ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕನ್ನಡದ ಕುರಿತು ಸಮಾನಾಸಕ್ತಿ

ಡಾ. ಕೆ ವಿ ತಿರುಮಲೇಶ್
ಇತ್ತೀಚಿನ ಬರಹಗಳು: ಡಾ. ಕೆ ವಿ ತಿರುಮಲೇಶ್ (ಎಲ್ಲವನ್ನು ಓದಿ)

ವಿಚಾರಯೋಗ್ಯ ಸಲಹೆಗಳು: ವ್ಯಾಕರಣ, ಪಾರಿಭಾಷಿಕ ಪದ
ಕನ್ನಡದ ಕುರಿತಾಗಿ ಸಮಾನಾಸಕ್ತಿಯಿರುವವರೆಲ್ಲ ಗಂಭೀರವಾಗಿ ಪರಿಗಣಿಸಬೇಕಾದ ಲೇಖನ ಡಿ.ಎನ್.ಎಸ್.ರ ಕನ್ನಡದಲ್ಲಿ ನಾವು ಮಾಡಲೇಬೇಕಾಗಿರುವ ಕೆಲವು ಮಾರ್ಪಾಡುಗಳು.ಆದರೆ ಭಾಷೆಯಂಥ ಸಾರ್ವಜನಿಕವೂ ಸೂಕ್ಷ್ಮವೂ ಆದ ವಿಷಯದ ಮೇಲೆ ಪೂರ್ತಿ ಒಮ್ಮತವಿರುವುದು ಸಾಧ್ಯವಿಲ್ಲ;ಬಹುಶಃ ಅದನ್ನು ಡಿ.ಎನ್.ಎಸ್. ನಿರೀಕ್ಷಿಸುವುದೂ ಇಲ್ಲವೆಂದು ತಿಳಿದಿದ್ದೇನೆ.ಈ ಲೇಖನದ ಬಗ್ಗೆ ನನಗೆ ಮಿಶ್ರ ಪ್ರತಿಕ್ರಿಯೆಗಳಿವೆ.ಮೊದಲನೆಯದಾಗಿ,ನಾನು ಸಹಸ್ಪಂದನ ನೀಡಬಹುದಾದ ಕೆಲವು ವಿಚಾರಗಳು.

ತ್ರಿಶಂಕು ಪದಗಳ ಬಳಕೆ ಕನ್ನಡಕ್ಕೆ ಬೇಕಾಗಿಲ್ಲ’ ಎಂಬ ಅವರ ಮಾತು. ನಿಜ, ಕೆಲವೊಂದು ಪಾರಿಭಾಷಿಕ ಪದಗಳನ್ನು ಸಂಸ್ಕೃತದಿಂದ ರಚಿಸಿದಾಗ ಅವು ಸ್ಥಳಾಂತರಿಸಬೇಕಾದ ಇಂಗ್ಲಿಷ್ ಅಥವಾ ಅಂಥದೇ ಅನ್ಯದೇಶೀಯ ಪದಗಳಿಗಿಂತ ನಮಗೆ ವಿಚಿತ್ರವೆನಿಸುತ್ತವೆ. ಆದ್ದರಿಂದ ಕನ್ನಡ ಮೂಲ’ದ ಪದಗಳನ್ನು ಆವಿಷ್ಕರಿಸುವುದಾದರೆ ಅದು ಸ್ವಾಗತಾರ್ಹವೇ. ‘ಅಥವಾ’ ಸಂಸ್ಕೃತಜನ್ಯ ಪದವಾದರೂ ನನಗೆ ವೈಯಕ್ತಿಕವಾಗಿ ವಿರೋಧವೇನೂ ಇಲ್ಲ—ಅಂಥ ಪದಗಳು ಉಚ್ಚರಿಸುವುದಕ್ಕೆ ಮತ್ತು ಅರ್ಥವಾಗುವುದಕ್ಕೆ ಅನುಕೂಲವಾಗಿದ್ದರೆ ಸಾಕು. ಇಪ್ಪತ್ತನೇ ಶತಮಾನದ ಆರಂಭದಲ್ಲಿ ಬಳಕೆಗೆ ಬಂದ ಆಕಾಶವಾಣಿ,ಬೀಜಗಣಿತ,ಕರ್ಣ,ಭಾಜಕ,ಭಾಜ್ಯ,ಶೇಷ,ಆಖಾತ,ಸರೀಸೃಪ,ರಸಾಯನಶಾಸ್ತ್ರ ಮುಂತಾದ ಪದಗಳು ಹೀಗಿದ್ದುವು.ಆಮೇಲೆ ಯಾಕೋ ಈ ಒರತೆ ನಿಂತುಹೋಯಿತು.ಈಗ ನಾನು ಇಂಗ್ಲಿಷ್ ಮೂಲದ ವೈಜ್ಞಾನಿಕ ಪದಗಳನ್ನೂ ಸ್ವಾಗತಿಸಬಲ್ಲೆ.ವಾಸ್ತವದಲ್ಲಿ ನಾವು ಯಾವುದನ್ನು ಇಂಗ್ಲಿಷ್ಅಂದುಕೊಂಡಿದ್ದೇವೋ ಅವು ಹೆಚ್ಚಿನವೂ ಗ್ರೀಕ್ ಮತ್ತು ಲ್ಯಾಟಿನ್ ಮೂಲದವು.ಡಿ.ಎನ್.ಎಸ್.ರ 'ತ್ರಿಶಂಕು' ವಿಶೇಷಣ ಅವಕ್ಕೂ ಸಲ್ಲುತ್ತವೆ.ಭಾಷೆಯೊಂದು ಪದಾವಿಷ್ಕರಣೆ ಮಾಡುವಾಗ ಅಭಿಜಾತ ಮೂಲಗಳ ಮೊರೆ ಹೋಗುವುದೇನೂ ಹೊಸತಲ್ಲ.ಆದ್ದರಿಂದ ಈ ಮಟ್ಟಿಗೆ ನಾವು ಸಂಸ್ಕೃತವನ್ನು ತಬ್ಬಿಕೊಳ್ಳುವುದೂ ಬೇಕಿಲ್ಲ,ದೂರವಿರಿಸುವುದೂ ಬೇಕಿಲ್ಲ.

ಇಂದು ಶಾಲೆಗಳಲ್ಲಿ ಉಪಯೋಗಿಸುವ ಕನ್ನಡ ವ್ಯಾಕರಣ ಹಾಗೂ ಪಾಠಕ್ರಮದ ಬಗ್ಗೆ ಡಿ.ಎನ್.ಎಸ್. ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಶಾಲೆಗಳಲ್ಲಿ ನಿಜಕ್ಕೂ ಏನು ನಡೆಯುತ್ತಿದೆಯೋ ನನಗೆ ತಿಳಿಯದು. ಆದರೆ ವ್ಯಾಕರಣದ ಮಟ್ಟಿಗೆ ಹೇಳುವುದಾದರೆ, ಕನ್ನಡ ವೈಯಾಕರಣಿಗಳು ಸಂಸ್ಕೃತ ವ್ಯಾಕರಣವನ್ನೊಂದು ಮಾದರಿಯಾಗಿ ತೆಗೆದುಕೊಂಡುದು ಎಲ್ಲರಿಗೂ ಗೊತ್ತಿರುವ ವಿಷಯ. ಕೇವಲ ವ್ಯಾಕರಣದಲ್ಲಿ ಮಾತ್ರವೇ ಅಲ್ಲ, ಸಾಹಿತ್ಯ, ಛಂದಸ್ಸು, ಅಲಂಕಾರಗಳಲ್ಲೂ ಈ ಅನುಸರಣೆ ನಡೆಯುತ್ತ ಬಂದಿದೆ. ಆದರೆ ಸಾಹಿತ್ಯದಲ್ಲಿ ಸಲ್ಲುವುದೆಲ್ಲವೂ ಭಾಷೆಯಲ್ಲಿ ಸಲ್ಲಬೇಕೆಂದಿಲ್ಲ. ಪ್ರತಿಯೊಂದು ಭಾಷೆಯೂ ಒಂದು ಭಾಷಾ ಪರಿವಾರಕ್ಕೆ ಸೇರಿದುದಾಗಿದ್ದು ಅದಕ್ಕೆ ಪರಿವಾರದ `ವಜಾಯ’ವಿರುವಂತೆಯೇ ಸ್ವಂತಿಕೆಯೂ ಇರುತ್ತದೆ. ಭಾಷಾ ಪರಿವಾರಗಳಂತೂ ಪರಸ್ಪರ ಮತ್ತಷ್ಟು ಭಿನ್ನವಾಗಿರುತ್ತವೆ. ಹೀಗೆ ನೋಡಿದರೆ ಸಂಸ್ಕೃತ ಇಂಡೋ-ಯುರೋಪಿಯನ್ ವರ್ಗಕ್ಕೆ ಸೇರಿದ್ದು; ಕನ್ನಡ ದ್ರಾವಿಡ ವರ್ಗಕ್ಕೆ ಸೇರಿದ್ದು. ಆದ್ದರಿಂದ ಕನ್ನಡಕ್ಕೆ ಕನ್ನಡದ್ದೇ ಆದ ವ್ಯಾಕರಣ ಬೇಕೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹಿಂದಿನ ಕನ್ನಡ ವೈಯಾಕರಣಿಗಳಿಗೆ ಇದು ಗೊತ್ತಿರಲಿಲ್ಲವೇ? ಅವರೊಂದು ಜ್ಞಾನ ಪರಂಪರೆಗೆ ಸೇರಿದವರಾಗಿದ್ದು, ಸಂಸ್ಕೃತ ವ್ಯಾಕರಣವನ್ನು ಮಾದರಿಯಾಗಿ ತೆಗೆದುಕೊಂಡರು ಎನ್ನಬಹುದು. ಇಂಗ್ಲಿಷ್ ವ್ಯಾಕರಣ ಚರಿತ್ರೆಯನ್ನು ನೋಡಿದರೆ ಅಲ್ಲಿ ಲ್ಯಾಟಿನ್ ಮಾದರಿಯನ್ನು ಕಾಣುತ್ತೇವೆ. ಹಿಂದೆ ಹೇಳಿದಂತೆ, ಬೆಳೆಯುವ ಭಾಷೆಯೊಂದು ಅಭಿಜಾತ ಭಾಷೆಯ ಮಾದರಿಯನ್ನು ತೆಗೆದುಕೊಂಡರೆ ಅದರಲ್ಲಿ ಆಶ್ಚರ್ಯವಿಲ್ಲ. ಮಾತ್ರವಲ್ಲ, ಭಾಷೆಯ ಮತ್ತು ವ್ಯಾಕರಣದ ಕುರಿತಾದ ಸಂಪ್ರದಾಯಸ್ಥ ಧೋರಣೆಯೂ ನಮ್ಮದಕ್ಕಿಂತ ಭಿನ್ನವಾಗಿತ್ತು: ವ್ಯಾಕರಣವೆಂದರೆ ವಾಙ್ಮಯ ಭಾಷೆಯ ನಿಯಮಾವಳಿ ಎಂದು ಅವರು ತಿಳಿದಿದ್ದರು. ಇದು ಕಾಲಘಟ್ಟವೊಂದರ ಮನಃಸ್ಥಿತಿ. ಈಗ ಬೆಳೆದು ನಿಂತ ನಾವು ಆಧುನಿಕ ಭಾಷಾವಿಜ್ಞಾನದ ಹೊಸ ಅರಿವಿನಲ್ಲಿ ನಮಗೆ ಬೇಕಾದ ವ್ಯಾಕರಣವನ್ನು ರಚಿಸಬಹುದು. ಆದರೆ ಅದಕ್ಕೆ ಹಿಂದಿನವರನ್ನು ದೂಷಿಸುವ ಅಗತ್ಯವಿಲ್ಲ.

ಕಲಿಸಬೇಕಾದ್ದು ವ್ಯಾಕರಣವನ್ನಲ್ಲ, ವ್ಯಾಕರಣಪ್ರಜ್ಞೆಯನ್ನು

ಇಲ್ಲಿಯೂ ಎಚ್ಚರಿಕೆಯ ಮಾತೊಂದನ್ನು ಹೇಳಬೇಕಾಗುತ್ತದೆ: ಮುರಿಯುವುದು ಸುಲಭ, ಕಟ್ಟುವುದು ಸುಲಭವಲ್ಲ. ಡಿ.ಎನ್.ಎಸ್. ಕನ್ನಡದ ವಿಭಕ್ತಿಪ್ರತ್ಯಯಗಳು ಹೇಗೆ ಸಂಸ್ಕೃತಕ್ಕಿಂತ ಭಿನ್ನವಾಗಿವೆ ಎಂದು ಸರಳವಾಗಿ ಹೇಳುತ್ತ ಕನ್ನಡದ ಪ್ರತ್ಯಯಗಳಿಗೆ ಅವುಗಳದೇ ಆದ ಅರ್ಥಗಳಿರುವುದರಿಂದ ಪ್ರತ್ಯಯ ಮತ್ತು ಕಾರಕಗಳೆಂಬ ವ್ಯತ್ಯಾಸದ ಅಗತ್ಯವಿರುವುದಿಲ್ಲ ಎನ್ನುತ್ತಾರೆ. ಸರಿಯೇ ಎಂದುಕೊಳ್ಳೋಣ. ಆದರೆ ಈ ಕಾರಕ-ಪ್ರತ್ಯಯಗಳನ್ನು ಒಂದುಗೂಡಿಸುತ್ತಲೇ ಸಮಸ್ಯೆಯೇನೂ ಕಡಿಮೆಯಾಗುವುದಿಲ್ಲ. ಡಿ.ಎನ್.ಎಸ್. ಅನ್ನು' ಪ್ರತ್ಯಯವನ್ನು ಬಾಧಿತ’ ಎಂದು ಕರೆಯುತ್ತಾರೆ. ಆದರೆ ನಾನೊಂದು ಪುಸ್ತಕ(ವನ್ನು) ಓದಿದೆ' ಎನ್ನುವುದಕ್ಕೂ ನಾನೊಂದು ಪುಸ್ತಕ(ವನ್ನು) ಬರೆದೆ’ ಎನ್ನುವುದಕ್ಕೂ ವ್ಯತ್ಯಾಸವಿದೆ. ಒಂದರಲ್ಲಿ ಪುಸ್ತಕ ಬಾಧಿತ'ವಾದರೆ ಇನ್ನೊಂದರಲ್ಲಿ ಅದು ನಿರ್ಮಿತ’! ಈಗ ನಾವು 'ನಿರ್ಮಿತ'ವೂ ಒಂದರ್ಥದಲ್ಲಿ ‘ಬಾಧಿತ’ವೇ ಎನ್ನಬೇಕಾಗುತ್ತದೆ. ಮನೆ ಸುಟ್ಟುಹೋಯಿತು'ಎಂಬಲ್ಲಿ ಮನೆ’ಗೆ ಯಾವ ಪ್ರತ್ಯಯವೂ ಬರುವುದಿಲ್ಲ; ಆದರೂ ಅದು ಬಾಧಿತ’ವೇ. ‘ಇಂದ’ ಎನ್ನುವುದು ಚಲನೆಯ ಮೂಲ ಸರಿ. ಆದರೆ ಅಕ್ಕಿಯಿಂದ ಕಸ 'ತೆಗೆ'ಯುವುದಕ್ಕೂ, ಹತ್ತಿಯಿಂದ ನೂಲು ‘ತೆಗೆ’ಯುವುದಕ್ಕೂ ವ್ಯತ್ಯಾಸವಿದೆ. ಒಂದರಲ್ಲಿ ಅದು ಚಲನೆಯ ಮೂಲವಾಗಿರಬಹುದು; ಇನ್ನೊಂದರಲ್ಲಿ ಅದು ಮೂಲ ಪದಾರ್ಥವಾಗುತ್ತದೆ. ಅದೇ ರೀತಿ, ಚರಕದಿಂದ ನೂಲು 'ತೆಗೆದೆ' ಎನ್ನುವುದು ಕೂಡಾ ಸಲಕರಣೆಯನ್ನು ಸೂಚಿಸುತ್ತದೆಯೇ ವಿನಾ ಚಲನೆಯ ಮೂಲವನ್ನಲ್ಲ; ಈಗ ನಾವು ಸಲಕರಣೆಯೂ ಚಲನೆಯ ಇನ್ನೊಂದು ಮೂಲ ಎಂದು ವಾದಿಸಬೇಕಾಗುತ್ತದೆ. ‘ಗೆ’ ಎನ್ನುವುದು ಗುರಿಯನ್ನು ಸೂಚಿಸುತ್ತದೆ ಎಂದಾದರೆ ನನಗೆ ನಗು ಬರುತ್ತದೆ' ಎನ್ನುವಲ್ಲಿ ನಗು ಎಲ್ಲಿಂದಲೋ ಬಂದು ನನ್ನನ್ನು ಸೇರಿಕೊಂಡಿತು ಎಂದು ಭಾವಿಸಬೇಕೇ?ಪೆಟ್ರೋಲಿಗೆ ತುಂಬಾ ಕ್ರಯ’, ಈ ಕೋಣೆಗೆ ಕಿಟಕಿಯೇ ಇಲ್ಲ,'ಹಾಗೂ ಹತ್ತು ಗಂಟೆಗೆ ಕ್ಲಾಸು ಸುರುವಾಯಿತು’ ಎನ್ನುವಲ್ಲೆಲ್ಲಾ ‘ಗೆ' ಗುರಿ ಇದೆಯೇ?ಅಲ್ಲಿ’ ಜಾಗವನ್ನು ಸೂಚಿಸುವುದಾದರೆ, ನಾನು ಹೋಟೆಲಿನಲ್ಲಿ ಊಟಮಾಡಿದೆ'(ಜಾಗ:ನೀನು ಎಲ್ಲಿ ಊಟಮಾಡಿದೆ?) ಎನ್ನುವುದಕ್ಕೂ ನಾನು ತಟ್ಟೆಯಲ್ಲಿ ಊಟಮಾಡಿದೆ' (ಬಳಸಿದ ವಸ್ತು: ನೀನು ಹೇಗೆ ಊಟಮಾಡಿದೆ?) ಎನ್ನುವುದಕ್ಕೂ ಅಭೇದ ಕಲ್ಪಿಸಿದಂತೆ! ನಾನು ಕಾರಿನಲ್ಲಿ ಬಂದೆ' ಎನ್ನುವುದು ಕೂಡಾ ಅಲ್ಲಿ'ಗೆ ಒಂದು ಸಮಸ್ಯೆಯೇ ಸರಿ. ಅಲ್ಲಿ' ಎನ್ನುವುದು ಕಾಲಸೂಚಕವೂ ಆಗಬಹುದು:ಹತ್ತು ದಿನಗಳಲ್ಲಿ ದುಡ್ಡು ವಾಪಸುಮಾಡಬೇಕು,' ಈ ಕಾಲದಲ್ಲಿ ಎಲ್ಲವೂ ದುಬಾರಿ' ಎಂದು ಮುಂತಾಗಿ. ಈಗ ನಾವು ಜಾಗ'ದ ಅರ್ಥವನ್ನು ಕಾಲಾವಧಿಗೂ ವಿಸ್ತರಿಸಿಕೊಳ್ಳಬೇಕಾಗುತ್ತದೆ. ಈ ಸಮಸ್ಯೆಗಳು ಸಂಸ್ಕೃತದ ಮಾದರಿಯನ್ನು ಅನುಸರಿಸಿದರೂ ಇರುತ್ತವೆ ನಿಜ. ನಾವು ಒಂದರ ಜಾಗದಲ್ಲಿ ಇನ್ನೊಂದನ್ನು ತಂದ ಮಾತ್ರಕ್ಕೆ ಅವೇನೂ ಮಾಯವಾಗುವುದಿಲ್ಲ ಎನ್ನುವುದಕ್ಕೆ ಈ ಮಾತು ಹೇಳುತ್ತಿದ್ದೇನೆ ಅಷ್ಟೆ. ನಾವು ಕಲಿಸಬೇಕಾದ್ದು ವ್ಯಾಕರಣವನ್ನಲ್ಲ, ವ್ಯಾಕರಣ ಪ್ರಜ್ಞೆಯನ್ನು ಎಂದಾಗ ಈ ಸಮಸ್ಯೆಗಳೆಲ್ಲ ಭಾಷೆಯ ಕುರಿತಾದ ಅರಿವಿಗೆ ಸಹಾಯಕವೇ ಆಗುತ್ತವೆ ಎನ್ನುವುದನ್ನು ಗಮನಿಸಬೇಕು. ಇದಕ್ಕೂ ನಾವು ವ್ಯಾಕರಣ ಮಾದರಿಗಳನ್ನು ಕೆಲವೊಮ್ಮೆ ಬದಲಿಸಿ ನೋಡುವುದು ಅಗತ್ಯವಾಗಬಹುದು.ಆದರೆ ಎಲ್ಲಾ ವ್ಯಾಕರಣಗಳೂ ಮಾದರಿಗಳೇ ಎಂದು ತಿಳಿದರೆ ಅಲ್ಲಿ ಆಕ್ರೋಶಕ್ಕಾಗಲಿ ಅವಹೇಳನಕ್ಕಾಗಲಿ ಅವಕಾಶವಿರುವುದಿಲ್ಲ.

ಇನ್ನು ಡಿ.ಎನ್.ಎಸ್. ಪ್ರಸ್ತಾಪಿಸಿರುವ ಸಮಾಸಪದಗಳದು ಒಂದು ದೊಡ್ಡ ಸಮಸ್ಯೆಯಾಗಿ ನನಗೆ ತೋರುವುದೇ ಇಲ್ಲ. ಸಂಸ್ಕೃತದಲ್ಲೂ ಕೇವಲ ನಾಮಪದಗಳೇ ಸೇರಿ ಇತರ ಪದಗಳಾಗುತ್ತವೆಯೇ? ನೀಲಕಂಠ, ಕೃಷ್ಣವೇಣಿ, ಧೃತರಾಷ್ಟ್ರ, ದಶಾವತಾರ, ಲಂಬೋದರ ಮುಂತಾದ ಸಂಯುಕ್ತಪದಗಳು ಹೇಗೆ ಉಂಟಾದುವು? ತೂಗುದೀಪ, ನಂದಾದೀಪ, ತೋರುಬೆರಳು ಮುಂತಾದ ಸಂಯುಕ್ತಪದಗಳೂ ಇದೇ ರೀತಿ. ಇವುಗಳನ್ನೂ ಪದವಿಂಗಡಿಸಿ ಸ್ವಕೇಂದ್ರಿತ (endocentric), ಅನ್ಯಕೇಂದ್ರಿತ (exocentric) ಎಂದು ಮುಂತಾಗಿ ವರ್ಗೀಕರಿಸಬಹುದು; ಆದರೆ ಕರ್ಮಧಾರಯ, ಬಹುವ್ರೀಹಿ ಮುಂತಾದ ಪಾರಿಭಾಷಿಕ ಪದಗಳು ಈಗಾಗಲೇ ಇರುತ್ತ ಅವುಗಳ ಸ್ಥಾನದಲ್ಲಿ ವಿಲಕ್ಷಣವಾದ ಇತರ ಪದಗಳನ್ನು ತರುವುದರಿಂದ ಹೆಚ್ಚಿನ ಲಾಭವೇನೂ ಇಲ್ಲ.

ಕನ್ನಡದ ಕಲ್ಪನೆಯಲ್ಲಿ ಗೊಂದಲ:
ಈಗ ಡಿ.ಎನ್.ಎಸ್. ಲೇಖನದಲ್ಲಿ ನನಗಿನ್ನೂ ಬೋಧ್ಯವಾಗದ ಕೆಲವು ವಿಷಯಗಳಲ್ಲಿಗೆ ಬರುತ್ತೇನೆ. ಮೊದಲನೆಯದಾಗಿ, ಡಿ.ಎನ್.ಎಸ್.ಗೆ ಕನ್ನಡದ ಸ್ವರೂಪದ ಕುರಿತಾಗಿರುವ ಸರಳ ಕಲ್ಪನೆ ಕೆಲವು ಗೊಂದಲಗಳನ್ನು ಹುಟ್ಟಿಸುತ್ತದೆ. ಕನ್ನಡ ಮೈನಸ್ ಸಂಸ್ಕೃತ' ಎಂಬಂಥ ಒಂದು ಆದಿಮ ಕನ್ನಡವನ್ನು ಅವರು ಕಲ್ಪಿಸಿಕೊಂಡಂತಿದೆ.ಕನ್ನಡವೂ ಸೇರಿದಂತೆ ಭಾರತದ ದೇಶಭಾಷೆಗಳ ಜತೆ ಸಂಸ್ಕೃತ ಅದೆಷ್ಟು ಬೆರೆತುಕೊಂಡಿದೆಯೆಂದರೆ,ಈಗ ನಾವದನ್ನು ಏನೂ ಮಾಡುವಂತಿಲ್ಲ.ಇದೇನೂ ಆರಾಧನೆಯ ದೃಷ್ಟಿಯಿಂದ ಹೇಳುವ ಮಾತಲ್ಲ,ಎಲ್ಲರಿಗೂ ಗೊತ್ತಿರುವ ವಾಸ್ತವ.ಇಂದು ಇಂಗ್ಲಿಷ್ ಸರ್ವವ್ಯಾಪಿಯಾಗಿ ನಮ್ಮ ಮಾತಿನಲ್ಲಿ ಸೇರಿಕೊಂಡಿರುವಂತೆ,ಇತಿಹಾಸಪೂರ್ವದ ಒಂದು ಕಾಲದಲ್ಲಿ ಸಂಸ್ಕೃತ ಬೆರೆತುಕೊಂಡಿರಬೇಕು. ಡಿ.ಎನ್.ಎಸ್. ಇದನ್ನೇನೂ ನಿರಾಕರಿಸುವುದಿಲ್ಲ; ಅವರ ಆತಂಕವೆಂದರೆ ಇಂಗ್ಲಿಷ್,ಹಿಂದಿ,ಉರ್ದು ಮುಂತಾದ ಭಾಷೆಗಳಿಂದ ಎರವಲು ಪಡೆದುಕೊಂಡಾಗ ನಾವೀಗ ಆಯಾ ಪದಗಳನ್ನು ಕನ್ನಡ ಧ್ವನಿಗೆ ಒಗ್ಗಿಸಿ ಬರೆಯುವಂತೆ ಸಂಸ್ಕೃತದ ಪದಗಳನ್ನು ಬರೆಯುವಾಗ ಯಾಕೆ ಮಾಡುವುದಿಲ್ಲ ಎನ್ನುವುದು.ಸಂಸ್ಕೃತದಿಂದ ಎರವಲು ಪಡೆದ ಪದಗಳು ಆಡುನುಡಿಯಲ್ಲಿ ಕನ್ನಡಕ್ಕೆ ಒಗ್ಗಿಕೊಂಡಿವೆ; ಆದರೂ ಬರಹ ಇಂಥ ಬದಲಾವಣೆಗಳನ್ನು ಮಾಡಿಕೊಂಡಿಲ್ಲ.ಇದಕ್ಕೆ ಕನ್ನಡದ ಅಕ್ಷರ ಸಂಸ್ಕೃತಿಯನ್ನು ಹಿಡಿತದಲ್ಲಿರಿಸಿಕೊಂಡಿರುವ ಪಂಡಿತವರ್ಗದ ಸಂಸ್ಕೃತದ ಕುರಿತಾದ ಆರಾಧನಾಭಾವವೇ ಕಾರಣ ಎನ್ನುತ್ತಾರೆ ಡಿ.ಎನ್.ಎಸ್. ಈ ಮಂದಿ ಸಂಸ್ಕೃತ ಎರವಲು ಪದಗಳನ್ನು ಹಾಗೆಯೇ ಇರಿಸುವುದಕ್ಕೋಸ್ಕರ ನಿಯಮಗಳನ್ನು ಮಾಡಿದರು ಎನ್ನುವುದು ಅವರ ಆರೋಪ.ಮಹಾಪ್ರಾಣ ವ್ಯಂಜನಗಳು ಅಲ್ಪಪ್ರಾಣ ವ್ಯಂಜನಗಳಾಗಿವೆ, ಷಕಾರ ಶಕಾರವಾಗಿದೆ, ಋಕಾರ ರು ಎಂದಾಗಿದೆ, ವಿಸರ್ಗ ಹಕಾರವಾಗಿದೆ. ಈ ಮಾರ್ಪಾಡುಗಳನ್ನು ಬರಹದಲ್ಲಿ ಅಳವಡಿಸಿಕೊಳ್ಳದೆ ಆ ಅಕ್ಷರಗಳೆಲ್ಲ ಸಂಸ್ಕೃತ ಬರಹದಲ್ಲಿರುವ ಹಾಗೆಯೇ ಕನ್ನಡ ಬರಹದಲ್ಲೂ ಉಳಿದುಕೊಳ್ಳಬೇಕೆಂಬ ನಿಯಮವನ್ನು ಮಾಡಿರುವುದು ಕನ್ನಡಕ್ಕೆ ಮಾಡಿರುವ ಅಪಚಾರ. ಇದನ್ನು ಇವತ್ತು ಸರಿಪಡಿಸಬೇಕಾಗಿದೆ.

ತಮ್ಮ ಲೇಖನದಲ್ಲಿ ಅವರು ಒಂದಕ್ಕಿಂತ ಹೆಚ್ಚು ಸಲ ಅಪಚಾರ’ ಎಂಬ ಪದವನ್ನು ಬಳಸಿರುವುದನ್ನು ನೋಡಿದರೆ ವಸ್ತುನಿಷ್ಠವಾಗಿ ಈ ವಿಷಯವನ್ನು ವಿಶ್ಲೇಷಿಸುವುದು ಅವರಿಗೆ ಸಾಧ್ಯವಾಗಿಲ್ಲ ಅನಿಸುತ್ತದೆ. ಭಾಷಾವಿಜ್ಞಾನಿಯೊಬ್ಬರಿಂದ ಇಂಥ ಮಾತು ಮೂಡಿಬಂದುದು ಆಶ್ಚರ್ಯಕರವೂ ಹೌದು.
ಕನ್ನಡಕ್ಕೆ ಸಂಸ್ಕೃತಾರಾಧಕರಿಂದ ಅಪಚಾರವಾಗಿದೆ ಎನ್ನುವ ಮಾತಿಗೆ ಸ್ವಯಂಸಾಧಿತ ಭವಿಷ್ಯವಾಣಿಯ (self-fulfilling prophecy) ಗುಣ ಬರುತ್ತದೆ. ಯಾಕೆಂದರೆ, ಸಂಸ್ಕೃತದಿಂದ ಕನ್ನಡಕ್ಕೆ ಅನೇಕ ಪದಗಳು ಬಂದುವು. ಇವನ್ನು ಕನ್ನಡವೇನೂ ಯಥಾವತ್ತಾಗಿ ಸ್ವೀಕರಿಸಲಿಲ್ಲ; ತತ್ಸಮ ಮತ್ತು ತದ್ಭವ ಎಂಬ ಭೇದಗಳನ್ನು ಮಾಡಿಕೊಂಡಿತು. ಆಂಡಯ್ಯ ಕನ್ನಡದಲ್ಲೇ ಬರೆಯುವೆ ಎಂದು ಹೊರಟಾಗ ತದ್ಭವಗಳನ್ನು ಕನ್ನಡದ್ದೇ ಎಂಬಂತೆ ಸ್ವೀಕರಿಸಿಕೊಂಡ. ಇಸು’ ಪ್ರತ್ಯಯವನ್ನು ಹಚ್ಚಿ ಬಹಳ ನಿರ್ಮಾಣಶೀಲವಾದ ಕ್ರಿಯಾಪದ ರಚನೆಯನ್ನೂ ಕನ್ನಡ ಮಾಡಿಕೊಂಡಿತು.ಅರಿಸಮಾಸ’ವನ್ನು ಉದಾರವಾಗಿ ಕಂಡಿತು. ಇದು ಯಾವುದನ್ನೂ ಬಹುಶಃ ಡಿ.ಎನ್.ಎಸ್. ಅಲ್ಲಗಳೆಯಲಾರರು. ಆದರೆ ಇಂಥ ಸತ್ಕಾರ್ಯಗಳನ್ನು ಯಾರು ಮಾಡಿದರೋ; ಆದರೆ ಮಹಾಪ್ರಾಣ, ಋ, ವಿಸರ್ಗ ಮುಂತಾದವನ್ನು ಉಳಿಸಿಕೊಳ್ಳಬೇಕೆಂಬಂಥ ನಿಯಮಗಳನ್ನು ಮಾತ್ರ ಸಂಸ್ಕೃತಾರಾಧಕರು ಮಾಡಿದರು ಎನ್ನುತ್ತಾರೆ.
ವಾಸ್ತವದಲ್ಲಿ ಇಂಥ ನಿಯಮಗಳನ್ನು ಯಾರೊಬ್ಬನೂ ಮಾಡುವುದಿಲ್ಲ. ಆದರೆ ಡಿ.ಎನ್.ಎಸ್. ಇಲ್ಲಿ ಗೂಬೆಕೂರಿಸುತ್ತಿರುವುದು ತಾವಾಗಿಯೇ ಸೃಷ್ಟಿಸಿಕೊಂಡಿರುವ ಸಂಸ್ಕೃತಾರಾಧಕ ಕನ್ನಡ ಪಂಡಿತವರ್ಗವೆಂಬ ಒಂದು ಬೆದರುಗೊಂಬೆಯ ಮೇಲೆ. `ಕವಿರಾಜಮಾರ್ಗ”ಕ್ಕೆ ಸಂಸ್ಕೃತವನ್ನು ಮಾದರಿಯಾಗಿರಿಸಿಕೊಂಡ ಅರಸ ನೃಪತುಂಗ ಕೂಡಾ ಕನ್ನಡತನವನ್ನು ಮರೆಯಲಿಲ್ಲ ಎನ್ನುವುದನ್ನು ಗಮನಿಸಬೇಕು.ಜನಪದವನ್ನು ಮುಂದಿಟ್ಟುಕೊಂಡೇ ಆತ ಬರೆದುದು.ಆದ್ದರಿಂದಲೇ ಅತಿಸಂಸ್ಕೃತವಾಗಲಿ,ಹಳೆಗನ್ನಡದ ಕುರುಡು ಮೋಹವಾಗಲಿ ಕನ್ನಡಕ್ಕೆ ಒಳಿತಲ್ಲ ಎಂದು ಹೇಳುವುದು ಅವನಿಗೆ ಸಾಧ್ಯವಾಯಿತು. ತನ್ನ ಲಕ್ಷಣಗ್ರಂಥದಲ್ಲಿ ಕನ್ನಡದ ವೈಶಿಷ್ಟ್ಯಗಳನ್ನು ಉಲ್ಲೇಖಿಸುವುದಕ್ಕೂ ಅವನು ಮರೆಯಲಿಲ್ಲ. ಕವಿರಾಜಮಾರ್ಗ’ ನಿಜಕ್ಕೂ ಅತಿರೇಕಕ್ಕಿಳಿಯದಂತೆ ಎಚ್ಚರಿಸುವ ಹದವರಿತ ಮಾಧ್ಯಮಿಕ ಮಾರ್ಗ. ಇನ್ನೊಂದೆಡೆ ಜನಾಭಿಪ್ರಾಯವನ್ನು ಮೀರಿ ಬೆರಳ್,'ಕೊರಳ್’ ಎಂದು ಮುಂತಾದುವು ಬೆರಲ್,'ಕೊರಲ್’ ಎಂದಿರಬೇಕೆಂದು ಒತ್ತಾಯಿಸಿದ ಕೇಶಿರಾಜನ ನಿರ್ದೇಶನ ಬಿದ್ದುಹೋದುದನ್ನು ಕಾಣುತ್ತೇವೆ. ಕೇಶಿರಾಜ ಡಿ.ಎನ್.ಎಸ್. ದೂಷಿಸುವ ಪಂಡಿತವರ್ಗಕ್ಕೆ ಸೇರಿದವನಾದರೂ ಅವನ ನಿಯಮವೇನೂ ಉಳಿಯಲಿಲ್ಲ. ಭಾಷೆ ಯಾವುದೇ ಪಂಡಿತವರ್ಗವನ್ನೂ ಲೆಕ್ಕಿಸುವುದಿಲ್ಲ ಎನ್ನುವುದಕ್ಕೆ ಇದು ನಿದರ್ಶನ. ಅದು ಸಾಮಾಜಿಕ ಮೌಲ್ಯಗಳಿಗನುಸಾರ ಸ್ವೀಕರಿಸಲ್ಪಡುತ್ತದೆ ಅಥವಾ ಇಲ್ಲ. ಈ ಮೌಲ್ಯಗಳು ಬದಲಾದಾಗ ಮಾತ್ರವೇ ಭಾಷೆ ಕೂಡಾ ಬದಲಾಗುವುದು ಸಾಧ್ಯ.

ಅಕ್ಷರ ಸಂಸ್ಕೃತಿ ಮತ್ತು ನುಡಿ ಸಂಸ್ಕೃತಿಗಳ ಸಂಬಂಧ ಮತ್ತು ವ್ಯತ್ಯಾಸಗಳು
ಅತ್ಯಂತ ಮುಖ್ಯವಾದ ವಿಚಾರವೆಂದರೆ ಇದು: ಅಕ್ಷರಗಳು ಮಾತನ್ನು ಸೂಚಿಸುವುದಕ್ಕೆ ಮತ್ತು ದಾಖಲಿಸುವುದಕ್ಕೆಂದು ಆವಿಷ್ಕಾರಗೊಂಡಿದ್ದರೂ, ಅವು ಯಾವತ್ತೂ ಮಾತನ್ನು ಸಂಪೂರ್ಣವಾಗಿ ಧ್ವನಿಸಲಾರವು. ಮಾತನ್ನು ಪೂರ್ಣಪ್ರಮಾಣದಲ್ಲಿ ಧ್ವನಿಸುವುದು ಅವುಗಳ ಉದ್ದೇಶವೂ ಅಲ್ಲ. ಒಂದು ವೇಳೆ ಅಕ್ಷರಗಳು ಮಾತಿನ ಪ್ರಭೇದಗಳನ್ನೆಲ್ಲ ಚಾಚೂ ತಪ್ಪದೆ ಧ್ವನಿಸುವಂತಿರಬೇಕು ಎಂದರೆ ಅದು ಸಾಧ್ಯವೂ ಅಲ್ಲ. ಜೀವಂತ ಭಾಷೆಗೆ ಸಾವಿರಾರು ಪ್ರಭೇದಗಳಿರುತ್ತವೆ. ಅವನ್ನೆಲ್ಲ ಅಕ್ಷರಗಳು ಪ್ರತಿನಿಧಿಸುವುದು ಹೇಗೆ ಸಾಧ್ಯ? ಆದ್ದರಿಂದ ಪ್ರಮಾಣೀಕೃತ (standardized)ಪ್ರಭೇದವೊಂದಕ್ಕೆ ಮಾತ್ರ ಅಕ್ಷರವ್ಯವಸ್ಥೆ ಹತ್ತಿರವಾಗಿರುತ್ತದೆ. ಮಾತ್ರವಲ್ಲ, ಈ ಪ್ರಮಾಣೀಕರಣಕ್ಕೆ ಅಕ್ಷರ ಸಂಸ್ಕೃತಿ ಪ್ರೇರಕವೂ ಆಗುತ್ತದೆ. ಪ್ರಮಾಣೀಕೃತ ಪ್ರಭೇದವೇ ಶಿಕ್ಷಣ ಮಾಧ್ಯಮವೂ ಆಗಿರುವುದರಿಂದ ವಿದ್ಯಾರ್ಥಿಗಳು ಈ ಪ್ರಭೇದವನ್ನು ಕಲಿಯುವುದು ಅಗತ್ಯವಾಗುತ್ತದೆ. ಇದು ಅಕ್ಷರ ಸಂಸ್ಕೃತಿಯಿರುವಲ್ಲೆಲ್ಲಾ ನಡೆದುಕೊಂಡು ಬಂದಿರುವ ಕ್ರಮ. ಉದಾಹರಣೆಗೆ, ಮಾತನಾಡುವ ಅರಬ್ಬೀ ಪ್ರಭೇದಗಳು ಸಾವಿರಾರು ಇವೆ. ಆದರೆ ಶಿಕ್ಷಣದಲ್ಲಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಕಾಣಿಸುವುದು ಕುರಾನಿಗೆ ಹತ್ತಿರವಾದ ಪ್ರಮಾಣೀಕೃತ ಅರಬ್ಬಿ. ಚೈನೀ ಭಾಷೆಯನ್ನು ತೆಗೆದುಕೊಂಡರೆ ಅಲ್ಲಿ ಬರಹಕ್ಕೂ ಮಾತಿಗೂ ಸಂಬಂಧವೇ ಇಲ್ಲ ಎಂಬ ಪರಿಸ್ಥಿತಿಯನ್ನು ನೋಡುತ್ತೇವೆ. ಯಾಕೆಂದರೆ ಚೀನಾದಲ್ಲಿ ಮಾತಿನ ಪ್ರಭೇದಗಳು ಎಷ್ಟೊಂದು ಭಿನ್ನವಾಗಿವೆಯೆಂದರೆ ಅವುಗಳೆಲ್ಲವೂ ಒಂದೇ ಭಾಷೆಗೆ ಸೇರಿದವು ಎನ್ನುವಂತೆಯೇ ಇಲ್ಲ. ಆದರೂ ಅರಬ್ಬೀ ಮತ್ತು ಚೈನೀಸ್ ಬರಹಗಳು ಜನರು ಪರಸ್ಪರ ಅರ್ಥಮಾಡಿಕೊಳ್ಳುವುದಕ್ಕೆ ಮತ್ತು ಅವರನ್ನು ಒಂದುಗೂಡಿಸುವುದಕ್ಕೆ ಸಹಾಯಕವಾಗಿವೆ ಎನ್ನುವುದು ಮುಖ್ಯ. ಇಲ್ಲೆಲ್ಲೂ ಭಾಷೆಗಾಗಲಿ ಜನರಿಗಾಗಲಿ ಇದರಿಂದ ಅಪಚಾರ'ವಾಗಿದೆ ಎಂಬ ಮಾತನ್ನು ನಾನು ಕೇಳಿಲ್ಲ.ಹೆಚ್ಚಿನ ಜನರು ಮಾತನಾಡುವ ಹಾಗೇ ಅಕ್ಷರಗಳನ್ನು ತಿದ್ದಿಕೊಂಡರೆ ಏನು ನಷ್ಟ, ಇದರಿಂದ ಜನಸಾಮಾನ್ಯರನ್ನು ಒಳಗೊಂಡಂತೆ ಆಗುವುದಿಲ್ಲವೇ ಎಂದು ಡಿ.ಎನ್.ಎಸ್. ಕೇಳಬಹುದು.ಆದ್ದರಿಂದ ಯಾರೂ ಮಾತಾಡದ ಮಹಾಪ್ರಾಣಗಳನ್ನು ಕೈಬಿಡಬಹುದು;

ಷದ ಬದಲು ಶ,ಋವಿನ ಬದಲು ರು,ವಿಸರ್ಗದ ಬದಲು ಹ ಉಳಿಸಿಕೊಂಡರಾಯಿತು.ಕೆಲವರನ್ನು ಮಾದರಿಯಾಗಿರಿಸಿದರೆ,ಙ ಮತ್ತು ಞ ಅಗತ್ಯವಿಲ್ಲದಾಗುತ್ತದೆ.ಘಟ್ಟದ ಮೇಲಣ ಹಲವೆಡೆ ವಿದ್ಯಾವಂತರೇ ಜ್ಞಾನ’ಕ್ಕೆ ಪ್ರತಿಯಾಗಿ ಗ್ನಾನ' ಎನ್ನುತ್ತಾರೆ; ಇನ್ನು ಕಿಞ್ಞಣ್ಣ,’ `ಕುಞÂ್ಞ’ ಮುಂತಾದ ತುಳು ಮತ್ತು ಮಲಯಾಳಂ ಮೂಲದ ಪದಗಳನ್ನು ಉಚ್ಚರಿಸುವುದು ಅವರಿಗೆ ಕಷ್ಟವಾಗುತ್ತದೆ. ಕನ್ನಡಕ್ಕೆ ತುಳು ಅಥವಾ ಮಲೆಯಾಳಮಿನ ಸಂಬಂಧ ಯಾಕೆ ಎಂದು ಕೇಳಬಹುದು. ಹೀಗೆ ಞಕಾರವೂ ಇಲ್ಲದಾಗುತ್ತದೆ. ಐ ಮತ್ತು ಔ ಕೂಡಾ ಅನಗತ್ಯವೇ; ಯಾಕೆಂದರೆ ಐದರ ಬದಲು ಅಯ್ದು ಎಂದೂ ಔತಣದ ಬದಲು ಅವ್ತಣ ಎಂದೂ ಉಚ್ಚರಿಸುವವರಿದ್ದಾರೆ. ಹೀಗೆ ಕತ್ತರಿಸುತ್ತ ಹೋದರೆ ಕೊನೆಗೆ ಉಳಿಯುವ ಅಕ್ಷರಗಳ ಸಂಖ್ಯೆಯೇನೋ ಕಡಿಮೆಯಾಗುತ್ತದೆ; ಆದರೆ ಅದರಿಂದ ಕನ್ನಡಕ್ಕೆ ಒಳಿತಾಗುತ್ತದೆ ಎನ್ನುವ ವಿಶ್ವಾಸ ನನಗಿಲ್ಲ.

ಕನ್ನಡ ನುಡಿ ಸಮಸ್ಯಾರಹಿತವಾದ ಒಂದು ಅಖಂಡ ಘಟಕವಲ್ಲ
ಕನ್ನಡ ನುಡಿ ಸಮಸ್ಯಾರಹಿತವಾದ ಒಂದು ಅಖಂಡ ಘಟಕವೆಂಬಂತೆ ಡಿ.ಎನ್.ಎಸ್. ವಾದಿಸುತ್ತಿದ್ದಾರೆ. ತಮ್ಮ ಲೇಖನದಲ್ಲಿ ಎಲ್ಲಿಯೂ ಈ ನುಡಿಯ ವೈವಿಧ್ಯತೆಯ ಕುರಿತು ಅವರು ಪ್ರಸ್ತಾಪಿಸುವುದೇ ಇಲ್ಲ. ಆದರೆ ಈ ನುಡಿಯಲ್ಲಿ ಕಾಲಾಂತರದಿಂದಲೂ ಅನೇಕ ಪ್ರಭೇದಗಳು ಜೀವಿಸಿಕೊಂಡು ಬಂದಿವೆ: ಮಂಗಳೂರು, ಮೈಸೂರು, ಬೆಂಗಳೂರು, ಧಾರವಾಡ, ಬೆಳಗಾವಿ, ಬಿಜಾಪುರ ಮುಂತಾದ ಪ್ರಾದೇಶಿಕ ನುಡಿಗಳು ಒಂದೆಡೆ; ಹವ್ಯಕ, ಕೋಟ, ಕೋಟೆ, ಮಾದಿಗ, ಮಾಧ್ವ, ಗೌಡ ಮುಂತಾದ ಜಾತ್ಯಾಧಾರಿತ ನುಡಿಗಳು ಇನ್ನೊಂದೆಡೆ. ವಿದ್ಯಾಭ್ಯಾಸದ ಗಾಳಿಯೂ ತಗಲದ ತೀರಾ ಶೋಷಿತ ವರ್ಗದ ಜನರ ನುಡಿಯೂ ಇದೆ. ಗಡಿನಾಡು ಭಾಗಗಳಲ್ಲಿ ಆಯಾ ನೆರೆಭಾಷೆಯ ಪ್ರಭಾವಕ್ಕೆ ಒಳಗಾದ ನುಡಿಯನ್ನು ಜನ ಸಹಜವಾಗಿ ಮಾತಾಡುತ್ತಾರೆ. ಅದೇ ರೀತಿ ತುಳು, ಮರಾಠಿ, ತಮಿಳು, ಮಲೆಯಾಳಂ ಮುಂತಾದ ಭಾಷಾಮೂಲದ ಕನ್ನಡಿಗರು ಆಡುವ ಪ್ರಭೇದಗಳಿವೆ. ಬರೇ ಮಾತಿನಲ್ಲೂ ಅಲ್ಲ, ಬರಹದಲ್ಲೂ ಭಿನ್ನತೆಗಳಿವೆ. ಬೆಳಗಾವಿ ಕಡೆ ಕಾಲೇಜ ಎಂದು ಬರೆಯುತ್ತಾರೆ, ಕಾಲೇಜ್ ಎಂದು ಓದುತ್ತಾರೆ. ಮೈಸೂರಲ್ಲಿ ಕೆಲವರು ಮಾಡ್ರನ್ ಎಂದು ನುಡಿಯುತ್ತಾರೆ ಮತ್ತು ಬರೆಯುತ್ತಾರೆ. ಹವ್ಯಕ ಹಾಗೂ ಧಾರವಾಡ ಕನ್ನಡಗಳಲ್ಲಿ ಅನುನಾಸಿಕ ಸ್ವರಗಳು ಸಾಕಷ್ಟು ಇವೆ. ಹೀಗೆ ಕನ್ನಡ ಜನಪದದಲ್ಲಿ ಇರುವುದು ಕನ್ನಡವಲ್ಲ, ಕನ್ನಡಂಗಳ್’. ಕನ್ನಡ ನುಡಿ ಇಷ್ಟು ವೈವಿಧ್ಯಮಯವಾಗಿರುವಾಗ ಇದೊಂದನ್ನೂ ಪರಿಗಣಿಸದೆ ಕೇವಲ ಸಂಸ್ಕೃತಮೂಲದ ಅಕ್ಷರಗಳನ್ನೇ ಗುರಿಯಾಗಿಸುವುದು ವಿಚಿತ್ರವೆನಿಸುತ್ತದೆ. ಡಿ.ಎನ್.ಎಸ್. ನಿಜವಾದ ಸಮಸ್ಯೆಯನ್ನು ಮರೆಸುವ ಒಂದು ಅನುಕೂಲಕರ ಗಡಿಯಲ್ಲಿ ಬಂದು ನಿಲ್ಲುತ್ತಾರೆ ಎನ್ನುವುದಕ್ಕೆ ಅವರು ಷಕಾರವನ್ನು ಶಕಾರದ ವರೆಗೆ ಮಾತ್ರ ತರಲು ತಯಾರಿರುವುದು ಸಾಕ್ಷಿಯಾಗುತ್ತದೆ. ಯಾಕೆಂದರೆ ಹಲವರ ಆಡುಮಾತಿನಲ್ಲಿ ಶಕಾರ ಕೂಡಾ ಇಲ್ಲ ಎನ್ನುವುದು ವಾಸ್ತವ; ಇರುವುದು ಸಕಾರ ಒಂದೇ. ವಿಸರ್ಗ ಕೆಲವೆಡೆ ಹಕಾರವಾಗಿರಬಹುದು; ಆದರೆ ಹ ಕಾರದ ಬದಲಿಗೆ ಬರೇ ಅ ಕಾರವಿರುವ ನಾಡಿಗರೂ ಕನ್ನಡ ನಾಡಿನಲ್ಲಿ ಇದ್ದಾರೆ. ಅವರನ್ನು ಕಡೆಗಣಿಸುವುದಕ್ಕೆ ಅವರೇನು ತಪ್ಪುಮಾಡಿದ್ದಾರೆ? ಬಹುಶಃ ಮೈಸೂರ ಸುತ್ತುಮುತ್ತಲಿನ ಆಡುಮಾತನ್ನು ಗಮನದಲ್ಲಿರಿಸಿ ಡಿ.ಎನ್.ಎಸ್. ಅದನ್ನೇ ಒಂದು ಮಾದರಿಯಾಗಿ ರೂಪಿಸಲು ಯೋಚಿಸುತ್ತಿರಬಹುದು.ಆದರೆ ಕನ್ನಡಗಳಿರುವುದು ಮೈಸೂರಲ್ಲಿ ಮಾತ್ರವೇ ಅಲ್ಲವಲ್ಲ? ಇವುಗಳಲ್ಲಿ ಯಾವುದೇ ಒಂದನ್ನು ಪ್ರಮಾಣೀಕೃತವಾಗಿ ತೆಗೆದುಕೊಂಡರೂ ಇತರರಿಗೆ ಅಪಚಾರ’ ಆಗಿಯೇ ಆಗುತ್ತದೆ.

ನಿಜಕ್ಕೂ ಆಗುವ ಅಪಚಾರ ಅವಕಾಶವಂಚಿತರಿಗೇ
ವಾಸ್ತವದಲ್ಲಿ ಡಿ.ಎನ್.ಎಸ್.ರ ಕಾರ್ಯಕ್ರಮದಿಂದ ನಿಜಕ್ಕೂ ಅಪಚಾರವಾಗುವುದು ಮೊದಲೇ ಅವಕಾಶವಂಚಿತವಾದ ಜನವರ್ಗಕ್ಕೇ. ಸಂಸ್ಕೃತ, ಕನ್ನಡ, ಇಂಗ್ಲಿಷ್ ಮೂರೂ ಭಾಷೆಗಳ ಮೇಲೆ ಶಾಸ್ತ್ರಬದ್ಧ ಪಾಂಡಿತ್ಯವಿರುವವರು ಈ ಜನವರ್ಗಕ್ಕೆ `ಇದ್ದಲ್ಲೇ ಇರಿ'' ಎಂದರೆ ಅವಕಾಶವಂಚಿತರನ್ನು ಇನ್ನಷ್ಟು ವಂಚಿಸಿದ ಹಾಗಾಗುತ್ತದೆ. ಮಹಾಪ್ರಾಣ ಇತ್ಯಾದಿ ಧ್ವನಿಗಳು ಶಾಲಾಬಾಲಕರಿಗೆ ಒಂದು ಹೊರೆಯಾಗುವುದಾದರೆ ಇದೇ ಬಾಲಕರು ಮುಂದೆ ಇಂಗ್ಲಿಷ್ ಕಲಿಯುವಾಗ ಏನುಮಾಡುತ್ತಾರೆ? ಇಂಗ್ಲಿಷ್‍ನಲ್ಲಾದರೆ ಅಕ್ಷರಕ್ಕೂ ನುಡಿಗೂ ಸಂಬಂಧವೇ ಇಲ್ಲದಂತೆ ತೋರುತ್ತದೆ.ಎಕ್ಸ್ (x), ಕ್ಯೂ (q), ಸಿ (ಛಿ) ಮೊದಲಾದಅನಗತ್ಯ’ ಅಕ್ಷರಗಳಿವೆ; ಯಾಕೆಂದರೆ ಇವು ಮಾಡುವ ಕೆಲಸವನ್ನು ಇತರ ಅಕ್ಷರಗಳಿಗೆ ಹಂಚಬಹುದಾಗಿದೆ. ಇದೆಲ್ಲಕ್ಕಿಂತ `ಅನಗತ್ಯ’ವೆಂದರೆ ದೊಡ್ಡಕ್ಷರಗಳು (capital letters). ಉಚ್ಚಾರಣೆಯಲ್ಲಿ ದೊಡ್ಡಕ್ಷರಗಳಿಗೂ ಸಣ್ಣಕ್ಷರಗಳಿಗೂ ವ್ಯತ್ಯಾಸವೇ ಇರುವುದಿಲ್ಲ. ಕೇವಲ ವಾಕ್ಯಾರಂಭದಲ್ಲಿ ಮತ್ತು ಹೆಸರುಗಳ ಮೊದಲಲ್ಲಿ ಮಾತ್ರವೇ ಈ ದೊಡ್ಡಕ್ಷರಗಳು ಬರುವುದು. ಆದ್ದರಿಂದ ಇವನ್ನೆಲ್ಲ ವರ್ಣಮಾಲೆಯಿಂದ ಕಿತ್ತುಹಾಕಿದರೆ ಇಂಗ್ಲಿಷ್ ಕಲಿಯುವವರಿಗೆ ಅರ್ಧಕ್ಕರ್ಧ ಸುಲಭವಾಗುತ್ತದೆ. ಅದೇ ರೀತಿ, ಲ್ಯಾಟಿನ್ ಮೂಲದ ಹಲವಾರು ಪದಗಳು ಬರೆಯುವುದಕ್ಕೂ ಅರ್ಥಮಾಡಿಕೊಳ್ಳುವುದಕ್ಕೂ ಸಾಮಾನ್ಯ ಇಂಗ್ಲಿಷ್ ಜನರಿಗೆ ಕಷ್ಟವೇ. ಅವನ್ನೂ ಇಂಗ್ಲಿಷ್ ಭಾಷೆಯಿಂದ ತೆಗೆದು ಹಾಕಬಹುದು. ಆದರೂ ಈ ಇಂಗ್ಲಿಷ್ ಮಂದಿ ಇದನ್ನು ಮಾಡುತ್ತಿಲ್ಲವಲ್ಲ! ಯಾಕೆ? ಇಂಗ್ಲಿಷ್ ಉಚ್ಚಾರಣೆಯಲ್ಲೂ ಇಂಗ್ಲೆಂಡಿನಲ್ಲೇ ಹಲವು ರೀತಿಯ ಪ್ರಭೇದಗಳಿವೆ. ಆದರೂ ಬರಹ ಮತ್ತು ವಿದ್ಯಾಭ್ಯಾಸದಲ್ಲಿ ಮಾತ್ರ ಸರಿಸುಮಾರು ಒಂದೇ ಕ್ರಮವನ್ನು ಅನುಸರಿಸಲಾಗುತ್ತಿದೆ. ಇಂಗ್ಲಿಷ್‍ಗಿಂತಲೂ ಹೆಚ್ಚಿನ ಮಟ್ಟದಲ್ಲಿ ಅಕ್ಷರ ಮತ್ತು ನುಡಿಗಳ ನಡುವೆ ಅಗಾಧ ಅಂತರವಿರುವ ಫ್ರೆಂಚ್ ಭಾಷೆಯನ್ನು ಆ ಜನ ಹೇಗಾದರೂ ಕಲಿಯುತ್ತಾರೆ? ಚೈನೀಸ್ ಬರಹ ಕಲಿಯುವವರೆಲ್ಲರೂ ಸುಮಾರು ನಾಲ್ಕು ಸಾವಿರಕ್ಕೂ ಜಾಸ್ತಿ ಚಿತ್ರಲಿಪಿಗಳನ್ನು ಒಂದೆರಡು ವರ್ಷಗಳಲ್ಲೇ ಕರಗತ ಮಾಡಿಕೊಳ್ಳಬೇಕಾಗುತ್ತದೆ! ಕನ್ನಡಿಗರಿಗೆ ಮಾತ್ರ ಇವೆಲ್ಲವೂ ಅಸಾಧ್ಯ ಎಂದಾಯಿತು. ಕಲಿಯುವುದಕ್ಕೆ ಕಷ್ಟವಾಗುತ್ತದೆ ಎಂದು ಭಾಷೆಯನ್ನೇ ತಿರಸ್ಕರಿಸುವುದು ಅಥವಾ ಕತ್ತರಿಸುವುದು ಆಭಾಸ ಮಾತ್ರವಲ್ಲ ಸ್ವಯಂ ನಿರಾಕರಣೆಯಾಗುತ್ತದೆ.

ಯಾವುದನ್ನೂ ನಿರಾಕರಿಸುವುದು ಬೇಕಿಲ್ಲ
ಯಾವುದನ್ನೂ ಯಾರಿಗೂ ನಿರಾಕರಿಸುವುದು ಬೇಕಿಲ್ಲ. ಕನಿಷ್ಠ ನಾವು ಕಲಿತುದನ್ನು ಎಲ್ಲ ಕನ್ನಡಿಗರೂ ಕಲಿತುಕೊಳ್ಳಲು ಅನುಕೂಲ ನೀಡುವುದೇ ಸರಿಯಾದ ವಿಧಾನ. ಲಿಪಿ ಸುಧಾರಣೆಯೇ ಬೇಡ ಎನ್ನುವುದು ನನ್ನ ಉದ್ದೇಶವಲ್ಲ. ಆದರೆ ಅದು ಒಳಗೊಳ್ಳುವಂತೆ ಇರಬೇಕೇ ಹೊರತು ನಿರಾಕರಿಸುವಂತಲ್ಲ. ಸದ್ಯ ಇಂಗ್ಲಿಷ್‍ನಿಂದ ಹಲವಾರು ಪದಗಳು ಬರುತ್ತಿರುತ್ತ, ಅವುಗಳಲ್ಲಿಕೆಲವನ್ನು ಬರೆಯುವುದಕ್ಕೆ ತೊಡಕಾಗುತ್ತಿದೆ. ಉದಾಹರಣೆಗೆ, apple ಎಂಬುದನ್ನು ಆಪಲ್ ಎಂದು ಬರೆಯಬೇಕೇ, ಏಪಲ್ ಎಂದು ಬರೆಯಬೇಕೇ ಅಥವಾ ಬೇರೇನಾದರೂ ವಿಧಾನ ಸಾಧ್ಯವೇ ಎಂದು ಯೋಚಿಸಬೇಕಾಗುತ್ತದೆ. ಇಂಥ ಸುಧಾರಣೆಯಿಂದ ಕನ್ನಡ ಶ್ರೀಮಂತವಾಗುತ್ತದೆ; ಆದರೆ ಡಿ.ಎನ್.ಎಸ್.ರ ವಿಧಾನದಿಂದ ಕನ್ನಡ ಬಡವಾಗುತ್ತದೆ. ಅವರೆನ್ನುವಂತೆ ಒಂದು ವೇಳೆ ಚಿಕ್ಕ ಮಕ್ಕಳಿಗೆ ಆರಂಭದಲ್ಲೇ ಋ, ಷ ಮುಂತಾದ ಅಕ್ಷರಗಳು ಕಷ್ಟವೆನಿಸಿದರೆ ಅವುಗಳನ್ನು ಹಂತಗಳಲ್ಲಿ ಕಲಿಸಬಹುದು. ಆದರೆ ಪೂರ್ತಿಯಾಗಿ ಕೈಬಿಟ್ಟರೆ ಅವರಿಗೆ ಸಂಸ್ಕೃತಿಯನ್ನು ನಿರಾಕರಿಸಿದಂತೆ ಮಾತ್ರವಲ್ಲ, ವಿದ್ಯಾಭ್ಯಾಸ ಹಾಗೂ ತನ್ಮೂಲಕ ಬರುವ ಸಬಲತೆಯನ್ನೂ ವಂಚಿಸಿದಂತೆ ಆಗುತ್ತದೆ. ಹೊರನೋಟಕ್ಕೆ ಪುರೋಗಾಮಿಯೆನಿಸುವ ಡಿ.ಎನ್.ಎಸ್.ರ ಈ ಸಲಹೆ ಕಾರ್ಯಗತಗೊಳಿಸಿದರೆ ಇರುವ ಸಂಪನ್ಮೂಲವೊಂದನ್ನು ಕಳೆದುಕೊಂಡಂತಾಗುತ್ತದೆ. ಹಾಗೆ ಮಾಡುವ ಹಕ್ಕು ನಮಗೆ ಯಾರಿಗೂ ಇಲ್ಲ.

ಸರಿಯಲ್ಲದ ಪ್ರಮೇಯ
ಡಿ.ಎನ್.ಎಸ್. ಮಂಡಿಸುವ ಪ್ರಮೇಯವೇ (Premise) ಸರಿಯಲ್ಲ. ಮಹಾಪ್ರಾಣ ಅಲ್ಪಪ್ರಾಣವಾಗಿದೆ, ಷಕಾರ ಶಕಾರವಾಗಿದೆ ಎಂಬ ವಾಸ್ತವ'ದ ಆಧಾರದ ಮೇಲಿಂದ ಅವರು ವಾದಿಸುತ್ತಾರೆ. ಇದು ಭಾಷಾ ವಿದ್ಯಮಾನವನ್ನು ಟೆಲಿಸ್ಕೋಪಿನ ತಪ್ಪು ಕೊನೆಯಿಂದ ನೋಡಿದಂತೆ. ಈಗಾಗಲೇ ಸೂಚಿಸಿದಂತೆ,ಲಿಪಿಯನ್ನು ಅಭಿವೃದ್ಧಿಪಡಿಸುವ ಭಾಷೆ ಕೇವಲ ಆಡುಮಾತನ್ನಷ್ಟೇ ಗಮನದಲ್ಲಿ ಇರಿಸಿಕೊಂಡಿರುವುದಿಲ್ಲ, ಪ್ರಮಾಣೀಕರಣ,ಏಕೀಕರಣ,ಶಿಕ್ಷಣಸಂಸ್ಕೃತಿ ಮುಂತಾದುವನ್ನು ಗಮನದಲ್ಲಿರಿಸಿಕೊಂಡಿರುತ್ತದೆ. ಲೋಕದಲ್ಲಿ ಅಕ್ಷರ ಸಂಸ್ಕೃತಿಯಿರುವ ಯಾವುದೇ ಭಾಷೆಯನ್ನು ಪರಿಶೀಲಿಸಿದರೂ ಇದು ಕಂಡುಬರುವ ಸಂಗತಿ.ಆದ್ದರಿಂದ ಮಹಾಪ್ರಾಣ,ಷಕಾರ ಮುಂತಾದುವು ಆಡುಮಾತಿನಲ್ಲಿ ಬದಲಾಗಿವೆ ಎನ್ನುವ ಕಾರಣಕ್ಕೆ ಅವನ್ನು ಕೈಬಿಡಬೇಕೆನ್ನುವುದು ಅರ್ಥವಿಲ್ಲದ ಮಾತು.ಡಿ.ಎನ್.ಎಸ್.ರ ವಾದವೆಂದರೆ ಆಡುಮಾತಿನ ಶೈಲಿಯನ್ನೇ ಬರಹದಲ್ಲಿ ಅಳವಡಿಸಿಕೊಳ್ಳಬೇಕು—ಸಂಸ್ಕೃತದ ಹೊರತಾದ ಭಾಷೆಗಳಿಂದ ಎರವಲು ಪಡೆದಾಗ ಇದನ್ನು ಮಾಡುತ್ತೇವೆ;ಮತ್ತೆ ಸಂಸ್ಕೃತಕ್ಕೆ ಮಾತ್ರವೇ ಈ ಪ್ರತ್ಯೇಕತೆ ಯಾಕೆ?ಆದರೆ ಇದು ಸಂಪೂರ್ಣ ಸತ್ಯವಲ್ಲ.ಅರಬ್ಬಿ ಮೂಲವಾದ ದಾಖಲೆ’ ಎಂಬ ಪದದಲ್ಲಿ ಮಹಾಪ್ರಾಣವಿದೆ; ಇದನ್ನು ದಾಕಲೆ’ಯೆಂದು ಬರೆಯುವುದಿಲ್ಲ,ಬಹುಶಃ ಉಚ್ಚರಿಸುವುದೂ ಇಲ್ಲ. ಅದೇ ಮೂಲದ ಫಾಯ್ದಾ’ ಎಂಬುದನ್ನು ಪಾಯ್ದಾ ಬರೆಯುವುದಿಲ್ಲ, ಪ್ರಾಯಶಃ ಉಚ್ಚರಿಸುವುದೂ ಇಲ್ಲ.ಠಾಣೆ’ಯನ್ನು ಟಾಣೆ’ ಎಂದು,ಠೀಕಾಗಿ’ ಎನ್ನುವುದನ್ನು ಟೀಕಾಗಿ’ ಎಂದೂ ಬರೆಯುವುದಿಲ್ಲ.ಇಂಥ ನೂರಾರು ಪದಗಳಿವೆ. ಇವುಗಳನ್ನು ಮಹಾಪ್ರಾಣದಲ್ಲೇ ಬರೆಯಬೇಕೆಂದು ಯಾರೂ ಫತ್ವಾ ಹೊರಡಿಸಿದ್ದಿಲ್ಲ.ಹೀಗಿರುತ್ತ ಸಂಸ್ಕೃತಮೂಲದ ಮಹಾಪ್ರಾಣಗಳು ಉಚ್ಚಾಟನೆಗೆ ಒಳಗಾಗಬೇಕು ಎಂದರೆ ಏನರ್ಥ? ಸಂಸ್ಕೃತವಲ್ಲದ ಇತರ ಭಾಷಾಮೂಲಗಳ ಪದಗಳನ್ನು ಕನ್ನಡಕ್ಕೆ ತಂದಾಗಲೂ ಇವುಗಳ ಅಗತ್ಯವಿದೆ ಎಂದಾಯಿತು. ಅಲ್ಲದಿದ್ದರೆ ನಾವು ಫಿಲಂ’ ಬದಲು ಪಿಲಂ,’ಫಿಲಾಸಫಿ’ ಬದಲು ಪಿಲಾಸಪಿ,’ಫೋಟೋ’ ಬದಲು ಪೋಟೋ,'ಥೀಮ್’ ಬದಲು ತೀಮ್,'ಘರಾನಾ’ ಬದಲು ಗರಾನಾ,'ಘರ್ ಘರ್ ಕೀ ಕಹಾನಿ’ ಬದಲು ಗರ್ ಗರ್ ಕೀ ಕಹಾನಿ' ಎಂದು ಮುಂತಾಗಿ ಬರೆಯಬೇಕಾದೀತು.ಇಂಗ್ಲಿಷ್ ಮತ್ತು ಹಿಂದಿಯಿಂದ ವ್ಯಾಪಕವಾಗಿ ಪದಗಳು ಕನ್ನಡಕ್ಕೆ ಬರುತ್ತಿರುವ ಈ ಸಂದರ್ಭದಲ್ಲಿ ಈಗಾಗಲೇ ಇರುವ ಅಕ್ಷರ ಸೌಲಭ್ಯವನ್ನು ಮೊಟಕುಗೊಳಿಸುವುದು ಆತ್ಮಘಾತುಕ ಕೆಲಸವಾಗುತ್ತದೆ.ನಮ್ಮ ಹಿಂದಿನವರು ರಕಾರಕ್ಕೆ ಹೊಕ್ಕುಳ ಕೊಟ್ಟು ಠಕಾರವನ್ನೂ, ಪಕಾರಕ್ಕೆ ಹೊಟ್ಟೆ ಸೀಳಿ ಫಕಾರವನ್ನೂ, ಪಟ್ಟೆ ಬರೆದು ಷಕಾರ ಎಂದುಮುಂತಾಗಿಯೂ ಮಾಡಿಕೊಂಡರು;ನಮಗಿಂದು ತಿಣಿಕಿದರೂ ಇಂಥ ಚಿಹ್ನೆಗಳನ್ನು ಮಾಡುವುದಕ್ಕಾಗುವುದಿಲ್ಲ. ಸಂಸ್ಕೃತದಿಂದ ವ್ಯಾಪಕವಾಗಿ ಪದಗಳನ್ನು ತರುತ್ತಿರುವಾಗ ಕೆಲವೊಮ್ಮೆ ಗೊಂದಲವುಂಟಾಗದಿರಲು ಕೂಡಾ ಇಂಥ ಚಿಹ್ನೆಗಳು ಅಗತ್ಯವೆನಿಸಿರಬಹುದು:ಉದಾಹರಣೆಗೆ ಮದ್ಯ’ ಮತ್ತು ಮಧ್ಯ,'ಬಾರ’ ಮತ್ತು ಭಾರ,'ದನ,’ ಮತ್ತು ಧನ' ಮುಂತಾದ ಕಡೆ.ಹಳೆಗನ್ನಡದ ಯಾವುದೋ ಒಂದು ಕಾಲಘಟ್ಟದಲ್ಲಿ ಹೆಚ್ಚಿನ ಪಕಾರಾದಿ ಪದಗಳೂ ಹಕಾರಾದಿಯಾದುವು.ಉಚ್ಚಾರಣೆಗೆ ಕಷ್ಟವಾಗಿ ಹೀಗಾದುದಲ್ಲ.ಆದರೆ ಈ ಬದಲಾವಣೆ ಕನ್ನಡಮೂಲದ ಪದಗಳನ್ನು ಬಾಧಿಸಿದಷ್ಟು ವ್ಯಾಪಕವಾಗಿ ಸಂಸ್ಕೃತಮೂಲದ ಪದಗಳನ್ನು ಬಾಧಿಸಲಿಲ್ಲ. ಯಾಕೆ?ಹಾಗೆ ಮಾಡಕೂಡದೆಂದು ಸಂಸ್ಕೃತಾಭಿಮಾನಿಗಳು ಯಾರಾದರೂ ನಿಯಮ ಮಾಡಿದರೇ? ಅಂಥ ನಿಯಮವೊಂದು ಇರುತ್ತಿದ್ದರೆ ಪಶುವಿನಿಂದ ಹಸುವೂ,ಫಣೆಯಿಂದ ಹಣೆಯೂ ಕನ್ನಡ ಬರಹದಲ್ಲಿ ಅಥವಾ ವಿದ್ಯಾಭ್ಯಾಸದಲ್ಲಿ ಸೇರುತ್ತಿರಲಿಲ್ಲ. ಕನ್ನಡ ಬರಹ ಇವೆರಡು ರೂಪಗಳನ್ನೂ ಸ್ವೀಕರಿಸಿಕೊಂಡಿತು. ಆದರೆ ಹೆಚ್ಚಿನ ಸಂಸ್ಕೃತಮೂಲದ ಪಕಾರಾದಿ ಪದಗಳೂ ಹಾಗೆಯೇ ಉಳಿದುಕೊಂಡುವು.ಪಕಾರ ಕನ್ನಡದಲ್ಲಿ ಈಗಾಗಲೇ ಇತ್ತು ಎನ್ನುವುದು ಇದಕ್ಕೊಂದು ಕಾರಣವಾಗುವುದಿಲ್ಲ;ಹಾಗಾದರೆ ಪಕಾರಾದಿ ಕನ್ನಡಮೂಲದ ಪದಗಳು ಯಾಕೆ ಈ ಬದಲಾವಣೆಗೆ ಒಳಗಾಗಬೇಕು ಎನ್ನುವುದೊಂದು ಸಮಸ್ಯೆಯಾಗುತ್ತದೆ.ಆಗಲೇ ಸಂಸ್ಕೃತ ಪದಗಳು ಸಾಕಷ್ಟು ಸಂಖ್ಯೆಯಲ್ಲಿ ಕನ್ನಡ ನುಡಿಯಲ್ಲಿ ಸೇರಿಕೊಂಡಂಥ ಕಾಲದ ಬಗ್ಗೆ ನಾವೀಗ ಹೇಳುತ್ತಿರುವುದು.ಪಂಡಿತರು ಯಾರೇ ಬಯಸಿದರೂ ಆಡುನುಡಿಯನ್ನು ನಿಯಂತ್ರಿಸುವುದು ಸಾಧ್ಯವಿಲ್ಲದೆ ಇದ್ದಾಗ,ಜನರ ಬಾಯಲ್ಲಿ ಪಕಾರಾದಿ ಸಂಸ್ಕೃತಪದಗಳೂ ಹಕಾರಾದಿಯಾಗಬೇಕಿದ್ದುವು. ಇದರರ್ಥವೆಂದರೆ ಜನಮನದಲ್ಲೇ ಒಂದು ರೀತಿಯ ತಾರತಮ್ಯವಿತ್ತು.ಜನ ಆಡಿನುಡಿಯಲ್ಲಿ ಮಹಾಪ್ರಾಣ,ಷಕಾರ ಇತ್ಯಾದಿಗಳನ್ನು ಬಳಸದಿದ್ದುದಕ್ಕೆ ಬಹುಶಃ ಅವು ದಿನನಿತ್ಯದ ಬಳಕೆಗೆ ಕ್ಲಿಷ್ಟ ಎಂಬ ಕಾರಣಕ್ಕಿರಬಹುದು.ಆದರೆ ಬರಹದಲ್ಲಿ ಭಿನ್ನತೆ ಉಳಿದುಬಂದುದಕ್ಕೆ ಕೆಲವು ಸಂಸ್ಕ್ರತಾರಾಧಕರು ಮಾಡಿದ ನಿಯಮಗಳೇ ಕಾರಣ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ.ತಾವು ಸೂಚಿಸಿದಂತೆ ವರ್ಣಾಮಾಲೆಯನ್ನು ಮೊಟಕುಗೊಳಿಸಿದರೆ ಕನ್ನಡಶಾಲೆಗಳಿಗೆ ಮಕ್ಕಳನ್ನು ಕಳಿಸುವುದಕ್ಕೆ ಹೆತ್ತವರು ಮುಗಿಬೀಳುತ್ತಾರೆಂದು ಡಿ.ಎನ್.ಎಸ್. ತಿಳಿದುಕೊಂಡಿದ್ದರೆ ಅದೊಂದು ಭ್ರಮೆ.ನಮ್ಮ ಮಕ್ಕಳಿಗೆ ಕನ್ನಡವೇ ಬೇಡ ಎಂದು ಜನ ಕನ್ನಡ ಶಾಲೆಗಳಿಂದ ದೂರಸರಿಯುತ್ತಾರೆ!ಅಪಚಾರ’ವನ್ನು ಸರಿಪಡಿಸುವ ಉಮೇದಿನಲ್ಲಿ ತಾವೆಂಥಾ ವಿನಾಶಕಾರಿ ಸಲಹೆಗಳನ್ನು ನೀಡುತ್ತಿದ್ದೇವೆನ್ನುವುದೇ ಡಿ.ಎನ್.ಎಸ್.ರಿಗೆ ತಿಳಿದಂತಿಲ್ಲ. ವೃಥಾ ಚರ್ಚೆ ಮಾಡದೆ, ಅವರ ಸಲಹೆಗಳ ಸಾರವನ್ನಷ್ಟೇ ತೆಗೆದುಕೊಂಡು ಯಾವ ಅಕ್ಷರಗಳನ್ನಾಗಲಿ, ಚಿಹ್ನೆಗಳನ್ನಾಗಲಿ ಕೈಬಿಡದೆ, ಬದಲು ಇನ್ನೂ ಕೆಲವನ್ನು ಅಳವಡಿಸಿಕೊಂಡು, ಮುಂದುವರಿಯಲು ಸಾಧ್ಯವಿಲ್ಲವೇ ಎನ್ನುವುದು ಅವರೂ ಸೇರಿ ಎಲ್ಲರೂ ಯೋಚಿಸಬೇಕಾದ ಸಂಗತಿ. ಇಂದು ನಾವು ಹೆಚ್ಚಚ್ಚು ಸಂಕರಸಂಸ್ಕೃತಿಯನ್ನು ಒಳಗೊಂಡಿದ್ದೇವೆ; ಹೆಚ್ಚೆಚ್ಚು ಉದಾರವಾದಿಗಳೂ, ಅದಕ್ಕೂ ಮೀರಿ ತೀವ್ರಗಾಮಿಗಳೂ ಆಗಿದ್ದೇವೆ; ಕೇಂದ್ರೀಕರಣದ ಬದಲು ವಿಕೇಂದ್ರೀಕರಣಕ್ಕೆ ಹೆಚ್ಚಿನ ಒಲವು ತೋರುತ್ತಿದ್ದೇವೆ; ನಮ್ಮ ಸಾಹಿತ್ಯ ಭಾಷೆಯಲ್ಲೂ ಹೆಚ್ಚೆಚ್ಚು ಆಡುನುಡಿಗಳು ಬರುತ್ತಿವೆ. ಇಂಥ ಸಂದರ್ಭದಲ್ಲಿ ಒಂದರ ಬದಲು ಇನ್ನೊಂದು ಎನ್ನುವುದಕ್ಕಿಂತ ಒಂದರ ಜತೆ ಇನ್ನೊಂದು ಎನ್ನುವುದೇ ಹೆಚ್ಚು ಸಮಂಜಸವಾದೀತು. ಹೀಗಾದಾಗ ನಾವು ಒಂದೋ ಅದು ಇಲ್ಲವೇ ಇದು ಎಂಬ ಇತ್ಯರ್ಥವಾದಿಗಳಾಗದೆ, ಅದೂ ಇದೂ ಎನ್ನುವ ತೆರೆದ ಮನಸ್ಥಿತಿಯನ್ನು ತಲುಪಬಹುದು.

ಸಂದರ್ಭ ಶರಣತೆಯ ಅಪಾಯ
ಆಡುನುಡಿಯಂತೆಯೇ ಬರಹವೂ ಇರಬೇಕು, ಅದೇ ಶಿಕ್ಷಣಮಾಧ್ಯಮದ ಶೈಲಿಯೂ ಆಗಬೇಕು ಎಂಬಲ್ಲಿನ ಪ್ರಚ್ಛನ್ನ ಅಪಾಯದ ಬಗ್ಗೆ ಎಚ್ಚರಿಸುವುದೂ ಅಗತ್ಯ. ಈ ಅಪಾಯವೆಂದರೆ ಸಂದರ್ಭ ಶರಣತೆ (context-boundedness). ಶಿಕ್ಷಣದ ಯಾವುದೇ ವಿಷಯ ಕೂಡಾ ವಿದ್ಯಮಾನೀಯ (phenomenal) ಜಗತ್ತಿನ ಸದ್ಯತೆಯಿಂದ ವೈಚಾರಿಕ (intellectual) ಜಗತ್ತಿನ ದೂರದ ಕಡೆಗೆ ಸರಿಯಲು ವಿದ್ಯಾರ್ಥಿಗಳಿಗೆ ಆಹ್ವಾನ ನೀಡುತ್ತದೆ; ಎಂದರೆ ಮೂರ್ತ (concrete) ಜಗತ್ತಿನಿಂದ ಅಮೂರ್ತ (abstract) ಜಗತ್ತಿನತ್ತ. ಇಂಥ ಮಾನಸಿಕವಾದ ಸಂದರ್ಭ ವಿಮುಕ್ತಿ ಬೆಳವಣಿಗೆಗೆ ಅಗತ್ಯ. ಗಣಿತ, ಭೌತವಿಜ್ಞಾನ ಮುಂತಾದವೂ ಭಾಷೆಗಳೇ ಎಂಬುದನ್ನು ತಿಳಿದರೆ ಈ ಮಾತಿನ ಪ್ರಾಧಾನ್ಯ್ ಗೊತ್ತಾಗುತ್ತದೆ. ಯಾಕೆಂದರೆ ಇಂಥ ಭಾಷೆಗಳಲ್ಲಿ ಎಲ್ಲ ಸಂಗತಿಗಳಿಗೂ ನಾವು ಹುಟ್ಟಿಬೆಳೆದ ಅಥವಾ ಇರುವ ಸಂದರ್ಭದಲ್ಲಿ ವಾಸ್ತವ ನಿದರ್ಶನಗಳು ಸಿಗುವುದಿಲ್ಲ. ಇವುಗಳನ್ನು ಕಲಿಸುವಲ್ಲಿ ಪಾರಿಭಾಷಿಕ ಪದಗಳು ಅರ್ಥಪೂರ್ಣವಾಗಿರಬೇಕು ಎಂಬ ಮಾತನ್ನು ಒಪ್ಪಲೇಬೇಕಾದರೂ, ಇವುಗಳ ಕಲಿಕೆ ವಿದ್ಯಾರ್ಥಿಗಳ ಅನುಭವ ಪ್ರಪಂಚಕ್ಕೆ ಸೀಮಿತವಾಗಬೇಕು ಎನ್ನುವುದು ಅಸಹಜವಾಗುತ್ತದೆ. ಯಾಕೆಂದರೆ ಎಲ್ಲ ಕಲಿಕೆಯೂ ಅನುಭವ ವಿಸ್ತರಣೆಯೇ ಅಲ್ಲದೆ ಅನುಭವ ಸೀಮಿತವಲ್ಲ. ಆಡುನುಡಿಗೆ (ಅರ್ಥಾತ್ ವಿದ್ಯಮಾನೀಯ ಜಗತ್ತಿಗೆ) ತನ್ನನ್ನು ತಾನು ಸೀಮಿತಗೊಳಿಸಿದ ವಿದ್ಯಾರ್ಥಿ ಉನ್ನತ ವಿದ್ಯಾಭ್ಯಾಸಕ್ಕೆ ಬಂದಾಗ ಅಮೂರ್ತ ಚಿಂತನೆಯ ಯಾವ ತಯಾರಿಯೂ ಇರದೆ ಸೋಲುತ್ತಾನೆ.
ಕನ್ನಡ ಅಭಿವೃದ್ಧಿಯ ವಿಷಯದಲ್ಲಿ ಲಿಪಿಯ ಪಾತ್ರ ಒಂದು ಮಾತ್ರ. ಈ ಕುರಿತು ನಾನು ಬೇರೆಡೆ ಸಾಕಷ್ಟು ಬರೆದಿರುವ ಕಾರಣ ಇಲ್ಲಿ ಮತ್ತೆ ಅದನ್ನು ಹೇಳಲಾರೆ. ಆದರೆ ಡಿ.ಎನ್.ಎಸ್.ರ ಸಲಹೆಯ ಸಂದರ್ಭದಲ್ಲಿ ಯೋಚಿಸಬೇಕಾದ ವಿಷಯವೆಂದರೆ ಶಾಲೆಗಳಲ್ಲಿ ಕನ್ನಡ ಆಕರ್ಷಕವಾಗದೆ ಇದ್ದರೆ ಅದಕ್ಕೆ ಸಂಸ್ಕೃತಮೂಲದ ಅಕ್ಷರಗಳು ಹಾಗೂ ವ್ಯಾಕರಣ ಪುಸ್ತಕಗಳು ಕಾರಣವೇ ಅಥವಾ ಇನ್ನೇನಾದರೂ ಇರಬಹುದೇ ಎನ್ನುವುದು. ನಾವು ಹೊಸೆಯುವ ಪಾರಿಭಾಷಿಕ ಪದಗಳು ಹಾಗೂ ಕಲಿಸುವ ವ್ಯಾಕರಣಗಳು ಚೆನ್ನಾಗಿರಬೇಕು; ಜತೆಗೇ ಕನ್ನಡವನ್ನು ಚೆನ್ನಾಗಿ ಕಲಿಸುವುದು ಹೇಗೆ, ಕಲಿಕೆಯ ವಾತಾವರಣವನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ಒದಗಿಸುವುದು ಹೇಗೆ ಎನ್ನುವ ಬಗ್ಗೆಯೂ ನಾವು ಯೋಚಿಸಬೇಕಾಗುತ್ತದೆ.

ಕ್ರಾಂತಿ ಸುರುವಾಗಬೇಕಾದ್ದು ಮನೆಯಲ್ಲೇ

ಇಷ್ಟಕ್ಕೂ ಡಿ.ಎನ್.ಎಸ್. ಹಾಗೂ ಸಹಚಿಂತಕರಿಗೆ ಸ್ವಂತದ ಮಟ್ಟಿಗೆ ಕೆಲವು ಅಕ್ಷರಗಳನ್ನು ಕೈಬಿಡಬೇಕೆಂದೆನಿಸಿದರೆ ಅವರನ್ನು ಯಾರೂ ತಡೆಯುವುದಿಲ್ಲ. ಅವರಿಗೆ be my guest ಎಂದೇ ಹೇಳಬೇಕಾಗುತ್ತದೆ. ಹಿಂದೆ ಬಿ.ಎಂ.ಶ್ರೀ. ಕನ್ನಡ ಲಿಪಿಸುಧಾರಣೆಯ ಸಲಹೆ ನೀಡಿದಾಗ ತಾವೇ ಆ ರೀತಿ ಕೆಲವು ಪ್ರಯೋಗಗಳನ್ನು ಮಾಡಿದರು (ಉದಾ: ಕನ್‍ನಡ ಬಾವುಟ). ಬಿ.ಎಂ.ಶ್ರೀ. ಕನ್ನಡದ ಕಣ್ವರೆಂದೇ ಪ್ರಸಿದ್ಧರಾದವರು. ಆದರೂ ಸಾರ್ವಜನಿಕರು ಅವರ ಪ್ರಯೋಗಗಳನ್ನು ಸ್ವೀಕರಿಸಲಿಲ್ಲ. ಡಿ.ಎನ್.ಎಸ್. ಕೂಡಾ ನಾಡು ಗೌರವಿಸುವ ವಿದ್ವಾಂಸರು. ಅವರು ಸದ್ಯ ಮಾಡಬಹುದಾದ ಕೆಲಸವೆಂದರೆ ತಮ್ಮ ಸಲಹೆಗಳನ್ನು ಪ್ರಪ್ರಥಮವಾಗಿ ತಾವೇ ಪಾಲಿಸುವುದು. ಎಂದರೆ ಸುಧಾರಿತ' ಲಿಪಿಯಲ್ಲಿ ತಮ್ಮ ಲೇಖನಗಳನ್ನು,ಪುಸ್ತಕಗಳನ್ನು ಪ್ರಕಟಿಸಿ ಜನರಿಗೆ ನೀಡುವುದು.ಇದು ಆಕರ್ಷಕ,ಸುಲಭ,ನೈಜ ಮತ್ತು ಪ್ರಯೋಜನಕರ ಅನಿಸಿದರೆ ಜನ ತಾವಾಗಿಯೇ ಇಂಥ ಹೊಸತನ್ನು ಸ್ವೀಕರಿಸುತ್ತಾರೆ.ಅದಲ್ಲದೆ ಶಾಲಾಮಕ್ಕಳನ್ನು ಇದಕ್ಕೆ ಪ್ರಯೋಗಪಶುಗಳನ್ನಾಗಿ ದೂಡುವುದು ಸರಿಯಲ್ಲ.ಡಿ.ಎನ್.ಎಸ್. ತಮ್ಮ ಲೇಖನದಲ್ಲಿ ಅರ್ಕಾವೊತ್ತನ್ನು ಸಂಪೂರ್ಣವಾಗಿ ಕೈಬಿಟ್ಟುದನ್ನು ಗಮನಿಸಿ ನಾನು ಅಚ್ಚರಿಗೊಂಡಿದ್ದೇನೆ.ಯಾಕೆಂದರೆ ಅರ್ಕಾವೊತ್ತು ಮತ್ತು ಬಿಂದು ಕನ್ನಡ ಬರಹಕ್ಕೆ ಒದಗಿಸುವ ಸೌಲಭ್ಯ ದೊಡ್ಡದು. ಅದೇ ರೀತಿ ಅವರು ಇಂಥ,’ ಅಂಥ’ ಎಂಬ ಪ್ರಯೋಗವನ್ನು ಬಿಟ್ಟು ಇಂತಹ,’ ಅಂತಹ’ ಎಂದು ಮುಂತಾಗಿ ಬರೆಯುತ್ತಾರೆ. ಇದು ಅವರ ವೈಯಕ್ತಿಕ ಒಲವಾಗಿದ್ದರೆ ಆ ಕುರಿತು ಏನೂ ಹೇಳುವುದಕ್ಕಿಲ್ಲ. ಆದರೆ ಇದೊಂದು ತಾತ್ವಿಕ ನಿಲುವಾದರೆ ಗಾಬರಿಹುಟ್ಟಿಸುವ ಸಂಗತಿಯೇ ಸರಿ. ಆದರೆ ಅವರು ಬಿಂದು,ಮಹಾಪ್ರಾಣ,ಷ ಇತ್ಯಾದಿಗಳನ್ನು ಇನ್ನೂ ತಮ್ಮ ಬರಹದಲ್ಲಿ ಇರಿಸಿಕೊಂಡಿದ್ದಾರೆ. ಇವುಗಳನ್ನೂ ಬಿಟ್ಟುಕೊಟ್ಟು ಅವರು ತಮ್ಮ ಮಾರ್ಪಾಡು’ಗಳನ್ನು ತಾವೇ ಅಭ್ಯಾಸಕ್ಕೆ ತರಲು ತಯಾರಿದ್ದಾರೆಯೇ ? ನಾನದನ್ನು ನಿಜಕ್ಕೂ ಬಯಸುವವನಲ್ಲ. ಆದರೆ ಕ್ರಾಂತಿ ಯಾವಾಗಲೂ ಮನೆಯಿಂದಲೇ ಸುರುವಾಗಬೇಕು ಎಂಬ ಮಾತಿದೆ. ಇಲ್ಲದಿದ್ದರೆ ಜನರಿಗೆ ಅದರಲ್ಲಿ ನಂಬಿಕೆ ಬರುವುದಿಲ್ಲ.