ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಂಬಯಿ ಜನತೆಗೆ ಗೋಕುಲದ ಕೊಡುಗೆ

ಪ್ರೇಮಾ ಎಸ್ ರಾವ್
ಇತ್ತೀಚಿನ ಬರಹಗಳು: ಪ್ರೇಮಾ ಎಸ್ ರಾವ್ (ಎಲ್ಲವನ್ನು ಓದಿ)

ಮುಂಬಯಿ ಜನತೆಗೆ ಗೋಕುಲದ ಕೊಡುಗೆ – ನವೀಕೃತ ಸಾಂಸ್ಕೃತಿಕ ಭವನ ಹಾಗೂ ಶ್ರೀ ಕೃಷ್ಣ ದೇವಾಲಯ

ಪುಣ್ಯಭೂಮಿ ಭಾರತದ ಪ್ರಸಿದ್ಧ ರಾಜ್ಯ ಮಹಾರಾಷ್ಟ್ರದಲ್ಲಿನ ವಾಣಿಜ್ಯನಗರಿ ಮುಂಬಯಿಯಲ್ಲಿ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿರುವ ನೂರಾರು ಸಂಘ ಸಂಸ್ಥೆಗಳಲ್ಲಿ,  ತುಳುನಾಡಿನಿಂದ ಆಗಮಿಸಿ ಇಲ್ಲಿ ನೆಲೆಯಾದ ಹಿರಿಯರಿಂದ ಸ್ಥಾಪಿತವಾದ ಬ್ರಾಹ್ಮಣರದ್ದೇ ಆದ ಪ್ರತಿಷ್ಠಿತ ಸಂಸ್ಥೆ  ದಕ್ಷಿಣ ಕನ್ನಡ ಬ್ರಾಹ್ಮಣರ ಸಂಘ –  ಬಿ. ಎಸ್. ಕೆ.ಬಿ ಎಸೋಸಿಯೇಶನ್. (ಬಾಂಬೆ ಸೌತ್ ಕೆನರಾ ಬ್ರಾಹ್ಮಿನ್ಸ್ ಅಸೋಸಿಯೇಷನ್ ! 

1944 ರಲ್ಲಿ, ಬಾಂಬೆ ಸರ್ಜಿಕಲ್ಸ್ ನ ಆಡಳಿತ ನಿರ್ದೇಶಕರಾಗಿದ್ದ, ಕುಡ್ಪಿ ಭುಜಂಗ ರಾವ್ ರವರು ಸಂಘಕ್ಕೆ ಪುನರ್ಜೀವನವನ್ನಿತ್ತರು.  ಡಾ ಯು ಬಿ ನಾರಾಯಣ ರಾವ್, ಕುಡ್ಪಿ  ಭುಜಂಗ ರಾವ್, ಡಾ. ಯು. ಆರ್ ರಾವ್, ಯು ವಿ ಉಪಾಧ್ಯಾಯ, ಕೆ. ಎಸ್.ಎನ್. ಹೆಬ್ಬಾರ್ ಮುಂತಾದ ಗಣ್ಯರ ನೇತೃತ್ವದಲ್ಲಿ  1947 ರಲ್ಲಿ ಭಾರತದ ಸ್ವಾತಂತ್ರ್ಯೋತ್ಸವವನ್ನು ಸಂಘವು ಅತ್ಯಂತ ಅದ್ದೂರಿಯಿಂದ ಆಚರಿಸಿತು.  ಅಂದಿನಿಂದ ಸಂಘವು ಹಿಂತಿರುಗಿ ನೋಡದೆ ಭವಿಷ್ಯದತ್ತ ದಾಪುಗಾಲನ್ನು ಹಾಕುತ್ತಾ ಮುಂದುವರಿಯಿತು.  ಮುಂದೆ ಸಂಘದ ಚಟುವಟಿಕೆಗಳನ್ನು ನಡೆಸಲು ಒಂದು ವೇದಿಕೆಯ ಅಗತ್ಯತೆಯನ್ನು ಮನಗಂಡಂತಹ ಗಣ್ಯರು, 1954 ರಲ್ಲಿ  ಅಂದಿನ ಬಾಂಬೆ  ನಗರಪಾಲಿಕೆಯಿಂದ  999 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಸಾಯನ್ ನಲ್ಲಿ ಈಗ ಕಟ್ಟಡವಿರುವ ಜಾಗವನ್ನು ಪಡೆದರು.  ಕೆನರಾ ಬ್ಯಾಂಕ್ ನಲ್ಲಿ ಆಡಳಿತ ನಿರ್ದೇಶಕರಲ್ಲಿ ಒಬ್ಬರೂ ಆಗಿದ್ದ  ಕುಡ್ಪಿ ಭುಜಂಗ ರಾವ್ ರವರು ತನ್ನ ದೇಣಿಗೆಯಾಗಿ  ರೂ. 25,000/-  ನೀಡಿದುದಲ್ಲದೆ ಕೆನರಾ ಬ್ಯಾಂಕ್ ನಿಂದ ಸಾಕಷ್ಟು ಮೊತ್ತದ ಸಾಲವನ್ನು ಪಡೆಯಲು ಕಾರಣೀಭೂತರಾದರು.  

ಹೀಗೆ ಹಲವಾರು ಪ್ರಾತಃಸ್ಮರಣೀಯರ ಕಠಿಣ ಪರಿಶ್ರಮದ ಫಲವಾಗಿ 1958 ರಲ್ಲಿ ಗೋಕುಲ ಕಟ್ಟಡ ನಿರ್ಮಾಣವಾಯಿತು. ಆದರೆ  ಆರ್ಥಿಕ ಅಡಚಣೆಯಿಂದಾಗಿ ಶ್ರೀ ಕೃಷ್ಣ ಮಂದಿರ ನಿರ್ಮಾಣ ಸಾಧ್ಯವಾಗದೆ, 1962 ರಲ್ಲಿ  ಯು. ವಿ. ಉಪಾಧ್ಯಾಯರವರ ದಕ್ಷ ಮೇಲುಸ್ತುವಾರಿಕೆಯಲ್ಲಿ ಶ್ರೀ ಕೃಷ್ಣ ಮಂದಿರವನ್ನೊಳಗೊಂಡ ಸುಂದರ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಅದಮಾರು  ಮಠಾಧೀಶರಾದ  ಪರಮಪೂಜ್ಯ ಶ್ರೀ  ಶ್ರೀ ವಿಬುಧೇಶ ತೀರ್ಥರು  ಹಾಗೂ ಪೇಜಾವರ ಮಠಾಧೀಶರಾದ  ಪರಮಪೂಜ್ಯ ಶ್ರೀ  ಶ್ರೀ ವಿಶ್ವೇಶ ತೀರ್ಥರು ತಮ್ಮ ತಮ್ಮ ದೇಣಿಗೆಯನ್ನಿತ್ತು ಅನುಗ್ರಹಿಸಿದರು. ಹಾಲು ಬಿಳುಪಿನ, ಹಸನ್ಮುಖಿ ಶ್ರೀ ಗೋಪಾಲಕೃಷ್ಣನ ಅಮೃತಶಿಲಾ ಮೂರ್ತಿಯನ್ನು  ರಾಜಸ್ಥಾನೀ ಭಕ್ತರೋರ್ವರು ದೇಣಿಗೆಯಾಗಿತ್ತರು. ಉಭಯ ಯತಿವರ್ಯರ ಅಮೃತ  ಹಸ್ತಗಳಿಂದ ಗೋಕುಲ ಶ್ರೀ ಕೃಷ್ಣಮಂದಿರದಲ್ಲಿ  ಮಾರ್ಚ್ 12,, 1962 ರಲ್ಲಿ ಶ್ರೀ ಗೋಪಾಲಕೃಷ್ಣನ ಪ್ರತಿಷ್ಠೆಯಾಗಿ ಲೋಕಾರ್ಪಣೆಗೊಂಡಿತು. ಅಂದಿನಿಂದ ಸಂಸ್ಥೆಯ ಸದಸ್ಯತ್ವವು ಗಣನೀಯವಾಗಿ ಬೆಳೆಯುತ್ತಾ ಬಂದು ಇಂದು  ಸುಮಾರು 5500 ಸದಸ್ಯರನ್ನೊಳಗೊಂಡ ಹೆಮ್ಮರವಾಗಿ, ಮುಂಬಯಿಯ  ಪ್ರತಿಷ್ಠಿತ ಸಂಸ್ಥೆಯಾಗಿ ಮೆರೆಯಲು ಶ್ರೀ ಕೃಷ್ಣನ  ಕೃಪಾಕಟಾಕ್ಷವೇ ಕಾರಣವೆಂದರೆ ಖಂಡಿತಾ ಅತಿಶಯೋಕ್ತಿಯಾಗಲಾರದು.  ಗೋಕುಲದ ಶ್ರೀ ಗೋಪಾಲಕೃಷ್ಣ,  ಸದಸ್ಯರಿಗೆ ಮಾತ್ರವಲ್ಲ ಸುತ್ತುಮುತ್ತಲಿನ ಅಸಂಖ್ಯ  ಭಕ್ತಾದಿಗಳಿಗೆ ಆರಾಧ್ಯ ಮೂರ್ತಿಯಾಗಿ ಅನುಗ್ರಹಿಸುತ್ತಿದ್ದಾನೆ. 

ಡಾ ಸುರೇಶ್ ಎಸ್ ರಾವ್


1925 ರಿಂದ ಇದುವರೆಗೆ ಡಾ. ಯು ಬಿ ನಾರಾಯಣ ರಾವ್, ದಿ.  ಕುಡ್ಪಿ  ಭುಜಂಗ ರಾವ್, ದಿ. ಡಾ.ಲಲಿತಾ ರಾವ್, ದಿ. ಬಿ.ಪಿ. ಆಚಾರ್ಯ, ದಿ.  ಯು. ಜಿ. ಆಚಾರ್ಯ,  ದಿ. ಎ. ಆರ್ ಆಚಾರ್ಯ, ದಿ. ಸಿ. ಆರ್. ಬೆಳ್ಳೆ,  ದಿ . ಜಸ್ಟೀಸ್(ನಿವೃತ್ತ)  ಎಚ್ ಸುರೇಶ್, ದಿ.ಬಿ.ಆರ್.ಉಡುಪ, ಯು. ರಾಮ ರಾವ್,  ಡಾ. ಸುರೇಶ್ ಎಸ್ ರಾವ್, ಕೆ. ಸುಬ್ಬಣ್ಣ ರಾವ್, ನಂತರ ಪುನಃ  ಡಾ ಸುರೇಶ್ ಎಸ್ ರಾವ್  ಅಧ್ಯಕ್ಷರಾಗಿ,  ಪ್ರತಿಯೊಬ್ಬರೂ ಸಂಘದ ಏಳಿಗೆಗಾಗಿ, ಸರ್ವತೋಮುಖ ಅಭಿವೃದ್ಧಿಗಾಗಿ  ಅತ್ಯಂತ ಶ್ರಮ ವಹಿಸಿದ್ದಾರೆ. 

ಸಂಸ್ಥೆಯು  1953 ರಲ್ಲಿ ರಜತ ಮಹೋತ್ಸವ, 1975 ರಲ್ಲಿ ಸ್ವರ್ಣ ಮಹೋತ್ಸವ,  1985 ರಲ್ಲಿ ವಜ್ರ ಮಹೋತ್ಸವ  ಹಾಗೂ 2000 ನೇ ಇಸವಿಯಲ್ಲಿ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಿದೆ. 
ಸಂಸ್ಥೆಯ ಅಮೃತ ಮಹೋತ್ಸವದ ಸವಿ ನೆನಪಿಗಾಗಿ ಸಮಾಜಕ್ಕೆ ಒಂದು ಉತ್ತಮ ಕೊಡುಗೆಯನ್ನು ನೀಡುವ ಯೋಜನೆಯನ್ನು ಹಮ್ಮಿಕೊಂಡ ಕಾರ್ಯಕಾರೀ ಸಮಿತಿ,  ಹಿರಿಯ ನಾಗರಿಕರಿಗೆ ನೆಮ್ಮದಿಯ ತಾಣವನ್ನು  ನಿರ್ಮಾಣ ಮಾಡಲು ನಿರ್ಧರಿಸಿತು. ಇದಕ್ಕಾಗಿ  ನವಿಮುಂಬಯಿಯಲ್ಲಿ CIDCO ದಿಂದ ಜಾಗವನ್ನು ಪಡೆಯಲು  ದಿ .  ಬಿ. ಬಾಲಚಂದ್ರ ರಾವ್,  ದಿ. ಎ.ಕೆ. ಹೆಬ್ಬಾರ್  ಮತ್ತಿತರ ಸದಸ್ಯರ  ಪ್ರಾಮಾಣಿಕ ಪ್ರಯತ್ನದ ಫಲವಾಗಿ ನೇರೂಲ್ ನಲ್ಲಿ 1825 ಚದರ  ಮೀಟರ್ ವಿಸ್ತೀರ್ಣದ ಜಾಗದಲ್ಲಿ ಒಂದು ಹವಾ ನಿಯಂತ್ರಿತ ಸಭಾಗೃಹ, ಒಂದು ಕಿರು ಸಭಾಗೃಹ, ಬ್ಯಾಂಕ್ ಹಾಗೂ  ಸುಮಾರು 50  ಹಿರಿಯ ನಾಗರಿಕರು ನೆಮ್ಮದಿಯಿಂದ ನೆಲೆಸಲು ಅನುಕೂಲವಾಗುವಂತಹ ‘ಆಶ್ರಯ’ ಕಟ್ಟಡ  ನಿರ್ಮಾಣಗೊಂಡಿತು. 

 ಬಿ. ಎಸ್. ಕೆ.ಬಿ ಎಸೋಸಿಯೇಶನ್ ನಿಂದ ಶ್ರೀನಿವಾಸ ಕಲ್ಯಾನೋತ್ಸವ

ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡಕ್ಕೆ, ದಿ. ಎ ಕೆ. ಹೆಬ್ಬಾರ್, ಡಾ. ಸುರೇಶ್ ಎಸ್ ರಾವ್, ಲಕ್ಷ್ಮೀಶ್ ಆಚಾರ್ಯ, ವಿಖ್ಯಾತ್ ಹೆಬ್ಬಾರ್, ಗುರುರಾಜ್ ಹೆಬ್ಬಾರ್, ಪಿ.ಎಚ್. ಶ್ರೀನಿವಾಸ್ ಆಚಾರ್ಮು ಮುಂತಾದ ಗಣ್ಯಾತಿಗಣ್ಯ ಸಮಾಜ ಬಾಂಧವರು  ಮಾತ್ರವಲ್ಲದೆ ಇತರ ಸಮುದಾಯದ ಉದಾರಿ ದಾನಿಗಳು ಕೂಡಾ ತಮ್ಮ ತನು- ಮನ-ಧನದ ಅಮೂಲ್ಯ ದೇಣಿಗೆಯನ್ನಿತ್ತು  ಸಹಕರಿಸಿದ್ದಾರೆ.  ಸದಸ್ಯರೆಲ್ಲರ ಪ್ರಯತ್ನದ ಫಲವಾಗಿ  2009 ರಲ್ಲಿ ಹಿರಿಯ ನಾಗರಿಕರ ಆಶ್ರಯಧಾಮ ‘ಆಶ್ರಯ’ ದ ಶುಭಾರಂಭವು  ಹರಿ ಪಾದೈಕ್ಯ ಪೇಜಾವರ ಮಠಾಧೀಶ ಪರಮಪೂಜ್ಯ  ಶ್ರೀ ಶ್ರೀ  ವಿಶ್ವೇಶ ತೀರ್ಥ ಸ್ವಾಮೀಜಿಯವರ ಶುಭ ಹಸ್ತದಿಂದ ಉದ್ಘಾಟಿಸಲ್ಪಟ್ಟಿತು.  ಯೋಜನೆಯ ಪ್ರಾರಂಭವು ಅಂದಿನ  ಅಧ್ಯಕ್ಷರಾದ  ದಿ. ಬಿ. ಆರ್ ಉಡುಪರಿಂದ ಆರಂಭವಾಗಿ ನಂತರ ಅಧ್ಯಕ್ಷರಾದ  ಶ್ರೀ ಯು ರಾಮ ರಾವ್ ರಿಂದ ಮುಂದುವರಿಸಲ್ಪಟ್ಟು ಪ್ರಸ್ತುತ ಅಧ್ಯಕ್ಷರಾಗಿರುವ  ಡಾ ಸುರೇಶ್ ರಾವ್ ರವರ ಮುಂದಾಳತ್ವದಲ್ಲಿ ನೇರುಲ್ ನಲ್ಲಿ  3  ಮಹಡಿಗಳ ಭವ್ಯ ಕಟ್ಟಡವನ್ನು ನಿರ್ಮಿಸಿ  ಹಿರಿಯ ನಾಗರಿಕರಿಗೆ  ‘ ಆಶ್ರಯ‘ ವನ್ನು ಕೊಟ್ಟು, ಜಾತಿ ಮತ ಭೇದವಿಲ್ಲದೆ ಹಿರಿಯ ನಾಗರಿಕರು  ತಮ್ಮ ಬಾಳಿನ ಸಂಜೆಯನ್ನು  ನೆಮ್ಮದಿಯಿಂದ ಇರುವಂತಹಾ ಸೌಲಭ್ಯವನ್ನು ಕಲ್ಪಿಸಿಕೊಟ್ಟು  ತನ್ನ ಸಾಮಾಜಿಕ ಪ್ರಜ್ಞೆಯನ್ನು ಮೆರೆದಿದೆ.  
ಸಂಸ್ಥೆಯು   ಯುವ ವಿಭಾಗ,  ಮಹಿಳಾ ವಿಭಾಗ, ಕಲಾವೃಂದ,   ಭಜನಾ ಮಂಡಳಿ,  ಯಕ್ಷಗಾನ ಮಂಡಳಿ ಮುಂತಾದವುಗಳನ್ನು ಹೊಂದಿದ್ದು, ವರ್ಷವಿಡೀ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ  ಚಟುವಟಿಕೆಗಳನ್ನು ಹಮ್ಮಿಕೊಂಡು, ವಿಧಿವತ್ತಾಗಿ ಆಚರಿಸುತ್ತಾ ಸಮಾಜ ಬಾಂಧವರ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹವನ್ನು ಕೊಡುತ್ತಾ  ಹಲವಾರು  ಸಾಹಿತಿಗಳು/ ವಿಜ್ಞಾನಿಗಳು  ಹಾಗೂ ಕಲಾವಿದರನ್ನು ಮುಂಬಯಿ ನಗರಿಗೆ ಕೊಡುಗೆಯಾಗಿ ನೀಡಿದ  ಹೆಗ್ಗಳಿಕೆಗೆ ಪಾತ್ರವಾಗಿದೆ. ಜನ್ಮಭೂಮಿಯ ಸಂಪ್ರದಾಯಗಳನ್ನು  ಮುಂದಿನ ಪೀಳಿಗೆಗಾಗಿ  ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿದೆ.   ಶಿಕ್ಷಣಕ್ಕೆ  ಅತ್ಯಂತ ಮಹತ್ವವನ್ನು ಕೊಡುತ್ತಾ ಆರ್ಥಿಕವಾಗಿ ದುರ್ಬಲರಾದ ವಿದ್ಯಾರ್ಥಿಗಳಿಗೆ  ವಿದ್ಯಾರ್ಥಿ ವೇತನ  ಹಾಗೂ ಶಾಲೆಗಳಿಗೆ ಧನ ಸಹಾಯವನ್ನು ಕೊಡುತ್ತಾ ಬಂದಿದೆ. ಸಾಮಾಜಿಕ ಕ್ಷೇತ್ರದಲ್ಲಿ, ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನಾಚರಣೆ, ಇತ್ಯಾದಿಗಳನ್ನು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸುತ್ತಿದೆ..

ಸಂಘದ ಮುಖಪತ್ರಿಕೆ ಗೋಕುಲವಾಣಿ:   ಎಂಟು  ವರ್ಷಗಳ ಹಿಂದೆ ರಜತ ಮಹೋತ್ಸವವನ್ನುಸಂಭ್ರಮದಿಂದ ಆಚರಿಸಿರುವ ,  ‘ಗೋಕುಲವಾಣಿ’  ಖ್ಯಾತ ಸಾಹಿತಿ ಡಾ. ವ್ಯಾಸರಾವ್ ನಿಂಜೂರ್ ರವರ ಸಂಪಾದಕತ್ವ ಹಾಗೂ ತಜ್ಞ ಸಂಪಾದಕ ಮಂಡಳಿಯ ಸಹಯೋಗದೊಂದಿಗೆ ಮುಂಬಯಿಯ ಪ್ರತಿಷ್ಠಿತ  ಪತ್ರಿಕೆಯಾಗಿ ಪ್ರಸಿದ್ಧಿಯನ್ನು ಪಡೆದಿದೆ. ವರ್ಷಕ್ಕೊಮ್ಮೆ ಕಥಾಸ್ಪರ್ಧೆಯನ್ನು ಏರ್ಪಡಿಸಿ, ವಿಶೇಷ ಸಂಚಿಕೆಯನ್ನು ಹೊರತರುತ್ತಿದೆ..
ಪ್ರಸ್ತುತ ಗೋಕುಲದ  ಯೋಜನೆಗಳು :  
 1. ವಿದ್ಯಾನಿಧಿ:  ಆರ್ಥಿಕವಾಗಿ ದುರ್ಬಲರಾಗಿರುವ ಪ್ರತಿಭಾವಂತ  ವಿದ್ಯಾರ್ಥಿ/ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವ  ಧ್ಯೇಯವನ್ನಿಟ್ಟುಕೊಂಡು, ಅಂತಹವರಿಗೆ  ಸಾಲ ರೂಪದ ವಿದ್ಯಾರ್ಥಿ ವೇತನವನ್ನು ನೀಡುವುದಕ್ಕಾಗಿ  ‘ವಿದ್ಯಾನಿಧಿ’ ಯನ್ನು ಸ್ಥಾಪಿಸಿದೆ.  ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು  ಮುಗಿಸುವವರೆಗಿನ ಸಂಪೂರ್ಣ ಶುಲ್ಕ,  ಪುಸ್ತಕಗಳ ಹಾಗೂ ಇನ್ನಿತರ ವೆಚ್ಚವನ್ನು ಸಂಘವು ಭರಿಸುತ್ತದೆ.  ಸಾಲ ರೂಪದ ವಿದ್ಯಾರ್ಥಿ ವೇತನವನ್ನು  ಪಡೆದ ವಿದ್ಯಾರ್ಥಿಗಳು ತಮಗೆ ಉದ್ಯೋಗ ದೊರಕಿದ ನಂತರ ಸುಲಭ ಕಂತಿನ ಮೂಲಕ ಈ ಸಾಲವನ್ನು ಬಡ್ಡಿ ರಹಿತ  ಹಿಂತಿರುಗಿಸಬಹುದಾಗಿದೆ.
2.   ಆಶ್ರಯದ ವಿಸ್ತರಣೆ:  ಇಂದಿನ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಹಿರಿಯರ ಆಶ್ರಯಧಾಮದ ಬೇಡಿಕೆ  ಹೆಚ್ಚಾಗುತ್ತಿದೆ.  ಈ ವಾಸ್ತವ ಸ್ಥಿತಿಯನ್ನು ಅರಿತುಕೊಂಡಂತಹ ಬಿ.ಎಸ್.ಕೆ.ಬಿ.ಎಸೊಸಿಯೆಶನ್ , ಮುಂದಿನ  ವರ್ಷಗಳಲ್ಲಿ ಆಶ್ರಯದ ಕಟ್ಟಡದಲ್ಲಿ ಒಂದು  ಮಹಡಿಯನ್ನು ವಿಸ್ತರಿಸುವ  ಯೋಜನೆಯನ್ನು  ಹಮ್ಮಿಕೊಂಡಿದೆ. 

3. ಗೋಕುಲದ ಪುನರ್ ನಿರ್ಮಾಣ: ಸುಮಾರು 65  ವರ್ಷಗಳಷ್ಟು ಪುರಾತನವಾದ  ಗೋಕುಲದ  ಕಟ್ಟಡ  ಜೀರ್ಣಾವಸ್ಥೆಯಲ್ಲಿತ್ತು. ಅಲ್ಲದೆ ಗೋಕುಲದ  ಶ್ರೀ ಗೋಪಾಲಕೃಷ್ಣನ ಭಕ್ತರ ಸಂಖ್ಯೆ  ದಿನೇ ದಿನೇ ಹೆಚ್ಚುತ್ತಿದ್ದು, ವಿಶೇಷ ಹಬ್ಬಗಳ  ಸಂದರ್ಭಗಳಲ್ಲಿ, ಸ್ಥಳದ ಅಭಾವದಿಂದ  ಭಕ್ತಾದಿಗಳಿಗಾಗುವ ಅನನುಕೂಲತೆ, ಆಧುನಿಕತೆಯ ಸೌಲಭ್ಯಗಳ ಕೊರತೆಗಳನ್ನು  ಮನಗಂಡು,  ಮುಂದಿನ ಜನಾಂಗದ  ಅನುಕೂಲತೆಗಳಿಗನುಗುಣವಾಗಿ  ಆಧುನಿಕ  ಸೌಕರ್ಯಗಳನ್ನೊಳಗೊಂಡ  ನವ ನವೀನ ಕಟ್ಟಡ  ಹಾಗೂ  ಶ್ರೀ ಗೋಪಾಲಕೃಷ್ಣನ ಶಿಲಾಮಯ ದೇವಾಲಯದ ನಿರ್ಮಾಣ ಕಾರ್ಯ  ಪ್ರಸ್ತುತ ಅಧ್ಯಕ್ಷರಾಗಿರುವ ಡಾ. ಸುರೇಶ್ ರಾವ್ ರವರ ನೇತೃತ್ವದಲ್ಲಿ  ಆರಂಭವಾಗಿ, 2016  ಡಿಸೆಂಬರ್ ನಲ್ಲಿ   ಇಲ್ಲಿನ   ಆರಾಧ್ಯ ಮೂರ್ತಿ ಶ್ರೀ ಗೋಪಾಲಕೃಷ್ಣ ದೇವರ ದಿವ್ಯ ಮೂರ್ತಿಯನ್ನು, ನೆರೂಲ್ ನಲ್ಲಿ  ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ,  ಜನವರಿ 2017 ರಿಂದ .ನಿರ್ಮಾಣ ಕಾರ್ಯ ಆರಂಭಗೊಂಡು ಇದೀಗ ಅಂತಿಮ ಹಂತದಲ್ಲಿದೆ. 

ಅಂದಾಜು ರೂಪಾಯಿ  45 ಕೋಟಿ  ವೆಚ್ಚದಲ್ಲಿ ನಿರ್ಮಾಣವಾದ 7 ಅಂತಸ್ತುಗಳುಳ್ಳ  ಬೃಹತ್ ಸೌಧದಲ್ಲಿ  ಎರಡು ತಳಮಜಲುಗಳಲ್ಲಿ  ವಾಹನ ನಿಲುಗಡೆಗಾಗಿ ವ್ಯವಸ್ಥೆ ಮಾಡಲಾಗಿದೆ (ಒಟ್ಟು 70 ಕಾರುಗಳು). ಅಲ್ಲದೆ ಈ ಕೆಳಗಿನ ಸೌಲಭ್ಯಗಳನ್ನು ಹೊಂದಿರುವ ಅತ್ಯಂತ ಸುಂದರವಾದ ಕಟ್ಟಡ ಇದಾಗಿದೆ.  
1.  ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಸುಮಾರು 225 ಆಸನಗಳುಳ್ಳ 1 ಸುಸಜ್ಜಿತ  ಹವಾ ನಿಯಂತ್ರಿತ ಸಭಾಗೃಹ   2.   2 ದೊಡ್ಡ ಸಭಾಂಗಣಗಳು, 3.   ಭೋಜನ ಗೃಹ, 4.   ಆಧುನಿಕ ಸೌಕರ್ಯಗಳುಳ್ಳ  ಮೂರು ಪಾಕಶಾಲೆ,  5.   ಸುಸಜ್ಜಿತ ವಾಚನಾಲಯ, 6.   50 ಸದ್ಯಸರು ಆಸೀನರಾಗಬಹುದಾದಂತಹ ಸಮಾಲೋಚನಾ  ಕೊಠಡಿ, 7.   ಆಡಳಿತ ಕಚೇರಿ, 8.   12 ಅತಿಥಿ ಕೊಠಡಿಗಳು, 9.    ಮನರಂಜನೆಗಾಗಿ ಒಳಾಂಗಣ ಕ್ರೀಡೆ ಇತ್ಯಾದಿ  ಚಟುವಟಿಕೆಗಳಿಗೆ ಕೊಠಡಿ  10.  ವಿಶಾಲವಾದ ಟೆರೇಸ್, 11.   ಮೂರು  ಮೆಟ್ಟಿಲು ದ್ವಾರಗಳು, ನಾಲ್ಕು ಲಿಫ್ಟ್‌ಗಳು 
ಗೋಕುಲ ಶ್ರೀ ಕೃಷ್ಣ ದೇವಾಲಯ ಮುಂಬಯಿಯ ಕೇಂದ್ರ ಬಿಂದು ಸಾಯನ್ ನಲ್ಲಿರುವ ಶ್ರೀಕೃಷ್ಣ ದೇವಾಲಯದಲ್ಲಿ,  ತ್ರಿಭಂಗಿಯಲ್ಲಿ ನಿಂತು ಕೊಳಲನ್ನೂದುವ, ಹಾಲು ಬಿಳುಪಿನ  ಅಮೃತಶಿಲಾ ಮೂರ್ತಿ  ಶ್ರೀ ಗೋಪಾಲಕೃಷ್ಣನ ಪ್ರತಿಷ್ಠೆಯಾದಂದಿನಿಂದ  ಬಿ.ಎಸ್. ಕೆ.ಬಿ. ಎಸೋಸಿಯೇಶನ್ ‘ಗೋಕುಲ’  ವೆಂದೇ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ವಿರಾಜಮಾನನಾಗಿರುವ  ಮುರಲೀ ಗಾನಲೋಲ ಶ್ರೀ ಗೋಪಾಲಕೃಷ್ಣನ  ಅಪಾರ. ಭಜಕರ ದೃಷ್ಟಿಯಲ್ಲಿ ಆತ ಆಪದ್ಬಾಂಧವ, ಅನಾಥ ರಕ್ಷಕ, ಕಾಮಿತಾರ್ಥ ಪ್ರದಾಯಕ.  ಈತನ ಸನ್ನಿಧಾನದಲ್ಲಿ,  ತಾಯ್ನಾಡಿನ ಸಂಸ್ಕಾರ, ಸಂಸ್ಕೃತಿಗಳನ್ನು ಸಂಪ್ರದಾಯ ಬದ್ಧವಾಗಿ ನಡೆಸಿಕೊಂಡು ಬಂದು, ವರ್ಷವಿಡೀ ಧಾರ್ಮಿಕ ಕಾರ್ಯಗಳಾದ ಶ್ರೀ ಕೃಷ್ಣ ಜನ್ಮಾಷ್ಟಮಿ, ಶ್ರೀ ಶಂಕರ ಜಯಂತಿ, ಶ್ರೀ ನರಸಿಂಹ ಜಯಂತಿ, ಶ್ರೀ ಮಧ್ವ ನವಮಿ, ಶ್ರೀ ಪುರಂದರ ದಾಸರ ಆರಾಧನೆ, ಗುರು ರಾಘವೇಂದ್ರ ಸ್ವಾಮಿ ಆರಾಧನೆ, ಶಿವರಾತ್ರಿ, ದೀಪಾರಾಧನೆ, ತುಳಸಿ ಪೂಜೆ ಹಾಗೂ ಬ್ರಾಹ್ಮಣ ಸಂಪ್ರದಾಯದಂತೆ ಉಪಾಕರ್ಮ, ಸಾಮೂಹಿಕ ಉಪನಯನ,  ಇತ್ಯಾದಿ ಧಾರ್ಮಿಕ ಕಾರ್ಯಗಳನ್ನು, ಭಜನೆ, ನೃತ್ಯ, ನಾಟಕ,  ಯಕ್ಷಗಾನ ಮುಂತಾದ ವೈವಿಧ್ಯಮಯ ಸಾಂಸ್ಕೃತಿಕ  ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಾ ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುತ್ತಾ ಭಕ್ತಾದಿಗಳನ್ನು ತನ್ನತ್ತ ಆಕರ್ಷಿಸುವ ಪ್ರಸಿದ್ಧ ದೇವಸ್ಥಾನವಾಗಿ ಮೆರೆಯುತ್ತಿದೆ.
ಉಡುಪಿ ಕಡೆಗೋಲು ಕೃಷ್ಣನಿಗೂ  ಗೋಕುಲ ಗೋಪಾಲಕೃಷ್ಣನಿಗೂ ಅವಿನಾಭಾವ ಸಂಬಂಧ. ದ್ವಾರಕೆಯಲ್ಲಿ ರುಕ್ಮಿಣಿ ಕರಾರ್ಚಿತ ಕೃಷ್ಣಶಿಲಾ ಕಡೆಗೋಲು ಕೃಷ್ಣ,  ತನ್ನ ಭಕ್ತರನ್ನು ಅರಸಿಕೊಂಡು  ಸಮುದ್ರ ಮುಖೇನ ಬಂದು, ಶ್ರೀ ಮನ್ಮಧ್ವಾಚಾಚಾರ್ಯರಿಗೊಲಿದು, ಕರಾವಳಿ ತೀರ ಉಡುಪಿಯಲ್ಲಿ ನೆಲೆಸಿ  ಪೂಜಿಸಲ್ಪಡುತ್ತಾ ಹೇಗೆ ಭಕ್ತಾದಿಗಳಿಗೆ ಆರಾಧ್ಯನಾಗಿದ್ದಾನೋ, ಅಂತೆಯೇ ಕರಾವಳಿ ತೀರದಿಂದ ಬಂದು  ಮುಂಬಯಿ ಮಹಾನಗರಿಯಲ್ಲಿ  ನೆಲೆಸಿದ ತನ್ನ ಅಪಾರ ಭಕ್ತರಿಗೆ ಅಮೃತಶಿಲಾ ಮೂರ್ತಿಯಾಗಿ, ಗೋಪಾಲಕೃಷ್ಣನಾಗಿ,  ಆರಾಧ್ಯ ಮೂರ್ತಿಯಾಗಿ ಗೋಕುಲದಲ್ಲಿ ನೆಲೆ ನಿಂತು ಹರಸುತ್ತಿದ್ದಾನೆ. ಗೋಕುಲ ಶ್ರೀ ಕೃಷ್ಣನ ಪ್ರತಿಷ್ಠೆಯಾದಂದಿನಿಂದಲೂ,  ಉಡುಪಿ ಅಷ್ಟಮಠದ ಯತಿಗಳು ತಂತಮ್ಮ ಪರ್ಯಾಯ ಪೂರ್ವಭಾವಿ  ಧರ್ಮ ಪ್ರಸರಣ  ನಿಮಿತ್ತ ಸಂಚಾರಕ್ಕೆ ಮುಂಬಯಿ ಮಹಾನಗರಿಗೆ  ಪುರಪ್ರವೇಶ ಮಾಡುವಾಗ,  ಮೊದಲು ಗೋಕುಲ ಶ್ರೀ ಕೃಷ್ಣನ ದರ್ಶನ ಪಡೆದು ಆತನ ಸನ್ನಿಧಾನದಲ್ಲಿ ಪೂಜೆ ಸಲ್ಲಿಸಿ, ಭಕ್ತರನ್ನು ಅನುಗ್ರಹಿಸಿ, ತಮ್ಮ ಮುಂದಿನ ಕಾರ್ಯಕ್ಕೆ ತೆರಳುವುದು,  ಚಾತುರ್ಮಾಸ್ಯಕ್ಕಾಗಿ  ಆಗಮಿಸಿದಾಗ ಕೂಡಾ ಇದೇ  ಸಂಪ್ರದಾಯವನ್ನಿರಿಸಿಕೊಂಡಿರುವುದು ಈ ಮಾತಿಗೆ ಪುರಾವೆ ಒದಗಿಸುತ್ತದೆ.   

ನೂತನ ಶ್ರೀ ಕೃಷ್ಣ ದೇವಸ್ಥಾನವನ್ನೊಳಗೊಂಡ ಗೋಕುಲದ  ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭವು  ರವಿವಾರ ಜುಲೈ 2, 2017 ರಂದು  ಹರಿಪಾದೈಕ್ಯ  ಶ್ರೀ ಪೇಜಾವರ ಮಠಾಧೀಶ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು,  ಪರಮಪೂಜ್ಯರುಗಳಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದಂಗಳವರು,  ಅದಮಾರು ಮಠ, ಶ್ರೀ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಪಲಿಮಾರು ಮಠ, ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಕುಕ್ಕೆ ಸುಬ್ರಹ್ಮಣ್ಯ ಮಠ ಹಾಗೂ ವೇದಮೂರ್ತಿ ಶ್ರೀ ಕಮಲಾಪ್ರಸಾದ ಅಸ್ರಣ್ಣ, ಅನುವಂಶಿಕ ಅರ್ಚಕರು, ಶ್ರೀ ಕ್ಷೇತ್ರ ಕಟೀಲು, ಇವರುಗಳ ದಿವ್ಯ ಉಪಸ್ಥಿತಿ ಹಾಗೂ ಅಮೃತ ಹಸ್ತಗಳಿಂದ ನೆರವೇರಿತ್ತು. 
ಗೋಕುಲ ಶ್ರೀ ಕೃಷ್ಣ ದೇವಾಲಯದ ಶಿಲಾನ್ಯಾಸದ ಧಾರ್ಮಿಕ ವಿಧಿಗಳು ಹಾಗೂ ಸಾಂಕೇತಿಕ ಶಿಲಾನ್ಯಾಸವು ದಿನಾಂಕ 12 ಜೂನ್  2019 ರಂದು ನೆರವೇರಿತು. ಗೋಕುಲದ ಮಹಾಪೋಷಕರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರು,  ಜೂನ್ 24 ರಿಂದ  30  ರವರೆಗೆ  ಏಳು ದಿನಗಳ ಕಾಲ  ಮುಂಬಯಿಯಲ್ಲಿ ವಾಸ್ತವ್ಯವಿದ್ದು ಶ್ರೀ ಕೃಷ್ಣ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಮಾರ್ಗದರ್ಶನ ನೀಡುವುದರೊಂದಿಗೆ ಕಟ್ಟಡ ನಿಧಿ ಸಂಗ್ರಹಕ್ಕೆ ಸಹಕರಿಸಿ ಅನುಗ್ರಹಿಸಿದ್ದಾರೆ. ಆ  ಏಳು ದಿನಗಳಲ್ಲಿ ಏಳು ಕಡೆಗಳಲ್ಲಿ 8 ಬಾರಿ  ಶ್ರೀಪಾದಂಗಳವರು  ಹಾಗೂ ಅವರ ಪಟ್ಟದ ದೇವರು ಶ್ರೀ ರಾಮ ವಿಠಲ ದೇವರಿಗೆ ಭಕ್ತಾದಿಗಳಿಂದ  ಮುಂಬಯಿಯಲ್ಲಿ ಪ್ರ-ಪ್ರಥಮ ಬಾರಿಗೆರಜತ ತುಲಾಭಾರ ಸೇವಾ ಸಪ್ತಾಹ  ‘ನ ಭೂತೋ ನ ಭವಿಷ್ಯತಿ’  ಎಂಬಂತೆ ಜರಗಿ ದಾಖಲೆ ನಿರ್ಮಿಸಿತು. 

 ದಿನಾಂಕ 30  ಜೂನ್ 2019 ರಂದು  ಪ. ಪೂ.  ಗುರುಗಳಾದ  ಪೇಜಾವರ ಮಠಾಧೀಶ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹಾಗೂ ಶ್ರೀಕ್ಷೇತ್ರ ಕಟೀಲುವಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಲಕ್ಷ್ಮೀನಾರಾಯಣ ಅಸ್ರಣ್ಣರವರ  ಅಮೃತ ಹಸ್ತದಿಂದ ಹಾಗೂ ಇನ್ನಿತರ ಗಣ್ಯಾತಿಗಣ್ಯರ ಹಸ್ತದಿಂದ ಸಾರ್ವಜನಿಕ ಶಿಲಾನ್ಯಾಸ ನೆರವೇರಿತು.  ಆ ದಿನ ನೂರಾರು ಗಣ್ಯ ವ್ಯಕ್ತಿಗಳು  ಹಾಗೂ ಶ್ರೀ ಕೃಷ್ಣನ ಭಕ್ತಾದಿಗಳು ಉಪಸ್ಥಿತರಿದ್ದು ಅತ್ಯಂತ ವೈಭವದಿಂದ ಜರಗಿದ ಸಮಾರಂಭದಲ್ಲಿ ಪಾಲ್ಗೊಂಡು ಶ್ರೀ ಭಗವದನುಗ್ರಹಕ್ಕೆ  ಪಾತ್ರರಾದರು.

ನೂತನವಾಗಿ ನಿರ್ಮಾಣವಾಗುತ್ತಿರುವ ಗೋಕುಲ  ಕಟ್ಟಡದಲ್ಲಿ, ದಕ್ಷಿಣ ಕನ್ನಡ ಶೈಲಿಯಲ್ಲಿ  ರೂಪುಗೊಂಡ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಹಲವು ವೈಶಿಷ್ಟ್ಯಗಳು ಈ ಕೆಳಗಿನಂತಿವೆ: . *ಕುಸುರಿ ಕೆತ್ತನೆಗಳಿಂದ ರಚಿಸಲ್ಪಟ್ಟ  ಬೂದು ಬಣ್ಣದ ಶಿಲಾಮಯ ಗರ್ಭಗುಡಿ, ಅದರಲ್ಲಿ ಕಪ್ಪು ಕಲ್ಲಿನ 44 ಕೇಶವಾದಿ,ವಿಷ್ಣುವಾದಿ ಹಾಗೂ ಸಂಕರ್ಷಣಾದಿ  ಮೂರ್ತಿಗಳು.  *  38 ಅಡಿ ಎತ್ತರದ ಬೃಹತ್ ಗೋಪುರ. 

*  14 ಅಡಿ ಎತ್ತರದ ಮರದ ಕೆತ್ತನೆಯುಳ್ಳ ಮಹಾದ್ವಾರ, ಅದರಲ್ಲಿ  ಕೃಷ್ಣಾವತಾರಕ್ಕೆ  ಸಂಬಂಧ ಪಟ್ಟ 28 ವಿವಿಧ ಪ್ರಕರಣಗಳ  ಮರದ ಕೆತ್ತನೆಗಳು.

*  6 ಅಡಿ ಎತ್ತರದ ಕಲ್ಲಿನ ಜಯ-ವಿಜಯ ದ್ವಾರಪಾಲಕ ಮೂರ್ತಿಗಳು. 

*  ಮೇಲ್ಗಡೆ ಹತ್ತು ಅಡಿ  ಉದ್ದ ಮೂರೂವರೆ  ಅಡಿ ಅಗಲದ ಅನಂತಶಯನ ದೇವರ ಮರದ ಕೆತ್ತನೆ. 

*  ಮಹಾದ್ವಾರದ ಒಳಗೆ ಹೋಗುವಾಗ 4 ಅಡಿ ಎತ್ತರದ ಪಂಚಲೋಹದ ಎರಡು ದೀಪಲಕ್ಷ್ಮಿಯರು 

* ಪ್ರವೇಶದ್ವಾರದ ಒಳ ಮೇಲ್ಮೈಯಲ್ಲಿ ಉಡುಪಿ ಕಡೆಗೋಲು ಕೃಷ್ಣ, ಮಹರ್ಷಿ ವೇದವ್ಯಾಸರು ಗಣಪತಿಯಿಂದ ಮಹಾಭಾರತ ಬರೆಸುತ್ತಿರುವುದು, ಮಹರ್ಷಿ ವಾಲ್ಮೀಕಿಯಿಂದ ರಾಮಾಯಣ ರಚನೆಗಳ ಸುಂದರ ಕೆತ್ತನೆ.

 * ದೇವಾಲಯದ ಮುಂಭಾಗದಲ್ಲಿರುವ ಹವಾ ನಿಯಂತ್ರಿತ ಸಭಾಗೃಹದ ಮೇಲ್ಮೈಯಲ್ಲಿ  ಶ್ರೀ ಕೃಷ್ಣಾವತಾರದ ಕೆಳಗೆ ನಮೂದಿಸಿದ ವಿವಿಧ ರೂಪಗಳ ಮರದ ಕೆತ್ತನೆಗಳು: 
* ಕಾರಾಗೃಹದಲ್ಲಿ ಶ್ರೀಕೃಷ್ಣ ಜನನ, ವಸುದೇವನು ಮಗು ಶ್ರೀಕೃಷ್ಣನೊಂದಿಗೆ ಯಮುನೆಯನ್ನು ದಾಟುವುದು, ಗೋಪಿಕಾಸ್ತ್ರೀಯರೊಂದಿಗೆ ಶ್ರೀ ಕೃಷ್ಣ ಲೀಲೆ, ಕಾಳಿಂಗ ಮರ್ದನ, ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನೆತ್ತುವುದು, ಜಾಂಬವತಿ ಕಲ್ಯಾಣ, ಶ್ರೀ ಕೃಷ್ಣ ತುಲಾಭಾರ, ಗೀತೋಪದೇಶ, ದ್ರೌಪದಿ ವಸ್ತ್ರಹರಣ ದೃಶ್ಯ, ಗಜೇಂದ್ರ ಮೋಕ್ಷ, ಭಕ್ತ ಸುಧಾಮ, ಶ್ರೀನಿವಾಸ ಕಲ್ಯಾಣ ಹಾಗೂ ಮಧ್ಯ ಭಾಗದಲ್ಲಿ ಅರ್ಜುನನಿಗೆ ವಿಶ್ವರೂಪ ದರ್ಶನದ ಕೆತ್ತನೆಗಳು.

 *ಅಲ್ಲದೆ ಗೋಡೆಗಳಲ್ಲಿ 4′ ಎತ್ತರ 3′ ಅಗಲದ ರಜತ ಪ್ರಭಾವಳಿಯಿಂದಲಂಕೃತ ಸ್ವರ್ಣ ಲೇಪಿತ  ದಶಾವತಾರ ಮೂರ್ತಿಗಳು. * ತೇಗದ ಮರ ಹಾಗೂ  ಕಂದು ಕಲ್ಲಿನಿಂದ ರಚಿತ ಅಲಂಕಾರಿಕ ತೀರ್ಥ ಮಂಟಪ,

*  ತೀರ್ಥಬಾವಿ, ತುಳಸಿ ವೃಂದಾವನ  ಇಂತಹ ಅಪರೂಪದ ದೃಶ್ಯಾವಳಿಗಳನ್ನೊಳಗೊಂಡ ಶ್ರೀ ಕೃಷ್ಣ ದೇವಾಲಯ ಮುಂಬಯಿ ನಗರಿಯಲ್ಲಿ ಎಲ್ಲಿಯೂ ಕಾಣಸಿಗಲಿಕ್ಕಿಲ್ಲ. 
ಸುಮಾರು ನಾಲ್ಕೂವರೆ ವರ್ಷಗಳ ನಿರಂತರ ಕಾಮಗಾರಿಯ ನಂತರ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತಿದೆ. ಸದ್ಯ ಬಾಲಾಲಯದಲ್ಲಿರುವ ಶ್ರೀ ಗೋಪಾಲಕೃಷ್ಣ,  ಪ್ರಸಿದ್ಧ ವಾಸ್ತು ತಜ್ಞರ ನಿರ್ದೇಶನದಂತೆ ರೂಪುಗೊಂಡು, ಕುಸುರಿ ಕೆತ್ತನೆಗಳು,  ದಾರು ಶಿಲ್ಪಗಳು, ಆಕರ್ಷಕ ಗೋಪುರದಿಂದ ಕೂಡಿದ  ನೂತನ  ಶಿಲಾಮಯ  ದೇಗುಲದಲ್ಲಿ  ಶೀಘ್ರದಲ್ಲಿಯೇ  ಪ್ರತಿಷ್ಠೆಗೊಳ್ಳಲಿದ್ದಾನೆ. 44 ನಾಮಾಂಕಿತ ದೇವತಾ ಮೂರ್ತಿಗಳೊಂದಿಗೆ ಮಂದಿರ ಕಂಗೊಳಿಸಿ, ಮಂದಿರದ ಗರ್ಭಗೃಹದ, ದ್ವಾರಕಂಬದ, ಗೋಪುರದ ಹಾಗೂ ಮುಖದ್ವಾರದ ಪ್ರತಿಯೊಂದು ಶಿಲೆಗಳೂ ಸದಾಕಾಲ ಕೃಷ್ಣಾ ಕೃಷ್ಣಾ ಎಂದು ಹೇಳುವಂತೆ ನಮ್ಮ ಕಣ್ಣಿಗೆ ಗೋಚರಿಸಲಿವೆ. ಮುಂಬಯಿಯ ಪ್ರಸಿದ್ಧ ದೇವಾಲಯಗಳಲ್ಲಿ ಗೋಕುಲ ಒಂದಾಗಲಿದೆ.   ಆಧುನಿಕ ಸವಲತ್ತು ಸೌಲಭ್ಯಗಳಿಂದ ಸುಸಜ್ಜಿತ,  ನವೀಕೃತ  ಸಾಂಸ್ಕೃತಿಕ ಭವನ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಾಣಗೊಂಡ ಸುಂದರ ಶ್ರೀ ಕೃಷ್ಣ ದೇಗುಲವನ್ನು ಮುಂಬಯಿಯ ಜನತೆಗೆ ಗೋಕುಲ ಕೊಡುಗೆಯಾಗಿ ನೀಡಲಿದೆ.