ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅಳಿದುಳಿದದ್ದು…..!

ಭಾವ ಸಮುದ್ರದ ಸುನಾಮಿ ಉಕ್ಕಿದರೆ ಉಂಟಾಗುವ ಎಲ್ಲ ತಲ್ಲಣ ಗಳನ್ನೂ ಪ್ರಸ್ತುತ ಪಡಿಸುವ ಕವಿತೆಯಲ್ಲಿ ಅಕ್ಷರಗಳೂ ಭಾವದಲಿ ಭಾರದವು... ಶಿವಲೀಲಾ ಹುಣಸಗಿ ಅವರ ಈ ಭಾವ ಪೂರ್ಣ ಕವಿತೆ..!
ಶಿವಲೀಲಾ ಹುಣಸಗಿ
ಇತ್ತೀಚಿನ ಬರಹಗಳು: ಶಿವಲೀಲಾ ಹುಣಸಗಿ (ಎಲ್ಲವನ್ನು ಓದಿ)

ಶಾಂತ ಸಾಗರದ ಕೋಮಲ ಭಾವದಲೆಗಳು
ಒಮ್ಮೆಲೇ ಬರಸಿಡಿಲು ಬಡಿದಂತಾಗಿ
ಕಂಪನದ ಕಿಡಿ ಹೊತ್ತಿ ಉರಿದು
ನಿರ್ಲಿಪ್ತ ಭಾವಕೆ ಕೊಳ್ಳಿಯಿಟ್ಟು,ದಂಗೆಯೆಬ್ಬಿಸಿ
ನಿದ್ದೆಗೆಡಿಸಿದಾ ಹಗಲುಗಳೆಲ್ಲ
ಇರುಳಾಗಿ‌ ಕಾಡಿದ್ದು ಹೀಗೆಯಲ್ಲವೇ ?

ನನ್ನೆಲ್ಲ ಅಹಂ ಗಾಳಿಗೆ ತೂರಿದಾಂಗೆ.
ರಣಹದ್ದುಗಳಿಗೆ ಉಣಬಡಿಸಿದಾಂಗೆ
ಇಷ್ಟೊಂದು ಭೀಕರತೆ ಬೆನ್ನಹತ್ತಿದ್ದೆಕೇಂಬ ಪ್ರಶ್ನೆ?
ಯ್ಯಾರ ಮೇಲೆ ಮುನಿಸೋ ಉತ್ತರ ಹೇಳುವರಾರು?
ಕಂಪನದ ಅಲೆಗಳೆಲ್ಲ ನುಂಗಿ ನೀರ ಕುಡಿದಿವೆ.
ಇನ್ನೇನು ಉಳಿದಿಲ್ಲ ಅಸ್ಥಿರ ಭಾವ ಬಿಟ್ಟು..!
ಸಾವನರಸುವ ಯಾತ್ರಿಯಂತೆ ತೇಲುತಿದೆ ಮನ.
ನಗ್ನ ಸತ್ಯದ ಎದುರು ಮೂಕವೇದನೆ.
ಮಿಂಚಿನ ಹೊಳಪಿಗೆ ಇರುಳು ಮರೆಯಾದಂತೆ

ಇನ್ನೊಮ್ಮೆ ಆರ್ಭಟಿಸು,ಹೃದಯ ಕಂಪಿಸಲಿ ಇಲ್ಲವೇ
ನಿಶ್ಯಬ್ದವಾಗಲಿ ಎದೆಯೊಳಡಗಿದ ಉಸಿರು.
ಸುಟ್ಟರಾದರೂ ಬೂದಿಯಾಗಬಹುದು..
ಧರೆಯ ಗರ್ಭದಲಿ ಮೌನವಾಗಿ ಲೀನ.
ಸ್ವರ್ಗಕಾ,ನರಕಕ್ಕಾ ಹೋದರೆಂದು ದಾಖಲೆಯ.
ಇಡುವವರಾರು?. ಈ ದೇಹವೇ ನಶಿಸಿದಾಗ
ನನ್ನದೆಂಬುದೇನು ಉಳಿದಿಲ್ಲ. ಎಲ್ಲವೂ.
ಬಿರುಗಾಳಿಗುಂಟ ಹಾರಿ, ಸುಳಿಯಲಿ ಸಿಲುಕಿ
ಮಿಂಚಿನಲ್ಲಿ ಮಂಕಾಗಿದ್ದು ಗೊತ್ತಿಲ್ಲ.
ನಾನಿನ್ನು ಅರೆ ಸತ್ತ ಹೆಣವಾಗಿ ನೋಡುತಿರುವೆನಲ್ಲ

ಪಾದಗುಂಟ ಏರಿ ಬಂದ ಹಾವು ಆಶ್ರಯ ಬೇಡಿದ್ದು,
ವಿಪರ್ಯಾಸ ಮರಣ ಯಾರ ಕೈಯಲಿ?
ಊರಿಗೆ ಊರೇ ಸ್ಮಶಾನವಾದರೂ..
ನಾನಿನ್ನು ಉಸಿರಾಡುತ್ತಿರುವೆ? ಕರ್ಮವೆನ್ನಲೇ?
ಕೂಗಿ ಕರೆಯಲು ಬಾಯಿಲ್ಲ..
ಕೈ ಬೀಸಿ ಕರೆಯಲು ಕೈಗಳಿಲ್ಲ..!
ಎದ್ದು ಓಡಲು ತ್ರಾಣವಿಲ್ಲ..
ಕೊಳೆವ ನನ್ನ ದೇಹಕೆ ನಾನೇ ಸಾಕ್ಷಿ.!
ನನ್ನ ಸುತ್ತಲೂ ಹೆಣಗಳಾ ರಾಶಿ
ಭಯವೆಲ್ಲ ಮಾಯವಾಗಿ,ಕಣ್ಣೀರು ಬತ್ತಿಹೋಗಿದೆ
ಕನಿಕರಿಸು ಮನವೆಂಬ ಕಡಲಿಂದ ಮುಕ್ತಗೊಳಿಸೆನ್ನ..