ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತುಂಬಿದೂರಿನಲೊಂದು: ಸಂಗೀತ

ಚಂದ್ರಶೇಖರ್ ಪೊತಲಕರ್ ಅವರದ್ದು ಬಹುಮುಖ ಪ್ರತಿಭೆ. ವೃತ್ತಿಯಲ್ಲಿ ...ಕಳೆದ ಮೂರು ವರ್ಷದಿಂದ ಸಂಗೀತ ಕಲಿಯುತ್ತಿದ್ದಾರೆ. ಮೂರು ದಶಕದಿಂದ ಸ್ವಿಡನ್ ನಲ್ಲಿ ನೆಲೆಸಿರೋ, ರಾಷ್ಟ್ರ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಸಿತಾರ್ Maestro ಪಂಡಿತ್ ಹರವಿಂದರ್ ಸಿಂಗ್ ಅವರು ಇವರ ಸಂಗೀತ ಗುರು. ಕನ್ನಡದ ಖ್ಯಾತ ಚಿತ್ರ ಸಾಹಿತಿ ಹೃದಯಶಿವ ಅವರ ಕವಿತೆಗೆ ರಾಗ ಸಂಯೋಜಿಸಿ ಹಾಡಿದವರು ಚಂದ್ರಶೇಖರ್ ಪೋತಲಕರ್... ಈ ಸುಂದರ ಭಾವಗೀತೆ ನಿಮಗಾಗಿ...?
ಚಂಪೋ

ಚಂದ್ರಶೇಖರ್ ಪೊತಲಕರ್ ಅವರದ್ದು ಬಹುಮುಖ ಪ್ರತಿಭೆ. ವೃತ್ತಿಯಲ್ಲಿ …ಕಳೆದ ಮೂರು ವರ್ಷದಿಂದ ಸಂಗೀತ ಕಲಿಯುತ್ತಿದ್ದಾರೆ. ಮೂರು ದಶಕದಿಂದ ಸ್ವಿಡನ್ ನಲ್ಲಿ ನೆಲೆಸಿರೋ, ರಾಷ್ಟ್ರ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಸಿತಾರ್ Maestro ಪಂಡಿತ್ ಹರವಿಂದರ್ ಸಿಂಗ್ ಅವರು ಇವರ ಸಂಗೀತ ಗುರು. ಕನ್ನಡದ ಖ್ಯಾತ ಚಿತ್ರ ಸಾಹಿತಿ ಹೃದಯಶಿವ ಅವರ ಕವಿತೆಗೆ ರಾಗ ಸಂಯೋಜಿಸಿ ಹಾಡಿದವರು ಚಂದ್ರಶೇಖರ್ ಪೋತಲಕರ್…
ಈ ಸುಂದರ ಭಾವಗೀತೆ ನಿಮಗಾಗಿ…?

ಸಂಪಾದಕ

ತುಂಬಿದೂರಿನಲೊಂದು
ಕಂಬದಾ ಮನೆಯಿತ್ತು
ಗೊಂಬೆಯಂಥವಳೊಬ್ಬಳಿದ್ದಳಲ್ಲಿ
ನಂಬಿದರೆ ನಂಬಿ
ನಂಬದಿರೆ ಬೇಡ ನೀ-
ಲಾಂಬರವೆ ಅಡಗಿತ್ತು ಕಣ್ಣುಗಳಲಿ

ಸದ್ದಿರದ ನಸುಕಿನಲಿ
ಎದ್ದು ಹಾಡುವುದೆಂತು
ಶುದ್ಧಗಾಂಧಾರದಲಿ ವೀಣೆಗೂಡಿ
ನಿದ್ದೆಗಣ್ಣುಗಳುಜ್ಜಿ
ಸಿದ್ಧನಾಗುತ ಭರದಿ
ಕದ್ದಾಲಿಸುವುದೆನಗೆ ನಿತ್ಯರೂಢಿ

ಜರಿಲಂಗದಂಚಿನಲಿ
ಮಿರಿಮಿಂಚುವಾ ಹೂವು
ಪರಿಮಳವ ಹರಡಿತ್ತು ಗಾಳಿಯಲ್ಲಿ
ಬೆರಳ ಮೀರಿಸುವಂತೆ
ಕುರುಳು ನರ್ತಿಸುತಿತ್ತು
ಸರಿಗಮಪ ಮಪದನಿಸ ಸಂಗದಲ್ಲಿ

ಇಬ್ಬನಿಯ ಹೀರುತ್ತ
ಮಬ್ಬನ್ನು ಮರೆಸುತ್ತ
ದಿಬ್ಬದಲಿ ಕೆಂಗಿರಣ ಹಬ್ಬಿಕೊಳಲು
ಹುಬ್ಬ ಮೇಲೇರಿಸುತ
ಒಬ್ಬಳೇ ನಸುನಗಲು
ಹಬ್ಬ ನನ್ನೆದೆಯಲ್ಲಿ ಮತ್ತೆ ದಿಗಿಲು

ಹೀಗೆ ಕಾಡಿದ ಚೆಲುವೆ
ಹೇಗೆ ತಾ ತೆರಳಿದಳೊ
ಮಾಗಿ ಹಿಡಿದಾ ಜಾಡ ತಾನು ಹಿಡಿದು
ಹೋಗಿ ಬಂದಿದೆ ಕಾಲ
ಮಾಗಿಯೊಂದಿಗೆ ಪುನಃ
ಕೂಗಿ ಕರೆಯಿತು ನನ್ನ ಕುಕಿಲವೊಂದು
-ಹೃದಯಶಿವ