸೈನ್ಯದಲ್ಲಿದ್ದಾಗ ಸೈನಿಕನ ಬದುಕಿನ ವಿಷಯವನ್ನು ಓದಿದರೆ ನಮ್ಮ ಮನಸ್ಸು ಏನನ್ನೋ ಹೇಳಬಯಸುತ್ತದೆ ಮತ್ತು ಭಾರವಾಗುತ್ತದೆ. ಹೀಗೆ ಸೈನಿಕರು ನಮ್ಮ ಜೀವನದಲ್ಲಿ ಕಂಡುಬರುವ ನಿಜವಾದ ಹೀರೋಗಳು ಇವರ ಮುಂದೆ ನಮಗೆ ನಿತ್ಯ ಕಾಣುವ ಸಿನೆಮಾ ಹೀರೋಗಳು ರಂಜನೆಗೆ ಮಾತ್ರ ಇವರದು ಕೇವಲ ಪಾತ್ರ ಅಷ್ಟೆ.ಇಷ್ಟೇ ಅಲ್ಲದೇ ಪ್ರತೀ ಪಾಠದ ಆರಂಭಕ್ಕೆ ಸೇರಿಸಿರುವ ಪ್ರಖ್ಯಾತರ ಸೂಕ್ತಿಗಳು ಮತ್ತು ಪೂರಕವಾದ ಮಾಹಿತಿಗಳು ಓದುಗನನ್ನು ವಿಶೇಷವಾದ ಜಗತ್ತಿಗೆ(ರಣರಂಗಕ್ಕೆ) ಕೊಂಡೊಯ್ಯುತ್ತವೆ.

ಬಿ ಎಲ್ ಸಂತೋಷರ ಮುನ್ನುಡಿಯು ಓದುಗನನ್ನು ಸ್ವಾಗತಿಸುವ ಪರಿಯು ಚೆನ್ನಾಗಿದೆ ಮತ್ತು ಭಾರತ ಸರ್ಕಾರದ ರಕ್ಷಣಾ ಸಚಿವೆಯಾಗಿದ್ದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರ ಬೆನ್ನುಡಿ ಲೇಖಕರ ಬೆನ್ನು ತಟ್ಟಿ ಪೋಷಿಸುವಂತಿದೆ.


ಈ ಪುಸ್ತಕದಲ್ಲಿ ಬರುವ ಒಬ್ಬೊಬ್ಬ ಸೈನಿಕರಾರೂ ಕೇವಲ ಸಂಬಳಕ್ಕಾಗಿ ಅಥವಾ ದಿನಗೂಲಿಗಾಗಿ ಸೈನ್ಯಕ್ಕೆ ಸೇರಿದ್ದರೆಂದು ಕಂಡುಬರಲಿಲ್ಲ. ಇವರಾರೂ ತಮ್ಮ ಜಾತಿಯನ್ನು ಹೇಳಿಕೊಂಡಿಲ್ಲ ಅಥವಾ ನಿವೃತ್ತಿಯ ನಂತರ ತಮ್ಮ ಜಾತಿಗಾಗಿ ಬದುಕಿಲ್ಲ ಎಂಬುದು ಖಾತರಿಯಾಗುತ್ತದೆ. ಪ್ರತೀ ಭಾರತೀಯನೂ ಸೈನ್ಯಕ್ಕೆ ಸೇರಲೇಬೇಕು ಆನಂತರವಷ್ಟೇ ಉದ್ಯೋಗ ಎನ್ನುವಂಥ ಕಾನೂನು ಬರಲೇಬೇಕು ಆಗ ಮಾತ್ರ ಬುದ್ದಿಜೀವಿಗಳ ಬುದ್ಧಿಗೊಂದಿಷ್ಟು ಬುದ್ಧಿ ಬರುತ್ತದೆ.ಆ ಕಾನೂನು ಬರುವವರೆಗೂ ಇಂಥ ಪುಸ್ತಕಗಳನ್ನು ಓದಲೇಬೇಕು ಮತ್ತು ಮನೆಯಲ್ಲಿ ಇಡಲೇಬೇಕು ಕಾರಣ ಇದೊಂದು ರಣರಂಗದ ಅಮರ ಸ್ಮೃತಿ ಯುವ ಸಮೂಹಕ್ಕೆ ಸ್ಪೂರ್ತಿ. ”ಸಮರ ಭೈರವಿ” ಪುಸ್ತಕವನ್ನು ಓದುಗಲೋಕಕ್ಕೆ ಕೊಟ್ಟ ಸಂತೋಷ ತಮ್ಮಯ್ಯನವರನ್ನು ಅಭಿನಂದಿಸಲೇಬೇಕು.


ಕೃತಿ: ಸಮರ ಭೈರವಿ
ಲೇಖಕ: ಸಂತೋಷ್ ತಮ್ಮಯ್ಯ
ಪ್ರಕಾಶನ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 240/-
ಪುಟಗಳು: 220

ಲೇಖಕ: ಸಂತೋಷ್ ತಮ್ಮಯ್ಯ