ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮರಾಠಿ ಸಂತ ಕವಯಿತ್ರಿಯರ ಭಾವವಿಶ್ವ

ಮರಾಠಿ ಸಂತ ಕವಯಿತ್ರಿಯರ ಭಾವವಿಶ್ವದಲ್ಲಿ ಪಂಢರಪುರದ ಶ್ರೀವಿಠ್ಠಲನಿಗೆ ಪ್ರಥಮ ಆದ್ಯತೆ. ತಮ್ಮ ಸಮಕಾಲೀನ ಸಂತರನ್ನು ಭಕ್ತಿ ಭಾವದಿಂದ ಗೌರವಿಸಿ ಗುರುವಾಗಿ ಕಂಡು ಅಗ್ರಸ್ಥಾನದಲ್ಲಿರಿಸಿರುವುದು ಎರಡನೆಯದಾದರೆ, ಲಿಂಗ ತಾರತಮ್ಯ ಅತ್ಯಂತ ಸಹಜವಾಗಿದ್ದ ಕಾಲದಲ್ಲಿ ಪ್ರಾಪಂಚಿಕತೆಯ ಕುರಿತು ವಿರಕ್ತಿ ಇದ್ದರೂ, ಸ್ವಂತ ಜೀವನಾನುಭವಗಳ ಪ್ರಸ್ತುತಿಯನ್ನು ಅವರದೇ ಭಾವವಿಶ್ವವು ಅನಾವರಣಗೊಳಿಸುತ್ತದೆ. ಇದಕ್ಕೆ ಅವರ ಕವಿತ್ವ ಶಕ್ತಿಯು ಸುವರ್ಣ ಮಾಧ್ಯಮವಾಗಿ ಅವರ ಭಾವವೃತ್ತವನ್ನು ವಿಸ್ತಾರಗೊಳಿಸಿದೆ. ಸಂತ ಕವಯಿತ್ರಿಯರು ಅನುಭವಗಳನ್ನು ದಾಖಲಿಸುತ್ತ ಕಟ್ಟಿಕೊಡುವ ಪ್ರತಿಯೊಂದು ಪದ ಪುಂಜಗಳು ಅವರ ಭಾವನೆಗಳ ಉಸಿರ್ದಾಣಗಳಾಗಿ ನಿರೂಪಿತವಾಗಿವೆ.

ವಿಠ್ಠಲ ರೂಪಿ ಶ್ರೀಕೃಷ್ಣನ ಪರಮಭಕ್ತರಾದ ಮರಾಠಿ ಸಂತ ಕವಯಿತ್ರಿಯರ ಕಾವ್ಯ ಪರಂಪರೆ ಪ್ರಾರಂಭವಾಗುವುದು ಮಹಾನುಭಾವ ಪಂಥದ ಸಂತ ಕವಯಿತ್ರಿ ಮಹದ್ಹಾಯಿಸಾ ಅಥವಾ ಮಹದಂಬೆಯಿಂದ. ಮರಾಠಿ ಸಂತ ಸಾಹಿತ್ಯದಲ್ಲಿ ಸಂತ ಮುಕ್ತಾಯಿ, ಸಂತ ಜನಾಬಾಯಿ, ಸಂತ ನಾಗರಿ, ಸಂತ ಕಾನ್ಹೋಪಾತ್ರಾ, ಸಂತ ಸೋಯರಾಬಾಯಿ, ಸಂತ ಬಹಿಣಾಬಾಯಿ, ಸಂತ ವೇಣಾಬಾಯಿ, ಸಂತ ವಿಠಾಬಾಯಿ ಹೀಗೆ ಅನೇಕ ಕವಯಿತ್ರಿಯರ ಮಾಲಿಕೆಯಲ್ಲಿ ಮಹದಂಬೆಗೆ ಆದ್ಯ ಕವಯಿತ್ರಿಯ ಸ್ಥಾನವಿದೆ. ಶಕೆ 1208 ಕ್ಕಿಂತ ಪೂರ್ವದಲ್ಲಿಯೇ ಮಹದಂಬೆಯಿಂದ ರಚಿತವಾದ ‘ಧವಳೆ’ ಎಂಬ ಕಥನ ಕಾವ್ಯದಿಂದಾಗಿ ಅವಳಿಗೆ ಮರಾಠಿ ಸಾಹಿತ್ಯ ಲೋಕದ ಪ್ರಥಮ ಕವಯಿತ್ರಿಯ ಗೌರವವು ದೊರಕಿದೆ. ಮಹದಂಬೆಯು ಗುರುಮಾರ್ಗವನ್ನು ಚಾಚೂ ತಪ್ಪದೆ ಅನುಸರಿಸಿದಳು ಎಂಬುದಕ್ಕೆ, ಒಂದು ದಿನ ಅವಳ ಗುರುಗಳಾದ ಶ್ರೀ ಗೋವಿಂದ ಪ್ರಭುಗಳು ಮಹದಂಬೆಗೆ ಯಾವುದಾದರೂ ಹಾಡನ್ನು ಹಾಡು ಎಂದು ಹೇಳುತ್ತಾರೆ. ಮಹದಂಬೆ ಯಾವ ಹಾಡನ್ನು ಹಾಡಲಿ ಎಂದು ಮರು ಪ್ರಶ್ನಿಸುತ್ತಾಳೆ. ಆಗ ಅವರು ಉತ್ತರವಾಗಿ ಕೃಷ್ಣ ರುಕ್ಮಿಣ ಯ ಹಾಡನ್ನು ಹಾಡು ಎಂದು ಆಜ್ಞಾಪಿಸಿದಾಗ ಮಹದಂಬೆಯು ಆ ಸ್ಫೂರ್ತಿಯಿಂದ ಧವಳೆಯನ್ನು ರಚಿಸಿದಳೆಂದು ಅವಳ ಚರಿತ್ರೆಯಿಂದ ತಿಳಿದು ಬರುತ್ತದೆ. ಧವಳೆ ಇದು ವಿವಾಹದಲ್ಲಿ ಹಾಡುವ ಸಾಂಪ್ರದಾಯಿಕ ಭಕ್ತಿ ಗೀತೆಗಳು. ಕವಯಿತ್ರಿ ಮಹದಂಬೆಗೆ ಪ್ರಾಪಂಚಿಕ ಜೀವನದಲ್ಲಿ ಅನುಭವಿಸಿದ ಒಂಟಿತನ ಅವಳ ಆಧ್ಯಾತ್ಮದ ಅನುಭೂತಿಗೆ ಪೂರಕವಾಗಿ ಕೃಷ್ಣನ ಅನನ್ಯ ಭಕ್ತಿ ಭಾವನೆಯೇ ಮಹತ್ವದ್ದೆನಿಸುತ್ತದೆ.

‘ಪಾವಿಜೆ ಪರಮಗತಿ ಭಕ್ತಿ ಐಕತಾ ಕೃಷ್ಣ ಚರಿತ್ರ’ ಎಂದು ತನ್ನ ರಚನೆಯ ಶ್ರೇಷ್ಠತೆಯನ್ನು ಸಾರುವ ಮಹದಂಬೆಯು, ಈ ಕಥೆಯು ಕೃಷ್ಣ ರುಕ್ಮಿಣ ಯ ಪ್ರೇಮ ವಿವಾಹದ ಕಥೆಯಾದರೂ ಶೃಂಗಾರ ರಸಕ್ಕೆ ತನ್ನ ಕಾವ್ಯದಲ್ಲಿ ಮಹತ್ವ ನೀಡುವುದಿಲ್ಲ.
ವಿಪ್ರನೆ ಬೇಗನೆ ಕೃಷ್ಣರಾಯನೆಡೆಗೆ ತೆರಳು
ಗೋಪಾಲನಿಗೆ ನನ್ನ ವಿನಂತಿ ಪೇಳು
ನಾನು ಅವನಿಗೆ ಶರಣು, ನನ್ನನ್ನು ಕರೆದೊಯ್ಯು ಗೋವಿಂದಾ

ಎಂದು ಜನಪದ ಭಾಷೆಯಲ್ಲಿ ಮಾತನಾಡುವ ರುಕ್ಮಿಣ ಯ ವ್ಯಾಕುಲತೆ ಹಾಗೂ ವಿರಹ ಸ್ಥಿತಿಯನ್ನು ಸಹ ಭಗವಂತನೆಡೆಗೆ ಭಕ್ತನಿಗಿರುವ ನಿವೇದನೆಯ ಸ್ವರೂಪದಲ್ಲಿ ಮಹದಂಬೆ ಬಣ ್ಣಸುತ್ತಾಳೆ. ಆಧ್ಯಾತ್ಮ ವಿಷಯದಲ್ಲಿ ಮಹದಂಬೆಗೆ ಇರುವ ಜಿಜ್ಞಾಸೆಯಿಂದಾಗಿ ಹಾಗೂ ಧರ್ಮ ಪ್ರವರ್ತಕಳಾಗಿ ಧರ್ಮ ರಕ್ಷಣೆ ಮಾಡಿದಳು ಎಂಬ ಪ್ರಶಂಸೆಯ ಮಾತು ಅವಳ ಇನ್ನೋರ್ವ ಗುರು ಶ್ರೀ ಚಕ್ರಧರನಿಂದ ದೊರಕಿದೆ. ಬಾಲ್ಯ ವಿವಾಹ, ಅಕಾಲಿಕ ವೈಧವ್ಯ ಪ್ರಾಪ್ತಿ, ಸಮಾಜದ ಕಟ್ಟು ಪಾಡುಗಳಿಂದ ಜೀವನ ಶೂನ್ಯವೆನಿಸಿದರೂ ಪಾರಮಾರ್ಥ ಸಾಧನೆಯ ಮಾರ್ಗ ಹಾಗೂ ಸಮಷ್ಟಿ ಪರ ಆಶಾದಾಯಕ ನಿಲುವು ಸಂತ ಕವಯಿತ್ರಿಯರ ಕಾವ್ಯದ ಮಹತ್ವದ ಅಂಶವಾಗಿವೆ.

ಹೆಣ್ಣು ಮಕ್ಕಳಿಗೆ ಅಕ್ಷರಜ್ಞಾನ ಸಲ್ಲದು ಎಂದು ನಿರಾಕರಿಸಿದ್ದ ಕಾಲದಲ್ಲಿ ಸಂಪ್ರದಾಯಬದ್ಧವಾಗಿ ಹೇಳುವ ಸಾಹಸವನ್ನು ಮಾಡಿದವಳು ವಾರಕರಿ ಪಂಥದ ಸಂತ ಮಹಿಳೆ ಸಂತ ಜನಾಬಾಯಿ. ‘ಸ್ತ್ರೀ ಜನ್ಮ ಮ್ಹಣುನಿ ನ ವ್ಹಾವೆ ಉದಾಸ-ಸ್ತ್ರೀ ಜನ್ಮವೆಂದು ಉದಾಸರಾಗಬೇಡಿ’ ಎಂಬ ಮಾತುಗಳಿಂದ ಸ್ತ್ರೀ ಜಗತ್ತಿನ ತಲ್ಲಣಗಳಿಗೆ ಧ್ವನಿಯಾಗಿ ನಿಲ್ಲುತ್ತಾಳೆ. ಸ್ತ್ರೀ ಅಸ್ತಿತ್ವಕ್ಕೆ ಮಹತ್ವ ಕೊಟ್ಟು ಜಗತ್ತನ್ನು ಉದಾರವಾಗಿ ಕಾಣುವ ಮನಸ್ಸನ್ನು ತೋರಿಸಿಕೊಡುತ್ತಾಳೆ. ಅಂದಿನ ಕಾಲಘಟ್ಟ ಹಾಗೂ ಸಾಮಾಜಿಕ ರೀತಿ ನೀತಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಜನಾಬಾಯಿಯ ಅಭಂಗಗಳನ್ನು ಅವಲೋಕಿಸಿದಾಗ ಅಲ್ಲಿ ವಿಠ್ಠಲ ಭಕ್ತಿಯ ಭಾವ ತೀವ್ರತೆಯೊಂದಿಗೆ ಉತ್ಕಟ ಜೀವನ ಪ್ರೀತಿ ವಿಶೇಷವಾಗಿ ಕಂಡು ಬರುತ್ತದೆ. ಸಂತ ನಾಮದೇವರ ಮನೆಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತ ‘ನಾನು ನಾಮದೇವರ ದಾಸಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಜನಾಬಾಯಿಯು ಸ್ತ್ರೀತನಕ್ಕೆ ಲೋಕವು ಸ್ಥಾಪಿಸಿದ ಇತಿ ಮಿತಿಗಳನ್ನು ಮೀರುವ ಪ್ರಯತ್ನವನ್ನು ಮಾಡುವುದಿಲ್ಲ. ಇತರ ಸಂತ ಮಹಿಳೆಯರಂತೆ ತನ್ನ ಏಕಾಂಗಿತನವನ್ನು ವಿಠ್ಠಲನಲ್ಲಿ ನಿವೇದಿಸಿಕೊಂಡು ಅವನಲ್ಲಿಯೇ ಒಂದಾಗುವ ಮಾನಸಿಕತೆ ಅವಳ ಅಭಂಗಗಳಲ್ಲಿದೆ. ಅವಳ ಭಾವಲೋಕದಲ್ಲಿ ವಿಠ್ಠಲನು ಅವಳೊಂದಿಗೆ ಆಪ್ತನಾಗಿ ಪ್ರೇಮಪೂರಿತ ಮಾತುಗಳನ್ನಾಡುತ್ತಾನೆ. ಗೃಹಕಾರ್ಯಗಳಾದ ಕುಟ್ಟುವಲ್ಲಿ, ಬೀಸುವಲ್ಲಿ ಅವಳ ಸಹಾಯಕ್ಕೆ ಬಂದು ನಿಲ್ಲುವ ವಿಠ್ಠಲ ಒಮ್ಮೆ ಸಖನಾಗಿ, ಮತ್ತೊಮ್ಮೆ ಮಗುವಾಗಿ, ಮಗದೊಮ್ಮೆ ದೇವನಾಗಿ ಅವಳಲ್ಲಿ ಸಲುಗೆಯಿಂದ ಇರುವುದು ಜನಾಬಾಯಿಯ ಜೀವನದಲ್ಲಿ ನಡೆಯುವ ವಿಸ್ಮಯಗಳು. ‘ವಿಠ್ಯಾ ಮೂಳ ಮಾಯೆಚ್ಯಾ ಕಾರಟ್ಯಾ’ ಎಂದು ವಿಠ್ಠಲನ್ನು ಬೈದು ಕರೆಯುವ ಅಧಿಕಾರವನ್ನು ಜನಾಬಾಯಿ ಗಳಿಸಿಕೊಂಡಿದ್ದು ಅವಳ ಮುಗ್ಧ ಭಕ್ತಿಯಿಂದಲೇ.
ತನ್ನ ಅಭಂಗಗಳಲ್ಲಿ ಪೌರಾಣ ಕ ಘಟನೆಗಳನ್ನು ರಸವತ್ತಾಗಿ ವರ್ಣಿಸುವಲ್ಲಿ ಜನಾಬಾಯಿಯು ಸಂತ ನಾಮದೇವರಷ್ಟೇ ಪಾಂಡಿತ್ಯ ಪಡೆದಿದ್ದಾಳೆ. ಮಹಾಭಾರತದ ಕಥಾಭಾಗವಾದ ಥಾಲಿಪಾಕ ಅಭಂಗವು ಜನಾಬಾಯಿಯ ಹೃದಯಸ್ಪರ್ಶಿ ನಿರೂಪಣೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ‘ಕುಟ್ಟುತ್ತ, ಬೀಸುತ್ತ ನಿನ್ನನ್ನೇ ಹಾಡುವೆ ಅನಂತಾ’ ಎನ್ನುವ ಜನಾಬಾಯಿಯ ಅಭಂಗಗಳಲ್ಲಿ ಜನಪದ ಸಾಹಿತ್ಯದ ಶ್ರಮ ಸಂಸ್ಕøತಿಯ ಝಲಕ್ ಕಾಣ ಸುತ್ತದೆ. ಆಧ್ಯಾತ್ಮದ ಪ್ರಖರತೆ ಹಾಗೂ ಜನಪದ ಸಾಹಿತ್ಯದ ಶೈಲಿ ಜನಾಬಾಯಿಯ ಕಾವ್ಯಗಳನ್ನು ಭಾವಕಾವ್ಯಗಳಾಗಿಸುತ್ತವೆ.

ಸಂತ ಜನಾಬಾಯಿಯ ಸಮಕಾಲೀನಳಾದ ಸಂತ ಸೋಯರಾಬಾಯಿಯು ವಾರಕರಿ ಸಂತರಾದ ಸಂತ ಚೋಖಾಮೇಳರ ಪತ್ನಿ. ಅವಳು ತಾನು ‘ಚೋಖಾಮೇಳಾಚಿ ಮಹಾರಿ’ ಎಂದು ಪ್ರೀತಿಯಿಂದಲೇ ಹೇಳಿಕೊಂಡು ಪತಿಯ ಮೇಲಿರುವ ತನ್ನ ಅಭಿಮಾನವನ್ನು ಒಪ್ಪಿಕೊಳ್ಳುತ್ತಾಳೆ. ವಿಠ್ಠಲ ಭಕ್ತಿಯನ್ನು ಬಯಸುವ ಅವಳಿಗೆ ತಾವು ಜನಿಸಿದ ಹೀನ ಜಾತಿಯು ಅಡ್ಡಗೋಡೆಯಾಗಿದೆ ಎಂಬುದು ಪ್ರತಿ ಕ್ಷಣಕ್ಕೂ ಕಾಡುತ್ತದೆ. ಅವಳು ಅದನ್ನು ಸಹಿಸಿಕೊಂಡು ಮೌನವಾಗಿರದೆ ನೇರವಾಗಿ ಪ್ರಶ್ನಿಸುವ ಎದೆಗಾರಿಕೆ ಹೊಂದಿದ್ದಾಳೆ.
ದೇಹವು ಮೈಲಿಗೆ ಎನ್ನುವರು ಸಕಲರು
ಆತ್ಮವು ನಿರ್ಮಲ ಶುದ್ಧ ಪ್ರಬುದ್ಧ
ದೇಹದ ಮೈಲಿಗೆ ದೇಹದಲ್ಲೇ ಜನನ

ಕೀಳು ಜಾತಿಯವಳು ಎಂಬ ಹಣೆಪಟ್ಟಿಯನ್ನು ಅಳಿಸಲು ಅಭಂಗದ ಅಕ್ಷರಗಳು ಸಹಾಯವಾಗಬಹುದು ಎಂಬ ಆಶಾಭಾವ ಸಂತ ಸೋಯರಾಳಲ್ಲಿದೆ. ‘ಸುಖದಲ್ಲಿ ಎಲ್ಲರೂ ಆಪ್ತರು, ಅಂತ್ಯಕಾಲದಲ್ಲಿ ಯಾರಿಲ್ಲ ಜೊತೆಗಾರರು’ ಎಂದು ಜೀವನದ ಸತ್ಯವನ್ನು ಅವಳು ಜಗತ್ತಿಗೆ ತಿಳಿಸುವ ಪ್ರಯತ್ನ ಮಾಡುತ್ತಾಳೆ. ಸಂತ ಸೋಯರಾಳದು ಹೀನ ಜಾತಿಯಲ್ಲಿ ಜನಿಸಿದ ನೋವಾದರೆ, ಸಂತ ಕಾನ್ಹೋಪಾತ್ರಳದು ಹೀನ ವೃತ್ತಿ ಹಾಗೂ ತಾನು ವೇಶ್ಯೆಯ ಮಗಳು ಎಂಬ ನೋವು. ಭಾವ ಶುದ್ಧವಾಗಿರಬೇಕು ಎನ್ನುವ ಕಾನ್ಹೋಪಾತ್ರಾ ‘ಜನ್ಮಾಂತರದ ಸುಕೃತದ ಫಲಪೂರ್ಣ, ಇಂದು ಕಂಡೆನು ವಿಠ್ಠಲ ಚರಣ’, ‘ಕೀರ್ತನೆಯ ರಂಗದಲ್ಲಿ ಆನಂದದ ನಲಿವು, ಇದೇ ಕಾನ್ಹೋಪಾತ್ರಳ ಚಿಂತೆಗೆ ಸಮಾಧಾನವು’ ಎನ್ನುತ್ತ ತಾನು ವೇಶ್ಯೆಯಾದರೂ ಭಕ್ತಿಪಥವನ್ನು ತೋರಿಸಿದ ತನ್ನ ಸಮಕಾಲೀನ ಸಂತರಿಗೆ ಋಣ ಯಾಗುತ್ತಾಳೆ.
ಬಹೆಣ ಫಡಕತಿ ಧ್ವಜಾ’ ಎಂದು ಭಾಗವತ ಧರ್ಮದ ಧ್ವಜವನ್ನು ಹೆಗಲ ಮೇಲೆ ಹೊತ್ತು ನಡೆಯುವ ಸಂತ ಬಹೆಣಾಬಾಯಿ ತನ್ನ ಜೀವನದುದ್ದಕ್ಕೂ ಕಷ್ಟಗಳನ್ನು ಅನುಭವಿಸುತ್ತಾಳೆ. ಸಂತ ಬಹೆಣಾಬಾಯಿಯಲ್ಲಿ ಕಂಡು ಬರುವ ಭಾಗವತ ಧರ್ಮದ ಕೀರ್ತಿ ಪತಾಕೆಯನ್ನು ಹಾರಿಸುವ ಉತ್ಸಾಹ ಅವಳ ಸಾಂಸಾರಿಕ ಜೀವನದಲ್ಲಿ ಕಾಣಸಿಗದು. ವೈವಾಹಿಕ ಜೀವನದಲ್ಲಿ ಬಹೆಣಾಬಾಯಿ ಹಾಗೂ ಅವಳ ಪತಿಯ ದೃಷ್ಟಿಕೋನ ಭಿನ್ನವಾಗಿತ್ತು.
ಸ್ತ್ರೀ ಶರೀರ ಪರಾಧೀನ ದೇಹ, ವಿರಕ್ತಿಯ ಉಪಾಯ ಸಲ್ಲದು,
ಶರೀರ ಭೋಗವೇ ವೈರಿಗೆ ಇಹುದು, ನನ್ನ ಚಿಂತೆ ಯಾರಿಗೂ ಇರದು

ಎಂದು ಅಭಂಗಗಳ ಮೂಲಕ ಆತ್ಮಚರಿತ್ರೆಯನ್ನು ಅರಹುವ ಬಹೆಣಾಬಾಯಿಯ ಸಮಾಜದೊಂದಿಗೆ ಸಂಘರ್ಷವು ಆಂತರಿಕ ಸಂಘರ್ಷವು ಹೌದು. ತಮ್ಮ ಅಂತರಂಗದ ಅನಿಸಿಕೆಗಳನ್ನು ಬಹಿರಂಗವಾಗಿ ವ್ಯಕ್ತಗೊಳಿಸುವ ಛಲಗಾರಿಕೆ ಅಲ್ಲಿದೆ. ಏಕೆಂದರೆ ಮಹಿಳಾ ಸಂತರಿಗೆ ಸಾಗಬೇಕಾದ ಮಾರ್ಗವು ದುಸ್ಸಾಧ್ಯವೆನಿಸಿದರೂ ಅದನ್ನು ಸಾಧ್ಯವಾಗಿಸಿಕೊಂಡು ಅವರು ಇಟ್ಟ ಹೆಜ್ಜೆಗಳು ಮಾತ್ರ ದೃಢವಾಗಿದ್ದವು. ಆದ್ದರಿಂದಲೇ ಬಹೆಣಾಬಾಯಿಯ ಅಭಂಗಗಳಲ್ಲಿ ಬ್ರಹ್ಮಜ್ಞಾನದ ಜೊತೆಗೆ ಸಾಮಾಜಿಕತೆ, ವೈಚಾರಿಕತೆ ಢಾಳಾಗಿಯೇ ಕಂಡು ಬರುತ್ತವೆ.
ಮಧ್ಯಯುಗದಲ್ಲಿ ವಿಧವೆ ಸ್ತ್ರೀಯೊಬ್ಬಳು ಮಠಾಧೀಶಳಾಗಿ ಕೀರ್ತನೆ ಪ್ರವಚನದಲ್ಲಿ ತೊಡಗಿಕೊಂಡುದು ಕ್ರಾಂತಿಯೇ ಸರಿ. ಈ ಕ್ರಾಂತಿಯ ರೂವಾರಿ ಸಮರ್ಥ ರಾಮದಾಸರ ರಾಮದಾಸಿ ಪಂಥದ ಸಂತ ವೇಣಾಬಾಯಿ. ಸಂತ ಮೀರಾಳಂತೆ ಸಂತ ವೇಣಾಬಾಯಿಯು ವಿಷಕಂಠಳಾಗಿ ಬದುಕಿದವಳು. ಬಾಲ್ಯ ವಿವಾಹವಾಗಿ ಬಾಲ ವಿಧವೆಯಾದ ವೇಣಾಬಾಯಿ ಸಮಾಜದ ನಿಂದೆಗೆ ಗುರಿಯಾಗಿ, ಆಪ್ತ ಸಂಬಂಧಗಳಿಗೆ ಮುಖಾಮುಖಿಯಾಗಿ ಹೋರಾಟ ನಡೆಸುವ ಸಂದರ್ಭ ಒದಗಿ ಬಂತು. ಅವಳು ಶ್ರೀರಾಮನ ಭಕ್ತಳಾಗಿ ರಾಮಾಯಣದ ಕುರಿತು ಹೆಚ್ಚು ಗ್ರಂಥಗಳನ್ನು ರಚಿಸಿದ್ದಾಳೆ. ಇವುಗಳು ವೇಣಾಬಾಯಿಯಲ್ಲಿ ಹುದುಗಿದ್ದ ಭಾವನೆಗಳ ಪ್ರತಿರೂಪವೇ ಆಗಿವೆ. ವೇಣಾಬಾಯಿಯು ಪ್ರಪಂಚವನ್ನು ಎದುರಿಸಿ ಪಾರಮಾರ್ಥದಲ್ಲಿ ಮಾಡಿದ ಸಾಧನೆಯಿಂದಾಗಿ ಇಂದು ವೇಣಾಸ್ವಾಮಿಯಾಗಿ ಪೂಜಿಸಲ್ಪಡುತ್ತಾಳೆ.
ಸಾಮಾಜಿಕ ಸ್ಥಿತ್ಯಂತರಗಳ ಧಾಟಿ ಬದಲಾದಂತೆ ಮರಾಠಿ ಮಹಿಳಾ ಸಂತರ ಲೇಖನದ ಶೈಲಿ ಬದಲಾಗಿರುವುದನ್ನು ನಾವು ಸಂತ ವಿಠಾಬಾಯಿಯ ಅಭಂಗಗಳಲ್ಲಿ ಕಾಣುತ್ತೇವೆ. ಇವಳು ಸಾಂಸಾರಿಕ ಕ್ಲೇಶಗಳನ್ನು ಮುಕ್ತವಾಗಿ ಚರ್ಚಿಸುತ್ತಾಳೆ. ಇಚ್ಛೆ ಇಲ್ಲದ ಬಾಲ್ಯವಿವಾಹ ಹಾಗೂ ಪತಿಯ ವಿಕೃತ ವೃತ್ತಿಗೆ ಬೇಸತ್ತು ಮನೆಯನ್ನು ತೊರೆಯುವ ಅವಳು ಸಮಾಜದ ವಿರೋಧ ಹಾಗೂ ಪತಿಯ ಶೋಷಣೆಗೆ ಅಭಂಗದ ಮೂಲಕ ಖಡಕ್ ಉತ್ತರ ನೀಡುತ್ತಾಳೆ. ‘ನಿನ್ನ ಸತ್ತೆ ನನ್ನ ದೇಹದ ಮೇಲಿರಬಹುದು ತಿಳಿದುಕೋ, ಆದರೆ ನನ್ನ ಮೇಲೆ ಕಿಂಚಿತ್ತೂ ಇಲ್ಲ.’ ‘ನಾನು ಕೇವಲ ದೇಹವಲ್ಲ, ಇದು ನನ್ನ ದೇಹ’ ಎಂದು ನಿರ್ಭಿಡೆಯಿಂದ ತನ್ನ ಕೋಪವನ್ನು ಹೊರಗೆಡಹುತ್ತಾಳೆ. ವಿಠಾಬಾಯಿಯ ಸಾತ್ವಿಕ ಸಂತಾಪದ ಭಾವವು ಅಂದಿನ ವ್ಯವಸ್ಥೆಯ ವಿರುದ್ಧದ ಹೋರಾಟವಲ್ಲ. ಆದರೆ ಹೆಣ್ಣು ದುರ್ಬಲಳಲ್ಲ ಎಂದು ತನ್ನ ಸಾಮಥ್ರ್ಯವನ್ನು ಅನಾವರಣಗೊಳಿಸುವ ಪ್ರಯತ್ನವಷ್ಟೇ. ಗುರು ರಾಜಾರಾಮರಲ್ಲಿ ಹಾಗೂ ಉಪಾಸ್ಯ ದೈವತ ಚಿದಂಬರ ದೀಕ್ಷಿತರಲ್ಲಿ ಸಂತ ವಿಠಾಬಾಯಿಯದು ಅನನ್ಯ ಭಕ್ತಿ. ಹೀಗೆ ಪುರುಷರನ್ನು ತಮ್ಮ ಗುರುವಾಗಿ ಸ್ವೀಕರಿಸುವ ಸಂತ ಕವಯಿತ್ರಿಯರು ಪುರುಷ ಪ್ರಭಾವಳಿಯನ್ನು ನಿಸ್ಸಂದೇಹವಾಗಿ ಒಪ್ಪಿಕೊಂಡಿದ್ದಾರೆ.

ಸಂತ ಮುಕ್ತಾಬಾಯಿ

ಈ ಎಲ್ಲ ಕವಯಿತ್ರಿಯರಿಂದ ಭಿನ್ನವಾಗಿ ನಿಲ್ಲುವ ಸಂತ ಮುಕ್ತಾಬಾಯಿಯ ಭಾವವಿಶ್ವವು ಮರಾಠಿ ಸಂತ ಕವಯಿತ್ರಿಯರಲ್ಲಿ ವಿಭಿನ್ನವಾದ ಸ್ಥಾನ ಪಡೆಯುತ್ತದೆ. ಎಳೆ ವಯಸ್ಸಿನಲ್ಲಿ ತಂದೆ ತಾಯಿಗಳ ಸಾವು ಹಾಗೂ ಅದರಿಂದ ಮೂಡಿದ ಅನಾಥ ಪ್ರಜ್ಞೆ, ಸಮಾಜದಿಂದ ದೊರೆತ ಬಹಿಷ್ಕಾರ, ಬಡತನ ಹೀಗೆ ವಿಧ ವಿಧವಾಗಿ ಸ್ತ್ರೀ ಮನದ ಭಾವನೆಗಳಿಗೆ ಧಕ್ಕೆ ತರುವ ಪ್ರಸಂಗಗಳು ಮುಕ್ತಾಬಾಯಿಗೆ ಎದುರಾದವು. ಆದರೆ ಮುಕ್ತಾಬಾಯಿಯು ತನ್ನ ಭಾವನೆಗಳನ್ನು ಹಾಗೂ ಕುಟುಂಬ ಸಂಬಂಧಗಳನ್ನು ತನ್ನ ಸಾಹಿತ್ಯದಲ್ಲಿ ಎಲ್ಲಿಯೂ ವ್ಯಕ್ತ ಪಡಿಸುವದಿಲ್ಲ. ಇದು ಅವಳ ಸಾಹಿತ್ಯದ ವಿಶೇಷತೆಯೂ ಆಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬದ ಜವಾಬ್ದಾರಿ ಹೊರುವ ಅವಳು ತನ್ನ ಭಾವನೆಗಳಿಗೆ ಆಸ್ಪದ ನೀಡುವುದಿಲ್ಲ. ಸಹೋದರ ನಿವೃತ್ತಿನಾಥರು ಸದ್ಗುರುವಾಗಿ ಅವಳಿಗೆ ಕಾಣುತ್ತಾರೆ. ಪ್ರಾಪಂಚಿಕ ಜೀವನದ ಒಂದು ಪ್ರಸಂಗವನ್ನು ವ್ಯಕ್ತಪಡಿಸುವ ಅವಳ ತಾಟಿಚೆ ಅಭಂಗದಲ್ಲಿಯೂ ಜ್ಞಾನ, ಭಕ್ತಿ, ವಿರಕ್ತಿಯ ಗಾಢ ದರ್ಶನವಾಗುತ್ತದೆ.
ಬ್ರಹ್ಮ ಮೂಲದಿಂದ ವಿಕಾಸ, ಬೇರೆ ಎಲ್ಲವೂ ಮಾಯೆಯ ಧ್ಯಾಸ
ವಿಶ್ವ ಬ್ರಹ್ಮವಾದಾಗ, ಮಾಯೆಯ ಸಮೂಹ ಇರದು ಆಗ
ಇದೇ ಆದಿ ಅಂತ್ಯ, ಅರಿತಾಗ ಸುಖಿಯಾಗುವರು ಸಂತ
ಚಿಂತಾ ಕ್ರೋಧದಿಂದ ದೂರ, ತಾಟಿ(ಬಾಗಿಲು) ತೆಗೆಯೋ ಜ್ಞಾನೇಶ್ವರ

ಸಮಾಜದ ಮೇಲೆ ಕೋಪಗೊಂಡ ಸಹೋದರ ಜ್ಞಾನೇಶ್ವರರನ್ನು ಆಧ್ಯಾತ್ಮಿಕ ಮಾರ್ಗದಿಂದ ಸಂತೈಸುವ ಅವಳು, ಬ್ರಹ್ಮಜ್ಞಾನಿ ಎನಿಸಿಕೊಂಡಿದ್ದ ಚಾಂಗದೇವರನ್ನು ಆಧ್ಯಾತ್ಮಿಕ ಶಿಶುವಾಗಿಸಿ ಸಂವಾದದಲ್ಲಿ ತೊಡಗುವಾಗಲೂ ತಾನು ಮಾತೃ ಸ್ಥಾನದಲ್ಲಿ ನಿಂತು ತನ್ನ ಪರಮಾರ್ಥದ ಅಧಿಕಾರವನ್ನು ಸ್ಪಷ್ಟಪಡಿಸುತ್ತಾಳೆ. “ಮುಕ್ತಾಬಾಯಿಯು ತೋರುವ ಶೃದ್ಧೆಯು ವಾತ್ಸಲ್ಯದ್ದು ಅಲ್ಲ ಹಾಗೂ ಅಂತ:ಕರಣದ್ದು ಅಲ್ಲ ಆದರೆ ಅದು ಆತ್ಮನಿಷ್ಠೆಯದ್ದಾಗಿದೆ” ಎನ್ನುವ ಮರಾಠಿ ಸಾಹಿತಿಗಳ ಅಭಿಪ್ರಾಯ ಸಮಂಜಸವಾದದ್ದು. ಬಾಹ್ಯ ಜೀವನದಲ್ಲಿ ಅವಳಿಗೆ ಆಸಕ್ತಿ ಇಲ್ಲ. ಅವಳು ತನ್ನ ಹೆಸರಿಗೆ ಪ್ರತಿರೂಪವಾಗಿ ಮುಕ್ತ ಅವಸ್ಥೆಯ ಕುರಿತು ಮಾತನಾಡುತ್ತಾಳೆ. ಅವಳ ವಯಸ್ಸು ಹಾಗೂ ಮನಸ್ಸಿಗೆ ಅದ್ಭುತ ಅಗಾಧವೆನಿಸುವಷ್ಟು ಅಜಗಜಾಂತರ ವ್ಯತ್ಯಾಸವಿದೆ. ಬಾಲ್ಯಸ್ಥಿತಿ ಹಾಗೂ ಪ್ರೌಢಸ್ಥಿತಿ ಈ ಎರಡರ ಮಧ್ಯೆ ಜ್ಞಾನಾನುಭವದ ಪ್ರಾಸಾದಿಕ ಸ್ಥಿತಿ ಅವಳಿಗೆ ಲಭಿಸಿದೆ.
ಮರಾಠಿ ಸಂತ ಕವಯಿತ್ರಿಯರಿಗೆ ಭಕ್ತಿಯೇ ಬದುಕಿನ ಕ್ರಮವಾಗಿದೆ. ಅವರು ಸಂಸ್ಕೃತಿ ಸಂಪ್ರದಾಯಗಳನ್ನು ಅನನ್ಯತೆಯಿಂದ ಸ್ವೀಕರಿಸುತ್ತಾರೆ. ಅವರಿಗೆ ಸಮಾಜದಿಂದ ದೂರವಾಗಿ ತಮ್ಮದೇ ಲೋಕ ಸೃಷ್ಟಿಸಿಕೊಳ್ಳುವ ಹಟವಿಲ್ಲ. ಸಮಕಾಲೀನ ವ್ಯವಸ್ಥೆಯನ್ನು ವಿರೋಧಿಸುವ ಆಶಯವೂ ಇಲ್ಲ. ಇದೆಲ್ಲವನ್ನು ಮೀರಿ ನಿಂತ ಸೂಕ್ಷ್ಮ ಸಂವೇದನೆಯ ಓಜಸ್ಸು ಅವರಲ್ಲಿದೆ. ಅವರ ಕವಿತ್ವವು ಕೇವಲ ಜ್ಞಾನ ಮೀಮಾಂಸೆಯಲ್ಲ. ಸರಳವೆನಿಸುವ ಘಟನೆಗಳನ್ನು ಕಾವ್ಯಬದ್ಧಗೊಳಿಸುವ ಪ್ರಾವೀಣ್ಯತೆ ಅವರಲ್ಲಿದೆ. ಆದ್ದರಿಂದ ಇದು ಜನಜೀವನಕ್ಕೆ ಹತ್ತಿರವಾಗುವ ಜನಪದ ಮೀಮಾಂಸೆಯಾಗಿದೆ. ಮರಾಠಿ ಮಹಿಳಾ ಸಂತ ಸಾಹಿತ್ಯವು ಒಮ್ಮೆ ಓದಿದಾಗ ಮುಕ್ತಾಯವಾಗುವಂತಿರದೆ ಅದು ಪುನ: ಪಠಣ ಹಾಗೂ ಪುನ: ಮನನ ಆಶಿಸುತ್ತದೆ. ಇದು ಮಾನವತೆಗೆ ಭರವಸೆಯಾಗಿ ನಿಲ್ಲುವ ಸಾಹಿತ್ಯವಾಗಿ ಎಂದೆಂದಿಗೂ ಚಿರಂತನವಾಗಿರುತ್ತದೆ ಎಂದು ದೃಢವಾಗಿ ಹೇಳಬಹುದು.