ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದೊಡ್ಡ ನಿರ್ಧಾರಗಳಿಗೆ ಹೆಸರಾದ ಪುಟ್ಟ ಮನುಷ್ಯ

ಪ್ರೇಮಶೇಖರ
ಇತ್ತೀಚಿನ ಬರಹಗಳು: ಪ್ರೇಮಶೇಖರ (ಎಲ್ಲವನ್ನು ಓದಿ)

ಇಂದು ದೇಶದ ಎರಡನೆಯ ಪ್ರಧಾನಮಂತ್ರಿ ಲಾಲ್ ಬಹಾದುರು ಶಾಸ್ತ್ರಿಯವರ ನೂರಾ ಹದಿನಾರನೇ ಜನ್ಮದಿನ. ಕೇವಲ ಹತ್ತೊಂಬತ್ತು ತಿಂಗಳುಗಳು ಮಾತ್ರ ಪ್ರಧಾನಿಯಾಗಿದ್ದ ಶಾಸ್ತ್ರಿಯವರು ಆ ಸೀಮಿತ ಆವಧಿಯಲ್ಲಿ ದೇಶಕ್ಕೆ ನೀಡಿದ ಕೊಡುಗೆಗಳು ಅಪಾರ. ಶ್ವೇತಕ್ರಾಂತಿಗೆ ನಾಂದಿ ಹಾಡಿದ ಶಾಸ್ತ್ರಿಯವರು ಅಣುಭೌತವಿಜ್ಞಾನಿ ಹೋಮಿ ಜಹಾಂಗೀರ್ ಭಾಭಾರ ಯೋಜನೆಗಳಿಗೂ ಪೂರ್ಣ ಬೆಂಬಲ ನೀಡಿ ಭಾರತ ಅಣ್ವಸ್ತ್ರ ರಾಷ್ಟ್ರವಾಗುವ ಹಾದಿಯಲ್ಲಿ ದಾಪುಗಾಲಿಡುವಂತೆ ಮಾಡಿದರು. ಚೀನಾ 1964ರಲ್ಲಿ ಅಣ್ವಸ್ತ್ರ ಗಳಿಸಿಕೊಂಡ ಹಿನ್ನೆಲೆಯಲ್ಲಲ್ಲಿ ಭಾಭಾ ಮತ್ತು ಶಾಸ್ತ್ರಿಯವರ ಈ ಯೋಜನೆಗಳು ರಾಷ್ಟ್ರದ ರಕ್ಷಣೆಯ ದೃಷ್ಟಿಯಿಂದ ಮಹತ್ವಪೂರ್ಣವಾಗಿದ್ದವು. 1966ರಲ್ಲಿ ಕೆಲವೇ ತಿಂಗಳುಗಳ ಆವಧಿಯಲ್ಲಿ ಈ ಇಬ್ಬರು ಮಹಾನ್ ದೇಶಾಭಿಮಾನಿಗಳನ್ನು ನಾವು ಕಳೆದುಕೊಳ್ಳದೇಹೋಗಿದ್ದರೆ ಅಣ್ವಸ್ತ್ರ ಪರೀಕ್ಷೆಗೆ ಭಾರತ 1974ರವರೆಗೆ ಕಾಯಬೇಕಾಗಿರಲಿಲ್ಲ. ಅಣುಪ್ರಸರಣ ನಿಷೇಧ ಒಪ್ಪಂದ (ಎನ್‌ಪಿಟಿ) ಜಾರಿಯಾಗುವುದಕ್ಕೆ ಮೊದಲೇ ಅಣ್ವಸ್ತ್ರ ಪರೀಕ್ಷೆ ನಡೆಸಿ ಭಾರತ ಅಣ್ವಸ್ತ್ರ ರಾಷ್ಟ್ರಗಳ ಪಟ್ಟಿಗೆ ಅಧಿಕೃತವಾಗಿ ಸೇರಿಹೋಗಿರುತ್ತಿತ್ತು.
ರಾಷ್ಟ್ರದ ಪ್ರಧಾನಮಂತ್ರಿಯಾಗಿ ಶಾಸ್ತ್ರಿಯವರ ಮಹತ್ತರ ಸಾಧನೆಯೆಂದರೆ 1965ರ ಯುದ್ಧದಲ್ಲಿ ದೇಶಕ್ಕೆ ನೀಡಿದ ಧೀಮಂತ ಮತ್ತು ಚಾಣಾಕ್ಷ್ಯ ನಾಯಕತ್ವ.

ಪ್ರಧಾನಮಂತ್ರಿ ಶಾಸ್ತ್ರಿ ಎಂಬ ಹೆಸರು ಮನಸ್ಸಿಗೆ ಬಂದ ಕೂಡಲೇ ಇಂದಿಗೂ ನೆನಪಾಗುವ ಮೊದಲ ಪ್ರಕರಣ ಆ ಯುದ್ಧ. ನೆಹರೂ ನಂತರದ ಭಾರತ ಸಮರ್ಥ ನಾಯಕತ್ವದ ಕೊರತೆಯಿಂದ ನರಳುತ್ತಿದೆ, ಭಾರತವನ್ನು ಮಣಿಸಿ ಕಾಶ್ಮೀರವನ್ನು ಕಬಳಿಸಲು ಇದೇ ಸುಸಮಯ ಎಂದು ನಂಬಿ ಕಾಲು ಕೆರೆದು ಯುದ್ಧವನ್ನಾರಂಭಿಸಿದ ಪಾಕ್ ಸೇನಾಧ್ಯಕ್ಷ ಅಯೂಬ್ ಖಾನ್ ಮೂರೇ ವಾರಗಳಲ್ಲಿ ಕದನವಿರಾಮಕ್ಕಾಗಿ ಬೇಡಿಕೊಳ್ಳುವಂತೆ ಮಾಡಿದವರು ಶಾಸ್ತ್ರಿ. ಆಗಸ್ಟ್ 29, 1965ರಂದು ಯುದ್ಧದ ತಯಾರಿಯ ಬಗ್ಗೆ ಸೇನಾ ದಂಡನಾಯಕ ಮಹಮದ್ ಮೂಸಾರಿಗೆ ನೀಡಿದ ಅತಿ ಗೌಪ್ಯ ಸಂದೇಶದಲ್ಲಿ ಅಯೂಬ್ ಹೀಗೆ ಹೇಳುತ್ತಾರೆ: “ಸಾಮಾನ್ಯ ನಿಯಮದಂತೆ, ಸರಿಯಾದ ಸಮಯದಲ್ಲಿ, ಸರಿಯಾದ ಜಾಗದಲ್ಲಿ ಕೊಡುವ ಒಂದೆರಡು ಹೊಡೆತಗಳಿಗೆ ಹಿಂದೂ ಸ್ಥೈರ್ಯ ಕುಸಿದುಹೋಗುತ್ತದೆ…” ಜತೆಗೆ, ಇತಿಹಾಸವೂ ಪಾಕಿಸ್ತಾನದ ಕಡೆಗಿದೆ ಎಂದೂ ಅಯೂಬ್ ನಂಬಿದ್ದರು. ಖೈಬರ್ ಕಣಿವೆಯನ್ನು ವಶಪಡಿಸಿಕೊಂಡವರು ಅನತೀಕಾಲದಲ್ಲೇ ಇಡೀ ಪಂಜಾಬ್ ಬಯಲನ್ನು ವಶಕ್ಕೆ ತೆಗೆದುಕೊಳ್ಳುವುದು, ನಂತರ ಆ ವಿಶಾಲ ಬಯಲುಪ್ರದೇಶದಲ್ಲಿ ಯಾವ ತಡೆಯೂ ಇಲ್ಲದೇ ದೆಹಲಿಯತ್ತ ಮುನ್ನುಗ್ಗಿ ಬರುವುದು ಒಂದು ಪೂರ್ವನಿರ್ಧಾರಿತ ಪ್ರಕ್ರಿಯೆಯಂತೆ ಇತಿಹಾಸದ ಉದ್ದಕ್ಕೂ ನಡೆದುಕೊಂಡು ಬಂದಿದೆ.

ಇದನ್ನು 1965ರಲ್ಲಿ ಅಯೂಬ್ ಖಾನ್ ಅರ್ಥೈಸಿದ್ದು ಹೀಗೆ: “ಇತಿಹಾಸ ನಮ್ಮ ಕಡೆಗಿದೆ. ಲಾಹೋರ್ ಯಾರ ಕೈಯಲ್ಲಿದೆಯೋ ಅವರು ಅನತಿಕಾಲದಲ್ಲೇ ದೆಹಲಿಯ ಅಧಿನಾಯಕರಾಗುತ್ತಾರೆ. ಈಗ ಲಾಹೋರ್ ನಮ್ಮ ಕೈಯಲ್ಲಿದೆ. ಇನ್ನು ಹದಿನೈದು ದಿನಗಳಲ್ಲಿ ನಾವು ದೆಹಲಿಯಲ್ಲಿರುತ್ತೇವೆ, ಕೆಂಪುಕೋಟೆಯ ಮೇಲೆ ಪಾಕಿಸ್ತಾನೀ ಧ್ವಜವನ್ನು ಹಾರಿಸುತ್ತೇವೆ.” ಹೀಗೆ ಯುದ್ಧೋತ್ಸಾಹದಲ್ಲಿ ಬೀಗಿದ ಅಯೂಬ್ ಖಾನ್ ಹೂಡಿದ ಯುದ್ಧತಂತ್ರ ಅಸಾಧಾರಣದ್ದೇ ಅಗಿತ್ತು. ಕಾಶ್ಮೀರವನ್ನು ಬಾರತಕ್ಕೆ ಸಂಪರ್ಕಿಸುತ್ತಿದ್ದ ಏಕೈಕ ರಸ್ತೆಯಾದ ಜಮ್ಮು-ಅಖ್ನೂರ್ ಹೆದ್ದಾರಿಯನ್ನೇ ಆಕ್ರಮಿಸಿಕೊಳ್ಳುವುದು, ಆ ಮೂಲಕ ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಿಬಿಡುವುದು ಅವರ ಯೋಜನೆಯಾಗಿತ್ತು.

“ಆಪರೇಷನ್ ಗ್ರ್ಯಾಂಡ್ ಸ್ಲ್ಯಾಮ್” ಎಂಬ ಸಂಕೇತನಾಮದ ಈ ರಹಸ್ಯ ಯೋಜನೆಯ ಅಂಗವಾಗಿ ಸೆಪ್ಟೆಂಬರ್ 1ರಂದು ಪಾಕ್ ಸೇನೆ ಚಿಕನ್ಸ್ ನೆಕ್-ಛಾಂಬ್ ಝಾರಿಯನ್ ಕ್ಷೇತ್ರದಲ್ಲಿ ಗಡಿ ದಾಟಿ ಅಖ್ನೂರ್‌ನತ್ತ ಬರತೊಡಗಿತು. ಅಮೆರಿಕಾದಿಂದ ಪಡೆದುಕೊಂಡಿದ್ದ ಪ್ಯಾಟನ್ ಟ್ಯಾಂಕ್‍ಗಳಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಜತೆಗೇ, ಚಿಕನ್ಸ್ ನೆಕ್ ಮುಂಚೂಣಿ ಪ್ರದೇಶದಲ್ಲಿ ಸಾಮರಿಕ ಅನುಕೂಲತೆ ಹೊಂದಿದ್ದ ಪಾಕ್ ಸೇನೆಯನ್ನು ತಡೆಯುವುದು ಭಾರತಕ್ಕೆ ಅಸಾಧ್ಯವಾಗಿತ್ತು.
ಇಂತಹ ಪ್ರತಿಕೂಲ ಸನ್ನಿವೇಶದಲ್ಲಿ ಪ್ರಧಾನಿ ಶಾಸ್ತ್ರಿ ತೆಗೆದುಕೊಂಡ ನಿರ್ಧಾರ ಯುದ್ಧದ ಗತಿಯನ್ನಷ್ಟೇ ಅಲ್ಲ, ಉಪಖಂಡದ ಇತಿಹಾಸವನ್ನೇ ಬದಲಿಸಿಬಿಟ್ಟಿತು. ಪಾಕ್ ಸೇನೆಯ ಗಮನವನ್ನು ಬೇರೆಡೆ ತಿರುಗಿಸದೇ, ಜಮ್ಮು-ಅಖ್ನೂರ್ ಹೆದ್ದಾಗಿಯನ್ನು, ಆ ಮೂಲಕ ಕಾಶ್ಮೀರವನ್ನು ರಕ್ಷಿಸಿಕೊಳ್ಳುವುದು ಭಾರತಕ್ಕೆ ಸಾಧ್ಯವೇ ಇಲ್ಲ ಎಂದರಿತ ಪ್ರಧಾನಿ ಶಾಸ್ತ್ರಿ ಲಾಹೋರ್ ಮೇಲೆರಗುವಂತೆ ಭಾರತೀಯ ಸೇನೆಗೆ ಆದೇಶಿಸಿದರು. ಐದು ಅಡಿಯಷ್ಟೇ ಎತ್ತರವಿದ್ದ ಶಾಸ್ತ್ರಿಯವರ ಮಹತ್ವದ ನಿರ್ಣಯವನ್ನು ಪಶ್ಚಿಮ ಕಮ್ಯಾಂಡ್‌ನ ನಾಯಕ ಲೆಫ್ಟಿನೆಂಟ್ ಜನರಲ್ ಹರ್‌ಬಕ್ಷ್ ಸಿಂಗ್ ಬಣ್ಣಿಸಿದ್ದು ಹೀಗೆ:

“Tallest decision by the shortest man.”


“ಪಾಕಿಸ್ತಾನೀಯರು ಶ್ರೀನಗರ್ ಪಟ್ಟಣವನ್ನು ವಶಪಡಿಸಿಕೊಳ್ಳುವುದಕ್ಕೆ ಮೊದಲೇ ನಾವು ಲಾಹೋರ್ ತಲುಪಬೇಕು” ಭಾರತೀಯ ಸೇನಾ ದಂಡನಾಯಕ ಜನರಲ್ ಜೆ. ಎನ್. ಚೌಧರಿ ಅವರಿಗೆ ಪ್ರಧಾನಮಂತ್ರಿ ಶಾಸ್ತ್ರಿ ಸೆಪ್ಟೆಂಬರ್ 3ರಂದು ನೀಡಿದ ಆದೇಶವಿದು.

ಪ್ರಧಾನಿಯವರ ನಿರ್ಧಾರದಲ್ಲಿದ್ದ ವ್ಯಾವಹಾರಿಕತೆಯನ್ನು ಗುರುತಿಸಿದ ಜನರಲ್ ಚೌಧರಿ ಅದನ್ನು ಸೆಪ್ಟೆಂಬರ್ 6ರ ಬೆಳಿಗ್ಗೆ ನಾಲ್ಕು ಗಂಟೆಗೆ ಕಾರ್ಯರೂಪಕ್ಕಿಳಿಸಿಯೇಬಿಟ್ಟರು. ಹತ್ತು ಗಂಟೆಯ ಹೊತ್ತಿಗೆ ನಮ್ಮ ಸೇನೆ ಲಾಹೋರ್ ನಗರದ ಹೊರವಲಯವನ್ನು ತಲುಪಿತು. ಜತೆಗೆ, ತಮ್ಮ ಕಾಶ್ಮೀರ ದಾಳಿಗೆ ಮೂಲನೆಲೆಯಾಗಿ ಪಾಕಿಗಳು ಬಳಸಿಕೊಂಡಿದ್ದ ಸಿಯಾಲ್‍ಕೋಟ್ ನಗರದ ಮೇಲೆಯೇ ಭಾರತೀಯ ಸೇನೆ ಸೆಪ್ಟೆಂಬರ್ 8ರಂದು ದಾಳಿಯೆಸಗಿದಾಗ ಕಂಗೆಟ್ಟುಹೋದ ಪಾಕ್ ಸೇನೆಗೆ ಕಾಶ್ಮೀರವನ್ನು ಮರೆತು ತಮ್ಮ ದೇಶದ ಹೃದಯಭಾಗ ಪಂಜಾಬ್ ಅನ್ನು ರಕ್ಷಿಸಿಕೊಳ್ಳುವುದು ಮುಖ್ಯವಾಯಿತು. ಅಯೂಬ್ ಖಾನ್ ಘೋಷಿಸಿದ್ದಂತೆ ಇತಿಹಾಸ ಅವರ ಕಡೆಗಿದ್ದರೂ ದೆಹಲಿಯಲ್ಲಿ ಧೀಮಂತ ಶಾಸ್ತ್ರಿಯವರ ಉಪಸ್ಥಿತಿಯಿಂದಾಗಿ ವರ್ತಮಾನ ಅವರ ಪರವಾಗಿರಲಿಲ್ಲ.

ಲಾಹೋರ್‌ನ ಅಧಿಪತಿಗಳು ದೆಹಲಿಯ ಅಧಿಪತಿಗಳಾಗುವುದರಲ್ಲಿ ನಿರ್ಣಾಯಕವಾಗಿ ವಿಫಲರಾಗಿಹೋದರು. ಉಪಖಂಡದ ಮುಸ್ಲಿಂ ಮುಂದಾಳುಗಳು ಪರಂಪರಾಗತವಾಗಿ ಬೆಳೆಸಿಕೊಂಡು ಬಂದಿದ್ದ “ಒಬ್ಬ ಮುಸ್ಲಿಂ ಒಂದೂಕಾಲು ಲಕ್ಷ ಹಿಂದೂಗಳಿಗೆ ಸಮ” ಎಂಬ ‘ನಂಬಿಕೆ’ ಧೂಳೀಪಟವಾಗಿಹೋಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಕಾಶ್ಮೀರದ ಹತೋಟಿ ರೇಖೆಯಲ್ಲಿ ತಾವು ನಡೆಸುವ ಕಿತಾಪತಿಗಳಿಗೆ ಪ್ರತಿಯಾಗಿ ಭಾರತವೆಂದೂ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಪಾಕಿಸ್ತಾನದ ಮೇಲೆ ದಾಳಿಯೆಸಗದು ಎಂದು ಪಾಕ್ ನಾಯಕರು ಪರಸ್ಪರ ಪದೇಪದೇ ಹೇಳಿಕೊಂಡು ಬಿಡುತ್ತಿದ್ದ ನೆಮ್ಮದಿಯ ಉಸಿರಿಗೇ ಸಂಚಕಾರ ಬಂತು. “ಕಾಶ್ಮೀರದ ಮೇಲಿನ ಯಾವುದೇ ದಾಳಿಯನ್ನು ಭಾರತದ ಮೇಲಿನ ದಾಳಿಯೆಂದೇ ನಾವು ಪರಿಗಣಿಸುತ್ತೇವೆ” ಎಂದು ನೆಹರೂ ಹೇಳಿ ಮರೆತುಬಿಟ್ಟಿದ್ದ ಎಚ್ಚರಿಕೆಯನ್ನು ಶಾಸ್ತ್ರಿಯವರು ನಿಜವಾಗಿಸಿಬಿಟ್ಟಿದ್ದರು. ಪರಿಣಾಮವಾಗಿ, ತಮ್ಮ ಕನಸು ಕಾಶ್ಮೀರವನ್ನು ಬಿಟ್ಟು ತಮ್ಮ ದೇಶದ ಹೃದಯ ಲಾಹೋರನ್ನು ಕಾಪಾಡಿಕೊಳ್ಳುವ ಒತ್ತಡಕ್ಕೆ ಪಾಕಿಸ್ತಾನೀಯರು ಒಳಗಾಗಿದ್ದರು.

ಶಾಸ್ತ್ರಿಯವರ ಈ ಮಹತ್ತರ ಹಾಗೂ ಅಭೂತಪೂರ್ವ ನಿರ್ಧಾರಕ್ಕೆ ಪಾಕ್ ಸೇನಾ ದಂಡನಾಯಕ ಮಹಮದ್ ಮೂಸಾ ನಿರಾಶೆಯಿಂದ ಪ್ರತಿಕ್ರಿಯಿಸಿದ್ದು ಹೀಗೆ: “ನೆಹರೂ ಇಂತಹ ನಿರ್ಧಾರನ್ನೆಂದೂ ಕೈಗೊಳ್ಳುತ್ತಿರಲಿಲ್ಲ.” ಸ್ವತಃ ಅಯೂಬ್ ಖಾನ್ ಗೋಳಾಡಿದ್ದು ಹೀಗೆ: “ಐವತ್ತು ಲಕ್ಷ ಕಾಶ್ಮೀರಿ ಮುಸ್ಲಿಮರಿಗಾಗಿ ಹತ್ತು ಕೋಟಿ ಪಾಕಿಸ್ತಾನೀಯರ ಹಿತಾಸಕ್ತಿಗಳನ್ನು ಬಲಿಗೊಡಲು ಇನ್ನೆಂದೂ ಹೋಗಲಾರೆ.”


ಇಷ್ಟಾಗಿಯೂ, ಶಾಸ್ತ್ರಿಯವರ ಧೀಮಂತಿಕೆಗೆ ಸೂಕ್ತವಾಗಿ ಸ್ಪಂದಿಸಲು ಭಾರತೀಯ ಸೇನೆ ಅಂದು ತಯರಾಗಿರಲಿಲ್ಲ ಎಂಬುದನ್ನು ನಾವು ವಿಷಾದದಿಂದ ನೆನಪಿಸಿಕೊಳ್ಳಬೇಕಾಗಿದೆ. ಪ್ರಧಾನಿ ಶಾಸ್ತ್ರಿ ಸೆಪ್ಟೆಂಬರ್ 22ರಂದು ಸೇನಾ ಮುಖ್ಯಸ್ಥ ಜನರಲ್ ಜೆ ಎನ್ ಚೌಧರಿ ಅವರನ್ನು ಪ್ರಶ್ನಿಸಿದ್ದು “ನಮ್ಮಲ್ಲಿರುವ ಶಸ್ತ್ರಾಸ್ತ್ರಭಂಡಾರದ ಸಹಾಯದಿಂದ ಯುದ್ಧವನ್ನು ಇನ್ನೆಷ್ಟು ದಿನಗಳವರೆಗೆ ಮುಂದುವರೆಸುವುದು ನಮಗೆ ಸಾಧ್ಯವಾಗುತ್ತದೆ? ಯುದ್ಧ ಮುಂದುವರೆದರೆ ನಾವು ಗೆಲ್ಲುವ ಸಾಧ್ಯತೆ ಇದೆಯೇ?” ಇದಕ್ಕೆ ಜನರಲ್ ಚೌಧರಿಯವರು ತನ್ನ ಶಸ್ತ್ರಾಸ್ತ್ರಗಳ ಬಹುಭಾಗವನ್ನು ಸೇನೆ ಉಪಯೋಗಿಸಿಬಿಟ್ಟಿರುವುದಾಗಿಯೂ, ಆ ಕಾರಣದಿಂದ ಯುದ್ಧದಲ್ಲಿ ಪೂರ್ಣ ಜಯವನ್ನು ನಿರೀಕ್ಷಿಸಲಾಗದೆಂದೂ, ಕದನವಿರಾಮವನ್ನು ಘೋಷಿಸುವುದು ಅನುಕೂಲಕರವೆಂದೂ ಉತ್ತರಿಸಿದರು ಅದನ್ನು ನಂಬಿದ ಶಾಸ್ತ್ರಿ ಅದೇ ದಿನ ಕದನವಿರಾಮವನ್ನು ಘೋಷಿಸಿದರು.

ಅನಂತರ ಹೊರಬಂದ ವಿವರಗಳೆಂದರೆ ಭಾರತ ತನ್ನ ಶಸ್ತ್ರಾಸ್ತ್ರಗಳಲ್ಲಿ ಬಳಸಿದ್ದದ್ದು ಕೇವಲ ಶೇಕಡಾ 14ರಷ್ಟನ್ನು ಮಾತ್ರ! ಅಷ್ಟೇ ಅಲ್ಲ, ಪಾಕಿಸ್ತಾನದ ಟ್ಯಾಂಕ್‌ಗಳ ಎರಡುಪಟ್ಟು ಟ್ಯಾಂಕ್‌ಗಳು ಭಾರತದಲ್ಲಿದ್ದವು. ಜನರಲ್ ಚೌಧರಿ ಪ್ರಧಾನಿಯವರಿಗೆ ತಪ್ಪು ಮಾಹಿತಿ ನೀಡಿದರು ಎನ್ನುವುದು ಸ್ಪಷ್ಟ. ಬಹುಶಃ ನಮ್ಮ ಸೇನೆಯ ಕಾದುವ ಸಾಮರ್ಥ್ಯದ ಬಗ್ಗೆ ಅವರಿಗೆ ಸಂದೇಹವಿದ್ದಿರಬಹುದು. ಪಶ್ಚಿಮ ಕಮ್ಯಾಂಡ್‌ನ ಅರ್ಧದಷ್ಟು ಡಿವಿಜ಼ನ್‌ಗಳು ಹೊಸದಾಗಿದ್ದವು. 1962ರಲ್ಲಿ ಚೀನಾದಿಂದ ಅನುಭವಿಸಿದ ಮುಖಭಂಗದ ನಂತರ ಸೃಷ್ಟಿಯಾದ ಇವುಗಳಲ್ಲಿನ ಸೈನಿಕರಿಗಿನ್ನೂ ಯುದ್ಧತರಬೇತಿ ಪೂರ್ಣವಾಗಿರಲಿಲ್ಲ. ಯುದ್ಧ ಮುಂದುವರೆಸಲಾಗದೆಂದು, ಕದನವಿರಾಮವನ್ನು ಘೋಷಿಸುವುದು ಅನುಕೂಲಕರವೆಂದೂ ಜನರಲ್ ಚೌಧರಿ ಪ್ರಧಾನಿಯವರಿಗೆ ಸೂಚಿಸಿದ್ದು ಈ ಕಾರಣಗಳಿಂದಿರಬಹುದು. ಅದಂತೂ ಪಾಕಿಸ್ತಾನಕ್ಕೆ ಅನುಕೂಲವೇ ಆಯಿತು. ಸೋಲಿನ ಭೀತಿಯಲ್ಲಿದ್ದ ಅಯೂಬ್ ಖಾನ್ ಬದುಕಿದೆಯಾ ಬಡಜೀವವೇ ಎಂದುಕೊಂಡು ಮರುದಿನವೇ ಕದನವಿರಾಮವನ್ನು ಘೋಷಿಸಿದರು.

ಅಂತೂ ಅಂದಿನ ಸನ್ನಿವೇಶ ಶಾಸ್ತ್ರಿಯವರಿಗೆ ಅನುಕೂಲಕರವಾಗಿರಲಿಲ್ಲ. ಅವರ ಆ ದುರದೃಷ್ಟ ನಂತರದ ತಾಷ್ಕೆಂಟ್ ಮಾತುಕತೆಗಳಲ್ಲೂ ಮುಂದುವರೆಯಿತು. ನಿಜ ಹೇಳಬೇಕೆಂದರೆ ಸಂಧಾನಕ್ಕಾಗಿ ಸೋವಿಯೆತ್ ಮಧ್ಯಸ್ತಿಕೆಯನ್ನು ಒಪ್ಪಿಕೊಳ್ಳಲೇಬಾರದಿತ್ತು. ಆ ದಿನಗಳಲ್ಲಿ ಮಾಸ್ಕೋ ಭಾರತದ ಪರವಾಗಿರಲಿಲ್ಲ. ಭಾರತದ ಜತೆ ಸ್ನೇಹವನ್ನು ವೃದ್ಧಿಸಿಕೊಳ್ಳುತ್ತಲೇ ಪಾಕಿಸ್ತಾನವನ್ನೂ ತಮ್ಮತ್ತ ಸೆಳೆಯಲು ಸೋವಿಯೆತ್ ನಾಯಕರು ಪರಸಾಹಸ ಪಡುತ್ತಿದ್ದರು. ಪಾಕಿಸ್ತಾನ ಪೂರ್ಣವಾಗಿ ಅಮೆರಿಕಾ ಮತ್ತು ಚೀನಾಗಳ ದಾಸನಾಗುವುದನ್ನು ತಪ್ಪಿಸುವ ಉದ್ಡೇಶದಿಂದ ರಶಿಯನ್ನರು ಆ ದೇಶಕ್ಕೆ ಯುದ್ಧೋಪಕರಣಗಳನ್ನಲ್ಲದೇ, ಅಣುಶಕ್ತಿ ತಂತ್ರಜ್ಞಾನವನ್ನೂ ನೀಡಲು ಉತ್ಸುಕವಾಗಿದ್ದರು. ಪಾಕಿಸ್ತಾನದ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಲು ತಾಷ್ಕೆಂಟ್ ಸಮಾವೇಶ ಸೋವಿಯೆತ್ ನಾಯಕರಿಗೆ ಅಪೂರ್ವ ಅವಕಾಶವನ್ನೊದಗಿಸಿತು. ಈ ಶಾಂತಿ ಸಮಾವೇಶ ಯಶಸ್ವಿಯಾಗಬೇಕಾದರೆ ಎರಡೂ ದೇಶಗಳ ಸೇನೆಗಳು ವೈರಿ ನೆಲದಲ್ಲಿ ಆಕ್ರಮಿಸಿಕೊಂಡಿದ್ದ ಪ್ರದೇಶಗಳನ್ನು ಬಿಟ್ಟುಕೊಡಬೇಕಾಗಿತ್ತು. ಸಿಂಧ್ ಮತ್ತು ಪಂಜಾಬ್‌ನಲ್ಲಿ ಹಾಗೆ ಮಾಡಲು ಶಾಸ್ತ್ರಿ ಸಿದ್ಧರಾಗಿದ್ದರು.

ಆದರೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಮ್ಮ ಸೇನೆ ಆಕ್ರಮಿಸಿಕೊಂಡಿದ್ದ ಪ್ರದೇಶಗಳನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡಲು ಅವರು ತಯಾರಿರಲಿಲ್ಲ. ವೈರಿಯ ವಶದಲ್ಲಿರುವ ನಮ್ಮ ನೆಲದಲ್ಲಿ ಸ್ವಲ್ಪವನ್ನು ನಾವು ಹಿಂದಕ್ಕೆ ಪಡೆದುಕೊಂಡಿದ್ದೇವೆ ಅಷ್ಟೇ ಎನ್ನುವುದು ಅವರ ಸ್ಪಷ್ಟ ನಿಲುವಾಗಿತ್ತು. ಆದರೆ ಪಾಕಿಸ್ತಾನವನ್ನು ಓಲೈಸಲು ತುದಿಗಾಲಲ್ಲಿ ನಿಂತಿದ್ದ ಸೋವಿಯೆತ್ ಪ್ರಧಾನಿ ಅಲೆಕ್ಸೀ ಕೊಸಿಗಿನ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಮ್ಮ ಸೇನೆ ವಶಪಡಿಸಿಕೊಂಡಿದ್ದ ಪ್ರದೇಶಗಳನ್ನು ಪಾಕಿಸ್ತಾನಕ್ಕೆ ಹಿಂತಿರುಗಿಸುವಂತೆ ಶಾಸ್ತ್ರಿಯವರ ಮೇಲೆ ಅತಿಯಾದ ಒತ್ತಡ ಹಾಕಿದರು. ನಿರಾಕರಿಸಲು ಶಾಸ್ತ್ರಿಯವರಿಗೆ ಸಾಧ್ಯವಾಗಲೇ ಇಲ್ಲ. ಆ ಬಗ್ಗೆ ಅವರಿಗೇ ನಿರಾಶೆಯಾಗಿತ್ತು.

ಆ ರಾತ್ರಿ ಅವರು ಮನೆಗೆ ದೂರವಾಣಿ ಕರೆ ಮಾಡಿದಾಗ ಮತ್ತೊಂದು ನಿರಾಶೆ ಕಾದಿತ್ತು. ಪತ್ನಿ ಲಲಿತಾ ಶಾಸ್ತ್ರಿಯವರು ಪ್ರಧಾನಿಯೊಂದಿಗೆ ಮಾತಾಡಲು ನಿರಾಕರಿಸಿದರು. ಕಾಶ್ಮೀರದಲ್ಲಿ ನಮ್ಮ ಸೇನೆ ವೀರಾವೇಶದಿಂದ ಹೋರಾಡಿ ವಶಪಡಿಸಿಕೊಂಡಿದ್ದ ಪ್ರದೇಶಗಳನ್ನು ಪಾಕಿಸ್ತಾನಕ್ಕೆ ಹಿಂತಿರುಗಿಸುವುದರ ಮೂಲಕ ಪ್ರಧಾನಿಯವರು ದೇಶದ ನಿರೀಕ್ಷೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎನ್ನುವುದು ಲಲಿತಾ ಶಾಸ್ತ್ರಿಯವರ ಆಕ್ಷೇಪಣೆಯಾಗಿತ್ತು

ಎಂದು ಅವರ ಹಿರಿಯ ಮಗಳು ಕುಸುಮ್ ಹೇಳುತ್ತಾರೆ. ಶಾಸ್ತ್ರಿಯವರೂ ಸಹಾ ತಾವು ಒಳಗಾದ ಪರಿಸ್ಥಿತಿಯ ಬಗ್ಗೆ ಮಗಳಿಗೆ ನೋವಿನಿಂದ ಹೇಳಿ ಪೋನಿಟ್ಟರು. ಆ ರಾತ್ರಿಯೇ ಶಾಸ್ತ್ರಿ ನಿಧನಹೊಂದಿದರು.. ಮಹಾನ್ ದೇಶಾಭಿಮಾನಿ, ಸಮರ್ಥ ನಾಯಕನೊಬ್ಬನ ದೀರ್ಘಕಾಲೀನ ಸೇವೆಯಿಂದ ರಾಷ್ಟ್ರ ವಂಚಿತವಾಯಿತು.


ಮಧ್ಯರಾತ್ರಿಯಲ್ಲಿ ಹೃದಯಾಘಾತಕ್ಕೊಳಗಾದಾಗ ಪ್ರಧಾನಿಯವರು ಪಟ್ಟ ಯಾತನೆಯನ್ನು ಸೋವಿಯೆತ್ ಗುಪ್ತಚರ ಸಂಸ್ಥೆ ಕೆಜಿಬಿ ತಾನು ರಹಸ್ಯವಾಗಿ ಆಳವಡಿಸಿದ್ದ ಬೇಹುಗಾರಿಕಾ ಉಪಕರಣಗಳ ಮೂಲಕ ಅಮೂಲಾಗ್ರವಾಗಿ ನೋಡಿತ್ತು. ಆದರೆ ಪ್ರಧಾನಮಂತ್ರಿಯವರ ಸಹಾಯಕ್ಕೆ ತಕ್ಷಣ ಧಾವಿಸಿದರೆ ತಾವು ಅವರ ಮೇಲೇ ಬೇಹುಗಾರಿಕೆ ನಡೆಸುತ್ತಿದ್ದುದು ಬಯಲಾಗುತ್ತದೆ ಎಂಬ ಸಂದಿಗ್ಧ ರಶಿಯನ್ನರಿಗೆ. ಪರಿಣಾಮವಾಗಿ, ಪ್ರಧಾನಿಯವರಿಗೆ ತತ್‌ಕ್ಷಣ ವೈದ್ಯಕೀಯ ಸೇವೆ ದೊರೆಯಲಿಲ್ಲ. ದೊರೆತಿದ್ದರೆ ಬಹುಶಃ ನಾವು ಅವರನ್ನು ಅಂದು ಕಳೆದುಕೊಳ್ಳುತ್ತಿರಲಿಲ್ಲ.

ಶಾಸ್ತ್ರಿಯವರ ಮರಣದ ಕುರಿತಾಗಿನ ರಹಸ್ಯ ದಸ್ತಾವೇಜುಗಳನ್ನು ಬಹಿರಂಗಗೊಳಿಸಿ ಎಂಬ ಎಲ್ಲ ಆರ್‌ಟಿಐ ವಿನಂತಿಗಳಿಗೆ ಸರ್ಕಾರದಿಂದ ಬರುವ ಉತ್ತರ ಸರಿಸುಮಾರು ಹೀಗಿರುತ್ತದೆ- “…ಬಹಿರಂಗಗೊಳಿಸುವುದರಿಂದ ವಿದೇಶವೊಂದರ ಜತೆಗಿನ ನಮ್ಮ ಸಂಬಂಧಗಳಿಗೆ ಧಕ್ಕೆಯಾಗುತ್ತದೆ…” ಐವತ್ತನಾಲ್ಕು ವರ್ಷಗಳ ಹಿಂದೆ ಘಟಿಸಿಹೋದ ದುರಂತ ಇಂದು ನಮ್ಮ ವಿದೇಶ ಸಂಬಂಧಗಳ, ಅದರಲ್ಲೂ ಈಗಿಲ್ಲದ ದೇಶದ ಜತೆಗಿನ ಸಂಬಂಧಗಳ, ಮೇಲೇನೂ ಪರಿಣಾಮ ಬೀರದು. ಆ ‘ಸಂಬಂಧಗಳ’ ಜತೆಗೆ ಪ್ರಧಾನಿಯವರ ಅಕಾಲಿಕ ಸಾವಿಗಿರಬಹುದಾದ ಇತರ ‘ಸಂಬಂಧ’ಗಳೂ ಇನ್ನಾದರೂ ದೇಶದ ಮುಂದೆ ಅನಾವರಣಗೊಳ್ಳಬೇಕಾಗಿದೆ.