ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಾಹಿತ್ಯದ ಓದು ಹೇಗೆ ಮತ್ತು ಏಕೆ-ಉಪನ್ಯಾಸ

ಪುಸ್ತಕದ ಓದಿನಿಂದ ಭಾವನಾ ಜಗತ್ತಿನ ವಿಸ್ತಾರ ಮಾತ್ರವಲ್ಲ ಸರ್ಧಾಜಗತ್ತನ್ನು ಜಯಿಸಲೂ ಸಾಧ್ಯವಾಗುತ್ತದೆ’

ಡಾ. ವಿಜಯಲಕ್ಷ್ಮಿ ಎಂ. ನಾಯ್ಕ

ಪುಸ್ತಕದ ಓದಿನಿಂದ ಭಾವನಾ ಜಗತ್ತಿನ ವಿಸ್ತಾರ ಮಾತ್ರವಲ್ಲ ಸರ್ಧಾಜಗತ್ತನ್ನು ಜಯಿಸಲೂ ಸಾಧ್ಯವಾಗುತ್ತದೆ’ ಎಂದು ಎಸ್ ಡಿ ಎಂ ಕಾಲೇಜಿನ ಡಾ. ವಿಜಯಲಕ್ಷ್ಮಿ ಎಂ. ನಾಯ್ಕ ಅಭಿಪ್ರಾಯಪಟ್ಟರು. ಅವರು ಎಸ್ ಡಿ ಎಂ ಕಾಲೇಜಿನ ಕನ್ನಡ ಸಂಘ ಏರ್ಪಡಿಸಿದ್ದ ಸಾಹಿತ್ಯದ ಓದು ಹೇಗೆ ಮತ್ತು ಏಕೆ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾವು ದಿನಕ್ಕೆ ಕನಿಷ್ಟ ಎರಡು ಪುಟಗಷ್ಟನ್ನಾದರೂ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಬಸ್ ನಿಲ್ದಾಣದಲ್ಲಿ ಕಾಯುತ್ತಿರುವಾಗ, ಅಥವಾ ಅರ್ಧ ತಾಸು ಸಮಯ ಸಿಕ್ಕಾಗ ಓದಿದರೆ ಅದರಿಂದ ನಮ್ಮ ಭಾವನಾ ಜಗತ್ತು ವಿಸ್ತಾರವಾಗುತ್ತದೆ ಮಾತ್ರವಲ್ಲ; ಸ್ಪರ್ಧಾತ್ಮಕ ಜಗತ್ತಿನಲ್ಲಿ ಜಯಿಸಲೂ ಸಾಧ್ಯವಾಗುತ್ತದೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಬೆಂಗಳೂರಿನ ಎನ್ ಎಂ ಕೆ ಆರ್ ವಿ ಕಾಲೇಜಿನ ಕನ್ನಡ ವಿಭಾಗದ ಸಂಧ್ಯಾ ಹೆಗಡೆ ಅವರು ಮಾತನಾಡಿ ವೇದನೆಯನ್ನು ಸಂವೇದನೆಯನ್ನಾಗಿಸುವ ಶಕ್ತಿ ಸಾಹಿತ್ಯಕ್ಕಿದೆ. ಸಾಹಿತ್ಯದ ಓದಿನಿಂದ ಎರಡು ಪ್ರಯೋಜನಗಳಿವೆ. ಒಂದು ವ್ಯಾವಹಾರಿಕವಾದದ್ದು. ಅಂದರೆ ಲೋಕದ ವ್ಯವಹಾರ ನಿಭಾಯಿಸುವುದನ್ನು ಕಲಿಸುತ್ತದೆ. ಹೆಸರು, ಪ್ರಶಸ್ತಿ, ಹಣ, ಅಧಿಕಾರಗಳನ್ನೆಲ್ಲ ತಂದುಕೊಡುತ್ತದೆ. ಮತ್ತೊಂದು ಅಂತಃಕರಣದ ವಿಸ್ತರಣೆ. ಹರಿಶ್ವಂದ್ರ ನಾಟಕವನ್ನು ಓದಿದ್ದರಿಂದ ಮಹಾತ್ಮ ಗಾಂಧಿ ಸತ್ಯವನ್ನೇ ಹೇಳಬೇಕು’ ಎಂದು ಕಲಿತದ್ದು ಅಂತರಂಗದ ವಿಸ್ತರಣೆಗೆ ಬಹುದೊಡ್ಡ ಉದಾಹರಣೆ.

ಒಮ್ಮೆ ಅನಕೃಗೆ ಒಬ್ಬ ಕಾಲಿಗೆ ನಮಸ್ಕರಿಸುತ್ತಾನೆ. ಯಾಕೆಂದು ಕೇಳಿದರೆ ನಿಮ್ಮ ಕಾದಂಬರಿ ಓದಿ ನನ್ನ ತಾಯಿಯನ್ನು ಹೇಗೆ ನೋಡಿಕೊಳ್ಳಬೇಕೆಂಬುದನ್ನು ಕಲಿತೆ’ ಎನ್ನುತ್ತಾನೆ. ಇಷ್ಟು ಮಾತ್ರವಲ್ಲ ಮೇಡಂಕ್ಯೂರಿ ಬಡತನದಲ್ಲಿದ್ದರೂ ಕಷ್ಟಪಟ್ಟು ರೇಡಿಯಂ ಕಂಡು ಹಿಡಿದಾಗ ಹಲವು ಕಂಪೆನಿಗಳು ತಮಗೆ ಪೇಟೆಂಟ್ ಕೊಟ್ಟರೆ ಹಣ ನೀಡುವುದಾಗಿ ಮುಂದೆ ಬರುತ್ತಾರೆ. ಆದರೆ ಆಕೆ ಹಣಕ್ಕೆ ಆಸೆಪಟ್ಟರೆ ಅದು ಯೂವುದೇ ಕಂಪೆನಿಯ ಆಸ್ತಿಯಾಗಿ ಬಿಡುತ್ತಿದೆ. ಮುಂದೆ ಅದನ್ನು ಸಮಾಜ ತನಗೆ ಬೇಕಾದಂತೆ ಪಡೆಯಲೂ ಸಾಧ್ಯವಾಗುವುದಿಲ್ಲ. ಜನ ನಮ್ಮನ್ನು ಹುಚ್ಚರು ಎಂದು ಆಡಿಕೊಂಡರೂ ಪರವಾಗಿಲ್ಲ. ಆದರೆ ಇದನ್ನು ಸಮಾಜಕ್ಕೆ ಕೊಟ್ಟರೆ ಸರ್ವರ ಒಳಿತಿಗೆ ಬಳಕೆಯಾಗುತ್ತದೆ’ ಎನ್ನುತ್ತಾಳೆ. ಹೀಗೆ ಸಮಾಜದ ಎಲ್ಲ ದೊಡ್ಡ ವ್ಯಕ್ತಿತ್ವಗಳು ರೂಪಗೊಂಡಿದ್ದು ಸಾಹಿತ್ಯ್ದದ ಓದಿನಿಂದ ಎಂದು ವಿಶ್ಲೇಷಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ನಾಗರಾಜ ಹೆಗಡೆ ಅಪಗಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಪ್ರೊ. ಪ್ರಶಾಂತ ಮೂಡಲಮನೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾಲೇಜಿನ ಕನ್ನಡ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿಗಳು ಸಮರಂಭದಲ್ಲಿ ಭಾಗವಹಿಸಿದರು.