ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕನ್ನಡ ನುಡಿ ತೇರು ಕಾರ್ಯಕ್ರಮ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಹೈದ್ರಾಬಾದ್ ಡಿಸೆಂಬರ್ 31 :

ಸ್ಥಳೀಯ ಕರ್ನಾಟಕ ಸಾಹಿತ್ಯ ಮಂದಿರ ಸಂಸ್ಥೆಯ ಸಭಾಂಗಣದಲ್ಲಿ ಈ ತಿಂಗಳ 26 ರಂದು ಸಂಭ್ರಮದ ವಾತಾವರಣ ನೆಲೆಗೊಂಡಿತ್ತು. ವಿದ್ಯಾಧರ ಕನ್ನಡ ಪ್ರತಿಷ್ಠಾನ ಧಾರವಾಡ ಮತ್ತು ಕರ್ನಾಟಕ ಸಾಹಿತ್ಯ ಮಂದಿರಗಳ ಜಂಟಿ ಆಯೋಜನೆಯಲ್ಲಿ ಕನ್ನಡ ನುಡಿ ತೇರು- 2021 ಕಾರ್ಯಕ್ರಮ ಅಂದು ನಡೆದಿತ್ತು. ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿದ್ಯಾಧರ ಮುತಾಲಿಕ್ ದೇಸಾಯಿಯವರ ಮಾತೋಶ್ರೀ ಜಾನಕೀಬಾಯಿ ರಂಗರಾವ್ ಮುತಾಲಿಕ್ ದೇಸಾಯಿಯವರ ಸಂಸ್ಮರಣೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹೈದರಾಬಾದ್ ಪ್ರದೇಶದ ಕನ್ನಡ ವಿಕಾಸದ ಹರಿಕರರಾದ ದಿ|| ಪ್ರೊ. ಡಿ.ಕೆ.ಭೀಮಸೇನರಾವ್, ದಿ|| ಮಾನ್ವಿ ನರಸಿಂಗರಾವ್ ಮತ್ತು ದಿ|| ಕೆರೋಡಿ ಗುಂಡೂರಾವ್ ಅವರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ, ಹಸ್ತಪ್ರತಿ ಕಥಾಸಂಕಲನ ಪ್ರಶಸ್ತಿ ಪ್ರದಾನ,ಕೃತಿಗಳ ಬಿಡುಗಡೆ, ಉಪನ್ಯಾಸ, ಕವಿಗೋಷ್ಠಿ ಮುಂತಾದ ಅಂಶಗಳು ಕಾರ್ಯಕ್ರಮದಲ್ಲಿದ್ದವು. ಕರ್ನಾಟಕದ ನಾಡಗೀತೆ, ಶ್ರೀಮತಿ ಉಷಾ ದಿದ್ದಿಗಿ ಮತ್ತು ಡಾ. ವೇದಾ ಅವರಿಂದ ಪ್ರಾರ್ಥನೆ ಮತ್ತು ಡಾ.ವಿನಯಾ ಅವರಿಂದ ಸ್ವಾಗತ ಗೀತೆಯೊಂದಿಗೆ ಸಭೆ ಪ್ರಾರಂಭವಾಯಿತು.
ಮುಂಬೈಯ ಸಾಹಿತಿ ಶ್ರೀ ವಿಶ್ವೇಶ್ವರ್ ಮೇಟಿಯವರಿಂದ ಉದ್ಘಾಟನೆಗೊಂಡ ಸಭೆಯಲ್ಲಿ ಮೊದಲಿಗೆ ಅಧ್ಯಕ್ಷರಾದ ಶ್ರೀ ವಿದ್ಯಾಧರ್ ಮುತಾಲಿಕ್ ದೇಸಾಯಿ ಅವರು ತಮ್ಮ ಪ್ರತಿಷ್ಠಾನದ ಉಗಮ, ಪ್ರಗತಿ, ಧ್ಯೇಯೋದ್ದೇಶಗಳು ಮತ್ತು ಇಲ್ಲಿಯವರೆಗೆ ಯಶಸ್ವಿಯಾಗಿ ನಡೆಸಿಕೊಟ್ಟ ಕಾರ್ಯಕ್ರಮಗಳ ಬಗ್ಗೆ ಸಭಿಕರಿಗೆ ಪರಿಚಯಿಸಿದರು.

ದೀಪ ಪ್ರಜ್ವಲನದೊಂದಿಗೆ ಉದ್ಘಾಟನೆ.

ತೆಲಂಗಾಣ ಸರಕಾರದ ಭಾಷೆ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀ ಮಾಮಿಡಿ ಹರಿಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಹಾಜರಿದ್ದು ತಮ್ಮ ಭಾಷಣದಲ್ಲಿ ಕನ್ನಡ ಮತ್ತು ತೆಲಂಗಾಣ ಹೇಗೆ ಆದಿಕವಿ ಪಂಪನ ಕಾಲದಿಂದ ಭ್ರಾತೃ ಸಂಬಂಧ ಹೊಂದಿವೆ ಎಂದು ಹೇಳುತ್ತ ಎರಡೂ ಸಮುದಾಯಗಳ ನಡುವಿನ ಐತಿಹಾಸಿಕ, ಆಡಳಿತಾತ್ಮಕ ಮತ್ತು ಸಾಂಸ್ಕೃತಿಕ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಿದರು. ತೆಲಂಗಾಣದಲ್ಲಿ ಕನ್ನಡ ಭಾಷೆಯ ಏಳ್ಗೆಗಾಗಿ ತಮ್ಮ ಸರಕಾರ ಸಹಕಾರ ನೀಡುತ್ತದೆ ಎಂದು ಆಶ್ವಾಸನೆ ನೀಡಿದರು. ನಂತರ ಶ್ರೀ ವಿಶ್ವೇಶ್ವರ ಮೇಟಿಯವರು ಹಾಗೂ ಸಾಹಿತ್ಯಮಂದಿರದ ಅಧ್ಯಕ್ಷರಾದ ಶ್ರೀ ಸುರೇಂದ್ರ ಕಟಗೇರಿಯವರು ಮಾತನಾಡಿದರು.
ಹಸ್ತಪ್ರತಿ ಕಥಾಸಂಕಲನ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀಮತಿ ರೂಪಕಲಾ ಕೆ.ಎಮ್, ಶ್ರೀಮತಿ ಸುಶೀಲಾ ಎಸ್. ಅಮೀನ್ ಮತ್ತು ಶ್ರೀಮತಿ ಯಶೋದಾ ಭಟ್ ಅವರ ಕೃತಿಗಳನ್ನು ಬಿಡಗಡೆ ಮಾಡಲಾಯಿತು. ಆ ಕೃತಿಗಳನ್ನು ಸಭಿಕರಿಗೆ ಪರಿಚಯ ಮಾಡಿಕೊಡಲಾಯಿತು. ಮತ್ತು ಪ್ರಶಸ್ತಿ ವಿಜೇತರನ್ನು ಸತ್ಕರಿಸಲಾಯಿತು.

ನಂತರ ಬೇರೆ ಬೇರೆ ವಿಭಾಗಗಳಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಕನ್ನಡಿಗರಿಗೆ ಗೌರವ ಮತ್ತು ಪ್ರಶಸ್ತಿ ಪ್ರದಾನದೊಂದಿಗೆ ಸನ್ಮಾನ ಮಾಡಲಾಯಿತು. ಶ್ರೀ ಚಂದಕಚರ್ಲ ರಮೇಶ ಬಾಬು, ಶ್ರೀಮತಿ ಪ್ರಭಾ ಮಟಮಾರಿ, ಶ್ರೀವಿ.ಬಿ ತಾರಕೇಶ್ವರ್, ಶ್ರೀಮತಿ ಪ್ರವೀಣಾ ದೇಶಪಾಂಡೆ, ಶ್ರೀ ಪ್ರಹ್ಲಾದ ಜೋಶಿ, ಶ್ರೀ ಕೃಷ್ಣಮೂರ್ತಿ ಮಾರಣಕಟ್ಟೆ, ಶ್ರೀ ನರಸಿಂಹಮೂರ್ತಿ ಜೋಯಿಸ್, ಶ್ರೀಮತಿ ಸುಶೀಲಾ ಕಾಂತಾರಾವ್, ಶ್ರೀಕೆರೋಡಿ ನಿರಂಜನರಾವ್, ಡಾ. ವಿನಯಾ ಅವರುಗಳು ಪ್ರಶಸ್ತಿ ಮತ್ತು ಸನ್ಮಾನ ಪಡೆದರು.
ಇವುಗಳಲ್ಲದೆ ಹೊರನಾಡ ಕನ್ನಡ ಮಾಧ್ಯಮ ಪ್ರತಿಭಾ ಪುರಸ್ಕಾರದ ಕೆಳಗೆ ಕನ್ನಡದಲ್ಲಿ ಉತ್ತಮ ಅಂಕಗಳಿಸಿರುವ ಕು. ಡಿ.ಅಪರ್ಣ, ಶಾಂಭವಿ ಕುಲಕರ್ಣಿ, ಶಿಲ್ಪ.ಜೆ, ಶ್ವೇತಾ ಆರ್. ಇವರುಗಳನ್ನು ಸತ್ಕರಿಸಲಾಯಿತು. ಮುಂದೆ ಕರ್ನಾಟಕದ ಸಾಧಕರಿಗೆ ಸಹ ಪ್ರಶಸ್ತಿ ಮತ್ತು ಸನ್ಮಾನ ಮಾಡಲಾಯಿತು. ಈ ವಿಭಾಗದಲ್ಲಿ ಶ್ರೀ ತೈರೊಳ್ಳಿ ಮಂಜುನಾಥ ಉಡುಪ, ಶ್ರೀಮತಿ ಸುನೀತಾ ಪ್ರಕಾಶ್, ಕು. ಸ್ನೇಹಶ್ರೀ ದತ್ತಾತ್ರೇಯ ಹೆಗಡೆ ಇವರುಗಳು ಸನ್ಮಾನ ಪಾತ್ರರಾಗಿದ್ದರು.
ನಂತರ ಮುಂಬೈಯ ವಿದುಷಿ, ಡಾ. ಶ್ಯಾಮಲಾ ಪ್ರಕಾಶ್ ಅವರಿಂದ “ದಾಸ ಸಾಹಿತ್ಯದಲ್ಲಿ ಉಗಾಭೋಗ ಮತ್ತು ಮುಂಡಿಗೆಗಳು’ ಎಂಬ ವಿಷಯದ ಬಗ್ಗೆ ಮೂಡಿಬಂದ ಭಾಷಣ ಸಭಿಕರ ಪ್ರಶಂಸೆಗೆ ಪಾತ್ರವಾಯಿತು.
ಕೊನೆಯದಾಗಿ ಒಂದು ವಿಭಿನ್ನ ರೀತಿಯ ಕವಿ ಗೋಷ್ಠಿಯಲ್ಲಿ “ನಿಮ್ಮ ಕಾವ್ಯ ನನ್ನ ಗ್ರಹಿಕೆ” ಶೀರ್ಷಿಕೆಯಡಿಯಲ್ಲಿ ಬೇರೆಯವರ ಕವನವನ್ನು ಓದುತ್ತ ಅದರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳುವ ಅವಕಾಶ ಭಾಗವಹಿಸಿದ ಕವಿಗಳಿಗೆ ಒದಗಿಸಲಾಯಿತು. ಕಾರ್ಯಕ್ರಮ ಆಸಕ್ತಿಕರವಾಗಿ ಮೂಡಿಬಂದಿದ್ದು ಸಂಚಾಲಕರ ನವ್ಯ ದೃಷ್ಟಿಕೋನವನ್ನು ಸಾರಿತ್ತು. ಇಡೀ ಕವಿಗೋಷ್ಠಿಯ ಸಾರಾಂಶವನ್ನು ತಮ್ಮದೇ ಆದ ಮನೋವೈಜ್ಞಾನಿಕ ರೀತಿಯಲ್ಲಿ ಶ್ರೀಮತಿ ಕಪಿಲಾ ಶ್ರೀಧರ್ ಅವರು ಮಂಡಿಸಿದರು.
ಕೊನೆಯದಾಗಿ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕಾರ ನೀಡಿದ, ದುಡಿದ ಎಲ್ಲ ಕಾರ್ಯಕರ್ತರಿಗೆ ಮತ್ತು ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ನೀಡಲಾಯಿತು.

ಅಧ್ಯಕ್ಷರ ಮುಕ್ತಾಯ ಭಾಷಣ ಮಾಡುತ್ತ ಅಧ್ಯಕ್ಷರಾದ ಶ್ರೀ ವಿದ್ಯಾಧರ ಮುತಾಲಿಕ್ ದೇಸಾಯಿ ಅವರು ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡ ಬಗ್ಗೆ ತಮ್ಮ ಸಂತಸ ವ್ಯಕ್ತ ಪಡಿಸಿದರು. ಎಲ್ಲರಿಗೂ ಧನ್ಯವಾದ ಹೇಳುತ್ತ ಇದೇ ರೀತಿಯ ಪ್ರೋತ್ಸಾಹ ಸಿಕ್ಕಿದಲ್ಲಿ ಮುಂದಿನ ವರ್ಷಗಳಲ್ಲಿ ಮತ್ತಿತರ ಕನ್ನಡ ಸಾಧಕರಿಗೆ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಮಾಡಲು ಪ್ರತಿಷ್ಠಾನ ತಯಾರಿದೆ ಎಂದು ಸಾರಿದರು. ಸಾಹಿತ್ಯ ಮಂದಿರದ ಕಾರ್ಯದರ್ಶಿಯಾದ ಶ್ರೀ ನರಸಿಂಹಮೂರ್ತಿ ಜೋಯಿಸ್ ಅವರು ವಂದನಾರ್ಪಣೆ ಮಾಡಿದರು.
ಇಡೀ ದಿನದ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದ್ದು ಅದರ ಪ್ರತಿಯೊಂದು ಹೆಜ್ಜೆಯಲ್ಲೂ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಹಾಗೂ ಸ್ಥಳೀಯ ಸಂಚಾಲಕಿಯಾದ ಶ್ರೀಮತಿ ಕೆ.ಎಮ್. ರೂಪಕಲಾ ಅವರು ಕಳೆದ ಎರಡು ವರ್ಷಗಳಿಂದ, ಈ ಕಾರ್ಯಕ್ರಮವನ್ನು ಹೈದರಾಬಾದ್ ನಲ್ಲಿ ನಡೆಸಲು ಪಟ್ಟ ನಿರಂತರ ಶ್ರಮ ಮತ್ತು ಅಂಕಿತ ಭಾವ, ತಯಾರಿ ಎದ್ದು ಕಾಣುತ್ತಿದ್ದವು.