ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಗಾನ ಲೋಕದ ದೇವತೆ ಲತಾ ಮಂಗೇಶ್ಕರ್ ಇನ್ನಿಲ್ಲ

ಎಚ್ಚಾರೆಲ್

(೧೯೨೯-೨೦೨೨)

(ಮುಂಬಯಿನ ಬಾಲಿವುಡ್ ಸಂಗೀತ ಲೋಕದ ಪ್ರಖ್ಯಾತ ಗಾಯಕಿ ಶ್ರೀಮತಿ ಲತಾ ಮಂಗೇಶ್ಕರ್ (೯೨) ೬, ರವಿವಾರ ಫೆಬ್ರವರಿ , ೨೦೨೨ ರ ಬೆಳಿಗ್ಯೆ ನಮ್ಮನ್ನಗಲಿ ಹೊರಟುಹೋದರು. ಅವರು ‘ಕೋವಿಡ್ ಮತ್ತು ನ್ಯುಮೋನಿಯಾ’ ಸೋಂಕು ಧೃಢಪಟ್ಟ ಹಿನ್ನೆಲೆಯಲ್ಲಿ ಮುಂಬಯಿನ ‘ಬ್ರೀಚ್ ಕ್ಯಾಂಡಿ ಆಸ್ಪತ್ರೆ’ಯಲ್ಲಿ ಕೆಲವು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು)

ಭಾರತೀಯ ಚಿತ್ರಜಗತ್ತಿನ ಮಹಾನ್ ಜ್ಯೋತಿ, ನಮ್ಮೆಲ್ಲರ ಪ್ರೀತಿಯ ಲತಾ ದೀದಿ ಮುಂಬೈಕರ್, ಇನ್ನಿಲ್ಲ !

ಮೂಲ ಹಕ್ಕುದಾರರಿಗೆ ಸೇರಿದ್ದು

ಭಾರತದ ಫಿಲಂ ಜಗತ್ತಿನಲ್ಲಿ ಅನಭಿಷಕ್ತ ಸಾಮ್ರಾಜ್ಞಿಯಾಗಿ ಮೆರೆದ ಲತಾ ಮಂಗೇಶ್ಕರ್ ರವರು ಒಂದು ವಿಶಾಲ ಆಲದಮರದ ತರಹ ೭ ದಶಕಗಳಿಗೂ ಹೆಚ್ಚುಕಾಲ ಸುದೀರ್ಘಕಾಲದವರೆಗೆ ಪ್ರಮುಖ ಗಾಯಕಿಯಾಗಿ ತಮ್ಮ ವರ್ಚಸ್ಸನ್ನು ಪಸರಿಸಿದ್ದರು. ಕೇವಲ ಅವರ ಗಾಯನದಿಂದಲೇ ಅನೇಕ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಹಣವನ್ನು ಕೊಳ್ಳೆಹೊಡೆಯುತ್ತಿದ್ದ ಕಾರಣಗಳಿಂದಾಗಿ, ಲತಾ ದೀದಿ ಬದಲಿಗೆ ಬೇರೆ ಗಾಯಕಿಯರನ್ನು ಚುನಾಯಿಸುವ ತಪ್ಪನ್ನು ಯಾವ ಚಿತ್ರನಿರ್ಮಾಪಕನೂ ಮಾಡಲು ಭಯಬೀಳುತ್ತಿದ್ದರು. ಆದರೆ ಲತಾ ಮಂಗೇಶ್ಕರ್ ಹೊಸ ಮಹಿಳಾ ಕಲಾವಿದರಿಗೆ ಬಹಳ ಪ್ರೋತ್ಸಾಹ ಕೊಡುತ್ತಿದ್ದರು. ಆಶಾ ಭೋಂಸ್ಲೆ , ಗೀತಾ ದತ್, ಸುಮನ್ ಕಲ್ಯಾಣ್ ಪುರ್, ಹೇಮಲತಾ, ವಾಣಿ ಜಯರಾಮ್, ಮೊದಲಾದ ಅನೇಕ ಮಹಿಳಾ ಕಲಾವಿದರು ಲತಾರವರ ಮಾರ್ಗದರ್ಶನದಲ್ಲಿ ಮುಂದೆಬಂದರು. ಅಶ್ಲೀಲತೆ ಅವರ ಹತ್ತಿರ ಸುಳಿಯಲೂ ಹೆದರುತ್ತಿತ್ತು. ತಮ್ಮ ಘನತೆ, ಉದಾತ್ತ ಗಾಂಭೀರ್ಯ, ಯೋಗ್ಯತೆ, ಪ್ರತಿಷ್ಠೆ, ಭಾರತೀಯತೆಯ ಆಚರಣೆಗಳಿಂದ ತಮ್ಮದೇ ಆದ ವ್ಯಕ್ತಿತ್ವವನ್ನು ಗಳಿಸಿಕೊಂಡಿದ್ದರು. ನಿರ್ಮಾಪಕ, ನಿರ್ದೇಶಕರು ಮತ್ತು ಸಿನಿಮಾರಂಗದ ದೊಡ್ಡ ಅಧಿಕಾರಿಗಳು ಲತಾರವರನ್ನು ಭೇಟಿಮಾಡುವ ಮೊದಲೇ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ಬರುತ್ತಿದ್ದರು, ಎನ್ನುವುದು ಮೀಡಿಯಾ ವರದಿಗಳಿಂದ ತಿಳಿದುಬರುವ ಸಂಗತಿ.

೧೯೪೨ ರಲ್ಲಿ ಪ್ರಾರಂಭವಾದ ಲತಾ ಮಂಗೇಶ್ಕರ್ ದೀದಿಯ ಸಂಗೀತ ಪಯಣ :

1942 ನೆಯ ಇಸವಿಯಲ್ಲಿ ತಮ್ಮ 13 ನೇ ವಯಸ್ಸಿನಲ್ಲಿ ಲತಾ ದೀದಿ ಬಾಲಿವುಡ್‌ಗೆ ಪಾದಾರ್ಪಣೆಮಾಡಿದಾಗಿನಿಂದ ಮರಾಠಿ ಚಿತ್ರಕ್ಕಾಗಿ ಅವರು ಹಾಡಿದ ಹಾಡನ್ನು ಕೈಬಿಡಲಾಯಿತು, ಆದರೆ ಮಂಗೇಶ್ಕರ್ ಅವರು ತಮ್ಮ ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಸದಾ ಶಿಸ್ತಿನ ಕಲಿಕೆ, ರಿಯಾಜ್ ನಿಂದಾಗಿ ತಮ್ಮ ಸ್ಥಾನವನ್ನು ಮೇಲ್ಮಟ್ಟದಲ್ಲಿ ಕಾಯ್ದಿಟ್ಟುಕೊಳ್ಳಲು ಸಾಧ್ಯವಾಯಿತು. ಗಾನ ಕೋಗಿಲೆ, ನೈಟಿಂಗೇಲ್‌ ಎನ್ನುವ ಬಿರುದುಗಳನ್ನು ಪಡೆಯುವುದು ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುವುದು ಅಷ್ಟು ಸುಲಭವೇ ? ಅದಕ್ಕಾಗಿ ತಮ್ಮ ಜೀವನ ಶೈಲಿಯಲ್ಲಿ ಹಲವಾರು ಬದಲಾವಣೆಗಳು ತ್ಯಾಗಗಳನ್ನು ಮಾಡಬೇಕಾಯಿತು. ಏನೇ ಆದರೂ, ಸಂಗೀತ ಅವರ ದೇಹದ ಕಣ-ಕಣಗಳಲ್ಲೂ ವ್ಯಾಪಿಸಿಕೊಂಡಿತ್ತು. ಯಾವುದೇ ಹಾಡಿನ ಹಾಡ್ಬರಹಕ್ಕೆ ಸ್ವರ ಹೊಂದಿಸಿಕೊಳ್ಳುವುದು, ವೈವಿಧ್ಯದ ರೀತಿಯಲ್ಲಿ ಯಾವುದೇ ಅಭಿನೇತ್ರಿಯ ಕಂಠಕ್ಕೆ ಸರಿಯಾಗಿ ಪ್ರಸ್ತುತಪಡಿಸುವುದು, ಅವರಿಗೆ ಸಿದ್ಧಿಸಿದಂತೆ ಕೆಲವೇ ಕಲಾಕಾರರಿಗೆ ಮಾತ್ರ ಸಾಧ್ಯವಾಗುವ ಸಂಗತಿಎನ್ನುವ ಅಭಿಪ್ರಾಯ ತಜ್ಞರಿಂದ ಹೊರಹೊಮ್ಮಿದೆ.

ಹಿಂದಿ ಬಾಲಿವುಡ್ ಚಿತ್ರಜಗತ್ತಿನಲ್ಲಿ ಎಲ್ಲರಿಂದಲೂ ‘ದೀದಿ’ ಎಂದು ಅತ್ಯಂತ ಪ್ರೀತಿ, ಗೌರವದಿಂದ ಕರೆಸಿಕೊಳ್ಳುವ ಲತಾ ಮಂಗೇಶ್ಕರ್, ಒಬ್ಬ ಮಹಾನ್ ಗಾಯಕಿ, ಎನ್ನುವುದರಲ್ಲಿ ಎರಡುಮಾತಿಲ್ಲ. ಇದುವರೆವಿಗೂ ಅವರ ಮಟ್ಟಕ್ಕೆ ಯಾರೂ ತಲುಪಿಲ್ಲ.

ಅತಿ ಹೆಚ್ಚು ಗಾಯನಗಳ ರೆಕಾರ್ಡ್ ಮಾಡಿದ್ದಕ್ಕಾಗಿ ಅವರು ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ನಾಮಾಂಕಿತ’ರಾಗಿದ್ದಾರೆ. ಲತಾದೀದಿ ಯವರು 1948 ರಿಂದ 1987 ರವರೆಗೆ 20 ವಿವಿಧ ಭಾಷೆಗಳಲ್ಲಿ 30,000 ಕ್ಕೂ ಹೆಚ್ಚು ಸೋಲೋ, ಯುಗಳ ಮತ್ತು ಕೋರಸ್ ಬೆಂಬಲಿತ ಹಾಡುಗಳನ್ನು ಹಾಡಿದ್ದರೆಂದು ಅಂದಾಜಿಸಲಾಗಿದೆ. ಈಗ, ಅದು ೫೦,000 ಕ್ಕಿಂತ ಹೆಚ್ಚಿರಬೇಕೆಂದು ಮಿಡಿಯಾದವರ ಅಂಬೋಣ ! (ಇದರಲ್ಲಿ ಸ್ವಲ್ಪ ಭಿನ್ನಾಭಿಪ್ರಾಯಗಳಿವೆ. ಹಾಡಿನ ಸಂಖ್ಯೆಯಾವ ಮಹತ್ವವನ್ನು ಪಡೆಯುವುದಿಲ್ಲ. ಅದೆಷ್ಟೋ ಹಾಡುಗಳನ್ನು ಎಂದು ಹೇಳುವುದು ಸರಿ, ಎನ್ನುವುದು ನನ್ನ ಅನಿಸಿಕೆ.)

‘ಕೀರ್ತಿವಂತೆ ‘, (ಸೆಲೆಬ್ರಿಟಿ) ಅಂದ್ಮ್ಯಾಲ ವಿವಾದಗಳಿರಲ್ಲ ಅಂದ್ರ ಹ್ಯಾಂಗ್ರಿ ? ನೋ ವೇ !

ವಿವಾದಗಳು, ಮತ್ತು ಲತಾಮಂಗೇಶ್ಕರ್ ಜೀವನದ ಕೆಲವು ಮಹತ್ವದ ಪ್ರಸಂಗಗಳು :

ಎಸ್. ಡಿ. ಬರ್ಮನ್ ದಾ ಹಾಗೂ ಲತಾ ಬಾಯಾರ ಒಟ್ಟಿಗೆ :

ಮೊದಲು ೧೯೫೭ ರಲ್ಲಿ, ಲತಾದೀದಿ ಆಗಿನ ಸಮಯದ ಅತ್ಯಂತ ಹೆಸರುಗಳಿಸಿದ ಸಚಿನ್ ದೇವ್ ಬರ್ಮನ್ ಜತೆ ಏನೋ ಕಾರಣಕ್ಕಾಗಿ ಒಂದ್ತರ್ಹ ಇರ್ಸುಮುರ್ಸಿ ನ ಪ್ರಸಂಗ ಎದುರಿಸಬೇಕಾಗಿ ಬಂತು. ಎಸ್.ಡಿ.ಬರ್ಮನ್ ಆ ಕಾರಣಕ್ಕೆ ತಮ್ಮ ಚಿತ್ರಗಳಲ್ಲಿ ಆಕೆಯ ಹೆಸರನ್ನು ಗಣನೆಗೆ ತೊಗೊಳ್ಲಿಲ್ಲ. ‘ನಂಗೆ ಲತಾ, ಆಮೇಲೆ, ಒಂದ್ ಹಾರ್ಮೋನಿಯಂ ಕೊಟ್ರೆ ಸಾಕು ; ಒಳ್ಳೆ ಭರ್ಜರಿ ಸಂಗೀತ ಸೃಸ್ಟಿ ಮಾಡಿ ತೋರಿಸ್ತೀನಿ’ ಅಂತ ಹೇಳ್ತಿದ್ಅವರ್ಗೆ ಏನಾಯ್ತೋ ಗೊತ್ತಾಗಲಿಲ್ಲ. ದೇವ್ ಆನಂದ್ ರವರ ಚಿತ್ರ ಗೈಡ್ ಗೆ ಮ್ಯೂಸಿಕ್ ಕೊಟ್ಮೇಲೆ, ಯಾಕೋ ಲತಾದೀದಿಯವರ ಕೈ ಬಿಟ್ಟೇ ಬಿಟ್ರು. ಸರಿಯಾಗಿ ಕಾರಣನೂ ಹೇಳ್ಲಿಲ್ಲ ಆನ್ಸತ್ತೆ ! ಒಂದ್ ಇಂಟರ್ವ್ಯೂ ನಲ್ಲಿ ಸಚಿನ್ದಾ, ಲತಾರವರ ಬಗ್ಗೆ ಒಳ್ಳೆಯ ಅಭಿಪ್ರಾಯ ಕೊಟ್ಟು ಮಾತಾಡದೇ ಇದ್ದದ್ದು, ಲತಾ ದೀದಿಯವರಿಗೆ ನೋವು ತಂದಿತ್ತು. ಮೂರುವರ್ಷಗಳ ನಂತರ, ಪರಿಸ್ಥಿತಿಯ ನೈಜತೆ ಅರಿವಾದಂತೆ ಇಬ್ಬರೂ ಸರಿಹೋದರು. ಬೆಂಗಾಳಿಯಿಂದ ಹಿಂದಿ ಚಿತ್ರರಂಗಕ್ಕೆ ಧುಮುಕಿದ ಬರ್ಮನ್ದಾ, ಬಾಂಬಾಯಿನಲ್ಲಿ ಭದ್ರವಾಗಿ ಬೇರೂರಬೇಕಾದರೆ ಲತಾಮಂಗೇಶ್ಕರ್ ರಂತಹ ಅಪರೂಪದ ಗಾಯಕಿಯಜತೆ ಹೊಂದಾಣಿಕೆ ಮಾಡಿಕೊಳ್ಳುವುದು ಎಷ್ಟು ಮುಖ್ಯವೆನ್ನುವುದು ಅವರಿಗೆ ನಿಧಾನವಾಗಿ ಅರಿವಾಗುತ್ತಾ ಹೋಯಿತು.

ಲತಾ , ಓ. ಪಿ. ನಯ್ಯರ್

ಮ್ಯೂಸಿಕ್ ಡೈರೆಕ್ಟರ್ ಶ್ರೀ. ಓ. ಪಿ. ನಯ್ಯರ್ ರವರ ಜತೆ :

ಓಂಕಾರ್ ನಾಥ್ ಠಾಕೂರ್, ಲತಾರವರ ಹಾಡುಗಾರಿಕೆಯನ್ನು ಅವರು ಬಹಳವಾಗಿ ಮೆಚ್ಚಿ ಕೊಂಡಾಡುತ್ತಿದ್ದರು. ಇಬ್ಬರ ನಡುವೆ ಯಾವ ಭಿನ್ನಾಭಿಪ್ರಾಯಗಳೂ ಇರಲಿಲ್ಲವಂತೆ. ಒ. ಪಿ. ನಯ್ಯರ್ ತಮ್ಮ ಸಂಗೀತ ರಚನೆಗೆ ಲತಾರವರ ಕಂಠ ಸರಿಹೋಗುವುದಿಲ್ಲವೆಂದು, ಮಿಡಿಯಾಕ್ಕೆ ಕೊಟ್ಟ ಹೇಳಿಕೆಯಲ್ಲಿ ತಿಳಿಸಿದ್ದರು, ಅಷ್ಟೇ ! ಲತಾಮಂಗೇಶ್ಕರ್ ಎಂದೂ ಅವರ ನಿರ್ದೇಶನದಲ್ಲಿ ಹಾಡಲಿಲ್ಲ.

ಲತಾ ದೀದಿಯವರ ಬಹಳ ಪ್ರೀತಿಯ ಸಹೇಲಿ, ನೂರ್ ಜೆಹಾನ್ ಬೇಗಂ ಭೇಟಿ :

ಒಮ್ಮೆ ಅಮೃತ್ಸರ್ ನಗರಕ್ಕೆ ಯಾವುದೊ ಸಿನಿಮಾ ಹಾಡಿನ ರೆಕಾರ್ಡಿಂಗ್ ವಿಷಯಕ್ಕೆ ಲತಾ ಮಂಗೇಶ್ಕರ್ ಹೋಗಿದ್ದಾಗ, ಜತೆಯಲ್ಲಿ ಆಗಿನ ಸಮಯದ ಹೆಸರಾಂತ ಸಂಗೀತ ನಿರ್ದೇಶಕ, ಚಿತಲ್ಕರ್ ರಾಮಚಂದ್ರ ಸಹಿತ ಇದ್ದರು. ಅಲ್ಲಿ ತಮ್ಮ ಕೆಲಸಮುಗಿದ ಮೇಲೆ ೩೫ ಮೈಲಿ ದೂರದಲ್ಲಿದ್ದ ಪಾಕಿಸ್ತಾನದಲ್ಲಿ ನೆಲೆಸಿದ್ದ ನೂರ್ ಜೆಹಾನ್ ಬೇಗಂ ರವರನ್ನು ಭೇಟಿಮಾಡುವ ಆಶೆಯನ್ನು ಲತಾಮಂಗೇಶ್ಕರ್ ವ್ಯಕ್ತಪಡಿಸಿದರು. ಪಾಸ್ ಪೋರ್ಟ್ ಇಲ್ಲದೆ ಭೇಟಿಮಾಡುವುದಾದರೂ ಹೇಗೆ ? ಕೊನೆಗೆ ಒಂದು ಉಪಾಯ ನೆನಪಿಗೆ ಬಂತು. ಫೋನ್ ಮಾಡಿ ಮಾತಾಡಿ ಎಲ್ಲಿ ಭೇಟಿಮಾಡಬೇಕು, ಅನ್ನೋವಿಚಾರ ಗೊತ್ತುಮಾಡಿಕೊಂಡ್ ಮುಗಿಸೋ ಹೊತ್ತಿಗೆ, ಒಂದು ಗಂಟೆಯ ಮೇಲಾಗಿತ್ತು. ಎರಡೂ ದೇಶಗಳ ಮಧ್ಯೆ, ಭಾಗ್ವ ಬಾರ್ಡರ್ ನಲ್ಲಿ ನಿಂತ್ಕೊಂಡೇ ಮಾತಾಡ್ಸೋದು ಅಂತ ತೀರ್ಮಾನ ಆಗಿ, ಇಬ್ಬರೂ ಬಂದು ಭೇಟಿಯಾದಾಗ, ಸೋದರಿಯರ ತರಹ ಪ್ರೀತಿಯಿಂದ ಅಪ್ಪಿಕೊಂಡು ಮುದ್ದಿಸಿ ಅತ್ತರು. ಅದೆಷ್ಟು ಹೊತ್ತು ಮಾತನಾಡಿದರೋ ತಿಳಿಯದು. ಅಲ್ಲಿ ನೆರೆದಿದ್ದ ಜನಸ್ತೋಮ ಇವರಿಬ್ಬರನ್ನು ನೋಡಿ ಸಂತೋಷಪಟ್ಟರಂತೆ. ಇಬ್ಬರ ಮನೆಯ ಸುಖದುಃಖಗಳ ವಿಚಾರ ವಿನಿಮಯವಲ್ಲದೆ ಇಬ್ಬರೂ ತಮಗಿಷ್ಟವಾದ ಹಾಡುಗಳನ್ನು ಫೋನ್ ನಲ್ಲಿ ಹೇಳಿ-ಕೇಳಿ ಸಂಭ್ರಮಿಸಿದರು.

ಲತಾ ಮಂಗೇಶ್ಕರ್ ಹಾಗೂ ದಿಲೀಪ್ ಕುಮಾರ ಒಟ್ಟಿಗೆ ಹಾಡಿದ್ದು :

ಲತಾ ಮಂಗೇಶ್ಕರ್ ಮತ್ತು ದಿಲೀಪ್ ಕುಮಾರ್ ಜುಗಳಗೀತೆ, ಅರೆ-ಶಾಸ್ತ್ರೀಯ ಸಂಗೀತವನ್ನು ಆಧರಿಸಿದ ಗೀತೆ ಹಾಡಿದ್ದಾರೆ. ೧೯೫೭ ರಲ್ಲಿ ಹೃಷಿಕೇಶ್ ಮುಖರ್ಜಿಯವರ ಚೊಚ್ಚಲ ಚಿತ್ರ ‘ಮುಸಾಫಿರ್’ ನಲ್ಲಿ ‘लागी नहीं छूटे’ ಮೂರು ಪರಿವಾರಗಳು ಒಂದೇ ಸೂರಿನ ಅಡಿಯಲ್ಲಿ ವಾಸಿಸುವಾಗ ಪರಿಸ್ಥಿತಿಯನ್ನು ನಿರೂಪಿಸುವ ಚಿತ್ರ. ದಿಲೀಪ್ ಕುಮಾರ್, ಕಿಶೋರ್ ಕುಮಾರ್, ನಿರೂಪ ರಾಯ್, ಸುಚಿತ್ರಾ ಸೆನ್, ಕೆಸ್ಟೋ ಮುಖರ್ಜಿ ಅಭಿನಯಿಸಿರುವ ಚಿತ್ರ. ದಿಲೀಪ್ ಕುಮಾರ್ ಎಷ್ಟು ಸೀರಿಯಸ್ ಆಗಿದ್ರೂ ಅಂದ್ರೆ, ಲತಾದೀದಿ ಜೋಡಿ ಈ ಹಾಡು ಹಾಡಲು ಬಹಳ ದಿನ ‘ರಿಯಾಜ್’ ಮಾಡಿದರಂತೆ. ಈ ಹಾಡಿನ ನಂತರ ಪುನಃ ಎಲ್ಲೂ ಹಾಡಿದ ದಾಖಲಾತಿ ಇಲ್ಲ .

ಲತಾ ಮಂಗೇಶ್ಕರ್ ರವರ ಯಶೋಗಾಥೆ ಶುರುವಾಗುವುದು ಇಲ್ಲಿಂದ :

ಇಂದಿನ ಮಧ್ಯಪ್ರದೇಶದ ಇಂದೋರಿನಲ್ಲಿ ಈ ‘ಪೋರಿ’ ಮರಾಠಿ ಪರಿವಾರದಲ್ಲಿ ಸೆಪ್ಟೆಂಬರ್ 28, 1929 ರಂದು ಉದಯಿಸಿದರು. ಸುಪ್ರಸಿದ್ಧ ಶಾಸ್ತ್ರೀಯ ಸಂಗೀತಕಾರ ದೀನಾನಾಥ್ ಮಂಗೇಶ್ಕರ್ ಒಬ್ಬ ಹೆಸರುವಾಸಿಯಾಗಿದ್ದ ಜ್ಯೋತಿಷಿಯೂ ಹೌದು. ದೀನನಾಥರ ಎರಡನೇ ಪತ್ನಿ ಶೇವಂತಿ ಬಾಯಿ. ದೀನನಾಥ್, ತಮ್ಮ ಕುಟುಂಬವನ್ನು ಗೋವಾದ ತಮ್ಮ ಸ್ಥಳೀಯ ಪಟ್ಟಣವಾದ ಮಂಗೇಶಿಯೊಂದಿಗೆ ಗುರುತಿಸಲು ಬಯಸಿದ ಕಾರಣದಿಂದ ಕುಟುಂಬದ ಉಪನಾಮವನ್ನು ಹಾರ್ಡೀಕರ್‌ನಿಂದ ಮಂಗೇಶ್ಕರ್ ಎಂದು ಬದಲಾಯಿಸಿದರು. ಲತಾ ಜನಿಸಿದಾಗ, ಆಕೆಗೆ ‘ಹೇಮಾ’ ಎನ್ನುವ ತೊಟ್ಟಿಲ ಹೆಸರಿಟ್ಟು. ದೀನನಾಥ್ ತಮ್ಮ ‘ಯಶವಂತ್ ಡ್ರಾಮಾ ಕಂಪೆನಿ’ಯಲ್ಲಿ ಆಯೋಜಿಸಿದ ನಾಟಕ, ಭಾವಬಂಧನ್‌ನಲ್ಲಿ ಲತಿಕಾ ಎಂಬ ಸ್ತ್ರೀ ಪಾತ್ರವನ್ನು ಅಭಿನಯಿಸಲು ಮಗಳಿಗೆ ತರಪೇತಿ ಕೊಟ್ಟಿದ್ದರು. ಆಕೆಯ ಪಾತ್ರ ಜನಮನ್ನಣೆ ಗಳಿಸಿತು. ಆಗ ಸತಿ-ಪತಿಯರು ಮಗಳಿಗೆ ‘ಲತಾ’ (ಲತಾ ಮಂಗೇಶ್ಕರ್) ಎಂದು ಮರುನಾಮಕರಣ ಮಾಡಿದರು,

ದೀನನಾಥ್ ತಮ್ಮ ಮನೆಯಲ್ಲಿಯೇ ನಡೆಸುತ್ತಿದ್ದ ಸಂಗೀತ ಶಾಲೆಯಲ್ಲಿ ಲತಾಗೆ ಚಿಕ್ಕ ವಯಸ್ಸಿನಲ್ಲೇ ಸಂಗೀತದ ಪರಿಚಯಮಾಡಿಸಿದರು. ಲತಾ ಮಂಗೇಶ್ಕರ್ ೧೩ ವರ್ಷದವರಾಗಿದ್ದಾಗ ಅವರ ತಂದೆ ತೀರಿಕೊಂಡರು. ಕುಟುಂಬದಲ್ಲಿ ತಾಯಿ, ೩ ಜನ ತಂಗಿಯರು, ಮೀನಾ, ಆಶಾ,ಉಷಾ, ಮತ್ತು ಒಬ್ಬ ತಮ್ಮ ಹೃದಯನಾಥ್, ರನ್ನು ಸಾಕುವ ಜವಾಬ್ದಾರಿ ಲತಾರವರ ಮೇಲೆ ಅವಲಂಭಿತವಾಗಿತ್ತು. ಆ ಸಮಯದಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಳ್ಳಲು ನೆರವಾದ ಕುಟುಂಬದ ಸ್ನೇಹಿತರು, ‘ಮಾಸ್ಟರ್ ವಿನಾಯಕ್ ಕರ್ನಾಟಕಿ’ ಎಂಬ ಸಜ್ಜನರು. ಲತಾ ಅವರು 1942 ರಿಂದ 1948 ರವರೆಗೆ 8 ಚಲನಚಿತ್ರಗಳಲ್ಲಿ ನಟಿಸಿದರು. ಅವರು ‘ಕಿತಿ ಹಸಾಲ್’ (1942) ಎಂಬ ಮರಾಠಿ ಚಲನಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದರು. ದುರದೃಷ್ಟವಶಾತ್, ಹಾಡನ್ನು ಸಂಪಾದಿಸಲಾಗಲಿಲ್ಲ ಮತ್ತು ಅದು ಪ್ರಕಾಶಕ್ಕೆ ಬರಲಿಲ್ಲ. ಆಕೆಯ ಮೊದಲ ಹಿಂದಿ ಹಿನ್ನೆಲೆಯು, ‘ಆಪ್ ಕೆ ಸೇವಾ ಮೆ’ (1947) ಚಿತ್ರಕ್ಕೆ ಆಗಿತ್ತು. ಆ ಕಾಲಘಟ್ಟದಲ್ಲಿ ನೂರ್ ಜೆಹಾನ್ ಬೇಗಂ, ಶಂಶಾದ್ ಬೇಗಂ ಮತ್ತು ಜೊಹ್ರಾಬಾಯಿ ಅಂಬಲೇವಾಲಿ, ಮುಂತಾದವರ ಹಾಡುಗಳು ಹಿಂದಿ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದವು. ಅವರಂತಹ ಭಾರವಾದ ಮತ್ತು ಹಸ್ಕಿ ಧ್ವನಿಯನ್ನು ಹೊಂದಿದ್ದ ಇನ್ನೂ ಅನೇಕ ಮಹಿಳಾ ಗಾಯಕರು ಚಿತ್ರರಂಗವನ್ನು ಆಕ್ರಮಿಸಿದ್ದರು.

ಲತಾ ಅವರ ೯೧ ನೇ ಇಸವಿಯಲ್ಲಿ ಟ್ವೀಟ್ ಮಾಡಿದ ಫೋಟೋ

ಶೋಲಾಪುರದ ದಿನಗಳು :

1938 ರಲ್ಲಿ ‘ಶೋಲಾಪುರದ ನೂತನ್ ಥಿಯೇಟರ್‌’ನಲ್ಲಿ ಆಕೆಯ ಮೊದಲನೇ ಸಾರ್ವಜನಿಕ ಪ್ರದರ್ಶನವು ರಾಗ್ ಖಂಬಾವತಿ ಮತ್ತು ಮತ್ತೊಂದು ಹಾಡಿನಿಂದ ಆರಂಭ. ಲತಾ ಅವರು 5 ನೇ ವಯಸ್ಸಿನಲ್ಲಿ ತಮ್ಮ ತಂದೆಯ ಸಂಗೀತ ನಾಟಕಗಳಾದ ಮರಾಠಿಯಲ್ಲಿ ಸಂಗೀತ ನಾಟಕದಲ್ಲಿ ನಟಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅವರು ಶಾಲೆಗೆ ಹೋಗಿದ್ದು ಒಂದೇ ದಿನ. ತನ್ನ ತಂಗಿ ಆಶಾ ಹೋಗುತ್ತಿದ್ದ ಶಾಲೆಗೆ ಸೇರಿದ ಮೊದಲನೇ ದಿನವೇ, ಶಾಲೆಯಲ್ಲಿ ‘ಟೀಚರ್ ಏನೋ ಬೈದರು’ ಎನ್ನುವ ಕಾರಣಕ್ಕಾಗಿ ಸಿಟ್ಟಿಗೆದ್ದು ಶಾಲೆಗೆ ಹೋಗುವುದನ್ನು ನಿಲ್ಲಿಸಿದರಂತೆ. ಲತಾದೀದಿಗೆ 13 ವರ್ಷ ವಯಸ್ಸಾಗಿದ್ದಾಗ, ಆಕೆಯ ತಂದೆ ದೀನಾನಾಥರು 1942 ರಲ್ಲಿ ಹೃದ್ರೋಗದಿಂದ ನಿಧನರಾದರು, ತಂದೆಯ ಮರಣದ ನಂತರ, ಮಂಗೇಶ್ಕರ್ ಕುಟುಂಬದ ಆಪ್ತರಲ್ಲಿ ಒಬ್ಬರಾದ ಮಾಸ್ಟರ್ ವಿನಾಯಕ್ (ವಿನಾಯಕ್ ದಾಮೋದರ್ ಕರ್ನಾಟಕಿ) ಅವರ ಕುಟುಂಬವನ್ನು ಆವಶ್ಯಕತೆಗಳನ್ನು ನೋಡಿಕೊಳ್ಳುತ್ತಿದ್ದರು. ಬಾಲಕಿ ಲತಾಳ, ವೃತ್ತಿಜೀವನವನ್ನು ಪ್ರಾರಂಭಿಸಲು ಸಹಾಯ ಮಾಡಿದರು.

ಆಲ್ ಇಂಡಿಯಾ ರೇಡಿಯೋದಲ್ಲಿ ಹಾಡಿದ್ದು :

ಸಂಗೀತ ಸಾಮ್ರಾಜ್ಞಿ ಲತಾ ಮಂಗೇಶ್ಕರ್ ಅವರು, ಡಿಸೆಂಬರ್ 16, 1941 ರಂದು ಮೊಟ್ಟಮೊದಲು ‘ಆಲ್ ಇಂಡಿಯಾ ರೇಡಿಯೊ’ದಲ್ಲಿ ಎರಡು ನಾಟ್ಯಗೀತೆಗಳನ್ನು ಹಾಡಿದ್ದರು. ಲತಾ ಮಂಗೇಶ್ಕರ್ ಅವರು ತಮ್ಮ ತಂದೆ, ಖ್ಯಾತ ಶಾಸ್ತ್ರೀಯ ಗಾಯಕ ಮತ್ತು ರಂಗಭೂಮಿ ನಟ ದೀನನಾಥ್ ಮಂಗೇಶ್ಕರ್ ತಮ್ಮ ಮಗಳ ಅಭಿನಯದ ಬಗ್ಗೆ ಹೇಳಿದ್ದನ್ನು ಒಂದು ‘ರಿಯಾಲಿಟಿ ಶೋ’ನಲ್ಲಿ ನೆನಪಿಸಿಕೊಂಡರು. “ಆಜ್ ಸೆ 79 ಸಾಲ್ ಪೆಹ್ಲೆ 16 ಡಿಸೆಂಬರ್ 1941 ಕೋ, ಮೈನೆ ರೇಡಿಯೋ ಪರ್ ಪೆಹ್ಲಿ ಬಾರ್ ಗಾಯಾ. ಮೈನೆ 2 ನಾಟ್ಯಗೀತ್ ಗಾಯೆ ಥೆ. ಜಬ್ ಮೇರೆ ಪಿತಾಜಿ ನೆ ವೋ ಸುನೆ, ಬಹುತ್ ಖುಷ್ ಹುಯೆ. ಉನ್ಹೊನೆ ಮೇರಿ ಮಾ ಸೆ ಕಹಾ,’ಮೈನೆ ಲತಾ ಕಿ ಗಾನ ರೇಡಿಯೋ ಮೇ ಸುನ. ಅಬ್ ಮುಝೆ ಕಿಸಿ ಬಾತ್ ಕಿ ಚಿಂತಾ ನಹಿ“

ಬಾಬಾ ನೇ ಮೊದಲ ಗುರು :

ಬಾಬಾ ರವರ ಹತ್ತಿರ ಪಾಠಹೇಳಿಸಿಕೊಳ್ಳಲು ಬರುತ್ತಿದ್ದ ಒಬ್ಬ ಹುಡುಗ (ಹೆಸರು, ಚಂದ್ರಕಾಂತ್ ಗೋಖಲೆ, ಮುಂದೆ ಬೆಳೆದು ಮರಾಠಿ ಸ್ಟೇಜ್ ನಟನಾದನೆಂದು ನಂತರ ಗೊತ್ತಾಯಿತು) ರಿಯಾಜ್ ಮಾಡುತ್ತಿದ್ದ. ಆಗ ಬಾಬಾ ಕೆಲನಿಮಿಷ ಹೊರಗೆ ಹೋಗಿದ್ದರು. ಅವನು ‘ಬಂದಿಶ್’ ಹಾಡುತ್ತಿರುವಾಗ, ಹೊರಗಡೆ ‘ಕುಂಟಿಬಿಲ್ಲಿ’ ಆಡುತ್ತಿದ್ದ ನನಗೆ ಕೇಳಿಸಿ, ಅವನು ಹಾಡುತ್ತಿರುವುದು ಸರಿಯಿಲ್ಲವೆಂದು ಅನ್ನಿಸಿತು. ಮನೆಯೊಳಗೆ ಹೋಗಿ, ನಾನು ನಮ್ಮ ತಂದೆಯವರು ಹೇಳಿಕೊಟ್ಟಂತೆಯೇ ಹಾಡಿ, ಸರಿಪಡಿಸಿದೆ. ತಲಿ ಎತ್ ನೋಡ್ದಾಗ, ಬಾಬಾ ನನ್ಹಿಂದೇ ನಿಂತ್ಕೊಂಡು ಕೇಳಿಸ್ಕೊಳ್ತಿದ್ರು. ಆಶ್ಚರ್ಯದಿಂದ ಪುಳಕಿತರಾದ ಅವರು, ‘ಬಾಳಾ ಮತ್ಹಾಡವ್ವ ’ ಎಂದಾಗ ತಕ್ಷಣವೇ ಹಾಡಿ, ನಾನು ಹೊರಗೋಡಿದೆ. ಬಾಬಾ ಬೇರೆಯವರಿಗೆ ಗಾಯನಪಾಠ ಹೇಳಿಕೊಡುವಾಗ, ಅಲಿಸಿ ಕಲಿಯುತ್ತಿದ್ದೆ. ಆದರೆ, ಅವರ ಮುಂದೆ ಕುಳಿತು ಹಾಡುವಷ್ಟು ಧರ್ಯವಿರಲಿಲ್ಲ.

ಬಾಬಾ ನನ್ನನ್ನು ಕರೆದು, ಮಾರನೆಯ ದಿನವೇ ಬೆಳಿಗ್ಯೆ ಬೇಗ ಎಬ್ಬಿಸಿ, ‘ಹೋಗು, ಮುಖತೊಳೆದುಕೊಂಡು ನಾನಾ ರೂಮಿಗೆ ಬಾ’ ಎಂದು ಹೇಳಿದರು. ನನಗೋ ಮೈ ನಡುಕ. ಅವರು ಶಿಸ್ತಿಗೆ ಮತ್ತು ಶ್ರಮಕ್ಕೆ ಬಹಳ ಆದ್ಯತೆ, ಕೊಡುತ್ತಿದ್ದರು.ಬಾಬಾ ಬಹಳ ಸಂಪ್ರದಾಯಸ್ತರು; ಮನೆಯಲ್ಲಿ ಚಿಕ್ಕವರಿಂದ ಹಿರಿಯರ ತನಕ, ಹಣೆಯಲ್ಲಿ ಕುಂಕುಮ ಇಟ್ಟಿರಲೇ ಬೇಕು. ಕೈನಲ್ಲಿ ಬಳೆಗಳು ಇರಲೇಬೇಕು. ಮುಖಕ್ಕೆ ಟಾಲ್ಕಮ್ ಪವ್ಡರ್ ಬಳಸುವಂತಿಲ್ಲ.ರಾಷ್ಟ್ರದ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಹಲವಾರು ಸ್ನೇಹಿತರು ಮನೆಗೆ ಬಂದು ಬಗ್ಗೆ ಗಂಟೆಗಟ್ಟಲೆ ಸಾಮ್ರಾಜ್ಯಶಾಹಿ ವಿರುದ್ಧ ಚರ್ಚಿಸುತ್ತಿದ್ದರು. ವೀರಸಾವರ್ಕರ್ ಅವರ ಮಿತ್ರರಲ್ಲೊಬ್ಬರು. ಅವರಿಗಾಗಿ ಒಂದು ಗೀತೆ ಮತ್ತು ಒಂದು ನಾಟಕ ಬರೆದುಕೊಟ್ಟಿದ್ದರು. ಬಾಬಾರ ಅವರ ಮುಂದೆ ಕುಳಿತೆ. ‘ತಾನ್ಪುರ’ ಪೆಟ್ಟಿಗೆಯಿಂದ ತೆಗೆಯಲು ಹೇಳಿದರು ಅದನ್ನು ಹಿಡಿದು ನುಡಿಸುವುದನ್ನು ತೋರಿಸಿಕೊಟ್ಟರು. ನಾನು ಅಂದು ಹಾಡಿದ ರಾಗದ ಹಾಡನ್ನೇ ಮತ್ತೆ ಹಾಡಲು ಸೂಚಿಸಿದರು. ಪಾಠದ ಹುಡುಗರ ಮುಂದೆ ತನಗಾಗಿಯೇ ಹೇಳಿಕೊಡುತ್ತಿದ್ದರು. ಸೋದರಿ ಮೀನ ಸಹಿತ ಹೇಳಿಸಿಕೊಂಡರು. ಇದನ್ನು ನನ್ನ ವಿಧ್ಯುಕ್ತವಾದ ಕಲಿಕೆಯ ಆರಂಭವೆಂದು ಹೇಳಬಹುದು..

ಬಾಬಾ ತೀರಿಕೊಂಡಾಗ, ನನ್ನ ಸೋದರಿಯರು, ಮೀನಾ, ಉಷಾ, ತುಂಬಾ ಚಿಕ್ಕವರು ; ತಮ್ಮ ಹೃದಯನಾಥ್ ೪ ವರ್ಷದವನು. ಬಾಬಾ ಸಾಯುವ ಮೊದಲೇ ಅಮ್ಮನ ಮುಂದೆ ನನ್ನ ಬಗ್ಗೆ ಹೇಳುತ್ತಿದ್ದದ್ದು ಇನ್ನೂ ನೆನಪಿದೆ. “ಲತಾ ಮುಂದೆ ದೊಡ್ಡವಳಾದ ಮೇಲೆ, ಭಾರಿ ದೊಡ್ಡ ಗಾಯಕಿಯಾಗುತ್ತಾಳೆ. ಅವಳ ಮಟ್ಟಕ್ಕೆ ಬೇರೆಯಾರೂ ಏರಲಾರರು. ಅದನ್ನು ನೋಡಿ ಸಂತೋಷಪಡಲು ತಾವು ಇರುವುದಿಲ್ಲ. ಮನೆಯ ಜವಾಬ್ದಾರಿಯನ್ನೆಲ್ಲಾ ಅವಳೇ ನಿಭಾಯಿಸುತ್ತಾಳೆ”

Lata-Childhood Photos - Photographs - Lata Online

ಬಾಬಾ ಸ್ಟೇಜ್ ಮೇಲೆ ಹಾಡುವಾಗ ನಾನೂ ಅವರ ಒಟ್ಟಿಗೆ ಹಾಡುತ್ತಿದ್ದೆ. ಅವರ ನಿಧನದ ಬಳಿಕ ಸಂಗೀತವನ್ನು ಬೇರೆಯವರಿಂದ ಕಲಿತೆ. ಆದರೆ ಶಾಸ್ತ್ರೀಯ ಸಂಗೀತದ ಮೇಲೆ ಬಾಬಾರವರಿಗಿದ್ದ ವಿಸ್ತೃತ ಜ್ಞಾನ, ಮತ್ತು ಅದನ್ನು ಕಲಿಸಲು ಬಳಸುತ್ತಿದ್ದ ತಂತ್ರ, ಅನ್ಯ ಸಂಗೀತಗಾರರಿಗೆ ಹೋಲಿಸಿದರೆ, ಅನನ್ಯವಾಗಿತ್ತು. “ಬಹುಶಃ ಇನ್ನೂ ಹೆಚ್ಚು ದಿನ ಅವರು ಜೀವಿಸಿದ್ದರೆ, ನನ್ನನ್ನು ಶಾಸ್ತ್ರೀಯ ಸಂಗೀತಗಾರಳಲ್ಲದೆ ಪಾರ್ಶ್ವ ಗಾಯಕಿಯಾಗಲು ಬಿಡುತ್ತಿದ್ದರೋ ಇಲ್ಲವೋ ತಿಳಿಯದು”.

ಒಂದು ದಿನ, ಬಾಬಾ ಲತಾಳನ್ನು ಬಳಿಗೆ ಕರೆದು ಇಷ್ಟು ಚಿಕ್ಕವಯಸ್ಸಿನಲ್ಲಿ ಸಂಗೀತದ ಮೇಲೆ ಗಳಿಸಿರುವ ಸಿದ್ಧಿಯಿಂದ ಪ್ರಭಾವಿತರಾಗಿರುವುದಾಗಿ ಮಗಳನ್ನು ಶ್ಲಾಘಿಸಿದರು. ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದ ದೀನನಾಥ್ ಮರಣಕ್ಕೆ ಮೊದಲು ಲತಾಳನ್ನು ತಮ್ಮ ಹತ್ತಿರ ಕೂಡಿಸಿಕೊಂಡು “ನೀನೇ ನಮ್ಮ ಪರಿವಾರದ ಹಿರಿಯ ಮಗಳು ; ನನ್ನ ತರುವಾಯ ನಿಮ್ಮ ತಾಯಿ ಮತ್ತು ತಂಗಿಯರು, ಹಾಗೂ ತಮ್ಮನನ್ನು ನೋಡಿಕೊಳ್ಳುವ ಗುರುತರ ಜವಾಬ್ದಾರಿ ನಿನ್ನ ಮೇಲಿದೆ. ಹೆದರಬೇಡ. ಮುಂದೆ ನಿನ್ನ ಸಂಗೀತ ಸೌರಭ ಭಾರತವಲ್ಲದೆ ವಿದೇಶಗಳಲ್ಲೂ ಹರಡುತ್ತದೆ, ಎಂದು ಆಶೀರ್ವದಿಸಿದರು. “ಹಣಕ್ಕೆ ಎಂದೂ ನೀನು ಯಾರನ್ನೂ ಅವಲಂಭಿಸುವುದಿಲ್ಲ. ನೀನೇ ಎಲ್ಲರಿಗೂ ಸಹಾಯಮಾಡುವ ಅನುಕೂಲಹೊಂದುವೆ, ಗ್ರಹಗತಿಗಳನ್ನು ನಿನ್ನ ಜಾತಕವನ್ನು ನೋಡಿ ಗಮನಿಸಿದ್ದೇನೆ ; ನಿನ್ನ ವಿವಾಹದ ಯೋಗವಿಲ್ಲದಬಗ್ಗೆ ವ್ಯಾಕುಲ ಚಿತ್ತನಾಗಿದ್ದೇನೆ. ಎಲ್ಲವೂ ದೇವರ ಅನುಗ್ರಹ” ವೆಂದು ಹೇಳಿ ಮಗಳನ್ನು ಆಶೀರ್ವದಿಸಿದ್ದರು.

ಕೆ. ಎಲ್. ಸೈಗಲ್ ಲತಾ ಬಾಯಿ, ಹಾಗು ಅವರ ಪರಿವಾರದ ಆರಾಧ್ಯ ದೈವ :

ಬಾಬಾ ನಂತರ ನನಗೆ ‘ಕುಂದನ್ ಲಾಲ್ ಸೈಗಲ್’ ಗುರುಗಳೆಂದು ಗುರುತಿಸಿದ್ದೆ. ಅವರು ನಟಿಸಿದ ಹಾಡಿದ ಹಲವಾರು ಚಿತ್ರಗಳನ್ನು ನೋಡಿದ್ದೆ. ಅವರ ಎಲ್ಲಾ ಹಾಡುಗಳೂ ನನಗೆ ಬರುತ್ತಿದ್ದವು. ಬಾಬಾಗೆ ಸೈಗಲ್ ಅಂಕಲ್ ಅಂದ್ರೆ ಪ್ರೀತಿ, ಹಾಗೂ ಗೌರವ. ಕೆ ಎಲ್. ಸೈಗಲ್ ಚಿತ್ರಗಳನ್ನು ನೋಡಲು ನಮ್ಮನ್ನೆಲ್ಲಾ ಕರೆದುಕೊಂಡು ಹೋಗ್ತಿದ್ರು. ಸಾಂಗ್ಲಿಯಲ್ಲಿ ಅವರ ಚಿತ್ರ ನೋಡಿಬಲ್ಲೆವು. ಆದರೆ ನಾನು ಅವರನ್ನು ಭೇಟಿಯಾಗಲಿಲ್ಲ. “೧೯೪೫ ರಲ್ಲಿ ನಾನು ಮತ್ತು ನಮ್ಮ ಪರಿವಾರ, ಬೊಂಬಾಯಿಗೆ ಹೋದಾಗ, ಸೈಗಾಲ್ ರವರು ಪಂಜಾಬಿಗೆ ಹೊರಟುಹೋಗಿದ್ದರು. ನಾನು ಒಂದು ರೇಡಿಯೋ ಖರೀದಿಸಿ ಮನೆಗೆ ತಂದಿದ್ದೆ. ಮೊದಲಬಾರಿ ಕೇಳಲು ಹಚ್ಚಿದಾಗ, ಪ್ರಸಾರವಾದ ವಾರ್ತೆಯನ್ನು ಕೇಳಿ ಕುಸಿದುಹೋಗಿದ್ದೆ. ಯಾರನ್ನು ನನ್ನ ಆರಾಧ್ಯ ದೈವವೆಂದು ಕಾಣಲು ಹಾತೊರೆಯುತ್ತಿದ್ದೆನೋ ಆ ವ್ಯಕ್ತಿ (೧೯೪೭) ಸೈಗಲ್ ತೀರಿಕೊಂಡರೆಂಬ ಸುದ್ದಿ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿತ್ತು. ಅವರನ್ನು ನೋಡಲಿಲ್ಲವಲ್ಲ ಎನ್ನುವುದು ನನ್ನ ಜೀವನದ ಒಂದು ಮುಖ್ಯ ಕೊರಗಾಗಿತ್ತು ; ಅಷ್ಟೇಕೆ ಬಾಬಾರವರ ಪುಣ್ಯತಿಥಿ ಆಚರಣೆಯ ದಿನ, ಅಪರಕರ್ಮಗಳ ಮಂತ್ರೋಚ್ಚಾರ ಮುಗಿದಮೇಲೆ, ನಾನು ಸೈಗಾಲ್ ರವರ ರೆಕಾರ್ಡ್ ಹಚ್ಚಿದ್ದು, ಇನ್ನೂ ನೆನಪಿನಲ್ಲಿದೆ “.

ಗುಲಾಮ್ ಹೈದರ್ :

ಲತಾ ದೀದಿ, ಗುಲಾಮ್ ಹೈದರ್ ರವರನ್ನು ಬಹಳ ಗೌರವದಿಂದ ‘ಗಾಡ್ ಫಾದರ್’ ತರಹ ನೆರವಾಗಿದ್ದರು, ಎಂದು ಪ್ರೀತಿಯಿಂದ ನೆನೆಯುತ್ತಾರೆ. ಲತಾ ದೀದಿಯವರ ಪ್ರಾರಂಭಿಕ ಕರಿಯರ್ ನಲ್ಲಿ ಗುಲಾಮ್ ಹೈದರ್ ಬಹಳ ಕಾಳಜಿವಹಿಸಿ ಸಹಾಯಮಾಡುವಲ್ಲಿ ಪ್ರಮುಖಪಾತ್ರ ವಹಿಸಿದ್ದರು.

ಗುಲಾಮ್ ಹೈದರ್ (ಸಂಗೀತ ನಿರ್ದೇಶಕ) ನಿರ್ಮಾಪಕ ಶಶಧರ್ ಮುಖರ್ಜಿ ಅವರಿಗೆ ಲತಾ ಅವರನ್ನು ಪರಿಚಯಿಸಿದಾಗ, ಅವರು ಚಲನಚಿತ್ರ-ಶಹೀದ್ (1948), ಮುಖರ್ಜಿ ಲತಾ ಅವರ ಧ್ವನಿಯನ್ನು “ಬಹೂತ್ ಪತಲಾ ಹೈ” ಎಂದು ತಳ್ಳಿಹಾಕಿದರು; ಗುಲಾಮ್ ಹೈದರ್ ಇದಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ – “ಆನೆ ವಾಲೆ ದಿನೊಮ್ ಮೇ ಫಿಲಂ ಜಗತ್ ಕೆ ಸಭೀ ಲೋಗ್ ಲತಾ ಬೇಟಿ ಕ ಪಾವ್ ಪಕಡ್ ಕರ್, ಅಪನೇ ಫಿಲ್ಮೋಮ್ಮೆ ಲೆನಾ ಚಾಹ್ನೇಲಗೇಂಗೆ!

ಅವರು 1945 ರಲ್ಲಿ ಮಾಸ್ಟರ್ ವಿನಾಯಕ್ ಅವರ ಕಂಪನಿಯೊಂದಿಗೆ ಮುಂಬೈಗೆ ತೆರಳಿದರು. ಈ ಸಮಯದಲ್ಲಿ ಅವರು ‘ಉಸ್ತಾದ್ ಅಮಾನತ್ ಅಲಿ ಖಾನ್’ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು.

1948 ರಲ್ಲಿ ಮಾಸ್ಟರ್ ವಿನಾಯಕ್ ಕರ್ನಾಟಕಿಯವರು ನಿಧನರಾದರು. ಮನೆಯನ್ನು ನಡೆಸುವ ಸಂಪೂರ್ಣ ಜವಾಬ್ದಾರಿ ಲತಾರವರ ಹೆಗಲ ಮೇಲೆ ಬಿದ್ದದ್ದರಿಂದ ಬೇರೆ ವಿಧಿಯಿಲ್ಲದೆ ಲತಾದೀದಿಯವರು ಹಿಂದಿ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆಮಾಡುವ ಸಾಹಸ ಮಾಡಲೇ ಬೇಕಾಯಿತು. ಆಗ ಯಾರಿಗೂ ಹೆಚ್ಚಾಗಿ ಲತಾ ಮಂಗೇಶ್ ರವರ ಹಾಡುಗಾರಿಕೆಯ ಸಾಮರ್ಥ್ಯದ ಬಗ್ಗೆ ತಿಳುವಳಿಕೆ ಇಲ್ಲದಿದ್ದರಿಂದ ಅವರ ಆರಂಭಿಕ ವರ್ಷಗಳು ಬಹಳ ಸಂಘರ್ಷಮಯವಾಗಿತ್ತು; ಆದಾಗ್ಯೂ, ಅವರಿಗೆ ದೈವದತ್ತವಾಗಿ ಬಂದ ಕೊಡುಗೆ ಎಂದರೆ ಅದ್ಭುತ ಕಂಠಶ್ರೀ. ತಮ್ಮ ವ್ಯಕ್ತಿತ್ವದ ಬಗ್ಗೆ ಲತಾರವರಿಗೆ ಅತ್ಯಂತ ಗರ್ವವಿತ್ತು. 1949 ರಲ್ಲಿ “ಮಹಲ್” ಚಿತ್ರದ ‘ಆಯೇಗಾ ಆನೇವಾಲಾ’ ಎಂಬ ಅವರ ಮೊದಲ ಹಾಡು ಅವರ ಜೀವನದ ಗತಿಯನ್ನೇ ಬದಲಾಯಿತು. 1950 ರ ದಶಕವು ಹಿಂದಿ ಫಿಲಂ ಜಗತ್ತಿನಲ್ಲಿ ಹೆಜ್ಜೆಯಿಡುತ್ತಿದ್ದ ಲತಾಮಂಗೇಶ್ಕರ್ ಒಂದು ಅತ್ಯಂತ ಯಶಸ್ಸಿನ ಅವಧಿಯಾಗಿತ್ತು.

(1948) ಚಲನಚಿತ್ರಕ್ಕಾಗಿ ಆಡಿಷನ್ ಮಾಡುವಾಗ, ಲತಾರವರ ಅತ್ಯಂತ ನವಿರಾದ ಧ್ವನಿ, ಆ ಕಾಲದ ಪ್ರೇಕ್ಷಕರಿಗೆ ಸರಿಬೀಳಲಿಲ್ಲ ;ಆದರೆ ಗುಲಾಮ್ ಹೈದರ್ ಎಂಬ ಸಂಗೀತಕಾರರು ಅವಳಲ್ಲಿರುವ ಸಾಮರ್ಥ್ಯವನ್ನು ಕೇಳಿ ಗುರುತಿಸಿದರು. ಮಜ್ಬೂರ್ ಚಿತ್ರದಲ್ಲಿ ಹಾಡಲು ಅವಕಾಶ ನೀಡಿದರು. ಲತಾ ಮಂಗೇಶ್ಕರ್ ಅವರು ಭಾರತೀಯ ಸಂಗೀತ ಉದ್ಯಮದ ಹೆಮ್ಮೆ. ಸುಂದರ ಕಂಠದಿಂದ ಆಶೀರ್ವದಿಸಲ್ಪಟ್ಟ ಅವರು, ಅತ್ಯಂತ ಪ್ರಸಿದ್ಧ ಭಾರತೀಯ ಗಾಯಕಿ. ಬಹುಮುಖಿ, ಅವರು 20 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದಾರೆ. ಅವರ ಕೃತಿಗಳಿಗೆ ಗೌರವ ಮತ್ತು ಮನ್ನಣೆ ನೀಡಲು, ಲತಾ ಮಂಗೇಶ್ಕರ್ ಅವರನ್ನು ಭಾರತದ ನೈಟಿಂಗೇಲ್ ಎಂದೂ ಕರೆಯಲಾಗುತ್ತದೆ.

ವೃತ್ತಿಜೀವನ

ವೃತ್ತಿಜೀವನ 1945 ರಲ್ಲಿ, ಅವರು ಗುಲಾಮ್ ಹೈದರ್ ಮೂಲಕ ಚಲನಚಿತ್ರ ನಿರ್ಮಾಪಕ ಎಸ್. ಮುಖರ್ಜಿ ಅವರನ್ನು ಭೇಟಿಯಾದರು. ಹೈದರ್ ವೈಯಕ್ತಿಕವಾಗಿ ಆಕೆಗೆ ತನ್ನ ಗಾಯನ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ನೀಡಬೇಕೆಂದು ಬಯಸಿದ್ದರು. ಆದರೆ, ಎಸ್.ಮುಖರ್ಜಿಯವರಿಗೆ ಲತಾದೀದಿಯವರ ಧ್ವನಿ ಇಷ್ಟವಾಗಲಿಲ್ಲ ; ಮತ್ತು ಅವರ ಚಿತ್ರಕ್ಕೆ ಹಾಡಲು ಅವಕಾಶ ನೀಡಲಿಲ್ಲ. ಆ ಸಮಯದಲ್ಲಿ, ಹೈದರ್ ತನ್ನ ಗಾಯನ ವೃತ್ತಿಯನ್ನು ಬಾಲಿವುಡ್‌ನಲ್ಲಿ ಸ್ಥಾಪಿಸುವುದಾಗಿ ಭರವಸೆ ನೀಡಿದರು. ಎಲ್ಲ ನಿರ್ಮಾಪಕರು ಮತ್ತು ನಿರ್ದೇಶಕರು ಆಕೆಯ ಕಾಲಿಗೆ ಬಿದ್ದು ತಮ್ಮ ಚಿತ್ರಗಳಲ್ಲಿ ಹಾಡುವಂತೆ ಬೇಡಿಕೊಳ್ಳುವ ದಿನ ಬರುತ್ತದೆ ಎಂದು ಅವರು ನಿರ್ಮಾಪಕರಿಗೆ ಹೇಳಿದರು.

ಮರಾಠಿ ಚಲನಚಿತ್ರ ‘ಕಿತಿ ಹಸಾಲ್’ (1942) ಗಾಗಿ ಲತಾ ತಮ್ಮ ಮೊದಲ ಸಿನಿಮಾ ಹಾಡನ್ನು ಹಾಡಿದರು. ಮಗಳು ಚಿತ್ರಗಳಿಗೆ ಹಾಡುವುದು ಅವಳ ತಂದೆಗೆ ಇಷ್ಟವಾಗಲಿಲ್ಲ. ಹಾಗಾಗಿ ಆಕೆಯ ಹಾಡನ್ನು ಚಿತ್ರದಿಂದ ಅಳಿಸಲಾಗಿದೆ. 1942 ರಲ್ಲಿ, ತಂದೆಯ ಹಠಾತ್ ನಿಧನದಿಂದಾಗಿ ಮನೆಯ ಆರ್ಥಿಕ ಸ್ಥಿತಿಯು ಅಸಮರ್ಪಕವಾದ ಕಾರಣ, ಅವರು ವಿವಿಧ ಹಿಂದಿ ಮತ್ತು ಮರಾಠಿ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಲು ನಿರ್ಧರಿಸಿದರು. ಅವಳು ನಟನೆಯ ಕಾರ್ಯಯೋಜನೆಗಳನ್ನು ತೆಗೆದುಕೊಳ್ಳಬೇಕಾಗಿತ್ತು.

ಲತಾಮಂಗೇಶ್ಕರ್ ಅಭಿನಯವನ್ನು ಇಷ್ಟಪಡಲಿಲ್ಲ : ಹಾಡುಗಾರಿಕೆಯೇ ಅವರ ಬಂಡವಾಳವಾಯಿತು.

ವಾಸ್ತವದ ಹೊರತಾಗಿಯೂ, ಲತಾಮಂಗೇಶ್ಕರ್  ನಟನೆಯನ್ನು ಇಷ್ಟಪಡಲಿಲ್ಲ. ‘ದಿಲ್ ಮೇರಾ ತೋಡಾ’ ಹಾಡು ಅಂತಿಮವಾಗಿ ಲತಾ ದೀದಿಯ ಗಮನಕ್ಕೆ ಬಂದಿತು, ಮತ್ತು ಅದು ಅವಳ ಅದ್ಭುತ ಹಾಡೆಂದು ಪತ್ರಿಕಾ ವಲಯದಲ್ಲಿ ಬಿಂಬಿಸಲಾಯಿತು. 1949 ರಲ್ಲಿ, ಅವರು ಬರ್ಸಾತ್, ಅಂದಾಜ್, ದುಲಾರಿ ಮತ್ತು ಮಹಲ್ ಚಿತ್ರಗಳಿಂದ ನಾಲ್ಕು ಪ್ರಮುಖ ಹಿಟ್ಗಳನ್ನು ಪಡೆದರು. ಮಹಲ್‌ನ “ಆಯೇಗಾ ಆನೇವಾಲಾ” ಹಾಡು ಭಾರೀ ಸೂಪರ್ ಡೂಪರ್ ಹಿಟ್ ಆಗಿತ್ತು, ಮತ್ತು ಲತಾ ಅವರು ಬೊಂಬಾಯಿನ ಚಿತ್ರೋದ್ಯಮದಲ್ಲಿ ಗಟ್ಟಿಯಾದ ಸ್ಥಾನವನ್ನು ಪಡೆದರು. 1950 ರ ಅವಧಿಯು ಅವರ ವೃತ್ತಿಜೀವನದಲ್ಲಿ ಪ್ರಚಂಡ ಬೆಳವಣಿಗೆಯನ್ನು ಕಂಡಿತು. ಅವರು ಬಾಲಿವುಡ್ ಗಾಯಕರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದರು. ಲತಾ ಮಂಗೇಶ್ಕರ್  ಶಂಕರ್ ಜೈಕಿಶನ್, ಎಸ್ ಡಿ ಬರ್ಮನ್, ನೌಶಾದ್, ಹೇಮಂತ್ ಕುಮಾರ್ ಮತ್ತು ಸಲೀಲ್ ಚೌಧರಿ ಅವರಂತಹ ಆ ಕಾಲದ ಎಲ್ಲಾ ಪ್ರಸಿದ್ಧ ಸಂಯೋಜಕರೊಂದಿಗೆ ಕೆಲಸ ಮಾಡಿದರು. ಶಂಕರ್ ಜೈಕಿಶನ್ ಅವರ ಧ್ವನಿಯಿಂದ ಸಂಪೂರ್ಣವಾಗಿ ದಿಗ್ಭ್ರಮೆಗೊಂಡರು ; ಮತ್ತು ಅವರು ಪಡೆದ ಬಹುತೇಕ ಎಲ್ಲಾ ಚಲನಚಿತ್ರಗಳಲ್ಲಿ ಹಿನ್ನೆಲೆ ಗಾಯನಕ್ಕಾಗಿ ಅವರ ಧ್ವನಿಯನ್ನು ಬಳಸಿದರು

ಲಕ್ಷ್ಮೀ ಕಾಂತ್ ಪ್ಯಾರೆ ಲಾಲ್ ಒಟ್ಟಿಗೆ :

1960 ರ ಅವಧಿಯು ಲತಾರವರ ಜೀವನದ ಸ್ವರ್ಣಯುಗವಾಗಿತ್ತು. ಅವರನ್ನು ಬಾಲಿವುಡ್ ಹಿನ್ನೆಲೆ ಗಾಯನದ ರಾಣಿಯನ್ನಾಗಿ ಮಾಡಿತು.
ಲತಾ ಮಂಗೇಶ್ಕರ್ ತಮ್ಮ ಸಂಗೀತ ಜೀವನದ ಆರಂಭಿಕ ಹಂತದಲ್ಲಿ ಗಾಯಕ ಮತ್ತು ಸಂಗೀತ ನಿರ್ದೇಶಕರಾದ ಲಕ್ಷ್ಮೀಕಾಂತ್-ಪ್ಯಾರೇಲಾಲ್ ಅವರ ಸಂಗೀತ ನಿರ್ದೇಶನದಲ್ಲಿ ಅನೇಕ ಗೀತೆಗಳನ್ನು ಹಾಡಿದರು. ಇಬ್ಬರೂ ಲತಾದೀದಿಗೆ ತುಂಬಾ ಪರಿಚಯಸ್ತರು. ಚಿಕ್ಕವರಾಗಿದ್ದಾಗ, ಸಂಗೀತ ಕಲಿಯಲು ಲತಾರವರ ತಂದೆ ಬಾಬಾ ಹೃದಯನಾಥ್ ಮಂಗೇಶ್ ರವರ ಮನೆಗೆ ಬಂದು ಸಂಗೀತಾಭ್ಯಾಸಮಾಡುತ್ತಿದ್ದರು ಲತಾರವರು ಅವರಿಗಾಗಿ ಅವರು 35 ವರ್ಷಗಳ ಅವಧಿಯಲ್ಲಿ 700 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಲತಾ ಮಂಗೇಶ್ಕರ್ ಅವರು ಬಾಲಿವುಡ್ ಚಿತ್ರೋದ್ಯಮದ ಬಹುತೇಕ ಎಲ್ಲಾ ಪ್ರಮುಖ ಸಂಗೀತ ಸಂಯೋಜಕರಿಗೆ ಹಾಡಿದರು, ಮತ್ತು ಬಾಲಿವುಡ್‌ನಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸಿದರು. ಅವರ ಹಾಡುಗಳಿಗೆ ದೇಶದಾದ್ಯಂತ ಜನರಿಂದ ಅಗಾಧ ಪ್ರತಿಕ್ರಿಯೆ ಸಿಕ್ಕಿತು.

ಮೊಹಮ್ಮದ್ ರಫಿ ಒಟ್ಟಿಗೆ ಆದ ಮನಸ್ತಾಪ :

೧೯೬೦ ರಲ್ಲಿ ಸಂಗೀತ ನಿರ್ದೇಶಕ, ಸಲೀಲ್ ಚೌಧರಿಯವರು ಬಾಂಗ್ಲಾ ಗೀತೆಯ ಆಧಾರದ ಮೇಲಿನ ಗೀತೆಯೊಂದನ್ನು ಲತಾರವರ ಕೈಲಿ ಸೋಲೋ ಹಾಡನ್ನು ಹಾಡಿಸಿ ಧ್ವನಿಮುದ್ರಿಸಿದ್ದರು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ಆ ಗೀತೆಯನ್ನು ಉಪಯೋಗಿಸಲು ಆಗಲಿಲ್ಲ. ಇದೇ ಹಾಡಿನ ಹಿಂದಿ ಆವೃತ್ತಿಯನ್ನು ೧೯೬೧ ರಲ್ಲಿ ಬೊಂಬಾಯಿನ ಫೇಮಸ್ ಸ್ಟುಡಿಯೋ ನಲ್ಲಿ ‘ತಸ್ವೀರ್ ತೆರೆ ದಿಲ್ ಮೇ’ ಎಂಬ ಶಿರೋ ನಾಮದಿಂದ ‘ಮಾಯಾ’ ಎಂಬ ಹಿಂದಿ ಡುಯೆಟ್ ಚಿತ್ರಗೀತೆಯನ್ನು ರೆಕಾರ್ಡಿಂಗ್ ಮಾಡಿದರು. ಲತಾಮಂಗೇಶ್ಕರ್ ಒಟ್ಟಿಗೆ ಮೊಹಮ್ಮದ್ ರಫಿ ಹಾಡಿದ್ದು, ಚಿತ್ರ ರಿಲೀಸ್ ಆದಾಗ ಆ ಹಾಡು ಅಪಾರ ಜನಪ್ರಿಯತೆಯನ್ನು ಗಳಿಸಿತು. ಆದರೂ ಗೀತೆಯನ್ನು ರೆಕಾರ್ಡಿಂಗ್ ಮಾಡುವ ಸಮಯದಲ್ಲಿ ಜರುಗಿದ ಅವಘಡ, ಹಿಂದಿ ಚಿತ್ರರಂಗದ ಮೇರು ಗಾಯಕರ ಮಧ್ಯೆ ಏರ್ಪಟ್ಟ ಕಡವಾಹಟ್, ಅವರಿಬ್ಬರ ನಡುವಿನ ಸಂಬಂಧವನ್ನು ಮೂರುವರ್ಷಗಳಿಗೂ ಹೆಚ್ಚು ಸಮಯ ಇಲ್ಲದಂತೆ ಮಾಡಿತು. ಹಾಗೆ ನೋಡಿದರೆ, ಮೊಹಮ್ಮದ್ ರಫಿ, ಮತ್ತು ಲತಾ ಮಂಗೇಶ್ಕರ್ ಒಟ್ಟಾರೆ ಹಾಡಿದ ಯುಗಳ ಗೀತೆಗಳು ೪೦೦ ಕ್ಕೂ ಹೆಚ್ಚು.

ಆದದ್ದು ಹೀಗೆ :
ಲತಾ ತಮ್ಮ ಹಾಡುಗಾರಿಕೆಯ ಸಮಯದಲ್ಲಿ ಯಾವುದೇ ಗೀತೆಯ ‘ಹಾಡ್ಬರಹ’ ವನ್ನು ಸ್ವಲ್ಪ ತಿದ್ದಿ ಇಲ್ಲವೇ ಸ್ವಲ್ಪ ಬದಲಾವಣೆ ಮಾಡಿ ಪ್ರಸ್ತುತಿಮಾಡುವ ಸ್ವಭಾವ ಹೊಂದಿದ್ದರು. ಈ ನಿಟ್ಟಿನಲ್ಲಿ ಯಾವುದೇ ನಿರ್ದೇಶಕರನ್ನು ಒಪ್ಪಿಸುವ ಕಲೆಯೂ ಅವರಿಗೆ ಸಿದ್ಧಿಸಿತ್ತು. ಹಾಗೆ ಉತ್ತಮಗೊಳಿಸಿ ಹಾಡಿದ ಹಲವಾರು ಗೀತೆಗಳು ಗಲ್ಲಾ ಪೆಟ್ಟಿಗೆಯಲ್ಲಿ ಅತ್ಯಂತ ಪ್ರಸಿದ್ಧಿಯನ್ನೂ ಪಡೆದಿದ್ದವು. ಈ ಕಾರಣಗಳಿಂದಾಗಿ ಸಲೀಲ್ ಚೌಧರಿಯವರು ಹೇಗೋ ಸಹಿಸಿಕೊಂಡು ಒಪ್ಪಿಗೆ ಕೊಡುತ್ತಿದ್ದರು. ಮೊಹಮ್ಮದ್ ರಫಿಯವರಾದರೋ, ನಿಷ್ಠಾವಂತ ವ್ಯಕ್ತಿ ; ಶಿಸ್ತಿನಿಂದ ನಿರ್ದೇಶಕರ ಮಾನದಂಡದ ಪ್ರಕಾರ ಹಾಡುವುದನ್ನು ಶಿರಸಾವಹಿಸಿ ಪಾಲಿಸುತ್ತಿದ್ದರು. ಲತಾಬಾಯಿಯವರ ಆತ್ಮಸ್ಥೈರ್ಯ ಇದಕ್ಕೆ ತದ್ವಿರುದ್ಧವಾಗಿತ್ತು. ರಫಿಯವರಿಗೆ ಸಂಗೀತ ನಿರ್ದೇಶಕರ ಆಣತಿಯ ಪ್ರಕಾರ ಹಾಡಬೇಕೋ, ಇಲ್ಲವೇ ಬದಲಾವಣೆಗಳನ್ನು ತಮ್ಮ ಸಹ-ಕಲಾವಿದೆ, ಲತಮಂಗೇಶ್ಕರ್ ರವರ ಮಾತನ್ನು ಪಾಲಿಸಬೇಕೋ ತಿಳಿಯದೆ, ಆದ ಅಸಂತುಲನದಿಂದ ಗೊಂದಲದಲ್ಲಿ ಸಿಕ್ಕಿಹಾಕಿಕೊಂಡರು. ಅವರ ಆತ್ಮಗೌರವಕ್ಕೆ ಧಕ್ಕೆಯಾದಂತೆ ಅನ್ನಿಸತೊಡಗಿತು. ಇದೂ ಅಲ್ಲದೆ, ಸಲೀಲ್ ಚೌಧರಿಯವರು ರಫಿಯ ಪಕ್ಷಕ್ಕೆ ಬೆಂಬಲಿಸದೆ ಲತಾರವರನ್ನೇ ಒಪ್ಪಕ್ಕೆ ಇಟ್ಟುಕೊಂಡು ಅವರನ್ನು ಹೊಗಳಿದ್ದು ರಫಿಯವರ ಬೇಹದ್ ನಿರಾಶೆಗೆ ಕಾರಣವಾಗಿತ್ತು. ಕೂಡಲೇ ಅವರು ಅಲ್ಲಿ ನೆರೆದಿದ್ದ ಬಾಲಿವುಡ್ ತಾಂತ್ರಿಕ ವರ್ಗದವರೆಲ್ಲರ ಮುಂದೆ ಎದ್ದು ನಿಂತು, ‘ಇನ್ನು ಮುಂದೆ ತಾವು ಯಾವುದೇ ಗೀತೆಯನ್ನು ಲತಾರವರ ಒಟ್ಟಿಗೆ ಹಾಡುವುದಿಲ್ಲವೆಂದು ಘೋಷಿಸಿದರು’. ಲತಾ ತಕ್ಷಣ ಅದಕ್ಕೆ ಪ್ರತಿಕ್ರಿಯಿಸಿ, ‘ಹಾಗಾದರೆ ಒಳ್ಳೆಯದು ; ಇನ್ನು ಮೇಲೆ ನಿಮ್ಮ ಜತೆ ನಾನೂ ಹಾಡಲಾರೆ. ನೆನಪಿರಲಿ. ರಫಿಭಯ್ಯಾ ಲಿಖಿತರೂಪದಲ್ಲಿ ಕ್ಷಮಾಪಣ ಪತ್ರ ಬರೆದುಕೊಟ್ಟರೆ ಮಾತ್ರ ಮುಂದೆ ನಾವಿಬ್ಬರೂ ಡ್ಯುಯಲ್ ಹಾಡಲು ಸಾಧ್ಯ’. ‘ಒಹ್ ಈ ಮಹಾರಾಣಿ ನನ್ ಜೋಡಿ ಹಾಡಲ್ಲವಂತೆ’ ಎಂದು ಮನಸ್ಸಿನಲ್ಲೇ ಬ್ಯಾಸರ್ಕೆ ಆಯ್ತು ಅವರಿಗೆ.

ಈ ಪ್ರಸಂಗದ ನಂತರ ಸುಮಾರು ೩ ವರ್ಷಗಳ ಕಾಲ, ಲತಾ ಮಂಗೇಶ್ಕರ್ ಹಾಗೂ ಮೊಹಮ್ಮದ್ ರಫಿ ಒಟ್ಟಿಗೆ ಹಾಡಲಿಲ್ಲ ಸಂಗೀತ ನಿರ್ದೇಶಕ ಜೈಕಿಶನ್ ಇಬ್ಬರ ಮಧ್ಯೆ ಸಂಝ್ಹೋತಾ ಮಾಡಲು ಪ್ರಯತ್ನಿಸಿ ಸ್ವಲ್ಪಮಟ್ಟಿಗೆ ಯಶಸ್ವಿಯಾದರೂ, ಇಬ್ಬರ ಮಧ್ಯೆ ಕಡವಾಹಟ್ ಮತ್ತು ಮತಭೇದ ಬಹಳ ಸಮಯದ ತನಕ, ಇದ್ದದ್ದು ದುರದೃಷ್ಟಕರ.

1970 ರ ದಶಕದಲ್ಲಿ, ಲತಾ ಅವರು ಬಾಲಿವುಡ್ ನಟಿ ಮೀನಾ ಕುಮಾರಿಗಾಗಿ ಪಾಕೀಜಾ ಚಿತ್ರದಲ್ಲಿ ಹಾಡುಗಳನ್ನು ರೆಕಾರ್ಡ್ ಮಾಡಿದರು, ಅದು ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಲತಾ ಮಂಗೇಶ್ಕರ್ S.D ಯವರ ಚಿತ್ರಗಳಾದ ಪ್ರೇಮ್ ಪೂಜಾರಿ, ಶರ್ಮಿಲೀ ಮತ್ತು ಅಭಿಮಾನ್ ಜನಪ್ರಿಯ ಚಿತ್ರಗಳಲ್ಲಿ ಹಾಡಿ ಬಾಲಿವುಡ್ ಚಿತ್ರರಂಗದಲ್ಲಿ ಒಂದು ಹೊಸ ಅಲೆಯನ್ನು ನಿರ್ಮಿಸಿದರು. ಹಿಂದಿ ಚಲನಚಿತ್ರ ರಂಗದಲ್ಲಿ ಲತಾ ಮಂಗೇಶ್ಕರ್ ಪಾದಾರ್ಪಣೆ ಮಾಡಿದಮೇಲೆ ಫಿಲ್ಮೀ ಸಂಗೀತ ಉದ್ಯಮಕ್ಕೆ ಒಂದು ಬಹು ದೊಡ್ಡ ತಿರುವು ಸಿಕ್ಕಂತಾಯಿತು 50 ರ ದಶಕದ ಅಂತ್ಯದ ವೇಳೆಗೆ, ಲತಾರವರ ತಂಗಿ ಉತ್ತಮ ಕಂಠಶ್ರೀ ಹೊಂದಿದ್ದ ಆಶಾ ಭೋಂಸ್ಲೆ ಹಾಡುವ ಅವಕಾಶಕ್ಕೆ ಕಾಯುತ್ತಿದ್ದರು. ಅವರಿಬ್ಬರೂ ಜತೆ ಗೂಡಿ ಸಿನಿಮಾ ಉದ್ಯಮದ ಅಜೇಯ ಧ್ವನಿಗಳೆಂದು ಬಿಂಬಿಸಲ್ಪಟ್ಟರು. ಲತಾ ಮಂಗೇಶ್ಕರ್ ಅವರ ಎತ್ತರದ ಧ್ವನಿಯ ಮುಂದೆ ಉಳಿದ ಎಲ್ಲಾ ಗಾಯಕರ ಹಸ್ಕಿ ಧ್ವನಿಗಳು ನೀರಸವಾಗಿ ತೋರಿದವು.

ಫಿಲಂ ಸಂಗೀತದಲ್ಲಿ ಸಿದ್ಧಿ !

ಮಂಗೇಶ್ಕರ್ ಅವರ ಯಶಸ್ಸು 1970 ಮತ್ತು 1980 ರ ದಶಕದಲ್ಲಿ ಮುಂದುವರೆಯಿತು ಮತ್ತು ಅವರು ಪ್ರಾದೇಶಿಕ ಹಾಡುಗಳಲ್ಲಿ ಹೆಚ್ಚುಹೆಚ್ಚು ಆಸಕ್ತಿ ತೋರಿಸಲು ಪ್ರಾರಂಭಿಸಿದರು . ಈ ಅವಧಿಯಲ್ಲಿ ಅನೇಕ ಸಂಗೀತ ಕಚೇರಿಗಳನ್ನು ನೀಡಿದ್ದಲ್ಲದೆ ಪ್ರಪಂಚದಾದ್ಯಂತ ಪ್ರವಾಸ ಮಾಡಿ ತಮ್ಮ ಗಾಯನದಿಂದ ವಿಶ್ವದ ಜನರ ಮನ ತಣಿಸಿದರು. 1990 ರ ದಶಕದಲ್ಲಿ ಅನೇಕ ಹೊಸ ಮಹಿಳಾ ಗಾಯಕರು ಬಾಲಿವುಡ್‌ಗೆ ಪ್ರವೇಶಿಸಿದರು, ಆದರೆ ಹಿಂದಿ ಚಿತ್ರರಂಗದ ಧ್ವನಿಯ ಮಹಾ ರಾಣಿಯನ್ನು ಯಾರೂ ಅಲ್ಲಾಡಿಸಲೂ ಸಾಧ್ಯವಾಗಲಿಲ್ಲ. ಅವರು ಹೊಸ ಸಹಸ್ರಮಾನದವರೆಗೆ ಉತ್ತಮ ಪ್ರದರ್ಶನವನ್ನು ಮುಂದುವರೆಸಿದರು, 2001 ರಲ್ಲಿ ತಮಿಳು ಸಂಗೀತ ಸಂಯೋಜಕ ಇಳಯರಾಜ ಅವರೊಂದಿಗೆ ತಮ್ಮ ಮೊದಲ ಹಿಂದಿ ಹಾಡನ್ನು ರೆಕಾರ್ಡ್ ಮಾಡಿದರು.

ಲತಾದೀದಿಯವರ ದೇಹದ ಕಣ-ಕಣಗಳಲ್ಲೂ ಸಂಗೀತ ಪ್ರವಹಿಸುತ್ತಿತ್ತು. ಸಂಗೀತದಲ್ಲಿ ಸಾಧನೆಯನ್ನು ಮಾಡುವುದೇ ತಮ್ಮ ಜೀವನದ ಪರಮೋಚ್ಚ ಧ್ಯೇಯವೆಂದು ಅವರು ನಂಬಿದ್ದರು. ಲತಾ ಅವರು ಶರವೇಗದಿಂದ ಪ್ರಗತಿಯ ಮೆಟ್ಟಿಲುಗಳನ್ನು ಏರುತ್ತಾ ಮೇಲೆ ಮೇಲೆ ಹೋಗುತ್ತಾ ಖ್ಯಾತಿಯನ್ನು ಗಳಿಸಿದರು ಮತ್ತು ಫಿಲಂ ಸಂಗೀತೋದ್ಯಮದಲ್ಲಿ ತಮ್ಮ ಅಳಿಸಲಾಗದ ಛಾಪು ಮೂಡಿಸಿದರು. ಅವರು ಮೊಹಮ್ಮದ್ ರಫಿ, ಕಿಶೋರ್ ಕುಮಾರ್, ಮುಖೇಶ್ ಮುಂತಾದ ಪ್ರಸಿದ್ಧ ಗಾಯಕರೊಂದಿಗೆ ಹಾಡಿದ್ದಾರೆ. ಅವರು ಸಂಗೀತದ ಪ್ರತಿಯೊಂದು ಪ್ರಕಾರವನ್ನು ಪರಿಪೂರ್ಣಗೊಳಿಸಿದ್ದಾರೆ. ಅವರ ಯಶಸ್ಸು ಮತ್ತು ನಿರ್ಣಯವು ಅವರನ್ನು ಉದ್ಯಮದಲ್ಲಿ ಅತ್ಯಂತ ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರನ್ನಾಗಿ ಮಾಡಿತು. ಕೆಲವು ತಪ್ಪು ತಿಳುವಳಿಕೆಯಿಂದಾಗಿ ಅವರು ಮಹಾನ್ ಸಂಯೋಜಕ ಎಸ್.ಡಿ ಬರ್ಮನ್ ಅವರಿಗೆ ಹಾಡಲು ನಿರಾಕರಿಸಿದರು ಮತ್ತು ಮೊಹಮ್ಮದ್ ರಫಿ ಅವರೊಂದಿಗೆ ಹಾಡುವುದನ್ನು ನಿಲ್ಲಿಸಿದರು. ಅವಳ ಶಕ್ತಿ ಎಷ್ಟು ಅಗಾಧವಾಗಿತ್ತು ಎಂದರೆ ಅವರು ಅವಳ ಬಳಿಗೆ ಹಿಂತಿರುಗಬೇಕಾಯಿತು. ಅವರು ವಾಸ್ತವವಾಗಿ ಸಂಗೀತ ಉದ್ಯಮ ಮತ್ತು ಪ್ರತಿ ಸಂಗೀತದ ನೇರ ಏಕಸ್ವಾಮ್ಯವನ್ನು ಹೊಂದಿದ್ದರು. ಲತಾರವರ ಜೀವನದ ಧ್ಯೇಯಗಳು ಮತ್ತು ಅವನ್ನು ಸಾಕಾರಗೊಳಿಸಲು ಅವರು ತೆಗೆದುಕೊಂಡ ದಿಟ್ಟ ನಿಲವುಗಳು ಎಲ್ಲರನ್ನು ಚಕಿತಗೊಳಿಸಿದವು. ಅತ್ಯಂತ ಸರಳವ್ಯಕ್ತಿತ್ವ ಹೊಂದಿದ್ದ ಲತಾ ಯಾವ ಹೆಚ್ಚಿನ ಮೇಕಪ್ ಗಳನ್ನೂ ಬಯಸುತ್ತಿರಲಿಲ್ಲ. ಸಾಧಾರಣವಾಗಿ ಬಿಳಿಯ ಸೀರೆಯನ್ನು ಅವರು ಮೈತುಂಬ ಸೆರಗು ಹೊದ್ದುಕೊಂಡು ಉಡುತ್ತಿದ್ದರು. ಮಾತಿನಲ್ಲಾಗಲೀ ಕೃತಿಯಲ್ಲಾಗಲೀ ಅಶ್ಲೀಲತೆ ಅವರ ಹತ್ತಿರ ಸುಳಿಯುತ್ತಿರಲಿಲ್ಲ. ಗಾಯನಕ್ಕೆ ಲಿರಿಕ್ಸ್ ಬರೆಯುವಾಗ ಸಂಗೀತ ನಿರ್ದೇಶಕರು ಬಹಳ ಎಚ್ಚರಿಕೆಯಿಂದ ಹತ್ತು ಬಾರಿ ತಿದ್ದಿ ತಿದ್ದಿ, ತಮ್ಮ ಮನಸ್ಸಿಗೆ ಖಾತ್ರಿ ಪಡಿಸಿಕೊಂಡಮೇಲೆಯೇ ಲತಾರವರಿಗೆ ಹಾಡಲು ಬಿನ್ನವಿಸುತ್ತಿದ್ದರು ಅತ್ಯಂತ ಗೌರವಾದರಗಳಿಂದ ವರ್ತಿಸುತ್ತಿದ್ದರು.

ಮರಾಠಿ ಚಿತ್ರ ನಿರ್ಮಾಣ, ಗೀತ ನಿರ್ದೇಶನ :

ಲತಾ ಮಂಗೇಶ್ಕರ್ ಅವರು ಸಂಗೀತ ಸಂಯೋಜಿಸಿದ್ದಾರೆ ಮತ್ತು ‘ಆನಂದ್ ಘಾನ್’ ಹೆಸರಿನಲ್ಲಿ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಅಡುಗೆಮಾಡುವುದು ಹೊಸಹೊಸ ರುಚಿಯಾದ ಖಾದ್ಯಗಳನ್ನು ತಯಾರಿಸುವುದು ಅವಳರಿಗೆ ತುಂಬಾ ಇಷ್ಟ. ಸ್ಟುಡಿಯೋ ಒಳಗೆ ಹೋಗುವಾಗ ಭೂಮಿಗೆ ನಮಸ್ಕರಿಸಿ, ಚಪ್ಪಲಿಯನ್ನು ಹೊರಗಡೆಯೇ ಬಿಟ್ಟು ಒಳಗೆ ಹೋಗಿ ಹಾಡುತ್ತಿದ್ದರು. ಅವರಿಗೆ ಫೋಟೋಗ್ರಫಿ, ಕ್ರಿಕೆಟ್ ಆಟ ಬಹಳ ಪ್ರಿಯವಾದ ಹವ್ಯಾಸಗಳು.

*ಕಂಪ್ಯೂಟರ್‌ನ ಸಹಾಯದಿಂದ ಲತಾ ಅವರ ಧ್ವನಿಯ ಗ್ರಾಫ್ ಅನ್ನು ರೆಕಾರ್ಡ್ ಮಾಡಿದ್ದಾರೆ ಅದು ಇದುವರೆಗೆ ವಿಶ್ವದ “ಅತ್ಯಂತ ಪರಿಪೂರ್ಣ” ಪರಿಣಿತಿಯಾದದ್ದೆಂದು ಗಮನಿಸಲಾಗಿದೆ.

  • ಲತಾಜಿ ಒಂದು ದಿನ ಶಾಲೆಗೆ ಹಾಜರಾಗಿದ್ದರೂ, ನ್ಯೂಯಾರ್ಕ್ ವಿಶ್ವವಿದ್ಯಾಲಯ ಸೇರಿದಂತೆ 6 ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ.
  • ಅಟಲ್ ಬಿಹಾರಿ ವಾಜಪೇಯಿ (ದಿ ವೀಕ್-ಮೋಡ್ ಅಭಿಪ್ರಾಯ ಸಂಗ್ರಹ) ನಂತರ ಲತಾಜಿ ಅವರನ್ನು 2ನೇ ಹೆಚ್ಚು ಮೆಚ್ಚಿದ ಭಾರತೀಯ ಎಂದು ರೇಟ್ ಮಾಡಲಾಗಿದೆ.

*IndiaWorld.com ನ ನೆಟ್ ಸಮೀಕ್ಷೆಯಲ್ಲಿ ಅವರು 20 ನೇ ಶತಮಾನದ (ಕಲೆ) ಅತ್ಯಂತ ಪ್ರಮುಖ ಭಾರತೀಯರಾಗಿ ಆಯ್ಕೆಯಾಗಿದ್ದಾರೆ.

  • ಲತಾ ಮಂಗೇಶ್ಕರ್ ಅವರ ಜಾತಕವು ದೇಶದ ಹತ್ತು ಅತ್ಯಂತ ಉಜ್ವಲ ಜಾತಕಗಳಲ್ಲಿ ಒಂದಾಗಿದೆ *

1962 ರಲ್ಲಿ ಭಾರತ-ಚೀನಾ ಯುದ್ಧದಲ್ಲಿ ಭಾರತವು ಸೋತ ನಂತರ,

ಏ ಮೇರೆ ವತನ್ ಕೆ ಲೋಗೋನ್, ಜರಾ ಆಂಖ್ ಮೇ ಭರ್ ಲೋ ಪಾನಿ ಎಂಬ ಹಾಡನ್ನು ಲತಾ ಹಾಡಿದ್ದರು. ಈ ಹಾಡು, ಆಗಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಕಣ್ಣೀರು ಸುರಿಸುವಂತೆ ಮಾಡಿತು ಮತ್ತು ಅವರು ‘ಬೇಟಿ ತೂನೆ ಮುಜೆ ರೂಲಾ ದಿಯಾ’ ಎಂದು ಒಪ್ಪಿಕೊಂಡರು.

* ಒಮ್ಮೆ ಲತಾಜಿ 6 ಅಥವಾ 7 ವರ್ಷದವಳಿದ್ದಾಗ, ಅವಳು ತನ್ನಷ್ಟಕ್ಕೆ ತಾನೇ ರಾಗವನ್ನು ಗುನುಗುತ್ತಿದ್ದಳು, ಇದ್ದಕ್ಕಿದ್ದಂತೆ ಅವಳು ಕೆಳಗೆ ಬಿದ್ದು ಪ್ರಜ್ಞಾಹೀನಳಾದಳು. ಪ್ರಜ್ಞೆ ಬಂದ ಮೇಲೆ ಅವಳು ಪ್ರಜ್ಞೆ ತಪ್ಪಿದ ಮೇಲೆ ಎಲ್ಲಿ ನಿಲ್ಲಿಸಿದ್ದಳೋ ಅದೇ ಹಾಡನ್ನು ಹಾಡಲು ಶುರುಮಾಡಿದಳು!!

* ಲಾರ್ಡ್ಸ್ ಸ್ಟೇಡಿಯಂನಲ್ಲಿ ಅವಳಿಗಾಗಿ ಕಾಯ್ದಿರಿಸಿದ ಶಾಶ್ವತ ಗ್ಯಾಲರಿಯನ್ನು ಹೊಂದಿದ್ದು, ಅಲ್ಲಿಂದ ಅವರು ತಮ್ಮ ನೆಚ್ಚಿನ ಆಟ-ಕ್ರಿಕೆಟ್ ಅನ್ನು ವೀಕ್ಷಿಸಲು ಆನಂದಿಸುತ್ತಾರೆ.

* ಛಾಯಾಗ್ರಹಣವು ಅವಳ ಕಡಿಮೆ ತಿಳಿದಿರುವ ಉತ್ಸಾಹಗಳಲ್ಲಿ ಒಂದಾಗಿದೆ.

 * ಎರಡನೇ ವಯಸ್ಸಿನಲ್ಲಿ ಲತಾಜಿಗೆ ಸಿಡುಬು ರೋಗ ಬಂದಿದ್ದು, ಅದು ಇಂದಿಗೂ ತನ್ನ ಗುರುತುಗಳನ್ನು ಹೊತ್ತುಕೊಂಡು ಬರುವಂತೆ ಮಾಡಿತು, ಅವಳು ತೀವ್ರವಾದ ಸೈನಸ್ ಸಮಸ್ಯೆಯಿಂದ ಬಳಲುತ್ತಿದ್ದರು.

ಲತಾ ಅವರ ಮೆಚ್ಚಿನ ಸಾಹಿತ್ಯ ಕೃತಿಗಳು:-

ಖಲೀಲ್, ಗಿಬ್ರಾನ್, ಚೆಕೊವ್ ಮತ್ತು ಟಾಲ್ಸ್ಟಾಯ್.

ಶಾಸ್ತ್ರೀಯ ಗಾಯಕರು:- ಉಸ್ತಾದ್ ಬಡೇ ಗುಲಾಮ್ ಅಲಿ ಖಾನ್ ಮತ್ತು ಉಸ್ತಾದ್ ಅಮೀರ್ ಖಾನ್

ಹಿನ್ನೆಲೆ ಗಾಯಕರು:-ಕೆಎಲ್ ಸೈಗಲ್ ಮತ್ತು ನೂರ್ಜೆಹಾನ್

ಚಲನಚಿತ್ರ ನಿರ್ಮಾಪಕರು:- ಗುರುದತ್, ಬಿಮಲ್ ರಾಯ್ ಮತ್ತು ಸತ್ಯಜಿತ್ ರೇ

ಚಲನಚಿತ್ರಗಳು:- ಪಡೋಸನ್, ಲೈಮ್‌ಲೈಟ್ ಮತ್ತು ಟೈಟಾನಿಕ್

ಸಂಗೀತ ನಿರ್ದೇಶಕರು:- ಮದನ್ ಮೋಹನ್, ಸಲೀಲ್ ಚೌಧರಿ ಮತ್ತು ಜೈದೇವ್ ಗೀತರಚನೆಕಾರ:- ಶೈಲೇಂದ್ರ, ಸಾಹಿರ್ ಲುಧಿಯಾನವಿ, ಮಜ್ರೂಹ್, ನೀರಜ್ ಮತ್ತು ನಕ್ಷ್ ಲಿಯಾಲ್‌ಪುರಿ

ಕ್ರೀಡೆ:- ಕ್ರಿಕೆಟ್, ಫುಟ್‌ಬಾಲ್ ಮತ್ತು ಟೆನ್ನಿಸ್

*ಹವ್ಯಾಸಗಳು:- ಛಾಯಾಗ್ರಹಣ

*ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ ಒಂದು ಪ್ರತ್ಯೇಕ ಗ್ಯಾಲರಿಯನ್ನು ಹೊಂದಿದ್ದು, ಅಲ್ಲಿಂದ ಲತಾದೀದಿ ತನ್ನ ನೆಚ್ಚಿನ ಆಟ-ಕ್ರಿಕೆಟ್ ಅನ್ನು ವೀಕ್ಷಿಸಲು ಆನಂದಿಸುತ್ತಾರೆ.

  • ಛಾಯಾಗ್ರಹಣವು ಅವಳ ಕಡಿಮೆ ತಿಳಿದಿರುವ ಉತ್ಸಾಹಗಳಲ್ಲಿ ಒಂದಾಗಿದೆ.

ಆಕೆಯ ಗೋಲ್ಡನ್ ಪೇಯಲ್ಸ್ ಇಂಡಿಯನ್ ಸಿಟಿ:- ಮುಂಬೈಸಿಟಿ, ಮತ್ತು ನ್ಯೂಯಾರ್ಕ್

ಇಷ್ಟವಾದ ಬಣ್ಣ – ಬಿಳುಪು

ಜುವೆಲರಿ:- ಡೈಮಂಡ್ಸ್

ಹಬ್ಬ : ದೀಪಾವಳಿ

ಲತಾ ಮಂಗೇಶ್ಕರ್ ಜೀವನ ಚರಿತ್ರೆ ‘ಹಾಡು ಹಕ್ಕಿಯ ಹೃದಯಗೀತೆ” ಎಂಬ ಪುಸ್ತಕ :

ಕರ್ನಾಟಕದ ಸುಪ್ರಸಿದ್ಧ ಕನ್ನಡ ಪತ್ರಿಕೆ ‘ವಿಜಯ ಕರ್ನಾಟಕ ಸುದ್ದಿ ಸಂಪಾದಕ, ವಸಂತ ನಾಡಿಗೇರ’ ಬರೆದಿರುವ ಲತಾ ಮಂಗೇಶ್ಕರ್ ಜೀವನ ಚರಿತ್ರೆ ‘ಹಾಡು ಹಕ್ಕಿಯ ಹೃದಯಗೀತೆ” ಪುಸ್ತಕವು ಡಾ. ಎಸ್ ಪಿ. ಬಾಲಸುಬ್ರಹಮಣ್ಯಮ್ ಲೋಕಾರ್ಪಣೆ ಮಾಡಿದ್ದರು.

ತಮ್ಮ ಒಡಹುಟ್ಟಿಟಿವರೊಂದಿಗೆ ಲತಾ

‘ಹಾಡು ಹಕ್ಕಿಯ ಹೃದಯಗೀತೆ’ಯ ಸುತ್ತ ಮುತ್ತ.. * ಈ ಪುಸ್ತಕವು ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ. ಲತಾ ಮಂಗೇಶ್ಕರ್ ಅವರ ಜೀವನ ಚರಿತ್ರೆ ಕುರಿತಾದ, ದಕ್ಷಿಣ ಭಾರತದ ಮೊದಲ ಪುಸ್ತಕ ಇದು. *ಇದು ವಿಜಯಕರ್ನಾಟಕದಲ್ಲಿ 50 ವಾರ ಪ್ರಕಟವಾದ ಲೇಖನ ಮಾಲಿಕೆಯ ಸಂಗ್ರಹ. ಲೇಖನಗಳನ್ನು ಪರಿಷ್ಕರಿಸಿ, ಸಾಕಷ್ಟು ಬಿಗಿಗೊಳಿಸಿ, ಅಪ್‌ಡೇಟ್ ಮಾಡಿ, ಹೆಚ್ಚುವರಿ ಹಾಗೂ ಇತ್ತೀಚಿನ ಮಾಹಿತಿಗಳನ್ನು ಸೇರಿಸಿ ಪುಸ್ತಕ ರೂಪದಲ್ಲಿ ತರಲಾಗಿದೆ. *215ಕ್ಕೂ ಮಿಕ್ಕಿ ಪುಟಗಳುಳ್ಳ ಈ ಪುಸ್ತಕವನ್ನು ಸುಮುಖ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಮುನ್ನುಡಿಯಲ್ಲಿ ಲತಾ ಮಂಗೇಶ್ಕರ್ ಅವರ ಒಟ್ಟಾರೆ ವ್ಯಕ್ತಿತ್ವದ ಸ್ಥೂಲ ಚಿತ್ರಣವಿದೆ. ಪುಸ್ತಕವು ಮುಖ್ಯವಾಗಿ ನಾಲ್ಕು ಭಾಗಗಳನ್ನು ಒಳಗೊಂಡಿದೆ.

  1. ಜನನ-ಯೌವನ: ಲತಾ ಮಂಗೇಶ್ಕರ್ ಅವರ ಪೂರ್ವಿಕರು, ಅವರ ತಂದೆ ಹಾಗೂ ಬಾಲ್ಯ ಜೀವನದ ಬಗ್ಗೆ ವಿವರ.
  2. ಸಂಘರ್ಷ-ಉತ್ಕರ್ಷ: ಲತಾ ಅವರು ನಟಿಯಾಗಿ ಚಿತ್ರರಂಗ ಸೇರಿದ್ದು, ಬಳಿಕ ಗಾಯಕಿಯಾಗಿ ನೆಲೆಯೂರಲು ನಡೆಸಿದ ಸಂಘರ್ಷ. ಜನಪ್ರಿಯ ಗಾಯಕಿಯಾಗಿದ್ದು, ಹಲವು ಸಂಗೀತ ನಿರ್ದೇಶಕರೊಟ್ಟಿಗೆ ಕಾರ್ಯ ನಿರ್ವಹಣೆ, ಕೆಲವರೊಡನೆ ವೃತ್ತಿ ಸಂಬಂಧ ಮತ್ತು ವಿರಸ, ಗಾಯಕರು ಹಕ್ಕುಗಳಿಗಾಗಿ ವಿಶೇಷವಾಗಿ ಸಂಭಾವನೆ ವಿಚಾರದಲ್ಲಿ ಹೋರಾಟ, ಲತಾ ಅನುಭವಿಸಿದ ಒತ್ತಡ-ಪ್ರಭಾವ ಮತ್ತು ಆರೋಪ-ಅಪವಾದಗಳ ಬಗ್ಗೆ ಪುಸ್ತಕದಲ್ಲಿ ಮಾಹಿತಿಗಳಿವೆ.
  3. ಮನೆ-ಮನ:

ಲತಾ ಅವರು ಹಲವು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕೆಲವು ಹಾಡುಗಳನ್ನು ಇಷ್ಟಪಟ್ಟಿದ್ದಾರೆ. ಒಂದೊಂದು ಹಾಡಿಗೂ ಒಂದೊಂದು ಕಥೆ ಇರುವುದನ್ನು ಹೇಳಿದ್ದಾರೆ. ಅದರ ವಿವರ ಜತೆಗೆ ಅವರ ಮನೆ ಬಗ್ಗೆ ಮಾಹಿತಿ..

  1. ಲತಾ-ಜೀವಂತ ದಂತ ಕಥಾ: ಲತಾ ಅವರ ಕೆಲವು ವೈಯಕ್ತಿಕ ಆಸಕ್ತಿಗಳು, ಹವ್ಯಾಸಗಳು, ವ್ಯಕ್ತತ್ವ ಕುರಿತ ವಿವರಗಳಿವೆ.
  2. ಲತಾ ಕುರಿತ ಈ ವಿಷಯಗಳು ಗೊತ್ತಾ? : ಲತಾ ಅವರು ಹಾಡಿರುವ ಗೀತೆಗಳು, ಯುಗಳ ಗೀತೆ, ಕೆಲವು ಸ್ವಾರಸ್ಯಕರ ಸಂಗತಿಗಳ ವಿವರಗಳು ಪುಸ್ತಕದಲ್ಲಿ ಇವೆ.

ಪ್ರಶಸ್ತಿ ಗೌರವ ಸನ್ಮಾನಗಳು :

ಲತಾ ಮಂಗೇಶ್ಕರ್ ಅವರು ಅಸಂಖ್ಯಾತ ಪ್ರಶಸ್ತಿಗಳೊಂದಿಗೆ ಗೌರವಿಸಲ್ಪಟ್ಟಿದ್ದಾರೆ ಆದರೆ ವಿಶೇಷವಾದ ಉಲ್ಲೇಖಕ್ಕೆ ಅರ್ಹರೆಂದರೆ ಅವರು ಭಾರತದಲ್ಲಿನ ಶ್ರೇಷ್ಠ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಪಡೆದ ಎರಡನೇ ಗಾಯಕಿಯಾಗಿದ್ದಾರೆ. ಮೊದಲನೆಯವರು ಡಾ. ಎಂ. ಎಸ್. ಸುಬ್ಬಲಕ್ಷ್ಮಿಯವರು.
ಅವರು ಮೂರು ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಎಂಟು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ, ನಂತರ ಅವರು ಹೊಸ ಪ್ರತಿಭೆಗಳನ್ನು ಉತ್ತೇಜಿಸುವ ಸಲುವಾಗಿ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದರು. ಅವರು ಹಿಂದಿ ಚಲನಚಿತ್ರಗಳಿಗೆ ಆಗೊಮ್ಮೆ ಈಗೊಮ್ಮೆ ಹಾಡುವುದನ್ನು ಮುಂದುವರೆಸುತ್ತಾರೆ ಮತ್ತು ಲೈವ್ ಪ್ರದರ್ಶನ ನೀಡುತ್ತಾರೆ. ನಿಜವಾಗಿಯೂ ಜೀವಂತ ದಂತಕಥೆಯಾಗಿರುವ ಲತಾ ಮಂಗೇಶ್ಕರ್ ರವರ ಕ್ಷೇತ್ರದಲ್ಲಿ ಸರಿಸಾಟಿಯಾಗಿ ಯಾರೂ ನಿಲ್ಲಲಾಗಲಿಲ್ಲ.

ಫಿಲ್ಮ್‌ಫೇರ್ ಪ್ರಶಸ್ತಿಗಳು (1958, 1962, 1965, 1969, 1993 ಮತ್ತು 1994)

ಫಿಲ್ಮ್‌ಫೇರ್ ಪ್ರಶಸ್ತಿಗಳು (1958, 1962, 1965, 1969, 1993 ಮತ್ತು 1994)

ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ : (1966 ಮತ್ತು 1967)

ಇತರ ಪ್ರಶಸ್ತಿಗಳು :

1969 – ಪದ್ಮಭೂಷಣ
1974 – ವಿಶ್ವದ ಗರಿಷ್ಠ ಸಂಖ್ಯೆಯ ಹಾಡುಗಳನ್ನು ಹಾಡಿದ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ.
1989- ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
1993 – ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ
1996 – ಸ್ಟಾರ್ ಸ್ಕ್ರೀನ್ ಜೀವಮಾನ ಸಾಧನೆ ಪ್ರಶಸ್ತಿ
1997 – ರಾಜೀವ್ ಗಾಂಧಿ ಪ್ರಶಸ್ತಿ
1999 – ಎನ್‌ಟಿಆರ್ ಪ್ರಶಸ್ತಿ
1999 – ಪದ್ಮ ವಿಭೂಷಣ
1999 – ಜೀವಮಾನ ಸಾಧನೆಗಾಗಿ ಜೀ ಸಿನಿ ಪ್ರಶಸ್ತಿ
2000 – 2000 ರಲ್ಲಿ ಲಂಡನ್‌ನ ಅತ್ಯುತ್ತಮ ಸಾಧನೆಗಾಗಿ 20 ಸಿಂಗರ್‌ನಿಂದ ಲಂಡನ್‌ನ ಐ. ಐ. ಎಫ್‌. ಎ. ಲೈಫ್‌ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ, ಹೀರೋ ಹೋಂಡಾ ಮತ್ತು ನಿಯತಕಾಲಿಕೆ “ಸ್ಟಾರ್ಡಸ್ಟ್”
2001 ರಿಂದ ಮಿಲೇನಿಯಮ್ (ಸ್ತ್ರೀ) – ಭಾರತ ರತ್ನ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ
2001 – ನೂರ್ಜೆಹಾನ್ ಪ್ರಶಸ್ತಿ
2001 – ಮಹಾರಾಷ್ಟ್ರ ರತ್ನ ಪ್ರಶಸ್ತಿ.

ನಟಿ ಮತ್ತು ಗಾಯಕಿಯಾಗಿ..ಏಕ್ ಥಿ ಲಡ್ಕಿ, ಪಂಜಾಬಿ (೧೯೪೯) ಲಾರು ಲಪ್ಪ, ಲಾರಾ ಲಪ್ಪ,

*ಝಣಾಕ್ ಝನಕ್ ಪಾಯಲ್ ಬಾಜೇ, ೧೯೫೫

*ಸೀಮಾ (೧೯೫೫) ಮನ್ ಮೋಹನಾ ಬಡೇ

*ಆಜಾದ್ ೧೯೫೫ ನಾ ಬೋಲೇ, ನಾ ಬೋಲೇ, ನಾ ಬೋಲೆರೆ

*ರಸಿಕ ಬಲಮ ೧೯೫೬

*ಆ ಜಾರೇ ಪರದೇಸೀ ಮಧುಮತಿ, ೧೯೫೮

*ಮೇರಾ ಸಾಯ, ಶಂಕರ್ ಜೈ ಕಿಶನ್ ಸಂಗೀತ, (೧೯೬೦)

*ಪರಖ್ ಓ ಸಜನಾ ಸಲೀಲ್ ಚೌಧರಿ (೧೯೬೦)

*ನೈನಾ ಬರ್ಸೆ ರಿಂ ಜಿಮ್ ಒಹ್ ಕೌನ್ ಥಿ (೧೯೬೪)

*ಆಜ್ ಫಿರ್ ಜಿನೇಕಾ ಇರಾದಾ ಹೈ ೧೯೬೫ ಗೈಡ್

*ಕೋರಾ ಕಾಗಸ್ (೧೯೬೯) ಆರಾಧನಾ

*ಇನ್ ಹಿ ಲೋಗೋಂ ನೇ ಪಾಕೀಜಾ (೧೯೭೨)

*ಏಕ್ ಪ್ಯಾರ್ ಕ ನಗ್ಮಾ ಹೈ ಶೋರ್ (೧೯೭೨)

*ಫೋಟೋ ಮೇ ಐಸಿ ಬಾತೇ

*ತೇರೇ ಬಿನಾ ಜಿಂದಗೀ ೧೯೭೫ ಆಂಧಿ

ನೈನಾ ಬರ್ಸೆ ರಿಂ ಜಿಮ್ ಒಹ್ ಕೌನ್ ಥಿ (೧೯೬೪)

ಇನ್ ಹಿ ಲೋಗೋಂ ನೇ ಪಾಕೀಜಾ (೧೯೭೨)

ಏಕ್ ಪ್ಯಾರ್ ಕ ನಗ್ಮಾ ಹೈ ಶೋರ್ (೧೯೭೨)
ಮೇರಾ ಸಾಯ, ಶಂಕರ್ ಜೈ ಕಿಶನ್ ಸಂಗೀತ, (೧೯೬೦)

ಪರಖ್ ಓ ಸಜನಾ ಸಲೀಲ್ ಚೌಧರಿ (೧೯೬೦)

ರಸಿಕ ಬಲಮ ೧೯೫೬

ಝಣಾಕ್ ಝನಕ್ ಪಾಯಲ್ ಬಾಜೇ, ೧೯೫೫

ಸೀಮಾ (೧೯೫೫) ಮನ್ ಮೋಹನಾ ಬಡೇ

ಆಜಾದ್ ೧೯೫೫ ನಾ ಬೋಲೇ ನಾ ಬೋಲೇ ನಾ ಬೋಲೆರೆ

ಏಕ್ ಥಿ ಲಡ್ಕಿ, ಪಂಜಾಬಿ (೧೯೪೯)ಲಾರು ಲಪ್ಪ, ಲಾರಾ ಲಪ್ಪ,

ಫೋಟೋ ಮೇ ಐಸಿ ಬಾತೇ

ತೇರೇ ಬಿನಾ ಜಿಂದಗೀ ೧೯೭೫ ಆಂಧಿ

ಕೋರಾ ಕಾಗಸ್ (೧೯೬೯) ಆರಾಧನಾ

ಆಜ್ ಫಿರ್ ಜಿನೇಕಾ ಇರಾದಾ ಹೈ ೧೯೬೫ ಗೈಡ್

ಲತಾ ಮಂಗೇಶ್ಕರ್-ಜಿ ಅವರು 1974 ರಿಂದ 1991 ರವರೆಗೆ ವಿಶ್ವದ ಅತಿ ಹೆಚ್ಚು ರೆಕಾರ್ಡಿಂಗ್ ಮಾಡಿದ ‘ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌’ನಲ್ಲಿ ಕಾಣಿಸಿಕೊಂಡಿದ್ದಾರೆ. ಲತಾ-ಜಿ ಅವರನ್ನು ವಿಶ್ವ ಖ್ಯಾತಿಯ ಪ್ರಸಿದ್ಧ ಗಾಯಕಿಯನ್ನಾಗಿ ಮಾಡುವ ಗ್ರಹಗಳ ಸ್ಥಾನಗಳ ವಿಶ್ಲೇಷಣೆಯನ್ನು ಜ್ಯೋತಿಷಿಯೊಬ್ಬರು ಮಾಡಿದ್ದರು. ಅದರ ವಿವರಣೆಗಳು ಕೆಳಗಿನಂತಿವೆ.

ಯಾವುದೇ ವ್ಯಕ್ತಿಯ ಜಾತಕದಲ್ಲಿ, 2 ನೇ ಮನೆಯು ನಮ್ಮ ಧ್ವನಿ ಮತ್ತು ಮೌಖಿಕ ಕೌಶಲ್ಯಗಳನ್ನು ನಿಯಂತ್ರಿಸುತ್ತದೆ, ಇದು ಯಶಸ್ವಿ ಗಾಯಕ, ಟಿವಿ, ಸ್ಪೀಕರ್, ಆಂಕರ್, ನಿರೂಪಕ, ಉಪನ್ಯಾಸಕ ಇತ್ಯಾದಿಯಾಗಲು ಅತ್ಯಂತ ನಿರ್ಣಾಯಕವಾಗಿದೆ. ಲತಾ ಮಂಗೇಶ್ಕರ್ ಜಾತಕದ ಗ್ರಹಕೂಟಗಳು ಅದನ್ನೇ ಪ್ರತಿನಿಧಿಸುತ್ತಿದ್ದವು.

ಅವರ ಮೊದಲ ಹಿಂದಿ ಹಾಡು- ಮಾತಾ ಏಕ್ ಸಪೂತ್ ಕಿ ದುನಿಯಾ ಬದಲ್ ದೇತು 1943 ರಲ್ಲಿ ಮರಾಠಿ ಚಿತ್ರ-ಗಜಾಭಾವು. ಲತಾ ಜಿ 1945 ರಲ್ಲಿ ಮುಂಬೈಗೆ ಬಂದು ನೆಲಸಿದರು. ಮಾಸ್ಟರ್ ವಿನಾಯಕ್ ಅವರ ಮೊದಲ ಹಿಂದಿ ಚಿತ್ರ- ಬಡಿ ಮಾ (1945) ನಲ್ಲಿ ಅವರು ತಮ್ಮ ಸಹೋದರಿ ಆಶಾರೊಂದಿಗೆ ಸಣ್ಣ ಪಾತ್ರವನ್ನು ನಿರ್ವಹಿಸಿದರು.

ಲತಾ ಮಂಗೇಶ್ಕರ್ ಎಷ್ಟು ಬೇಡಿಕೆಯ ಗಾಯಕಿಯಾಗಿದ್ದರೆಂದರೆ, ಅವರ ಮಧುರ ಕಂಠದ ಹಾಡುಗಳು ಯಾವುದೇ ಭಾಷೆಯ ಚಿತ್ರದ ಗಲ್ಲ ಪೆಟ್ಟಿಗೆಯಲ್ಲಿ ಯಶಸ್ಸು ಕಾಣುವಲ್ಲಿ ಪ್ರಧಾನ ಪಾತ್ರವಹಿಸುತ್ತಿದ್ದವು. ಎಷ್ಟೋ ನಿರ್ಮಾಪಕ ನಿರ್ದೇಶಕರು ಆ ದಿನದ ಸುಪ್ರಸಿದ್ಧ ಜ್ಯೋತಿಷಿಗಳನ್ನು ಸಂಪರ್ಕಿಸಿ, ಲತಾ ದೀದಿಯವರ ಜಾತಕದ ಗ್ರಹಕೂಟಗಳ ನಿಶ್ಲೇಷಣೆ ಮಾಡಿಸಿ ಅರಿಯುವ ಸಾಹಸಮಾಡಿದ್ದರು.

ಆಗ ಹಿಂದಿ ಚಿತ್ರರಂಗದಲ್ಲಿ ಮುಂಚೂಣಿಯಲ್ಲಿದ್ದ ನಟರು, ಪೃಥ್ವಿರಾಜ ಕಪೂರ್, ಮದನ್ ಪುರಿ, ಸೈಯದ್ ಮೋದಿ, ದಿಲೀಪ್ ಕುಮಾರ್, ದೇವಾನಂದ್

ಕೆ. ಎಲ್. ಸೈಗಾಲ್, ಸಿ. ಎಚ್. ಆತ್ಮ,ಮೊದಲಾದ ಹಾಡುಗಾರರು ಭಾರತೀಯ ಫಿಲಂ ಸಂಗೀತದಲ್ಲಿ ಮನೆಮಾತಾಗಿದ್ದರು. ನೂರ್ ಜೇಹಾನ್, ಗಾಯಕಿಯಾಗಿ.

ಆ ಕಾಲದ ಅತ್ಯಂತ ಹೆಸರು ಗಳಿಸಿದ್ದ ವಿವಿಧ ಸಂಗೀತ ನಿರ್ದೇಶಕರು :

ಅನಿಲ್ ಬಿಸ್ವಾಸ್, ಶಂಕರ್ ಜೈಕಿಶನ್, ಎಸ್‌. ಡಿ ಬರ್ಮನ್, ಖಯ್ಯಾಮ್, ಇತ್ಯಾದಿ ಸಂಯೋಜಿಸಿದ, ಗೀತೆಗಳನ್ನು ಹಾಡುವ ಅವಕಾಶ ಲತಾ ಮಂಗೇಶ್ಕರ್ ಅವರ ಪಾಲಿಗೆ ಒದಗಿ ಬಂತು.
.
1958 ರಲ್ಲಿ ‘ಮಧುಮತಿ’ ಚಿತ್ರದ ಸಂಯೋಜನೆ ‘ಆಜಾ ರೆ ಪರದೇಸಿ’ ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಾಗ ಅವರ ಚಲನ ಚಿತ್ರ ವೃತ್ತಿಜೀವನದಲ್ಲಿ ಹೊಸಮೈಲಿಗಲ್ಲನ್ನು ಸ್ಥಾಪಿಸಿದಷ್ಟು ಮಹತ್ವದ ಏರಿಕೆಯಾಗಿತ್ತು.

1960 ರ ದಶಕವು ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಎಂಬ ಸೂಪರ್‌ಹಿಟ್ ಗೀತೆಯೊಂದಿಗೆ ಲತಾ ದೀದಿ ಯವರ ಅಬ್ಬರದ ಕೆರಿಯರ್ ಪ್ರಾರಂಭವಾಯಿತು, ನಂತರ ಅದೇ ವರ್ಷ ‘ದಿಲ್ ಅಪ್ನಾ ಔರ್ ಪ್ರೀತ್ ಪರಾಯಿ’ ನಿಂದ ಮತ್ತೊಂದು ಆತ್ಮೀಯ ಸಂಖ್ಯೆಯಾದ ‘ಅಜೀಬ್ ದಸ್ತಾನ್ ಹೈ ಯೆ’ ಗೀತೆಯ ಪ್ರಸ್ತುತಿ ಬಹಳ ಖ್ಯಾತಿ ಪಡೆಯಿತು.

೧೯೮೦ ರಲ್ಲಿ, ಅಮೇರಿಕಾದಲ್ಲಿ ‘ಸಿಲ್ಸಿಲಾ’ ಚಿತ್ರದ ಹಾಡನ್ನು ಲತಾಮಂಗೇಶ್ಕರ್ ದೀದಿಯವರು, ಅಮಿತಾಬ್ ಬಚ್ಚನ್ ಒಟ್ಟಿಗೆ ಪ್ರಸ್ತುತಪಡಿಸಿದಾಗ ಅಲ್ಲಿನ ಜನ ಬಹಳ ಸಂತೋಷಪಟ್ಟರು.

ಚಲನಚಿತ್ರ ಗಾಯಕಿಯಾಗಿ ಮುಂಬಯಿ ಬಾಲಿವುಡ್ ಸಿನಿಮಾ ರಂಗದಲ್ಲಿ ಬಹುದೊಡ್ಡ ಛಾಪು ಮೂಡಿಸಿದ್ದರು ಮತ್ತೊಂದು ಮರೆಯಲಾರದ ಉಪಲಬ್ಧಿ ಎಂದರೆ, 1963 ರಲ್ಲಿ ಜವಾಹರಲಾಲ್ ನೆಹರು ಅವರ ಸಮ್ಮುಖದಲ್ಲಿ ಲತಾರವರು, ದೇಶಭಕ್ತಿ ಗೀತೆ ‘ಏ ಮೇರೆ ವತನ್ ಕೆ ಲೋಗೋ’ ಅನ್ನು ಹಾಡಿದಾಗ, ಪ್ರಧಾನಿ ಜವಾಹರ್ಲಾಲ್ ನೆಹರು ಕಣ್ಣೀರು ಹಾಕಿದರು.

ಗಾಯಿಕಾ : ಲತಾ ಮಂಗೇಶ್ಕರ್

ಸಂಗೀತ ರಚನೆ : ಸಿ. ರಾಮಚಂದ್ರ.

ಬರೆದವರು – ಕವಿ ಪ್ರದೀಪ್

ಗೀತೆಯ ಸಾಲುಗಳು ಹೀಗಿದ್ದವು :

‘Aye mere watan ke logon
tum khub lagaa lo naaraa
ye shubh din hai hum sab kaa
leharaa lo tirangaa pyaaraa
par mat bhulo siimaa par
veeron ne hai praan ganwaae
kuchh yaad unhein bhi kar lo
kuchh yaad unhein bhi kar lo
jo lauT ke ghar na aaye
jo lauT ke ghar na aaye’

‘ಲತಾ ದೀದಿ ಯವರ ವೈಯಕ್ತಿಕ ಜೀವನ ಮತ್ತು ಪರಂಪರೆ’ :

ಲತಾ ಮಂಗೇಶ್ಕರ್ ಅವರು ಎಂದಿಗೂ ಮದುವೆಯಾಗಿಲ್ಲ. ಅವರು ತಮ್ಮ ವೈಯಕ್ತಿಕ ಜೀವನವನ್ನು ರಹಸ್ಯವಾಗಿಡಲು ಇಷ್ಟ ಪಡುತ್ತಾರೆ. ಹಿರಿಯ ಮಗಳಾಗಿ ಜನಿಸಿದ ಲತಾ ಮಂಗೇಶ್ಕರ್, ಯಾವಾಗಲೂ ತನ್ನ ಕಿರಿಯ ಸಹೋದರಿಯರು ಮತ್ತು ಸಹೋದರನೊಂದಿಗೆ ನಿಕಟ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಅಡುಗೆ, ಓದು, ಛಾಯಾಗ್ರಹಣ ಮತ್ತು ಕ್ರಿಕೆಟ್ ಆಟದಲ್ಲಿ ಲತಾಮಂಗೇಶ ರಿಗೆ ಬಹಳ ಆಸಕ್ತಿ.

ಟ್ರಿವಿಯಾ :

ಈ ಹೆಸರಾಂತ ಭಾರತೀಯ ಗಾಯಕಿಯ ಗೌರವಾರ್ಥವಾಗಿ 1999 ರಲ್ಲಿ ‘ಲತಾ ಈವ್ ಡಿ ಪರ್ಫಮ್’ ಎಂಬ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಲಾಯಿತು.

ಲತಾ ಮಂಗೇಶ್ಕರ್ ಹಾಗೂ ರಾಜ್ ಸಿಂಗ್ ಡೊಂಗರ್ ಪುರ್ ನಡುವಿನ ಸಂಬಂಧ :

ಹೃದಯನಾಥ ಮಂಗೇಶ್ಕರ್ ಲತಾ ದೀದಿಯವರ ಸೋದರ, ಹಾಗೂ ರಾಜಸಿಂಗ್ ರವರ ಆಪ್ತ ಗೆಳೆಯ. ರಾಜ್ ಸಿಂಗ್ ಡೊಂಗರ್ ಪುರ್ ಕ್ರಿಕೆಟ್ ಆಡಲು (ರಾಜಸ್ಥಾನದ ರಾಜಕುಮಾರ. ರಾಜ್ ಸಿಂಗ್ ಡೊಂಗರ್ಪುರ್, ೧೯೫೯ ರಲ್ಲಿ ಬೊಂಬಾಯಿಗೆ ಬಂದರು. BCCI ಅಧ್ಯಕ್ಷರಾಗಿದ್ದರು.) ವಾಲ್ಕೇಶ್ವರ್ ಮನೆಗೆ ಬರುತ್ತಿದ್ದರಂತೆ. ೫ ಅಡಿ ಒಂದು ಅಂಗುಲ ಎತ್ತರವಿದ್ದ (೧. ೫೫. ಮೀ) ಗೌರವರ್ಣದ ಲತಾ ಮಂಗೇಶ್ಕರ್ ಅಕ್ಕ, ಆ ಸಮಯದಲ್ಲಿ ಸಹಜವಾಗಿ ರಾಜ್ ಸಿಂಗ್ ರವರ ಜತೆ ಹೆಚ್ಚು ನಿಕಟವಾದರು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿ-ಗೌರವಗಳಿಂದ ಕಾಣುತ್ತಿದ್ದರು. ವಿವಾಹವಾಗುವ ಬಗ್ಗೆ ಮಾತು ಮುಂದುವರೆದಾಗ, ರಾಜ್ ಸಿಂಗ್ ರವರ ಮನೆಯವರು ಒಬ್ಬ ಸಾಮಾನ್ಯ ಹುಡುಗಿಯನ್ನು ತಮ್ಮ ಸೊಸೆಯನ್ನಾಗಿ ಪರಿಗ್ರಹಿಸಲು ಸಿದ್ಧರಿರಲಿಲ್ಲ. ಈ ಕಾರಣಗಳಿಂದ ರಾಜ್ ಸಿಂಗ್ ತಮ್ಮ ಜೀವನದಲ್ಲಿ ವಿವಾಹವಾಗದೇ ಹಾಗೆಯೆ ಉಳಿದರು. ಲತಾರವರು ಸಹಿತ. ಮುಂದೆ ಲಂಡನ್ ನಲ್ಲಿ ಆಲ್ಬರ್ಟ್ ಹಾಲ್ ನಲ್ಲಿ ಚಾರಿತ್ರಿಕ ಹಾಡುಗಾರಿಕೆ ಕಾರ್ಯಕ್ರಮ ಆಯೋಜಿಸಿದ್ದಾಗ, ರಾತ್ರಿ ಒಂದು ಹೋಟೆಲ್ಲಿನಲ್ಲಿ ಅವರಿಬ್ಬರೂ ಒಟ್ಟಿಗೆ ತಂಗಿದ್ದರು. ಮಧ್ಯರಾತ್ರಿ ಅವರಿಗೆ ಫೋನ್ ಕಾಲ್ ಬಂತು. ಭಾರತದೇಶದ ಸರ್ವೋಚ್ಚ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಬಗ್ಗೆ ಗೊತ್ತಾದ ಸಮಾಚಾರವನ್ನು ರಾಜ್ ಸಿಂಗ್ ರವರ ಹತ್ತಿರದ ಬಂಧು, ರಚನಾ ತಿಳಿಸಿದಳು. ಈ ವಿಚಾರವನ್ನು ರಾಜಸಿಂಗ್ ಡೊಂಗರ್ ಪುರ್ ರವರು, ಲಂಡನ್ ನ ಪ್ರತಿಷ್ಠಿತ ಪತ್ರಿಕೆ ‘The Guardian’ ಕೊಟ್ಟ ಇಂಟರ್ವ್ಯೂ ನಲ್ಲಿ ಬಹಿರಂಗ ಪಡಿಸಿದರು.

ರಾಜ್ಸಿಂಗ್ ಡೊಂಗರ್ಪುರ್ : ಲತಾಜೀ, ‘ನಿಮಗೆ ಭಾರತ ರತ್ನ ಸಿಕ್ಕಿದ್ದಕ್ಕೆ ಹೇಗನ್ನಿಸುತ್ತದೆ’ ?
ಲತಾ ಮಂಗೇಶ್ಕರ್ : ‘ತಾವ್ ಕೇಳ್ತಿರೋದ್ರಿಂದ ಹೇಳ್ತಿದ್ದೇನೆ’ ; ‘ನನಗೆ ಬಹಳಾನೇ ಸಂತೋಷ ಆಗ್ತಿದೆ.’

೧೨, ಸೆಪ್ಟೆಂಬರ್ ೨೦೦೯ ರಲ್ಲಿ ರಾಜ್ಸಿಂಗ್ ಡೊಂಗರ್ಪುರ್, Alzheimer’s disease (ಮರೆಗುಳಿ ಬೇನೆ) ಕಾಯಿಲೆಯಿಂದ ಬಳಲುತ್ತಿದ್ದು ನಿಧನರಾದರು.
ಲತಾಮಂಗೇಶ್ಕರ್, ಮ್ಯೂಸಿಕ್ ನಿರ್ದೇಶಕ ಚಿತ್ರನಿರ್ಮಾಪಕ, ಶ್ರೀ. ಹೃಷಿಕೇಶ್ ಮುಖರ್ಜಿಯವರ ಯಾವುದೇ ಚಿತ್ರದ ಗೀತೆಯನ್ನು ಹಾಡಿದ್ದಕ್ಕೆ ಹಣ ತೆಗೆದುಕೊಳ್ಳಲಿಲ್ಲ.

ಲತಾಮಂಗೇಶ್ಕರ್ ಪರಿವಾರ ಮಾಡಿದ ದಾನ ಧರ್ಮಗಳು :

ಭಾರತ ರತ್ನ, ಶ್ರೀಮತಿ ಲತಾ ಮಂಗೇಶ್ಕರ್ ರವರು ಜಮ್ಮು ಕಾಶ್ಮೀರದ ಪುಲ್ವಾಮಾ ಆತಂಕಿ ಹಮ್ಲಾ ನಲ್ಲಿ ಮರಣಿಸಿದ ಹುತಾತ್ಮರಿಗಾಗಿ CRPF jawans ಪರಿವಾರಕ್ಕೆ ೧ ಕೋಟಿ ಹಣವನ್ನು ದಾನ ಮಾಡಿದ್ದಾರೆ. ೭ ಲಕ್ಷ ರೂಪಾಯಿಗಳನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಕೋವಿಡ್-೧೯ ರಿಲೀಫ್ ಫಂಡ್ ಗೆ ದಾನಮಾಡಿದ್ದಾರೆ. ಲತಾದೀದಿ ಯವರ ಮೊಮ್ಮಗ, ಚಿ. ಆದಿನಾಥ್ ೧೧ ಲಕ್ಷ ರೂಪಾಯಿಗಳನ್ನು ತನ್ನ ಪರಿವಾರದಿಂದ ‘ಬಿ. ಎಸ್. ಎಫ್. ಜವಾನ್ಸ್ ನಿಧಿ’ಗೆ ದಾನ ಮಾಡಿದ್ದಾರೆ.

ಲತಾ ದೀದಿಯೋರ್ನ ಲತಾ ಜಗತ್ಕರ್ ಅಂತ್ನ್ದರ ಹ್ಯಾಂಗ ?

ಲತಾಮಂಗೇಶ್ಕರ್ ಅವರ್ನ್ ಜಗತ್ಕರ್, ಅಂತ ಕರ್ದ್ರೆ ಹೆಂಗ ಅನ್ನಸ್ತದ ? ಮೊದ್ಲು ಇಂದೂರ್ಕರ್ ಆದ್ರು. ಆಮ್ಯಾಲೆ ಮಂಗೇಶ್ಕರ್ ! ‘ಹೆಣ್ಣು ಅಬಲೆ ಅನ್ನೋ ಮಾತ್ನ ಅವರು ಸುಳ್ಮಾಡ್ಬಿಟ್ಯಾರ್ ನೋಡ್ರಿ’ . ‘ಇವತ್ನ್ವರ್ಗು ಅವ್ರು ಒಬ್ರೇ ಬಾಲಿವುಡ್ ನ ಎದ್ರಿಸಿ ತಮ್ ಛಾಪ್ಮೂಡ್ಸಿದಾರ್ರೀ. ವಿಜೃಂಭಿಸ್ದಾರ್ರಿ ಅಂದ್ರ ಖರೆ ಅನ್ನಸ್ತದೆ. ನೂರಾರು ಹೆಣಮಕ್ಳಿಗೆ ದಾರಿತೋರ್ಸಿ ನೆರ್ವಾಗಿದಾರ್ರಿ. ಒಂದ್ ಕಾಲ್ದಾಗೆ ಹಾಡೋ ಮಂದಿನ ಯಾರ್ಕೇಳ್ತಿದ್ರಿ. ನಾಯ್ಕ, ನಾಯ್ಕಿ, ಸಂಗೀತ್ನಿರ್ದೇಶಕ ಅಷ್ಟೇ. ದೀದಿ ಸುಮ್ನಿರೋ ಮಂದಿ ಅಲ್ರಿ. ಪ್ರತಿಭಟನೆ ನಡ್ಸಿ, ಮಂದೀನ ಮೆಚ್ಸಿ, ಹಾಡೋರ್ ಹೆಸರ್ನ ಗ್ರಾಮಫೋನ್ ಪ್ಲೇಟ್ ಮ್ಯಾಲ ಬರೋ ಹಂಗ್ ಮಾಡ್ಬಿಟ್ರು. ಹಾಲಿವುಡ್ ನಾಗೇ ಹಾಡ್ ಹೇಳೋರ್ ಹೆಸರ್ನ ಹಾಕೋ ಪ್ರಥ ಇಲ್ರಿ; ಅಂತ ಒಬ್ ಹಿರಿ ಮನ್ಶ್ಯಾ ಸುಳ್ಳುಸುಳ್ಳು ಹೇಳ್ ಬಿಟ್ರು, ನೋಡ್ರಿ. ಆದ್ರೆ ಬಾಯರ್ಗೆ ಗೊತ್ತಿಲ್ಲೇನು ? ಅಲ್ಲೆಲ್ ಐತ್ರಿ ಹಾಡ್ ಹೇಳೋಸಿಸ್ಟಮ್ ? ಇಲ್ನೋಡ್ರಿ, ಒಂದೊಂದ್ ಸಿನ್ಮಾದಾಗೆ ೮-೧೦ ಹಾಡಿದ್ವು ಒಂದ್ ಕಾಲ್ದಾಗ, ನಮ್ ಗೊತ್ತೈತ್ರಿ ಸಾಹೇಬ್ರೇ, ಅಂತ್ಹೇಳಿ ಬಾಯ್ ಮುಚ್ಚಿಸಿದ್ಮೇಲ, ಎಲ್ರಿಗೂ ರಾಯಲ್ಟಿ ಸಿಗೋ ಹಂಗ್ ಮಾಡಕ್ಕೆ ಅವ್ರು ಹೊಡ್ಡಾಡಿದ್ ಎಷ್ಟು ಅಂತೀರಿ’ ? ನಮ್ಮ ಮದ್ವಿ ಆರತಕ್ಷತೆ ದಿನ (ಎಚ್.ಆರ್.ಎಲ್. ಅನುಭವ) ಅವತ್ತಿಂದ್ದಿನ ಒಬ್ ನಮ್ಮನಿ ಹುಡ್ಗಿ, ಲತಾ ದೀದಿ ಹಾಡಿದ್ಹಾಡು ‘ಏಕ್ ಪ್ಯಾರ್ ಕ ನಗ್ಮಾ ಹೈ ‘ಹಾಡ್ಹೇಳಿ, ಒಂದ್ ವಿಕ್ರಮ ಮಾಡ್ಬಿಟ್ಲು ನೋಡ್ರಿ. ನಾನ್ ಅವತ್ನಿಂದ ದೀದಿಯೂರ್ ಫ್ಯಾನ್ಆಗ್ಬಿಟ್ಟೆ ಅಂತ್ ಅನ್ನಿಸ್ಲಿಕ್ ಹತ್ಯಾದ. ಇದಾಗಿದ್ದು ಬೆನ್ಗ್ಳುರ್ನಾಗೆ, ೧೯೭೩ ನಾಗೆ ! –ಎಚ್. ಆರ್. ಎಲ್

ಶ್ರೀ ಎಚ್. ಆರ್. ಎಲ್ ಲೇಖಕರು, ಮುಂಬಯಿ