ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಜ್ನಾನಿ ಬಿರಾದಾರ್
ಇತ್ತೀಚಿನ ಬರಹಗಳು: ಸುಜ್ನಾನಿ ಬಿರಾದಾರ್ (ಎಲ್ಲವನ್ನು ಓದಿ)

ಪ್ರಕೃತಿ ಮಾತೆಯ ಮುಂಜಾವಿನ ನೋಟಕ್ಕೆ ಸೋಲದವರುಂಟೇ? ಆಹಾ! ಎಂಥಹ ಮೋಹಕ ಸುಂದರ ದೃಶ್ಯ ಅದು ಬಣ್ಣ ಬಣ್ಣದ ಹೂವುಗಳ ಮುಡಿಯಲ್ಲಿ ತೊಟ್ಟಂತೆ ಮೂಡಣದಿ ರವಿಯ ಬರುವಿಕೆಯನ್ನು ಕಾತರದಿಂದ ನೋಡುತಿರುವಂತೆ ಕಾಣುವ ಪ್ರತಿನಿತ್ಯದ ಈ ನೋಟ ಕವಿಗಳಿಗೆ ಹೊಸ ಕಲ್ಪನೆಗಳ ಅಲೆಗಳನ್ನೇ ಹರಿದುತರುವಂತಿದೆ. ಒಂದು ಮಾತಂತು ನಿಜ ಸುಂದರತೆಯ ನಿಜವಾದ ಅರಿವು ಉಳ್ಳವನಿಗೆ ಮಾತ್ರ ಕಲ್ಪನೆಗಳ ಅಲೆ ಹರಿದು ಬರಲು ಸಾದ್ಯ. ಈ ಮಾತಿಗೆ ಪುಷ್ಠಿಕೊಡಲು ಒಂದು ಕೋಳಿಯ ಉದಾಹರಣೆಯನ್ನು ನೋಡಿ.
“ಒಮ್ಮೆ ಒಂದು ಸಲ ಒಂದು ಮುತ್ತನ್ನು ನೋಡಿದ ಕೋಳಿ ನಿನನ್ನು ಮನುಷ್ಯರು ಬಹಳ ಹೊಗಳಿರಬಹುದು ನನಗೆ ಒಂದು ಜೋಳದ ಕಾಳಿಗಿಂತಲೂ ಕಡೆ ನೀನು”- ಎಂದು ಆ ಮುತ್ತನ್ನು ಕೋಳಿ ಅತ್ತ ಸರಿಸಿತು.
ಕೇವಲ ಶಾರೀರಿಕ ಪ್ರಯೋಜನ ಮಾತ್ರ ನೋಡುವುದು ಪಶುಲಕ್ಷಣ ಉಪಯೋಗನಿರಪೇಕ್ಷ, ಸ್ವಾರ್ಥನಿರಪೇಕ್ಷೆ ಸೌಂದರ್ಯವನ್ನು ಮಾತ್ರ ಹುಡುಕುವುದು ಮಾನವ ಗುಣ. ಡಿವಿಜಿಯವರು ಹೇಳುವಂತೆ…………
“ಸೌಂದರ್ಯವೊಂದು ದೈವರಹಸ್ಯೇ, ಸೃಷ್ಟಿವೋಲು
ನಿಂದಿರ್ಪದದೆ ರಾಶಿಯನೆ ಜೀವಿತಾಗೆ
ಅಂದವುದು ಕಣ್ಣಿಗದು ಸಂಸ್ಕೃತಿಗೆ ತಕ್ಕಂತೆ
ಚೆಂದದರಿವೆ ತಪಸ್ಸೋ- ಮಂಕುತಿಮ್ಮ”

– ಡಿ.ವಿ.ಜಿ.
ಜಗತ್ತಿನಲ್ಲಿ ಅಸುಂದರವಾದುದು ಏನಿದೆ? ಎಲ್ಲವೂ ಸುಂದರವೇ. ಇದು ದೇವರ ಪ್ರಕೃತಿ ಲೀಲೆ. ಹಾಗಾಗಿ ಎಲ್ಲವೂ ಸುಂದರವೆ. ಸೌಂದರ್ಯಾಭಿರುಚಿ ಉಂಟಾಗುವುದು ನಮ್ಮ ಪ್ರವೃತ್ತಿ, ಶಕ್ತಿ,ದೃಷ್ಟಿ, ಹಾಗೂ ಜ್ಞಾನವನ್ನು ಅವಲಂಬಿಸಿದೆ.
ಸೌಂದರ್ಯವೆನ್ನುವುದು ನಿತ್ಯವು ಆನಂದಕೊಡುವ ಸಾಧನ. ಶಾಸ್ವತ ಆನಂದವನ್ನು ನೀಡುವ ಗುಣವಿರುವ ವಸ್ತು ಸುಂದರವಾಗಿರುತ್ತದೆ. ಇದರಿಂದ ದೊರೆಯುವ ಆನಂದ ಕೊನೆಗೆ ತಾಪದಾಯಕವಾಗುವುದಿಲ್ಲ. ಈ ಆನಂದ ಎಲ್ಲರಿಗೂ ಲಭಿಸುತ್ತದೆ. ಬಡವ-ಬಲ್ಲಿದನೆಂಬ ಬೇದವಿಲ್ಲ. ಪ್ರಮಾಣಬದ್ಧತೆಯಿಂದಲೂ ಸೌಂದರ್ಯ ಕಾಣಿಸುತ್ತದೆ. ಅಂಗಗಾಂಗಗಳು ಸಾಮಂಜಸ್ಸದಿಂದ ಕೂಡಿದ್ದು ಅಯಾಸ್ಥಾನದಲ್ಲಿ ನಿಗದಿ ಮಾಡಿದ ರೀತಿಯಲ್ಲಿದ್ದರೆ ಸೌಂದರ್ಯ ಕಾಣಿಸುತ್ತದೆ. ಶಾರೀರಿಕ, ಮಾನಸಿಕ, ಬೌದ್ಧಿಕ ಚುರುಕುತನವಿರುವಲ್ಲಿ ಜಡತೆ ಇರುವಲ್ಲಿಗಿಂತ ಹೆಚ್ಚಿನ ಸೌಂದರ್ಯವಿರುತ್ತದೆ.

“ತನ್ನ ಸ್ವಂತದ ಗುಣಗಳಿಂದ ಯಾವುದೇ ರೀತಿಯ ಸ್ವಾರ್ಥವಿಲ್ಲದೆ ಯಾವುದೇ ನಿಶ್ಚಿತ ಕಾಲ್ಪನಿಕ ರೂಪವಿಲದಲ್ಲದ ಸಹಜವಾಗಿ ಯಾವತ್ತು ರಂಜಿಸುತ್ತದೋ ಅದು ಸುಂದರ” ಎಂದು ತತ್ವಜ್ಞಾನಿ ಕಾಂಟ್‍ನ ಮತವಾದರೆ “ವೈವಿದ್ಯದಲ್ಲಿ ಏಕತೆಯೇ ಸೌಂದರ್ಯ”- ಎಂದು ಹೆಗಲ್ ಹೇಳುತ್ತಾನೆ.
ಸೌಂದರ್ಯ ಒಂದು ಮಹಾಶಕ್ತಿ. ಅದರಲ್ಲಿ ಆಕರ್ಷಣೆ ಇರುವಂತೆ ಪ್ರೇರಣೆಯೂ ಇದೆ. ನಿಜವಾದ ಸೌಂದರ್ಯ ಬೇಸರ ತರಿಸುವುದಿಲ್ಲ. ಅದರ ರಮ್ಯತೆ ನಿತ್ಯ ನೂತನ; ಕ್ಷಣ ಕ್ಷಣಕ್ಕೂ ಹೊಸತು. ಒಳಗಿನ ಸೌಂದರ್ಯ ಹೊರಗಿನವರ ಜೊತೆಗೆ ಸಂಪರ್ಕ ಪಡೆದಾಗ ಆನಂದವಾಗುತ್ತದೆ.
ಸಂಗೀತದ ಗಂಧವು ಇಲ್ಲದವನಿಗೆ ಮಧುರ ಸ್ವರಗಳ ನಾದವು ಮೋಹಕವೆನಿಸದು. ಅಂಥ ಪಶು ಸದೃಶ ವ್ಯಕ್ತಿ ಎಂಥ ಕೆಟ್ಟ ಕಾರ್ಯವನ್ನು ಮಾಡಿಯಾನು.
ಸೌಂದರ್ಯವೆಂದರೆ ಹೊರಗಿನ ಥಳಕು ಬೆಳಕುಗಳಲ್ಲ. ಹೊರಗಿನ ಗೌಜುಗಲಾಟೆಗಳಲ್ಲ. ಚಿತ್ರವಿಚಿತ್ರ ವರ್ತನೆಗಳಲ್ಲ. ಸೌಂದರ್ಯವೆಂದರೆ ಶಾಂತ, ಸ್ನಿಗ್ಧ, ಪ್ರೇಮಮಯ, ಹಿತಕಾರಿ; ಸಮ್ಮೋಹನ, ಸಂಜೀವಿನಿ ಸಂಯಮ, ಸಂತುಲನ, ಸಾರಾಸಾರ ವಿವೇಕ, ನಿಷ್ಪಕ್ಷಪಾತ, ನ್ಯಾಯ, ಮಾರ್ದವ, ಔಚಿತ್ಯ ಮುಂತಾದ ಸಮಸ್ತಗುಣಗಳ ಸಂಗಮ ಸೌಂದರ್ಯ.
ನಾನು ನನ್ನದು ಮಾತ್ರ ಸುಂದರ ಇತರರದು ಕುರುಪವೆಂಬ ಭಾವನೆ ಇದೆ. ಈ ನಿಟ್ಟಿನಲ್ಲಿ ಒಂದು ಕಥೆ ನನಗೆ ನೆನಪಾಗುತಿದೆ ನಾನು ಚಿಕ್ಕವಳಿರುವಾಗ ಅಮ್ಮ ನನಗೆ ಹೇಳಿದ್ದು ಇಲ್ಲಿ ನೆನಪಿಸುವುದು ಔಚಿತ್ಯವೆನಿಸುತ್ತಿದೆ – “ಒಮ್ಮೆ ಗರುಡನಿಗೂ ಗೂಬೆಗೂ ಜಗಳವಾಯಿತು. ಜಗಳ ಬಹಳ ದಿನ ಸಾಗಿತು ಕೊನೆಗೊಂದು ದಿನ ಒಂದು ಒಪ್ಪಂದವಾಯಿತು – ನಾವು ಪರಸ್ಪರರ ಮರಿಗಳನ್ನು ತಿನ್ನಬಾರದು; ಎರಡೂ ಒಪ್ಪಿಕೊಂಡವು. ಗೂಬೆ ಹೇಳಿತು; ನಿನಗೆ ಸುಂದರವಾದ ಮರಿಕಾಣಿಸಿದರೆ ಅದು ನನ್ನವೆಂದು ತಿಳಿ ಎಂದು ಮರಿಗಳನ್ನು ಈ ರೀತಿ ವರ್ಣಿಸುತ್ತದೆ. ಕೊಕ್ಕುಬಾಗಿರುತ್ತದೆ, ಕಣ್ಣು ಹೊಳೆಯುತ್ತಿರುತ್ತವೆ, ರೆಕ್ಕೆಗಳು ರೇಶ್ಮೆಯ ಹಾಗೆ ಇರುತ್ತದೆ, ಸ್ವರ ಬಹಳ ಮಧುರ.”
ಮರುದಿನ ಗರುಡನಿಗೆ ಕುರುಪಿ, ಚಪ್ಪಟೆಮೂಗಿನ ಕೊಳಕು ಮರಿಗಳು ಕಾಣಿಸಿದವು. ಅವು ಗೂಬೆಯವೇ ಮರಿಗಳು, ಗರುಡ ಅವನ್ನು ತಿಂದಿತು. ಗೂಬೆ ಜಗಳಾಡಿತು. ಗರುಡ ಹೇಳಿತು `ನೀನು ನಿನ್ನ ಮರಿಗಳ ರೂಪವನ್ನು ಇದ್ದ ಹಾಗೆ ವರ್ಣಿಸಲಿಲ್ಲ. ನಾನೆನು ಮಾಡಲಿ”ಎಂದಿತು.

ಅಂದರೆ ಆತ್ಮಕೇಂದ್ರಿತ ಅಹಂಕಾರಿಗಳು ತಮ್ಮದನ್ನು ಮಾತ್ರ ಸುಂದರ ಇತರರದು ಕೊಳಕು- ಎಂದು ತಿಳಿದುಕೊಂಡಿರುತ್ತಾರೆ. ಇನ್ನು ಕೆಲವರು ಹೀನಭಾವದಿಂದ ಗ್ರಸ್ತರಾಗಿ ತಮ್ಮದೆಲ್ಲವೂ ಕೆಟ್ಟದು, ಇತರರದು ಮಾತ್ರ ಚೆಂದ ಎಂದು ತಿಳಿಯುವರು. ತಮ್ಮದೆಲ್ಲವು ಅವರಿಗೆ ಕುರುಪ. ತಮ್ಮ ಕೆಲಸ ಕೆಟ್ಟದು, ಬೆರೆಯವರದು ಸರಿ. ತಮ್ಮ ಮಗ ದಡ್ಡ. ಇತರರ ಮಕ್ಕಳು ಜಾಣರು ತಮ್ಮ ಹೆಂಡತಿ ಕುರುಪಿ, ಬೆರೆಯವರ ಹೆಂಡತಿ ಸುಂದರಿ, ತನ್ನ ಸುಂದರ ಸುಶೀಲೆ ಹೆಂಡತಿಯನ್ನ ಬಿಟ್ಟು ಅಥವಾ ಅವಳಿಗೆ ಹಿಂಸೆ ನೀಡಿ ಕೊಳಕು ಮೋಸಗಾರ್ತಿ ಪಾರಾಂಗನೆಯ ಮನೆ ಸೇರುವ ಮೂರ್ಖರಿಗೆ ಕೊರತೆ ಇದೆಯೇ? ಈ ಎರಡೂ ತರದ ಜನ ಸೌಂದರ್ಯೋಪಾಸಕರು ಸೌಂದರ್ಯದ ಶತ್ರುಗಳುಗಳಾಗುತ್ತಾರೆ.
ಅನೇಕ ಸಾಹಿತ್ಯ ಸಮ್ಮೇಳನಗಳು ಸಂಘರ್ಷ ಸಮ್ಮೇಳನಗಳಾಗುತ್ತಿವೆ. ಕಲಾಮಂಡಲಗಳು ಕಲಹ ಮಂಡಲಗಳಾಗಿರುತ್ತವೆ. ಈ ರೀತಿ ಇಂದು ಸರ್ವತ್ರ ನಗರ-ಗ್ರಾಮಗಳಲ್ಲಿ ಕೊಳಕು, ಅಸೌಂದರ್ಯ ಹೆಚ್ಚುತ್ತಿದೆ. ಇಂಥಹ ಕಲಹಗಳಿಂದ ಮುಕ್ತಿ ಪಡೆಯಲು ಪ್ರತಿಯೊಬ್ಬ ವ್ಯಕ್ತಿ ತನ್ನ ಕೆಲಸ, ಮಾತು, ಕೃತಿ, ವಿಚಾರ ಸುಂದರವಾಗಿರಿಸಬೇಕು. ವ್ಯವಸ್ಥಿತವಾಗಿರುವ ಸುಂದರವಾಗಿರುವ ಈ ಜಗತ್ತು ದೇವರ ಪ್ರತಿರೂಪ. ನಿಜವಾಗಿ ದೇವರಲ್ಲಿ ಭಕ್ತಿ ಇರಿಸುವುದಾದರೆ ಮೊದಲು ವ್ಯವಸ್ಥಿತರಾಗಬೇಕು. ದೇವರ ಅನುಗ್ರಹ ಸಂಪಾದಿಸಬೇಕಾದರೆ ಆತನ ವೈಭವ ಪಡೆಯಬೇಕಾದರೆ, ಆತನ ಆನಂದಮಯ ಸಾಮ್ರಾಜ್ಯದ ಒಡೆಯರಾಗಬೇಕಾದರೆ ಪ್ರತಿಯೊಂದು ಕ್ಷಣದಲ್ಲಿಯೂ, ಪ್ರತಿಯೊಂದು ಕಡೆಯಲ್ಲಿಯು ಸುಂದರವಾದ ವ್ಯವಸ್ಥೆ ಮೂಡಿಸಬೇಕು, ಒಳಹೊರ ಜೀವನ ನಿರ್ಮಲವಾಗಿರಬೇಕು – ಎಂದು ಮನುಷ್ಯನಿಗೆ ತಾನಾಗಿ ಅನ್ನಿಸುವಂತಾಗಬೇಕು.
ಇಂದು ಸುಂದರವಾಗಿ ಕಾಣಲು ಮಾಡುವ ಪರದಾಟದ ಪ್ರಯತ್ನಗಳಷ್ಟೇ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಪ್ರಯತ್ನ ಸುಂದರವಾಗಲು ಮಾಡಬೇಕಾಗುತ್ತದೆ. ಸುಂದರವಾಗಿ ಕಾಣಿಸಿದರೆ ಸುಂದರನಾಗಿದ್ದೇನೆಂದಲ್ಲ ಎಂಬ ತಿಳಿವು ಮೂಢಬೇಕು, ನಾನು ಸುಂದರವಾಗಿದ್ದರೆ ನನ್ನ ಸೌಂದರ್ಯ ತಾನಾಗಿ ಕಾಣಿಸುತ್ತದೆ. ಎಂಬ ತಿಳಿವು ಮೂಡಿಬರಬೇಕು. ಇಂಥ ಸಮ್ಯಕ್ ದೃಷ್ಟಿಯಿಂದ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಸೌಂದರ್ಯದ ಉಪಾಸನೆ ಮಾಡಬೇಕು.