ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸರ್ವಂ ಲಕ್ಷ್ಮೀ ಮಯಂ

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

ಶ್ರಾವಣ ಮಾಸ ಅತ್ಯಂತ ಮಹತ್ವದ ಶುಭದಾಯಕ ಮಾಸ. ಈ ಮಾಸದಲ್ಲಿ ನಿಸರ್ಗವು ಮೈದುಂಬಿಕೊಂಡಿರುವದಲ್ಲದೆ, ಹಬ್ಬ-ಹರಿದಿನಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದು ಇದೇ ಮಾಸದಲ್ಲಿ. ಈ ಹಬ್ಬಗಳು ಪ್ರಕೃತಿಯ ಕುರಿತು ಶ್ರದ್ಧೆ ಹಾಗೂ ಮಾನವೀಯ ಬಾಂಧವ್ಯ ದಂತಹ ಅನೇಕ ನೈತಿಕ ಮೌಲ್ಯಗಳಿಗೆ ಸ್ಫೂರ್ತಿ ಒದಗಿಸುತ್ತದೆ. ಇದಕ್ಕೆ ಇನ್ನಷ್ಟು ಮೆರಗು ನೀಡಲೆನ್ನುವಂತೆ ಕಾಣಿಸಿಕೊಳ್ಳುವ ಕಾಮನಬಿಲ್ಲುಗಳು, ಸುವಾಸನೆ ನೀಡುವ ಹೂಗಳು, ಗಾಳಿ ಮಳೆಗಳು, ನೀರ್ಬುಗ್ಗೆಗಳು ಒಟ್ಟಾಗಿ ಇವೆಲ್ಲವೂ ಶ್ರಾವಣ ಮಾಸಕ್ಕಿದೆ.
ತ್ರಿವೇಣಿ ಸಂಗಮ.
ಶ್ರಾವಣ ಮಾಸದ ಇಡೀ ತಿಂಗಳು ಹಬ್ಬಗಳ ಸಂಭ್ರಮದಲ್ಲಿಯೇ ಮಹಿಳೆಯರು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ಹಬ್ಬದ ಆಚರಣೆಯಲ್ಲಿ ಸಡಗರ,ಸಂತಸ, ಶಾಂತಿ,ತಾಳ್ಮೆಗಳನ್ನು ಹೆಚ್ಚಿಸುತ್ತದೆ. ಉದ್ವಿಗಗೊಂಡ ಮನಸ್ಸು, ದೇವರ ಜ್ಞಾನ, ಭಕ್ತಿ, ಪೂಜೆ, ತನ್ಮಯತೆ, ಶಾಂತಿಗಳತ್ತ ಹರಿಯುತ್ತದೆ. ಹಬ್ಬಗಳು ಭಕ್ತಿ,ಜ್ಞಾನ,ಕರ್ಮಗಳ ತ್ರಿವೇಣಿ ಸಂಗಮ.
ಶ್ರಾವಣ ಮಾಸದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ಬಹುಮುಖ್ಯವಾದದ್ದು. ಈ ವ್ರತವು ಶುಕ್ರವಾರ ದಿನವೇ ಬರುತ್ತದೆ. ಗೃಹಣಿಯರು ತಮಗೆ ಸಕಲ ಸೌಭಾಗ್ಯ ನೀಡಲೆಂದು ಅಧಿದೇವತೆಯಾದ ಶ್ರೀ ವರಮಹಾಲಕ್ಷ್ಮಿ ದೇವಿಯನ್ನು ಪೂಜೆಯ ಮಾಡುವ ದಿನ.


ವರಗಳನ್ನು ಕೊಡುವ ದೇವಿ.
ಶ್ರೀ ವರಮಹಾಲಕ್ಷ್ಮಿ ವ್ರತ ಹೆಸರನ್ನೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮೀದೇವಿಯ ವ್ರತ. ಈ ವ್ರತವು ಐಶ್ವರ್ಯ ಪ್ರದನವಾದದ್ದು. ಮನೆಯಲ್ಲಿ ಲಕ್ಷ್ಮಿಯನ್ನು ಪ್ರತಿನಿತ್ಯ ಪೂಜೆ ಮಾಡಿದರೂ, ವಿಶೇಷವಾಗಿ ವರ್ಷಕ್ಕೆ ಎರಡು ಬಾರಿ ಮಾತ್ರ ಆಚರಿಸುತ್ತಾರೆ. ಶ್ರಾವಣ ಹಾಗೂ ಕಾರ್ತಿಕಮಾಸದಲ್ಲಿ ಶ್ರದ್ಧಾಭಕ್ತಿಯಿಂದ ಮನೆ ಮಂದಿಯಲ್ಲಾ ಕೂಡಿ ಆಚರಿಸುವ ಲಕ್ಷ್ಮಿ ಪೂಜೆಯನ್ನು ನಿರ್ದಿಷ್ಟ ದಿನಗಳಂದು ನಡೆಸುತ್ತಾರೆ.
ವರಮಹಾಲಕ್ಷ್ಮಿ ವ್ರತವನ್ನು ಶ್ರಾವಣಮಾಸದಲ್ಲಿ ಶುಕ್ಲಪಕ್ಷದ ಪೂರ್ಣಿಮಾ ದಿನದ ಹಿಂದಣ ಶುಕ್ರವಾರ ಸಾಮಾನ್ಯವಾಗಿ ಅಂದರೆ ಎರಡನೇ ಅಥವಾ ಮೂರನೇ ಶುಕ್ರವಾರ ವ್ರತವನ್ನು ಆಚರಿಸುತ್ತಾರೆ. ಆದರೂ ಶ್ರಾವಣ ಶುಕ್ಲ ಪಕ್ಷದ ಇತರ ಶುಕ್ರವಾರಗಳಲ್ಲಿಯೂ ವ್ರತವನ್ನು ಆಚರಿಸಬಹುದು.
ದೇವಿ ಮಂತ್ರೋಪಾಸನೆ.
ಮನುಷ್ಯ ತನ್ನ ನಿತ್ಯ ಜೀವನದ ಹೋರಾಟದಲ್ಲಿ ಅನೇಕ ಕೋರಿಕೆಗಳನ್ನು ಸಾಧಿಸಿಕೊಳ್ಳುವ ಉದ್ದೇಶದ ಹಾದಿಯಲ್ಲಿ ಅನೇಕ ಅಡೆ-ತಡೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಇಂಥ ವ್ಯತಿರೇಕ ಪ್ರಭಾವಗಳನ್ನು ದಾಟಿ ಸಾಧನೆ ಮಾಡಲು ಉತ್ತಮ ಹಾಗೂ ಸುಲಭಮಾರ್ಗ ಪೂಜೆ ಮಂತ್ರೋಪಾಸನೆ.
“ಧನು ಮೂಲಂ ಇದಂ ಜಗತ್”ಎಂಬಂತೆ, ದನದ ಮೇಲಿನ ಅವಲಂಬನೆ ಎಲ್ಲರಿಗೂ ಅನಿರ್ವಾಯವಾಗಿದೆ. ಧನಾರ್ಜನೆಗೆ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಅಗತ್ಯ. ಆಕೆಯ ಅನುಗ್ರಹ ಪಡೆಯುವುದು ಅಷ್ಟೇನೂ ಕಷ್ಟದ ವಿಷಯವೇನಿಲ್ಲ. ನಿರ್ಮಲ ಮನಸ್ಸಿನಿಂದ ಆಕೆಯ ಮಂತ್ರ, ಸ್ತೋತ್ರ, ಮೂಲ ಮಂತ್ರಗಳ ಜಪದಿಂದ ಆಕೆಯನ್ನು ಸುಲಭವಾಗಿ ಉಳಿಸಿಕೊಳ್ಳಬಹುದು.
ಲಕ್ಷ್ಮಿಯನ್ನು ಒಲಿಸಿಕೊಳ್ಳಬೇಕಾದರೆ ಲಕ್ಷ್ಮಿಯ ಸ್ವರೂಪ, ಅವತರಣೆ, ಗುಣ ಸ್ವಭಾವ, ಸ್ಥಾನಮಾನ ತಿಳಿಯಬೇಕು. ಪ್ರತಿಯೊಂದು ಹಬ್ಬದ ಆಚರಣೆಯ ಹಿಂದೆ ತನ್ನದೇ ಆದ ಚಾರಿತ್ರಿಕ ಹಿನ್ನೆಲೆಯಿದೆ.ಈ ಹಬ್ಬದ ಹಿನ್ನೆಲೆಯನ್ನು ಅರಿತುಕೊಂಡಾಗಲೇ ಹಬ್ಬಕ್ಕೆ ಮಹತ್ವ ಬರುವುದು.ಅಂತೆಯೇ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯೂ ರೋಚಕವಾದದ್ದು.


ಶ್ರೀ ಮಹಾಲಕ್ಷ್ಮೀಯ ವರ್ಣನೆ.
ಶ್ರೀ ವರಮಹಾಲಕ್ಷ್ಮಿ ದೇವಿ ಎಂದರೆ ಸಂಪತ್ತನ್ನು ಪ್ರಸಾದಿಸುವ ದೇವತೆಯಂದೇ ಅನೇಕರ ನಂಬಿಕೆ. ಶ್ರೀ ಮಹಾಲಕ್ಷ್ಮಿ ದಿವ್ಯರೂಪ ವರ್ಣನೆ ಪ್ರಕಾರ, ಲಕ್ಷ್ಮೀ ಜನನ ಪಾಲ್ಗುಣ ಹುಣ್ಣಿಮೆಯನ್ನು ಜನಿಸಿದ ತಿಥಿಯಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ ಲಕ್ಷ್ಮೀದೇವಿ ಜನನ ದೀಪಾವಳಿ ಪರ್ವದಿನ ಆದುದೆಂದು ಹೇಳುತ್ತಾರೆ. ಶರತ್ಕಾಲದ ಚಂದ್ರಕಾಂತಿ ಯಂಥ ಕಿರುನಗೆ, ಅರಳಿದ ಕಪ್ಪು ನೈದಿಲೆಯಂಥ, ಕಣ್ಣುಗಳು,ಪದ್ಮದಂಥ ಸುಂದರವಾದ ಮುಖ, ಬಂಗಾರ ಹಳದಿ ಬಣ್ಣಗಳ ಮೇಳೈಸಿದಂತೆ ಮೈಧಾಯೆ, ಕಮಲಗಳು,ಆಹಾರಧಾನ್ಯಗಳು ಬಂಗಾರ ತುಂಬಿರುವ ಪಾತ್ರೆಗಳು ಧರಿಸುವ ನಾಲ್ಕು ಕೈಗಳು, ಕೆಂಪು,ಎಲೆ ಹಸಿರು ಪಿತಾಂಬರ, ಅಮೂಲ್ಯವಾದ ಆಭರಣಗಳು ಧರಿಸಿ ಪದ್ಮಾಸನದ ಮೇಲೆ ಕಂಗೊಳಿಸುತ್ತಾ ಹೊಳೆಯುವ ದೇವಿ ಈಕೆ.
ಲಕ್ಷ್ಮಿಯ ನಾಮಗಳು.
‌‌ ಸಕಲ ಸಂಪತ್ತುಗಳನ್ನು ‍‌‌‍‌‌ ನೀಡಿ ಮಾನವರಿಗೆ ಸಂತೋಷಕರ, ಮಂಗಳದಾಯಕ ಜೀವನವನ್ನು ಅನುಗ್ರಹಿಸುವ ಶ್ರೀ ಮಹಾಲಕ್ಷ್ಮಿಗೆ ನಾಮಗಳು ಸಾವಿರಾರು. ಅವು ಶ್ರೀದೇವಿ, ಅಮೃತೋದ್ಬವ,ಕಮಲಾಕ್ಷಿ, ಲೋಕಸುಂದರಿ, ವಿಷ್ಣುಪತ್ನಿ, ಶ್ರೀ ವೈಷ್ಣವೀ,ವರಾಹಿ,ಹರಿವಲ್ಲಭಾ, ನರಸಿಂಹೇ, ದೇವದೇವತಾ, ಮಹಾಲಕ್ಷ್ಮಿ, ಭುವನೇಶ್ವರಿ ಹೀಗೆ ಒಂದೊಂದು ನಾಮದಲ್ಲೂ ದಿವ್ಯಶಕ್ತಿ ಅಡಗಿದೆ. ದಿನನಿತ್ಯ ಈ ನಾಮಗಳನ್ನು ಭಕ್ತಿಯಿಂದ ಪಠಿಸಿದರೆ ಐಶ್ವರ್ಯದೇವತೆ ಶ್ರೀಲಕ್ಷ್ಮಿ ದೇವಿ ಅನುಗ್ರಹದಿಂದ ಸಕಲ ಸೌಭಾಗ್ಯಗಳೂ, ಪ್ರಾಪ್ತವಾಗುತ್ತದೆ ಕಾವ್ಯಗಳಲ್ಲಿ, ಪುರಾಣಗಳಲ್ಲಿ ಕಾಣುವ ಹೆಸರುಗಳು ಪದ್ಮಲಯಾ, ಶ್ರೀಲಕ್ಷ್ಮೀ, ಹರಿಪ್ರಿಯ, ಲೋಕಮಾತಾ, ಮಂಗಳ ದೇವತೆ, ಸಿರಿ, ದ್ರಾಕ್ಷಾಯಿಣೀ, ವಿಷ್ಣುವಲ್ಲಭ, ಆದಿತ್ಯ ವರ್ಣೇ…. ಹೀಗೆ ಒಂದೊಂದು ಹೆಸರಿನಲ್ಲೂ ಭಕ್ತಿ,ಭಾವ, ಚೈತನ್ಯದಿಂದ ತುಂಬಿದೆ. “ಶ್ರೀ”ಎಂಬ ಏಕಾಕ್ಷರವು ಲಕ್ಷ್ಮೀದೇವಿಗೆ ಅಪೂರ್ವ ಹೆಸರು. ಹಾಗೆ ಲಕ್ಷ್ಮಿಯ ಒಂದೊಂದು ಅಷ್ಟೋತ್ತರ ದಲ್ಲಿ ದಿವ್ಯಶಕ್ತಿಯನ್ನು ಹೊಂದಿದ್ದು ಭಕ್ತಿ, ಜ್ಞಾನ, ಐಶ್ವರ್ಯ, ಆರೋಗ್ಯ ಎಲ್ಲವೂ ಲಭಿಸುತ್ತದೆ.
“ಯಾದೇವೀ ಸರ್ವಭೂತೇಷು ಲಕ್ಷ್ಮೀರೂಪೇಣ ಸಂಸ್ಥಿತಾ”ಎಂಬ ಸಪ್ತಶತಿ ಶ್ಲೋಕವಿದೆ. ಭೂತ ಕೋಟಿ ಎಲ್ಲದರಲ್ಲೂ ಲಕ್ಷ್ಮಿ ಇದ್ದರೇನೆ ಚೈತನ್ಯ. ಪ್ರತಿ ಶ್ರೇಷ್ಠ ವಸ್ತುವಿನಲ್ಲೂ ಲಕ್ಷ್ಮಿಯನ್ನು ಕಾಣಬೇಕೆಂದು ನಮ್ಮ ಋಷಿಗಳು ಮೊದಲೇ ಹೇಳಿದ್ದಾರೆ.
ನಾವು ಕೇವಲ ಹಣವನ್ನಷ್ಟೇ “ಲಕ್ಷ್ಮೀ” ಎನ್ನುತ್ತೇವೆ. ಲಕ್ಷ್ಮಿ ಧನ ಸ್ವರೂಪಳೇನೋ ನಿಜ. ಆದರೂ ಅದೇ ಆ ತಾಯಿಯ ರೂಪ ಅಲ್ಲ. ಅನಂತಾನಂತ ವಿಭೂತಿ ಗಳಲ್ಲಿ ಅದು ಒಂದು ಅಂಶವಷ್ಟೇ. ಆಕೆ “ಮೋಕ್ಷ ಲಕ್ಷ್ಮೀ”ಯೂ ಆಗಿದ್ದಾಳೆ.ಈ ಸೃಷ್ಟಿಯಲ್ಲಿ ಉನ್ನತವಾದುದನ್ನು “ಭಗವಂತನ ವಿಭೂತಿ” ಎಂದಿದ್ದಾರೆ. ಆ ವಿಭೂತಿಗಳ ಸಮೈಕ ರೂಪವೇ ಮಾಹಾಲಕ್ಷ್ಮೀ. ಅದಕ್ಕೆ ‘ವಿಭೂತಿ’ ಎಂಬುದು ಲಕ್ಷ್ಮಿ ನಾಮಗಳಲ್ಲಿ ಒಂದು.
ಸರ್ವಂ ಲಕ್ಷ್ಮಿ ಮಯ.
ಲಕ್ಷ್ಮಿ ಐಶ್ವರ್ಯ ದಾಯಿನಿಯಾದ್ದರಿಂದ ಸಂಪತ್ತುಗಳ ಜೊತೆಗೆ ವಿದ್ಯೆ, ಭಕ್ತಿ ,ಪ್ರೀತಿ, ಜ್ಞಾನ ಮುಂತಾದುವುಗಳನ್ನು ಅನುಗ್ರಹಿಸುತ್ತಾಳೆ. ಜಗತ್ತಿನ ಪ್ರತಿಯೊಂದು ವಸ್ತು,ಪ್ರಾಣಿ ಎಲ್ಲದಕ್ಕೂ ಅದರದೇ ಆದ ಗುಣಲಕ್ಷಣಳು ಇರುತ್ತದೆ. ಅದರ ಲಕ್ಷಣವೇ ಐಶ್ವರ್ಯ. ಇಂದ್ರಿಯಗಳಿಗೆ ಆಯಾ ಐಶ್ವರ್ಯಗಳನ್ನು ಕೊಟ್ಟಿದ್ದು ಆತ್ಮ ಚೈತನ್ಯಮಯಯ ಲಕ್ಷ್ಮಿ.ಹಾಗೆ ಭಗವತಿಯ ಅನಂತ ರೂಪಗಳಲ್ಲಿ ಮುಖ್ಯವಾದ ರೂಪಗಳು ಮೂರು. ಮಹಾಕಾಳೀ ಮೊದಲನೆಯದು, ಮಹಾ ಸರಸ್ವತೀ ರೂಪ ಕೊನೆಯದು, ಮಹಾಲಕ್ಷ್ಮಿ ರೂಪ ಎರಡನೆಯದು.ಈ ಮಹಾಲಕ್ಷ್ಮೀಯೇ ಮಹಿಷನೆಂಬ ರಾಕ್ಷಸನನ್ನು ಸಂಹರಿಸಿದ್ದು.
ಲಕ್ಷ್ಮೀರೂಪ.
ಶ್ರೀ ಮಹಾಲಕ್ಷ್ಮಿಯು ಎರಡು ಪ್ರಧಾನ ರೂಪಗಳಲ್ಲಿ ಅಭಿವ್ಯಕ್ತಿಗೊಳ್ಳುವಳು.’ ಶ್ರೀ’ ರೂಪ ಹಾಗೂ ‘ಲಕ್ಷ್ಮಿ’ ರೂಪ. ಇವು ಎರಡಾಗಿಯೂ ಒಂದಾಗಿದೆ, ಒಂದಾಗಿಯೂ ಎರಡಾಗಿದೆ. ಎರಡು ರೂಪಗಳಲ್ಲಿಯೂ ಈಕೆಯು ವಿಷ್ಣು ಭಗವಾನನ ಪತ್ನಿಯಾಗಿದ್ದಳೆ. ಸರ್ವ ಸಂಪತ್ತಿನ ಅಧಿಷ್ಠಾನ ದೇವತೆಯಾದ ಆಕೆಯ ಬಳಿ ಕಾಮ-ಕ್ರೋಧ-ಲೋಭ-ಮೋಹ ಅಹಂಕಾರ ಗಳಂಥ ಗುಣಗಳಾವುವು ಇಲ್ಲದ ತಾಯಿ ಭಗವಂತನ ಪ್ರಾಣ ಸಮಾನಳು. ಪ್ರೀತಿ ಪಾತ್ರಳಾಗಿ, ಪ್ರಿಯವದಳಾಗಿ, ಜಗನ್ನಾಥ ಶ್ರೀಮನ್ನಾರಾಯಣನ ಜೊತೆಯಾಗಿರುವ ತಾಯಿ. ಶ್ರೀ ಇಲ್ಲದ ನಾರಾಯಣನನ್ನು ಕಲ್ಪನೆ ಮಾಡಿ ಕೊಳ್ಳುವುದು ಅಸಾಧ್ಯ ಎಂಬುದು ಶ್ರೀವೈಷ್ಣವರ ಅಭಿಪ್ರಾಯ.
ಲಕ್ಷ್ಮೀ ಅವತಾರಗಳು

ಲಕ್ಷ್ಮೀಯು ಪ್ರತಿ ಅವತಾರದಲ್ಲಿಯೂ ವಿಷ್ಣುವಿನ ಜೊತೆಯಲ್ಲಿಯೇ ಇದ್ದಳು. ಶ್ರೀವಿಷ್ಣುವು ಆದಿತ್ಯ ನಾದಾಗ ಲಕ್ಷ್ಮಿಯು ತಾವರೆಯಿಂದ ಜನಿಸಿ ‘ಪದ್ಮಾ’ ಎಂಬ ಹೆಸರಿನಿಂದ ಪ್ರಖ್ಯಾತಳಾದಳು. ವಿಷ್ಣುವು ಪರಶುರಾಮನಾದಾಗ ಈಕೆಯು ‘ಭೂದೇವಿ’ ಯಾಗಿದ್ದಳು. ಈಕೆಯು ರಾಮನೊಂದಿಗೆ ‘ಸೀತೆಯಾಗಿ’, ಶ್ರೀಕೃಷ್ಣನೊಂದಿಗೆ ‘ರುಕ್ಮಿಣಿಯಾಗಿ’, ವಿಷ್ಣುವು ದೇವರೂಪದಿಂದಿದ್ದಾಗ ಈಕೆಯು ದೇವತೆಯಾಗಿ, ಮನುಷ್ಯನಾದಾಗ ಈಕೆಯು ಮಾನುಷಿ ಯಾಗಿದ್ದಳು.ಭೃಗು ಮಹರ್ಷಿಯವರ ಮಗಳಾದ್ದರಿಂದ ‘ಭಾರ್ಗವಿ’ಯಾಗಿ ಕೆಲವು ಕಾಲ ವ್ಯವಹೃತವಾದಳು. ಹಾಗೆ ಸಮುದ್ರರಾಜನ ತನಯಳಾಗಿ, ಕಲಿಯುಗದಲ್ಲಿ ಶ್ರೀಮನ್ನಾರಾಯಣಾಂಶ ಅವತಾರವಾದ ಶ್ರೀ ವೆಂಕಟೇಶ್ವರನ ಪ್ರಿಯ ಪತ್ನಿಯಾಗಿ (ಅಲಮೇಲುಮಂಗ) ಕಂಗೊಳಿಸಿದ ಅಂಶಾವತಾರ ಗಳು ಶ್ರೀ ಮಹಾಲಕ್ಷ್ಮಿಯೇ. ಈಕೆಯು ಸ್ವರ್ಗದಲ್ಲಿ ಸ್ವರ್ಗ ಲಕ್ಷ್ಮಿ, ರಾಜರ ಮನೆಯಲ್ಲಿ ರಾಜ್ಯಲಕ್ಷ್ಮಿ, ಮನುಷ್ಯರ ನಡುವೆ ಗೃಹಲಕ್ಷ್ಮಿ, ಐಶ್ವರ್ಯ ಬೇಕೆಂದು ಬೇಡಿದವರಿಗೆ ಐಶ್ವರ್ಯ ಲಕ್ಷ್ಮಿ ಯಾಗಿರುವಳು. ಹಾಗೇ ಆ ಮಾತೆಯು ಅಷ್ಟಲಕ್ಷ್ಮಿ ರೂಪದಲ್ಲಿ ಕಾಣಿಸಿಕೊಳ್ಳುವಳು. ಶ್ರೀ ಕೀರ್ತಿ, ಶ್ರದ್ಧಾ,ಸ್ಮತಿ,ಮೇಧ, ಧೃತಿ,ವಿಜಯ, ದಯೇ, ಕರುಣಾ ಇವು ಅಷ್ಟಲಕ್ಷ್ಮಿಯ ಎಂಟು ಅವತಾರಗಳು.
ಸರ್ವವ್ಯಾಪಿಣಿ
ಅಪರೂಪ ತೇಜಸ್ಸಿನಿಂದ ನವರತ್ನ ಖಚಿತ ಆಭರಣಗಳಿಂದ ಸಾಲಂಕೃತ ಹಾಗೂ ಸಂಪತ್ತಿನ ಪ್ರತಿರೂಪವಾದ ಮಹಾಲಕ್ಷ್ಮಿಯ ಕಟಾಕ್ಷ ಎಲ್ಲರಿಗೂ ಬೇಕಾದ ದೇವತೆ. ತ್ರಿಕಾಲಜ್ಞಾನ ಸಂಪನ್ನಳಾದ ಲಕ್ಷ್ಮೀದೇವಿ ಆಶೀರ್ವಾದದ ಬಲದಿಂದ ದಾರಿಧ್ಯ, ರೋಗ, ಹಸಿವು, ಅಪಮೃತ್ಯು, ಭಯ, ಶೋಕ, ಮನೋವ್ಯತಥೆಗಳು ನೀಗಿ, ಗಾಳಿ, ನೀರು, ಬೆಳಕು, ಶಕ್ತಿ, ಬೆಳೆ,ವಿದ್ಯೆ, ಕೀರ್ತಿ, ಸಂಪತ್ತು, ಯಶಸ್ಸು, ಆಯುಷ್ಯ, ಆನಂದ ಕೊಡುವ ಈ ಮಹಾಲಕ್ಷ್ಮಿ ಸತ್ವ, ರಜಸ್ಸು, ತಮಸ್ಸು ಎಂಬ ಮೂರು ಶೇಷ ರೂಪಗಳನ್ನು ಹೊಂದಿದ್ದಾಳೆ. ಹೀಗೆ ಸ್ವಯಂ ಸರ್ವವ್ಯಾಪಿಣಿಯಾದ ಶ್ರೀ ಮಹಾಲಕ್ಷ್ಮಿ ಅವತಾರಗಳನ್ನೆತುತ್ತ, ಶ್ರೀ ಮಹಾವಿಷ್ಣುವಿನ ಶಕ್ತಿಯಾಗಿ ಆತನಿಗಿಂತ ಉದಾರವಾಗಿ ಭಕ್ತರನ್ನು ಅನುಗ್ರಹಿಸುತ್ತಾಳೆ.
ಶ್ರೀಲಕ್ಷ್ಮೀಯ ವಾಸಸ್ಥಾನ.
ಸರ್ವಯಜ್ಞ ಶರೀರನಾದ ಶ್ರೀ ಮಹಾವಿಷ್ಣುವನ್ನು ಪೂಜಿಸುವರ ಮನೆಯಲ್ಲಿ ಲಕ್ಷ್ಮೀ ಸ್ಥಿರವಾಗಿರುತ್ತಾಳೆ. ಹಾಗೇ ಯಾರ ಮನೆಯ ಅಂಗಳದಲ್ಲಿ ರಂಗವಲ್ಲಿ, ಪೂಜೆ ಪೀಠದ ಬಳಿಯಿರುವ ದೀಪ,ಹಿತ್ತಲಿನಲ್ಲಿರುವ ಗೋವು, ಹೊಸ್ತಿಲಿಗೆ ಅರಿಶಿಣ, ಹಣೆಯಲ್ಲಿ ಕುಂಕುಮ, ತುಳಸಿಕಟ್ಟೆ, ಶುಚಿ ಶುಭ್ರತೆ, ಪ್ರತಿಭೆ, ಕ್ರಿಯಾಶೀಲ, ಪ್ರಭಾವಶಾಲಿ, ಸಾಹಸಿ, ಕಷ್ಟಸಹಿಷ್ಣು, ಸತ್ಯವನ್ನಾಡುವ, ಕೊಟ್ಟ ಮಾತಿಗೆ ನಡೆಯುವ, ಸತ್ಯ ಪರಿಪಾಲನೆ, ಯಾರ ಮನೆಯಲ್ಲಿ ಇರುವುದೋ ಅವರ ಮನೆಗೆ ತನಗೆ ತಾನಾಗೇ ಆಕೆ ಬರುತ್ತಾಳೆ.
ಶ್ರೀ ಮಹಾಲಕ್ಷ್ಮಿ ಅನುಗ್ರಹ ಪ್ರಾಪ್ತಿಗಾಗಿ ಪೂಜಾ ವಿಧಾನ.
ಸಿರಿ ಸೌಭಾಗ್ಯ ಸಂಪತ್ತುಗಳ ಅಭಿವೃದ್ಧಿಗೆ ಗೃಹಿಣಿಯರು ದಂಪತಿ ಸಮೇತರಾಗಿ ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ.ಹನ್ನೆರಡು ಗಂಟೆಗಳಿಂದ ಕೂಡಿದ ಲಕ್ಷ್ಮಿ ದಾರವನ್ನು ಬಲ ಹಸ್ತಕ್ಕೆ ಕಟ್ಟಿಕೊಳ್ಳಲಾಗುತ್ತದೆ. ಆಚರಣೆ ಮಾಡುವವರು ಸ್ನಾನ ಮಾಡಿ ಶುಬ್ರ ವಸ್ತ್ರವನ್ನು ಧರಿಸಿ, ಅಹ್ನಿಕಗಳನ್ನುಪೊರೈಸಿ, ಮನೆಯನ್ನು ಸಾರಿಸಿ ರಂಗವಲ್ಲಿಯನ್ನಿಟ್ಟು, ದಿವ್ಯ ಮಂಟಪದಲ್ಲಿ ಪಂಚವರ್ಣಗಳಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಕಳಶವನ್ನು ಇಟ್ಟು ಅದರಲ್ಲಿ ಮಹಾಲಕ್ಷ್ಮಿಯನ್ನು ಆವಾಹಿಸಿ, ಪ್ರಾಣ ಪ್ರತಿಷ್ಠಾಪನೆಯನ್ನು ಮಾಡಿ, ಶ್ರೀ ಸೊಕ್ತವನ್ನು ಪಠಿಸಿ, ಕಲ್ಪೋಕ್ತ ಷೋಡೋಪಚಾರಗಳಿಂದ ಪೂಜೆಯನ್ನು ಸಲ್ಲಿಸಲಾಗುತ್ತದೆ. ನಾನಾವಿಧವಾದ ಭಕ್ಷ್ಯ ಭೋಜನಗಳನ್ನು ದೇವಿಗೆ ಅರ್ಪಿಸಿ, ದಾರಿದ್ರ್ಯವನ್ನು, ರೋಗರುಜಿನಗಳನ್ನೂ ದೂರ ಮಾಡಿ, ಸಂತೋಷವನ್ನು ಸಂಪತ್ತನ್ನೂ ಅನುಗ್ರಹಿಸುವಂತೆ ಪ್ರಾರ್ಥಿಸಲಾಗುತ್ತದೆ.