ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೇವಕಿ:ಕಾದಂಬರಿ ಒಂದು ಪಕ್ಷಿನೋಟ

ಸುಮಾ ವೀಣಾ
ಇತ್ತೀಚಿನ ಬರಹಗಳು: ಸುಮಾ ವೀಣಾ (ಎಲ್ಲವನ್ನು ಓದಿ)

ರಾಮಾಯಣ ಮಹಾಭಾರತಗಳು ಭಾರತೀಯರಿಗೆ ಕತೆಗಳಲ್ಲ   ಅವು ಜನಸಾಮಾನ್ಯರ  ನಾಡಿ ಮಿಡಿತವೂ ಹೌದು ! ನಾರಿ ಮಿಡಿತವೂ ಹೌದು! ರಾಮಾಯಣ  ಅಂದರೆ ಸೀತೆ ಮಹಾಭಾರತ  ಅಂದರೆ ದ್ರೌಪದಿ ಎಂದು ಅಷ್ಟೇ  ಎಂದರಾದೀತೆ ಅಲ್ಲಿ ಬರುವ ಪ್ರತಿ ಪಾತ್ರವೂ ಕತೆಗೆ ಪ್ರೇರಕವಾಗಿದೆ , ಪೋಷಕವಾಗಿದೆ. ರಾಮಾಯಣದಲ್ಲಿ ಹೇಗೆಮಂಥರೆ,  ಊರ್ಮಿಳೆ,. ಮಂಡೋದರಿ, ಅಹಲ್ಯೆ, ಧ್ಯಾನಮಾಲಿನಿ, ಅನಲೆ,ತ್ರಿಜಟೆಯರು ಬರುತ್ತಾರೋ ಹಾಗೆ ಮಹಾಭಾರತದಲ್ಲೂ  ಕುಂತಿ, ದೇವಕಿ,ಭಾನುಮತಿ,  ಪಾತ್ರಗಳೂ ಮುಖ್ಯವೆ.

ಈ ಹಿನ್ನೆಲೆಯಲ್ಲಿ ಡಾ.ಎಸ್.ವಿ .ಪ್ರಭಾವತಿ ಮೇಡಮ್ ಅವರ ‘ದೇವಕಿ’ ಕಾದಂಬರಿ  ಹೆಚ್ಚು ಪ್ರಸ್ತುತ  ಅನ್ನಿಸುತ್ತದೆ.   ರಾಜಕುಮಾರಿಯಾಗಿ ಹುಟ್ಟಿ  ಕತ್ತಲ ಹೊದಲಲ್ಲೆ ಹೂತು ಹೋಗಿದ್ದ ಪಾತ್ರವೊಂದು ಹೊಸ ಹೊಳಹಿನೊಂದಿಗೆ ಇಲ್ಲಿ ಬಂದಿದೆ. ಈ ಕಾದಂಬರಿಯಲ್ಲಿ ಮುಖ್ಯವಾಗಿ ಕಂಸನ   ಅಧಿಕಾರ  ಮೋಹ ಮತ್ತು  ಪ್ರಾಣ ಮೋಹಗಳು ಬರುತ್ತವೆ. ಸ್ತ್ರೀಸಂವೇದನೆಯ ಹಿನ್ನೆಲೆಯಲ್ಲಿ ಬಂದಿರುವ  ಈ ಕೃತಿ ಓದುಗರನ್ನು ಇನ್ನಷ್ಟು ಚಿಂತನಾಶೀಲರನ್ನಾಗಿಸುತ್ತದೆ.

ಡಾ.ಎಸ್.ವಿ .ಪ್ರಭಾವತಿ

ಆರಂಭದಲ್ಲೆ ಕಂಸ ಆಕ್ರಮಣಕಾರಿ ರೀತಿಯಿಂದ ಆಳ್ವಿಕೆಗೆ ಬಂದವನು ತನ್ನ ತಂದೆಯನ್ನೇ ಹಿಮ್ಮೆಟ್ಟಿಸಿ ಬಲವಂತವಾಗಿ ಅಧಿಕಾರ ಹಿಡಿದವನು ಅನ್ನುವ ಸತ್ಯ ತಿಳಿಯುತ್ತದೆ. ಕಂಸ ಆಕ್ರಮಣಕಾರಿಯಲ್ಲ, ದುರಾಕ್ರಮಣಿ ಅನ್ನುವ ಭಾವ ದಾರುಕ ಹಾಗು ವಾರುಕರ  ಸಂಭಾಷಣೆಯಲ್ಲಿಯೇ ತಿಳಿದುಬರುತ್ತದೆ.ತುಸು ಹೆಚ್ಚು ಶ್ವಾಸ ತೆಗೆದುಕೊಂಡರೂ ಕಷ್ಟ  ಅನ್ನುವ  ವಾತಾವರಣ  ಕಂಡು ಬರುತ್ತದೆ. ಹಾಗಾಗಿ ವಸುದೇವ ಹಾಗು ದೇವಕಿಯ ಮದುವೆಗೆ ಅಲಂಕಾರ  ಮಾಡುವಾಗಲೂ ಮಲ್ಲಿಗೆಯ  ಮಾಲೆಯನ್ನು ಮೆಲ್ಲನೆ  ಬಲು ಮೆಲ್ಲನೆ  ಹಾಕುತ್ತಾರೆ . 

ಜ್ಞಾನ ಮತ್ತು ಯೋಗದಿಂದ ಮಗುವೊಂದು(ಭಗವಂತನ ಅವತಾರ) ಜನಿಸುತ್ತದೆ ಅನ್ನುವ ಕಾರಣಕ್ಕೆ  ಈ ಪ್ರದೇಶಕ್ಕೆ ಮಥುರಾ ಅನ್ನುವ ಹೆಸರು ಬಂದಿದೆ  ಎಂದು ಹೇಳುತ್ತಿದ್ದ  ಋಷಿ ಮುನಿಗಳ ಮಾತಿಗೆ ಉತ್ತರವಾಗಿ  “ಭಗವಂತ ಹುಟ್ಟುತ್ತಾನೆ ಅಲ್ಲ  ಈಗ ಹುಟ್ಟಿರುವ ನಾನೆ ಆ ಭಗವಂತ ಕಂಸ” ಎನ್ನುತ್ತಾ ಯಜ್ಞ -ಯಾಗಾದಿಗಳನ್ನು  ಮಾಡುವಾಗ ಋಷಿ ಮುನಿಗಳನ್ನು ಹಿಂಸಿಸಿ  ಅವರನ್ನು ಹಿಮ್ಮೆಟ್ಟಿಸುವ ಪ್ರಯತ್ನ ಮಾಡುತ್ತಾನೆ.

ಕಂಸ ಅಷ್ಟು ಕೆಟ್ಟವನಾಗಿದ್ದರೂ  ದೇವಕಿಯ ಮೇಲೆ ಒಂದು ದಿನವೂ ಕೋಪ ಮಾಡಿಕೊಂಡವನಲ್ಲ ಆಕೆಯ ಮೇಲೆ ಅತಿಶಯವಾದ ಪ್ರೀತಿಯನ್ನು ಹೊಂದಿರುತ್ತಾನೆ.  ಮದುವೆಯ ದಿನ ತಂಗಿಯನ್ನು ನೋಡಲು ಹೋಗಿ “ವಸುದೇವನನ್ನು ಮದುವೆಯಾಗಲು ಇಷ್ಟವಿಲ್ಲದಿದ್ದರೆ ಈಗಲೂ ಹೇಳು ಮದುವೆಯನ್ನು ನಿಲ್ಲಿಸುವೆ ಇನ್ಯಾವ ಅನಾಹುತವನ್ನೂ ಮಾಡಲಾರೆ” ಎನ್ನುವಾಗ  ದೇವಕಿ  “ನಿನಗೇನು ಕಡಿಮೆ ಹೆಂಡಿರೇನು?” ಎಂದು 

ಎತ್ತುವ ಪ್ರಶ್ನೆ  ಎಲ್ಲ ರಾಣಿಯರ ಪರವಾಗಿದೆ ಎನ್ನಬಹುದು.   ಪೌರಾಣಿಕ,ಚಾರಿತ್ರಿಕ ರಾಣಿಯರ ಸಂಚನೆಗಳಲ್ಲಿ ಬಹು ಮುಖ್ಯವಾದದ್ದು .  ತನ್ನ   ಗಂಡ ಅಥವಾ ದೊರೆ ಗೆದ್ದರೆ ಬೇರೆ  ರಾಣಿಯರು ಬರುತ್ತಾರೆ ಎನ್ನುವ ಭಯ ಸೋತರೆ ತಾವು ಗೆದ್ದ  ಅರಸರ ಆಳಾಗಬೇಕಾದ ತೊಡಕು  ಅದನ್ನು ಮಾರ್ಮಿಕವಾಗಿ  ದೇವಕಿ ಕಾದಂಬರಿಯ ಲೇಖಕಿಯಾದ ಎಸ್ .ವಿ. ಪ್ರಭಾವತಿಯವರು  ದೇವಕಿ ಪಾತ್ರದ  ಮೂಲಕ ಹೇಳಿಸಿದ್ದಾರೆ. ಕಂಸನ ಜನನದ ಸಂದರ್ಭದಲ್ಲಿ ಬರುವ ನಿರೂಪಣೆ ಓದುಗರನ್ನು ಇಲ್ಲಿ ಸೆಳೆಯುತ್ತದೆ. ಉಗ್ರಸೇನನಿಗೆ ಅತಿಸುಂದರಿಯಾದ  ಹೆಂಡತಿಯಾದ ಮೇಲೆ ಇದ್ದದ್ದು ಸಹಜ ಪ್ರೀತಿಯೇ ಆಥವಾ ಅನುಮಾನವೆ ಅನ್ನುವ ಪ್ರಶ್ನೆ ಈಗಿನ ಸಮಾಜಕ್ಕೂ ಅನ್ವಯಿಸುವ ಹಾಗಿದೆ. 

ದೇವಕಿಗೆ ವಸುದೇವನಿಗೆ  ರೋಹಿಣಿಯ ಕೂಡೆ ಪ್ರೇಮವಿದೆ ಎಂದು ತಿಳಿದಿರುತ್ತದೆ ಮದುವೆ ಮುರಿದಿದ್ದರೂ “ಕೈ ಬಿಡುವುದಿಲ್ಲ”  ಎಂಬ ಮಾತನ್ನು ಕೊಟ್ಟಿದ್ದಾನೆ ಅನ್ನುವ ವಿಚಾರವೂ ತಿಳಿದಿರುತ್ತದೆ . ವಸುದೇವನ ಬಾಳಲ್ಲಿ ಈಗಾಗಲೆ ಹೆಣ್ಣೊಬ್ಬಳ ಪ್ರವೇಶ ಆಗಿದೆ ಎಂದು ತಿಳಿದೂ ಅವನ ಜೊತೆಗೆ  ಮದುವೆಗೆ ಒಪ್ಪುವುದು ಆಕೆಯ ಧೈರ್ಯ ಹಾಗು ಅನಿವಾರ್ಯತೆಯನ್ನು ಸೂಚಿಸಿದರೂ ಮದುವೆಯ  ಮಾಲಾರ್ಪಣೆ ಸಂದರ್ಭದಲ್ಲಿ ಅವನ ಆಕರ್ಷಣೆಗೆ ಅವನ ನಿಷ್ಕಲ್ಮಶ ನೋಟಕ್ಕೆ ಒಳಗಾಗಿ  ಮದುವೆಯಾಗುತ್ತಾಳೆ.  ಮದುವೆಯ ಸಂದರ್ಭದಲ್ಲಿ ಕಳಶಕನ್ನಡಿ, ನಾರಿಕೇಳವನ್ನು ಕೈಯಲ್ಲಿ ಹಿಡಿದಿರುವ ಸನ್ನಿವೇಶ, ಕದಲಾರತಿ  ಇವೆಲ್ಲಾ ಓದುಗರಿಗೆ  ಸಾಂಪ್ರದಾಯಿಕ ಭಾವನೆಯನ್ನು  ತರಿಸುತ್ತವೆ.

ಕಂಸನಿಗೆ ವಸುದೇವನ ಮೇಲೆ ಅಪನಂಬಿಕೆ  ಇದ್ದೇ ಇರುತ್ತದೆ. ಅತಿಕ್ರಮವಾಗಿ  ಅಧಿಕಾರಕ್ಕೇರಿದ   ಕಂಸ  ಎಲ್ಲ ದಿಕ್ಕುಗಳಲ್ಲೂ ತನ್ನದೇ ವಿಗ್ರಹಗಳನ್ನು ಸ್ಥಾಪಿಸಿ ಆ ವಿಗ್ರಹಗಳನ್ನೂ ಪೂಜೆ  ಮಾಡಬೇಕು ಅವುಗಳಿಗೆ ಹಾರ ಹಾಕಬೇಕು ಎಂದಾಗ ವಸುದೇವ “ಬದುಕಿರುವವರು  ಪೂಜೆ ಮಾಡಿಸಿಕೊಂಡರೆ ಅಶ್ರೇಯಸ್ಸು”  ಅನ್ನುವ ವಿಚಾರವನ್ನು  ಹೇಳಿದಾಗ ಕಂಸ ಮತ್ತೆ  ಕೋಪದಿಂದ ತನ್ನದೆ ವಿಗ್ರಹಗಳನ್ನುಧ್ವಂಸ ಮಾಡುತ್ತಾನೆ. ಅಧಿಕಾರ ಪಡೆಯಬೇಕು ಸಾವನ್ನು ದೂರ ಮಾಡಿಕೊಳ್ಳಬೇಕು ಅನ್ನುವುದೇ ಅವನ  ಉದ್ದಿಶ್ಯ. 

 ಕಂಸನ ಹೆಂಡತಿಯರ ಹೆಸರು ಆಸ್ತಿ ಮತ್ತು ಪ್ರಾಪ್ತಿ ಜರಾಸಂಧನ ಅವಳಿ ಮಕ್ಕಳು . ಜರಾಸಂಧ ಕಂಸನ ತಂಗಿ ದೇವಕಿಯ ಮದುವೆಗೆ ಬರುತ್ತಾನೆ . ಹಾಗಗೆ ಬರುವಾಗ ಮುನಿಗಳ ಗುಂಪನ್ನು ಕರೆದುಕೊಂಡು ಬರುತ್ತಿರುತ್ತಾನೆ. ಆ ಮುನಿಗಳು  ನವವಿವಾಹಿತ ಜೋಡಿಗೆ  ಆಶೀರ್ವಾದ   ಮಾಡುತ್ತಾ ಈ “ದಂಪತಿಗಳಿಗೆ ಹುಟ್ಟುವ  ಎಂಟನೆಯ ಮಗುವಿನಿಂದ  ಕಂಸನ ವಧೆ   ಖಂಡಿತಾ” ಅನ್ನುವ ಭವಿಷ್ಯವನ್ನು ಮಾರ್ನುಡಿದಾಗ ಮತ್ತೆ ಕಂಸ ವಿಹ್ವಲತೆಗೆ ಗುರಿಯಾಗುತ್ತಾನೆ. ಮೆರವಣಿಗೆ ಸಾಗುತ್ತಿರುತ್ತದೆ . ಆ ಸಮಯದಲ್ಲಿ  ಅಕ್ರೂರ ಮತ್ತು ಚಾಣೂರ ಅನ್ನುವ ಮಂತ್ರಿಗಳು ದಂಗೆ ಎದ್ದು ನಿನ್ನ ಸಿಂಹಾಸನವನ್ನು ಗಟ್ಟಿ ಮಾಡಿಕೊಳ್ಳಲು ಸುಲಭ ಅವಕಾಶ ಎನ್ನುತ್ತಾನೆ. ( ಪುಟ. ಸಂ 20. ) ಇದು ಅವಕಾಶವಾದಿಗಳ ಮುಖವಾಣಿಯಾಗಿಯೇ ಬಂದಿದೆ. ಕೆಂಪು ಅಶುಭ, ಹಸಿರು ಶುಭಇತ್ಯಾದಿ ಇಲ್ಲಿ ಬಣ್ಣಗಳ ನಂಬಿಕೆ  ಹಾಗು ಅಪನಂಬಿಕೆಗಳು ಬರುತ್ತವೆ. ಆವೇಶದಿಂದ ಕಂಸ ದೇವಕಿಯ ಮೇಲೆ ಕೈ ಮಾಡುತ್ತಾನೆ ಅವಳು ಮೂರ್ಛೆ ಹೋದಾಗ  ಅವಳನ್ನು ಉಪಚರಿಸುವ ಕೆಲಸವನ್ನೂ ಮಾಡುತ್ತಾನೆ. ಇಲ್ಲಿ  “ ದೀರ್ಘಸುಮಂಗಲೀ ಭವ” ಅನ್ನುವ ಆಶೀರ್ವಾದದ ಮಾತುಗಳೂ ಕೇಳಿಬಂದ ನಂತರ ಕಂಸ ನನಗೆ  ಕಂಟಕವಿರುವುದು  ದೇವಕಿಯ ಮಗುವಿನಿಂದಲೇ ಹೊರತು  ದೇವಕಿಯಿಂದಲ್ಲ ಹಾಗಾಗಿ ಅವರನ್ನು ಸೆರೆ ಮನೆಗೆ ಹಾಕುವುದೆ ಉಚಿತ  ಅನ್ನಿಸಿ ಸೆರೆವಾಸ ವಿಧಿಸುತ್ತಾನೆ. ಒಟ್ಟು ಮಂಗಳ ಮಯ ಸನ್ನಿವೇಶ  ನಿರ್ಮಾಣವಾಗಬೇಕಿದ್ದ ಅರಮನೆಯ  ವಾತಾವರಣ ಅಮಂಗಲಮಯ ಸನ್ನಿವೇಶ ನಿರ್ಮಾಣವಾಗುತ್ತದೆ. 

ತಂಗಿ ಹಾಗು ವಸುದೇವರನ್ನು ಬಂಧಿಖಾನೆಗೆ ಕಳಿಸಿದ ಸಂದರ್ಭದಲ್ಲಿ   ಅವರಿಗೆ ಬೇಕಾದ ಭಕ್ಷ್ಯ ಭೋಜನವನ್ನು ಕಳುಹಿಸುತ್ತಿರುತ್ತಾನೆ ಆಕೆ ವೀಣಾ ವಾದಕಿ ಅನ್ನುವ ಕಾರಣಕ್ಕೆ ವೀಣೆಯೊಂದನ್ನು ಕಳಿಸಿರುತ್ತಾನೆ.   ರತ್ನದ ಸಂಕೋಲೆಯಾದರೂ ತೊಡರಲ್ಲವೆ, ಮುತ್ತಿನ ಬಲೆಯಾದರೂ ಬಂಧನವಲ್ಲವೆ ಎಂದು ಅಕ್ಕನ ತನ್ನ ವಚನದಲ್ಲಿಹೇಳುವಂತೆ ಅವಳಿಗೆ ಯಾವ   ಅನುಕೂಲವನ್ನು ಕಲ್ಪಿಸಿಕೊಟ್ಟರು ಬಂಧನ ಅನ್ನುವ ತೊಡರು ಇದ್ದೇ ಇತ್ತು. 

ವೇಷ ಮರೆಸಿಕೊಂಡು  ವಸುದೇವ “ನಾನು ಹೊರಗೆ  ಹೋಗಿ ಬರುವೆ” ಎಂದು ಹೇಳಿದಾಗ “ಎಲ್ಲಿ ರೋಹಿಣಿಯ ಬಳಿಗೇ….!”  ಎನ್ನುವ ಮಾತು  ತುದಿ ಬಾಯಿಗೆ ಬಂದರೂ ಮಾತನಾಡದೆ ಅನುಭವಿಸುವ ಸಂಚನೆ  ಹೇಳತೀರದು ಇಷ್ಟರ ನಡುವೆ ಹುಟ್ಟಿದ  ಏಳು ಮಕ್ಕಳನ್ನು  ಹುಟ್ಟಿದ ಕೂಡಲೆ ಬರುವುದು  ಕಂಸ ತನ್ನ ಕತ್ತಿಯ ಅಲುಗಿನಿಂದ  ‘ಚರಕ್ ‘ಎಂದು ಕತ್ತರಿಸುವುದು  ಮಕ್ಕಳೂ ಬಾಯಿಂದ ‘ಕಮಕ್’ ಅನ್ನುವ ಅರ್ಧ ಸ್ವರ ಬರುವುದು ಅರಳಬೇಕಾದ  ಕಂದನನ್ನು  ,ಮುರುಟಿ ಹಾಕುವ ಕಂಸನ ಮನಸ್ಥಿತಿ ಇಲ್ಲಿ ಅಕ್ಷಮ್ಯವಾದುದೇ ಸರಿ!.  ಉರಿಯುವ ಬೆಂಕಿಗೆ ತುಪ್ಪ ಸುರುವಿದಂತೆ   ನೀನೇ ಮಹಾನುಭಾವ ನಿನ್ನನ್ನೂ  ಮೀರಿಸುವಂತ ಮಗು  ಬರುತ್ತದೆ ಎನ್ನುವ ನಾರದರ ಮಾತು ಕಂಸನನ್ನು ಇನ್ನಷ್ಟು ರೇಜಿಗೆ ಏರಿಸಿರುತ್ತದೆ. 

 ದೇವಕಿ ತಾನು ಕನ್ಯೆಯಾಗಿದ್ದಾಗ ಕೆಂಪು  ಹೂವಿನ  ಕನಸನ್ನು ಕಾಣುತ್ತಿದ್ದಳಂತೆ ಆದರೆ ತಾಯಿ ಹಾಲನ್ನು ಕುಡಿಯುತ್ತಿದ್ದಒಂದೊಂದೂ ಮಕ್ಕಳ ಹತ್ಯೆಯಾಗುತಿದ್ದಂತೆ  ಅವಳು ರಕ್ತಸಿಕ್ತವಾದ ಮುಂಡಗಳ ಭೀಬತ್ಸ ದೃಶ್ಯವನ್ನು .ಕಾಣುತ್ತಿದ್ದಳು. ರಾಜ್ಯ ಭಾರವಾಗಲಿ , ಸೇನಾಧೀಪತ್ಯವಾಗಲಿ ಶಾಶ್ವತವಲ್ಲ  ಎಲ್ಲ  ಕೆಡುಕುಗಳಿಗೂ ಅಂತ್ಯಕಾಲ ಬಂದೇ ಬರುತ್ತದೆ ಎಂದು  ಎಂಟೂ ಮಕ್ಕಳನ್ನು ಪಡೆಯುವ ನಿರ್ಧಾರಕ್ಕೆ ಬರುತ್ತಾಲೆ.  ಒಂದೋಂದು ಮಗುವಿನ ಹತ್ಯೆಯಾದಾಗಲೂ  ರಕ್ತ ಸಿಕ್ಕ ಆ ಗೋಡೆಯನ್ನು  ಸೈನಿಕರು ಒರೆಸುತ್ತಿದ್ದರು ಆದರೆ ಆ ರಕ್ತದ ಹಸಿ ವಾಸನೆಯನ್ನು  ಅಳಿಸಲು ಸಾಧ್ಯವೇ ಅನ್ನುವ ಮಾತು ನಮ್ಮನ್ನು ಚಿಂತಾದರ್ಶಿಗಳನ್ನಾಗಿಸುತ್ತದೆ.  ಸೈನಿಕರೂ ಕೂಡ  ದೇವಕಿಯ ಪರವಾಗಿಯೇ ಇದ್ದರು ಅವಳಿಗೆ ಎರಡು ಹೊಸ ಕಂಬಳಿಗಳನ್ನು ತಂದು ಕೊಟ್ಟಿದ್ದರು ಅನ್ನುವ ಮಾತು ಬರುತ್ತದೆ ಎಲ್ಲಾ ಕಾಲದಲ್ಲೂ ಎಲ್ಲರೂ ಕೆಟ್ಟವರೇ ಇರುವುದಿಲ್ಲ ಅನ್ನುವುದನ್ನು ಈ  ಸನ್ನಿವೇಶ ಅರ್ಥ ಮಾಡಿಸುತ್ತದೆ. 

ದೇವಕಿಗೆ ಹೆರಿಗೆಯಾದಾಗ ಅಥವಾ ಆಕೆ ಹೆರಿಗೆ ನೋವಿನಿಂದ  ಬಳಲುತ್ತಿದ್ದಾಗ  ಆಕೆಯ  ಸೇವಕಿಯರು “ಮಹಾರಾಣಿಯವರೆ” ಎಂದರೆ ಸಾಕು  ಅವಳು  ತುಸು ಕೋಪ ನಿರ್ಲಿಪತ್ತೆಗೆ ಒಳಗಾಗುತ್ತಿದ್ದಳು  ಕಾರಣ ಬಂಧಿಖಾನೆಯ ಬಂಧಿ ನಾನೆಂಥ ಮಹಾರಾಣಿ ಅನ್ನುವ ಹಾಗೆ.   ಎಂಟನೆಯ ಮಗು ಹುಟ್ಟುವ ಸಂದರ್ಭ ಅದು ಹೆಣ್ಣು ಎಂದು ಗೊತ್ತಾದಾಗ  ಹೆಣ್ಣು ಮಗುವಿನ ಮೇಲೆ ಕೈ ಮಾಡುವುದೇ ಅನ್ನುವ ಮಾತು ಬಂದರೂ  ಮಹಿಷಾಸುರನನ್ನು ಕೊಂದದ್ದು,  ಮೂಕಾಸುರನನ್ನು , ರಕ್ತಬೀಜಾಸುರನನ್ನು ಕೊಂದದ್ದು  ಎನ್ನುವ ವಿಚಾರ ಕಂಸನಲ್ಲಿ ಭಯ ವನ್ನು ತರಿಸುತ್ತದೆ. ಸಾಂಧೀಪನಿ ಮುನಿಗಳು ನಿನ್ನನ್ನು ಕೊಲ್ಲುವ ಮಗು ನಂದಗೋಕುಲದಲ್ಲಿ ಬೆಳೆಯುತ್ತಿದೆ ಅನ್ನುವ ಎಚ್ಚರವವನ್ನು ಕೊಡುತ್ತಾರೆ .

ಆಧುನಿಕ ಪರಿಭಾಷೆಯಲ್ಲಿ  ಮಗುವಿನ  ಮೇಲೆ ತಂದೆ ತಾಯಿ ಇಬ್ಬರಿಗೂ ಸಮಾನ ಅಧಿಕಾರವಿರುತ್ತದೆ  ಒಬ್ಬ ಅಧಿಕಾರ ಮದದಿಂದ ಹುಟ್ಟಿದ ಮಕ್ಕಳನ್ನು ಕೊಂದರೆ  ತಂದೆಯಾದವನು ಕೂಡ ಒಳ್ಳೆಯ ಉದ್ದೇಶ ವಿದ್ದರೂ ಆ ಮಗುವಿನ ಮುಖ ನೋಡದ ಮುನ್ನ  ಮಗುವನ್ನು  ಆಕೆಯಿಂದ ಬೇರ್ಪಡಿಸಿದ. ಇಲ್ಲಿ ತಾಯಿ ಹೆರುವ ಯಂತ್ರವೇ ಅನ್ನುವ ಪ್ರಶ್ನೆ ಬರುತ್ತದೆ?ಇದು  ಪೌರಾಣಿಕ ಸರಿ ಆದರೆ ಇಂಥ  ಅದಲಿಬದಲಿ ಘಟನೆಗಳು ಸಮಾಜದಲ್ಲಿ ಆಗೊಮ್ಮೆ ಈಗೊಮ್ಮೆ ಜರುಗುತ್ತವೆ. ಇಲ್ಲಿ ಕಷಾಯ, ಮೂಗಿನ ಹತ್ತಿರ ಏನೋ ಔಷಧಿಯನ್ನು  ಹಿಡಿಯುವುದು ಇಂದಿನ  ಅರಿವಳಿಕೆಯನ್ನು ಹೋಲುತ್ತದೆ.  ಈ ಸಂದರ್ಭದಲ್ಲಿ ಸಹಾಯ ಮಾಡುವುದು ಸಾಂಧೀಪನಿ ಮಹರ್ಷಿಗಳು.

 ‘ಗೋವಿನ ಕುಲ’  ‘ಗೋಕುಲ’ ಎಂದಾಗುತ್ತದೆ ಗೋಕುಲದಲ್ಲಿ ಕಂಸನನ್ನು ಹುಟ್ಟುವ ಮಗು ಬೆಳೆಯುತ್ತಿದೆ ಎಂದ ಮೇಲೆ ಅಲ್ಲಿ ಹುಟ್ಟಿದ ಮಕ್ಕಳನ್ನು ಕೊಲ್ಲುವುದು.   (ಪುಟ ಸಂ,39) ಅದರಲ್ಲೂ ವಿಷದ ಗಾಳಿ ಪ್ರಸರಣ ಮಾಡುವುದು  ಇಂದಿನ ಬಯಾಲಾಜಿಕಲ್ ವಾರ್ ಅಥವಾ   ಜೈವಿಕ ಯುದ್ಧ ಎನ್ನುವ ಮಾತನ್ನು ನೆನಪಿಗೆ ತರುತ್ತದೆ. ಮಗು ನಂದಗೋಕುಲದಲ್ಲಿ ಬೆಳೆಯುತ್ತಿದೆ ಅನ್ನುವ ವಿಚಾರ  ದೇವಕಿಗೆ ಗೊತ್ತಾಗುತ್ತದೆ .ದೇವೇಂದ್ರ ಪ್ರಳಯಕಾಲದ ಮೋಡಗಳಿಗೆ ಆಜ್ಞೆ ಮಾಡಿದ್ದಾನೆ ಕೃಷ್ಣ ದೇವೇಂದ್ರನಿಗೆ ನೀಡಿದ ಹವಿಸ್ಸನ್ನು ಪಡೆದುಕೊಂಡಿದ್ದಾನೆ ಅನ್ನುವ ಕಾರಣಕ್ಕೆ ಈ ಸಂದರ್ಭದಲ್ಲಿ ಯಾರು ಹೇಗಾದರೂ ಸರಿ ನಮ್ಮ ಮಗನನ್ನು ಅಲ್ಲಿಂದ ಕರೆದುಕೊಂಡು ಬನ್ನಿ ಎನ್ನುವ ದೇವಕಿಯ ಮಾತು ಆಕೆಯ ಮಾತೃತ್ವದ ಮಹತಿಗೆ ಸಾಕ್ಷಿಯಾಗಿ ಬಂದಿದೆ. 

 ಕೃಷ್ಣನ ಆಗಮನದಿಂದ ನಂದಗೋಕುಲ ನಿಜವಾಗಿಯು ಆನಂದ ಗೋಕುಲವಾಗಿರುತ್ತದೆ ಸಂಗೀತ ಮೋಹಿ  ಕೃಷ್ಣ ತನ್ನಮುರಳೀ ನಾದದಿಂದ ಸಮಸ್ತವನ್ನೂ ಪ್ರಫುಲ್ಲ ಗೊಳಿಸಿರುತ್ತಾನೆ.  ಅವನ ಲೀಲೆಗಳು ಕೇಳುವುದಕ್ಕೆ ವೈನೋದಿಕವೇ ಹೊರತು ಸಹಿಸಲಲ್ಲ ಹಾಗಾಗಿ ತುಂಟ  ಕೃಷ್ಣನಿಗೆ ಬೇಗ ಮದುವೆ ಮಾಡಬೇಕು ಎನ್ನುವ  ಆಲೋಚನೆ ಯಶೋಧೆಗೆ ಬಂದಿರುತ್ತದೆ. 

ಇಲ್ಲಿ  ಗೋಪಿಕೆಯರ ವಸ್ತ್ರವನ್ನು ಕೃಷ್ಣ ಕದಿಯುವುದು  ಆಧ್ಯಾತ್ಮದ ಹಿನ್ನೆಲೆಯಲ್ಲಿ   ಬಂದಿದೆ ಹುಟ್ಟುವಾಗ ನಿರ್ವಾಣ ಹೋಗುವಾಗ ನಿರ್ವಾಣ  ಆತ್ಮ   ಪರಮಾತ್ಮ ( ಪುಟ. ಸಂ 43) ಎನ್ನುವ ಮಾತುಗಳು ಮಾರ್ಮಿಕವಾಗಿ ಬಂದಿವೆ.(ಪುಟ ಸಂ 44 ರಲ್ಲಿ) ಕೃಷ್ಣ ಹಾಗು  ಬಲರಾಮರ  ತುಂಟಾಟಗಳನ್ನು  ನೋಡಬಹುದು. ‘ಧನುರ್ಯಜ್ಞ’  ಎಂಬ ಯಜ್ಞವಿದೆ ಅದನ್ನು ನೋಡಲು ನೀವು ಬರಬೇಕೆಂದು    ಕೃಷ್ಣನನ್ನು ಅಕ್ರೂರ ನಟನೆ ಮಾಡಿ ಕರೆದುಕೊಂಡು ಹೋಗುವುದು ವಿಷದ ಲಡ್ಡುಗೆ, ಕುವಲಯಾಪೀಡ ಅನ್ನುವ ಆನೆಗೆ ಮದ್ದು ತಿನ್ನಿಸಿರುವುದು ಇಂದಿನ ದಿನಮಾನದ ಹನಿಟ್ರ್ಯಾಪ್ ಅಥವಾ  ಇನ್ಯಾವುದೆ ತಂತ್ರಗಾರಿಕೆಯನ್ನು ಮೀರಿಸುವಂತಿದೆ, ಹಾಲಿನ ಸಿಹಿ ಬಿಟ್ಟು ಅನ್ಯ ಪದಾರ್ಥಗಳಿಂದ ಮಾಡಿದ ಸಿಹಿಯನ್ನು ಸ್ವೀಕರಿಸುವುದಿಲ್ಲ ಎಂಬ ಸನ್ನಿವೇಶ ಮನೋಜ್ಞವಾಗಿ ಚಿತ್ರಿತವಾಗಿದೆ.

ಇಲ್ಲಿ ಮುಖ್ಯವಾಗಿ ದೇವಕಿಯ ‘ಶೋಕವೇ’ ಕಾದಂಬರಿಯ ‘ಶೃತಿ’ಯಾಗಿದೆ. ಎನ್ನಬಹುದು .ಮಗ  ಇದ್ದಾನೆ ಎಂದು ಗೊತ್ತು ಆತನನ್ನು ಮುದ್ದಾಮ್ ನೋಡುವಂತಿಲ್ಲ, ಮೈ ದಡುವಂತಿಲ್ಲ ಮಾತನಾಡಿಸುವಂತಿಲ್ಲ. ಆಕೆಯ ಮನದ  ಭಾವ ಹೇಗಿರಬೇಕು ಓದುಗರು ಯೋಚಿಸಬೇಕು.  ಹೂವು ಅರಳುವುದನ್ನು ಕಾಣದ ಕಣ್ಣುಗಳು   ಆ ಹೂವಿನ ಸೌಸವವನ್ನು ಅನುಭವಿಸುವಂತೆ . ದೇವಕಿ ಮಗನ ಕನವರಿಕೆಯಲ್ಲಿ ಇರುತ್ತಾಳೆ.  ರಾಧಳ ವಿಚಾರವನ್ನು ದೇವಕಿ ವಸುದೇವನ ಬಳಿ ಮತ್ತೊಮ್ಮೆ ಮಗದೊಮ್ಮೆ ಕೇಳುತ್ತಾಳೆ. ಆದರೆ  ರಾಧಾ ಮತ್ತು ಕೃಷ್ಣನ  ಸಂಬಂಧವೂ  ಆತ್ಮ ಹಾಗು ಪರಮಾತ್ಮನ ಸಂಬಂಧ ಎಂಬುದು ಇಲ್ಲಿ ವಿಷದವಾಗಿದೆ. 

ಕಂಸನ ವಧೆಯ ನಂತರ ದೇವಕಿ ಬಿಡುಗಡೆ ಹೊಂದಿದಾಗ ಆಕೆಯ ಬಿಡುಗಡೆ ಆಗುತ್ತದೆ. ಬಂಧನದಿಂದ  ಬಿಡುಗಡೆ ಹೊಂದಿದ್ದರೂ ತನ್ನೆಲ್ಲಾ ಸುಖದ  ಸೊದೆಯನ್ನು ಅನುಭವಿಸುವ ಕಾಲವನ್ನು  ಅದಾಗಲೆ ಆಕೆ ಕಳೆದುಕೊಂಡಿದ್ದಳು ನನಗೀಗ ನಲವತ್ತರಡು ವರ್ಷ   ವಯಸ್ಸು ದೇಹಕ್ಕೂ ಮನಸ್ಸಿಗೂ ಆಗಿದೆ  ಎಂದು  (ಪುಟ ಸಂ 56 ರಲ್ಲಿ) ಬರುತ್ತದೆ.   ಜರಾಸಂಧನ  ಮರಣದ ಸಂದರ್ಭ, ರುಕ್ಮಿಣೀಕಲ್ಯಾಣ, ಜಾಂಬವತಿ ಕಲ್ಯಾಣದ ಸಂದರ್ಭದಲ್ಲಿ ಮಗನಿಗೆ ಮತ್ತೆ ಮತ್ತೆ ಕಲ್ಯಾಣವಾಗುತ್ತಿದೆ ಅನ್ನುವ  ಚಿಂತೆ ಆಕೆಯನ್ನು ಕಾಡುತ್ತದೆ. ಸತ್ರಾಜಿತ ಮತ್ತು  ಪ್ರಸೇನರ  ಭಿನ್ನಾಭಿಪ್ರಾಯವೂ,ಮರಣವೂ ಇಲ್ಲಿ  ಕಂಸನ ವ್ಯಕ್ತಿತ್ವವನ್ನೆ ಅನುಸರಿಸಿದಂತಿದೆ. (ಪುಟಸಂ 86 ರಲ್ಲಿ) ಆಗಿನ ಕಾಲದ  ತಾಂತ್ರಿಕತೆಯನ್ನು ಕುರಿತು ಹೇಳುತ್ತದೆ. ಮಹಾಭಾರತದ  ಕೃತಕ ಸಭಾಭವನದ ಬಗ್ಗೆ  ಮಾಹಿತಿ ಇದೆ..  

ಮಗ ಯಶೋಧೆಯನ್ನು  ನೋಡಲು  ಹೊರಟಾಗ ನಿನ್ನ ತಂದೆ ನನ್ನ ಹಾಗು  ಗಂಡ  ಮಾಡಿದ್ದನ್ನು ಮತ್ತೆ  ಮಾಡುತ್ತಿರುವೆಯಲ್ಲ  ಎಂದು ನೊಂದುಕೊಳ್ಳುತ್ತಾಳೆ..  ಸತ್ಯಭಾಮೆಯ ವಿಚಾರ ಬಂದಾಗ ಆಕೆ ಜಗಳಗಂಟಿ ಅನ್ನುವ ಮಾತು, ದ್ರೌಪದಿಯ ಮಕ್ಕಳನ್ನು ಕೊಂದ ಸಂದರ್ಭ,  ಶಿಶುಪಾಲವಧೆಯ ಸಂದರ್ಭದಲ್ಲಿ ಯಾದವಿಯ ಶಾಪ ದೇವಕಿಯನ್ನು ವಿಹ್ವಲ ಮಾಡುವುದು, ಕುಂತಿ ಪಟ್ಟ  ಪಾಡಿನ ಬಗ್ಗೆ   ಚಿಂತೆ ಮಾಡುವುದು, ನರಕಾಸುರನ ಅಷ್ಟೂ ಹೆಂಡತಿಯರನ್ನು ಕಾಪಾಡಿದ ಸಂದರ್ಭ “ಅವರಿಗೆ ಒದಗಿದ ಗಂಡಾಂತರವನ್ನು ಕಳೆದಿದ್ದೇನೆ ಅವರ ಮನೆಯಲ್ಲಿ ಅವರು ಇರುತ್ತಾರೆ” ಎಂದು ಕೃಷ್ಣ ತಾಯಿಯನ್ನು ಸಮಾಧಾನ ಪಡಿಸುವ ಸನ್ನಿವೇಶ ಕೃಷ್ಣನಿಗೆ ಹದಿನಾರು ಸಾವಿರ ಹೆಂಡತಿಯರು ಅನ್ನುವ ಕ್ಲೇಶವನ್ನು ಹೊಡೆದೋಡಿಸಿದೆ.  

ಆ ಸಂದರ್ಭದಲ್ಲಿ ಪುಟ. ಸಂ 104 ರಲ್ಲಿ ಅಸಹ್ಯ ಏಕೆ  ಮಾನವೀಯತೆಯಿಂದ ನೋಡು  ನೀನೂ ಪುರುಷಾಹಂಕಾರದ  ಉರಿಯಲ್ಲಿ ದಗ್ಧವಾಗಿ ಹೋದವಳೆ ಅನ್ನುವ ಮಾತು  ದ್ವನಿಪೂರಕವಾಗಿದೆ. ದ್ರೌಪದಿಯ ಸಂದರ್ಭದಲ್ಲಿ ಒಂದು ತಪ್ಪು ತಿದ್ದರೆ ಇದ್ದರೆ ಸ್ವಅಹಂಗೆ ಅವಕಾಶ ಕೊಟ್ಟರೆ ಯಾವ ರೀತಿ ಅನಾಹುತ ಆಗುತ್ತದೆ ಎಂಬುದನ್ನು ಹೇಳಿದ್ದಾರೆ.   ಪುಟ. ಸಂ. 108 ರಲ್ಲಿ ಕೃಷ್ನ ಪದೇ ಪದೇ ಮೂಗು ತೂರಿಸುತ್ತಾನೆ ಅನ್ನುವ ಮಾತು  ಕೃಷ್ಣನ ಕಾಳಜಿಯನ್ನೆ ತೋರಿಸುತ್ತದೆ. 

 ಕೃಷ್ಣನ ಸಾಂಸಾರಿಕ ಬದುಕಿನ ಚಿತ್ರಣ ಅರ್ಜುನನಿಗೆ ಸಾರಥಿಯಾಗಿ ಹೋಗಬೇಡ ಅನ್ನುವ ಸನ್ನಿವೇಶ  ಸಾಂದೀಪನಿ ಮುನಿಯ ನೆನಪು ಕಾದಂಬರಿಯ ಬೆಳವಣಿಗೆಗೆ ಪೂರಕವಾಗಿವೆ. ಪುಟ  ಸಂ. 121 ರಲ್ಲಿ ದುರ್ಯೋಧನನ ಅಹಮಿಕೆಯ ತಡೆ ಗೋಡೆಯನ್ನು ನಾನೆ ಒಡೆಯಬೇಕು ಅನ್ನುವುದು  ಇಂದಿನ ಕಾಲಕ್ಕೂಅನ್ವಯಿಸಿ ಸಮಾಜಸುಧಾರಕರು ಇಂಥ ಕೆಲಸವನ್ನು  ಮಾಡಬೇಕು ಲೋಕದಲ್ಲಿ ಕಳೆ ತುಂಬಿದಾಗ ಅನ್ನುವುದನ್ನು ಸೂಚಿಸುತ್ತದೆ. ಕುಟಿಲ ತಂತ್ರದ ರಾಜಕಾರಣಿ ಕೃಷ್ಣನಾದರೆ ಈಗಿನ ಕಾಲಕ್ಕೆ ,ಮನುಷ್ಯ ದೇಹ ಹೊತ್ತ ಅನೇಕ ರಾಕ್ಷಸರು ನಮ್ಮ ನಡುವೆ ಇರುವುದು ಹಾಗಾಗಿ ಜಗತ್ತಿನಲ್ಲಿ ಯುಧ್ದಗಾಳಾಗುವುದು ಮತ್ತೆ ಯುದ್ಧ ಭೀತಿ ಇರುವುದು. 

ನೊಂದವರಿಗೆ ಮಾತ್ರ ನೋವಿನ ಯಾತನೆ ಆಳ ತಿಳಿಯುತ್ತದೆ ಅನ್ನುವುದಕ್ಕೆ ದೇವಕಿ ಸಮರ್ಥ ಉದಾಹರಣೆ. ಮೂಲ ಹಾಗು ಆನಂತರ ಬಂದ ಮಹಾಭಾರತದ ಕಥೆಗಳಲ್ಲಿ  ದೇವಕಿ ಕಂಸನ ವಧೆಯವರೆಗೆ ಮಾತ್ರ ಬರುತ್ತಾಳೆ ಆದರೆ ಇಲ್ಲಿ ಕೃಷ್ಣನ ಸಾವಿನವರೆಗೂ ದೇವಕಿಯ ಅಸ್ತಿತ್ವ ಇರುತ್ತದೆ. ಹುಟ್ಟಿದಾಗಲೆ ಮಗುವನ್ನು ನೋಡಲಿಲ್ಲ ಕಂಸನ ವಧೆಯವರೆಗೂ ಅವನನ್ನೂ ಮಾತನಾಡಿಸಲಾಗಲಿಲ್ಲ ಅವನ ಆಟ ಪಾಠವನ್ನು ನೋಡಲಿಲ್ಲ ಬರೆ ಕೇಳಿದೆ. ಅವನ ಶವವನ್ನು ಮುಟ್ಟುವುದಕ್ಕೂ ನಾನು ಎಷ್ಟವರವಳು ಅನ್ನುವ ಮಾತು ಆಕೆಯ ನೋವನ್ನೆ ತೋರಿಸುತ್ತದೆ.

 ಕಾದಂಬರಿ ಪ್ರಾರಂಭ ಅಧಿಕಾರ ಮೋಹಿಯೊಂದಿಗೆ ಪ್ರಾರಂಭವಾದರೆ ತಾಯಾಗಿ  ಮಗನ ಮೇಲಿನ ವ್ಯಾಮೋಹ ತಪ್ಪೇ? ಅವನ ಮೇಲೆ ನನ್ನ ಅಧಿಕಾರವಿಲ್ಲವೇ? ನನ್ನದು ಅಧಿಕಾರ ಮೋಹವೇ ಅನ್ನುವ ದೇವಕಿಯ ಪ್ರಶ್ನೆಯನ್ನು ಕಾದಂಬರಿಕಾರರು ಉಳಿಸಿದ್ದಾರೆ. 

-ಸುಮಾವೀಣಾ