ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಫ್ಯಾನ್ಸಿ ಡ್ರೆಸ್

ಸುಮಾ ವೀಣಾ
ಇತ್ತೀಚಿನ ಬರಹಗಳು: ಸುಮಾ ವೀಣಾ (ಎಲ್ಲವನ್ನು ಓದಿ)

ಮಕ್ಕಳದಿನಾಚರಣೆಯ (ಆ)ವೇಷಭೂಷಣ ಸ್ಪರ್ಧೆಯ ನೆನಪು

ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಗೂ ಹದಿನಾಲ್ಕು ದಿನಗಳ ಅಂತರ ಇರುವುದು ಎಲ್ಲರಿಗೂ ತಿಳಿದಿರುವಂಥದ್ದೆ. ಇವುಗಳ ನಡುವೆ ದೀಪಾವಳಿ, ಹಾಸನಾಂಬ ದೇವಿ ದರ್ಶನಗಳು ಒಂದಕ್ಕೊಂದು ಪೂರಕವಾಗಿ ಬರುತ್ತವೆ. ಈ ಬಾರಿ ದೀಪಾವಳಿ ಮತ್ತು ಮಕ್ಕಳ ದಿನಾಚರಣೆಗಳು ಒಟ್ಟೊಟ್ಟಿಗೆ ಬಂದಿರುವುದೇ ಈ ಬರಹಕ್ಕೆ ಸ್ಫೂರ್ತಿ . “ಮಕ್ಕಳ ದಿನಾಚರಣೆ’ ಎಂದರೆ ಶಾಲೆಗಳಲ್ಲಿ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ಇದ್ದೇ ಇರುತ್ತಿತ್ತು. ಆದರೆ ಈ ಬಾರಿ ಶಾಲೆಗಳವರಿಗೆ ಸ್ಪರ್ಧೆ ಏರ್ಪಡಿಸುವ , ಮಕ್ಕಳಿಗೆ ವಿವಿಧ ವೇಷ ಹಾಕುವ ಸಂಭ್ರಮವಿಲ್ಲ. ಮಕ್ಕಳು ಹಣ್ಣಿನಂತೆ, ಕೀಟಗಳಂತೆ, ಕೊರವಂಜಿ, ಶಾಕುಂತಲಾ, ಅಕ್ಕಮಹಾದೇವಿ, ಮೀರಾಬಾಯಿ, ಬುದ್ಧ, ರಾಘವೇಂದ್ರರಂತೆ ವೇಷ ಧರಿಸಿಕೊಂಡು ಬಂದರೆ ಅದನ್ನು ನೋಡುವುದೇ ಖುಷಿ ಅನ್ನಿಸುತ್ತಿತ್ತು. ಇವರ್ಯಾರು ಬೇಕಂತಲೆ ಮಾರುವೇಷ ಧರಿಸಿದವರು ಅಲ್ಲವಾದ್ದರಿಂದ. ಬೇಕಂತಲೇ ಮಾರುವೇಷ ಧರಿಸಿದ ಮಾರೀಚ, ರಾವಣ, ಪೂತನಿಯರಂತೆ ಇವರು ಕೆಡುಕುಂಟು ಮಾಡುವವರಲ್ಲ ಎಂಬ ಸಮಾಧಾನವೂ ಇರಬಹುದು ಆ ಕಾರಣದಿಂದಲೇ “ಫ್ಯಾನ್ಸಿ ಡ್ರೆಸ್” ಎಂದು ಕರೆದಿರಬೇಕು. ಫನ್ಗೋಸ್ಕರ, ಖುಷಿಗೋಸ್ಕರ ಹಾಕುವ ವೇಷ ಎಂದು. ಕನ್ನಡದಲ್ಲಿಯೂ ಇಂಥ ಸ್ಪರ್ಧೆಯನ್ನು ವೇಷಭೂಷಣ ಸ್ಪರ್ಧೆ ಎಂಬ ಹೆಸರಿನಿಂದ ಕರೆಯುತ್ತಾರೆ. ವೇಷ ಎಂದರೆ ಹಾಕುವ ಬಟ್ಟೆ, ಭೂಷಣ ಎಂದರೆ ತೊಡುವ ಆಭರಣಗಳು, ಹಚ್ಚಿಕೊಳ್ಳುವ ಬಣ್ಣಗಳು ಇತ್ಯಾದಿ ಇತ್ಯಾದಿ. ಈ ವರ್ಷವೂ ಇಂಥದ್ದೊಂದು ಸ್ಪರ್ಧೆ ಇದ್ದಿದ್ದರೆ ಅದೆಷ್ಟು ಕೊರೊನಾ ವೈರಸ್ಗಳು ಬರುತ್ತಿದ್ದವೋ ಏನೋ? ಗೊತ್ತಿಲ್ಲ! ಆದರೆ ಪೋಷಕರು ಈ ಬಾರಿ ಸ್ವಲ್ಪ ರಿಲ್ಯಾಕ್ಸ್ ಆದಂತೆ ಅನ್ನಿಸುತ್ತಿದೆ. ವೇಷ ಹಾಕಿಸುವುದು ಎಷ್ಟು ಸ್ವಾರಸ್ಯಕರವೋ ಅಂತಯೇ ಅದರ ಸುತ್ತಲೂ ನಡೆಯುವ ಘಟನೆಗಳು ಅಷ್ಟೇ ಸ್ವಾರಸ್ಯಕರವಾದವು. ಬಹುಮಾನ ಬಂದರೆ ಖುಷಿಯಾವೇಶ, ಬರದಿದ್ದರೆ ಬೇಸರದಾವೇಶ.


ಬಹುಮಾನ ಬರಬೇಕು ಎಂಬ ನಿರೀಕ್ಷೆ ಎಲ್ಲರಲ್ಲೂ ಇರುತ್ತದೆ. ಆದರೆ ಎಲ್ಲರಿಗೂ ಬಹುಮಾನ ಕೊಡಲಾಗುವುದಿಲ್ಲ ಎಂಬುದೂ ಸತ್ಯವೇ ಆದರೂ ಮಕ್ಕಳ ವಿಚಾರದಲ್ಲಿ ತಾರತಮ್ಯ ( ಕೆಲವರಿಗೆ ಮಾತ್ರ ಅನ್ವಯ) ಮಾಡಬಾರದು ಎಂಬುದು ನನ್ನ ಅನಿಸಿಕೆ. ಇಂಥ ಸ್ಪರ್ಧೆಗಳಲ್ಲಿ ಕ್ರಿಯಾಶೀಲತೆ, ವಿಷಯ ಪ್ರಸ್ತುತತೆ ,ಡೈಲಾಗ್ ಡೆಲಿವರಿ(ಎಲ್ಲಾ ಸ್ಪರ್ಧೆಗಳಲ್ಲಿ ಇರುವುದಿಲ್ಲ) ಹಾವಭಾವಗಳನ್ನು ಗಮನಿಸಿ ಅಂಕಗಳನ್ನು ಕೊಡಲಾಗುತ್ತದೆ. ತೀರ್ಪುಗಾರರ ಮನಸ್ಥಿತಿಯ ಮೇಲೂ ಫಲಿತಾಂಶ ನಿರ್ಧಾರವಾಗಿರುತ್ತದೆ. ಒಂದುವೇಳೆ ಅವರು ಪೂರ್ವಾಗ್ರಹ ಪೀಡಿತರಾಗಿದ್ದರೆ ಫಲಿತಾಂಶ ನಿರಾಧಾರವಾಗಿರುತ್ತದೆ ಅಷ್ಟೆ!

ಬೇಬಿ ಸಿಟ್ಟಿಂಗ್ ಮಕ್ಕಳಿಗೆ ಎಂಥ ವೇಷ ಹಾಕಿಸಿದರೂ ಅದು ವ್ಯರ್ಥವೇ….! ಹಾಗೆ ನಾನು ಹಾಕಿಸಿದ ಎರಡು ವೇಷಗಳೂ ವ್ಯರ್ಥವೇ ಆಗಿದ್ದವು, ನನ್ನಿಬ್ಬರು ವೇಷಧಾರಿಗಳು ವೇಷ ಹಾಕಿಸಿಕೊಳ್ಳುವವರೆಗೂ ಸುಮ್ಮನಿದ್ದು ಸ್ಟೇಜ್ ಮೇಲೆ ಅಕ್ಷರಶಃ ಸ್ಟ್ರೈಕ್ ಮಾಡಿಬಿಟ್ಟರು.

ಮೊದಲನೆಯದು ಕೊಡಗಿನ ಸಿಂಗಾರಿಯಾಗಿ ನುಲಿಯಲೂ ಇಲ್ಲ!ಎರಡನೆಯದು ಕೃಷ್ಣನಾಗಿ ಉಲಿಯಲೂ ಇಲ್ಲ! ಮಕ್ಕಳು ಹೇಗೆ ಇದ್ದರೂ ಸರಿಯೇ ಎಂಬಂತೆ ಆಗ ಇದ್ದದ್ದಾಯಿತು. ಆದರೆ ಎರಡು ಸೊಗಸಾದ ಫೊಟೊಗಳು ನೆನಪಾಗಿ ಉಳಿದಿವೆ.
ನಾನು ಮೊದಲ ಬಾರಿ ಹಾಗಾಯಿತು ಎಂದು ಸುಮ್ಮನಿರಲಿಲ್ಲ. ಮೊದಲ ವೇಷಕ್ಕೆ ಬಳಸಿದ ಸೀರೆಯನ್ನೇ ಎರಡನೆ ಬಾರಿಗೂ ಬಳಸಿಕೊಂಡೆ. ಸಾಧಾರಣವಾಗಿ ಬಹುಪಾಲು ಹೆಣ್ಣು ಮಕ್ಕಳಿಗೆ ಯಾವ ವಯಸ್ಸಾದರೂ ಸರಿ ಸೀರೆ ಉಡುವುದೆಂದರೆ ಇಷ್ಟವಲ್ಲವೇ? ಹಾಗೆ ನನ್ನ ವೇಷಧಾರಿಯೂ ‘ಕನ್ನಡಾಂಬೆ’ಯ ಹಾಗೆ ಲುಕ್ ಕೊಟ್ಟಿದ್ದೂ ಆಯಿತು. ಫೊಟೊ ಸೆಶೆನ್ ಕೂಡ ಆಯಿತು ಮತ್ತೆ ವೇದಿಕೆ ಹತ್ತುವಾಗ ಕಾಲು ತೊಡರಿಕೊಂಡು ತೊಡಿಸಿದ್ದ ಕಿರೀಟ, ಕಟ್ಟಿದ್ದ ತೋಳುಬಂಧಿಗಳೆಲ್ಲಾ ಅದುರಿ ಅಲ್ಲಾಡಿದವು. ಅಲ್ಲಿಗೆ ನೀವೇ ಊಹಿಸಿ ಸ್ವರ್ಧೆಯಲ್ಲಾದ ಅವಸ್ಥೆಯನ್ನು.

ಇನ್ನು ಎರಡನೆ ವೇಷಧಾರಿಯ ಸರದಿ. ಶಾಲೆಯಲ್ಲಿಯೇ ಹೋಗಿ ವೇಷ ಹಾಕಿಸಬೇಕಿತ್ತು ಹಾಗೆ ಅಲಂಕಾರ ಮಾಡುವಾಗಲೇ “ರೋಹನ್” ಎಂದು ಕರೆಯುತ್ತಿದ್ದವರು “ರೋಹಿಣಿ” ಇರಬಹುದೇ ಎಂದು ಸಂಶಯ ವ್ಯಕ್ತ ಪಡಿಸಿದಾಗ ಬಹಳ ಸಂತೋಷವಾಯಿತು. ಕೊಡಗಿನ ಬೆಡಗಿಯಾಗಿ ಮಂದಹಾಸ ಬೀರಿದ್ದು ಫೋಟೋಗಳಲ್ಲಿ ಇನ್ನೂ ಹಾಗೆ ಇದೆ!
ಮೂರನೆಯ ಸ್ಪರ್ಧೆಗೆ ಆರಿಸಿಕೊಂಡ ವಿಷಯ ವಿಶೇಷವಾಗಿತ್ತು. ಪೇಪರ್ ಗರ್ಲ್, ಬಾಯ್ ಎಲ್ಲಾ ಈಗ ಹಳೆಯವು ಆದರೆ ನಾನು ಮಾಡುವ ಕಾಲಕ್ಕೆ ತುಂಬಾ ಇನ್ನೋವೇಟಿವ್ ಅನ್ನಿಸಿತ್ತು. ಪೇಪರ್ ಧಿರಿಸು, ಕಿರೀಟ, ಕಿವಿಯೋಲೆ, ಸ್ಟಿಕ್ಕರ್, ಸ್ಲಿಪ್ಪರ್, ಬೀಸಣಿಗೆ ಎಲ್ಲವೂ ಪೇಪರಿದ್ದೆ. ಆದರೆ ಸ್ಟೇಜ್ ಹತ್ತಿಸುವಾಗ ಬಹಳ ಫಜೀತಿಯಾಯಿತು. ಮೆಟ್ಟಲು ಹತ್ತಿಸುವಾಗ ಅಂಗಿಯೇ ಪರ್ …. ಎನ್ನಬೇಕೆ ? ಜೊತೆಗೆ ಇರಲಿ ಎಂದು ಸೆಲ್ಲೋಟೇಪ್ ಇಟ್ಟುಕೊಂಡದ್ದು ಆಗ ಸಮಯಕ್ಕಾಯಿತು. ಇನ್ನು ಸ್ಪರ್ಧೆ ಕೈಗೆ ಕೊಟ್ಟಿದ್ದ ಬೀಸಣಿಗೆ ತಂಗಾಳಿ ಬೀಸಿತೋ ಇಲ್ಲವೋ ಗೊತ್ತಿಲ್ಲ ಎಲ್ಲವೂ ಸಾವಧಾನವಾಗಿ ಮುಗಿದು ತಂಗಾಳಿ ಸುಳಿದಂತಾಯಿತು.
ತೊಂದರೆ ಅನ್ನಿಸಿದ್ದು ಮೂರನೆ ಸ್ಫರ್ಧೆಯ ಎರಡನೆ ಸ್ಪರ್ಧಾರ್ಥಿಯದ್ದು. ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಬೇರೆ ಸ್ಪರ್ಧಿಗಳು ಹೇಗೆ ಕಾಣುತ್ತಾರೆ ಎನ್ನುವ ಕುತೂಹಲದಲ್ಲಿ ತನ್ನ ಧಿರಿಸು ಸಂಭಾಳಿಸಿ ಕೊಳ್ಳುತ್ತಿರಲಿಲ್ಲ. ಪೇರೆಂಟ್ಸ್ ಹತ್ತಿರಕ್ಕೆ ಹೋಗುವಂತೆಯೂ ಇರಲಿಲ್ಲ. ಆಯಾಗಳೂ ಸ್ಪರ್ಧೆ ನೋಡುವುದರಲ್ಲಿಯೇ ಬ್ಯುಸಿಯಾಗಿದ್ದರು. ಕಡೆಗೆ ವೇದಿಕೆ ಮೇಲೆ ಹೋಗುವಾಗ ದಡಬಡ ಸರಿ ಮಾಡಿದರೆ ಸರಿ ಹೋಗುತ್ತದೆಯೇ.? ದುರಾದೃಷ್ಟವೆಂಬಂತೆ ಮೈಕ್ ಕೂಡ ಕೈ ಕೊಟ್ಟಿತ್ತು. ಕಷ್ಟ ಪಟ್ಟು ನಾನು ವೇಷ ಧಾರಿಯ ಧಿರಿಸನ್ನು ಸರಿ ಮಾಡಿಸಿದರೂ ಮೈಕ್ ಸರಿಹೋಗಲಿಲ್ಲ. ಹೇಳಬೇಕಾದ ಡೈಲಾಗ್ ಗಳು ಸ್ಪರ್ಧಿಗಳ ಗಂಟಲಲ್ಲೇ ಉಳಿದವು ತೀರ್ಪುಗಾರರ ಕಿವಿಯನ್ನು ಮುಟ್ಟಲೇ ಇಲ್ಲ! ನನಗೂ ಸಮಾಧಾನವಾಗಲಿಲ್ಲ.


ಇನ್ನು ನಾಲ್ಕನೆಯ ಸ್ಪರ್ಧೆಗೆ ಅಣಿಗೊಂಡ ಕಾಲ. ವಿಭಿನ್ನವಾಗಿ ವೇಷ ಹಾಕಿಸಬೇಕೆಂದು ಯೋಚಿಸಿದೆ. ಆಗ ಆರ್ಥಿಕ ಹಿಂಜರಿತವಿತ್ತು . ಯಾವ ಪತ್ರಿಕೆ ನೋಡಿದರೂ “ರೂಪಾಯಿ ಮೌಲ್ಯ ಕುಸಿತ” ಮೊದಲಾದ ಶೀರ್ಷಿಕೆಗಳೆ ಇರುತ್ತಿದ್ದವು. ಅದೇ ವಿಷಯವನ್ನು ಬಳಸಿಕೊಂಡು “ರುಪೀ ಗರ್ಲ್” ವೇಷವನ್ನು ಹಾಕಿಸಲು ಯೋಚಿಸಿದೆ. ಇನ್ನೂ ಬಳಸಬಹುದಾಗಿದ್ದ ನನ್ನ ಕಪ್ಪು ಬಣ್ಣದ ಚೂಡಿಧಾರ್ ಟಾಪನ್ನೆ ಸ್ಪರ್ಧಾರ್ಥಿಯ ಮೈಅಳತೆಗೆ ಆಲ್ಟರ್ ಮಾಡಿಸಿದರೂ ಅದು ನಿಲುವಂಗಿಯಾಯಿತು . ನನಗೂ ಅದೇ ಬೇಕಾಗಿತ್ತು. ಇನ್ನು ನಾಣ್ಯವನ್ನು ಕಲೆಹಾಕುವ ಕಾರ್ಯಾಚರಣೆ ಪ್ರಾರಂಭಿಸಿದೆ. ಎದುರು ಮನೆಯವರು ಹೊಟೇಲ್ ನಡೆಸುತ್ತಿದ್ದರು ಒಂದು ರೂ ಮೌಲ್ಯದ ಇನ್ನೂರು ರೂಗಳ ನಾಣ್ಯವನ್ನು ಖುಷಿಯಿಂದ ಕೊಟ್ಟರು. ಕೇಳಿದ ಕೂಡಲೆ ಸಹಾಯ ಮಾಡಿದ ಅವರನ್ನು ಮತ್ತೆ ಕೇಳಲು ಮನಸ್ಸಾಗಲಿಲ್ಲ. ಪೇಟೆ ಬೀದಿಯ ಅಂಗಡಿಗೆ ಹೋದೆ ಪರಿಚಯದವರು ಆದರೂ “ನೂರು ರೂಗಳ ನಾಣ್ಯಕ್ಕೆ ಐದು ರೂಗಳ ಕಮಿಷನ್” ಎಂದರು. ಸರಿ! ಎನ್ನುತ್ತಾ 210 ರೂಗಳನ್ನು ಕೊಟ್ಟು ಇನ್ನೂ ಇನ್ನೂರು ನಾಣ್ಯಗಳನ್ನು ತೆಗೆದುಕೊಂಡೆ. ಹಾಗೆ ದೊಡ್ಡದೊಂದು ಫೇವಿಕಾಲ್ ಡಬ್ಬವನ್ನೂ ತಂದು ಧಿರಿಸಿಗೆ ನಾಣ್ಯಗಳನ್ನು ಅಂಟಿಸಲು ಪ್ರಾರಂಭ ಮಾಡಿದೆ ಬಹಳ ನೀಟಾಗಿ ಬಂತು. ಆದರೆ ಧಿರಿಸಿನ ನಡುವೆ ತೊಡಿಸಲು ಅಂತರವೇ ಇರಲಿಲ್ಲ ಸಂಪೂರ್ಣ ಎರಡೂ ಬದಿಯೂ ಅಂಟಿಕೊಂಡಿತ್ತು . ಬೇಸರವಾದರೂ ತಾಳ್ಮೆಯಿಂದ ಎಲ್ಲಾ ನಾಣ್ಯಗಳನ್ನು ಬಿಡಿಸಿ. ಮತ್ತೆ ಬಹಳ ಜೋಪಾನವಾಗಿ ಎರಡೂ ಬದಿ ಬರುವಂತೆ ಅಂಟಿಸಿದೆ. ತಲೆಗೊಂದು ಕಪ್ಪುಹ್ಯಾಟ್, ಕೈಕಾಲಿಗೆ ಕಪ್ಪು ಸಾಕ್ಸ್ಗಳನ್ನು ತೊಡಿಸಿ, ಕಿವಿಗೂ ಎರಡು ನಾಣ್ಯಗಳನ್ನು ಅಂಟಿಸಿದೆ. ಮನೆಯಿಂದಲೇ ವೇಷ ಹಾಕಿಸಿಕೊಂಡು ಹೋಗಬಹುದಾದ್ದರಿಂದ ಮನೆಯಲ್ಲೆ ವೇಷ ಹಾಕಿಸಿ,ತುಟಿರಂಗು ಬಳಿದು, ಫೋಟೋವನ್ನೂ ತೆಗೆಸಿ. ಮೆಲ್ಲಗೆ ಕಾರಿನ ಹಿಂಬದಿಯಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋದರೆ ಶಾಲೆಯ ವಾಚ್ ಮ್ಯಾನ್ “ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ”ಎಂಬ ಬೋರ್ಡನ್ನು ಆಕ್ರೋಶಗೊಂಡವರಂತೆ ತೋರಿಸಿದರು.

ಸರಿ! ಎನ್ನುತ್ತಲೇ “ರುಪೀ ಗರ್ಲ್” ಅನ್ನು ಎಸ್ಕಾರ್ಟ್ ಮಾಡುವಂತೆ ಜೋಪಾನವಾಗಿ ಕರೆದುಕೊಂಡು ಹೋಗುತ್ತಿದ್ದರೆ ವೇಷ ಹಾಕದೆ ಇರುವ ಮಕ್ಕಳು ಅಕ್ಷರಶಃ ನನ್ನ ವೇಷಧಾರಿಯ ಹಿಂಬಾಲಕರೇ ಆಗಿದ್ದರು. ಕಾರಣ ತಿಳಿಯಿತು ಅನ್ನಿಸುತ್ತದೆ. ನಾಣ್ಯಗಳು ನಡಿಗೆ ಹೆಚ್ಚಾದಂತೆ ಬೀಳುತ್ತಿದ್ದವು. ಒಂದೆರಡು ಮಕ್ಕಳು ಬಿದ್ದ ನಾಣ್ಯಗಳನ್ನು ಕೊಟ್ಟರೂ ಒಂದಿಬ್ಬರು ಕೊಡಲಿಲ್ಲ. ನನ್ನ ಗಮನಕ್ಕೆ ಬಂದರೂ ಕೇಳುವ ಗೋಜಿಗೆ ಹೋಗಲಿಲ್ಲ. ಆ ಬಾರಿಯ ವೇದಿಕೆ ಬಹಳ ವಿಶಾಲವಾಗಿತ್ತು. ಮಕ್ಕಳು ಏನು ವೇಷ ಹಾಕಿದ್ದಾರೆ ಎಂಬುದೇ ತೀರ್ಪುಗಾರರಿಗೆ ಕಾಣಿಸುತ್ತಿರಲಿಲ್ಲ.

ಜೊತೆಗೆ ಅಲ್ಲೇ ಇದ್ದ ಪೋಷಕರು ಮಾತನಾಡುತ್ತಿದ್ದ ಮಾತುಗಳಲ್ಲಿ ಮೊದಲೇ “ಮ್ಯಾಚ್ ಫಿಕ್ಸ್” ಆಗಿದೆ ಎಂಬ ಕಮಟು ವಾಸನೆಯೂ ಬಂದಿತು. ಅದರೂ ನನ್ನ ವೇಷಧಾರಿಗೆ ಬಹುಮಾನ ಬರುತ್ತದೆ ಎನ್ನುವ ಆತ್ಮ ವಿಶ್ವಾಸವಿತ್ತು. ಆಗಿನ ದಿನಮಾನಕ್ಕೆ ನಾನು ತೆಗೆದುಕೊಂಡ ವಿಷಯ ಹಾಗಿತ್ತು. ಬಹುಮಾನವೇನೂ ಬರಲಿಲ್ಲ ಆದರೆ ಹೊಸ ವೇಷ ಹಾಕಿಸಿದ ಸಂತೋಷ ಈಗಲೂ ಇದೆ. ನಾನು ಹಾಕಿಸಿದ ಏಳು ವೇಷಗಳಲ್ಲಿ ನಾಲ್ಕು ವೇಷಗಳಿಗೆ ಬಹುಮಾನಗಳು ಬಂದಿವೆ. ನನ್ನ ಮಕ್ಕಳಿಗೆ ನಾನೇ ಕಾಸ್ಟ್ಯೂಮ್ ಡಿಸೈನರ್ ಆಗಿ ಫಿಫ್ಟಿ-ಫಿಫ್ಟಿ ಯಶಸ್ಸು ಕಂಡ ಸಾರ್ಥಕಭಾವವಿದೆ.
ಇಂಥ ಸ್ಪರ್ಧೆಗಳಲ್ಲಿ ಬಹುಮಾನಗಳು ಬಂದರೆ “ಖುಷಿಯಾವೇಶ”, “ಬರದಿದ್ದರೆ ಬೇಸರದಾವೇಶ”. ಆದರೆ ಈ ಬಾರಿ ಸ್ಪರ್ಧೆಯೇ ಇಲ್ಲ ಎಂಬ ಬೇಸರದಾವೇಶ. ಹೊಸ ವಿಷಯದೊಂದಿಗೆ ಎದುರಾಗೋಣ!