ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಎಲ್ಲ ಕಾಲಕ್ಕೂ ಸಲ್ಲುವ ಶಿವರಾಮ ಕಾರಂತರು

ರಮಾ ಉಡುಪ
ಇತ್ತೀಚಿನ ಬರಹಗಳು: ರಮಾ ಉಡುಪ (ಎಲ್ಲವನ್ನು ಓದಿ)

ಕಳೆದ ಶತಮಾನದಲ್ಲಿ ಕಾರಂತರು ಹುಟ್ಟಿ ಬೆಳೆದ ಪರಿಸರಕ್ಕೂ, ಇಂದಿನ ಪರಿಸರಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಇಂದು ಜಾಗತೀಕರಣ, ನಗರೀಕರಣ, ಆಧುನೀಕರಣದ ಭರದಲ್ಲಿ ನಮ್ಮ ದೇಶದಲ್ಲಿ ಬದಲಾವಣೆಗಳು ಕಂಡು ಬಂದಿದೆ. ತಂತ್ರ ಜ್ಞಾನದ ಬಳಕೆಯಿಂದಾಗಿ ಮನುಷ್ಯ ಜೀವನ ಸುಧಾರಿಸಿದೆ. ಆದರೆ ಕಾರಂತರು ತಮ್ಮ ಜೀವಿತ ಕಾಲದ ಅಂತ್ಯದಲ್ಲಿಯೇ
ಗಮನಿಸಿದ್ದ ಮನುಷ್ಯನ ಅಪ್ರಮಾಣಿಕತೆ, ಸ್ವಾರ್ಥಪರತೆ, ನಯವಂಚಕತನ ಈಗ ಇನ್ನೂ ವರ್ಧಿಸಿದೆ. ಧನ ಸಂಪಾದನೆ ಮತ್ತು ಲೋಲುಪ ಜೀವನವೇ ಇಂದು ಮನುಷ್ಯನ ಮುಖ್ಯ ಗುರಿಯಾಗಿದೆ.
ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲಿಯೇ ಗಾಂಧೀಜಿಯವರ ಅಸಹಾಯ ಚಳುವಳಿಯ ಕರೆಗೆ ಓ ಗೊಟ್ಟು ಕಾಲೇಜು ಬಿಟ್ಟು, ಜೀವನದಿಂದಲೇ ಪಾಠ ಕಲಿತವರು ಕಾರಂತರು.

ಆದರೆ ಇಂದು ಮಕ್ಕಳು ಹುಟ್ಟುವ ಮೊದಲೇ ಅವರ ಪಾಲಕರು ತಮ್ಮ ಮಕ್ಕಳ
ಭವಿಷ್ಯ ನಿರ್ಧರಿಸಿ ಬಿಡುತ್ತಾರೆ. ಮಗ ಅಥವಾ ಮಗಳು ಡಾಕ್ಟರ್ ಅಥವಾ ಇಂಜಿನಿಯರ್ ಓದಿ ಮುಂದೆ ಪರದೇಶಕ್ಕೆ ಹೋಗಿ ಡಾಲರ್‍ನಲ್ಲಿ ಸಂಪಾದಿಸ ಬೇಕು ಎನ್ನುವುದೇ ಹೆಚ್ಚಿನ ಪಾಲಕರ ಆಕಾಂಕ್ಷೆಯಾಗಿದೆ. ಅದಕ್ಕೆ ಸರಿಯಾಗಿ ಮಕ್ಕಳು ಚಿಕ್ಕಂದಿನಿಂದಲೇ ಉರು ಹೊಡೆಯುವ ಯಂತ್ರಗಳಾಗಿ ಮಾರ್ಪಾಡಾಗುತ್ತಾರೆ. ಆದರೆ ತಾವು ನಡೆಯುವ ಹಾದಿಯಲ್ಲಿ ಏನಾದರೂ ಸೋಲು ಅನುಭವಿಸಿದರೆ ತಕ್ಷಣವೇ ಹತಾಶರಾಗುತ್ತಾರೆ.

ಡಿಪ್ರೆಶನ್, ಸೂಯಿಸೈಡ್ ನಂತಹ ಪದಗಳು ಇಂದು ಸರ್ವವ್ಯಾಪಿಯಾಗಿವೆ. ಇಂದಿನ ಮಕ್ಕಳು, ತರುಣರು ಸೋಲನ್ನು ಎದುರಿಸಲು ಅಸಮರ್ಥರಾಗಿದ್ದಾರೆ. ಕಾರಂತರು ತಾವು ತೊಡಗಿಸಿಕೊಂಡ ಕಾರ್ಯಗಳಲ್ಲಿ ಗೆದ್ದಷ್ಟೇ ಸೋಲನ್ನೂ ಅನುಭವಿಸಿದ್ದಾರೆ. ಸೋತವನಿಗೆ ತಿರುತಿರುಗಿ ಕೆಲಸ ಮಾಡಲು ಅವಕಾಶವಿದೆ ಎಂದವರು ಕಾರಂತರು. ಸೋಲು ದೊರಕಿಸಿದ ಅನುಭವವನ್ನು ಅವರು ತಮ್ಮ ಮುಂದಿನ ಕಾರ್ಯಗಳಿಗೆ ಉಪಯೋಗಿಸಿಕೊಂಡರು. ಅಂತಹ ಮನೋದಾಢ್ರ್ಯ ಇಂದಿನ ಯುವ ಜನತೆಗೆ ಇದೆಯೇ?
ಕಾರಂತರು ನಿಸರ್ಗ ಪ್ರಿಯರು. ಚಿಕ್ಕಂದಿನಿಂದಲೇ ಪ್ರಕೃತಿಯ ಸೂಕ್ಷ್ಮ ಸೌಂದರ್ಯವನ್ನು ಸವಿಯಲು ಕಲಿತವರು. ನಿಸರ್ಗ ಜಡವಲ್ಲ ಅದು ಚೈತನ್ಯಮಯ ಎಂಬ ಸಂವೇದನೆ ಹೊಂದಿದವರು. ಕಲ್ಲು ದೇವರಲ್ಲಿ ನಂಬಿಕೆ ಇರದ ಕಾರಂತರು ಚೈತನ್ಯಮಯವಾದ ನಿಸರ್ಗದ ವಿಭಿನ್ನ ರೂಪಗಳನ್ನು ಅರಸುತ್ತಾ ದೇಶ ವಿದೇಶಗಳನ್ನು ಸಂಚರಿಸಿದವರು. ಇಂದಿನ ಭಾರತದಲ್ಲಿಯೂ ಮನುಷ್ಯರ ಲೋಕ ಸಂಚಾರ ಮೊದಲಿಗಿಂತ ಬಹಳಷ್ಟು ಪಟ್ಟು ಹೆಚ್ಚಾಗಿದೆ.


ಅದಕ್ಕೆ ಬೇಕಾದ ಎಲ್ಲಾ ರೀತಿಯ ವಾಹನ ಸೌಲಭ್ಯಗಳೂ ಇಂದು ಉಪಲಭ್ಧವಾಗಿದೆ. ಆದರೆ ಈಗ ಲೋಕ ಸಂಚಾರ ಮಾನವನಿಗೆ ಪ್ರತಿಷ್ಟೆಯ ಕುರುಹಾಗಿದೆ. ತಾವು ಏನು ನೋಡಿದೆವು, ಏನು ಕಲಿತೆವು ಎನ್ನುವುದಕ್ಕಿಂತ, ತಾವು ಎಷ್ಟು ದೇಶಗಳಿಗೆ ಭೇಟಿ ಇತ್ತೆವು ಎಂದು ಹೇಳಿ ಕೊಳ್ಳುವುದು ಮಹತ್ವ ಪಡೆಯುತ್ತದೆ. ಇಂದು ನೀಲಾಕಾಶ,ಭೋರ್ಗರೆಯುವ ಸಮುದ್ರ, ಹಸಿರು ವನರಾಶಿಯನ್ನು ಕಂಡು ಆನಂದಿಸುವುದಕ್ಕಿಂತ ತಮ್ಮ ‘ಅಮೂಲ್ಯ’ವಾದ ಮೊಬೈಲ್ನಲ್ಲಿ ಮುಳುಗಿರುವ ಯುವ ಜನತೆ ಎಲ್ಲೆಡೆ ಕಾಣ ಸಿಗುತ್ತಾರೆ. ಎಲ್ಲರಿಗೂ ಈಗ ಸುಲಭವಾಗಿ ದೊರೆಯುತ್ತಿರುವ ಯಂತ್ರ ಸಾಮಗ್ರಿಗಳಿಂದಾಗಿ ಮಾನವ ನಿಸರ್ಗದಿಂದ ದೂರ
ಸರಿಯುತ್ತಿದ್ದಾನೆಯೇ?

ಕಾರಂತರು ತಮ್ಮ ಶಾಲಾ ದಿನದಲ್ಲಿ ಯಾವುದೇ ವಿಷಯದಲ್ಲಿಯೂ ಅಂತಹ
ಆಸಕ್ತಿಯನ್ನು ಹೊಂದಿರಲಿಲ್ಲ. ಅದನ್ನು ‘ಶುಕ ಶಿಕ್ಷಣ’ ಎಂದು ಪರಿಭಾವಿಸಿದ್ದ ಕಾರಂತರು ನಂತರ ಜೀವನ ಪಾಠಶಾಲೆಯಲ್ಲಿ ತಮಗೆ ಆಸಕ್ತಿ ಹುಟ್ಟಿಸಿದ್ದ ಹಲವಾರು ವಿಷಯಗಳನ್ನು ಆಳವಾಗಿ ಅಭ್ಯಸಿಸಿದ್ದರು. ಅವರಲ್ಲಿದ್ದ ಕುತೂಹಲವೇ ಅದಕ್ಕೆ ಮೂಲ ಕಾರಣ. ತಮ್ಮ ಇಳಿ ವಯಸ್ಸಿನಲ್ಲಿಯೂ ಜ್ಞಾನಾರ್ಜನೆಗಾಗಿ ದೇಶ ವಿದೇಶಗಳಿಂದ ಪತ್ರಿಕೆಗಳನ್ನು ತರಿಸಿಕೊಂಡು ಓದುತ್ತಿದ್ದರು. ಆದರೆ ಇಂದು ಗ್ರಂಥಾಲಯಕ್ಕೆ ಕಾಲಿಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದೆ. ಗ್ರಂಥಾಲಯದ ಪುಸ್ತಕಗಳು ಧೂಳಿನಲ್ಲಿ ಉಸಿರಾಡುತ್ತಿವೆ. ಈಗಿನ ಜನತೆಗೆ ಯಾವುದೇ ವಿಷಯದಲ್ಲಿ ಅಪಾರವಾದ ಜ್ಞಾನವನ್ನು ಒದಗಿಸಲು ‘ಗೂಗಲ್’ ಸದಾ ಸಿದ್ಧವಾಗಿದೆ. ಪುಸ್ತಕಗಳನ್ನು ಅರಸುತ್ತಾ ಹೋಗುವ ಪರಿಶ್ರಮಕ್ಕಿಂತ ಸುಲಭವಾಗಿ ಮಾಹಿತಿ ಒದಗಿಸುವ ಗೂಗಲ್ ಸ್ವಾಭಾವಿಕವಾಗಿಯೇ ಎಲ್ಲರ ಮನ ಸೆಳೆಯುತ್ತದೆ. ಆದರೆ ಅದರಿಂದ
ಜನರಿಗೆ ದೊರಕುವ ಮಾಹಿತಿಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ?
‘ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದ್ದುದಕ್ಕಿಂತ ಒಂದಿಷ್ಟು ಹೆಚ್ಚು ಸುಂದರವಾಗುವಂತೆ ಮಾಡಿ ಇಲ್ಲಿಂದ ಹೊರಡ ಬೇಕು’ ಎನ್ನುವ ಆಶಯ ಕಾರಂತರದಾಗಿತ್ತು.

ಭೂಮಿಯ ಋಣವನ್ನು ತೀರಿಸ ಬೇಕು ಎನ್ನುವಂತಹ ಅಧ್ಭುತವಾದ ಯೋಚನೆ ಇಂದು ಎಷ್ಟು ಜನರಿಗೆ ಇದ್ದೀತು? ತಮ್ಮ ಸಮಾಜದಿಂದ ಎಲ್ಲವನ್ನೂ ನಿರೀಕ್ಷಿಸುವ ಜನರು ತಮ್ಮಿಂದ ಬೇರೆಯವರಿಗೂ ಒಳಿತು ಮಾಡುವ ಬಗ್ಗೆ ಎಂದಾದರೂ ಚಿಂತಿಸುತ್ತಾರೆಯೆ? ಅಂತಹ ಉನ್ನತ ಧ್ಯೇಯಗಳು ಇಂದು ಕಣ್ಮರೆಯಾಗುತ್ತಿವೆ. ಇಂದು ಬದಲಾಗಿರುವ ವ್ಯವಸ್ಥೆಗೆ
ಇಂದಿನ ಪಾಲಕರ ಧೋರಣೆ, ಇಂದಿನ ವಿದ್ಯಾಭ್ಯಾಸ ಎಲ್ಲವೂ ಕಾರಣವಾಗಿದೆ. ಅಭಿವೃದ್ಧಿಯ
ನೆವದಲ್ಲಿ ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದೇವೆಯೇ?

ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿದ್ದ ಕಾರಂತರ ಜೀವನ ಹೂವಿನ ಹಾಸಾಗಿರಲಿಲ್ಲ. ತಮ್ಮ ಅಗಾಧ ಕಷ್ಟ, ತೊಂದರೆಗಳ ನಡುವೆಯೂ ಜೀವನ ಪರ್ಯಂತ ಒಂದಲ್ಲ ಒಂದು ಕೆಲಸದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಜೀವನ ಪರ್ಯಂತ ಪ್ರಾಮಾಣಿಕತೆ ಅವರ ಜೀವನದ ಉಸಿರಾಗಿತ್ತು. ಅವರ ಜೀವನ ಚರಿತ್ರೆ ಇಂದಿನ ಯುವಕರಿಗೂ ಆದರ್ಶಪ್ರಾಯವಾಗಿದೆ.
ಉನ್ನತಿಯ ಮೆಟ್ಟಲನ್ನೇರಲು ಧಾವಂತದಿಂದ ಓಡುತ್ತಿರುವ ಜನರಿಗೆ, ಕಾರಂತರ ಆತ್ಮಕತೆ ಜೀವನಕ್ಕೆ ಎಷ್ಟೊಂದು ಮಗ್ಗುಲುಗಳಿವೆ ಎಂದು ತೋರಿಸಿಕೊಡುತ್ತದೆ. ಹಣಗಳಿಕೆ ಮಾತ್ರ ಜೀವನದ ಧ್ಯೇಯವಲ್ಲ, ಅದಕ್ಕಿಂತ ಹೆಚ್ಚಾಗಿ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಮತ್ತಷ್ಟು ಸುಂದರ, ಸಹನೀಯವಾದೀತು ಎನ್ನುವ ಅರಿವನ್ನು
ಮಾಡಿ ಕೊಡಬಹುದು. ಒಂದು ಶತಮಾನದ ಅವಧಿಯಲ್ಲಿ ಬದಲಾವಣೆಗಳಾಗುವುದು ಅತ್ಯಂತ ಸಹಜ. ಆದರೆ ನಮ್ಮ ಸಂಸ್ಕೃತಿ, ಪರಂಪರೆಯನ್ನು ಕಡೆಗಣಿಸದೆ ಅಂದಿನ ಉತ್ಕೃಷ್ಟ ಮೌಲ್ಯಗಳನ್ನು ಇಂದೂ ಉಳಿಸಿ ಕೊಳ್ಳುವುದು ಅತ್ಯಂತ ಮುಖ್ಯ.