ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

“ರೈಲು ಹನಿ” ಪುಸ್ತಕ ಪರಿಚಯ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಈ ಪುಸ್ತಕದ ಕವಿ ಹೈದರಾಬಾದಿನ ಪ್ರವೀಣ್ ಚಿತ್ತಾಪುರ ಅವರು ವೃತ್ತಿಯಿಂದ ಸಾಫ್ಟ್ ವೇರ್ ಇಂಜನಿಯರ್. ತಮ್ಮ ಹದಿನಾಲ್ಕನೆಯ ವರ್ಷದಿಂದ ಕಾವ್ಯ ರಚನೆಯಲ್ಲಿ ತೊಡಗಿದ್ದು.ಕವನ, ಕಥೆ, ಅಂಕಣ ಬರಹ, ಲೇಖನ, ಚಿತ್ರಕಥೆ, ಚಿತ್ರಗೀತೆ, ನಟನೆ ಯಲ್ಲಿ ಹೆಸರುವಾಸಿಯಾಗಿದ್ದಾರೆ. ರೈಲು ಹನಿ ಅವರ ಪ್ರಥಮ ಕವನ ಸಂಕಲನ.
ಪ್ರವೀಣ್ ರವರು ಸ್ವತಃ ಹೊಸ ಪಂಥವನ್ನರಸುವ ಮನೋಭಾವ ಹೊಂದಿದವರು. ಹದಿನಾಲ್ಕು ವರ್ಷಗಳ ಹಿಂದೆ ಅವರು ಕೇಳಿದ ಗಂಗಾವತಿ ಪ್ರಾಣೇಶ್ ಅವರ ಹನಿಗವನ ದಿಂದ ಪ್ರಭಾವಿತರಾಗಿ ತಾವು ಸಹ ಹನಿಗವನಗಳನ್ನು ಬರೆಯಬೇಕೆಂದು ಎಣಿಸಿದಾಗ ರೈಲಿನಲ್ಲಿ ಪ್ರಯಾಣಮಾಡುತ್ತಿದ್ದ ಇವರಿಗೆ ರೈಲು ಪ್ರಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಹನಿಗವನಗಳನ್ನೇಕೆ ಬರೆಯಬಾರದು ಎಂದು ಹೊಳೆದದ್ದು ಈಗ ಹಳೇ ಸುದ್ದಿ. ಅಗಿಂದಾಗಲೆ ಕೆಲ ಹನಿಗವನಗಳನ್ನು ಬರೆದು ಫೇಸ್ ಬುಕ್ ಗೆ ಹಾಕಿದಾಗ ದೊರೆತ ಗೆಳೆಯರ ಮೆಚ್ಚುಗೆ ಇವರನ್ನು ಮುಂದುವರೆಯಲು ಪ್ರಚೋದಿಸಿ ಈಗ ಒಂದು ಶತಕವನ್ನು ನಮ್ಮ ಮುಂದಿಟ್ಟಿದೆ. ಪ್ರಥಮ ಪಂದ್ಯದಲ್ಲೇ ಶತಕ ಬಾರಿಸಿದವರಾಗಿದ್ದಾರೆ ಪ್ರವೀಣ್.
ಈ ಕೃತಿಯನ್ನು ಅವರು ಸಮರ್ಪಿಸಿರುವುದು ಇವುಗಳನ್ನು ಸಮಯ ಸಮಯಕ್ಕೂ ಮೆಚ್ಚಿದ ಓದುಗರಿಗೆ,ಮುನ್ನುಡಿ ಬರೆಸಿದ್ದು ಸಹ ಹನಿಗವನಗಳನ್ನು ಓದಿ ಆಸ್ವಾದಿಸಿದ ಶ್ರೀ ಭೀಮಣ್ಣ ಹುಣಶೀಕಟ್ಟಿಯವರಿಂದ. ಶ್ರೀ ಭೀಮಣ್ಣನವರು ತಮ್ಮ ಮುನ್ನುಡಿಯಲ್ಲಿ “ ರೈಲು ಯಾನದ ಗೌಜುಗದ್ದಲಗಳ ನಡುವೆಯೂ ಆ ಕ್ಷಣಗಳನ್ನು ಹನಿಗಳನ್ನಾಗಿಸಿ, ನೋಡುವ ವಿಭಿನ್ನ ದೃಷ್ಟಿಕೋನವನ್ನು ಹೊಂದಿದವರು” ಎಂದಿದ್ದಾರೆ.
ಇವರು ಸಹ ಈ ರೈಲು ಹನಿಗಳು ಬರೆಯವಾಗ ತಮಗೆ ತಾವೇ ನಿರ್ಬಂಧಗಳನ್ನು ಹಾಕಿಕೊಂಡಿದ್ದರಂತೆ.

ರೈಲು ಹನಿಗಳನ್ನು ರೈಲು ಪ್ರಯಾಣದಲ್ಲೇ ಬರೆಯಬೇಕು.

ರೈಲಿನಲ್ಲಿ ನಡೆದ ನೈಜ ಘಟನೆಗಳ ಕುರಿತಾಗಿ ಮಾತ್ರ ಬರೆಯಬೇಕು ಅಂತ.

ಇವರ ಪುಸ್ತಕಕ್ಕೆ ಬೆನ್ನುಡಿ ಬರೆದದ್ದು ಯಾರ ಹನಿಗವನದಿಂದ ಇವರು ಪ್ರೇರಣೆ ಪಡೆದಿದ್ದರೋ ಅವರೇ. ಅದು ಗಂಗಾವತಿ ಪ್ರಾಣೇಶ್. ಅವರೇ ಈ ಪುಸ್ತಕ ಬಿಡುಗಡೆ ಮಾಡಿದ್ದು ಸಹ. ಅವರ ನುಡಿ ತಮಗೆ ಬೆನ್ನು ತಟ್ಟುವ ನುಡಿ ಎಂದು ಪ್ರವೀಣ್ ಭಾವಿಸುತ್ತಾರೆ. ಕರ್ಮ ಎಂಬ ಚುಟುಕನ್ನು ಪ್ರಾಣೇಶರು ಮೆಚ್ಚಿ ಕೊಂಡಾಡಿದ್ದಾರೆ. ತಮ್ಮ ಬೆನ್ನುಡಿಯಲ್ಲಿ ಪ್ರಾಣೇಶರು ತಮ್ಮ ಗುರುಗಳಾದ ಬೀಚಿಯವರ ಒಂದು ಮಾತನ್ನು ನೆನಪಿಸಿಕೊಂಡಿದ್ದಾರೆ. “ ಇದ್ದದ್ದು ಇದ್ದ ಹಾಗೆ ಹೇಳಲಿಕೆ ಒಬ್ಬದಡ್ಡ ಬಡ್ಡಿಮಗ ಸಾಕು. ವಗ್ಗರಣೆ ಹಾಕಿ ಎಲ್ಲರನ್ನು ಮೆಚ್ಚಿಸುವಂತೆ ಹೇಳಲು ಚುರುಕುಮತಿ ಬೇಕು “ ಅದು ಇಲ್ಲಿ ತುಂಬಾ ಹೊಂದುವಂಥ ಮಾತು.

ತಮ್ಮ ಈ ನೂರು ಹನಿಗಳನ್ನು ಇವರು ಐದು ವಿಭಾಗಗಳಾಗಿ ಮಾಡಿದ್ದಾರೆ. ಹಾಸ್ಯ, ವ್ಯಂಗ್ಯ, ಒಲವು, ಮಮತೆ ಮತ್ತು ವಿಶೇಷ. ಒಂದೊಂದು ವಿಭಾಗದಲ್ಲಿ ಎಷ್ಟೆಷ್ಟು ಹನಿಗಳಿವೆ ಎಂದು ನೋಡಿದಾಗ ಹಾಸ್ಯದಲ್ಲಿ 30, ವ್ಯಂಗ್ಯದಲ್ಲಿ 7, ಕರ್ಮ ದಲ್ಲಿ 13, ಒಲವು ನಲ್ಲಿ 20, ಮಮತೆಯಲ್ಲಿ 10 ವಿಶೇಷ ದಲ್ಲಿ 20 ಕಂಡವು. ಇದರ ಮೇಲೆ ಪ್ರವೀಣರ ಅಭಿರುಚಿ ಹೇಳುವುದಾದರೆ ಇವರು ಮೂಲತಃ ಹಾಸ್ಯ ಪ್ರಿಯರು. ಅದಕ್ಕೆ ಇಲ್ಲಿ ಸಹ ಹಾಸ್ಯಕ್ಕೇ ಪ್ರಾಧಾನ್ಯತೆ ಕೊಟ್ಟಿದ್ದಾರೆ.

ಪುಸ್ತಕದಲ್ಲಿ ಇರುವ ಕವನಗಳು ಬರೀ ಹನಿಗಳಲ್ಲ, ಅವುಗಳಲ್ಲಿ ಆಲಿಕಲ್ಲುಗಳು ಸಹ ಸಿಗುತ್ತವೆ. ಅಂದರೆ ದೊಡ್ಡ ಕವಿತೆಗಳು. ಎಲ್ಲ ಕವನಗಳು ಮನ ಸೆಳೆಯುತ್ತವೆ ಎಂದೇನು ಇಲ್ಲ.

ಹಾಸ್ಯ ಹನಿಗಳಲ್ಲಿ

“ರಾತ್ರಿಯಾದಂತೆಲ್ಲ ರೈಲು

ತರಹೇವಾರಿ ಗೊರಕೆಗಳ ಜೈಲು” ಎನ್ನುವ ಚಿಕ್ಕ ಚುಟುಕಿನಿಂದ ಹಿಡಿದು

“ಎ.ಸಿ.ಕೋಚಿನಲ್ಲಿ ಸೀನು ಕ್ಷಿ ಎಂಬಲ್ಲಿಗೆ ಮುಗಿಯುತ್ತದೆ

ಸ್ಲೀಪರ್ ಕೋಚಿನಲ್ಲಿ ಸೀನು ಆಕ್ಷಿ ಎಂಬಲ್ಲಿಗೆ ಮುಗಿಯುತ್ತದೆ

ಜನರಲ್ ಬೋಗಿಯಲ್ಲಿ ಸೀನು ಏಏಆಆಆ… ಕ್ಷೀ ಎಂಬಲ್ಲಿಗೆ ಮುಗಿಯುತ್ತದೆ” ಎನ್ನುವ ತುಸು ದೊಡ್ಡ ಕವನದ ವರೆಗೂ ಅನೇಕ ಹಾಸ್ಯ ಚುಟುಕುಗಳು ನಮಗೆ ಓದಲು ಸಿಗುತ್ತವೆ.

ಹಾಸ್ಯದ ಜೊತೆಗೆ ವ್ಯಂಗ್ಯದಲ್ಲೂ ಇವರು ತಮ್ಮ ಲೇಖಿನಿಯನ್ನು ಹರಿತಗೊಳಿಸುತ್ತ ತಿವಿಯುತ್ತಾರೆ.

“ಹಸುಗೂಸ ಹೊತ್ತು ನಿಂತವಳ ಏದುಸಿರ ಕೇಳಿ

ಕಣ್ಣು ಕಾಣದವನೊಬ್ಬ ಅವಳಿಗೆ ಜಾಗ ಮಾಡಿಕೊಟ್ಟ

ಕಣ್ಣಿದ್ದವರು ಎಂದಿನಂತೆ ಬರೀ ನಿಟ್ಟುಸಿರು ಬಿಟ್ಟರು”

ಹಾಗೇ

“ಒಂಟಿಗಾಲಿನ ತಾತ ಸೀಟಿಗಾಗಿ ಅಂಗಲಾಚಿದ

ಎರಡೂ ಕಾಲುಳ್ಳವರು ಇನ್ನಷ್ಟು ಅಗಲವಾಗಿ ಕೂತುಬಿಟ್ಟರು” ಎನ್ನುತ್ತ ಬೋಗಿಗಳಲ್ಲಿ ಕಾಣುವ ಹೊರ ಸಮಾಜದ ಪ್ರತಿಫಲನವನ್ನು ತೋರುತ್ತಾರೆ.

ಕರ್ಮ ಹಿಟ್ಸ್ ಬ್ಯಾಕ್ ಎನ್ನುವ ಹಾಗಿರುವ ಈ ಹನಿಯನ್ನು ನೋಡಿ

“ಅವನು ಹತ್ತು ರುಪಾಯಿಯ ಇಡ್ಲಿ ಮೂವತ್ತು ರುಪಾಯಿಗೆ ಮಾರಿದ

ಅವನ ಹೆಂಡತಿಯ ಆಸ್ಪತ್ರಿಯ ಬಿಲ್ಲು ಐದುನೂರರಿಂದ ಐದು ಸಾವಿರವಾಯಿತು”

ಒಲವು ವಿಭಾಗದಡಿಯಲ್ಲಿ ಈ ಕವನ ಹೌದೆನಿಸುತ್ತದೆ

“ಅವರವರ ಊರೇ ಅವರಿಗೆ ಶತ್ರುವಂತೆ ಭಾಸವಾಗುವುದು

ಅವರಿಗೆ ರೈಲಲ್ಲಿ ಯಾರ ಮೇಲಾದರೂ ಪ್ರೀತಿಯುಂಟಾದಾಗ”

ಹಿತವೆನಿಸುವ ಕವನಗಳಲ್ಲಿ ಅತ್ಯಂತ ಹಿತವೆನಿಸುವುದು

“ಅವಳಿಗೆ ಕೂಡಲು ಕಷ್ಟವಾಗುತ್ತಿತ್ತು

ಪಕ್ಕದ ಬ್ಯಾಗ್ ತೆಗೆದಿಟ್ಟೆ

ನನಗೆ ನೋಡಲು ಕಷ್ಟವಾಗುತ್ತಿತ್ತು ’

ಮುಖದ ದುಪಟ್ಟಾ ತೆಗೆದಿಟ್ಟಳು”

ಅತ್ಯಂತ ಸಂವೇದನಾಶೀಲ ಮತ್ತು ಅತಿ ಸಹಜವೆನಿಸುವ ಹನಿ ನೋಡಿ

“ಕಾಲಿಡಲೂ ಜಾಗವಿಲ್ಲದ ಜನರಲ್ ಬೋಗಿಯಲ್ಲಿ

ತಾಯಿಯೊಬ್ಬಳು ತನ್ನ

ಮಗುವಿಗೆ ಕಷ್ಟಪಟ್ಟು ಜೋಳಿಗೆ ಕಟ್ಟುತ್ತಿದ್ದಳು

ನಾ ದಡ್ಡ ದೇವರನ್ನ ಎಲ್ಲೆಲ್ಲೋ ಹುಡುಕುತಿದ್ದೆ”

ವಿಶೇಷ ಎಂದು ವಿಂಗಡಿಸಿದ ವಿಭಾಗದಲ್ಲಿ ಮನ ಸೆಳೆಯುವ ಹನಿಗಳು
“ ಬ್ಯಾಗುಗಳನ್ನು ಹೊರಲು ಕಷ್ಟ ಪಡುತ್ತಿದ್ದ ಕೂಲಿಯಾಳಿಗೆ
ಮಗಳ ಫೀಸ್ ಕಟ್ಟುವುದು ನೆನಪಾದಾಗ ಬ್ಯಾಗುಗಳು
ಸರಾಗವಾಗಿ ಹೆಗಲೇರಿ ಕುಳಿತವು”
“ ಒಮ್ಮೆ ಬೇರಾಗುವ ಮತ್ತೆ ಒಂದಾಗುವ ರೈಲು ಹಳಿಗಳನ್ನು
ಕಿಟಿಕಿಯಿಂದ ನೋಡುತ್ತಿದ್ದ ನೊಂದ ಮಹಿಳೆಯೊಬ್ಬಳು
ಲೈಫು ಇಷ್ಟೇನೇ ಎಂದು ನಿಟ್ಟುಸಿರು ಬಿಟ್ಟಳು “
ನಮ್ಮೆಲ್ಲರ ಜೀವನಗಳಲ್ಲಿ ರೈಲು ಪ್ರಯಾಣ ಎಂಬುದು ಅನಿವಾರ್ಯವಾಗಿ ಆಗಿರುತ್ತದೆ. ಆಗ ನಾವು ಬಹುತೇಕ ನಮ್ಮ ಪ್ರಯಾಣದ ಅನುಭವಗಳನ್ನು ನಮ್ಮ ಸ್ನೇಹಿತರಲ್ಲೋ ಅಥವಾ ಬಂಧುಗಳಲ್ಲೋ ಹಂಚಿಕೊಂಡಿರಬಹುದು. ಅಥವಾ ಆ ಪ್ರಯಾಣಗಳಲ್ಲಿ ಪರಿಚಯವಾದ ವ್ಯಕ್ತಿಗಳು ಮುಂದೆ ಜೀವನದಲ್ಲಿ ಗೆಳೆಯರಾಗಿದ್ದರಲೂಬಹುದು. ಇಂಥಾ ಅನುಭವಗಳನ್ನು ಬಿಟ್ಟರೆ ರೈಲು ಪ್ರಯಾಣಗಳಲ್ಲಿ ಈ ತರದ ಕಾವ್ಯಮಯ ದೃಷ್ಟಿ ಮೂಡಿಬಂದು, ಅವುಗಳು ಲಿಖಿತ ರೂಪಕ್ಕೆ ಇಳಿದು, ಪುಸ್ತಕ ರೂಪದಲ್ಲಿ ಹೊರಬರುತ್ತಿರುವುದು ಇದೇ ಪ್ರಥಮ ಎನಿಸುತ್ತದೆ. ಈ ರೀತಿಯ ಹೊಸ ಪ್ರಯೋಗವನ್ನು ಮಾಡಿದ ಯುವ ಮತ್ತು ಉದಯೋನ್ಮುಖ ಕವಿಯಾದ ಪ್ರವೀಣ್ ಚಿತ್ತಾಪೂರ್ ಅವರಿಗೆ ಅಭಿನಂದನೆ ಹೇಳುತ್ತಾ ಈ ಪುಸ್ತಕವನ್ನು ಎಲ್ಲರೂ ಓದಿ, ಹನಿಗಳಲ್ಲಿ ಮಿಂದು ಖುಶಿ ಪಡಬಹುದೆಂದು ಬಯಸುತ್ತೇನೆ.

.