ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಾದರಿಯಾದವರು ಶ್ರೀ ಗಂಗಾಧರ ಶೆಟ್ಟಿ

ಮಾದರಿಗಳೇ ಇಲ್ಲದ ಹೊತ್ತಿನಲ್ಲಿ ಮಾದರಿಯಾದವರು ಶ್ರೀ ಗಂಗಾಧರ ಶೆಟ್ಟಿ:

– ನರಹಳ್ಳಿ ಬಾಲಸುಬ್ರಹ್ಮಣ್ಯ

ಇವತ್ತು ನಮ್ಮ ಮುಂದೆ ಮಾದರಿಯ ವ್ಯಕ್ತಿತ್ವಗಳೆ ಇಲ್ಲದಿರುವಾಗ ವೈ ಎನ್ ಗಂಗಾಧರಶೆಟ್ಟಿಯಂಥವರ ಬದುಕು ಆದರ್ಶಗಳು ಯುವ ಜನತೆಗೆ ಮಾದರಿ ಎಂದು ಬಹುಮುಖಿ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು. ಅವರು ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ ಮತ್ತು ಅಭಿನವ ಏರ್ಪಡಿಸಿದ್ದ ಗೋಕಾಕ್ ಟ್ರಸ್ಟಿನ ಅಧ್ಯಕ್ಷರು ಮತ್ತು ಶತಾಯುಷಿ ವೈ. ಎನ್. ಗಂಗಾಧರ ಶೆಟ್ಟಿ ಅವರ ಅಭಿನಂದನೆ ಮತ್ತು ಸಮನ್ವಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಪಂಪ ಧರ್ಮಂ ಪ್ರಧಾನಂ ಅರ್ಥಂಘ್ರಿಪಫಲಂ ಅದರ್ಕೆ ರಸಮದುಕಾಮಂ ಎನ್ನುತ್ತಾನೆ. ಅಂದರೆ ನಮಗೆ ಅರ್ಥ, ಕಾಮಗಳು ಬೇಕು ಅದರೆ ಅವು ಧರ್ಮಬದ್ಧವಾಗಿರಬೇಕು ಎನ್ನುವ ಆಶಯ ಪಂಪನದು ಅದರಂತೆಯೇ ಗಂಗಾಧರಶೆಟ್ಟಿಯವರು ಕೂಡ ತಮ್ಮ ಉದ್ಯಮದಲ್ಲಿಯೂ ಧರ್ಮದ ಚೌಕಟ್ಟನ್ನು ಮೀರದೆ ಔನತ್ಯವನ್ನು ಪಡೆದವರು. ಹಾಗೆಯೇ ಗೋಕಾಕ್ ಟ್ರಸ್ಟಿನ ಮೂಲಕ ಸಾಹಿತ್ಯಕ ಸಾಧನೆಯನ್ನು ಮಾಡಿದವರು. ಇಂಥವರ ವ್ಯಕ್ತಿತ್ವವನ್ನು ಕಟ್ಟಿಕೊಡಲು ನಮ್ಮ ಭಾರತೀಯ ವಾಙ್ಮಯ ಪರಂಪರೆಯ ಪಠ್ಯಗಳಾದ ವೇದ, ಉಪನಿಷತ್ತು, ರಾಮಾಯಣ, ಮಹಾಭಾರತ, ಭಗವದ್ಗೀತೆಗಳ ಜೊತೆಗೆ ಅಷ್ಟೆ ಪವಿತ್ರವಾದ ಭಾರತದ ಸಂವಿಧಾನದ ಬಗೆಗೂ ಲೇಖನವಿರುವುದು ಔಚಿತ್ಯಪೂರ್ಣವಾಗಿದೆ.ಇದು ಕೇವಲ ಗಂಗಾಧರ ಶೆಟ್ಟಿ ಅವರ ಕುಟುಂಬ ಮಾತ್ರವಲ್ಲ ನಾಳಿನ ಸಮಾಜದ ಬಗೆಗೆ ಕನಸನ್ನಿಟ್ಟುಕೊಂಡವರೆಲ್ಲರೂ ಓದಬೇಕಾದ, ಓದಿಸಬೇಕಾದ ಕೃತಿ. ಅಭಿನವದರು ಯಾವ ಕೆಲಸವನ್ನಾದರೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಒಂದು ಅಭಿನಂದನಾ ಕೃತಿಯನ್ನು ಹೀಗೆ ಜನಸ್ನೇಹಿಯಾಗಿ ರೂಪಿಸಿರುವುದು ಕನ್ನಡದಲ್ಲಿ ಹೊಸದು. ಮಾದರಿಯಾದುದು’ ಎಂದು ಅಭಿಪ್ರಾಯಪಟ್ಟರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಹಕಾರಿ ಧುರೀಣ ಬಿ.ಎಸ್. ವಿಶ್ವನಾಥ್ ಮಾತನಾಡಿವಿನಾಯಕ ವಾಙ್ಮಯ ಟ್ರಸ್ಟ್‍ನ್ನು ಆರಂಭಿಸಿದವರಲ್ಲಿ ರಾಮಕೃಷ್ಣ ಹೆಗಡೆ, ಚಿ.ನಾ ಮಂಗಳಾ, ಹಾ. ಮಾ. ನಾಯಕ್, ರಾ. ಯ. ಧಾರವಾಡಕರ್, ಪಿ. ಎಸ್. ಭಟ್ ಮುಂತಾದವರೆಲ್ಲ ಇದ್ದರು. ಅಂಥ ಮಹಾನುಭಾವರ ಜೊತೆಗಿನ ಒಡನಾಡ ನನ್ನ ವ್ಯಕ್ತಿತ್ವಕ್ಕೂ ಒಂದು ಘನತೆಯನ್ನು ತಂದುಕೊಟ್ಟಿತು. ಗಂಗಾಧರ ಶೆಟ್ಟಿಯವರಷ್ಟು ವಿನಯಶೀಲ, ಸಂಯಮದ ಶಿಸ್ತಿನ ಮನುಷ್ಯರನ್ನು ನಾನು ಈವರೆವಿಗೂ ನೋಡಿಲ್ಲ. ಅವರಂತೆ ಜವಾಬ್ದಾರಿಯನ್ನು ಹೊರುವುದು ಸುಲಭದ ವಿಚಾರವಲ್ಲ. ಮುಂದೆ ಕೂಡ ಟ್ರಸ್ಟ್ ಇಂಥ ಕೆಲಸಗಳನ್ನು ಹಮ್ಮಿಕೊಳ್ಳುವುದು’ ಎಂದರು.

ಹಿರಿಯ ನಿವೃತ್ತ ಐ ಎ ಎಸ್ ಅಧಿಕಾರಿ ಅನಿಲ್ ಗೋಕಾಕ್ ಅವರು ಮಾತನಾಡಿ ನಾನು ಚಿಕ್ಕವನಾಗಿರುವಾಗ ಗಂಗಾಧರ ಶೆಟ್ಟಿಯವರು ನಮ್ಮ ಮನೆಗೆ ಬರುತ್ತಿದ್ದರು.ಅವರ ಸಜ್ಜನಿಕೆಯ ವ್ಯಕ್ತಿತ್ವ ನಮ್ಮ ತಂದೆಯವರಿಗೂ ಮೆಚ್ಚಿಗೆಯಾಗಿತ್ತು. ಅವರ ಜೀವನವೆಂಬ ಮೈದಾನದಲ್ಲಿ ಆಡಿದ ಕ್ರಿಕೆಟ್‍ನಲ್ಲಿ ಭರ್ಜರಿ ಶತಕ ಬಾರಿಸಿದ್ದಾರೆ. ಅವರಾಡಿದ ಆಟ ನೇರವಾದುದು ಎದುರಾದ ಸಮಸ್ಯೆಗಳೆಂಬ ಬಾಲುಗಳನ್ನು ನೀಷ್ಠೆಯಿಂದ ತಾಳ್ಮೆಯಿಂದ ಗಟ್ಟಿತನದಿಂದ ಎದುರಿಸಿದ್ದಾರೆ’ ಎಂದರು.

ಅಭಿನವದ ರವಿಕುಮಾರ್

ಅಭಿನವದ ರವಿಕುಮಾರ್ ಮಾತನಾಡಿ ಗಂಗಾಧರ ಶೆಟ್ಟಿ ಅವರ ಯಶಸ್ಸಿನ ಹಿಂದೆ ಅವರ ಪತ್ನಿ ಶ್ರೀಮತಿ ರಾಮರತ್ನಮ್ಮ ಅವರ ಪರಿಶ್ರಮವಿದೆ. ಪ್ರಪಂಚಕ್ಕೆ ಭಾರತ ಕೊಟ್ಟಿರುವ ಅಮೂಲ್ಯ ಪರಿಕಲ್ಪನೆಯಾದ ವಸುಧೈವ ಕುಟುಂಬಂತೆ ಗಂಗಾಧರ ಶೆಟ್ಟಿ ಅವರ ಕುಟುಂಬವಿದೆ’ ಎಂದರು.

ಕಾರ್ಯಕ್ರಮದಲ್ಲಿ ಲೇಖಕಿ ಶ್ರೀಮತಿ ರಜನಿ ನರಹಳ್ಳಿ, ಕವಯತ್ರಿ ಪಿ. ಚಂದ್ರಿಕಾ, ಶ್ರೀಮತಿ ಹೇಮಾ ಅನಿಲ್ ಕುಮಾರ್, ರಾಜರಾಜೇಶ್ವರಿ ಶಿಕ್ಷಣ ಟ್ರಸ್ಟ್‍ನ ಕಾರ್ಯದರ್ಶಿ ಹಯಗ್ರೀವಾಚಾರ್, ಬುಕ್ ಬ್ರಹ್ಮ ಸಂಪಾದಕ ದೇವು ಪತ್ತಾರ್, ರಾಮಕುಮಾರ್ ಶೆಟ್ಟಿ ಮುಂತಾದವರು ಪಾಲ್ಗೊಂಡರು.