ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಂಬೈಯಲ್ಲಿ ’ಚಿಣ್ಣರಬಿಂಬ’ದ ಕ್ರಾಂತಿ

ಕುಮುದಾ ಕೆ. ಆಳ್ವ
ಇತ್ತೀಚಿನ ಬರಹಗಳು: ಕುಮುದಾ ಕೆ. ಆಳ್ವ (ಎಲ್ಲವನ್ನು ಓದಿ)

ಮುಂಬಯಿಯಲ್ಲಿ ಕನ್ನಡಿಗರ ನೂರಾರು ಸಂಘ-ಸಂಸ್ಥೆಗಳು ಕನ್ನಡದ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಅವುಗಳಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕ್ರಾಂತಿಯನ್ನುಂಟುಮಾಡಿದ ವಿಭಿನ್ನ ಸಂಸ್ಥೆಯೇ ಚಿಣ್ಣರಬಿಂಬ. ಪಾಶ್ಚಾತ್ಯ ಜೀವನ ಶೈಲಿಯ ಆಕರ್ಷಣೆಯಿಂದ ನಮ್ಮ ಭಾಷೆ, ಸಂಸ್ಕಾರ, ಸಂಸ್ಕೄತಿ, ಆಚಾರ, ವಿಚಾರಗಳು ಮರೆಯಾಗಬಾರದೆಂಬ ಉದ್ದೇಶದಿಂದ ಶ್ರೀಯುತ ಪ್ರಕಾಶ್ ಭಂಡಾರಿ, ತೋನ್ಸೆ ಶ್ರೀ ವಿಜಯ್‍ಕುಮಾರ್ ಶೆಟ್ಟಿ ಮತ್ತು ಶ್ರೀ ಸುರೇಂದ್ರಕುಮಾರ್ ಹೆಗ್ಡೆಯವರ ಮುಂದಾಳತ್ವದಲ್ಲಿ ಕಲಾಜಗತ್ತು ಸಂಸ್ಥೆಯ ಬೆಳ್ಳಿಹಬ್ಬದಂಗವಾಗಿ ಮಕ್ಕಳಿಗಾಗಿ ಕಲಾಜಗತ್ತು ಚಿಣ್ಣರಬಿಂಬ’ ಎಂಬ ಸಂಸ್ಥೆಯನ್ನು ಹುಟ್ಟುಹಾಕಲಾಯಿತು. 2003ರಲ್ಲಿ ಶ್ರೀ ಪೇಜಾವರ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಕೇವಲ ಐವತ್ತು ಮಕ್ಕಳೊಂದಿಗೆ ಆರಂಭಗೊಂಡ ಚಿಣ್ಣರಬಿಂಬವು ಇಂದು ಸಾವಿರಾರು ಮಕ್ಕಳನ್ನು ಹೊಂದಿ ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದೆ.

ಒಂದು ಸಸಿಗೆ ಒಳ್ಳೆಯ ಪೋಷಾಕಾಂಶಗಳು ದೊರೆತರೆ ಮಾತ್ರ ಅದು ಬೆಳೆದು ಅತ್ಯುತ್ತಮ ಫಸಲನ್ನು ನೀಡುವ ಹಾಗೆ ಮಕ್ಕಳಿಗೂ ವಿದ್ಯಾಭ್ಯಾಸದ ಜೊತೆಗೆ ಎಳವೆಯಿಂದಲೇ ಸಂಸ್ಕಾರಯುಕ್ತ, ನೀತಿಯುಕ್ತವಾದ ಶಿಕ್ಷಣ ದೊರೆತರೆ ಭವಿಷ್ಯದಲ್ಲಿ ಅವರು ಉತ್ತಮ ನಾಗರಿಕರಾಗಿ ರೂಪುಗೊಳ್ಳಬಹುದು. ಹಾಗೆಯೇ ಚಿಣ್ಣರಬಿಂಬವು ಏಳರಿಂದ ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಕನ್ನಡ ಭಾಷೆಯ ಜೊತೆಗೆ ಮಾತೃ ನೆಲದ ಸಂಸ್ಕಾರ, ಸಂಪ್ರದಾಯಗಳನ್ನು ಕಲಿಸಿ ಹಸಿಗೋಡೆಯ ಮೇಲೆ ಹರಳು ಎಸೆದಂತೆ ಮಕ್ಕಳ ಮೃದು ಮನಸ್ಸಿನಲ್ಲಿ ನಮ್ಮ ಮೂಲಸಂಸ್ಕøತಿಯನ್ನು ಉಳಿಸಿ ಬೆಳೆಸುವ ಮಹಾನ್ ಕಾಯಕದಲ್ಲಿ ತೊಡಗಿಸಿಕೊಂಡಿದೆ. ಯಾವುದೇ ಜಾತಿ, ಧರ್ಮ, ಪಂಗಡಗಳ ಭೇದವಿಲ್ಲದೆ, ಮೇಲು ಕೀಳೆಂಬ ತಾರತಮ್ಯವಿಲ್ಲದೆ ಮುಂಬಯಿಯಲ್ಲಿ ನೆಲೆಸಿರುವ ಕನ್ನಡನಾಡಿನ ಮಕ್ಕಳಿಗೆ ಕನ್ನಡ ಕಲಿಕೆ ಮಾತ್ರವಲ್ಲದೆ ಭಜನೆ, ಯಕ್ಷಗಾನ, ನೃತ್ಯ ಹಾಗೂ ಜಾನಪದ ಕಲೆಗಳನ್ನು ಕಲಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಚಿಣ್ಣರಬಿಂಬವು ಶ್ರಮಿಸುತ್ತಾ ಬಂದಿದೆ.

ಚಿಣ್ಣರ ಬಿಂಬವೆಂಬುದು ಒಂದು ಕೂಡು ಕುಟುಂಬವಿದ್ದಂತೆ. ನಗರದ ವಿಭಕ್ತ ಕುಟುಂಬದಲ್ಲಿ ಒಂಟಿಯಾಗಿ ಬೆಳೆಯುತ್ತಿರುವ ಮಕ್ಕಳಿಗೆ ಇದೊಂದು ವರದಾನವೇ ಸರಿ. ಇಂದು ಎಲ್ಲಾ ಕಡೆ ಸಂಬಂಧಗಳು ಮೌಲ್ಯಗಳನ್ನು ಕಳೆದುಕೊಂಡು ಇಂಗ್ಲಿಷ್‍ಮಯವಾಗುತ್ತಿರುವಾಗ ಚಿಣ್ಣರಬಿಂಬದ ಮಕ್ಕಳು ಹಿರಿಯರನ್ನು ಮಾಮ, ಮಾಮಿ, ಚಿಕ್ಕಮ್ಮ ಎಂದು ಸಂಭೋದಿಸುತ್ತಾ ಗೌರವಿಸುವುದನ್ನು ಕಂಡಾಗ ಮನತುಂಬಿ ಬರುತ್ತದೆ. ಚಿಣ್ಣರಬಿಂಬದಲ್ಲಿ ಕಲಿತ ಮಕ್ಕಳಲ್ಲಿ ಪ್ರೀತಿ, ಪ್ರೇಮ, ಆದರಗಳ ಜೊತೆಗೆ ಆತ್ಮವಿಶ್ವಾಸವು ಕಂಡುಬರುತ್ತದೆ. ಇಂದಿನ ಸ್ಪರ್ಧಾತ್ಮಕ ಶಿಕ್ಷಣ ಕ್ರಮ ಮತ್ತು ಆಧುನಿಕತೆಯ ಪ್ರಭಾವದಿಂದ ಮಕ್ಕಳು ಅನುಭವಿಸುತ್ತಿರುವ ಒತ್ತಡವನ್ನು ನಿವಾರಿಸಲು ಹಾಗೂ ಮಕ್ಕಳಲ್ಲಿ ಧನಾತ್ಮಕ ಚಿಂತನೆಯನ್ನು ಮೂಡಿಸುವಲ್ಲಿಯೂ ಚಿಣ್ಣರ ಬಿಂಬವು ಸಹಕಾರಿಯಾಗಿದೆ. ಮಕ್ಕಳ ಜ್ಞಾನ ಸಂಪತ್ತನ್ನು ಹೆಚ್ಚಿಸಲು ಮತ್ತು ಮಕ್ಕಳನ್ನು ಮಾನಸಿಕವಾಗಿ ಸದೃಡಗೊಳಿಸಲು ಆಗಾಗ ಪ್ರತಿಭಾನ್ವಿತ ವಿದ್ವಾಂಸರಿಂದ ಸೂಕ್ತ ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ. ಚಿಣ್ಣರಬಿಂಬವು ಮುಂಬಯಿ ಮತ್ತು ಉಪನಗರಗಳಲ್ಲಿ ಒಟ್ಟು 26 ಶಾಖೆಗಳನ್ನು ಹೊಂದಿದ್ದು ಪ್ರತಿ ಶಿಬಿರದಲ್ಲಿ ಮಕ್ಕಳಿಗೆ ವರ್ಷಂಪ್ರತಿ ಶ್ಲೋಕ, ಭಾಷಣ, ಭಾವಗೀತೆ, ಜಾನಪದ ಗೀತೆ, ಏಕಪಾತ್ರಾಭಿನಯ, ಕಿರುನಾಟಕ ಮುಂತಾದ ಅನೇಕ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಾದವರಿಗೆ ಅದ್ದೂರಿಯಾಗಿ ನಡೆಯುವ ವಾರ್ಷಿಕ ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಅವಕಾಶ ಒದಗಿಸಿ ವಿಶೇಷ ಬಹುಮಾನಗಳನ್ನು ನೀಡಲಾಗುತ್ತದೆ. ಪ್ರತಿ ವರ್ಷ ವಾರ್ಷಿಕ ಸಮಾರಂಭಕ್ಕೆ ಮಂತ್ರಿಗಳು, ಸಿನೇಮಾ ತಾರೆಯರು, ಉದ್ಯಮಿಗಳು, ಸಾಹಿತಿಗಳು ಹೀಗೆ ಅನೇಕ ಮಹಾನ್ ವ್ಯಕ್ತಿಗಳು ಅತಿಥಿಗಳಾಗಿ ಆಗಮಿಸಿ ಸಂಸ್ಥೆಯ ಕಾರ್ಯಕ್ರಮವನ್ನು ಕಂಡು ಶ್ಲಾಘಿಸಿ ಕೊಂಡಾಡಿರುವುದು ಚಿಣ್ಣರ ಬಿಂಬ ಪರಿವಾರದ ಶ್ರಮಕ್ಕೆ ಸಂದ ಗೌರವವಾಗಿದೆ. ಚಿಣ್ಣರ ಬಿಂಬದ ಚಿಣ್ಣರಿಗೆ ಮಾನಸಿಕ ಖಿನ್ನತೆಯಿಲ್ಲ, ಸಭಾ ಕಂಪನವಿಲ್ಲ. ಹಾಗಾಗಿಯೇ ಇಲ್ಲಿ ಕಲಿಯುವ ಮಕ್ಕಳು ಭಾಷಣ ಮಾಡಬಲ್ಲರು, ಹಾಡ ಬಲ್ಲರು, ಅಭಿನಯಿಸಬಲ್ಲರು. ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಶ್ರೀಯುತ ಪ್ರಕಾಶ್ ಭಂಡಾರಿಯವರು ಶಿಸ್ತಿನ ಸಿಪಾಯಿಯಾಗಿದ್ದು ಚಿಣ್ಣರ ಬಿಂಬದ ಮಕ್ಕಳಲ್ಲೂ ಅದೇ ಶಿಸ್ತಿನ ಪರಿಪಾಠವನ್ನು ಅಳವಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿಯೇ ಚಿಣ್ಣರ ಬಿಂಬದಲ್ಲಿ ಕಲಿತ ಮಕ್ಕಳು ಇಂದು ಸಂಸ್ಕಾರವಂತ ಪ್ರಜೆಗಳಾಗಿ ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಚಿಣ್ಣರ ಬಿಂಬದಲ್ಲಿ ಮಕ್ಕಳಿಗೆ ಮಾತ್ರವಲ್ಲದೆ ಪಾಲಕರಿಗೂ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಅವಕಾಶ ಒದಗಿಸಲಾಗುತ್ತದೆ. ಮಾಯ ನಗರಿಯಲ್ಲಿ ಕನ್ನಡಾಂಬೆಯ ಮಕ್ಕಳನ್ನು ಆಧುನಿಕತೆಯ ಆಕರ್ಷಣೆಯಿಂದ ಪಾರಾಗಿಸಲು ಮಕ್ಕಳಿಗೆ ಮಾತೃ ಭಾಷಾ ವ್ಯಾಮೋಹವನ್ನು ಬೆಳೆಸುವುದರ ಜೊತೆಗೆ ತಮ್ಮ ಸಂಸ್ಕøತಿ, ಆಚಾರ, ವಿಚಾರಗಳನ್ನು ಕಲಿಸಿ ಉತ್ತಮ ನಾಗರಿಕರನ್ನಾಗಿಸಿ ಮಕ್ಕಳ ಭವ್ಯ ಭವಿಷ್ಯವನ್ನು ರೂಪಿಸುತ್ತಿರುವ ಚಿಣ್ಣರಬಿಂಬ ಸಂಸ್ಥೆಯು ಇಡೀ ವಿಶ್ವಕ್ಕೆ ಮಾದರಿ ಎಂದರೆ ತಪ್ಪಾಗಲಾರದು.

ಒಟ್ಟಿನಲ್ಲಿ ಹದಿನೆಂಟು ವರ್ಷದ ಹಿಂದೆ ಬಿತ್ತಿದ ಚಿಣ್ಣರಬಿಂಬದ ಬೀಜವು ಇಂದು ಮುಂಬಯಿಯಾದ್ಯಂತ ಹೆಮ್ಮರವಾಗಿ ನಾಲ್ಕು ದಿಕ್ಕಿನಲ್ಲಿಯೂ ಪಸರಿಸಲು ಚಿಣ್ಣರಬಿಂಬದ ರೂವಾರಿ ಶ್ರೀಯುತ ಪ್ರಕಾಶ್ ಭಂಡಾರಿ ಮತ್ತು ಅವರ ಪರಿವಾರದ ಜೊತೆ ನೂರಾರು ಕನ್ನಡಿಗರ ಪರಿಶ್ರಮವಿದೆ. ಪೂಜಾ ಭಂಡಾರಿಯವರು ಚಿಣ್ಣರಬಿಂಬದ ಸ್ಥಾಪಕ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರೆ, ಸದ್ಯ ನೈನಾ ಭಂಡಾರಿಯವರು ಕಾರ್ಯಾಧ್ಯಕ್ಷೆಯಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಚಿಣ್ಣರಬಿಂಬದ ಯೋಜನೆಗಳನ್ನು ಸಾಕಾರಗೊಳಿಸಲು ಶ್ರಮಿಸುತ್ತಾ, ಸದಾ ಸಂಸ್ಥೆಯ ಏಳ್ಗೆಯನ್ನೇ ಬಯಸಿದ್ದ ದಿ. ಪ್ರಾ. ಸೀತಾರಾಮ ಆರ್. ಶೆಟ್ಟಿಯವರ ಕೊಡುಗೆಯೂ ಸ್ಮರಣೀಯ.

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯ ಅವರ ಸಲಹೆ, ಪ್ರೋತ್ಸಾಹ ಹಾಗೆಯೇ ಚಿಣ್ಣರಬಿಂಬದ ಕನ್ನಡ ಕಲಿಕಾ ವಿಭಾಗದ ಮುಖ್ಯಸ್ಥರಾದ ಡಾ. ಪೂರ್ಣಿಮಾ ಶೆಟ್ಟಿಯವರ ಕನ್ನಡ ಸೇವೆಯು ಚಿಣ್ಣರ ಬಿಂಬದ ಕಾರ್ಯಸಾಧನೆಗಳನ್ನು ಯಶಸ್ವಿಯಾಗಿಸುವಲ್ಲಿ ಸಹಕಾರಿಯಾಗಿದೆ. ಚಿಣ್ಣರಬಿಂಬದ ಅಭಿವೃದ್ಧಿಯಲ್ಲಿ ಕೈಜೋಡಿಸಿ ಶ್ರಮಿಸುತ್ತಿರುವ ಭಾಸ್ಕರ ಶೆಟ್ಟಿ, ಗೀತಾ ಹೇರಳ, ರಮೇಶ್ ರೈ, ವಿಜಯ್ ಕೊಟ್ಯಾನ್, ರವಿ ಹೆಗ್ಡೆ, ಜಗದೀಶ್ ರಾವ್, ಅಶೋಕ್ ಶೆಟ್ಟಿ, ಸಂಜೀವ ಪೂಜಾರಿ ಹಾಗೂ ಸಮಿತಿಯ ಎಲ್ಲಾ ಸದಸ್ಯರು ಅಭಿನಂದನಾರ್ಹರು. ಅದರಲ್ಲೂ ಹೊರನಾಡಿನಲ್ಲಿ ನೆಲೆಸಿರುವ ಕನ್ನಡಿಗರಿಗೆ ಚಿಣ್ಣರಬಿಂಬದ ಚಟುವಟಿಕೆಗಳು ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿಸಿ ಅವರ ಮನವೊಲಿಸಿ ತಮ್ಮ ಶಿಬಿರಗಳಲ್ಲಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಾ, ಕನ್ನಡ ಭಾಷೆ, ಭಜನೆಗಳನ್ನು ಪ್ರತಿ ಭಾನುವಾರ ತಪ್ಪದೆ ಕಲಿಸುತ್ತಾ, ಮಕ್ಕಳನ್ನು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ, ಪ್ರೇರಣೆ ನೀಡುತ್ತಾ, ಚಿಣ್ಣರಬಿಂಬ ಸಂಸ್ಥೆಯ ಉನ್ನತಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಪ್ರತಿ ಶಿಬಿರದ ಶಿಕ್ಷಕರು, ಮುಖ್ಯಸ್ಥರು, ಕಾರ್ಯಕಾರಿ ಸಮಿತಿಯ ಸದಸ್ಯರು, ಪಾಲಕರು ಇವರೆಲ್ಲರು ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಲೇಬೇಕು. ಹೀಗೆ ಪ್ರಕಾಶ್ ಭಂಡಾರಿಯವರ ದಕ್ಷ ನಾಯಕತ್ವದಲ್ಲಿ ಸಾವಿರಾರು ಕನ್ನಡ ಪ್ರೇಮಿಗಳ ಸಹಕಾರದೊಂದಿಗೆ ದಶ ಪರ್ವ, ಪಂಚದಶ ಪರ್ವಗಳನ್ನು ಅದ್ದೂರಿಯಾಗಿ ಆಚರಿಸಿದ ಚಿಣ್ಣರಬಿಂಬವು ಈಗ ತನ್ನ ರಜತ ಮಹೋತ್ಸವದತ್ತ ದಾಪುಗಾಲಿಡುತ್ತಿರುವುದು ಹೆಮ್ಮೆಯ ವಿಷಯ. ಮುಂಬಯಿಯಲ್ಲಿ ಮಕ್ಕಳ ಲೋಕದಲ್ಲಿ ಸಾಮಾಜಿಕ, ಸಾಂಸ್ಕøತಿಕ ಕ್ರಾಂತಿಯನ್ನುಂಟುಮಾಡಿ ಮಕ್ಕಳ ಬಾಳಿಗೆ ಬೆಳಕು ನೀಡುತ್ತಿರುವ ಕನ್ನಡಿಗರ ನೆಚ್ಚಿನ ಸಂಸ್ಥೆಯಾದ ಚಿಣ್ಣರಬಿಂಬವು ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಿ ವಿಶ್ವವಿಖ್ಯಾತಿಯನ್ನು ಪಡೆಯಲಿ ಎಂಬುದೇ ಕನ್ನಡಿಗರೆಲ್ಲರ ಹಾರೈಕೆ.
ಕುಮುದಾ ಕೆ. ಆಳ್ವ
ಶಿಕ್ಷಕಿ, ಚಿಣ್ಣರಬಿಂಬ