ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

ಪೂಪ ಅಯ್ಯೋ ಪಾಪ

(ಟಿಪ್ಪಣಿ: ಪೂಪ ಎಂದರೆ ಲ್ಯಾಟಿನ್ ಭಾಷೆಯಲ್ಲಿ ಪುಟ್ಟ ಹುಡುಗಿ, ಬೊಂಬೆ ಎಂದು ಅರ್ಥ.)

ಪೂಪ ಮಾಡಿದ ಪಾಪವಾದರೂ
ಏನು? ಅಯ್ಯೋ ಪಾಪ
ಕೈಯಿಂದ ಜಾರಿ ಬಿದ್ದಿದೆ ದೀಪ

ಯಾರೂ ನೋಡುವ ಮೊದಲೇ ಗಾಜಿನ
ಚೂರುಗಳ ಹೆಕ್ತಾ ಆಗಿದೆ ಗಾಯ

ಹರಿಯುವ ನೆತ್ತರ ಬಣ್ಣವ ಕಂಡು
ಪೂಪಳಿಗಾಗಿದೆ ಭಯ

ಗೋಳೋ ಅಂತ ಅಳ್ತ ಇದ್ದಾಳೆ
ಎಲ್ಲರು ಬಂದು ನೋಡ್ತಾರೆ
ಏನಾಯ್ತೆಂದು ಕೇಳ್ತಾರೆ
ಕಾರಣ ಅವರ ಎದುರಿಗೆ ಇದೆ

ಕೂಡಲೆ ಅವಳ ಗಾಯವ ತೊಳೆದು
ದವಾಖಾನೆಗೆ ಕರೆದೊಯ್ದು

ಚುಚ್ಚು ಮದ್ದಿನ ನೋವನು ಮರೆಸಲು
ಬರುವಾಗ ಒಂದು ಐಸ್‍ಕ್ರೀಂ ಕೊಡಿಸಿ

ಎಲ್ಲ ಸರಿಯಾಗತೆ ನಿನ್ದೇನು ತಪ್ಪಿಲ್ಲ
ಎಂದು ಅವಳ ಕಣ್ಣೀರೊರೆಸಿ

ಅದು ಬಿಟ್ಟು ಅವಳನು ಬಯ್ದು ಗಿಯ್ದು
ಮಾಡಿದಿರಾದರೆ ಜೋಕೆ

ಆಮೇಲೆಷ್ಟು ಉಪಚರಿಸಿದರೂ
ಇಳಿಯದು ಪೂಪನ ಕೋಪ

ಬೆರಳಿನ ಗಾಯ ಬೇಗನೆ ಮರೆವುದು
ಮನಸಿನ ಗಾಯ ಹಾಗೇ ಇರುವುದು


ನಗುವ ಬುದ್ದ

ಎಲ್ಲಿಂದಲೊ ಒಂದು ಬುದ್ದನ ತಂದು
ಪೂಪ ಇರಿಸಿದ್ದಾಳೆ ಮೇಜಿನ ಮೇಲೆ

ಚಕ್ಕಳ ಮಕ್ಕಳ ಮಕ್ಕಳ ದೇವರು
ನಗುವನು ಏನೇ ಕೇಳಿದರು

ಹಾಲು ಬೇಕಾ ಬುದ್ದಾ
ಅಂದರೆ ನಗುವನು
ಅನ್ನದೆ ಇದ್ದರು ನಗುವನು

ತಿಂಡಿ ತಿನ್ತೀಯ ಬುದ್ದಾ
ಅಂದರೆ ನಗುವನು
ಅನ್ನದೆ ಇದ್ದರು ನಗುವನು

ಊಟ ಮಾಡ್ತೀಯ ಬುದ್ದಾ
ಅಂದರೆ ನಗುವನು
ಅನ್ನದೆ ಇದ್ದರು ನಗುವನು

ಆಟಕೆ ಬರ್ತೀಯ ಬುದ್ದಾ
ಅಂದರೆ ನಗುವನು
ಅನ್ನದೆ ಇದ್ದರು ನಗುವನು

ಮಗ್ಗಿ ಹೇಳ್ತೀಯ ಬುದ್ದಾ
ಅಂದರೆ ನಗುವನು
ಅನ್ನದೆ ಇದ್ದರು ನಗುವನು

ಆದರು ಎಲ್ಲಿಂದ್ಲೊ ಕೇಳಿಸೋ-
ದೊಂದೊಂದ್ಸಲ
‘ಒಂದೊಂದ್ಲ ಒಂದ್ಲ’

ಅಚ್ಚರಿಯಿಂದ ನೋಡ್ತಾಳೆ ಪೂಪ
ನಗುತಾ ಇರುವನು ಬುದ್ದ
ಕೊಡಿರವನಿಗೊಂದು ಗುದ್ದ!

ಅಂಬಾರಿ

ದಾರಿ ದಾರಿ ಅಂಬಾರಿ
ಆನೆಯ ಮೇಲಿನ ಅಂಬಾರಿ
ಅಂಬಾರಿಯೊಳಗೊಬ್ಬಳು ರಾಜಕುಮಾರಿ
ಎಲ್ಲಿಗೆ ಹೊಂಟೀ ಸವಾರಿ

ಹೂವಿನ ಹಡಗಲಿಗೀ ಬಾರಿ
ಹೂವನು ತರಲು ಹೊರಟಿಹೆ ನಾನು
ನಿನಗೇನು ಬೇಕೋ ಹೇಳದನು
ಎಲ್ಲಿದ್ದರು ಹುಡುಕಿ ತಂದೀಯುವೆನು

ನನಗೊಂದು ಕೆಂಪಿನ ಗುಲಾಬಿ ಸಾಕು
ಅದರಲಿ ತಂಪಿನ ಹನಿಗಳು ಬೇಕು
ಆ ಹನಿಗಳು ಫಳ ಫಳ ಹೊಳಿತಿರಬೇಕು
ಇಷ್ಟು ದೂರಕೇ ಗೊತ್ತಾಗಬೇಕು

ಆಯಿತು ಎಂದಳು ರಾಜಕುಮಾರಿ
ಇಷ್ಟಗಲಾಯಿತು ಪೂಪನ ಮಾರಿ

ಮಧ್ಯಾಹ್ನವಾಯಿತು ಮಧ್ಯಾಹ್ನ ಹೋಯಿತು
ಸಂಜೆಯಾಯಿತು ಸಂಜೆಯು ಹೋಯಿತು

ಇಲಿ ಹೆಗ್ಗಣಗಳು ಹೊರಡುವ ಹೊತ್ತು
ಆನೆ ಬರಲಿಲ್ಲ ಅಂಬಾರಿ ಹೊತ್ತು
ರಾಜಕುಮಾರಿಗೆ ಏನಾಯ್ತೊ ಪಾಪ
ಇನ್ನೂ ಕಾಯ್ತ ಇದಾಳೆ ಪೂಪ

ನೀರಿನ ಗುಳ್ಳೆಗಳು

ದೊಡ್ಡ ದೊಡ್ಡ ನೀರಿನ ಗುಳ್ಳೆಗಳು
ಸಣ್ಣ ಸಣ್ಣ ನೀರಿನ ಗುಳ್ಳೆಗಳು
ಇವೆ ನನ್ನ ನೆನಪಿನ ಅಂಗಳದಲ್ಲಿ
ಎನ್ನುತ್ತಾಳೆ ಪೂಪ

ಮಳೆ ನೀರಿಗೆ ಹನಿಗಳು ಥಟ್ ಪಟ್ ಬಿದ್ದು
ಗುಳ್ಳೆಗಳಲ್ಲಿಂದ ಒಡನೆಯೆ ಎದ್ದು
ಏನು ಮಾಡಲಿ ಎಲ್ಲಿ ಹೋಗಲಿ
ಎಂದು ತಿಳಿಯದೆ ಗಲಿಬಿಲಿಯಲ್ಲಿ
ಅತ್ತ ಹೋಗುತ್ತವೆ ಇತ್ತ ಬರುತ್ತವೆ
ಅಂಗಳದ ಕೊನೆ ನಮ್ಮ ಗುರಿಯೆನ್ನುತ್ತವೆ

ಹುಟ್ಟಿದ ಕೂಡಲೆ ಕೆಲವೊಡೆಯುತ್ತವೆ
ಕೆಲವಾಮೇಲೆ ಕಾಣದಾಗುತ್ತವೆ
ಒಡೆಯದ ಗುಳ್ಳೆಯು ಯಾವುದು ಇಲ್ಲ
ಯಾತಕೆ ಹೀಗೋ ದೇವರೆ ಬಲ್ಲ
ತಿಳಿದವರಿಗದು ಒಂದು ಜೀವನ ದರುಶನ
ನಮಗದು ಗಾಳಿ ಮಳೆಯ ಪ್ರದರ್ಶನ

ನಾವು ಲೆಕ್ಕ ಕಲಿತಿದ್ದೀ ಗುಳ್ಳೆಯನೆಣಿಸಿ
ಕನಸು ಕಂಡದ್ದೂ ಅವುಗಳ ನೆನಸಿ

ಏನೇ ಇರಲಿ ಎಲ್ಲೇ ಇರಲಿ
ಇರಲವು ಅರ್ಧ ಗೋಲಾಕಾರದಿ
ಇಡೀ ಲೋಕವ ತಮ್ಮಲಿ ಬಿಂಬಿಸಿ
ಇರುವಷ್ಟೂ ಕ್ಷಣ ಸಂತೋಷ ತರಿಸಿ
ಎಂದು ಹಾರೈಸುತಾಳೆ ಪೂಪ
ಅವಳು ಇನ್ನೇನು ಮಾಡ್ತಾಳೆ ಪಾಪ!

(ಟಿಪ್ಪಣಿ: ಪೂಪ ಎಂದರೆ ಲ್ಯಾಟಿನ್ ಭಾಷೆಯಲ್ಲಿ
ಪುಟ್ಟ ಹುಡುಗಿ, ಬೊಂಬೆ ಎಂದು ಅರ್ಥ.)