ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಿಂಗಾಲದ ಸೂರು, ಸಾವಿರ ಸೋರು

ಬೆಂಶ್ರೀ ರವೀಂದ್ರ
ಇತ್ತೀಚಿನ ಬರಹಗಳು: ಬೆಂಶ್ರೀ ರವೀಂದ್ರ (ಎಲ್ಲವನ್ನು ಓದಿ)

ಬದುಕು ಕಡಲಿಂಗೆ ಉಸಿರ ಬಿಸಿಯೊತ್ತಿ
ಆವಿಯಾಗಿವೆ ನೆನಪು ಪುಂಖಾನುಪುಂಖ
ಸೂರ್ಯನುರಿ ಧಗೆಗೆ ಬಿರ್ರನೆ  ಮೇಲೆದ್ದು
ಕೂಡಿ ತಂಪಾಗಿವೆ ತೂಗಿ ಕರಿಮಡುವನು 

ಬುವಿಯನಪ್ಪಿ  ಬಾನ ಮರೆಮಾಡಿ ನೆನಪು
ದಭದಭಿಸಿ ತೂತು ಮಾಡಿದೆ ಮುರಿದು
ಹಿಂಗಾಲದ ಛತ್ರಿ ಸಾವಿರ ಸೋರು ಚೂರು
ಬಾನ್ಕಡಲ ಸೂರ್ಚಂಡು, ಬಾಸುಂಡೆ ಮೈಯಿ

ನೆನಪು ಮನದ ಬಾವು ಅದಕ್ಕೆಲ್ಲಡೆ ತಾವು
ಸುತ್ತುತ್ತ ಮೇಲೆ‌ ಕೆಳಗೆ ಅಲ್ಲಲ್ಲೆ ಠಳಾಯಿಸಿ
ಹರಿದಿತ್ತು ಬಾಳ ಚಾಪೆ ಹಳೆಹುಲ್ಲ ಎಸಳು
ಹೊಂದುವುದೆ ಹುಡುಗ ಹೆಣಿಗೆ ಚಕಮಕಿಗೆ

ಕಲ್ಪನೆಯ ಟಗರುಗಳು ಹೂಂಕರಿಸಿ ನುಗ್ಗಿ ತಲೆ
ತಲೆಢಕ್ಕಾಢಿಕ್ಕಿ ಒಡೆಯುವುದೆ ಕಟ್ಟಿಟ್ಟ ಬುತ್ತಿ
ಭಾವದೇಣಿಯ ನೂಲು ಎರೆಮಣ್ಣ  ಪಾಲು
ಭೂಮ್ಯಾಕಾಶದಲಿ ಜೋತಾಡುತ್ತಾ  ತ್ರಿಶಂಕು

ಹೋಗೆಂದರೆ ಹೋಗಲಾರೆನೆನುವ  ಒಮ್ಮೆ 
ಕಳವಳ ಕಾವಳದ ಕಾಜಾಣವಾಗಿ ಮತ್ತೊಮ್ಮೆ
ಮನದಿಂಪಿಗೆ ಪರಪುಟ್ಟನುಲಿಯಾಗುವ ನೆನಪೆ
ಇದ್ದುಬಿಡು ಕನಲದೆ ಒಲಿದು ಒಡನಾಡಿಯಾಗಿ

ಆಗ ನನಗೂ ನಿನಗೂ ಇಬ್ಬರಿಗೂ ಆರಾಮು