ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀ ದ.ರಾ. ಬೇಂದ್ರೆ ಅವರ ೧೨೫ ನೆಯ ಜನ್ಮದಿನದ ಸಮಾರಂಭ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ಬೇಂದ್ರೆ ಜನ್ಮದಿನ ವಿಶೇಷ ಕಾರ್ಯಕ್ರಮದ ವರದಿ…!

ವರಕವಿ ಶ್ರೀ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ೧೨೫ ನೆಯ ಜನ್ಮದಿನ ಹೈದರಾಬಾದ್ ನ ಕರ್ನಾಟಕ ಸಾಹಿತ್ಯ ಮಂದಿರದಲ್ಲಿ ವೈಭವದಿಂದ ಆಚರಿಸಲಾಯಿತು. ಕರೋನಾ ಕಟ್ಟಳೆಗಳಿಂದಾಗಿ ಸುಮಾರು ಹತ್ತು ತಿಂಗಳಿಂದ ಯಾವ ಕಾರ್ಯಕ್ರಮವೂ ನಡೆಸಲಾರದಾಗಿದ್ದು, ಸಡಿಲವಾದ ನಿಬಂಧನೆಗಳೆಗನುಗುಣವಾಗಿ ಕಾರ್ಯಕ್ರಮವನ್ನು ನಿರ್ವಹಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಸಾಹಿತ್ಯ ಮಂದಿರದ ಅಧ್ಯಕ್ಷರಾದ ಶ್ರೀ ಸುರೇಂದ್ರ ಕಟಗೇರಿಯವರು ವಹಿಸಿದ್ದು ತಮ್ಮ ಸ್ವಾಗತ ಭಾಷಣದಲ್ಲಿ ಕಳೆದ ವರ್ಷ ಕರೋನದ ವತಿಯಿಂದ ಯಾವ ಕಾರ್ಯಕ್ರಮಗಳೂ ನಡೆಸಲಾಗದೇ ಇದ್ದು ಈ ಕಾರ್ಯಕ್ರಮದೊಂದಿಗೆ ಮುಂದಿನ ವರ್ಷ ಪ್ರತಿ ತಿಂಗಳೂ ಒಂದು ಕಾರ್ಯಕ್ರಮವನ್ನು ಮಾಡುವ ಆಲೋಚನೆ ಇದೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಸ್ಥಳೀಯ ಆಂಗ್ಲ ಮತ್ತು ವಿದೇಶೀ ಭಾಷೆಗಳ ವಿಶ್ವವಿದ್ಯಾಲಯದ ಅನುವಾದ ವಿಭಾಗದ ಪ್ರೊಫೆಸರ್ ಶ್ರೀ ವಿ.ಬಿ. ತಾರಕೇಶ್ವರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಾಹಿತ್ಯ ಮಂದಿರದ “ ಪರಿಚಯ “ ಪತ್ರಿಕೆಯ ಸಂಚಿಕೆಯನ್ನು ಶ್ರೀ ತಾರಕೇಶ್ವರ್ ಬಿಡುಗಡೆ ಮಾಡಿದರು.

ವರಕವಿಯ ಕಿರು ಪರಿಚಯವನ್ನು ಸಾಹಿತ್ಯ ಮಂದಿರದ ಕಾರ್ಯದರ್ಶಿಯಾದ ಶ್ರೀ ನರಸಿಂಹಮೂರ್ತಿ ಜೋಯಿಸ್ ಅವರು ಮಾಡಿದರು. ನಂತರ ಸ್ಥಳೀಯ ಗಾಯಕಿಯಾದ ಡಾ.ವಿನಯಾ ನಾಯರ್ ಅವರು ಬೇಂದ್ರೇಯವರ ಕೆಲ ಭಾವಗೀತೆಗಳನ್ನು ಮಧುರವಾಗಿ ಹಾಡಿ ಸಮಯಾಭಾವದ ಕಾರಣದಿಂದ ಕೆಲ ಗೀತೆಗಳ ಪಲ್ಲವಿಗಳನ್ನು ಮಾತ್ರ ಕೇಳಿಸಿದರು. ಅವರ ಮಗನಾದ ಮಾಸ್ಟರ್ ಆದಿಶಂಕರ ಬೇಂದ್ರೇ ಅವರ ಭಾವಚಿತ್ರವನ್ನು ಅಲ್ಲೇ ಕೂತು ಬಿಡಿಸಿದ್ದು ಎಲ್ಲರ ಮೆಚ್ಚುಗೆ ಗಳಿಸಿತು. ಅದರ ನಂತರ ಸಾಹಿತ್ಯ ಮಂದಿರದ ಸದಸ್ಯರು ಶ್ರೀ ಸಂಪತ್ ಸೂಳಿಭಾವಿ, ಶ್ರೀಮತಿ ತಾರಾಮತಿ ಕುಲಕರ್ಣಿ, ಶ್ರೀಮತಿ ಮಾನಸಾ ಗುರುರಾಜ್ ಅವರು ಬೇಂದ್ರೇ ಅವರ ಜೀವನ, ಕವನ, ನಾಟಕಗಳ ಬಗ್ಗೆ ಬೆಳಕು ಚೆಲ್ಲಿದರು. ಶ್ರೀಮತಿ ಮೀರಾ ಜೋಶಿ, ಶ್ರೀಮತಿ ಸುಮತಿ ನಿರಂಜನ್ ಮತ್ತು ಶ್ರೀ ರಮೇಶ ಬಾಬು ಅವರು ಸ್ವರಚಿತ ಕವನಗಳನ್ನ ಓದಿದರು.

ಕೊನೆಯಲ್ಲಿ ಮುಖ್ಯ ಅತಿಥಿಯಾದ ಶ್ರೀ ವಿ.ಬಿ. ತಾರಕೇಶ್ವರ್ ಅವರು ತಮ್ಮ ಸಂದೇಶದಲ್ಲಿ ಬೇಂದ್ರೇ ಅವರ ವ್ಯಕ್ತಿತ್ವದ ಬಗ್ಗೆ, ಅವರ ಕಾವ್ಯ ಕೃಷಿಯ ಬಗ್ಗೆ ವಿವರವಾಗಿ ಮಾತನಾಡಿದರು. ಬೇಂದ್ರೇಯವರು ಬರೀ ಕವಿಗಳು ಮಾತ್ರವಲ್ಲ ಕನ್ನಡ ಕಟ್ಟಿದವರು ಎನ್ನುತ್ತ ಅವರು ಉತ್ತರ ಕರ್ನಾಟಕದ ಆಡು ಭಾಷೆಯನ್ನು ಸಶಕ್ತವಾಗಿ ಬಳಸಿಕೊಂಡ ಬಗೆ ಮತ್ತು.ಅದರಿಂದಾಗಿ ಅವರು ಜನರಿಗೆ ತುಂಬಾ ತೀರ ಹತ್ತಿರವಾದರೆಂದು ಹೇಳಿದರು. ಅವರು ಸಾಂಖ್ಯಾ ಶಾಸ್ತ್ರದ ಬಗ್ಗೆ ತುಂಬಾ ಆಸಕ್ತಿ ವಹಿಸಿದ್ದು ತಮ್ಮ ಹಲವಾರು ಕವಿತೆಗಳಲ್ಲಿ ಸಂಖ್ಯೆಗಳನ್ನು ಬಳಸಿದ್ದಾರೆ ಎಂದು ಹೇಳಿದರು. ಅವರ ತಾತ್ತ್ವಿಕ ಚಿಂತನೆಯನ್ನು ಕೂಡ ನೆನೆದರು. ಬರೀ ಕಾವ್ಯವಲ್ಲದೇ ನಾಟಕ, ಕಥೆ, ವಿಮರ್ಶೆ, ಅನುವಾದ ಎಲ್ಲದರಲ್ಲೂ ಕೃಷಿ ಮಾಡಿದ್ದನ್ನು ಹೇಳುತ್ತಾ ಅವರು ಮರಾಠೀ ಮತ್ತು ಆಂಗ್ಲ ಭಾಷೆಯಲ್ಲಿ ಸಹ ಬರೆದಿರುವರೆಂದು ತಿಳಿಸಿದರು.

ಶ್ರೀ ರಮೇಶ ಬಾಬು ಅವರು ವಂದನಾರ್ಪಣೆ ಸಲ್ಲಿಸುವುದರ ಜೊತೆಗೆ ಕಾರ್ಯಕ್ರಮವನ್ನೆಲ್ಲ ನಿರೂಪಿಸಿದರು.

ಮುಂದಿನ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿ ನೆರೆದ ಸಭಿಕರು ಮರಳಿದರು.

ಜೈ ಕರ್ನಾಟಕ ಸಿರಿಗನ್ನಡಂ ಗೆಲ್ಗೆ