ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನಂದಿನಿ ಹೆದ್ದುರ್ಗ
ಇತ್ತೀಚಿನ ಬರಹಗಳು: ನಂದಿನಿ ಹೆದ್ದುರ್ಗ (ಎಲ್ಲವನ್ನು ಓದಿ)

೧)
‘ಅವನ ಮಾಸಲು ನೆನಪುಗಳನ್ನು
ಹಚ್ಚಿಕೊಂಡಿದ್ದೇನೆ.’
ತಗ್ಗಿದ ಸ್ವರದಲ್ಲಿ ನಾನೆಂದೆ
‘ನಾ ನಿನ್ನ ಪ್ರೀತಿಸುತ್ತೇನೆ’
ಇವನೆಂದ

‘ನಿನ್ನ ಕಣ್ಣಿಗಿಳಿದು ಅವನ
ಹುಡುಕುತ್ತೇನೆ’
ನಾನೆಂದೆ
‘ನಿನ್ನ ಬೆಳಕಿನಲ್ಲಿ
ನಾ ನನ್ನೇ ಕಾಣುತ್ತೇನೆ’
ಇವನೆಂದ

ನಿಟ್ಟುಸಿರಿಟ್ಟು ಮತ್ತೆ
ಏರತೊಡಗಿದೆ ಮೆಟ್ಟಿಲು
ಅಚಾನಕ್ಕು ಅಲ್ಲಿ!
ಆ ಎತ್ತರದಲ್ಲಿ ಅವನಿದ್ದ

ನಾನಿವನ ಬೆರಳು
ಹಿಡಿದು ಸೂರ್ಯಾಸ್ತ
ನೋಡಿದೆ.

–*—*—*–

೨)
ಹಾಗೆ
ಅಂದುಕೊಂಡ​
ಮೊದಲ ದಿನ
ಅದು
ಮಾಮೂಲಿನಂತಿದ್ದೆ

ಮೂರನೇ ದಿನ
ಬರೀ ಹುಃಗುಟ್ಟೆ
ಮನಸ್ಸೆಲ್ಲಿದೆ ಎಂದ
ಆರನೇ ದಿನ
ನಡುನಡುವೆ
ಆಕಳಿಸಿದೆ
ಆರಾಮಿಲ್ಲವೇ ಎಂದ

‘ಚಿನ್ನಾ ಮುದ್ದು ಪುಟ್ಟು’
ಎಂದ
ಸೊಟ್ಟಗೆ ನಕ್ಕೆ
ಆತ್ಮವೆಂದ
ಆಯಾಸವೆಂದೆ
ವಿಧಿಚಿತ್ತವೆಂದ
ವಿಷಯಾಂತರಗೈದೆ

ಹತ್ತನೇ ದಿನಕ್ಕೆ
ರೆಕ್ಕೆ ಬಲಿಯಿತು
ಎಂದೆ

ಏನು ಮಾಡಲಿ ಎಂದ
ಬಿಡುವಿಲ್ಲವೆಂದೆ
ಕಾಯುತ್ತೇನೆ ಎಂದ
ಖಾಲಿ ಮಾಡಿದೆ ಎಂದೆ

ತಿಂಗಳು
ತುಂಬುವಷ್ಟರಲ್ಲಿ
ತಣ್ಣಗಾದ.
ಕಣ್ಣೀರಾದ
ಸಾವರಿಸಿಕೊಂಡ
ಸಂಕಟವ ಹೇಳಿದ
ಸುಳ್ಳಾಡಬೇಡೆಂದ

ಮೆಟ್ಟಿಲುಗಳಲೀಗ
ಹೊಸಹಾಡು ಎಂದೆ
ಕಡಿದ ಬಾಳೆಯಂತಾದ
ಮರೆಯಲಾರೆ ಎಂದ
ಮೀಸಲು ನಿನಗೆಂದ

ಎಲ್ಲಕ್ಕೂ ಇಲ್ಲ
ಎಂದೆ
ನಲ್ಲೆ ಎಂದ
ಒಲ್ಲೆ ಎಂದೆ
ಕೊಂದೆ ಎಂದ
ವೃಥಾ
ಬಂಧವೆಂದೆ

ಅಯ್ಯೋ..
ನನ್ನ ಹುಚ್ಚೇ
ಅವನಿರದ ದಿನಗಳಲಿ
ಖರೆ ನನ್ನಿರುವು
ತಿಳಿಯಬೇಕಿತ್ತು
ಸಾಸಿವೆ ಹೊಲದಲ್ಲಿ
ಸಾಲಕ್ಕೆ ಸಾವು
ಕೇಳಬೇಕಿತ್ತು