ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಾವಿರದ ಕವಿಯೆ…….

ಸುಬ್ರಾಯ ಮತ್ತಿಹಳ್ಳಿ
ಇತ್ತೀಚಿನ ಬರಹಗಳು: ಸುಬ್ರಾಯ ಮತ್ತಿಹಳ್ಳಿ (ಎಲ್ಲವನ್ನು ಓದಿ)

ಅಂಬಾರದೊಡಲಿಂದ ಅಂಬರಕೆ ನೆಗೆದ
ಬಾಳ ಮರವೇ
ಅಂತರಂಗ ಬಹಿರಂಗದ ಗಡಿಮೀರಿ
ಗಂಗಾ ತರಂಗವಾಗಿ ಮೆರೆದ ಹರಿವೇ
ಹಟ್ಟಿಯ ತಟ್ಟೆಗೆ ಹೊಸ ಹುಟ್ಟು ನೀಡಿ
ಹಿಡಿಯೊಳಗೆ ಹಡಗ ಎದೆಯಲ್ಲಿ ಗುಡುಗ
ಹಿಡಿದು ಗುಡುಗಿದ ಗಾಡಿಗನೇ….
ಬಹತ್ತರದಲ್ಲಿ ಬಹು ಎತ್ತರ..
ಬಾ…ಹತ್ತಿರ ಎಂಬ ದನಿಯೇ….
ಒಳಗಿಳಿ
ದರೆ ಕಾಣುವುದು ಆಹಾ.. ಅಕ್ಕರೆ.
ಸಿಡಿಮಿಡಿ ಯ ದಡದಲ್ಲಿ ಸಿಕ್ಕರೆ…
ಅದು ಸವಿ ಸವಿ ಸಕ್ಕರೆ.
ನೋವು ಪ್ರೀತಿಯ ಒಡಲಲ್ಲೂ
ಬೆಳದಿಂಗಳು.
ಮುಗುಳು ನಕ್ಕರೆ.
ಹತ್ತು ಅವತಾರ ಹೊತ್ತು ಗೊತ್ತಿದೆ.
ಅದಕೆ ಗತ್ತಿದೆ….
ಕಾಡ ಕವಿತೆಗಳು ಕಾದು ಕುಳಿತಿವೆ
ಕಾಯಬೇಕು ಎಂದು.
ಹೂತ ಗಾಯಗಳು ಕೀತು ಹೇಳಿವೆ
ಮಾಯಬೇಕು ಎಂದು.
ನೆರಳು ನರಳುವಲ್ಲಿ ನಿಜಗೊರಳ ಮೊಳಗಿಸಿದ
ನೂರೆಂಟು ಕಿಟಕಿಗಳ ತಂಗಾಳಿಯೇ
ಎದೆಗೆ ಬಿದ್ದಕ್ಷರಕೆ ಬೆದೆ ಬರಿಸಿ ಭುವಿಯಲ್ಲಿ
ಸಾವಿರದ ಸಸಿ ಬೆಳೆದ ಸಿರಿ ಗೂಳಿಯೇ…
ಹಾಲಕ್ಕಿ ಹಾಲುಂಡು ಹೊಲೆತನವ ತೊಳೆದಿಕ್ಕಿ
ಹಾಲಾಹಲಕೂ ಎದುರಾಗಿ

ಎದ್ದ ಹಚ್ಚ ಹಸುರೇ…
ಮಣ್ಣಿಂದೆದ್ದ ಅಮರ ಮರವೇ
ವಿಷ್ಣು ಜಿಷ್ಣು ಸಹಿಷ್ಣುತೆಯ ಇರವೇ
ಉಳಿದ ಕವಿತೆಯಲಿ ಅವಿತೆ.
ಅಕ್ಷರದ ಅಂಬಲಿಯಲಿ ಇರು ಚಿರಕಾಲ
ಅಂಬಾರದೆತ್ತರಕೆ ಬೆಳೆದಂತೆ ಆಲ.

  • ಸುಬ್ರಾಯ ಮತ್ತಿಹಳ್ಳಿ