ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಮಾ ಉಡುಪ
ಇತ್ತೀಚಿನ ಬರಹಗಳು: ರಮಾ ಉಡುಪ (ಎಲ್ಲವನ್ನು ಓದಿ)

ಆತ್ಮೀಯ ಗುರುಗಳಿಗೆ ವಂದನೆ.

ಡಾ.ಜಿ.ಎನ್. ಉಪಾಧ್ಯ

ಮೊದಲನೆಯದಾಗಿ,  ಯಾವುದೇ ಪ್ರಶಸ್ತಿ-ಪುರಸ್ಕಾರಗಳು ಯೋಗ್ಯರಿಗೆ ಸಿಕ್ಕಿದರೆ ಸಂತೋಷ ಮತ್ತು ಸಮಾಧಾನವಾಗುತ್ತದೆ. ನರಹಳ್ಳಿ ಪ್ರಶಸ್ತಿಗೆ ಭಾಜನರಾಗಿರುವ ನಿಮಗೆ ಮನಃಪೂರ್ವಕ ಅಭಿನಂದನೆಗಳು. ಮತ್ತಷ್ಟು ಪ್ರಶಸ್ತಿ ಪುರಸ್ಕಾರಗಳು ನಿಮ್ಮ ಮಡಿಲಿಗೇರಲಿ ಎನ್ನುವುದೇ ಮುಂಬೈ ಕನ್ನಡಿಗರೆಲ್ಲರ ಆಶಯ.

ನಸುಕು ಪತ್ರಿಕೆಯ ಮೊದಲ ಎಸಳು ಕೈಸೇರಿತು. ದೂರವಾಣಿ ಅಥವಾ ಜಂಗಮವಾಣಿಯ ಮೂಲಕ ಅಭಿನಂದನೆ ಸಲ್ಲಿಸುವ ಬದಲು ಪತ್ರಮುಖೇನ ಅಭಿಪ್ರಾಯ  ತಿಳಿಸೋಣ ಅನ್ನಿಸಿತು. ಚಿಕ್ಕಂದಿನಲ್ಲಿ ಸುಧಾ ವಾರಪತ್ರಿಕೆಯ ಬರವನ್ನು ಬಹಳ ಕಾತುರದಿಂದ ನಿರೀಕ್ಷಿಸುತ್ತಿದ್ದೆ. ಪತ್ರಿಕೆ ಒಂದು ದಿನ ಬೇಗ ಕೈ ಸೇರಿದರೆ ಮತ್ತಷ್ಟು ಖುಷಿ. ಪತ್ರಿಕೆ ಸಿಕ್ಕಿದ ಮೇಲೆ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದಿ ಮುಗಿಸಿದ  ನಂತರವೇ ಬೇರೆಯವರಿಗೆ ಕೊಡುತ್ತಿದ್ದೆ. ನಸುಕು ಪತ್ರಿಕೆ ಕೂಡ ಮೂವತ್ತೊಂದರ ಬದಲು ಒಂದುದಿನ ಮುಂಚಿತವಾಗಿಯೇ ಜಂಗಮವಾಣಿಯಲ್ಲಿ ಬಂದು ಸೇರಿದಾಗ ಆಶ್ಚರ್ಯ ಸಂತೋಷ ಎರಡೂ ಆಯ್ತು. ಅಂದೇ ರಾತ್ರಿ ಎರಡು ಗಂಟೆಯವರೆಗೂ ಕುಳಿತು ಓದಿ ಮುಗಿಸಿದೆ.

ಎಸಳು ತೆರೆದು ನೋಡಿದರೆ ಭರ್ಜರಿ 97 ಪುಟಗಳು ,16 ಲೇಖನಗಳು.  ಆಹಾ !ಏನುಂಟು ಏನಿಲ್ಲ. ಕಥೆ-ಕವನ ,ಸಂದರ್ಶನ, ವ್ಯಕ್ತಿಚಿತ್ರಣ ,ಅನುಭವ ,ಹಾಸ್ಯ ವೈಚಾರಿಕ ಲೇಖನ , ಮಾತಾಡುವ ರೇಖೆಗಳು ಇವೆಲ್ಲಕ್ಕೂ ಕಳಶವಿಟ್ಟಂತೆ ಮುಂಬೈ ಯ ಇತಿಹಾಸ, ಸಂಸ್ಕೃತಿ ,ಸಾಹಿತ್ಯ, ಜನಜೀವನವನ್ನು ಬಣ್ಣಿಸುವ ಸುದೀರ್ಘ ಸಂಪಾದಕೀಯ– ಗೌರವ ಸಂಪಾದಕರಿಂದ . ನಸುಕು ಪತ್ರಿಕೆ ಮುಂಬೈ ಲೇಖಕರಿಗಾಗಿಯೇ ಸಂಚಿಕೆ ಹೊರತಂದದ್ದು ಮುಂಬೈ ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಮುಂಬೈ ಕನ್ನಡಿಗರಿಂದ ಹದಿನೈದು ಇಪ್ಪತ್ತು ಲೇಖನಗಳನ್ನು ನಿರೀಕ್ಷಿಸಿದ್ದ ವಿಜಯ್ ಅವರಿಗೆ ಒಟ್ಟು 85 ಲೇಖನಗಳನ್ನು ನೋಡಿ ಆಶ್ಚರ್ಯವಾಗಿದ್ದರಲ್ಲಿ ಏನೂ ವಿಶೇಷ ವಿಲ್ಲ. ಲೇಖನಗಳನ್ನು ಬರೆದಿರುವ ಬಹುತೇಕ ಲೇಖಕರು ನೀವು ನೀಡಿದ ಪ್ರೋತ್ಸಾಹ ,ಉತ್ತೇಜನ, ಹುರಿದುಂಬಿಕೆ ಯಿಂದ ಬರಹಗಾರರಾಗಿರುವವರು. ನಿರಂತರ ಪ್ರೋತ್ಸಾಹದಿಂದ ಮುಂಬೈ ಸಾಹಿತ್ಯ ಜಗತ್ತನ್ನು ವಿಸ್ತರಿಸುತ್ತಿರುವ ನಿಮಗೆ ನಮೋ ನಮಃ.

ಮೊದಲ ಎಸಳಿಗೆ ಭಾರತದ ಹೆಬ್ಬಾಗಿಲು ಎನ್ನುವ ಹೆಸರು ತುಂಬಾ ಸೂಕ್ತವಾಗಿದೆ. ಮುಂಬೈ ಬಹಳ ವಿಶಿಷ್ಟವಾದ ನಗರ. ಈಗ ಕರೋನಾದಿಂದಾಗಿ ಬಲವಂತದಿಂದ ಸ್ತಬ್ಧವಾಗ ಬೇಕಾದ ಪರಿಸ್ಥಿತಿ ಒದಗಿದೆಯಾದರೂ ಮುಂದೆ ಖಂಡಿತ ಸಮಯ ಬದಲಾದ ಕೂಡಲೇ ತನ್ನ ಮೊದಲಿನ ನಿರಂತರ ಚಟುವಟಿಕೆಗೆ ಜಗ್ಗಿ ಹಾರಿಯೇ  ಹಾರುತ್ತದೆ. ಮುಂಬೈ ನಗರಕ್ಕೆ ಎರಡು ಮುಖ. ಒಂದು ಸೌಮ್ಯ ಮತ್ತೊಂದು ಕರಾಳ. ಸೌಮ್ಯ ಮುಖವನ್ನು ಅರಸುತ್ತಾ ಹೋದಾಗ  ಈ ನಗರ ತೆರೆದಿಡುವ ಅದ್ಭುತ ಲೋಕ ಬಹಳಷ್ಟು ಕಥೆಯನ್ನು ಹೇಳುತ್ತದೆ. ಮೊದಲ ಬಾರಿಗೆ ಈ  ಪುರಪ್ರವೇಶ ಮಾಡಿದಾಗ ನಳಿನಾ ರವರಿಗೆ ಬಹಳ ನಿರಾಸೆ ಯಾಗಿದ್ದರೂ ಕ್ರಮೇಣ ಇಲ್ಲಿಯ ಜೀವನಶೈಲಿ, ಸಮುದ್ರತೀರ ,ಗಣಪತಿ ಬಪ್ಪ, ವಡಾಪಾವ್, ಚೌಪಾಟಿಯ ಜನ ಜಂಗುಳಿ,  ಬೆಳಗಿನ ಐದು ಗಂಟೆಗೆ ನಗುಮುಖದಿಂದ ಮೀನಿನ ಬುಟ್ಟಿ ಹಿಡಿದು ಲೋಕಲ್ ಏರುವ ಮೌಶಿ ಇವರೆಲ್ಲರೂ ಮುಂಬೈಯ ಅಂತರಂಗದಲ್ಲಿ ಅಡಗಿರುವ ಅಧ್ಯಾತ್ಮವನ್ನು ತೋರಿಸುತ್ತಿರುವುದು ನಿಜ. ಇನ್ನು ಮುಂಬೈ ಮಳೆ—ಅನುಭವಿಸಿದವರಿಗೇ ಗೊತ್ತು. ಮಂಗಳೂರು, ಮುಂಬೈ ಎರಡೂ ಕರಾವಳಿ ಪ್ರದೇಶವೇ ಆದರೂ ಎರಡೂ ಕಡೆಯಲ್ಲಿ ಮಳೆ ನೀಡುವ ಅನುಭವ ದಲ್ಲಿ ಬಹಳ ಅಂತರವಿದೆ. ಈ ಅನುಭವವನ್ನು ಅನಿತಾ ರವರು ಸುಂದರವಾಗಿ ವರ್ಣಿಸಿದ್ದಾರೆ. ಇನ್ನು ಮುಂಬೈಯ ಪ್ರತಿಯೊಂದು ಚಟುವಟಿಕೆಯಲ್ಲಿಯೂ ಧನಾತ್ಮಕತೆಯನ್ನೇ ಕಾಣುವ, ಇಲ್ಲಿಯ ಕಣಕಣವನ್ನೂ ಪ್ರೀತಿಸುವ ಜಯಂತ್ ರವರ ಸಂದರ್ಶನವನ್ನು ಈ ಸಂಚಿಕೆಯಲ್ಲಿ ಸೇರಿಸಿರುವುದು ಮುಂಬೈ ನಗರಕ್ಕೆ ಮುಂಬೈ ಕನ್ನಡಿಗರು ನೀಡಿರುವ ಗೌರವ. ಎಲಿಫೆಂಟಾ ಅಥವಾ ಘಾರಾಪುರ ಎಂದು ಪ್ರಸಿದ್ದವಾಗಿರುವ ಈ ತಾಣ ವನ್ನು ನಮ್ಮ ಕರ್ನಾಟಕ ದ ರಾಜಮನೆತನದ ರಾಷ್ಟ್ರಕೂಟರು ನಿರ್ಮಿಸಿದರು ಎನ್ನುವುದು ನಮಗೆಲ್ಲಾ ಅಭಿಮಾನದ ಸಂಗತಿ. ಲತಾ ಸಂತೋಷ್ ಶೆಟ್ಟಿಯವರು ಈ ಗುಹೆಗಳನ್ನು ಚೆನ್ನಾಗಿ ಪರಿಚಯಿಸಿದ್ದಾರೆ.

‘ಮಹದಾಸೆ ಮಮಕಾರ ಮಾತ್ಸರ್ಯ ವನು ಅಳಿಸಿ–ಮುನ್ನಡೆಸು ದೇವಾ’ಎನ್ನುವ ಕುರ್ಕಾಲರ ಕಳಕಳಿಯ ಪ್ರಾರ್ಥನೆ ಈ ಕರೋನಾ ಕಾಲದಲ್ಲಿ ಮನಸ್ಸಿಗೆ ಹಿತವೆನಿಸುತ್ತದೆ. ಅವರ ಮುತ್ತಿನಂತಹ ಅಕ್ಷರಗಳನ್ನು ಕಂಡಾಗ ಅವರ ಸೌಮ್ಯ ನಗುಮುಖ ಕಣ್ಣ ಮುಂದೆ ಬರುತ್ತದೆ. ಮುಂಬೈಯ ಹಿರಿಯ ಲೇಖಕರನ್ನು ಸ್ಮರಿಸಿ ಅವರ ಕವಿತೆಯನ್ನು ಈ ಸಂಚಿಕೆಯಲ್ಲಿ ಪ್ರಕಟಿಸುವುದಕ್ಕೆ ನೀವು ಅಭಿನಂದನಾರ್ಹರು. ಇಂದಿನ ಕರಾಳ ಪರಿಸ್ಥಿತಿಯಲ್ಲಿ ಜೀವನ ನಡೆಸಲು ಸೆಣಸುತ್ತಿರುವ ಸಾವಿರಾರು ಮಂದಿಗೆ ಸಾಂತ್ವನ ನೀಡಲು, ರುದ್ರಾ ರವರು ನೀಡಿರುವ ಸರಳ ಸಲಹೆಗಳನ್ನು ಪಾಲಿಸಿದರೆ ನಮ್ಮ ಸುತ್ತಮುತ್ತಲಿನವರ ಸ್ಥಿತಿ ಬದಲಾದೀತು. ಎಲ್ಲರೂ ಗೋಡೆಯ ಮೇಲೆ ಒಂದು ಕಾಫಿ ಇಡೋಣವೇ?

ರಾಮಾಯಣ, ಮಹಾಭಾರತ ನಮ್ಮ ಜೀವನದ ಅವಿಭಾಜ್ಯ ಅಂಗ. ಚಿಕ್ಕಂದಿನಿಂದಲೂ ಈ ಕಥೆಗಳನ್ನು ಕೇಳಿ ಬೆಳೆದಿರುವ ನಾವುಗಳು ಅಲ್ಲಿಯ ಪ್ರತಿಯೊಂದು ಘಟನೆಯನ್ನೂ ಓದಿ ಆನಂದಿಸಿದ್ದೇವೆಯೇ ಹೊರತು ಎಂದೂ ಪ್ರಶ್ನಿಸುವ ಗೋಜಿಗೇ ಹೋಗಿರಲಿಲ್ಲ. ‘ಮಿಥಕ’ಪದವನ್ನು ಮೊದಲ ಬಾರಿಗೆ ಕೇಳಿದೆನಾದರೂ ಅದು ‘ಮಿತ್’ ಪದದ ಸಂವಾದಿ ಹಾಗೂ ಮಿಥಕ ಮತ್ತು ಪವಾಡದ ವ್ಯತ್ಯಾಸವನ್ನು ಉಮಾ ಅವರು ಚೆನ್ನಾಗಿ ಸ್ಪಷ್ಟ ಪಡಿಸಿದ್ದಾರೆ. ಅವರು ಪ್ರಸ್ತುತಪಡಿಸಿರುವ ಬಹಳಷ್ಟು ಮಿಥಕಗಳು ಮೊದಲೇ ತಿಳಿದಿದ್ದರೂ ಮತ್ತೊಮ್ಮೆ ಓದಲು ಖುಷಿಯೆನಿಸಿತು ಮತ್ತು ಇನ್ನಷ್ಟು ಇರಬೇಕಿತ್ತು ಎಂದೂ ಅನಿಸಿತು.

ಕದ್ರಿಯ ತಾವರೆಕೆರೆಯಲ್ಲಿ ಬಿದ್ದ ಕಾರು, ಕಾರಿನ ಮೇಲೆ ನಿಂತ ಅಜ್ಜ, ಅವರ ಮಗ, ಕಾರಿನೊಳಗೆ ಸಿಲುಕಿಕೊಂಡ ಅಜ್ಜಿ, ಅಬ್ಬಾ! ಆ ಚಿತ್ರ ನೆನೆಸಿಕೊಂಡೇ ಮೈ

ಜುಂ ಎಂದಿತು. ಅಂತೂ ಕಾರಿನಿಂದ ಹೊರಬಂದು, ಈಜಿಕೊಂಡು ದಡ ಸೇರಿದ ಅಜ್ಜಿ ಇಂದಿಗೂ ಆರೋಗ್ಯಕರವಾಗಿ ಇರುವುದು ಕೇಳಿ ತುಂಬಾ ಖುಷಿಯಾಯಿತು. ಪ್ರತಿಭಾರವರ ಅಜ್ಜಿಯ ಕಥೆ, ಒಂದು ಕುಟುಂಬ ಪೀಳಿಗೆ, ಪೀಳಿಗೆಗಳ ತನಕ ಹೇಳುವಂತ‌ಹ ಅವಿಸ್ಮರಣೀಯ ಘಟನೆ. ಶಾಂತಲಾ ರವರ ಗೆಳತಿಯ ತಂದೆ ವಂಶವೃಕ್ಷ ಕಾದಂಬರಿ ಇಂದ ಪ್ರೇರಿತರಾಗಿ ಮಗಳ ಮರು ಮದುವೆ ಮಾಡಿದ ವಿಷಯ ತಿಳಿದು ಸಂತೋಷವಾಯಿತು. ಅಂಥವರ ಸಂತತಿ ಸಾವಿರವಾಗಲಿ.

ಯೂಟ್ಯೂಬ್ನಲ್ಲಿ ತುಂಬಿತುಳುಕುತ್ತಿರುವ ಪದ್ಮಭೂಷಣ ಡಾ.ಬಿ.ಎಮ್. ಹೆಗ್ಡೆಯವರ ಆರೋಗ್ಯದ ಬಗೆಗಿನ ಸಲಹೆ, ಸಾಂತ್ವನದ ಮಾತುಗಳನ್ನು ಭಾರತದಾದ್ಯಂತ ಸಾವಿರಾರು ಜನರು ಆಸಕ್ತಿಯಿಂದ ಕೇಳಿ ಅವರ ಮಾತುಗಳನ್ನು ಪಾಲಿಸುತ್ತಾರೆ. ಎಲ್ಲರನ್ನೂ ಪ್ರೀತಿಸಿ, ಯಾವಾಗಲೂ ಖುಷಿಯಾಗಿರಿ ಎಂದು ಅಭಯ ನೀಡುವ ಬೆಳ್ಳಿ ಮೋನಪ್ಪ ಹೆಗ್ಗಡೆಯವರು ಕನ್ನಡಿಗರು ಎನ್ನುವುದೇ ನಮಗೆಲ್ಲಾ ಹೆಮ್ಮೆಯ ಸಂಗತಿ. ಅವರ ಜೀವನ ಚರಿತ್ರೆಯ ಬಗ್ಗೆ ಈಗಾಗಲೇ ಕೃತಿ ರಚಿಸಿರುವ ಕಲಾ ಅವರು ಅವರ ವ್ಯಕ್ತಿ ಚಿತ್ರಣವನ್ನು ಬಹಳ ಸುಂದರವಾಗಿ ಮಾಡಿದ್ದಾರೆ.

ಸ್ವಾತಂತ್ರ್ಯಪೂರ್ವದಲ್ಲಿ ಧರ್ಮ ಪ್ರಚಾರಕ್ಕೆಂದು ಭಾರತಕ್ಕೆ ಬಂದ ಬಾಸೆಲ್ ಮಿಷನ್ ಅವರು ಇಲ್ಲಿಯ ಭಾಷೆಯನ್ನು ಕಲಿತು, ಇಲ್ಲಿಯ ಜನಜೀವನ, ಸಾಹಿತ್ಯದಲ್ಲಿ ಆಸಕ್ತಿ ತೋರಿ ಭಾಷಾ ನಿಘಂಟುಗಳನ್ನು ರಚಿಸಿ ಮಾಡಿರುವ ಅನೇಕ ಶ್ಲಾಘನೀಯ ಕೆಲಸಗಳನ್ನು ಜತ್ತನ್ ರವರು ನಮ್ಮ ಮುಂದೆ ತೆರೆದಿಟ್ಟಿದ್ದಾರೆ. ಜತ್ತನ್ ರವರ ಸಂಶೋಧನೆ ಅಭಿನಂದನಾರ್ಹ.

ನಸುಗಪ್ಪು ಬಣ್ಣದ ಹೆಂಡತಿಗೆ ಹಳದಿ ಬಣ್ಣದ ಸೀರೆ ಒಪ್ಪುವುದಿಲ್ಲ ವೆಂಬ ತಾಯಿಯ ಅಭಿಪ್ರಾಯವನ್ನು ಹುಸಿ ಗೊಳಿಸಲು ಹೆಂಡತಿಯ ಹುಟ್ಟಿದ ಹಬ್ಬ ದಂದು ಹಳದಿ ಸೀರೆಯನ್ನು ಉಡುಗೊರೆ ತರುವ ಅಮಿತಾ ರವರ ಕಥೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ದಪ್ಪ ಮೂಗು, ಸಣ್ಣ ಮೂಗು, ಉದ್ದ ಮೂಗು, ಗಿಣಿ ಮೂಗು, ಚಪ್ಪಟೆ ಮೂಗು ಎಲ್ಲವೂ ಈಗ ಕರೋನಾದಿಂದಾಗಿ ಅವಗುಂಠನದಿಂದ ಮುಚ್ಚಬೇಕಾಗಿ ಬಂದಿದೆ. ಅಷ್ಟೇ ಅಲ್ಲದೆ ಅದರ ಬಗ್ಗೆ ಸುಂದರವಾದ ಕಾಮೆಂಟ್ಗಳನ್ನು ಹೊರಡಿಸುತ್ತಿದ್ದ ಹೆಂಗಳೆಯರ ಬಾಯಿಯೂ ಮುಚ್ಚಿ ಹೋಗಿದೆ. ಆದಷ್ಟು ಬೇಗ ಎಲ್ಲರ ಮೂಗನ್ನೂ ನೋಡುವಂತಾಗಲಿ ಎನ್ನುವುದೇ ನಮ್ಮೆಲ್ಲರ ಪ್ರಾರ್ಥನೆ. ಲಲಿತ ಅಂಗಡಿಯವರ ಮೂಗಿನ ವಿಶ್ಲೇಷಣೆ ಗೆ ಅವರ ಪ್ರಾದೇಶಿಕ ಭಾಷೆ ಹೊಸ ಮೆರಗನ್ನು ನೀಡಿದೆ. ಅಂತರ ಮತ್ತು ಅಪಾರ್ಥದ ಕವಿತೆಗಳನ್ನು ಓದಿದೆ. ಆದರೆ ಕವಿತೆಗಳನ್ನು ವಿಮರ್ಶಿಸುವ ಸಾಮರ್ಥ್ಯ ನನಗಿಲ್ಲ ಎನ್ನುವ ವಿಷಯ ನಿಮಗೂ ಗೊತ್ತು. ಜಯ ಸಾಲ್ಯಾನ್ ರವರ ರೇಖೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಎತ್ತಿತೋರಿಸುತ್ತದೆ. ಅವರ ಬೆರಳುಗಳ ಕುಶಲತೆಯನ್ನು ಹೊಗಳಿದಷ್ಟು ಮುಗಿಯದು.

ಮುಂದಿನ ಎಸಳುಗಳನ್ನು ಕಾತುರದಿಂದ ನಿರೀಕ್ಷಿಸುತ್ತಿದ್ದೇನೆ. ಉತ್ತಮ ಲೇಖನಗಳನ್ನು ನೀಡಿರುವ ಎಲ್ಲಾ ಲೇಖಕರಿಗೂ ಅಭಿನಂದನೆಗಳು. ಈ ಬೃಹತ್ ಸಂಚಿಕೆಯ ಹಿಂದೆ  ಶ್ರಮವಹಿಸಿರುವ ನಿಮಗೆ ಶಿರಬಾಗಿ ನಮಿಸುತ್ತೇನೆ.

ಇಂತೀ ನಿಮ್ಮ ವಿಶ್ವಾಸಿ,

ರಮಾ ಉಡುಪ

ಕಳೆದ ನಾಲ್ಕು ದಶಕಗಳಿಂದ ಮುಂಬೈ ಯಲ್ಲಿ ನೆಲೆಸಿರುವ ರಮಾ ಅವರು ಮೂಲತಃ ವಿಜ್ಞಾನ ದ ವಿದ್ಯಾರ್ಥಿ. ಮೂವತ್ತೆರಡು ವರ್ಷ ಶಿಕ್ಷಕಿ ಯಾಗಿ ದುಡಿದ ಇವರು ನಿವೃತ್ತರಾದ ನಂತರ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಎಂ.ಎ ಮತ್ತು ಪಿಎಚ್ಡಿ ಪದವಿಯನ್ನು ಪಡೆದಿದ್ದಾರೆ.