ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಂಪಾದಕೀಯ-೧

ಸಂಪಾದಕೀಯ-೧

ಆತ್ಮೀಯ ಓದುಗರೇ,

ಕ್ಷೇಮವಾಗಿದ್ದೀರೆಂದು ಭಾವಿಸುತ್ತೇನೆ. ಕೆಲ ವಿಷಯಗಳನ್ನು , ಖುಷಿಯ ವಿಚಾರಗಳನ್ನು ಹಂಚಿಕೊಳ್ಳಲು ಮೊದಲ ಬಾರಿಗೆ, ಆದರೆ ತಡವಾಗಿ ನಿಮ್ಮ ಬಳಿ ಬಂದಿದ್ದೇನೆ. ಕ್ಷಮೆ ಇರಲಿ.

ಪ್ರಥಮ ಉಷಾ ಕಿರಣ

ಕೆಲವು ತಿಂಗಳುಗಳ ಹಿಂದೆ ‘ನಸುಕು.ಕಾಮ್’ ಹುಟ್ಟಿ ಅಂಬೆಗಾಲಿಟ್ಟು ನಡೆಯಲಾರಂಭಿಸಿದಾಗ ನಮ್ಮ ಮುಂದಿದ್ದದ್ದು ಒಂದು ಅಪರಿಚಿತ ರಸ್ತೆ. ಆಗಷ್ಟೇ ಕೋವಿದ್-೧೯ ತನ್ನ ದಂಡಯಾತ್ರೆ ಚೀನಾದ ಹೊರಗೂ ಶುರು ಹಚ್ಚಿಕೊಂಡಿತ್ತು.

ಕೆ.ವಿ. ತಿರುಮಲೇಶ್ ಸರ್, ನಸುಕಿಗೆ ಮೊದಲ ಸಂದರ್ಶನ ನೀಡಿ ಹಾರೈಸಿದವರು..

ಈ ಹಿಂದೆ, ಮೊಟ್ಟ ಮೊದಲು ಸಂದರ್ಶನ ಕೊಟ್ಟವರು ಹಿರಿಯ ಭಾಷಾತಜ್ಞರು,ಕನ್ನಡದ ಮಹತ್ವದ ಕವಿ,ಸಾಹಿತಿಯಾದ ಡಾ. ಕೆ.ವಿ. ತಿರುಮಲೇಶ್. ‘ ಏನ್ ಹೆಸರಿಟ್ಟಿದ್ದೀರಿ.. ನಸುಕು ಅಂತಲೇ.. ಹೋ, ಚೆನ್ನಾಗಿದೆ ಒಳ್ಳೇದಾಗ್ಲಿ..”. ಅಂದು ಜೋಪಾನವಾಗಿಟ್ಟುಕೊಂಡ ಅವರ ಹಾರೈಕೆಗಳು ಇವತ್ತು ರೆಕ್ಕೆಗಳಾಗಿ ಹಾರಲು ಕಸುವು ನೀಡಿದ್ದೂ ನಿಜ ..
ಇಂದು ಆರು ಮಾಸಗಳೂ ಪೂರ್ತಿ ತುಂಬಿಲ್ಲ, ಅದಾಗಲೇ ಸಾವಿರಾರು ಓದುಗರು , ದಿನೇ ದಿನೇ ಅಂಕಿ ಅಂಶ ಸತತವಾಗಿ ಮೇಲಕ್ಕೇರ್ತಿದೆ ಅಂದ್ರೆ ಅದರ ಹಿಂದೆ ನಿಮ್ಮೆಲ್ಲರ ಪ್ರೋತ್ಸಾಹ,ಪ್ರೀತಿ ಅದ್ದಕ್ಕಿಂತ ಹೆಚ್ಚಾಗಿ ಒಂದು ಕಸ್ತೂರಿ ಕನ್ನಡದ ಪುರವಣಿ ಬೆಳೆಯಲಿ ಎನ್ನುವ ನಿಮ್ಮ ಧಾರಾಳ ಮನಸ್ಸೇ ಕಾರಣ ಅಂದರೆ ಅದು ಅತಿಶಯೋಕ್ತಿ ಆಗಲಾರದು. ನಸುಕಿ’ನ ದಾರಿಯಲ್ಲಿ ಸಿಕ್ಕವರು, ಈ ಎಲ್ಲ ವರ್ಗದವರೂ “… ನೀವು ಮಾಡ್ತಿರೋದು ಖಂಡಿತ ನಾಡು,ನುಡಿಗೆ ಒಳ್ಳೆದಾಗೊ ಕೆಲಸ, ಹೇಳ್ರಿ ನಮ್ಮಿಂದ ಏನು ಸಹಕಾರ ಬೇಕು” ಎದೆಯಾಳದಿಂದ ನುಡಿದದ್ದು ಕೇಳಿಯೇ ನಮ್ಮ ಕಣ್ಣಾಲಿಗಳು ಆರ್ದ್ರಗೊಳ್ಳುತ್ತವೆ. . . ಅವರೆಲ್ಲರ ಬಗ್ಗೆ ಮುಂದೊಮ್ಮೆ ಬರೆದೇನು..?

ನಸುಕು ಹರಿಯಿತು , ಮಸುಕು ಸರಿಯಿತು- ದಿವ್ಯ ಸೊಬಗಿನ ದಿನವಿದು

ಹಾಗಾದರೆ, ನಸುಕು.ಕಾಮ್ ನ ಮೂಲ ಸ್ವರೂಪ ಹಾಗೂ ಉದ್ದೇಶಗಳೇನು? ಎಲ್ಲ ಬಗೆಯ ನಿಲುವು, ಸಿದ್ಧಾಂತಗಳೆಲ್ಲ ತಾವರೆ ಎಲೆಗಳಾದ್ರೆ, ನಾವಿಲ್ಲಿ ನೀರಿನ ಹನಿಗಳು.. ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ಹಿಗ್ಗುವುದಿಲ್ಲ, ಕುಗ್ಗುವುದಿಲ್ಲ. ಹೊಸತಾಗುವೆವು, ನಡೆದು, ನುಡಿದು, ಸರಿದು, ಕುಲುಕಿ,ಎದ್ದು, ಬಿದ್ದು ಹೊಳೆದೂ,ಹಳತಾಗುವೆವು, ಕೊನೆಗೆ ಹೋಗುವೆವು ಕಳೆದೂ…. ಎಲ್ಲ ಜೀವ, ಭಾವದ ಹನಿಗಳೂ ಕ್ರಮೇಣ ಕಾಲಮಹಾಸಾಗರದಲ್ಲಿ ಜಾರಿಕೊಂಡು, ಕೊಚ್ಚಿ ಕೊನೆಗೆ ಲೀನವಾಗೀಯೇ ಹೋಗುತ್ತದೆ ಎಂಬುದಕ್ಕೆ ಯಾವುದೇ ಶಂಕೆ ಇಲ್ಲ, ಚಿಂತೆ ಇಲ್ಲ.

ಹಾಗಾಗಿಯೇ, ನಿಮಗೆ ಇಲ್ಲಿ ಬರುವ ವಿಚಾರಧಾರೆಗಳು, ಲೇಖಕರು ಒಂದು ಚೌಕಟ್ಟಿಗೆ ನಿಲುಕಲಾರರು, ಸಿಲುಕಲಾರರು. ಇಲ್ಲಿ ಎಲ್ಲರೂ ಸಲ್ಲುವವರೇ. ಧರ್ಮಾಧರ್ಮಗಳು, ನ್ಯಾಯ ಅನ್ಯಾಯಗಳು, ಸತ್ಯ ಮಿಥ್ಯಗಳು ಯಾವತ್ತೂ ಅಬ್ಸೊಲ್ಯುಟ್ ಆಗಿ ಇರದೇ ರಿಲೇಟಿವ್ ಅಥವಾ ಸಾಪೇಕ್ಷವಾಗಿರುತ್ವೆ ಅಂದುಕೊಳ್ಳುತ್ತಲೇ ಒಂದು ಅಸ್ತಿತ್ವವಾಗಿರುವುದರಿಂದ ತಪ್ಪಿಸಕೊಳ್ಳಬಯಸುತ್ತೇವೆ ಅಥವಾ ಹಾಗೆ ಮಾಡಲು ಯತ್ನಿಸುತ್ತೇವೆ.

ಇದು ಎಲ್ಲರ ನಸುಕು

ನಮ್ಮ ವೈಯಕ್ತಿಕ ನಿಲುವುಗಳು ಏನೇ ಆಗಿದ್ದರೂ ನಸುಕು.ಕಾಮ್ ಗೆ ತನ್ನದೇ ಆದ ಇಸಮ್‌ಗಳೂ, ನಿಲುಮೆಗಳು ಇರುವುದಿಲ್ಲ. ಇದೊಂದು ಈ ಕಾಲಘಟ್ಟದ ವಿಚಾರ, ಸಂವಹನೆಗಳ ಸಾಪೇಕ್ಷಿತ ಸಾಕ್ಷೀಕರಣಕ್ಕೆ ತನ್ಮೂಲಕ ಅಭಿವ್ಯಕ್ತಿಗೆ ಒಂದು ವೇದಿಕೆ ಅಷ್ಟೇ.
ಮೊನ್ನೆ ಪ್ರೊ.ರಹಮತ್ ತರೀಕೆರೆ ಮಾತಾಡುವಾಗ ಅವರು ಹೇಳಿದ್ದು ನೆನಪಾಯ್ತು. ಏನಾದ್ರೂ ಹೊಸತು ಆಗೋದಿದ್ರೆ ಅದು ನಾನ್ಅಕಾಡೆಮಿಕ್ ಕಡೆಯವರಿಂದಲೇ ಆಗಬೇಕು. ನಾವು ಎಲ್ಲಿಂದಲೋ ಬಂದವರು..ಹೀಗಾಗಿ ಯಾವ ಪೂರ್ವಾಗ್ರಹವಿಲ್ಲದೆಯೇ ಹೊಸತನ್ನು ಕೊಡಬಹುದು ಎಂಬ ನಂಬಿಕೆಯೂ ಜತೆಗಿದೆ. ಸದುದ್ದೇಶದಿಂದ ಒಂದೊಂದಾಗಿ, ನಿಧಾನವಾಗಿ ಹೆಜ್ಜೆ ಇಡುತ್ತಿದ್ದೇವೆ. ಡ್ರೋಣ್ ಆಗಿ ರಾತ್ರೋರಾತ್ರಿ ಹಾರುವ ಉಮೇದಿಲ್ಲ. ಬದಲು ರೆಕ್ಕೆ ಬಲಿಯುವವರೆಗೆ ಕಾದು ಹಾರತೊಡಗುತ್ತೇವೆ. ಜತೆಯಾಗಿ ಮತ್ತೆ ಮತ್ತೆ ನಸುಕಾಗಿಸುವ ಜವಾಬ್ದಾರಿಯೂ ನಿಮಗಿರಲಿ. ಇದು ನಿಮ್ಮ ನಸುಕು.

ಫೇಸ್ ಬುಕ್ ಮತ್ತು ನಸುಕು

ಫೇಸ್ ಬುಕ್ ಎನ್ನುವುದು ಸ್ವಾಭಾವಿಕ ಸಾಂಘಿಕ ಮಾಧ್ಯಮ. ಅದೊಂದು ತುಂಬಿದ ಬಜಾರಿನ ಮುಖ್ಯ ಬೀದಿಯ ಸಂತೆಯಂತೆ. ಗದ್ದಲದ ಸಂತೆಯಲ್ಲಿ ಪುಸ್ತಕ ಕೊಂಡುಕೊಳ್ಳಬಹುದೇ ವಿನಾ , ಅಲ್ಲಿ ಕೂತು ಓದಲಾಗುವುದಿಲ್ಲ. ತಿರುಮಲೇಶ್ ಸರ್ ಹೇಳಿದಂತೆ ಫೇಸ್‌ಬುಕ್ ನ ಸಮಸ್ಯೆ ಅಂದರೆ ವೇಗ. ಬರಹಗಳು ನಿಧಾನವಾಗಿ ಮನಸ್ಸಿನಾಳಕ್ಕೆ ಇಳಿದು, ಯಾವುದೇ ತಳಮಳವಿಲ್ಲದೇ ಓದುಗನನ್ನು ಆವರಿಸಬೇಕು. ಆದರೆ ಫೇಸ್‌ಬುಕ್‌ನಲ್ಲಿ ಅದು ಸಾಧ್ಯವಿಲ್ಲ. ಫೇಸ್ ಬುಕ್ ಕಲ್ಟಿವೇಟ್ ಮಾಡುವ ಸೈಕೊಲಾಜಿ ಕೂಡ ಅಧ್ಯಯನದ ವಿಷಯವೇ. ಇರಲಿ, ಪ್ರತ್ಯೇಕವಾಗಿ ಬರುವ ‘ನಸುಕಿ’ನಂಥ ಪತ್ರಿಕೆ, ಡೈಜೆಸ್ಟ್ ಗಳಲ್ಲಿ ಈ ಸಮಸ್ಯೆ ಇರುವುದಿಲ್ಲ. ಓದುಗರು ಯಾವುದೇ ಧಾವಂತದ ಲೈಕುಗಳು ಹಾಗೂ ಮುಲಾಜಿನ ಕಾಮೆಂಟುಗಳಿಲ್ಲದೇ ಮನಸಿಟ್ಟು ಓದಬಹುದು. ಸಾಹಿತ್ಯವನ್ನು, ಆಸಕ್ತಿಯಿಂದ ಆಸ್ವಾದಿಸಬಹುದು. ಹಾಗಾಗಿ ತನ್ನಿಂತಾನೆ ಬರುವ, ಮತ್ತು ನಿಮ್ಮ ಫೇಸ್ ಬುಕ್ ಗೆಳೆಯರ ಹೊರತಾಗಿ ಅಪರಿಚಿತರಿಂದ ಬರುವ ಒಂದೇ ಒಂದು ಕಾಮೆಂಟ್‌ಗೆ ಕೂಡ ತುಂಬಾ ಮಹತ್ವವಿದೆ ಇಲ್ಲಿ.

ಸೋತು ಸುಣ್ಣವಾದ್ರೂ ಸರಿ, ಹೊಸತನ್ನ ಮಾಡೋದನ್ನ ಬಿಡಲ್ಲ

ಜುಜುಬಿ ತೊಬ್ಬತ್ತು ಲಕ್ಷ ಇರೋ ಸ್ವೀಡನ್ ದೇಶ , ಸ್ವೀಡಿಷ್ ಪತ್ರಿಕೆ, ಮಾತೃ ಭಾಷೆಯಲ್ಲಿ ಪುಸ್ತಕಗಳನ್ನು ಎಲ್ಲೆಂದರಲ್ಲಿ ಓದೋದನ್ನ ನೋಡಿ ನನಗೆ ಅಚ್ಚರಿಯಾಗಿತ್ತು. ಭವಿಷ್ಯದ ಪೀಳಿಗೆ ಕೂಡ ಸ್ವೀಡಿಷ್ ಮಾಧ್ಯಮವನ್ನೇ ಆಯ್ದುಕೊಂಡಿದೆ. ಐ ಫೋನ್ ಲ್ಯಾಂಗ್ವೇಜ್ ಸೆಟ್ಟಿಂಗ್ ನಲ್ಲಿ ಸ್ವೀಡಿಷ್ ಇರುತ್ತೆ. ಇಷ್ಟು ಚಿಕ್ಕ ಓದುಗ ವಲಯದಲ್ಲೂ ಎಷ್ಟೊಂದು ಲೇಖಕರು. ಆದರೆ ಕರ್ನಾಟಕ ೭-೮ ಪಟ್ಟು ದೊಡ್ಡದು ಜನಸಂಖ್ಯೆಯಲ್ಲಿ ..ಇದೂ ಕೂಡ ನಸುಕು ಹುಟ್ಟಲು ಪ್ರಮುಖ ಕಾರಣಗಳಲ್ಲಿ ಒಂದು…ಒಳ್ಳೆಯ ಸಂಗತಿ ಎಂದರೆ ಇಂದು ಅನೇಕ ಕನ್ನಡ ಆನ್ಲೈನ್ ಮ್ಯಾಗಜ಼ಿನ್ ಗಳಿವೆ.೬ ಕೋಟಿ ಕನ್ನಡಿಗರಿಗೆ ಇನ್ನೂ ಹೊಸದು ಬರಲಿ,ಸಿಗಲಿ. ಎಲ್ಲರೂ ಕೂಡಿ ಡಿಜಿಟಲ್ ಕನ್ನಡ ವಿಭಾಗವನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯೋಣ. ಅವಕಾಶಗಳ ಆಕಾಶದ ವಿಸ್ತಾರ ಅಪಾರ.
ನಮ್ಮ ಇನ್ನೊಂದು ಸ್ವರೂಪ ಅಂದರೆ ಕಾಲದ ಜೊತೆಗೆ ಅಭಿವೃದ್ಧಿ..ಅನವರತ ಪ್ರಯೋಗ.. ಸೋತು ಸುಣ್ಣವಾದ್ರೂ ಸರಿ, ಹೊಸತನ್ನ ಮಾಡುವುದನ್ನು ಮಾತ್ರ ಬಿಡಲ್ಲ ಅನ್ನುವುದು ನಮ್ಮ ಹುಮ್ಮಸ್ಸಿನ ಸಂಕೇತವಷ್ಟೆ. ಟಿ ಆರ್ ಪಿ ಯ ಬಲವಂತ, ಧಾವಂತ ನಮಗಿಲ್ಲ.ಹಾಗೆಯೇ, ನಸುಕಿ ನಲ್ಲಿ, ಸಿಕ್ಕಾಪಟ್ಟೆ ಬರಹಗಳನ್ನೂ ಪ್ರವಾಹೋಪಾದಿಯಲ್ಲಿ ಪ್ರಕಟಿಸಲೂ ಹೋಗುವುದಿಲ್ಲ. ಆಗಾಗ ನಡುವೆ ಗ್ಯಾಪ್‌ಗಳನ್ನು ಉದ್ದೇಶಪೂರಕವಾಗಿ ಇಡಲಾಗುತ್ತದೆ.
ನಮ್ಮ ಓದುಗರ, ಲೇಖಕರ ಖಾಸಗಿ ವಿಷಯ, ಮಾಹಿತಿ ಸುರಕ್ಷತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಜಾಹಿರಾತುಗಳು,ಪಾಪ್ ಅಪ್ ಗಳು ಇಲ್ಲದಿರುವುದೂ ಬಳಕೆದಾರರ ಸುರಕ್ಷತೆಗೆ ಇಂಬು ಕೊಡುತ್ತದೆ.
ವಿಶೇಷ ಸಂಚಿಕೆಗಳು, ಸಂವಾದ ಇಷ್ಟರ ಹೊರತಾಗಿ ಕಂಡರಿಯದ,ಕೇಳರಿಯದ ಇನ್ನೂ out side the box , ಇನ್ನೂನೊವೇಟಿವ್ ಯೋಜನೆಗಳು ಒಂದೊಂದಾಗಿ ಬರಲಿವೆ.ಡಿಜಿಟಲ್ ತಂತ್ರಜ್ಞಾನವನ್ನು ನಮ್ಮಲ್ಲಿ ಹೆಚ್ಚು ಹೆಚ್ಚು ಬಳಸಲಾಗುವುದು..

ಸಂಪಾದಕ ವರ್ಗ – ಪ್ರಕಟಣೆಗಳು

ಬೈ ದ ವೇ, ಇನ್ನೊಂದು ವಿಷಯ. ನಸುಕು.ಕಾಮ್ ನನ್ನು ಒಂದು ಕಮ್ಮ್ಯೂನಿಟಿ ಪತ್ರಿಕೆಯಾಗಿ ಮಾಡಬೇಕು ಎನ್ನುವ ಯೋಚನೆಗಳಿದ್ದವು. ಹಾಗಾಗಿಯೇ, ಇಲ್ಲಿಯವರೆಗೆ ವೆಬ್ ಸೈಟ್ ನಲ್ಲಿ ಯಾರ ಹೆಸರನ್ನೂ ನಮೂದಿಸಿರಲಿಲ್ಲ. ಇದು ಓದುಗರ,ಬರಹಗಾರರ ಪತ್ರಿಕೆ. ನಿಮ್ಮ ಪತ್ರಿಕೆ. ಆದರೆ, ಅನಾಮಧೇಯ ವ್ಯವಹಾರಗಳೂ ಯುಕ್ತವಲ್ಲ ಎಂದು ಪಾರದರ್ಶಕವಾಗಿರಲು ಬಯಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಪತ್ರಿಕೆಯನ್ನು ಒಬ್ಬರಲ್ಲದೇ ಹಲವರ ಅನುಭವ,ಮಾರ್ಗದರ್ಶನಗಳಿಗೆ ತೆರೆದುಕೊಳ್ಳುವ ಸದುದ್ದೇಶದಿಂದ ಎರಡು ನಿರ್ಧಾರಗಳನ್ನ ಕೈಗೊಳ್ಳಲಾಗಿದೆ. ಒಂದು ಸಂಪಾದಕ ಬಳಗದ ಅಭಿವರ್ಧನೆ ಹಾಗೂ Advisory ಬೋರ್ಡ್ ನ ಸ್ಥಾಪನೆ.
ಇದರ ಮೊದಲ ಹಂತವಾಗಿ ನುರಿತ, ತಮ್ಮ ಕ್ಷೇತ್ರದಲ್ಲಿ ಗಣನೀಯ ಸಾಧಕರಾದ ಇಬ್ಬರು, ನಸುಕು.ಕಾಮ್‌ನ ಸಂಪಾದಕ ಮಂಡಳಿಯನ್ನು ಅಲಂಕರಿಸಲಿದ್ದಾರೆ.

ಶ್ರೀಯುತ ಡಿ.ವಿ. ಪ್ರಹ್ಲಾದ್, ಗೌರವ ಸಂಪಾದಕರು- ನಸುಕು.ಕಾಮ್

ಶ್ರೀಯುತ ಡಿ.ವಿ. ಪ್ರಹ್ಲಾದ್ ಸ್ವತಃ ಕವಿಯೂ ಆಗಿದ್ದು, “ಸಂಚಯ” ದ್ವೈಮಾಸಿಕ ಸಾಹಿತ್ಯ ಪತ್ರಿಕೆಯನ್ನು ಸಂಪಾದಕ, ಪ್ರಕಾಶಕರಾಗಿ ಮುನ್ನಡೆಸಿದ ಅಪಾರ ಅನುಭವವುಳ್ಳ ಸಹೃದಯರು. ಇವರ ಮಾರ್ಗದರ್ಶನದಲ್ಲಿ ಸಾಹಿತ್ಯದ ಓದುಗರಿಗೆ ಸದಭಿರುಚಿಯ ಪ್ರಕಟಣೆಗಳು ಬರಲಿರುವುದು ನಿಮಗೂ ಖುಷಿ ಕೊಡುವುದು ಖಂಡಿತ . ನಸುಕಿಗೆ ಇವರು ಗೌರವ ಸಂಪಾದಕರಾಗಲಿದ್ದಾರೆ. .

ಶ್ರೀ ಗೋವಿಂದ ಹೆಗಡೆ , ಸಂಪಾದಕರು , ನಸುಕು.ಕಾಮ್

ಡಾ. ಗೋವಿಂದ ಹೆಗಡೆ ಅವರು ವೃತ್ತಿಯಲ್ಲಿ ವೈದ್ಯರಾದರೂ ಶುದ್ಧ ಪದಗಳ ನಿಸ್ಸೀಮ ಕವಿಗಳು. ಗಜಲ್ ಸೇರಿದಂತೆ ಅನೇಕ ಪ್ರಕಾರಗಳಲ್ಲಿ ಕಾವ್ಯ ಕೃಷಿ ಮಾಡುತ್ತಿರುವ ಸ್ನೇಹಶೀಲರು. ಇವರ ಮಾರ್ಗದರ್ಶನ ಈಗಾಗಲೇ ನನಗೆ ತುಂಬಾ ದೊರಕುತ್ತಿದೆ.ಇವರು ಮತ್ತು ನಾನು ನಸುಕಿನ ಸಂಪಾದಕರುಗಳಾಗಿ ಕೆಲಸ ಮಾಡಲಿದ್ದೇವೆ.

ಇನ್ನು ಅಡ್ವೈಸರಿ ಬೋರ್ಡ್ ನ ಬಗ್ಗೆ ಶೀಘ್ರವೇ ಪ್ರಕಟಿಸಲಾಗುವುದು.

ಹೊಸತಿನ ವ್ಯಾಪ್ತಿ ಪಸರಿಸುವ,ಎಲ್ಲರಿಗೂ ಸಲ್ಲುವ,ತೆರೆದುಕೊಳ್ಳುವ ಪ್ರಾಮಾಣಿಕ ಪ್ರಯತ್ನ..
ನಸುಕು.ಕಾಮ್.. ನಿಮ್ಮದು.. ಓದುಗರಾಗಿ, ಲೇಖಕರಾಗಿ ನಿಮಗೆ ನಮಗಿಂತ ತುಸು ಜಾಸ್ತಿ ಹಕ್ಕಿದೆ, ಜವಾಬ್ದಾರಿಯೂ ಇದೆ. .. ಸಲಹೆ ಸೂಚನೆಗಳಿಗೆ ಮುಕ್ತವಾಗಿದ್ದೇವೆ.. ನಸುಕು ಬಳಗಕ್ಕೆ ನಿಮ್ಮ ಹಾರೈಕೆಗಳು ಎಂದಿನಂತೆಯೇ ಇರಲಿ…?

…………

ಶುಭ ಹಾರೈಕೆಗಳೊಂದಿಗೆ,

ವಿಜಯ್ ದಾರಿಹೋಕ

ನಸುಕು.ಕಾಮ್ ನಿರ್ವಾಹಕ,ಸಂಪಾದಕ

ಲಾಸ್ಟ್ ಸ್ಕೂಪ್…!

ದಿನೇ ದಿನೇ ಹೊಸ ಓದುಗರು, ಬರಹಗಾರರು. ಇದೇನೂ ಸಾಮಾನ್ಯ ವಿಷಯವಲ್ಲ. ಕನ್ನಡಕ್ಕೆ, ಸಾಹಿತ್ಯಕ್ಕೆ ಪ್ರಸ್ತುತ ಹೊಸ ಪ್ರಯೋಗಗಳ ಅಗತ್ಯ. ನಾವದನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದೇವಷ್ಟೇ.. ಅನಂತಮೂರ್ತಿಗಳು ಒಮ್ಮೆ ಹೇಳಿದ್ದರು.

” ನಾನು ಇವತ್ತು ಏನು ಹೇಳಬೇಕು ಅಂತ ಹೊರಟಿದ್ದೀನಿ ಅಂದ್ರೆ, ಈ ಗಳಿಗೆಯಲ್ಲೂ ನನಗೆ ಐವತ್ತು ವರ್ಷಗಳ ಹಿಂದೆ ಬರೆಯೋದು ಎಷ್ಟು ಕಷ್ಟವಾಗಿತ್ತೊ ಅಷ್ಟೇ ಕಷ್ಟವಾಗಿ ಉಳಿದಿದೆ ಎಂಬುದನ್ನು. ನನಗೆ ಯಾವ ಹೊಸ ಮಾತನ್ನು ಆಡಬೇಕು ಅನ್ನೋದು ಹೊಳಿತಾನೆ ಇಲ್ಲ ಅಥವಾ ಹೊಳೆದರೆ ಅದನ್ನ ಹೇಗೆ ಹೇಳಬೇಕು ಅನ್ನೋದು ಗೊತ್ತಾಗ್ತಾ ಇಲ್ಲ. ನಮ್ಮಲ್ಲಿರುವ ಯುವ ಕವಿಗಳಿಗೆ, ಯುವ ಲೇಖಕರಿಗೆ ನನ್ನ ಸಲಹೆ ಏನಪ್ಪಾ ಅಂದ್ರೆ ಈ ಕಷ್ಟವನ್ನು ಪಡುವ ವ್ಯವಧಾನವನ್ನೂ ನೀವು ಇಟ್ಕೋಬೇಕು. ನೀವು ಗಳಿಸುವ ಯಾವ ಮನ್ನಣೆಯಿಂದಲೂ ಏನೂ ಪ್ರಯೋಜನವಿಲ್ಲ.ಒಳಗಡೆ ಇರುವ ಸತ್ಯಕ್ಕೆ ಎದುರಾಗೋದು ಅದೂ ಭಾಷೆಯಲ್ಲಿ ಎದುರಾಗಿಸೋ ಒಂದು ಸವಾಲು. ಅದೂ ಈ ಕಾಲದಲ್ಲಿ, ತಮಗೆ ಬೇಕಾದ್ದನ್ನೇ ತೋರಿಸಿ ಉಳಿದದ್ದನ್ನ ಮರೆಮಾಚುವ ದೃಶ್ಯ ಮಾಧ್ಯಮ, ಅಬ್ಬರದ ಸೋಶಿಯಲ್ ಮೀಡಿಯಾ ಗಳ ಈ ಮಾಯಾಜಾಲದ ಕಾಲದಲ್ಲಿ, ಮನಸ್ಸಿನಲ್ಲಿ , ನೆನಪಿನಲ್ಲಿ ಉಳಿಯುವಂತೆ ಮಾತುಗಳನ್ನು ಆಡಬಲ್ಲ ಶಕ್ತಿಯನ್ನ ಇನ್ನೂ ನಮ್ಮ ನಾಗರಿಕತೆಯಲ್ಲಿ ಉಳಿಸಿಕೊಳ್ಳುವದು ಒಂದು ದೊಡ್ಡ ಸವಾಲು. –

ಯು.ಆರ್. ಅನಂತಮೂರ್ತಿ