ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಅನ್ನವೇ ಮೊದಲು ಎನ್ನುವ ಅಡಿಗರ ‘ಇದು ಮೊದಲು’

ಸುಮಾ ವೀಣಾ
ಇತ್ತೀಚಿನ ಬರಹಗಳು: ಸುಮಾ ವೀಣಾ (ಎಲ್ಲವನ್ನು ಓದಿ)

ಸಾಹಿತ್ಯದಲ್ಲಿ ಮಣ್ಣಿನ ವಾಸನೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿರುವ ಗೋಪಾಲಕೃಷ್ಣ ಅಡಿಗರು ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳು. ವಸ್ತು ಮತ್ತು ರೂಪದಲ್ಲಿ ಕನ್ನಡ ಕಾವ್ಯಕ್ಕೆ ನವ್ಯತೆಯನ್ನು ತಂದವರು. ಸ್ವಾತಂತ್ರ್ಯೋತ್ತರ ಭಾರತದ ಅನ್ನವೇ ಮೊದಲು ಎನ್ನುವ ಅಡಿಗರ ‘ಇದು ಮೊದಲು’’ ಸಂಕೀರ್ಣ ಅನುಭವಗಳನ್ನು ಸಂಕೇತ ಮತ್ತು ಪ್ರತಿಮೆಗಳಲ್ಲಿ ಬಂಧಿಸಿ ವಿಶಿಷ್ಟ ಕಾವ್ಯಾನುಭೂತಿ ನೀಡಿದವರು. ವಸ್ತುನಿಷ್ಠತೆ ಮತ್ತು ವೈಚಾರಿಕತೆ ಇವರ ಕಾವ್ಯದ ಪ್ರಮುಖ ಗುಣಗಳು.


ಗೋಪಾಲಕೃಷ್ಣ ಅಡಿಗರ ‘ಕಟ್ಟುವೆವು ನಾವು’ ಕವನ ಸಂಕಲನದಿಂದ ‘ಇದು ಮೊದಲು’ ಕವನವನ್ನು ಆರಿಸಿದೆ. ‘ನಾನು’’, ‘ನನ್ನ’ ಎಂಬ ಪದಗಳು ಸಾಮಾಜಿಕರನ್ನು ಸಮಷ್ಟಿ ಪ್ರಜ್ಞೆಯಿಂದ ಪ್ರತಿನಿಧಿಸುವ ಪದಗಳಾಗಿವೆ. ಮತ್ತೆ ಮತ್ತೆ ಈ ಕವಿತೆಯಲ್ಲಿ ಬರುವ “ನನ್ನ” ಎಂದರೆ ಕೇವಲ ವ್ಯಕ್ತಿಯಲ್ಲ ಪ್ರತಿಯೊಬ್ಬ ಸಾಮಾಜಿಕನೂ ಹೌದು! ಮಾನವನ ಮೂಲಭೂತ ಅವಶ್ಯಕತೆಗಳಲ್ಲಿ ಅನ್ನ ಮುಖ್ಯ ಹಾಗಾಗಿ ಅನ್ನವನ್ನು ”ಬ್ರಹ್ಮ” ಎನ್ನುತ್ತಾರೆ. ಗೋಪಾಲಕೃಷ್ಣ ಅಡಿಗರು ಈ ಕವಿತೆಯಲ್ಲಿ ಮಾನವನಿಗೆ ಅಗತ್ಯಕ್ಕೆ ಬೇಕಾದ ಕನಿಷ್ಟ ಅವಶ್ಯಕತೆಗಳನ್ನು ಮೊದಲು ಪೂರೈಸಬೇಕು ಎನ್ನುತ್ತಾರೆ.. ‘‘ಇದು ಮೊದಲು”’’ ಎಂದೇ ಖಂಡಿತವಾದಿಯಾಗಿ ಹೇಳುವಲ್ಲಿ ಅವರ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ. ಅನ್ನ ಮಾತ್ರವೇ ಇವರ ಆದ್ಯತೆಯೋ? ಎಂದರೆ ಇಲ್ಲ! ಅನೀತಿ, ಅನ್ಯಾಯಗಳ ಬಗ್ಗೆಯೂ ಮಾತನಾಡುತ್ತಾರೆ. ಸಮಾಜ ಮನಸ್ಸು ಮಾಡಿದರೆ ಯಾವುದೂ ಅಪರಿಹಾರ್ಯವಲ್ಲ ಎಲ್ಲವೂ ಪರಿಹಾರ್ಯ ಎನ್ನುವ ದೃಢ ನಿಲುವು ಈ ಕವಿತೆಯಲ್ಲಿದೆ.

ನೇತ್ರಗಳು ಬಾರವು ಶಾಸ್ತ್ರಗಳು
ಕೇಳವು ನಾಟ್ಯದಾ ಸೂಳೆ ಸೊಗಸಳು ಕೂಳೊಂದು
ಹೊತ್ತು ತಾ ತಪ್ಪಿದರೆ ಸರ್ವಜ್ಞ..

ಎಂದು ಸರ್ವಜ್ಞ ಶತಮಾನಗಳ ಹಿಂದೆಯೇ ಅನ್ನದ ಮಹತ್ವವನ್ನು ಹೇಳುವಲ್ಲಿ ಹೇಳಿ ಅನ್ನದೇವರ ಮುಂದೆ ಇನ್ನು ದೇವರು ಉಂಟೇ ಅನ್ನವೆ ಮಿಗಿಲು ಎಂದು ಅನ್ನದ ಸಾರ್ವಕಾಲಿಕ ಅವಶ್ಯಕತೆ ಮತ್ತು ಮಹತ್ವವನ್ನು ಹೇಳಿದ್ದಾನೆ. ಆದರೆ ಇದಕ್ಕೆ ಅಪಸವ್ಯ ಎಂಬಂತೆ “ನಮ್ಮಲ್ಲಿ ಅನ್ನದ ಕೊರತೆಯಿದೆ ಆ ಕೊರತೆಯನ್ನು ನೀಗಿಸಿ “ಇದು ಮೊದಲು” ಎಂದು ಹೇಳಿರುವಲ್ಲಿ ಅಡಿಗರ ಸಾಮಾಜಿಕ ಕಳಕಳಿಯನ್ನು ಕಾಣಬಹುದು.

ಬೇಂದ್ರೆಯವರ ಪದ್ಯ ‘ತುತ್ತಿನ ಚೀಲ’ ಕವಿತೆಯಲ್ಲಿ ಅನ್ನಬ್ರಹ್ಮದ ದೇಗುಲದಲ್ಲಿ “ಬೆಳಗೂ ಬೈಗೂ ಛಿಳಿ ಛಿಟಿ ಬೆಂಕಿ” ಎನ್ನುತ್ತಾರೆ. ಹಸಿವಿನ ಮುಂದೆ ದೇವರು ಧರ್ಮದ ಉಪಾಸನೆ, ಶಾಸ್ತ್ರ ಪುರಾಣದ ಪರಾಯಣ ಅನುಸಂಧಾನ ಇತ್ಯಾದಿಗಳೆಲ್ಲವೂ ಶೂನ್ಯವೇ ಸರಿ!“ಹಸಿದವ ಬಲ್ಲ ಹಸಿವಿನ ಶೂಲಿ” ಎಂಬಂತೆ ಹಸಿಯದೆ ಇರುವವರು ಶ್ರೀಮಂತರಿಗೆ ದಯೆ ಎಂಬುದಿಲ್ಲ. ಅಮೃತವನ್ನು ಸೇವಿಸಿ ಅಮೃತತ್ವದಲ್ಲಿ ಬದುಕುತ್ತಿರುವ ದೇವತೆಗಳಿಗೆ ಬಡವರ ಹೊಟ್ಟೆ ಹಸಿವಿನ ಸಂಕಟ ಹೇಗೆ ಗೋಚರಿಸುವುದು ಎಂದಿದ್ದಾರೆ. ಭೂಮಿಯ ಮೇಲೆ ಜನಿಸಿದ ಜೀವಿಗಳಿಗೆ ಕನಿಷ್ಟ ಅನ್ನಾಹಾರಗಳನ್ನು ಕೊಡದ ಬಂಜೆ ಭೂಮಾತೆ ಅಲ್ಲ ಅವಳಲ್ಲಿ ಎಲ್ಲವು ಇದೆ ಆದರೆ ಅದು ಶ್ರೀಮಂತರು, ಬಂಡವಾಳಶಾಹಿಗಳಲ್ಲಿ ಬಂಧಿಯಾಗಿದೆ. ಅನ್ನಕ್ಕೆ ಪರದಾಡಿ ನೊಂದು ಬೆಂದು ಹಸಿವಿನ ಉರಿಯ ಒಡಲಾಗಿರುವ ನೋವಿನ ದನಿಯೊಂದು ಇಲ್ಲಿ ದೇವರನ್ನು, ಭೂಮಿಯನ್ನು ನಾಶಮಾಡುವೆ ಎಂಬ ಕ್ರಾಂತಿಕಾರಿ ನಿಲುವಿಗೆ ಬಂದಿರುವುದು ವಿಷಾದನೀಯವೇ.
ಅದನ್ನೇ ಅಡಿಗರು
ಹೊಟ್ಟೆ ಹಸಿದಿದೆ: ಕೊಡು ಅನ್ನವನು ,
ಚಳಿಗೆ ಮೈ ಸೆಟೆದು ಹೋಗಿದೆ ಆಶ್ರಯತಾಣವಿಲ್ಲದೆ ಗಾಳಿ ಬೆಳಕಿನಲ್ಲಿ ಹೂತು ಹೋಗುವ ಭಯವಾಗುತ್ತಿದೆ ವಸತಿಯನ್ನು ಕೊಡು
ಆನಂತರ ಉಳಿದ ಮಾತು ಎನ್ನುತ್ತಾರೆ.
“ನನ್ನ ಬೆವರನು ಹೀರಿ ಹೀರಿ ಬೆಳೆದಿದೆ ಜಗದಸಿರಿಯ ಸಸಿ” ಎಂಬ ಮಾತುಗಳು ಬಂಡವಾಳಶಾಹಿಗಳು ಬಡವರ ಶ್ರಮವನ್ನು ಬಳಸಿಕೊಂಡು ಹಣ ಸಂಚಯನ ಮಾಡಿಕೊಳ್ಳುತ್ತಿದ್ದಾರೆ ತತ್ಪರಿಣಾಮವಾಗಿ “ಚರಂಡಿಯ ಮರೆಗೆ ನಾರುವೆನು -ನಾನು ಕ್ರಿಮಿ !” ಯಕಶ್ಚಿತ್ ಕ್ರಿಮಿಯಾಗಿ ನಾನಿದ್ದೇನೆ ನೀನು ಅಂದರೆ ಸಮಾಜವನ್ನು ದಯೆ ಎಂಬ ಮಂಜನ್ನು ಸುರಿದು ಆ ಅಸಮಾಧನ ಎಂಬ ಉರಿ ಉರಿಯಬಿಡದೆ ಹೊಗೆಯಾಗುವಾಗಲೆ ತುಳಿಯಲು ಪ್ರಯತ್ನಿಸುವೆ ಎಂದು ಅರ್ಥಗರ್ಭಿತವಾಗಿ ಹೇಳಿದ್ದಾರೆ. ಪದ್ಯದ ಎರಡನೆ ಚರಣ ಶ್ರಮಿಕ ವರ್ಗ ತಮಗೆ ಒದಗಿ ಬಂದಿರುವ ಸಂಚನೆಗಳ ಬಗ್ಗೆ ಮಾತುಗಳನ್ನಾಡುತ್ತದೆ.

ಬಡವರ ಗೋಳನುಕೇಳದ ಕಿವುಡನು
ಹೊಟ್ಟೆಯ ಪಾಡಿಗೆ ಕಾವಿಯನುಟ್ಟು
ಬಡವರ ಹಸಿವೆಗೆ ಮೌಢ್ಯವಕೊಟ್ಟು
ಸುಖಸಂಪತ್ತನ್ನು ಕೊಂಡವರು
ಮೃಷ್ಟಾನ್ನವನ್ನೇ ಉಂಡವರು
;

ಎಂದು ‘ಕಲ್ಕಿ’ ಕವಿತೆಯಲ್ಲಿ ಶ್ರೀಮಂತರು ಉದರನಿಮಿತ್ಥ ನನಾವೇಷಧಾರಿಗಳಾಗಿ ಮೋಸದಿಂದ ಬಡವರ ಜೀವದ ಮೇಲೆ ತಮ್ಮ ವಿಲಾಸಿ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಇದಾಗಬಾರದು ಎನ್ನುತ್ತಾರೆ.
‘ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು’ ಎಂಬ ಕವಿತೆಯಲ್ಲಿ ಮತ್ತೆ ಕುವೆಂಪುರವರು ಈ ಕುರಿತೇ ಪ್ರಸ್ತಾಪ ಮಾಡುತ್ತಾ ಪರಿಹಾರ್ಯ ಎಂಬಂತೆ . “ಇಂದ್ರ ಸಿಂಹಾಸನಕ್ಕಿಂದು ಬಂದಿಹುದು ಕೊನೆಗಾಲ” ಎಂದಿದ್ದಾರೆ. ಅಡಿಗರೂ ಕೂಡ ಪ್ರಜಾಪ್ರಭುತ್ವ ಬಂದಿದೆ ಧರ್ಮಶಾಸ್ತ್ರ ಬಲೆಯಲ್ಲಿ ಅಬಲರನ್ನು, ಶ್ರಮಿಕರನ್ನು ಹೆಣೆಯುವುದು ಬೇಡ ಇಲ್ಲಯವರೆಗೆ ಹಳೆಯದನ್ನೇ ಕೇಳಿ ನೊಣೆಯುವಂತಾಗಿತ್ತು ಆದರೆ ಈಗ ಹಾಗಿಲ್ಲ ಮುಂದೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವಿರುವ ವ್ಯವಸ್ಥೆ ಬಂದೇ ಬರುತ್ತದೆ ಎನ್ನುತ್ತಾರೆ.
ಜಂಬಣ್ಣ ಅಮರಚಿಂತ ರವರೂ ಕೂಡ ಪೆಟ್ರೋಮ್ಯಾಕ್ಸ್ ಹೊತ್ತವರು ಎಂಬ ಕವಿತೆಯಲ್ಲಿ ಊರ ಮೆರವಣಿಗೆಯಲ್ಲಿ ಉಳ್ಳವರು ಪೆಟ್ರೊಮ್ಯಾಕ್ಸ್ ದೀಪ ಹೊತ್ತವರ ಬೆಳಕಿನಲ್ಲಿ ಬೆಳಗಿದರು ಆದರೆ ದೀಪದ ಕೆಳಗೆ ಕತ್ತಲು ಎಂಬಂತೆ ಬೆಳಕ ಹೊತ್ತವರು ಬೆಳಕಿಗೆ ಬರುವುದೇ ಇಲ್ಲ ಮುನ್ನೆಲೆಯ ಸಿಹಿತೋರಣದಂಚು ಅವರಿಗೆ ಕನಸು ಮಾತ್ರ ಎನ್ನುತ್ತಾರೆ.
ಬೇಂದ್ರೆಯವರ ‘ಕುರುಡು ಕಾಂಚಾಣ’ ಕವಿತೆಯಲ್ಲಿ “ಕೂಲಿ ಕಂಬಳಿಯವರ ಪಾಲಿನ ಮೈದೊಗಲ ಧೂಳಿಯ ಭಂಢಾರ ಹಣೆಯೊಳಗಿತ್ತೊ” ಎಂದರೆ ಅಡಿಗರು
ಉರಿವೊಲೆಯ ಮೇಲೆ ಹೂಮಾಲೆ ತೂಗುವೆ: ಕಾಲು
ಕುಸಿದವಗೆ ಶೀಖರವನು ಹಾಡುತಿರುವೆ! ಎಂದಿದ್ದಾರೆ . ಇಲ್ಲಿ ಬೇಂದ್ರೆ ಮತ್ತು ಅಡಿಗರೀರ್ವರೂ ದುರ್ಬಲ ವರ್ಗದವರ ಮೇಲೆ ಬಲಾಢ್ಯರ ದಬ್ಬಾಳಿಕೆ ಅನೂಚಾನವಾಗಿ ನಡೆಯುತ್ತಲೇ ಬಂದಿದೆ ಎಂಬುದನ್ನು ಹೇಳುತ್ತಾರೆ. ಧನಿಕರು ಬಡವರ ಕಣ್ಣೀರಿನಿಂದಲೇ ಒರೆಸಿದ ಹಾಸುಗಲ್ಲುಗಳ ಮೇಲೆ ವಿಶ್ರಮಿಸುತ್ತಾ ಮತ್ತೇಳಲು ಶ್ರಮಿಕರ ಬೆನ್ನನ್ನೇ ಸೋಪಾನ ಮಾಡಿಕೊಂಡಿದ್ದಾರೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ.
“ಹಸಿವೆಂಬುದು ಹೆಬ್ಬಾವು” ಅನ್ನುವ ಮಾತಿದೆ ಅಂತೆಯೇ ಇಲ್ಲಿ ಅಡಿಗರು ಇದು ಮೊದಲು ಕೊಡು ಅನ್ನವನು ಎಂದಿರುವಲ್ಲಿ ಒಂದೇ ರೀತಿಯ ಹಸಿವಲ್ಲ ಅನ್ನದ ಹಸಿವು, ಅಕ್ಷರದ ಹಸಿವು, ಅವಕಾದ ಹಸಿವು ಒಂದಿಲ್ಲೊಂದು ರೀತಿಯಲ್ಲಿ ಸಮಾಜವನ್ನು ಬಾಧಿಸುತ್ತಲೇ ಇದೆ. ಬುಟ್ಟಿಗಟ್ಟಲೆ ಹಣ್ಣು ಕೊಟ್ಟು ವ್ಯರ್ಥ ಸಮಾಧಾನ ಮಾಡುವ ಅವಶ್ಯಕತೆ ಇಲ್ಲಿ ಯಾರಿಗೂ ಇಲ್ಲ ಬದಲಾಗಿ ಮಣಗಟ್ಟಲೆ ಕನಸನ್ನು ಹೊತ್ತಿರುವ ಬಡವರ ಬಗ್ಗರ ಸ್ವಚ್ಛಂಧ ಬದುಕಿಗೆ ಕೊಡಲಿ ಕಾವಾಗುವುದು ಎಲ್ಲಿಯ್ಲ ನ್ಯಾಯ ಎಂಬುದು ಅಡಿಗರ ವಾದವಾಗಿದೆ. ಇದೇ ಭಾವವನ್ನು ಬೇಂದ್ರೆಯವರು ‘ಕುರುಡು ಕಾಂಚಾಣ’ ಪದ್ಯದಲ್ಲಿ

ಬಡವರ ಒಡಲಿನ
ಬಡಬಾನಲದಲಿ
ಸುಡು ಸುಡು ಪಂಜು ಕೈಯೊಳಗಿತ್ತೋ
;

ಎಂದಿರುವುದು.
ಕುವೆಂಪುರವರ ‘ಕಲ್ಕಿ’’ ಎಂಬ ಕವಿತೆಯಲ್ಲೂ ಬಂದಿರುವ ಎಲ್ಲರೂ ಬೆಂದರು ಬಡಬಾಗ್ನಿಯಲಿ,ಬಡವರ ಬಗ್ಗರ ಜಠರಾಗ್ನಿಯಲಿ! ಮೊದಲಾದ ಮಾತುಗಳು ಹೊಟ್ಟೆಯಲಿ ಹುಟ್ಟಿರುವ ಈ ಬೆಂಕಿ ಪ್ರಳಯಾಗ್ನಿಗೆ ಸಮ ಮನುಕುಲದ ಚಿತೆಗೆ ಕಟ್ಟಿಗೆಯಾಗಿದೆ ಎಂಬ ಹೋಲಿಕೆಯೂ ಇಲ್ಲಿ ಗೋಚರವಾಗುತ್ತದೆ. ಮೇಲುನೋಟಕ್ಕೆ ಇಲ್ಲಿ ಹಸಿದ ಹೊಟ್ಟೆಗೆ ಅನ್ನ ಎಂದರೂ ಬದುಕಲು ಬೇಕಾದ ಕನಿಷ್ಟ ಅವಶ್ಯಕತೆಗಳೆಲ್ಲವೂ ಇಲ್ಲಿ ವಿಶಾಲಾರ್ಥದಲ್ಲಿ ಅನ್ನವೇ ಆಗಿದೆ.
ನಾನು ಪಶು, ಶುದ್ಧ ಪಶು! ಹೊಟ್ಟೆ ತುಂಬಲಿ;
ಎಂದು ನೇರವಾಗಿ ಮೊದಲು ಅನ್ನ ಸಿಗಲಿ ಎಂದು ನಂತರದಲ್ಲಿ ನಾನೂ ನಿನ್ನ ಕನಸಿನ ಹಾದಿಯಲ್ಲಿ ಹೆಜ್ಜೆ ಹಾಕುವೆ. ಬೆಳವಣಿಗೆ ಎಂಬ ಊರ್ರ್ಧವ ಮುಖದ ತೇರನ್ನೂ ನಾನೂ ಏರ ಬಯಸುವೆ ಎಂದಿದ್ದಾರೆ ಇಲ್ಲಿ “ನಾನು” ಎಂಬುದು ಸಮಷ್ಟಿ ಹಿನ್ನೆಲೆಯಲ್ಲ್ಲಿ ಬಂದರೆ “ನಿನ್ನ” ಎನ್ನುವುದು ಸಮಾಜವನ್ನು ಕುರಿತೇ ಆಗಿದೆ. ಆರ್ಥಿಕ ಅವಶ್ಯಕತೆಗಳು ಮೊದಲು ನೀಗಿದರೆ ಸಾಮಾಜಿಕ ರಾಜಕೀಯ, ಬೌದ್ಧಿಕ, ಸಾಂಸ್ಕೃತಿಕ ಪರಿಪ್ರೇಕ್ಷಗಳು ಮನುಷ್ಯನನ್ನು ಮುನ್ನಡೆಸಬಹುದು ಎಂದು ಸಾಮಯಿಕವಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಮಾನವ ಕುಲದ ಅಸ್ತ್ತಿತ್ವದ ಪ್ರತೀಕವೇ “ಅನ್ನ” ಎನ್ನುತ್ತಾರೆ. ನಮ್ಮದು ಹೇಗಿದ್ದರೂ ಪ್ರಜಾಪ್ರಭುತ್ವ ರಾಷ್ಟ್ರ ಹಾಗಾಗಿ ವ್ಯಕ್ತಿಗತ ಮಾನ ಸಮ್ಮಾನಕ್ಕೂ ಆದ್ಯತೆ ಇರಲಿ ಎಂಬುದು ಕವಿಯ ಪ್ರಧಾನ ಆಶಯವಾಗಿದೆ.


ಲೇಖಕರು:
ಸುಮಾವೀಣಾ,ಕನ್ನಡ ಉಪನ್ಯಾಸಕರು

ದಿನಾಂಕ : 18 ಮಾರ್ಚ್ 2023