ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರಾಮ್ ಕುಮಾರ ಡಿ ಟಿ ಅವರ " ನಿನ್ನೆ ಬಂದ ಮಳೆ" ಕವಿತೆ ಕವಿಯ ನೆನಪು,ಆಸೆಯ ಮಹಪೂರವನ್ನೇ ಹರಿಸಿದೆ...!
ರಾಮ್‌ ಕುಮಾರ್‌ ಡಿ.ಟಿ.
ಇತ್ತೀಚಿನ ಬರಹಗಳು: ರಾಮ್‌ ಕುಮಾರ್‌ ಡಿ.ಟಿ. (ಎಲ್ಲವನ್ನು ಓದಿ)

ನಿನ್ನೆ ಬಂದ ಮಳೆ
ಕಳುಹಿಸಿತು ನನ್ನ ಮತ್ತೂ ನಿನ್ನೆಗೆ…
ಊರದು ನನ್ನದು
ಅಲ್ಲಿ ನೆನಪುಗಳಿವೆ ಹಳೆವು
ಮಗುವಾಗು ಮತ್ತೆ ನೀ
ನೆನೆಪಿನಲಿ ಮತ್ತೆ ನೆನೆವ ಎಂದಿತು.

ಕಾಲಿಟ್ಟು ಮನೆಯ ಮೆಟ್ಟಿಲಾಚೆ
ಅದೆಷ್ಟು ನೆನೆದುದ್ದುಂಟು…
ಮತ್ತೆ ಅಮ್ಮನ ಒತ್ತಾಯಕೆ
ಮನೆಯ ಒಳ ಬಂದರೂ
ಕಿಟಕಿಯ ಕೈ ಹೊರ ಚಾಚಿ
ಅದೆಷ್ಟು ಕೈ ನೆನೆವ ಆಸೆಯೊ…
ಆ ಚಿಕ್ಕ ಆಸೆಗಳೆಲ್ಲಿ ಹೋದವೊ
ನನ ಕೈಬಿಟ್ಟು
ಬರಿ ದೊಡ್ಡದೇ ಆಸೆಗಳ
ಹೊತ್ತು, ಹೊರೆ ಸಾಕಾಗಿದೆ
ಮಳೆಯಲಿ ಮತ್ತೆ ನೆನೆವ ಆಸೆ ಬೇಕಾಗಿದೆ…

ಅದೇನು ದೊಡ್ಡದೇ ಬೇಕೆನ್ನುವ
ಆಸೆ ಹುಟ್ಟಿ ಮನೆ ಯಾವಾಗ
ಮಾಡಿತೊ ನನ ಮನದಲಿ
ಪುನಹ ಚಿಕ್ಕವನಾಗ ಬೇಕಾದ
ಕಾರ್ಯಕ್ರಮ ಮನದಲಿ  

ಭರದಿಂದ ಸಾಗಿದೆ.

ಆ ಒಂದು ಬಗೆಯ ಮರದ
ಕಾಯಿಯ ದೋಣಿಯಲಿ
ಅದೆಷ್ಟು ನೆನಪಿನಂಗಡಿಯ ತಾಣವೊ
ಅದೆಷ್ಟು ಕಳೆದರೂ
ಇನ್ನೊಂದರ ಹುಡುಕಾಟದ ತವಕವೊ
ಆ ಹುರುಪು ಕಾಣದಾಯಿತೊ ಕ್ರಮೇಣ,
ಮೇಣವಾಗಿ ಕರಗಿ, ಮರೆಯಾಯಿತೊ!

ಅಂಗಳದಲಿ ಹೂವೊಂದು
ಮಳೆಗೆ ಮಿಂದಿತ್ತು
ಆ ʼಖುಷಿʼ
ಮಗುವಿದ್ದಾಗ ಅದೇನು
ಮಾಂತ್ರಿಕನ ರೀತಿಯಲಿ, ಆ ಹೂವಿನಲಿ
ನನ್ನ ನಾ ಕಂಡಿತ್ತೊ  
ಆ ಶಕ್ತಿ ಇನ್ನಿಲ್ಲವೇಕೊ!

 ಮಳೆಯಾದ ಮುಂಜಾವು
ಅದೆಷ್ಟು ರಮ್ಯ ನನ ಊರಿನದು…
ಇಲ್ಲೂ ಅದು ಮಾರ್ದನಿಸಿ
ಈ ಊರೂ ನನದೆನಿಸಿತು ….
ಈ ಮಳೆಯೂ …. ನನದೆನಿಸಿತು….