ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಾರಾಯಣ ನವಿಲೇಕರ್
ಇತ್ತೀಚಿನ ಬರಹಗಳು: ನಾರಾಯಣ ನವಿಲೇಕರ್ (ಎಲ್ಲವನ್ನು ಓದಿ)

ನಾನಾಗ ಎಂಟೋ ಹತ್ತೋ ವರ್ಷದವನು. ಆವಾಗ ಹುಡುಗರಿಗೆಲ್ಲಾ ಸೈಕಲ್ ಟೈರು ಓಡಿಸಿಕೊಂಡು ಹೋಗುವುದು ಇಷ್ಟದ ಆಟ. ನನಗೂ ಒಂದು ಸೈಕಲ್ ಟೈರು ಬೇಕು ಅಂತಾ ತುಂಬಾ ಆಸೆಯಿತ್ತು. ಮನೆಯಲ್ಲಿ ಸೈಕಲ್ಲೇ ಇರಲಿಲ್ಲ. ಇನ್ನು ಟೈರು ಎಲ್ಲಿಂದ ಬರಬೇಕು.  ಆದರೂ ಹೇಗೋ ಮಾಡಿ ಒಂದು ಸಂಪಾದಿಸಿದೆ. ಕೋಲಿನಲ್ಲಿ ಟೈರಿಗೆ ಹೊಡೆಯುತ್ತಾ ಅದು ಉರುಳಿ, ಉರುಳಿ ಹೋಗುತ್ತಿದ್ದರೆ ಅದೇ ಒಂದು ಮಜಾ. ಹೀಗೇ ಒಮ್ಮೆ ಹೋಗುತ್ತಿದ್ದಾಗ ಆ ಟೈರಿನ ಮೇಲೆ ನನ್ನ ಹತೋಟಿ ತಪ್ಪಿ ಅದು ಯಾವನೋ ರಸ್ತೆಯ ಮೇಲೆ ಹೋಗುತ್ತಿದ್ದವನ ಕಾಲುಗಳ ಮಧ್ಯೆ ನುಸುಳುವುದೇ!  ಆತ ನನಗೆ ಸರಿಯಾಗಿ ಗದರಿಸಿ ಮುಂದೆ ಹೋದ. ಆ  ಬೈಸಿಕೊಂಡದ್ದು ನನಗಿನ್ನೂ  ನೆನಪಿದೆ. ಇದು ಸೈಕಲ್ಲಿನ ನನ್ನ ಮೊದಲ ಅನುಭವ!

            ಕಾಲಸಹಜವಾಗಿ ಟೈರಿನ ಹುಚ್ಚು ಬಿಟ್ಟುಹೋಯಿತು. ನಮ್ಮೂರಿನಲ್ಲಿ ಅಮೀರ್ ಅನ್ನುವ ಮನುಷ್ಯ ಒಂದು ಸೈಕಲ್ ಶಾಪು ಇಟ್ಟಿದ್ದ. ಒಂದು ಘಂಟೆಗೆ ಹತ್ತು ಪೈಸೆ (ಬಹುಶಃ), ರೇಟಿನಲ್ಲಿ ಜನ ಸೈಕಲ್ ಒಯ್ಯುತ್ತಿದ್ದರು. ನಮ್ಮೂರಿನಲ್ಲಿ ಆವಾಗ ಒಂದೇ ಒಂದು ರಿಕ್ಷಾ ಇರಲಿಲ್ಲ. ಹಾಗಾಗಿ ಸ್ವಲ್ಪ ದೂರಕ್ಕೆ, ಹತ್ತಿರದ ಹಳ್ಳಿಗಳಿಗೆ ಹೋಗಬೇಕಾದವರು ಅಮೀರನ ಸೈಕಲ್ ಬಾಡಿಗೆಗೆ ಒಯ್ಯುತ್ತಿದ್ದರು . ಅವನಿಗೆ ಒಳ್ಳೆಯ ವ್ಯಾಪಾರ ಇತ್ತು ಅಂತ ಕಾಣುತ್ತದೆ – ಸುಮಾರು ಹದಿನೈದು ಇಪ್ಪತ್ತು ಸೈಕಲ್ ಇಟ್ಟಿದ್ದ. ಚಕ್ರಕ್ಕೆ ಗಾಳಿ ಹಾಕುವ ಪಂಪು, ಪಂಕ್ಚರ್ ತಿದ್ದಲು ’ಪ್ಯಾಚ್’ ಹಾಕುವುದು ಇತ್ಯಾದಿ ಸಕಲ ಸಾಮಗ್ರಿಗಳೂ ಅವನ ಅಂಗಡಿಯಲ್ಲಿತ್ತು. ದಿನಾ ಪೇಟೆಗೆ ಹೋಗುವಾಗ ಅವನ ಅಂಗಡಿಯ ಮೂಲಕವೇ ಹೋಗಬೇಕಾಗಿತ್ತಾದ್ದರಿಂದ ಆ ಚಟುವಟಿಕೆಗಳು ಕಣ್ಣಿಗೆ ಬೀಳುತ್ತಿತ್ತು. ಆದರೂ ನಾನೂ ಸೈಕಲ್ ಕಲಿಯಬೇಕು ಅನ್ನುವ ಆಕಾಂಕ್ಷೆಯೇನೂ ಹುಟ್ಟಲಿಲ್ಲ.

            ಆವಾಗ ಸಾಧಾರಣವಾಗಿ ಹುಡುಗರು ಸೈಕಲ್ ಕಲಿಯುವುದು ಮಿಡಲ್ -ಹೈಸ್ಕೂಲ್  ವಯಸ್ಸಿನಲ್ಲಿದ್ದಾಗ. ಮನೆಯಲ್ಲಿ ಸೈಕಲ್ ಇದ್ದವರು ಹೇಗೋ ಕಲಿತುಕೊಂಡರೂ ಬಾಕಿಯವರಿಗೆ ಸೈಕಲ್ ಇದ್ದ ಗೆಳೆಯನ ಔದಾರ್ಯ ಅಥವಾ ಅಮೀರನ ಅಂಗಡಿಯ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ಕೆಲವರ ಮನೆಯಲ್ಲಿ (ಉದಾ: ನಮ್ಮ ಮನೆ!)  ಮಕ್ಕಳು ಸೈಕಲ್ ಕಲಿಯಲು ಹೋಗಿ ಬಿದ್ದು ಕೈಕಾಲು ಮುರಿದುಕೊಂಡಾರು ಎಂಬ ಭೀತಿಯಿಂದ ಪರವಾನಗಿ ನೀಡುತ್ತಿರಲಿಲ್ಲ. ಅಂಥಾ ಮನೆಯ ಮಕ್ಕಳು ಕದ್ದು ಮುಚ್ಚಿ ( ಸಿಗರೇಟು / ಬೀಡಿ ಸೇದುವುದನ್ನು ಕಲಿತಂತೆ)  ಕಲಿಯಬೇಕಾಗುತ್ತಿತ್ತು. ಕಲಿಯುವಾಗ ಬಿದ್ದು ಮೈ ಕೈ ತರಚಿಸಿಕೊಂಡದ್ದನ್ನು ಅಪ್ಪ, ಅಮ್ಮನಿಗೆ ಗೊತ್ತಾಗದ ಹಾಗೆ ಉಪಾಯವಾಗಿ ನಿಭಾಯಿಸಬೇಕಾಗುತ್ತಿತ್ತು. ನನ್ನ ಅತ್ತೆಯ ಮಗ ಹೀಗೇ ಕಲಿಯಲು ಹೋಗಿ, ಇಳಿಜಾರಿನಲ್ಲಿ ಹೈಸ್ಪೀಡಿನಲ್ಲಿ ಧಾವಿಸುತ್ತಾ ಆನಂದಿಸುತ್ತಿರುವಾಗ ಅಂಕೆ ತಪ್ಪಿ, ನಮ್ಮೂರ ಹಳ್ಳದ ಮೇಲೆ ಎತ್ತರದಲ್ಲಿ ಕಟ್ಟಿದ ಸೇತುವೆಯ ಪಕ್ಕದ ಪೊದೆಗೆ ಡಿಕ್ಕಿ ಕೊಟ್ಟು, ಹಳ್ಳಕ್ಕೆ ಮಗುಚಿಕೊಳ್ಳುವುದರಲ್ಲಿದ್ದಾಗ ಯಾರೋ ಹೋಗುತ್ತಿದ್ದವರು ಹಿಡಿದದ್ದರಿಂದ ಬಚಾವಾಗಿದ್ದ. ನಮ್ಮಲ್ಲಿಯ ಸಾಬರ ಹುಡುಗರು ರಂಜಾನ್, ಮೊಹರಂ ವೇಳೆಯಲ್ಲಿ ಅಪ್ಪ ಕೊಟ್ಟ ಐದು, ಹತ್ತು ಪೈಸೆಯಲ್ಲಿ ಬಾಡಿಗೆ ಸೈಕಲ್ ತಗೊಂಡು ನಮ್ಮೂರಿನ ರಾಜ ಮಾರ್ಗದಲ್ಲಿ ಟ್ರಿಣ್ ಟ್ರಿಣ್ ಎಂದು ಬೆಲ್ಲು ಹೊಡೆಯುತ್ತಾ, ಆಗಾಗ ಎರಡೂ ಕೈಬಿಟ್ಟು ಇಳಿಜಾರಿನಲ್ಲಿ ವೇಗವಾಗಿ  ಹೋಗುವ ಸಾಹಸದ ದೃಶ್ಯಗಳು ಕಣ್ಣಿಗೆ ಬೀಳುತ್ತಿದ್ದವು.  ಇನ್ನು ಸಣ್ಣ ಹುಡುಗರು, ಸೀಟಿನ ಮೇಲೆ ಕೂತು ಪೆಡಲ್ ಹೊಡೆಯಲು ಎತ್ತರ ಸಾಲದ ಕಾರಣ, ಬಲಗೈಯಲ್ಲಿ ಸೀಟನ್ನು ಅವುಚಿ ಹಿಡಿದು, ಇನ್ನೊಂದು ಕೈಯಲ್ಲಿ ಹ್ಯಾಂಡಲ್ ಹಿಡಿದು, ತ್ರಿಕೋನಾಕಾರದ ಫ್ರೇಮಿನ ಒಳಗೆ ಕಾಲು ಆ ಕಡೆ ಒಂದು ಈಕಡೆ ಒಂದು ಬಿಟ್ಟುಕೊಂಡು ಕಷ್ಟ ಪಟ್ಟು ಸೈಕಲ್ ತುಳಿಯುತ್ತಿದ್ದರು. ಈ ವಿಧಾನದ ಸೈಕಲ್ ತುಳಿತಕ್ಕೆ  “ಒಳಪೆಡಲು” ಎಂಬ ಸ್ಪೆಷಲ್ ಹೆಸರೇ ಇತ್ತು.

ಊಹುಂ , ಇಷ್ಟೆಲ್ಲಾ ಆದರೂ ನಾನು ಸೈಕಲ್ ಕಲಿಯಲೇ ಇಲ್ಲ. ಹಾಗೆಯೇ ಎಸ್.ಎಸ್.ಎಲ್.ಸಿ ಮುಗಿದು ಪಿ.ಯು.ಸಿ ಕೂಡಾ ಬಂದಿತು. ನನಗಿನ್ನೂ ಸೈಕಲ್ ಬರುತ್ತಿರಲಿಲ್ಲ. ನನಗೆ ಇದೇ ಕಾರಣಕ್ಕಾಗಿಯೇ ಒಂದು ರೀತಿಯ ಕೀಳರಿಮೆ ಶುರುವಾಯಿತು. ಆ ವರ್ಷ ರಜಾದಲ್ಲಿ ನಮ್ಮತ್ತೆಯ ಮನೆಗೆ ಹೋಗಿದ್ದಾಗ,  ಆ ಅತ್ತೆಯ ಮಗ (ಮೊದಲು ಹೇಳಿದವನಲ್ಲ, ಅವನ ತಮ್ಮ) ಮನೆಯಲ್ಲಿದ್ದ ಸೈಕಲ್ಲಿನಲ್ಲಿ ಅಲ್ಲಿಯ ಸ್ಕೂಲ್ ಮೈದಾನಕ್ಕೆ ಎರಡು ದಿನ ಸಂಜೆ ಕರೆದುಕೊಂಡು ಹೋಗಿ ಸೈಕಲ್ ಕಲಿಸಿದ. ಅಂತೂ ಇಂತೂ ಸೈಕಲ್ ಕಲಿತೆ ಎಂದಾಯಿತು. ಆದರೂ  ರಸ್ತೆಯ ಮೇಲೆ ಹೊಡೆಯುವ ಧೈರ್ಯ ಬರಲಿಲ್ಲ.

ಮುಂದೆ ಕಾಲೇಜಿಗೆ ಬೆಂಗಳೂರು ಸೇರಿದೆ. ಆಗ ಕಾಲೇಜುಗಳಲ್ಲಿ ಸೈಕಲ್ ಸ್ಟಾಂಡ್ ಸಾಕಷ್ಟು ದೊಡ್ಡದಿರುತ್ತಿತ್ತು. ಬಹಳಷ್ಟು ಜನ ಹುಡುಗರು ಸೈಕಲ್ ಮೇಲೆ ಬರುತ್ತಿದ್ದರು. ಎಲ್ಲೋ ಡೊನೇಷನ್ ಕೊಟ್ಟು ಸೇರಿದ ಹುಡುಗರೋ, ಭಾರೀ ಶ್ರೀಮಂತರ ಮಕ್ಕಳೋ ಹೀಗೆ ಎಲ್ಲೋ ಕೆಲವರು ಬೈಕ್ ತರುತ್ತಿದ್ದರು. ನಾನು ಇದ್ದದ್ದು ವಿ.ವಿ.ಪುರದಲ್ಲಿ ಹಾಸ್ಟೆಲಿನಲ್ಲಿ. ಕಾಲೇಜಿದ್ದದ್ದು ಬಸವನಗುಡಿ ರಸ್ತೆಯಲ್ಲಿ (ಇದನ್ನು ಅಚ್ಚ ಕನ್ನಡದಲ್ಲಿ ಮುದ್ದಾಗಿ “ಬುಲ್ ಟೆಂಪಲ್ ರೋಡು” ಎಂದೂ ಕರೆಯುತ್ತಿದ್ದರು) ಅದೇ ಹಾಸ್ಟೆಲಿನಲ್ಲಿ ನನ್ನ ಸಹಪಾಠಿಯೊಬ್ಬ ಸಿಕ್ಕಿದ. ಅವನ ಹತ್ತಿರ ಸೈಕಲ್ ಇತ್ತು. ನಾವಿಬ್ಬರೂ ಒಂದೇ ಕ್ಲಾಸಿನವರಾದ್ದರಿಂದ ಒಟ್ಟಿಗೇ ಹೊರಡುತ್ತಿದ್ದೆವು. ಆತ ಸೌಜನ್ಯದಿಂದ ಸೈಕಲ್ ತಳ್ಳಿಕೊಂಡು ನನ್ನ ಜೊತೆಗೆ ಬರುತ್ತಿದ್ದ. ಕಾಲೇಜಿನಿಂದ ವಾಪಸು ಬರುವಾಗ ಇಳಿಜಾರಿನಲ್ಲಿ ಆತ ನನ್ನನ್ನು ಕ್ಯಾರಿಯರ್ ಮೇಲೆ ಕೂರಿಸಿಕೊಂಡು ಡಬಲ್ ರೈಡ್ ಹೊಡೆಯುತ್ತಿದ್ದ. “ಬೋರೇಗೌಡ ಬೆಂಗಳೂರಿಗೆ ಬಂದ” ಎಂಬ ಅವಸ್ಠೆಯಲ್ಲಿದ್ದ ನಾನು,  ಅಲ್ಲಿ ಸೈಕಲ್ ಹೊಡೆಯುವುದಿರಲಿ, ರಸ್ತೆ ದಾಟುವುದಕ್ಕೇ ಹಿಂದೆಮುಂದೆ ನೋಡುತ್ತಿದ್ದೆ.

ನನ್ನ ಕೀಳರಿಮೆ ಈಗ ಇನ್ನೂ ಬಲವಾಯಿತು. ನನ್ನ ಕ್ಲಾಸಿನಲ್ಲಿ ಅನೇಕರು ಸೈಕಲ್ ಇಟ್ಟಿದ್ದರು. ಹಾಸ್ಟೆಲಿನಲ್ಲೂ ಕೂಡಾ.  ಸೈಕಲ್ ಇಲ್ಲದವರಿಗೂ ಬಹುತೇಕ ಸೈಕಲ್ ಹೊಡೆಯಲು ಬರುತ್ತಿತ್ತು. ಹಾಗಾಗಿ ಎಲ್ಲಿಯಾದರೂ ಹೋಗುವುದಾದರೆ, ಅವರೆಲ್ಲಾ ಸೈಕಲ್ ಏರಿದರೆ, ನಾನು ಯಾರದ್ದಾದರೂ ಕ್ಯಾರಿಯರ್ ಹುಡುಕಬೇಕಾಗುತ್ತಿತ್ತು. ಕೊನೆಗೊಮ್ಮೆ ನಿಶ್ಚಯಿಸಿದೆ, ಇನ್ನು ಕಲಿಯಲೇಬೇಕು ಎಂದು. ನೇರವಾಗಿ, ಚೆನ್ನಾಗಿದ್ದ  ಕೆ.ಆರ್ ರೋಡಿನಲ್ಲಿ ಬೆಳಿಗ್ಯೆ ಮುಂಚೆ, ಹೆಚ್ಚು ವಾಹನ ದಟ್ಟಣೆ ಇಲ್ಲದಿದ್ದ ಹೊತ್ತಿನಲ್ಲಿ ಸೈಕಲ್ ಓಡಿಸಿ ಅಭ್ಯಾಸ ಮಾಡುವುದೆಂದು ನಿರ್ಧರಿಸಿದೆ. ನನ್ನ ಗೆಳೆಯ ತನ್ನ ಸೈಕಲ್ ಕೊಡುವುದಕ್ಕೆ ಸಂತೋಷದಿಂದ ಒಪ್ಪಿದ. ಹೀಗೆ ಒಂದೆರಡು ದಿನ ಹೊಡೆದೆ. ಹೊಡೆಯುವಾಗ, ಬಸ್ಸೋ, ಟ್ರಕ್ಕೋ ಎದುರಿನಿಂದ ಬಂದರೆ, ಅದಕ್ಕೇ ಗುದ್ದುತ್ತೇನೇನೋ ಎನ್ನಿಸುತ್ತಿತ್ತು. ಪಕ್ಕದಿಂದ ಹಾದು ಹೋದರೆ ಸೈಕಲ್ ಬ್ಯಾಲೆನ್ಸ್ ತಪ್ಪಿ ಜೋಲಿ ಹೋಗುತ್ತಿತ್ತು. ಆದರೂ ತಕ್ಕ ಮಟ್ಟಿಗೆ ಹೊಡೆಯಲು ಕಲಿತೆ. 

ಅದೇ ಧೈರ್ಯದ ಮೇಲೆ ಒಂದು ದಿನ ಅವನ ಸೈಕಲ್ ಅನ್ನು ಕಾಲೇಜಿಗೆ ತಗೊಂಡು ಹೋದೆ. ಆತ ಜೊತೆಯಲ್ಲಿರಲಿಲ್ಲ. ನ್ಯಾಷನಲ್ ಹೈಸ್ಕೂಲಿನ ಸರ್ಕಲ್ ದಾಟುವವರೆಗೂ ಸರಿಯಾಗಿತ್ತು. ಹಾಗೇ ಅಲ್ಲಿಂದ ಮುಂದೆ ಹೋಗಿ ಗಾಂಧಿಬಜಾರ್  ಕಡೆ ಸಣ್ಣ ರಸ್ತೆಗೆ ತಿರುಗಿದಾಗ ಎದುರಿನಿಂದ  ಒಂದು ಟಾಂಗಾ ಬಂತು. ನನಗೆ ಬ್ಯಾಲೆನ್ಸ್ ಸಿಕ್ಕದೆ ನೆಟ್ಟಗೆ ಹೋಗಿ ಟಾಂಗಾದ ಚಕ್ರಕ್ಕೆ ಡಿಕ್ಕಿ ಹೊಡೆದೆ. ಅದು ನನ್ನ ಜೀವನದ ಮೊಟ್ಟಮೊದಲ ಅಪಘಾತ. ದಿಗ್ಭ್ರಮೆಯಾಗಿ ಕೆಳಗಿಳಿದು ನಿಂತೆ. ಅಷ್ಟರಲ್ಲಿ ಪಕ್ಕದ ಬಾದಾಮಿ ಹಾಲಿನ ಅಂಗಡಿಯಲ್ಲಿ ನಿಂತು ನೋಡುತ್ತಿದ್ದ ಜನ, ಅಂಗಡಿಯವನೂ ಸೇರಿದಂತೆ, ಜಮಾಯಿಸಿದರು. ನನ್ನ ಸೈಕಲನ್ನು ಟಾಂಗಾದ ಚಕ್ರದಿಂದ ಪ್ರತ್ಯೇಕಿಸಿ ಎಳೆದು ಕೊಟ್ಟು, ಟಾಂಗಾ ಹೊಡೆಯುತ್ತಿದ್ದ ಮುದುಕನನ್ನು ಇಳಿಸಿ, ಅವನ ಕೈಯಲ್ಲಿದ್ದ ಬಾರುಕೋಲು ಕಸಿದುಕೊಂಡು  “ ಏನೋ, ಇಳಿಯೋ ಕೆಳಗೆ, ಯಾರೋ ನಿನಗೆ ಟಾಂಗಾ ಹೊಡೆಯೋದು ಕಲಿಸಿದ್ದು “ ಎಂದು ರೋಪು ಹಾಕತೊಡಗಿದರು. ಪಾಪ, ಅದರಲ್ಲಿ ಅವನ ಯಾವ ತಪ್ಪೂ ಇರಲಿಲ್ಲ. ತನ್ನಷ್ಟಕ್ಕೆ ತಾನು ಬರುತ್ತಿದ್ದ ಅವನ ಟಾಂಗಾಕ್ಕೆ ನಾನೇ ಹೋಗಿ ಗುದ್ದಿದ್ದೆ. ಅಲ್ಲಿ ಮುಂದೇನಾಯಿತೋ ಗೊತ್ತಿಲ್ಲ. ಸೈಕಲ್ಲಿನ ಮುಂದಿನ ಚಕ್ರ ಸರಿಸುಮಾರು ಎಂಟರ ಅಂಕಿಯ ಆಕಾರಕ್ಕೆ ತಿರುಗಿತ್ತು. ಆ ಸೈಕಲ್ಲನ್ನು ಎಳೆದುಕೊಂಡು ರಿಪೇರಿ ಶಾಪು ಹುಡುಕುತ್ತಾ ಹೋಗಿ , ಅಲ್ಲಿ ಕೊಟ್ಟು ಬರುವುದರೊಳಗೆ ಅರ್ಧಕ್ಕರ್ಧ ಹೆಣವಾಗಿದ್ದೆ.

ಒಂದು ಅಪಘಾತವಾಗದ ಹೊರತು , ಡ್ರೈವಿಂಗ್ ಮಾಡಲು ಧೈರ್ಯ ಬರುವುದಿಲ್ಲ ಎನ್ನುತ್ತಾರೆ. ಇದು ನನಗೆ ಈ ಅನುಭವದಿಂದ ಸ್ವತ: ವೇದ್ಯವಾಯಿತು. ಮುಂದೊಂದಷ್ಟು ದಿನ ಸೈಕಲ್ ಹೊಡೆಯುವುದನ್ನು ಬಿಟ್ಟುಬಿಟ್ಟರೂ, ಆ ಮೇಲೆ ಮತ್ತೆ ಶುರುಮಾಡಿ ಧೈರ್ಯ ಗಳಿಸಿಕೊಂಡೆ. ಮುಂದೆ ನನ್ನದೇ ಸೈಕಲ್ ಕೂಡಾ ಬಂತು. ಬರುಬರುತ್ತಾ ಸೈಕಲ್ ನನ್ನ ನೆಚ್ಚಿನದಾಯಿತು.

ಈಗ ನನ್ನ ಗೆಳೆಯರ ಬಳಗವೂ ದೊಡ್ಡದಾಗಿತ್ತು. ಬೆಂಗಳೂರಿನ ಎಲ್ಲಾ ಕಡೆ ಸೈಕಲ್ಲಿನಲ್ಲಿ ಸುತ್ತುತ್ತಿದ್ದೆವು. ಯಾವುದೇ ಟ್ರಾಫಿಕ್ ಸಿಗ್ನಲಿನಲ್ಲಿ, ಬಸ್ಸು, ಕಾರು, ಟ್ರಕ್ಕುಗಳ ಸಂದಿಯಲ್ಲಿ ನುಸುಳಿ ಮುಂದೆ ಬಂದು ಮೊದಲ ಸಾಲಿನಲ್ಲ್ಲಿ ಬಂದು ನಿಲ್ಲುವುದೇ ಒಂದು ಥ್ರಿಲ್ ಆಗಿತ್ತು. ಮೆಜೆಸ್ಟಿಕ್, ರಾಜಾಜಿನಗರ, ಜಯನಗರ, ಬನಶಂಕರಿ, ಎಂ ಜಿ ರಸ್ತೆ ಎಲ್ಲಾ ಕಡೆಗೂ ಸೈಕಲ್. ಸಿಟೀ ಮಾರ್ಕೆಟ್ಟಿನಿಂದ ಮೆಜೆಸ್ಟಿಕ್ ಕಡೆ ಹೋಗುವಾಗ ಅವೆನ್ಯೂ ರಸ್ತೆಯಲ್ಲಿ ಅಲ್ಲಿಯ ಜನ- ವಾಹನ ದಟ್ಟಣೆಯಲ್ಲಿ ಟ್ರಿಣ್ ಟ್ರಿಣ್ ಬೆಲ್ ಮಾಡುತ್ತಾ ವಿ.ಐ.ಪಿ ಕಾರುಗಳು ಹೋದಂತೆ  ಒಬ್ಬರ ಹಿಂದೊಬ್ಬರು ವೇಗವಾಗಿ ಹೋಗುತ್ತಿದ್ದೆವು. ಹೀಗೊಮ್ಮೆ ಹೋಗುವಾಗ ನನ್ನ ಬೆಲ್ ಕೈಕೊಟ್ಟು, ಹುಷಾರಾಗಿ ಆದರೆ ವೇಗವಾಗಿ ಹೋಗಬೇಕಾದ ಫಜೀತಿ ಉಂಟಾದದ್ದು ನೆನಪಾಗುತ್ತದೆ.

ಒಮ್ಮೆ ಗವಿಪುರದಲ್ಲಿದ್ದ ಕಾರ್ಪೋರೇಷನ್ನಿನ ಈಜುಕೊಳಕ್ಕೆ ಹೋಗಿ ಈಜುವುದೆಂದು ನಿರ್ಧಾರವಾಯಿತು. ನಾವು ಇದ್ದದ್ದು ಐದು ಜನ – ಹಾಗೂ ಎರಡು ಸೈಕಲ್. ಎರಡು, ಮೂರರ ಹಾಗೆ ಹತ್ತಿಕೊಂಡು ಹೊರಟೆವು. ಅಲ್ಲಿ ಯಾವುದೋ ಒಂದು ಓಣಿಯಲ್ಲಿ ಹೋಗುತ್ತಿರುವಾಗ ಒಬ್ಬ ಪೋಲೀಸ್ ವಿಸಲ್ ಹಾಕಿ ನಿಲ್ಲಿಸಿದ. ನಮ್ಮನ್ನು ಹಿಡಿದು ಪಕ್ಕದಲ್ಲಿಯೇ ಮಹಡಿಯ ಮೇಲೆ ಇದ್ದ ಪೋಲೀಸ್ ಸ್ಟೇಷನ್ನಿಗೆ ಕರೆದುಕೊಂಡು ಹೋದ. ಇನ್ಸ್‌ಪೆಕ್ಟರಿಗೆ ಕಾಯುತ್ತಾ ಅಲ್ಲಿಯೇ ನಿಂತಿದ್ದೆವು. ಜೀವನದಲ್ಲಿ ಪೋಲೀಸ್ ಸ್ಟೇಷನ್ನಿನ ಮೆಟ್ಟಲು ಏರಿದ್ದು (ಆ ಸ್ಟೇಷನ್ ಮಹಡಿಯ ಮೇಲಿತ್ತಲ್ಲ !) ಅದೇ ಮೊದಲು. ಇನ್ನೇನು ನಮಗೆ ಲಾಕಪ್ಪಿಗೆ ಹಾಕಿ ಇಕ್ಕುತ್ತಾರೇನೋ, ಕೋರ್ಟಿಗೆ ಕರೆದುಕೊಂಡು ಹೋಗಿ ಎಷ್ಟು ಸಜಾ ಜಡಿಯುತ್ತಾರೋ, ಅಪ್ಪ ಅಮ್ಮನಿಗೆ ಗೊತ್ತಾದರೆ ಏನು ಹೇಳುವುದು ಎಂದೆಲ್ಲಾ ಚಿಂತಿಸುತ್ತಾ ಮುಖ ಕೆಳಗೆ ಹಾಕಿಕೊಂಡು ಕಾದೆವು. ಸ್ವಲ್ಪ ಹೊತ್ತಿಗೆ ನಮ್ಮನ್ನು ಹಿಡಿದುಕೊಂಡು ಬಂದಿದ್ದ ಪ್ಯಾದೆ “ಸಾಹೇಬರು ಕರೀತಾ ಅವ್ರೆ “ ಅಂತ ಇನ್ನೊಂದು ರೂಮಿಗೆ ಕರಕೊಂಡು ಹೋದ. ಅಲ್ಲಿ ಇನ್ಸ್‌ಪೆಕ್ಟರು ಕೂತಿದ್ದರು. ಅವರು ನಮ್ಮ ಕಲ್ಪನೆಯಲ್ಲಿದ್ದಂತೆ ಭಯಂಕರವಾಗಿರದೆ ,  ಖಾಕಿ ಬಟ್ಟೆ ಹಾಕಿಕೊಂಡ ಸಾಧಾರಣ ಮನುಷ್ಯರಂತೆ ಇದ್ದದ್ದು ನೋಡಿ ಜೀವ ಬಂತು. ನಮ್ಮ ಮೂವರಲ್ಲಿ ಒಬ್ಬ ಕುಳ್ಳಕ್ಕೆ , ಸ್ವಲ್ಪ ದಪ್ಪವಾಗಿ, ಬೆಳ್ಳಗಿದ್ದ. ಆತನನ್ನು ನೋಡಿದ ಇನ್ಸ್ ಪೆಕ್ಟರು “ ಏನಯ್ಯಾ ದ್ವಾರಕೀಶ್ ಇದ್ದ ಹಾಗೆ ಇದ್ದೀಯಾ, ತ್ರಿಬಲ್ ರೈಡ್ ಮಾಡ್ತೀಯಾ?” ಅಂದರು. ಬಹುಶಃ ದ್ವಾರಕೀಶ್ ಥರಾ ಇದ್ದವರು ತ್ರಿಬಲ್ ರೈಡ್ ಮಾಡಬಾರದು ಅಂತ ಏನಾದರೂ ಕಾನೂನು ಇತ್ತೇನೋ. ಇರಲಿ, ಅವನನ್ನು ದ್ವಾರಕೀಶ್ ಗೆ ಹೋಲಿಸಿದ ಮೇಲೆ, ಭೇದ ಮಾಡದೆ ಬಾಕಿ ನಮ್ಮಿಬ್ಬರನ್ನೂ ಯಾವುದಾದರೂ ಸಿನಿಮಾನಟರಿಗೆ ಹೋಲಿಸಬೇಕಾದ ಅನಿವಾರ್ಯತೆ ಅವರಿಗೆ ಉಂಟಾಗಿರಬೇಕು. ಹಾಗಾಗಿ,  ಯಾವುದೇ ರೀತಿಯಲ್ಲಿ ಸಾಮ್ಯತೆ ಇಲ್ಲದಿದ್ದರೂ ನನ್ನನ್ನು ನರಸಿಂಹರಾಜುವಿಗೆ ಹಾಗೂ ನನ್ನ ಇನ್ನೊಬ್ಬ ಮಿತ್ರನನ್ನು ಬಾಲಕೃಷ್ಣನಿಗೆ ಹೋಲಿಸಿ , ಗೇಲಿ ಮಾಡಿದ ಆ ಇನ್ಸ್ ಪೆಕ್ಟರು ಆಮೇಲೆ,  ನಮ್ಮ ಅಪ್ಪಅಮ್ಮ ನಮ್ಮನ್ನು ಸಿಟಿಗೆ ಕಳಿಸಿರುವುದು ತ್ರಿಬಲ್ ರೈಡ್ ಮಾಡುವುದಕ್ಕೋ ಅಥವಾ ಓದುವುದಕ್ಕೋ , ಅವರು ಕಷ್ಟಪಟ್ಟು ದುಡಿದು ಕಳಿಸಿ , ಮಗ ವಿದ್ಯಾವಂತನಾಗುತ್ತಾನೆ ಎಂದು ತಿಳಿದಿದ್ದರೆ ನೀವು ಕಾನೂನು ಮುರಿಯುವ ಕೆಲಸ ಮಾಡುತ್ತೀರಾ?  ನಾಳೆಯ ನಾಗರೀಕರಾಗಬೇಕಾದ ಸ್ಟೂಡೆಂಟ್ಸ್ ಹೀಗೆಲ್ಲಾ ಮಾಡಿದರೆ ಸರಿಯೇ? ಎಂದೆಲ್ಲಾ ನಮಗೆ ಮುಜುಗರವಾಗುವಂಥಾ ಲೆಕ್ಚರು ಕೊಟ್ಟು ಅಲ್ಲಿಂದ ಕಳಿಸಿದರು. ಬದುಕಿದೆ ಎಂದುಕೊಂಡು ಕೆಳಗಿಳಿದು ಬಂದು ರೂಮು ಸೇರಿದೆವು.

ಗ್ಯಾಲಕ್ಸಿ ಥಿಯೇಟರಿನಲ್ಲಿ Enter The Dragon ಬಂದಿತ್ತು. ನನ್ನ ಹತ್ತಿರದ ನೆಂಟನೊಬ್ಬ, ಮ್ಯಾಟಿನಿಗೆ ಎರಡು ತಿಕೀಟು ಕೊಂಡು ಕಾದಿರುತ್ತೇನೆ , ಬಂದುಬಿಡು ಎಂದಿದ್ದ. ಸರಿ ಎಂದು, ಸೈಕಲ್ ಹತ್ತಿ ಹಾಸ್ಟೆಲಿನಿಂದ ಹೊರಟೆ. ಅಲ್ಲಿಯವರೆಗೆ ಅನೇಕ ಬಾರಿ, ಅದೇ ಥಿಯೇಟರಿನ ಎದುರು ಓಡಾಡಿದ್ದರೂ , ಅಂದು ಮಾತ್ರಾ ಗ್ಯಾಲಕ್ಸಿ ಎಲ್ಲಿಯೋ ತಪ್ಪಿಸಿಕೊಂಡು ಬಿಟ್ಟಿತ್ತು. ಅಲ್ಲೇ ಅಕ್ಕಪಕ್ಕದ ರೋಡುಗಳಲ್ಲಿ ಸೈಕಲ್ಲಿನಲ್ಲಿ ಗಿರಕಿ ಹೊಡೆಯುತ್ತಾ, ಹುಡುಕಿ, ಹುಡುಕಿ ಸುಸ್ತಾಗಿ , ಕೊನೆಗೆ ಮರ್ಯಾದೆ ಬಿಟ್ಟು ಯಾರನ್ನೋ ಕೇಳಿ ಅಂತೂ ಥಿಯೇಟರ್ ತಲುಪಿದೆ. ಪಾಪ ನನ್ನ ನೆಂಟ ಸಿನೆಮಾ ಶುರುವಾಗಿ ಹೋಗಿದ್ದರೂ ನನಗಾಗಿ ಕಾಯುತ್ತಾ ಹೊರಗೆ ನಿಂತಿದ್ದ . ಪೆಚ್ಚುನಗೆ ಬೀರಿ ಅವನಿಗೆಲ್ಲಾ ಹೇಳುತ್ತಾ ಒಳಗೆ ನುಗ್ಗಿದ್ದಾಯಿತು. ಸೈಕಲ್ ಬದಲು ಸುಮ್ಮನೆ ರಿಕ್ಷಾ ಹಿಡಿದು ಬಂದಿದ್ದರೆ ಈ ಫಜೀತಿಯೇ ಇರುತ್ತಿರಲಿಲ್ಲ.

ಒಮ್ಮೆ ನಮ್ಮ ಹಾಸ್ಟೆಲ್ ಗೆಳೆಯರೆಲ್ಲಾ ಸೇರಿಕೊಂಡು ನಂದಿಬೆಟ್ಟಕ್ಕೆ ಸೈಕಲ್ ಟ್ರಿಪ್ ಹಾಕಿದೆವು. ದಾರಿಗೆ ನೀರು, ತಿಂಡಿ ಎಲ್ಲದರ ಏರ್ಪಾಟೂ ಆಯಿತು. ಬೆಳಿಗ್ಯೆ ಮುಂಚೆ ಹೊರಡುವ ಯೋಜನೆಯಿತ್ತು. ಅವತ್ತೇ ಬೆಳಿಗ್ಯೆ ಚೆನ್ನಾಗಿ ಮಳೆ ಶುರುವಾಗಬೇಕೇ? ಸರಿ, ಟ್ರಿಪ್ ರದ್ದು ಮಾಡೋಣ ಎಂದುಕೊಂಡು , ಕಟ್ಟಿಸಿಕೊಂಡು ಬಂದಿದ್ದ ತಿಂಡಿ ಪೊಟ್ಟಣಗಳನ್ನೆಲ್ಲಾ ರೂಮಿನಲ್ಲಿಯೇ ಧ್ವಂಸ ಮಾಡಿದ್ದಾಯಿತು. ಅಷ್ಟು ಹೊತ್ತಿಗಾಗಲೇ  ಮಳೆ ನಿಂತು , ಬಿಸಿಲು ಮತ್ತೆ ಹೊರಸೂಸಿತು. ಸರಿ ಮತ್ತೆ ಹೊರಟೇ ಬಿಟ್ಟೆವು. ಆ ಟ್ರಿಪ್ ಬಹಳ ಚೆನ್ನಾಗಿ ಆಯಿತು. ಸುಮಾರು ಅರವತ್ತು ಕಿ.ಮೀ ಸೈಕಲ್ ತುಳಿದು, ಸಂಜೆ ಬೆಟ್ಟದ ಬುಡಕ್ಕೆ ಮುಟ್ಟಿ, ಅಲ್ಲಿಂದ ಮೇಲೆ ಸೈಕಲ್ ತಳ್ಳಿಕೊಂಡು ಹತ್ತಿದೆವು. ಅಲ್ಲಿ ರಾತ್ರಿ ಉಳಿಯುವುದಕ್ಕೆ ನಾವು ಯಾವ ಏರ್ಪಾಟನ್ನೂ ಮಾಡಿಕೊಂಡಿರಲಿಲ್ಲ. ಅಷ್ಟೇ ಏಕೆ ಹೆಚ್ಚುವರಿ ಬಟ್ಟೆ ಬರೆ ಸಹಾ ತಗೊಂಡು ಹೋಗಿರಲಿಲ್ಲ. ನಮ್ಮ ಅದೃಷ್ಟಕ್ಕೆ , ಅಲ್ಲಿಯ ಗೆಸ್ಟ್ ಹೌಸಿನಲ್ಲಿ ಒಂದು ದೊಡ್ಡ ರೂಮು ಸಿಕ್ಕಿತು. ಅಲ್ಲಿ ಒಂದು ದೊಡ್ಡ ಮಂಚ , ಅದರ ಮೇಲೊಂದು ದೊಡ್ಡ ಡಬಲ್ ಬೆಡ್ ಇತ್ತು. ನಾವಿದ್ದದ್ದು ಹದಿನಾಲ್ಕು ಜನ. ಮಲಗುವುದು ಹೇಗೆ. ಕೊನೆಗೊಂದು ಉಪಾಯ ಮಾಡಿದೆವು. ಹಾಸಿಗೆಯನ್ನು ಎಳೆದು ನೆಲದ ಮೇಲೆ ಹಾಸಿ ಕೆಲವರು ಹಾಸಿಗೆಯ ಮೇಲೆ , ಉಳಿದವರು ಮಂಚದ ಮೇಲೆ ಮಲಗಿ ರಾತ್ರಿ ಕಳೆದವು . ಯಾರು ಎಲ್ಲಿ ಮಲಗಬೇಕು ಅನ್ನುವುದನ್ನು ಚೀಟಿ ಎತ್ತುವುದರ ಮೂಲಕ ನಿರ್ಧಾರ ಮಾಡಿದ್ದೆವು. ಮಾರನೆಯ ಬೆಳಿಗ್ಯೆ ಬೆಟ್ಟದ ಮೇಲೆಲ್ಲ ತಿರುಗಿ , ವಾಪಸು ಹೊರಟೆವು. ಬೆಟ್ಟ ಇಳಿಯುವಾಗ ಕೈ ನೋವು ಬರುವಷ್ಟು ಬಿಗಿಯಾಗಿ ಎರಡೂ ಬ್ರೇಕುಗಳನ್ನು ಒತ್ತಿ ಹಿಡಿದಿದ್ದರೂ ಸೈಕಲ್ಲುಗಳು ಇಳಿಜಾರಿನಲ್ಲಿ ನಾಗಾಲೋಟದಿಂದ ಧಾವಿಸುತ್ತಿದ್ದವು. ಅಂತೂ ಸುಸೂತ್ರವಾಗಿ ವಾಪಸು ಬಂದೆವು. ಇದರಿಂದ ಉತ್ತೇಜಿತರಾಗಿ ಮುಂದೆ ಶಿವಗಂಗೆಗೂ ಹೀಗೇ ಯಶಸ್ವೀ ಟ್ರಿಪ್ ಮಾಡಿದೆವು.

ನನ್ನ ಕಾಲೇಜಿನ ಕೊನೆಯ ವರ್ಷದಲ್ಲಿ ಯಶವಂತಪುರದ ಫ್ಯಾಕ್ಟರಿಯೊಂದರಲ್ಲಿ ಪ್ರಾಜೆಕ್ಟ್ ಮಾಡಿದೆ.  ವಾರಕ್ಕೆ ಮೂರು ದಿನ ಕಾಲೇಜು ಮುಗಿಸಿಕೊಂಡು, ಮಧ್ಯಾಹ್ನ ಹನ್ನೆರಡರ ಬಿಸಿಲಿನಲ್ಲಿ ವಿ.ವಿ.ಪುರದಿಂದ ಯಶವಂತಪುರಕ್ಕೆ ಸೈಕಲ್ ತುಳಿಯುತ್ತಿದ್ದೆ. ಸುಮಾರು ಮೂರು ತಿಂಗಳು ಇದನ್ನು ಮಾಡಿದರೂ, ಯಾವತ್ತೂ, ಬೇಸರ ಬರಲಿಲ್ಲ, ದಣಿವಾಗಲಿಲ್ಲ. ಕಳೆದ ತಿಂಗಳು ಬೆಂಗಳೂರಿಗೆ ಹೋದಾಗ ಈ ರಸ್ತೆಗಳಲ್ಲಿ ಒಂದಾನೊಂದು ಕಾಲದಲ್ಲಿ ಸೈಕಲ್ ತುಳಿದದ್ದು ಹೌದೇ ಎನ್ನಿಸಿತು. ರಸ್ತೆಯೇ ಕಾಣದಂತೆ ಕಿಕ್ಕಿರಿದ ವಾಹನಗಳು. ಕಾಲೇಜುಗಳಲ್ಲಿಯೂ ಈಗ ಸೈಕಲ್ ಸ್ಟಾಂಡುಗಳ ಜಾಗದಲ್ಲಿ ಮೊಪೆಡ್, ಸ್ಕೂಟರು, ಬೈಕುಗಳು ತುಂಬಿರುತ್ತವೆ ಅಂತ ನನ್ನ ಮಿತ್ರನೊಬ್ಬ ಹೇಳುತ್ತಿದ್ದ. ಇರಲಿ, ಕಾಲಾಯ ತಸ್ಮೈ ನಮಃ.

ಮುಂದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮದರಾಸಿಗೆ ಹೋದರೆ ನನ್ನ ಸೈಕಲ್ ಹಿಂಬಾಲಿಸಿತು. ಅಲ್ಲಿಯಂತೂ, ಕ್ಯಾಂಪಸಿನಲ್ಲಿ ಸೈಕಲ್ ಸಾಧಾರಣ ಪ್ರತಿಯೊಬ್ಬ ವಿದ್ಯಾರ್ಥಿಯ ದೈನಂದಿನ ಜೀವನದ ಅವಿಭಾಜ್ಯ ಅಂಗವೇ  ಆಗಿತ್ತು. ದೊಗಲೆ ಜುಬ್ಬಾ, ಪೈಜಾಮ / ಕಾರ್ಡುರಾಯ್ ಅಥವಾ ಜೀನ್ಸ್ ಶರಾಯಿ (ಆಗಿನ್ನೂ ಜೀನ್ಸ್ ಜನಪ್ರಿಯವಾಗುತ್ತಿತ್ತು), ಟಪಕ್ ಟಪಕ್ ಶಬ್ದದ ಹವಾಯಿ ಚಪ್ಪಲಿ, ಬಿರಿಹುಯ್ದ, ಎಣ್ಣೆಕಾಣದ ಕೂದಲು, ಭುಜದ ಮೇಲೊಂದು ಜೋಳಿಗೆ ಚೀಲ, ಇದರೊಂದಿಗೆ ಒಂದು ಸೈಕಲ್ – ಇದು ಅಂದಿನ ಕ್ಯಾಂಪಸ್ ವಿದ್ಯಾರ್ಥಿಯ ಪ್ರಾತಿನಿಧಿಕ ಚಿತ್ರವಾಗಿತ್ತು.ಕ್ಯಾಂಪಸ್ ಒಳಗಿನ ತಿರುಗಾಟಕ್ಕಂತೂ ಸರಿಯೇ ಸರಿ. ಅದರೊಂದಿಗೆ, ಇದ್ದಕ್ಕಿದ್ದಂತೆ ಯಾರೋ ಒಬ್ಬರಿಗೆ ಸೆಕೆಂಡ್  ಶೋ ಸಿನಿಮಾಕ್ಕೆ ಹೋಗುವ ಹುಕಿ ಬಂದು, ಆತ ಬಾಕಿಯವರನ್ನೂ ಎಳೆದುಕೊಂಡು ಕ್ಯಾಂಪಸ್ ಹತ್ತಿರದ ಉಪನಗರಗಳಲ್ಲಿಯ ಥಿಯೇಟರಿನಲ್ಲಿ ತಮಿಳು ಸಿನೆಮಾಕ್ಕೆ ಹೋಗುವುದು, (ಸಿನೆಮಾದ ಹೆಸರು, ನಟನಟಿಯರು ಇದು ಯಾವುದೂ ನಮಗೆ ಮುಖ್ಯವಾಗಿರಲಿಲ್ಲ – ಸಿನಿಮಾಕ್ಕೆ ಹೋಗುವುದು ಮಾತ್ರ) ಆಗಾಗ ಶಾಪಿಂಗ್ ಮಾಡುವುದಕ್ಕೆ ಸಿಟಿಗೆ ಹೋಗುವುದು  ಇತ್ಯಾದಿ ಚಟುವಟಿಕೆಗಳಿಗೂ ಸೈಕಲ್ ಅಮೂಲ್ಯವಾಗಿತ್ತು. ಸಂಜೆ ಹಾಸ್ಟೆಲಿನಲ್ಲಿ ಕೂತು ಬೇಜಾರಾದಾಗ ಸೈಕಲ್ ಹತ್ತಿ ಯಾವುದೋ ಹಾಡು ಗುನುಗುತ್ತಾ, ಸುಮ್ಮನೆ ಕ್ಯಾಂಪಸಿನಲ್ಲೋ, ಅಥವಾ ಹತ್ತಿರದ ಅಡ್ಯಾರ್, ಬೆಸಂಟ್ ನಗರ್ ಪ್ರದೇಶದಲ್ಲಿಯೋ ಗೊತ್ತುಗುರಿಯಿಲ್ಲದೆ ಸುಮ್ಮನೆ ಆರಾಮವಾಗಿ ಸೈಕಲ್ಲಿನಲ್ಲಿ ತಿರುಗಾಡಿಕೊಂಡು ಬರುವುದು ನನ್ನ ಪ್ರಿಯವಾದ ಹವ್ಯಾಸವಾಗಿತ್ತು. ಅದರಲ್ಲಿಯೂ ಬೆಸಂಟ್ ನಗರ್ ಪ್ರದೇಶವು ಸಮುದ್ರ ತೀರದಲ್ಲಿದ್ದ ಕಾರಣ, ಸೈಕಲ್ ಹೊಡೆಯುವಾಗ  ಬೀಸುತ್ತಿದ್ದ ಆಹ್ಲಾದಕರ ಗಾಳಿ ಮನಸ್ಸಿಗೆ ಮುದ ಕೊಡುತ್ತಿತ್ತು.

ಅಲ್ಲಿಯ ನನ್ನ ವಿದ್ಯಾಭ್ಯಾಸ ಮುಗಿದ ಮೇಲೆ ಅಡ್ಯಾರಿನಿಂದ ಚೆನ್ನೈ ಸೆಂಟ್ರಲ್ ಸ್ಟೇಷನ್ ವರೆಗೆ ಸೈಕಲ್ ಹೊಡೆದು ಹೋಗಿ ಅದನ್ನು ಅಲ್ಲಿಯೇ ಟ್ರೇನಿಗೆ ರವಾನೆಗೆ ಏರ್ಪಾಟು ಮಾಡಿ , ಮದರಾಸು ಬಿಟ್ಟೆ. ಬೆಂಗಳೂರಿನಲ್ಲಿ ಸೈಕಲ್ ವಾಪಸ್ ಪಡೆದು , ಊರಿಗೆ ಹೋಗುವ ಬಸ್ಸಿನ ಟಾಪಿನ ಮೇಲೆ ಹಾಕಿಸಿ, ಬಾಕಿ ಸಾಮಾನಿನ ಜೊತೆಗೆ ಊರಿಗೆ ಒಯ್ದೆ. ಊರಿನ ಬಸ್ ನಿಲ್ದಾಣದಲ್ಲಿ ಸೈಕಲ್ ಇಳಿಸಿಕೊಂಡು ಮನೆ ಕಡೆಗೆ ಸೈಕಲ್ ಹೊಡೆಯುವಾಗ, ನಾನು ಬೆಂಗಳೂರು, ಮದರಾಸುಗಳಲ್ಲಿ ಬೇಕಾದ ಹಾಗೆ ಸೈಕಲ್ ತುಳಿದಿದ್ದರೂ, ನಮ್ಮೂರಿನ ರಸ್ತೆಯಲ್ಲಿ ಸೈಕಲ್ ಹೊಡೆಯುತ್ತಿರುವುದು ಇದೇ ಮೊದಲು ಅನ್ನಿಸಿ ವಿಚಿತ್ರ ಅನುಭೂತಿ ಉಂಟಾಯಿತು. ನಾನು ಊರಿನಲ್ಲಿದ್ದಾಗ ಸಣ್ಣಗೆ ಶುರುವಾಗಿದ್ದ, ಸೈಕಲ್ ಬರುವುದಿಲ್ಲ ಎಂಬ ಕೀಳರಿಮೆಯನ್ನು ಬೆಂಗಳೂರಿನಲ್ಲಿ ಗೆದ್ದಿದ್ದೆ. ಮುಂದೆ ಮದರಾಸಿನಲ್ಲಿ ನನ್ನ ಸೈಕಲ್ ನಂಟು ಇನ್ನೂ ಬಲವಾಗಿತ್ತು.

ಮನೆಗೆ ತಂದದ್ದೇನೋ ಸರಿ. ನಾನು ಕೆಲಸಕ್ಕಾಗಿ ಊರು ಬಿಟ್ಟ ಮೇಲೆ ಉಪಯೋಗಿಸುವವರಿಲ್ಲದೆ ನನ್ನ ಸೈಕಲ್ ಅಟ್ಟ ಹತ್ತಿತು. ಅಲ್ಲಿಯೇ ಜಂಗು ತಿನ್ನತೊಡಗಿದ ಅದನ್ನು ಆಮೇಲೆ ಯಾರಿಗೋ ಕೊಟ್ಟುಹಾಕಿದೆವು. ಅಲ್ಲಿಗೆ ನನ್ನ ಪ್ರಿಯಬಂಟನೊಂದಿಗಿನ ಸುಮಾರು ಐದು ವರ್ಷದ ನಂಟು ತೀರಿತು.

ಮುಂದೆ ಕೆಲಸಕ್ಕಾಗಿ ಮುಂಬಯಿ ಸೇರಿದೆ. ಇಲ್ಲಿಯ ದೂರದೂರದ ತಾಣಗಳು, ರಸ್ತೆಯ ಮೇಲಿನ ನಿಬಿಡ ಟ್ರಾಫಿಕ್, ಮುಖ್ಯವಾಗಿ ಮುಂಬಯಿಯ ಎಲ್ಲರನ್ನೂ ಆವರಿಸಿಕೊಳ್ಳುವ ಸಮಯದ ಅಭಾವ , ಇವೆಲ್ಲವುಗಳಿಂದ ಸೈಕಲ್ ತಿರುಗಾಟಕ್ಕೆ ಒಂದು ಪರ್ಯಾಯ ಸಾಧನವಾಗಿ ಉಳಿಯಲಿಲ್ಲ. ಮುಂದೆ ಮದುವೆ, ಸಂಸಾರ ಹೂಡಿಕೆ, ಮಕ್ಕಳು ಇವುಗಳ ಜಂಜಾಟದಲ್ಲಿ ಕ್ರಮೇಣ ಮನಸ್ಸಿನಿಂದ ಸೈಕಲ್ ಮರೆಯಾಯಿತು- ಮಗ ದೊಡ್ಡವನಾಗುತ್ತಿದ್ದಂತೆ ಸೈಕಲ್ಲಿಗಾಗಿ ಅವನ ವರಾತ ಶುರುವಾಗುವವರೆಗೆ. ಸರಿ ಅವನಿಗೂ ಒಂದು ಸೈಕಲ್ ಬಂತು. ಅದರಲ್ಲಿಯೇ ಆತ ನಮ್ಮ ಕಾಲನಿಯ ಗೇಟಿನ ವರೆಗೆ ಹೋಗುತ್ತಿದ್ದ. ಆತ ತಕ್ಕ ವಯಸ್ಸಿನಲ್ಲಿಯೇ ಸೈಕಲ್ ಕಲಿತು ಬಿಟ್ಟಿದ್ದರಿಂದ ನನ್ನ ಕೀಳರಿಮೆಯ ಪರಿಪಾಟಲು ಅವನಿಗೆ ಬರಲಿಲ್ಲ.

ಮುಂದೆ ಆತನೂ ಕಾಲೇಜಿಗಾಗಿ ಮುಂಬಯಿ ಬಿಟ್ಟುಹೋಗಿ, ಅವನ ಸೈಕಲ್ ಅನಾಥವಾಯಿತು.  ಹಾಗೆಯೇ ಬಿದ್ದಿದ್ದ ಆ ಸೈಕಲ್ ನೋಡಿ , ಒಮ್ಮೆ ಯೋಚನೆ ಬಂತು ಹತ್ತಿರದ ಮಾರ್ಕೆಟ್ಟಿಗೋ, ಬ್ಯಾಂಕಿಗೋ ಸ್ಕೂಟರು, ಕಾರು ಬದಲು ಸೈಕಲ್ ಯಾಕೆ ಉಪಯೋಗಿಸಬಾರದು ಅಂತ. ಸರಿ ಮುಂದೊಂದು ದಿನ ಸೈಕಲ್ ಹೊಡೆದು ಮಾರ್ಕೆಟ್ಟಿಗೆ ಹೋಗಿ ತರಕಾರಿ ತಂದೆ. ವಾಪಸು ಬರುವಾಗ ಮನೆಯ ಹತ್ತಿರದ ಉಬ್ಬಿನಲ್ಲಿ ಪೆಡಲ್ ತುಳಿಯುವಾಗ ಏದುಬ್ಬಸ ಬಂತು. ಮೈಕೈ ನೋವಾಗಿ ಮೂರು ದಿವಸ ಒದ್ದಾಡಿ ಹೆಂಡತಿಯ ಕೈಯ ಔಷಧಿಯೊಂದಿಗೇ ಗೇಲಿಮಾತುಗಳನ್ನೂ ಸೇವಿಸಿದೆ. ಈಚೆಗೆ ಆ ಸೈಕಲ್ ಕೂಡ ಯಾರಿಗೋ ಕೊಟ್ಟುಬಿಟ್ಟೆವು.

ಹೀಗಾಗಿ ನನ್ನ ಜೀವನದಲ್ಲಿ ಈಗ ಸೈಕಲ್ ಇಲ್ಲ.ಆದರೂ, ವಾಹನಗಳಿಂದ ವಾತಾವರಣಕ್ಕೆ ಹಾನಿಯಾಗುತ್ತಿದೆ, ಅದಕ್ಕೆ ಒಂದು ಪರಿಹಾರ ಸೈಕಲ್ ಎಂದೆಲ್ಲಾ ಓದುವಾಗ ಮುಂದೊಂದು ದಿನ ಮತ್ತೆ ಸೈಕಲ್ ರಸ್ತೆಯ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡೀತು ಎಂಬ ಆಸೆ ಹುಟ್ಟುತ್ತದೆ. ಸೈಕಲ್‍ನಲ್ಲಿಯೂ ಬಹಳಷ್ಟು ಸುಧಾರಣೆಯಾಗಿವೆ. ಹಗುರ ಅಲ್ಯೂಮಿನಿಯಂ ಫ್ರೇಮುಗಳು, ವಿಶೇಷ ಟೈರುಗಳು, ಇನ್ನಿತರ ಸೌಲಭ್ಯಗಳು ಇವೆಲ್ಲಾ ಬಂದಿವೆ. ಕೆಲವು ಲಕ್ಷದ ಬೆಲೆಬಾಳುವ ಸೈಕಲ್ಲುಗಳೂ ಇವೆ. ಕಾರು, ಬಂಗಲೆ ಇತ್ಯಾದಿಗಳನ್ನು ಖರೀದಿಸುವ ಮಧ್ಯಮ ವರ್ಗದ ಕನಸುಗಳ ತರಹ,  ನನಗೂ,  ಈ ಲಕ್ಷಾಂತರ ರೂಪಾಯಿಯ ಸೈಕಲ್ಲನ್ನು ಒಂದಲ್ಲ ಒಂದು ದಿನ ಕೊಂಡುಕೊಳ್ಳಬೇಕು  ಅನ್ನುವ ಬಯಕೆ ಅಪರೂಪಕ್ಕೊಮ್ಮೆ ಮನಸ್ಸಿನಲ್ಲಿ ಮೂಡಿ ಮರೆಯಾಗುತ್ತದೆ. ಆಸೆಯೆಂಬ ಬಿಸಿಲುಗುದುರೆ……ನೋಡಬೇಕು.

(ಮೈಸೂರು ಅಸೋಸಿಯೇಷನ್, ಮುಂಬಯಿಯ “ನೇಸರು” ಪತ್ರಿಕೆಯಲ್ಲಿ ಪ್ರಕಟವಾಗಿತ್ತು)

—-