ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

ಮೊಹೆಂಜೊ-ದಾರೋವಿನಂತೆ ಅಲ್ಲಿ
ಕೂತಿದ್ದಾನಲ್ಲ ಮಾತಿಲ್ಲ ಕತೆಯಿಲ್ಲ
ವೃದ್ಧ
ಮುಟ್ಟಿದರೆ ಮುರಿಯುತ್ತ
ಕ್ಷಣಕ್ಷಣಕ್ಕೂ ಜೀರ್ಣಿಸುತ್ತ
ಅವನೇನು ಯೋಚಿಸುತ್ತಾನೊ ಅವನಿಗೇ
ತಿಳಿಯದು ಹೆಚ್ಚಿನ ಕಾಲವೂ ಕಣ್ಣು
ಅರೆ ಮುಚ್ಚಿ ಇರುತ್ತಾನೆ
ಧ್ಯಾನಸ್ಥನಂತೆ..
ನಿದ್ದೆಯೋ
ಎಚ್ಚರವೊ ಹೇಳುವಂತಿಲ್ಲ… ಎಲ್ಲಾ
ನೋಡುತ್ತಾನೆ ಯಾವುದೂ ಕಾಣಿಸುವುದಿಲ್ಲ
ಏನೂ ಕೇಳಿಸುವುದಿಲ್ಲ

ಈಗಾಗಲೇ
ಕಿವಿತುಂಬ ಇಡಿಕಿರುವ ಶಬ್ದಗಳ ತುಮುಲದಲ್ಲಿ ಇನ್ನೇತಕ್ಕೂ
ಅವಕಾಶವಿಲ್ಲ …ಹಾಗೆಂದು ಅವನನ್ನು
ಕರೆದು ಮಾತಾಡಿಸುವವರು ಸಹ ಯಾರೂ ಇಲ್ಲ

ಕೆಲವು ಸಲ ಸವಣ ಕೆಲವು ಸಲ ಕ್ಷಪಣ
ಕೆಲವು ಸಲ ಸಾಧು ಕೆಲವು ಸಲ ಶರಣ
ಇನ್ನುಳಿದ ಸಲ ನಡೆದು ಸುಸ್ತಾಗಿ
ಯಾರದೋ
ಹೊರ ಚಾವಡಿಗೆ ಬಂದು ಬಿದ್ದ
ಬೀದಿ ಭಿಕ್ಷುಕ ಮನೆಯವರು ಒದ್ದು
ಓಡಿಸುವಷ್ಟು
ಕಾಲ
ಇರುತ್ತೇನೆ ಎಂಬಂತೆ
ನೆಮಿಸಿಸ್
ಹೇಗೆ ಬರುತ್ತದೆ ಎನ್ನುವಂತಿಲ್ಲ
ವ್ರಣವಾಗಿ
ನೊಣವಾಗಿ
ಕಾಲೆಡಹುವ ತೃಣವಾಗಿ
ಬರಬಹುದು

ಹೀಗಿರಲಿಲ್ಲ ಅವನು ಮೊದಲು
ಹೀಗಿರುವುದಿಲ್ಲ ಯಾರೂ ಮೊದಲು
ಅತ್ಯಂತ ನಿಷ್ಠುರನಾಗಿದ್ದ
ಜಗ ಅವನಂದಂತೆ ಕೇಳುತ್ತಿತ್ತು
ಅವನದನ್ನು ಬುಗರಿಯ ಹಾಗೆ
ತಿರುಗಿಸುತ್ತಿದ್ದ
ಎಡ ಎಂದರೆ ಎಡ
ಬಲ ಎಂದರೆ ಬಲ
ತಟಸ್ಥ ಎಂದರೆ ತಟಸ್ಥ
ತೊಟ್ಟು ಕಳಚಿ ಬೀಳಲು ತಯಾರಾದ
ಎಲೆಗಳು ಕೂಡ ಹಾಗೇ ನಿಂತುಬಿಡುತ್ತಿದ್ದುವು
ಮುಂದಿನ ಸೂಚನೆಗಾಗಿ

ಅವನು ದೆಹಲಿ ಸುಲ್ತಾನರಂತೆ – ಅಲ್ಲ
ಸುಲ್ತಾನೇಟಿನಂತಿದ್ದ ನಾನ್ನೂರು ವರ್ಷ
ಒಂದು ಜೀವಿತದಲ್ಲಿ ಏನೂ ಅಲ್ಲ
ಏಳುತಿದ್ದುವು ಬೀಳುತಿದ್ದುವು
ಬದಲಾಗುತಿದ್ದುವು ವಂಶಾವಳಿಗಳು
ಕಟ್ಟುತಿದ್ದುವು ಮುರಿಯುತಿದ್ದುವು
ಕೋಟೆ ಕೊತ್ತಲಗಳು ಬುರುಜುಗಳು ಗುಂಬಜಗಳು
ಎಷ್ಟೊ ಕೊತವಾಲರು
ಸತ್ತುಹೋದರು ಇನ್ನೆಷ್ಟೊ ಜನ
ತುರಂಗದಲಿ ಬಿದ್ದರು
ಸುಲ್ತಾನರೂ ಹೋದರು ಅದರೆ
ಸುಲ್ತಾನೇಟಿಗೆ ಏನಾಗಲಿಲ್ಲ ಅದು
ಬೃಹತ್‍ಜಗನ್ನಾಥ ರಥದ ಹಾಗೆ
ಸಾಗುತ್ತಲೇ ಇತ್ತು ಮುಂದಿನದಕ್ಕೆ
ಗೊತ್ತಿರದೆ ಹಿಂದೇನು ನಡೆದಿತ್ತು
ಹಿಂದಿನದಕ್ಕೆ ಗೊತ್ತಿರದೆ
ಮುಂದೇನು ನಡೆಯವುದು
ಅಲ್ಲಲ್ಲಿ ಗಾಲಿಗಳು, ಕೀಲಿಗಳು
ಕೈಗಳು
ಕಳಚಿಬಿದ್ದರೂ ಪರಿವೆಯಿಲ್ಲದೆ
ಉರುಳುತ್ತ ಹೋಯ್ತು ಬದುಕಿನ
ಗಾಡಿ

ಅಯೋಮಯವೆಂಬ ಸ್ಥಿತಿಯೊಂದು ಇದೆ
ಅದು ಸೂರ್ಯ ಮುಳುಗಿದ ನಂತರದ
ಅವಸ್ಥೆ..
ಮಬ್ಬು ಗತಿಸ್ಥಿತಿಯ ಅತಂತ್ರಾವಸ್ಥೆ
ಸೂರ್ಯನಿಗೆ ಕೂಡ ಒಂದು ಕ್ಷಣ
ಮುಳುಗುವೆನೊ ಮೂಡುವೆನೊ
ಎಂದು ತಿಳಿಯದ ಗೊಂದಲ
ಸಮೇಲಿಂದ ಕೆಳಬೀಳುವ ಮನುಷ್ಯನಿಗೂ
ಅನಿಸುವ ಅರೆ! ಇದೇನು ಬೀಳುವೆನೊ
ಏಳುವೆನೊ ಎಂಬ ಅರೆ ನಿಮಿಷ
ಅನಿಮಿಷಾವಸ್ಥೆ ಅದರಲ್ಲಿ
ಏನು ಬೇಕಾದರೂ ಆಗಬಹುದು
ಒಂದು ಭಾಷೆ ಕೊನೆಯಾಗುವುದು
ಇನ್ನೊಂದು ಸುರುವಾಗುವುದು
ಯಾವುದಕ್ಕೂ ಸರಿಯಾದ ಅರ್ಥವೆ ಇಲ್ಲ
ಲಿಪಿತಜ್ಞರು ಬಂದು ನೋಡುತ್ತಾರೆ
ಭೂತವ ಹಿಡಿಯಲು ಭೂತಗನ್ನಡಿ ಹಿಡಿದು
ಸಾವಿರ ವರ್ಷಗಳಿಂದ ನಡೆದಿದೆ ಕೆಲಸ
ಯಾರಿಗೂ ಸಹಮತವೆ ಇಲ್ಲ
ಹೆಣ ಉರುಳಿಸಿದಂತೆ ಉರುಳಿಸುತ್ತಾರೆ
ಮುದುಕನ್ನ ಅವನಿನ್ನೂ ಬದುಕಿದ್ದಾನೆಯೊ
ಇಲ್ಲವೋ ಸತ್ತಿದ್ದಾನೆಯೊ
ಕನವರಿಸುತ್ತಿದ್ದಾನೆಯೊ
ಈ ಲೋಕಕ್ಕೆ ಸೆರಿರದ ಇನ್ನೊಂದು
ನಿದ್ದೆಯಲಿ ಇದ್ದಾನೆಯೊ ಕನವರಿಸುತ್ತಿದ್ದಾನೆಯೊ..

ಕೆಲವು ನಕ್ಷತ್ರಗಳು ಮೂಡಿವೆ
ಇನ್ನು ಕೆಲವರ ಬೆಳಕು ನಮ್ಮನ್ನು
ಮುಟ್ಟಿಯೆ ಇಲ್ಲ ಏನು ಮಾಡಲಿ
ನಾವು ?
ಮೊಹೆಂಜೊ-ದಾರೋ
ಮುರಿಯುತ್ತಿವೆ ಕುಸಿಯುತ್ತಿವೆ
ಅಪಾರ ಆತ್ಮಗಳು ರಾಸಿ ರಾಸಿ
ಸತ್ತವರ ದಿಬ್ಬದಲ್ಲಿ