ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಮಯದ ಪರಿವೆಯನ್ನೇ ಪ್ರಶ್ನಿಸುತ್ತಾ ಹಳೆಯ ಪೆಟ್ಟಿಗೆಯಲಿ ಮರೆತಿರುವುದೇನೊ ಉಳಿದಿದೆ ಎಂದು ಬರೆದದ್ದು ಸಂವೇದನೆಗಳ ಕವಿ ರಾಮ್ ಕುಮಾರ್. ಸಂದರ್ಭ: A day with an Alzheimer patient. ಈ ವಿಶಿಷ್ಟ ಕವಿತೆ ನಿಮಗಾಗಿ..
ರಾಮ್‌ ಕುಮಾರ್‌ ಡಿ.ಟಿ.
ಇತ್ತೀಚಿನ ಬರಹಗಳು: ರಾಮ್‌ ಕುಮಾರ್‌ ಡಿ.ಟಿ. (ಎಲ್ಲವನ್ನು ಓದಿ)

(A day with an Alzheimer patient)

ಒಂದಾದ ಮೇಲೆ ಒಂದು ದಿನ
ಉರುಳುವುದು ಗಮನಿಸಿದರೆ
ಸಮಯಕ್ಕೆ ಪರಿವೆಯೆ ಇಲ್ಲವೊ
ತನ್ನ ಗಮನ ಹರಿಸಲು
ಎಷ್ಟೊಂದು ಕಾರ್ಯ ನಿರತ…!
ಸ್ಡಲ್ಪ ತಡೆ
ಸ್ವಲ್ಪ ಹಿಂದೆ ಹೋಗಲು
ನೀ ಹೇಳಬಾರದೆ
ಹಳೆಯ ಪೆಟ್ಟಿಗೆಯಲಿ
ಮರೆತಿರುವುದೇನೊ ಉಳಿದಿದೆ
ಕೊಂಚ ಸಂಗ್ರಹಿಸಿ ತೆರಳಲೆ..?
 
ನೆನಪುಗಳ ಹೆಕ್ಕಿ ತರುವುದಿದೆ
ಮರೆವು ಜಾಸ್ತಿ ಇತ್ತೀಚೆಗೇಕೊ
ಚಿಕ್ಕದೇ ಆಸೆ, ಆದರೂ ಅನುಮಾನ
ಸಮಯ ನನ್ನ ಪಕ್ಷವೇ..?
ಪರಿವೆ ಎನಗೆ ಪರರದಿಲ್ಲ
ಸಮಯಕ್ಕೂ ನನ್ನ ಪರಿವೆ
ಇಲ್ಲವೊ ಏನೊ
ನನ್ನ ಮರೆತಿರುವ ಹಾಗಿದೆ
 
ಯಾರ ಮಾತು ಕೇಳಲಿಚ್ಛಿಸುವುದೋ?
ನೆನಪಿನ ಮಾತು ಕೇಳುವುದೆ ಸಮಯ?
ನೆನಪಿಗೆ ಭೂತ, ಭವಿಷ್ಯದ ಪರಿವೆ ಇರಬಹುದೆ?
ಯಾರ ಅಪ್ಪಣೆ ಬೇಕಿದೆ
ಸುಲಭವಲ್ಲವೆ ಇಚ್ಛೆಯನುಸಾರ
ನಗುವುದು, ಅಳುವುದು
ಏನುಂಟು ನಮ್ಮ ಹಿಡಿತದಲಿ?
ಬ್ರಹ್ಮನ ಹಣೆಬರಹ
ಬರೆದವನು ಇರಬಹುದೆ?
 
ಅಸಾಧ್ಯವೆ ಸರಿ
ಆದರೂ ಕೇಳುವಾಸೆ
ನೆನಪಿನಂಗಳದಲಿ ನಲಿಯುವಾಸೆ
ನೆರವೇರಿಸದಿರುವೆಯಾ ಈ
ಕೊನೆಯ ಕಂಬನಿಯಾಸೆ?
ಇದರ ನೆನಪೂ, ಅಷ್ಟೆ ತಾನೆ!