ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಲಲಿತಾ ಅಂಗಡಿ
ಇತ್ತೀಚಿನ ಬರಹಗಳು: ಲಲಿತಾ ಅಂಗಡಿ (ಎಲ್ಲವನ್ನು ಓದಿ)

ಇದೇನ್ರಿ, ರಾಮಾಯಣ ಅಂದ್ರೆ ಗೊತ್ತು ಎಲ್ಲರಿಗೆ, ಉತ್ತರಾಯಣ, ದಕ್ಷಿಣಾಯಣ ಅಂತ ಕೇಳಿವಿ. ಇದು ಎಂತ ಮೂಗಾಯಣ, ಯಾವ ಬಾದರಾಯಣ ಸಂಬಂಧಂತ ಮೂಗು ಮುರಿ ಬ್ಯಾಡ್ರಿ. ನಿಮ್ಮ ಮೂಗ ರಪೇರಿಗೆ ರೊಕ್ಕ ಎಲ್ಲಿಂದ ಕೊಡ್ಲಿ? ಹಾಂ ಶೂರ್ಪನಖಿ ಮೂಗು ಕತ್ತರಿಸಿಕೊಂಡಿದ್ದು ರಾಮಾಯಣದಲ್ಲಿ ಅಲ್ಲವೇನ್ರಿ?
ಮತ್ತೇನು ಇಲ್ರಿ ಆದ ಮೂಗು ಮೂಗು ಇದೆಯಲ್ಲ ಮುಟ್ಟುಕೊಂಡು ನೋಡಿಕೊಳ್ಳಿ ಖಾತ್ರಿ ಮಾಡಿಕೊಳ್ಳಿ ಇದೆಯಲ್ಲಾ ಇದೇ ಖಂಡಿತ ಇದೆ. ಮೂಗು ಅದರ್ರಿ ಮೂಗು ಅವರ ಬಗ್ಗೆ ಏನೇನೋ ಹೇಳತಿದ್ರು, ಯಾಕಂಗಂತಿದ್ರು ಅನ್ನುವ ತಿಳಿ ಹಾಸ್ಯ ಮಾತುಗಳು ಅಷ್ಟರಿ.
ಹೆಂಡತಿ ಮಾಡಿದ ಅಡುಗೆಯ ಘಮಘಮಿಸುವ ಪರಿಮಳವನ್ನು ಅಘ್ರಾಣಿಸುವ ಹೊರಗಿನಿಂದಲೆ ಗೇಟ್ ಹತ್ತಿರ ಎಂಟ್ರ ಆಗುವಾಗಲೆ ಏನೇ ಏನೇನ್ ಮಾಡಿದಿ, ಒಳ್ಳೆಯ ಘಮ್‍ಂತ ವಾಸನೆ ಮೂಗಿಗೆ ಬಡಿತು ಅಂತ ಒಂದು ಸಲ ಹೇಳಿದರೆ, ಇನ್ನೊಂದು ಸಲ ನೋಡಿ, ಇದೇನಿದು ಹೋಗನ್ನದೆ ಹೊಗಿ, ಹಾಕಿದಂತೆ, ಎಂಥಾ ಒತ್ತಿದ ವಾಸನೆ. ಘಾಟು ವಾಸನೆ ಕೆಮ್ಮು, ಸೀನು ಜೊತೆಗೆ ಕಣ್ಣಿರು ಮಹಾತಾಯಿ. ಇನ್ನೊಂದು ಸಲ ಬಗಿಸಿ ಏನು ಬೇಡುವುದಿಲ್ಲ ಮಾತೆ ಎನ್ನುವ ಮಾತುಗಳು ಮೂಗಿನ ಶಾರ್ಪನ್ನು ಮೂಗಿನ ಘನ ಶಕ್ತಿಯನ್ನು ತೋರಿಸಿ ಕೊಡುತ್ತದೆ.

1,414 Fart Stock Illustrations, Cliparts and Royalty Free Fart Vectors

ಇನ್ನೂ ಯಾರಾದರೂ ಟುಸ್ ಬಾಂಬ್ (ಊಸು) ಬಿಟ್ರ ಮೊದಲು ಮೂಗು ಮುಚ್ಚಿಕೊಂಡು, ಹಬಬಾ ಎಂಥಾ ಮದ್ದಿನ(ಮುದ್ದಿನ ಅಲ್ಲಾರಿ) ಟುಸ್ ಬಾಂಬ್‍ನ್ನು ಹೊಟ್ಟೆ ಉಬ್ಬಿ ಸಾಯಬೇಕು. ಹೋಗೋ ಹೋಗು ಸಂಡಾಸ್‍ಗೆ ಹೋಗಿ ಬಾ ಅಂತಿವಿ ಅಲ್ಲವೇನ್ರಿ.

ಆಗ ಮೂಗು ಮೆತ್ತಗ ಮಾಡಿ
ಕಣ್ಣು ಕೆಂಪಗೆ ಮಾಡಿ
ಒಳಗಿನಂದ ಬರುತಾನ ರಾಜಕುಮಾರ ಅಂತ
ಗೊಬ್ಬರ ಹೊರಗ ಬಂದ್ರೆ ನೋಡ್ರಿ ಮನುಷ್ಯ ಕ್ಲಿಯರ್ ಕಟ್ ಆಗ್ತಾನ ಅಯೋ ಎಂತಾ ಹೊಲಸು ಅಂತ ಮೂಗು ಮುಚ್ಚಿಕೋ ಬ್ಯಾಡ್ರಿ. ಇದು ದೈನಂದಿನ ಆರೋಗ್ಯಕರ ಕ್ರಿಯೆ ಮತ್ತು ಊಸು ಎಲ್ಲರಿಗೂ ದೇವರು ಕೊಟ್ಟ ಪೀಪಿ ಹೌದಲ್ರಿ.

ಇನ್ನು ಮೂಗೆ ನಿನ್ನ ಮಹಾತ್ಮೆ ಏನೆಂದು ವರ್ಣಿಸಲಿ ಹೆಣ್ಣು(ಕನ್ಯಾ) ನೋಡೋಕ ಹೋಗೋರಂತು ವರ ಮತ್ತು ಆತನ ತಂದೆ-ತಾಯಿ ಮೊದಲು ಹುಡುಗಿ ನೋಡಿ ಮಾತಾಡೋದ ಮೂಗಿನ ಬಗ್ಗೆ ಅಲ್ಲವೆನ್ರಿ? ಕಣ್ಣಲಿ, ಮೂಗಿಲೆ ನೋಡೋಕೆ ಲಕ್ಷಣವಾಗಿ ಇರಬೇಕ್ರಿ, ಮುಖದಾಗ ಎದ್ದಕಾಣೋದು ಅಂತ ಹೇಳೋದು.
ಆದ್ರ ವರ ಮಾತ್ರ ಮುಂಗ್ಯಾನ ಮುಸುಡಿ ಇದ್ದಂಗಿದ್ರು ಪರವಾಗಿಲ್ಲ ಹುಡುಗಿ ಮಾತ್ರ ಛೆಂದ ಇರಬೇಕು, ಮೂಗು ನೆಟ್ಟಗೆ ಇರಬೇಕಂತಾರ ನೋಡ್ರಿ. ಏನ್ ಮೂಗು, ಕಣ್ಣು ಮಸ್ತ ಅದಾಳ. ಥೇಟ್ ಲಕ್ಷೀ ಇದ್ದಂಗದಾಳ ನೋಡ್ರಪ್ಪ ನಮಗಂತು ಹುಡುಗಿ ಮನಸಿಗೆ ಬಂದೈತಿ ಅಂತ ಅನ್ನೋದು.
ಈ ಮೂಗಿನ ಆಕಾರಗಳನ್ನು ಹ್ಯಾಂಗ್ ಹ್ಯಾಂಗ್ ಹೇಳ್ತಾರಂದ್ರೆ ಆತನ ಮೂಗು ದಪ್ಪ ಬದ್ದಿಕಾಯಿ ಇದ್ದಂಗ ಆ ಸೀತಾಳ ಮೂಗಂತ ದೊಣ್ಣಿ ಮೆಣಸಿನ ಕಾಯಿ ಇದ್ದಂಗೈತಿ.
ಆತನ ಮೂಗಿನ ಮ್ಯಾಲೆ ದುಂಡುಕ ಚೆಂಡು ಇಟ್ಟಂಗೈತಿ ನೋಡ್ರಿ, ಪರಮಕ್ಕನ ಮಗಳ ಮೂಗಂತು ಮಂಡ ಗುದ್ಲಿ ಇದ್ದಾಗ, ಅಯ್ಯೋ ಆತನ ಮೂಗು ಆಂಗ್ಯಾಂಕ ಸೊಟ್ಟ ಐತಿ? ಎನ್ನುವ ಮಾತುಗಳು ಆಕಿ ಮೂಗಿನ ಮ್ಯಾಲೆ ಲಾರಿ ಹಾದು ಹೋದಂಗೈತ್ರಿ ಎಂತಾ ಮಂಡ ಮೂಗು, ಅಬಬಾ ರಾಮನ ಮೂಗಂತು ಹುಣಸಿಪಕ್ಕಾ ಇದ್ದಂಗ ಐತಿ, ನೋಡಬೆ ಯವ್ವಾ ಮೂಗು ಸಿಕ್ಕಂಡ ಹೋಗೈತಿ ನೋಡಕ ಸ್ವಲ್ಪರ ಚಂದ ಇಲ್ಲವ್ವ… ಎನ್ನುವ ಮಾತುಗಳು, ಇನ್ನೂ ಆತನ ಮೂಗು ಗಿಳಿ ಮೂಗು ಇದ್ದಂಗೈತಿ. ಆಕೆ ಮೂಗಂತು ನೆಟ್ಟಗೆ ಸಂಪಿಗೆಯಂತ ಮೂಗು ಹೇಳಿ ಮಾಡಿಸಿದಂತ ತಿದ್ದಿ ತೀಡಿದಂತ ಮೂಗು ನೋಡ್ರಿ ಎನ್ನುವ ಮೂಗಿನ ವರ್ಣನೆಯನ್ನು ತರಕಾರಿ ಹಣು, ಪಕ್ಷಿಗೆ ಹೋಲಿಸುವದನ್ನು ನೋಡಿದರೆ ಮೂಗೆ ನಿನ್ನ ಮಹಿಮೆ ಎಂತಹದು? ಅಬ್ಬಬ್ಬಾ ಮೂಗೆ! ಜಗತ್ತಿನಲ್ಲಿ ಎಷ್ಟು ಜನರಿರುವರೋ ಅಷ್ಟು ತರಹದ ಮೂಗುಗಳ ಪ್ರಕಾರಕ್ಕೆ ಎಷ್ಟು ರೀತಿಯ ಪ್ರೋಡಕ್ಟ್ ತಯಾರು ಮಾಡ್ತಿಯಪ್ಪಾ ದೇವರೇ ಅಂತ ಅನಿಸುತ್ತೆ.
ನಮ್ಮಜ್ಜಿ ಊರಲ್ಲಿ ಎದುರಿನ ಮನೆ ಶಾಂತವ್ವಗ ಎಂತಾ ಮಗಳನ್ನು ಹಡದಿಯವ್ವಾ ಮೂಗ್ ಇಲ್ಲ ಯಾರ್ ಮಾಡಿಕೆಂತಾರ ನಿನ್ನ ಮಗಳನ್ನು ಅಂತಾ ನಮ್ಮ ಅಜ್ಜಿ ತಮಾಷೆ ಮಾಡಿದ್ರ, ನೋಡ್ ಬೇ ಅಜ್ಜಿ ನನ್ನ ಮಗಳ ಮೂಗಿಗೆ ಮೂವತ್ತು ಸಾವಿರ ರೊಕ್ಕಕೊಟ್ಟ ಮಾಡಿಕೊಂಡು ಹೋಗ್ತಾರಬೆ ಗೊತ್ತೆನು ಅಂತ್ ಅನ್ನೊಂದು ಕೇಳಿದ್ದೆ. ಇನ್ನೂ ಏನ್ರಿ ಅಕಿಗರ ಎಂತಾ ಸೊಕ್ಕು ಅಬಬಬಾ….. ಮೂಗೆಲಿ ಉಸಿರಾಡಸ್ತಾಳ ಮೂಗೆಲಿ ತೇಗ್ತಾಳ ನೋಡ್ರಿ, ಆಕಾಶ ಮೂರುಗೇಣು ಐತಿ ಅಂತಾಳ ನೋಡ್ರಿ.
ನನ್ನ ತವರೂರಿನಲ್ಲಿ ಹೋಟಲ್ ಚೆನ್ನಮ್ಮಲ್ಲಪ್ಪ ಅಂತಾ ಇದ್ರು, ಅವರ ಮೂಗು ಇಷ್ಟು ಉದ್ದ ಇತ್ತು ಅಂದ್ರೆ ಆ ಊರಾಗ ಯಾರದು ಅವರ ಮೂಗಿನಷ್ಟು ದೊಡ್ಡ ಮೂಗು ಇದ್ದಿಲ್ಲಾ. ಅವರು ಎಷ್ಟು ಪ್ರಸಿದ್ಧ ಆಗಿದ್ರು ಅಂದ್ರ, ಯಾರಾದರೂ ಅಹಂಕಾರದಿಂದ ವರ್ತಿಸಿದರೆ, ಭಾಳ ಧಿಮಾಕ್ ಬಿಡಿತಿದ್ದರ- ಅಬಬಬಾ. ನಿನ್ನ ಏನ್ ಯಾರು ಹಿಡಿರ್ಯಾ ಇಲ್ಲ ಬಿಡಪ್ಪ. ನಂದಲ್ಲ ಮೂಗು ಚೆನ್ನಮಲ್ಲಪ್ಪಂದತಿದಿ ಹಾಂ… ಅಂತಿದ್ರು, ಅವರೇನು ಯಾರ ಗೊಡವಿಗೆ ಹೋಗತ್ತಿದ್ದಿಲ್ಲ. ಯಾರ ಉಸಾಬರಿಗೂ ಹೋಗತ್ತಿದ್ದಿಲ್ಲ. ಆದ್ರ ಅವರ ಮೂಗು ಒತ್ತಾಯಿತ್ತು ನೋಡ್ರಿ.

ಮತ್ತೆ ವಿಸ್ಮಯಕರವಾದದ್ದನ್ನು ನೋಡಿದರ ಮೂಗಿನ ಮೇಲೆ ಬೆರಳಿಟ್ಟು ಅಂತಾರ ಅಲ್ಲವೇನ್ರಿ, ಮೂಗಿನ ಮೇಲೆ ಬೆರಳಿಡೋದು ಒಂದು ಕಡೆ ಇರ್ಲರಿ, ಮೂಗಿನ ಒಳಗ ಕೈ ಹಾಕೋದು ಇದೆಯಲ್ಲ ಇದಂತು ಎಲ್ಲರಿಗೂ ಅನುಭವ ಆಗಿರತ್ತ… ಸಾಮಾನ್ಯವಾಗಿ ಎಲ್ಲರೂ ಮೂಗಿನಾಗ ಕೈ ಹಾಕಿ ರುಬ್ಬಿ ಹಿಕ್ಕಿ ತಗೊಂಡು ಬೆರಳಿಂದ ಉಂಡಿ ಉಂಡಿ ಮಾಡಿ ಹೊಗೆದ ನೋಡಿದ್ರ ನಾವಂತು ಹೂರಣ ರುಬ್ಬಕತ್ತಾರ ನೋಡ್ರಿ ಅಂತಿವಿ. ಮೂಗಿನೊಳಗ ಕಿರಿಬೆರಳಿನಿಂದ ಹೆಬ್ಬರಳಿನಿಂದ ಎಲ್ಲಾ ಬೆರಳುಗಳಿಂದ ಪ್ರಯೋಗ ಮಾಡಿ ಬ್ರಷ್ ಮಾಡೋದು ನೋಡಿದರೆ ಮೂಗೆ ಮೂಗೆ ನಿನ್ನ ಪವಾಡ ಏನಂತ ವರ್ಣಿಸಲಿ.

ಹಿಂಗ ಒಂದ ಸಲ ಕಾಯಿಪಲ್ಯ ತರಕಂತಾ ಮಾರ್ಕೆಟಿಗೆ ನಾ ಹೋದಾಗ, ಒಬ್ಬ ಕಾಯಿ ಪಲ್ಯ ಮಾರುವ ಮಹಾಶಯ ತನ್ನ ಮೂಗಿನಾಗ ಕೈ ಹಾಕಿ ಹಿಕ್ಕಿ ತೆಗೆದುಕೊಂಡು ಮುಂದಿರುವ ಕಾಯಿ ಪಲ್ಯೆಗಳ ಹೊಗೆಯುವದನ್ನು ನೋಡಿ ಆತನ ಹತ್ತಿರ ತೆಗೆದುಕೊಳ್ಳದೆ ಬೇರೆಯವರ ಹತ್ತಿರ ತೆಗೆದುಕೊಂಡು ಸಿಟಿ ಬಸ್‍ನಲ್ಲಿ ಕುಳಿತುಕೊಂಡು ಮನೆಗೆ ಬರುವಾಗ, ಆಗ ನನ್ನ ಪಕ್ಕದಲ್ಲಿ ಕುಳಿತುಕೊಂಡ ಮಹಾಶಯ ಮೂಗಿನಿಂದ ತಗೊಂಡು ಸಾವಕಾಶವಾಗಿ ಕೈ ಕೆಳಗೆಬಿಟ್ಟು ಉಂಡಿ ಉಂಡಿ ಮಾಡಿ ನ್ನನ್ನ ಸೀರೆ ಸೆರಗಿಗೆ ಹಚ್ಚುವಷ್ಟರಲ್ಲಿ ನಾನು ರೀ ಏನ್ರಿ, ಇದೇನು ಸೀರಿಗೆ ಏನ್ ಹಚ್ಚಾಕತ್ತಿರಿ ಅಂದಿದ್ದಕ್ಕೆ ಚಾಣಾಕ್ಷ ಮಹಿಳೆ, ಏನಿಲ್ಲ ನಿಮ್ಮ ಸೀರೆ ತುಂಬಾ ಚೆನ್ನಾಗಿದೆ. ಡಿಸೈನ್, ಕಲರ್, ಕಾಟನ್ ಸೀರೆ ಅಲ್ಲವಾ? ಎಲ್ಲಿ ತಗೊಂಡಿದ್ದು ಅಂತ ತನ್ನ ಕೈ ಸ್ವಚ್ಛ ಮಾಡಿಕೊಂಡೆ ಬಿಟ್ಲು.
ಇನ್ನು ನೆಗಡಿ ಬಂದವರ ಹತ್ತಿರ ಕೂತರಂತು ದೇವರೆ ಕಾಪಾಡಬೇಕು. ಅದಕ್ಕೆ ಗಾದೆ ಮಾತು ಇರೋದು ನೆಗಡಿ ಬಂದವರ ಎಡಕ್ಕೆ ಕೂಡಬಾರದು, ಹೊಲಿ(ಸೂಜಿದಾರ ಕೈಯಲ್ಲಿ ಇಡ್ಕೊಂಡು)ಯವವರ ಬಲಕ್ಕೆ ಕೂಡಬಾರದು ಅಂತ. ನೆಗಡಿ ಬಂದವರ ಎಡಕ್ಕೆ ಕುಂತರಂತು ಸಿಂಬಳದ ಸ್ಟ್ರಿಂಕ್ಲಿಂಗ್ ನೋಡ್ರಿ. ಅದಕ್ಕೆ ಹೇಳೋದುನಗಡಿಯಂತ ಜಡ್ ಅಲ್ಲ, ಬುಗಡಿಯಂತಾ ಒಡವಿ ಇಲ್ಲ’ ಅಂತ ಇನ್ನೂ ನೆಗಡಿ ಬಂದವರು ಮೂಗು ಏರ್‍ಸೋದು ಒಂದ ತರಹ ಬಿಪಿ ಚೆಕ್ ಮಾಡೋ ಉಪಕರಣ ಇದ್ದಂಗ ನೋಡ್ರಿ. ಮೇಲಕ್ಕೆ ಏರಿಸೋದು ಅದು ಮತ್ತೆ ಕೆಳಗಿಳಿಯೋದು. ಇವರು ಮತ್ತೆ ಮೇಲಕ್ಕೆ ಏರಿಸೋರು ಅದು ಕೆಳಗೆ ಇಳಿಯೋದು ಮತ್ತೊಂದು ತರದ ಸಿಂಗಿಂಗ್ ಅಲಾಪಗಳು ಇದ್ದಂಗ ನೋಡ್ರಿ. ಸೊರಕ್, ಸೊರಕ್ ಅಂತಾರ್ರಿ ಏರಿಸೋದು. ನೋಡತನ ನೋಡಿ ಝಾಡಿಸಿ ಒಗೆದು ಬಿಡೋದು.

ಹ್ಞಾಂ ಈ ಝಾಡಿಸಿ ಒಗೆದು ಅಂದಾಕ್ಷಣ ನನ್ನ ಮಕ್ಕಳು ಸಣ್ಣವರಿದ್ದಾಗ ಒಂದು ಪ್ರಶ್ನೆ ಕೇಳ್ತಾ ಇದ್ದರು. ಮಮ್ಮಿ ನಾನೊಂದು ಪಝಲ್ ಹೇಳ್ತಿನಿ ಆನ್ಸರ್ ಮಾಡ್ತಿಯಾ ಅಂದಾಗ ಹೇಳು ಎನು ನೋಡೋಣ ಅಂದೆ, ರಿಚ್ ಇದ್ದವರು ಜೇಬಿನಲ್ಲಿ ಇಟ್ಟುಕೋತಾರ ಪೂರ್ ಇದ್ದವರು ದಾರ್ಯಾಗ ಒಗತಾರ ಅದೇನು, ನನ್ನ ದಡ್ಡ ಶಿಖಾಮಣಿ ತಲಿಗೆ ಆಗ ಜಲ್ದಿ ಉತ್ತರ ಹೋಳೆಲಿಲ್ಲ. ಆಗ ಮಕ್ಕಳು ಅಯೋ ಇಷ್ಟು ಗೊತ್ತಿಲ್ಲೆನು ನಿನಗ, ರಿಚ್ ಇದ್ದವರು ಜೀಬಿನಾಗ ಇಟ್ ಗೋತಾರಂದ್ರ ದಸ್ತಿಯಿಂದ ಸಿಂಬಳ ಹೊರೆಸಿಕೊಂಡು ಮಡಚಿ ತಮ್ಮ ಜೇಬಿನಲ್ಲಿಟ್ಟುಕೊಳ್ತಾರ. ಇನ್ನೂ ಪೂರ್ ಇದ್ದವರು ಕೈಯಿಂದ ಸಿಂಬಳ ಸೀದಿ ಝಾಡಿಸಿ ದಾರಿಯಲ್ಲಿ ಒಗಿತಾರಂತ.
ಈ ಸಿಂಗಿಂಗ್ ನೆಗಡಿಗೆ ಮತ್ತೊಂದು ನಡೆದ ಘಟನೆ ಎಂದರೆ ನಾನು ಪಿಯುಸಿಯಲ್ಲಿ ಓದ್ತಾ ಇದ್ದಾಗ ನಮ್ಮಗೆ ಪಾಠ ಮಾಡುವ ಗುರುಗಳಿಗೆ ತುಂಬಾ ನೆಗಡಿಯಾಗಿತ್ತು. ಅವರು ಪಾಠ ಮಾಡುವಾಗ ಕ್ಲಾಸಿನಲ್ಲಿ ಮೂಗು ಏರಿಸಿ ಅವರಿಗೆ ಸಾಕಾಗಿ ಹೋಗಿತ್ತು. ಅವರ ಹೇಳಿದ ಮಾತು ಇಂದಿನ ಅರ್ಥಶಾಸ್ತ್ರದ ಕ್ಲಾಸ್ ಸಿಂಗಿಂಗ್ ಕ್ಲಾಸ್ ಆಗಿದೆ ಅಲ್ವಾ? ಅಂತ ಅನ್ನುತ್ತಾ ಏನ್ ಮಾಡೋದ್ ಎಲ್ಲದ್ದಕ್ಕೂ ಸ್ಕ್ರೂ, ನಟ್‍ನಿಂದ ಹೇಗೆ ಟೈಟ್ ಮಾಡ್ತಿವಿ, ಬೇಡವಾದರೆ ಬಿಚ್ಚಿ ಇಟ್ಟು ಮತ್ತು ಬೇಕೆಂದರೆ ಹೊಂದಿಸಿಕೊಳ್ಳುವ ಹಾಗೆ ಮೂಗಿಗೂ ಸ್ಕ್ರೂಸಿಸ್ಟಮ್ ಇದ್ದಿದ್ದರೆ ಬಿಚ್ಚಿ ಇಡಬಹುದಿತ್ತು. ಆದರೆ ಏನ್ ಮಾಡೋದ್ ಆಗಿಲ್ಲವಲ್ಲ ಅಂದದ್ದಕ್ಕೆ ಎಲ್ಲರು ನಕ್ಕಿದ್ದೆ ನಕ್ಕಿದ್ದು.

ಇನ್ನು ಕೆಲ ಸಣ್ಣ ಮಕ್ಕಳ ಇರುತ್ತಾರೆ. ಮೂಗಿನಾಗಿಂದು ತಗೊಂಡು ಬಾಯಾಗ ಇಟ್ಟಗೊಳ್ಳೊದು, ಒಂದು ಸಲ ನಾನು ರೈಲಿನಲ್ಲಿ ಹೋಗಬೇಕಾದರೆ ನನ್ನ ಎದುರಿಗೆ 5-6 ವರ್ಷದ ಹುಡುಗ ಅವರ ತಾಯಿ ಜೊತೆಗೆ ಕುಳಿತುಕೊಂಡಿದ್ದ. ತಾಯಿ ತೂಕಡಿಸ್ತಾ ಇದ್ದಳು. ಆ ಹುಡುಗ ಆ ಕಡಿ ಈ ಕಡಿ ನೋಡಿ ತಕ್ಷಣವೆ ತನ್ನ ಮೂಗಿನಾಗ ಕೈ ಹಾಕಿ ಹಿಕ್ಕಿ, ತಗೊಂಡು ಬಾಯಯೊಳಗ ಇಟ್ಟುಕೊಳ್ಳೋದು ನೋಡಿ ನಾನು ಎ..ಎ..ಎ ಛೀ…ಛೀ ಹಂಗೆಲ್ಲ ಹೊಲಸು ಬಾಯಾಗ ಇಟಗೋ ಬಾರದು ಅಂತ ಸ್ವಲ್ಪ ಜೋರಾಗಿಯೇ ಹೇಳಿದೆ. ಅವರ ತಾಯಿ ತಕ್ಷಣವೆ ಎಚ್ಚರವಾಗಿ ಏನಾಯ್ತು? ಅಂತ ನನ್ ಕಡಿ ನೋಡಿ ಕೇಳಿದಾಗ, ನಿಮ್ಮ ಮಗ ಮೂಗಿನಾಗಿಂದು ತಗೊಂಡು ಬಾಯೊಳಗಗಿಟಕೊಂಡ, ಅದಕ್ಕೆ ಹಂಗೆಲ್ಲಾ ತಿನ್ನಬಾರದು ಎಂದೆ. ಅದಕ್ಕೆ ಮಾತೆಯ ಉತ್ತರ. ಇರ್ಲಿ ಬಿಡ್ರಿ.. ಆತ ತನ್ನ ಮೂಗಿನಂದು ತಾನ ತಗೊಂಡು ತಿಂದಾನ… ನಿಮ್ಮಗ್ಯಾಕೆ ಅದರ ಉಸಾಬರಿ ಅಂದುಬಿಡೋದೆ, ಯಪ್ಪಾ ನಾನಂತು ಮೂಗಿನಮೇಲೆ ಬೆರಳಿಟ್ಟೆ. ಈಗು ಇದ್ದಾರಲ್ಲಾಂತ.

ಇನ್ನು ಮೂಗಿನ ಸೊಳ್ಳಿ ದೊಡ್ಡ ವಿದ್ರ(ಅಕಿ) ಆತನ ಮೂಗಿನ ಸೊಳ್ಯಾಗ ಮೂರು ಸೇರು ಜ್ವಾಳ ಹಿಡಿತಾವ ನೋಡ ಆರಮಸೆ ಅಂತ ಅಂತಿದ್ರು…. ಹ್ಯಾಂಗ ಇದ್ರು ಹೆಸರಿಡೊದು ನೋಡ್ರಿ, ನಮ್ಮ ಊರಾಗ ನಾಗಮಣಿ ಅಂತ ಹುಡುಗಿ ಆಕಿನ ಮೂಗಿನ ಸೊಳ್ಳಿ (ಹೊಳ್ಳಿ)ಇಷ್ಟು ಸಣ್ಣವು ಇದ್ದವು ಅಂದ್ರ ಎಲ್ಲರೂ ತಮಾಷೆ ಮಾಡುತ್ತಿದ್ದರು. ಇರಿಬಿ ಹೋಗಾಕರ ಸಂದು(ಜಾಗ) ಆಯಿತೆ ಇಲ್ಲಾಂತ, ನೋಡ್ರಿ ಆಕಿ ಮೂಗಿನಾಗ ಸಣ್ಣ ಇರುವೆ ಕಳಿಸುವಷ್ಟು ಜಾಣತನ ಅವರದು, ಉಸಿರಾಡಸಕ ತೊಂದರೆ ಇಲ್ಲದಿದ್ರೆ ಆಯ್ತು ಅಲ್ಲವೇನ್ರಿ?
ಮತ್ತೆ ಹಿಂಗೂ ಅಂತಿದ್ರು ನಿನ್ನ ಮೂಗು ಇಲ್ಲಾಂದ್ರು, ಉಸಿರಾಡ್‍ಸಕ ಎರಳು ಒಳ್ಳಿ ಅದಾವ ಅಂತಿಯಲ್ಲ. ಅಬಬಬ್ ನಿಂದು ಸಿಟ್ಟು ಮೂಗಿನ ಮ್ಯಾಲಿ ಆಯಿತೆ ನೋಡಬೆ ತಂಗಿ. ಅಷ್ಟು ಸಿಟ್ಟು ತರವಲ್ಲ ತಿಳಿತಾ ಅಂತ ಹೇಳೋದು. ಮತ್ತೆ ಕೆಲವರು ಇರಲೇಳೋ ನನಗ ನಿನ್ನಕಿಂತ ಅಪ್ಪನಂಗ ಸಿಟ್ಟು ಬರುತೈತಿ… ಆದ್ರ ಸಿಟ್ಟಿನಾಗ ಕೊಯಕೊಂಡ ಮೂಗು ಆಮೇಲ ಬರೋದಿಲ್ಲಂತ ಬಿಟ್ಟಿನಿ ತಿಳಿಕೋ ಸ್ವಲ್ಪ ಹ್ಞಾಂ ಅನ್ನೋದು…
ಇನ್ನು ಮೂಗು ಉದ್ದ ಇದ್ದರೋದು, ಮೂಗು ಚೆಂದ ಇದ್ದರ ಧಿಮಾಕನ್ ಬೇರೆ ಅಲ್ಲವೇನ್ರಿ, ಅವರು ತಾವೆ ಭೂಲೋಕದ ಸುಂದರ(ಸುಂದರಿ) ಅನ್ನುವ ಹಾಗೆ ಬೇರೆಯವರಿಗೆಲ್ಲಾ ಹೆದರಿಸೋದು ಭಾರಿ ನೋಡ್ರಿ. ಅದೇನು ನಾವು ಮಾಡೋದು ನೀವು ಮಾಡೋದಾ? ದೇವರ ಸೃಷ್ಟಿಯಪ್ಪ (ಕವಿಗಳ ಕಲ್ಪನಾ ಮೂಗಿನ ಸೃಷ್ಟಿಯಂತು ವರ್ಣನಾತೀತ) ಮತ್ತು ಇಲ್ಲಾಂದ್ರ ಡಾಕ್ಟ್ರ ಸೃಷ್ಟಿಗೆ ಹೋಗಬೇಕೆಂದ್ರ ಶ್ರೀದೇವಿ, ಶಿಲ್ಪಾಶೆಟ್ಟಿ ಹಿಂದಿ ಸಿನಿಮಾ ತಾರೆ ಯರು)ಯಂಗ ಮೂಗಿನ ಪ್ಲಾಸ್ಟಿಕ್ ಸರ್ಜರಿ ಮಾಡಿಸ್ಕೋ ಬೇಕಂದ್ರ ಲಕ್ಷಗಟ್ಟಲೆ ರೊಕ್ಕ ಸುರಿಬೇಕು ನೋಡಿ. ನಮಗೆ ಬೇಕಾದಂತ ಮೂಗು ಬೇಕಂದ್ರ ಹೌದಲ್ಲರಿ? ನನ್ನ ಮಾತು ವಾಜ್ಮಿ ಹೌದು ಅಲ್ಲೋ ನೀವ ಹೇಳ್ರಿ.

ಮೂಗೇನು ಮುಖಕ್ಕೆ ಲಕ್ಷಣದ ವಿಷಯ, ಆದರೆ ಮೂಗಿಗೆ ಮಸಿ ಬಡಿಬ್ಯಾಡ್ರಿ, ಅನ್ನೊಂದನ್ನು ಕೇಳಿದ್ದೇವೆ. ಇದರ ಅರ್ಥ ಕಳಂಕವಾದ. ಕೆಟ್ಟ ಹೆಸರು ತರಬಾರದು ಎನ್ನುವ ಮರ್ಮ. ಮತ್ತ ಇನ್ನೊಂದು ಮಾತು ಕೇಳಿರಬೇಕಲ್ಲ ನೀವು ಮೂಗಿಗೆ ತುಪ್ಪ ಹಚ್ಚೋದು ಅಂತ ಇದು ರಾಜಕಾರಣಿಗಳು ಮಾಡುವಂತಹ ಕೆಲಸ ನೋಡ್ರಿ ಸರಕಾರದೊಂದ ಮಂಜೂರಾದ ಹಣವನ್ನು ತಿಂದು ತೇಗಿ ಸ್ವಲ್ಪ ಹಣವನ್ನು ಮಾತ್ರ ಕೊಟ್ಟಂತೆ ಮಾಡಿ ತೋರಿಸುವುದು ನಾಮಕವಸ್ತೆ(ಮೂಗಿಗೆ ತುಪ್ಪ ಸವರಿದಂಗ).
ಇನ್ನು ಯಾರಾರು, ಜಗಳ ಮಾಡುತ್ತಿದ್ದಾಗ ಮದ್ಯದಲ್ಲಿ ಹೋಗಿ ಬಿಡಿಸೋರಿಗೆ, ನೀ ಏನ್ ನಡಕ್ ಮೂಗು ತುರಸಾಕ್ ಬಂದಿದಿ ನಿಂದು ನೀ ನೋಡ್ಕೊ ಹೋಗು ನಿನ್ನ ಗಂಗಳದಾಗ ಕತ್ತಿ ಸತ್ತ ಬಿದೈತಿ ಇನ್ನೊಬ್ಬರ ಗಂಗಾಳದಾಗ ನೋಣ ಎತ್ತಾಕ ಬಂದಾನ ಹೋಗು ಎನ್ನುವ ಮಾತುಗಳು.
ನಮ್ಮ ಊರಕಡಿ ಹೆಣ್ಣು ಹುಡಿಗಿಯರಾಗಲಿ ಅಥವಾ ಗಂಡ ಹುಡುಗರಾಗಲಿ ಮೀತಿ ಮೀರಿ ವರ್ತಿಸುತ್ತಿದ್ದರೆ, ಎದುರಾಡುತ್ತಿದ್ದರೆ. ಏನ್ ಯಾಕ್ ಭಾಳ ಆಯಿತಲ್ಲಾ. ಮೂಗಿಗೆ ಮುಗದಾಣ ಹಾಕೋರೂ ಯಾರಿಲ್ಲೇನ್ ಮೂಗಿಗೆ ಮೂಗದಾಣ ಹಾಕಬೇಕೆನು? ಹ್ಯಾಂಗ ಗಂಡರಗೂಳಿ(ತೊಂಡಿತೇರಪ್ಪನ ಗೂಳಿ) ಅಡ್ಯಾಡಿದಾಂಗ ಅಡ್ಯಾಡ್ತಿ ಅಂತ ಬೈಯ್ತಿದ್ದರು.
ಹೇ ಮೂಗೇ ನಿನ್ನ ನಿಯತ್ತು, ಸೌವಲತ್ತು ಕಸರತ್ತು, ತಾಕತ್ತು ಏಷ್ಟಿದೆಯಪ್ಪಾ ಅನಿಸುತ್ತೆ.
ಇನ್ನು ಅದ್ಯಾಕ್ರಿ ಅವ್ರು ಗೊಂಯ್‍ಗೋಯ್ ಅಂತ ಮೂಗಿಲಿ ಮಾತಾಡ್ತಾರ ಅವರ ಧ್ವನಿ ಪೆಟ್ಟಿಗೆ ಬದಲಿಗೆ ಮೂಗಿನ ಪೆಟ್ಟಿಗೆ ಹೆಚ್ಚು ಕೆಲಸ ಮಾಡುತ್ತಿರುಬೇಕು ಅಲ್ಲವೆ.
ಕೆಲವೊಬ್ಬ ಹಾಡುಗಾರರು ಸಹ ಮೂಗಿನಿಂದಲೇ ಹಾಡ್ತಾರೆ ನೋಡ್ರಿ, ಮತ್ತೆ ಕೆಲವರು ನಕ್ಕರಂತು ಮೂಗಿನ ಒಳ್ಳಿ ಕಮಲ ಅರಳಿದಂಗ ಅರಳ್ತಾವ ನೋಡಿರಲ್ಲ. ಇನ್ನು ಶೀನ್ ಬರಬೇಕಂದರೆ ಮೂಗಿನಾಗ ನಶಿಪುಡಿ ಏರಿಸೋದು ಅಥವಾ ಸಣ್ಣ ಪೇಪರಿನ ತುಂಡನ್ನು ಸುಳಿ ಸುತ್ತಿ, ಅಥವಾ ತೆಳ್ಳನ ಬಟ್ಟೆಯ ಕೊನೆ ಹಂಚಿನಿಂದ ಸುರುಳಿ ಸುತ್ತಿ ಮೂಗಿಗೆ ಏರಿಸುತ್ತಿದ್ದರು. ಆಗ ನೋಡ್ರಿ ಶೀನುವುದರ ಜೊತೆಗೆ ಕೆಳಗಡೆಯಿಂದ ಉಚ್ಚಿ ಹೊಯಕೊಂಡ ಘಟನೆಗಳು ಸಹ ನಾನು ನೋಡಿದ್ದೇನೆ.
ಇಂಥ ವೈವಿದ್ಯಮಯ ಪ್ರಕಾರದ ಮೂಗಿನಿಂದ ವ್ಯಕ್ತಿಗಳ ಸ್ವಭಾವ ನಡವಳಿಕೆ ಗುರುತಿಸುಬಹುದಂತೆ ಮನಶಾಸ್ತ್ರಜ್ಞರ ಪ್ರಕಾರ.
ಇನ್ನು ಭಾರತೀಯ ಸಂಪ್ರದಾಯದಲ್ಲಿ ಮಹಿಳೆಯರಿಗೆ ಮೂಗೂ ಮುತ್ತೈದೆತನದ ಪ್ರತೀಕ ಮಹಿಳೆಯ ಮೂಗಿಗೆ ಹಾಕುವ ಮೂಗಬೆಟ್ಟು ಚಿನ್ನದ್ದೂ, ವಜ್ರದ್ದು ಹಾಕಿಕೊಂಡು ತನ್ನ ಸೌಂದರ್ಯದ ಮೆರಗನ್ನು ಇಮ್ಮಡಿಗೊಳಿಸುತ್ತಾಳೆ. ಮಹಿಳೆಯರು ಧರಿಸುವ ಮೂಗಿನ ನತ್ತಿಗೆ ತನ್ನದೆ ಆದ ಗತ್ತು ಇದೆ.
ನಾ ಇಟ್ಟ ಮೂಗಿನ ನತ್ತು
ನನ್ನ ನಲ್ಲನ ಮನ ಸೆಳೆದಿತ್ತು
ಕಣ್ ಸನ್ನೆಯ ಅವನ ನೋಟಕ್ಕೆ
ಗಲ್ಲ ನಾಚಿ ನೀರಾಗಿತ್ತು
ಮೈ ಮನವೆಲ್ಲ ರಂಗೇರಿತ್ತು?

ಇದರ ಹಾಗೆ ಮದುಮಗಳು ಮೂಗಿನಾಗ ನತ್ತು ಇಟ್ಟುಕೊಂಡ್ರ ಅವಳ ಚೆಂದದ ಚೆಲ್ವಿಕೆಯ ಬೇರೆ, ಆದರೆ ಮೂಗಿಗಿಂತ ಮೂಗುತಿ ದೊಡ್ಡದಾಗಬಾರದು ಅನ್ನುವ ಮಾತು ಸಹ ಇದೆ. ಯಾವುದೇ ಆಗಲಿ ಅವಶ್ಯಕ್ಕಿಂತ(ಬೇಕಾದುದಕ್ಕಿಂತ) ಅತಿ ಹೆಚ್ಚು ಆಗಬಾರದು. ಅತೀ ಕಡಿಮೆ ಆಗ ಬಾರದು ಎನ್ನುವ ಮಾತಿನ ಒಳಾರ್ಥ.
ಇನ್ನು ಮದುವೆಯಾದ ಮದುಮಗಳು ಅತ್ತೆ ಮನೆಗೆ ಬಂದ್ರೆ ಶುರುವಾಗತ್ತೆ ನೋಡ್ರಿ ಅತ್ತೆ ಕಂಡ್ರೆ ಸೊಸೆ ಮೂಗು ಮುರಿಯೋದು, ಸೊಸೆ ಕಂಡ್ರೆ, ಅತ್ತೆ ಮೂಗು ಮುರಿಯೋದು ಮಗನ ಮುಂದೆ ಕಂಪ್ಲೆಂಟ್ ಹೇಳುವ ಅತ್ತಿಯನ್ನು ನೋಡಿ ಮತ್ತು ಗಂಡನನ್ನು ನೋಡಿ ಮೂಗು ಮುರಿದು ನೋಡುವ ಹೆಂಡ್ತಿಯ ದುರುಗುಟ್ಟುವಿಕೆಗೆ ಪಾಪ ತಾಯಿಗೆ ಹೇಳುವುದು ಹೆಂಡ್ತಿಗೆ ಹೇಳುವುದು ಅನ್ನುವ ಅಸಹಾಯಕ ಸ್ಥಿತಿ ನುಂಗಲಾರದ ತುತ್ತು ಅವನಿಗೆ.
ನಾವು ಸಣ್ಣವರಿದ್ದಾಗ ಹೇಳುತ್ತಿದ್ರು ಒಂದು ಗುದ್ದಿದರೆ ಮೂಗಿಗೆ, ಮೂಗು ಉಚಿಗಂಡು ಬರಬೇಕು ಹಾಗ ಹೊಡಿತಿನಿ ನೋಡು ಅನ್ನುವ ಮಾತುಗಳು ಮೂಗಿನ ಬಗ್ಗೆ ಇರುವ ಪ್ರೀತಿ ಅನ್ನೋಣವೆ?
ಹ್ಞಾಂ ಇನ್ನೊಂದು ಮೂಗಿನ ವಿಷಯ ಅಂದ್ರೆ ನಾನು ಪ್ರಾಥಮಿಕ ಶಾಲೆಯಲ್ಲಿ ಓದ್ತಾ ಇದ್ದಾಗ ಗುರುಗಳು ಯಾರಿಗೆ ಸರಿಯಾಗಿ ಓದಲು ಬರುವದಿಲ್ಲವೋ ಅವರಿಗೆ ಸರಿಯಾಗಿ ಓದಿದವರಿಂದ ಮತ್ತು ಪ್ರಶ್ನೆಗೆ ಉತ್ತರ ಸರಿಯಾಗಿ ಹೇಳದವರಿಗೆ ಉತ್ತರ ಸರಿಯಾಗಿ ಹೇಳಿದವರಿಂದ ಮೂಗು ಹಿಡಿದು ಕಪಾಳಕ್ಕೆ ಬಡಿಸುತ್ತಿದ್ದರು. ನಾನಂತು ಸಾಕಷ್ಟು ಸಲ ಸಹ ಪಾಟಿಗಳಿಗೆ ಮೂಗು ಹಿಡಿದು ಬಡಿದಿದ್ದೇನೆ ಎನ್ನುವಸಂಡೋಷ ಒಂದು ಕಡೆಯಾದರೆ ಕೆಲವು ಸಲ ಅವರ ಮೂಗಿನ ಸಿಂಬಳವೆ ನನ್ನ ಕೈಯಿಗೆ ಹತ್ತಿತ್ತು. ಆಗ ನಾನು ಯಾಕರ ಉತ್ತರ ಸರಿ ಹೇಳಿದೆ ಅನಿಸುತ್ತಾ ಇತ್ತು. ಒಂದು ಸಲ ಗುರುಗಳು ಒಂದು ಹುಡುಗಿಗೆ ತಪ್ಪು ಮಾಡಿದ್ದಕ್ಕೆ ಕಪಾಳ ಮೋಕ್ಷ ಮಾಡಿದರು. ಆ ಹುಡುಗಿ ಮೂಗು ಉಜ್ಜಿ ರಕ್ತಸೋರುತ್ತಿತ್ತು. ಆ ಹುಡುಗಿ ಮನೆಗೆ ಹೋಗಿ ನಡೆದ ವಿಷಯ ಹೇಳಿ ಮನೆಯವರೆಲ್ಲ ಮಾಸ್ತರ್ ಜೊತೆ ಜಗಳವಾಡಲು ಬಂದಿದ್ದರು. ಆಗ ನಮ್ಮ ಮಾಸ್ತರ ಮೂಗಿನ ರಂಗೆ ಬದಲಾಗಿತ್ತು.
ಅಬ್ಬಾ ಈ ಮೂಗಿನ ಕಾರ್ಯವೈಖರಿ ಅದ್ಭುತ ಅಲ್ಲವೇನ್ರಿ, ಇದರ ಕಿಮ್ಮತ್ತು ಗಮ್ಮತ್ತು ಅಬಬಬಾ, ನಿಂದರ ಮೂಗ ಐತಿ ಬೇರೆ ಯಾರದರ್ ಐತಿ ಏನ್ ಊರಗ್ ಯಾರದು ಇಲ್ಲದ್ದು ಮೂಗು ಬಿಡುನಿಂದು ಬಂದಾಳ(ಬಂದಾನ) ಮೂಗು ನಿಗರಿಸಿಕೊಂಡ ಮಾತಾಡಕ. ಇರ್ಲಿ ಸ್ವಲ್ಪ ತಟಗ ಉರಿ ಆಯಿತಾ ಅನ್ನೊಂದು ಕೇಳಿದರೆ-
ಆಹಾ ಎಂಥಾ ಲೋಕವಯ್ಯ
ಮೂಗಿನ ಎಂಥಾ ಲೋಕವಯ್ಯಾ
ವಿವಿಧಾವಳಿಯ ಆಹಾ ಎಂಥಾ ನಾಸಿಕವಯ್ಯ
ತನ್ನಂತ ಮೂಗು ಯಾರದು ಇಲ್ಲವೆನ್ನುವ ಒಣ ಜಂಬವಯ್ಯ
ಅಹಾ ಎಂಥಾ ಬಡಿವಾರವಯ್ಯ
ಆಹಾ ಎಂಥಾ ಲೋಕವಯ್ಯ ಮೂಗಿನ.
..
ಇತ್ತೀಚಿನ ಮಹಾಮಾರಿ ಕೋವಿಡ 19 ದಿಂದಾಗಿ ಮೂಗಿಗೆ ದಾಳಿ ತಂದ್ ಬಿಟೈತಿ ನೋಡ್ರಿ, ಮೂಗ ಮುಚ್ಚಗೊಳ್ರಿ, ಬಾಯಿ ಮೂಚಗೊಳ್ರಿ ಎಂದು ಹೇಳಿ ಮೂಗಿನ ಅಂದವನ್ನೆ ಕೆಡಿಸೈತಿ ನೋಡ್ರಿ.