ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸರ್ ಎಮ್.ವಿ. ಪಾಲ್ಗೊಂಡ ಕಾರ್ಯಕ್ರಮ: ನಾನು ಕಂಡಂತೆ

ಎಚ್ಚಾರೆಲ್

ವರ್ಷ ೨೦೨೧ ರ ‘ಅಭಿಯಂತರ ದಿನಾಚರಣೆ’-೬೦ ರ, ದಶಕದ ಮಧುರ ಸ್ಮರಣೆಯೊಂದಿಗೆ !

ಡಾ. ಸರ್. ಎಂ. ವಿಶ್ವೇಶ್ವರಯ್ಯನವರ ಶತಮಾನೋತ್ಸವ ಸಮಾರಂಭದ ಸಮಯದಲ್ಲಿ ನಮ್ಮ ಜತೆ ಜರುಗಿದ ಒಂದು ಸುಂದರ ಅನುಭವವನ್ನು ತಮ್ಮೆಲ್ಲರ ಮುಂದೆ ಹಂಚಿಕೊಳ್ಳಲು ಆಶಿಸುತ್ತೇನೆ : ಆದಿನ ಸಹಜವಾಗಿ ಅವರ ಜನುಮ ದಿನವಾಗಿತ್ತಲ್ಲವೇ ? ಪ್ರತಿವರ್ಷದಂತೆ ಈ ವರ್ಷವೂ ದೇಶದಾದ್ಯಂತ Engineers’ day, ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಭಾರತ ದೇಶ ಕಂಡ ಹೆಮ್ಮೆಯ ಕನ್ನಡಿಗ, ಭಾರತ ರತ್ನ ಪ್ರಶಸ್ತಿ ವಿಜೇತ ಮೋಕ್ಷಂಗುಂಡಂ ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬವನ್ನು Engineers day ಎಂದು ಇಂದು (೧೫, ಸೆಪ್ಟೆಂಬರ್,) ನಾವೆಲ್ಲಾ ಸಡಗರದಿಂಡ ಆಚರಿಸುತ್ತಿದ್ದೇವೆ.

ನನ್ನ ಪರಿಚಯ :

೧೯೬೦-೬೧ ರಲ್ಲಿ ನಾನು (ವೆಂಕಟೇಶ್ ಎಂದು ಹೆಸರು) ನನ್ನ ಊರು ಹೊಳಲ್ಕೆರೆಯಲ್ಲಿ ಎಸ್. ಎಸ್ ಎಲ್. ಸಿ ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿ, ಬೆಂಗಳೂರಿಗೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬಂದಿದ್ದೆ. ತಾಂತ್ರಿಕ ಶಿಕ್ಷಣ ಪಡೆದು ಅದರಲ್ಲಿ ನಿಷ್ಣಾತನಾಗುವ ಆಶಯವನ್ನು ಹೊತ್ತು Jayachamarajendra polytechnic ಪಕ್ಕದ S.K.S.J.T Institute ನಲ್ಲಿ Textile diploma course ಗೆ ಸೇರಿಕೊಂಡಿದ್ದೆ. ಆ ವರ್ಷದಲ್ಲೇ ಸರ್ ಎಂ. ವಿ. ಯವರ ಶತಮಾನೋತ್ಸವದ ಸಮಾರಂಭವನ್ನು ಆಯೋಜಿಸುವ ಬಗ್ಗೆ ಮೈಸೂರು ಸರಕಾರದ ಆದೇಶ ಬಂದಿತ್ತು. ಅದರ ಆಯೋಜನೆಯ ಕೆಲವು ಪ್ರಮುಖ ಜವಾಬ್ದಾರಿ ಕೆಲಸಗಳನ್ನು ನಿರ್ವಹಿಸಲು Scout & Guides ನಲ್ಲಿ ಸೇರ್ಪಡೆಯಾಗಿದ್ದ ಕೆಲವು ಕೆಡೆಟ್ಸ್ ಗಳಿಗೆ ನಮ್ಮ ಪ್ರೊಫೆಸರ್ ಶ್ರೀ. ಎಂ. ಆರ್. ಕೃಷ್ಣಮೂರ್ತಿಗಳಿಗೆ ವಹಿಸಿಕೊಟ್ಟಿದ್ದರು. ನಾನೂ Scout ಗೆ ಸೇರಿದ್ದೆ; ನನ್ನ ಜೊತೆ ಮೂವರು ಕೇಡೆಟ್ ಗಳು ಆರಿಸಲ್ಪಟ್ಟೆವು. ಪ್ರೊ.ಕೃಷ್ಣಮೂರ್ತಿಗಳು ಯಾರೂ ಅಲ್ಲ. ಸರ್. ಎಂ ವಿ ಯವರ ಅಣ್ಣನ ಮಗ ಎಂದು ತಿಳಿಯಲು ನಮಗೆ ಹೆಚ್ಚು ಸಮಯ ಆಗಲಿಲ್ಲ. ವಿಷಯ ತಿಳಿದೊಡನೆಯೇ ನಾವು ಅವರನ್ನು ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದೆವು. ಅವರು ಸ್ವಲ್ಪ ಸಮಯ ನಮಗೆ ಉತ್ತರ ಕೊಟ್ಟರು. ನಂತರ ‘ನಾನೇ ನಿಮಗೆ ಎಲ್ಲಾ ಹೇಳುತ್ತೇನೆ ; ಈಗ ನೀವು ನಿಮಗೆ ಕೊಟ್ಟಿರುವ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿ’ ಎಂದು ಸನ್ನೆ ಮಾಡಿದರು. ನಾವು Scout ನಲ್ಲಿ ಸೇರಿದ್ದರಿಂದ ನಮ್ಮ ಪ್ರೊಫೆಸರ್ ನಮಗೆ ಕೆಲವು ಮುಖ್ಯಜವಾಬ್ದಾರಿಗಳನ್ನು ವಹಿಸಿದರು. ಎರಡು ದಿನಗಳ ಕಾರ್ಯಕ್ರಮವಿತ್ತು.

ವಿಶ್ವೇಶ್ವರಯ್ಯನವರ ಶತಮಾನೋತ್ಸವ ಆಚರಣೆ :

ವಿಶ್ವೇಶ್ವರಯ್ಯನವರ ಶತಮಾನೋತ್ಸವ/ ಹುಟ್ಟು ಹಬ್ಬ ಸಮಾರಂಭ ಕ್ಕೆ ಭಾರತದ ಪ್ರಧಾನಿ ಶ್ರೀ. ಜವಾಹರ್‌ಲಾಲ್‌ ನೆಹರೂ ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರಿನ ಲಾಲ್‌ಬಾಗ್‌ ಉದ್ಯಾನದ ‘Glass house’ ಲ್ಲಿ ನಡೆದ ಸಮಾರಂಭದಲ್ಲಿ ಮೈಸೂರಿನ ಗವರ್ನರ್ ಶ್ರೀ. ಜಯಚಾಮರಾಜೇಂದ್ರ ಒಡೆಯರ್‌, ಮತ್ತು ನೆಹರು ಸಮ್ಮುಖದಲ್ಲಿ ಭಾರತದ ಹೆಮ್ಮೆಯ ಪುತ್ರನಿಗೆ ಶುಭ ಹಾರೈಸಲಾಯಿತು. ಮೈಸೂರು ರಾಜ್ಯದ ಮುಖ್ಯ ಮಂತ್ರಿ ಶ್ರೀ. ಬಿ. ಡಿ. ಜತ್ತಿಯವರು ವಿಶ್ವೇಶ್ವರಯ್ಯನವರ ಬಗ್ಗೆ ದೀರ್ಘವಾಗಿ ಭಾಷಣಮಾಡಿದರು. ಸಾಯಂಕಾಲ ನಗರದ ಪ್ರತಿಷ್ಠಿತ ಪುಟ್ಟಣ್ಣ ಚೆಟ್ಟಿ ಸಭಾಂಗಣದಲ್ಲಿ, ಕುಮಾರಿ ವೈಜಯಾಂತಿ ಮಾಲರವರ ಭರತ ನಾಟ್ಯ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಪ್ರಧಾನಿ ನೆಹರೂ, ಕೇಂದ್ರ ಸರ್ಕಾರದ ಮಂತ್ರಿ, ತಾರಕೇಶ್ವರಿ ಸಿನ್ಹ ಮೊದಲಾದ ಗಣ್ಯರೆಲ್ಲ ಆಗಮಿಸಿ ಸಂಭ್ರಮಿಸಿದರು. ಮೈಸೂರು ಕ್ರಿಕೆಟ್ ಸಮಿತಿಯ ಅಧ್ಯಕ್ಷ ಶ್ರೀ. ಜೆ. ಬಿ. ಮಲ್ಲಾರಾಧ್ಯ ಮತ್ತು ಸಹಯೋಗಿಗಳು ಕಾರ್ಯಕ್ರಮದ ಉಸ್ತುವಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದರು. ಪ್ರೊ. ಎಂ.ಅರ್. ಕೃಷ್ಣ ಮೂರ್ತಿಯವರು ಮತ್ತು ಅವರ ಪರಿವಾರದ ಜನರೆಲ್ಲಾ ಉಪಸ್ಥಿತರಿದ್ದರು. ನಮ್ಮ ಕಾಲೇಜಿನ Scout & Guides ನ ಚಾಲಕ ಶ್ರೀ. ಜೋಸೆಫ್ ಮತ್ತು ಎಲ್ಲರೂ ಕಾರ್ಯಕ್ರಮವನ್ನು ಚಂದಗಾಣಿಸಿದರು.

ಮೊದಲನೆಯ ದಿನ Lalbagh Glass house ನಲ್ಲಿ :

Lalbagh Glass house ಮುಂದೆ ಕಾರಿನಿಂದ ಬಂದು ಇಳಿದಾಗ, ನಾವು MVಯವರನ್ನು ನಿಧಾನವಾಗಿ ಬಹಳ ಎಚ್ಚರಿಕೆಯಿಂದ ಸಾವಧಾನವಾಗಿ ಅವರನ್ನು Car ನಿಂದ ಕೆಳಗೆ ಇಳಿಸಿ ಕುರ್ಚಿಯಲ್ಲಿ ಕೂಡಿಸಿಕೊಂಡು (ಒಬ್ಬರು ಅವರ ತಲೆಯನ್ನು ಸರಿಯಾಗಿ ಅವರಿಗೆ ನೋವಾಗದಂತೆ ಹಿಡಿದುಕೊಳ್ಳಬೇಕು) ಕರೆತಂದು ವೇದಿಕೆಯ ಮೇಲೆ ಕೂಡಿಸಬೇಕು. ಅವರಿಗೆ ಕುಡಿಯಲು ನೀರು ಮೊದಲಾದವನ್ನು ಕೇಳಿ, ತಕ್ಷಣ ಕೊಡಬೇಕು. ಕಾರ್ಯಕ್ರಮ ಸುಮಾರು ೩೦-೩೫ ನಿಮಿಷ ಇರುವಾಗಲೇ ಅವರಿಗೆ ಅಲ್ಲಿ ಕುಳಿತುಕೊಳ್ಳಲು ಆಗದಿದ್ದರೆ MV ಅವರನ್ನು ಕುರ್ಚಿಯಲ್ಲಿ ಸಾವಧಾನವಾಗಿ ಕೂಡಿಸಿಕೊಂಡು ಹೊರಗೆ ಕರೆದುಕೊಂಡು ಹೋಗಿ, ಕಾರ್ ನಲ್ಲಿ ಕೂಡಿಸುವ ಜವಾಬ್ದಾರಿ ವಹಿಸಲು ಕೋರಿದರು. ಪ್ರೊ. ಮೂರ್ತಿಯವರು ಅಲ್ಲಿಯೇ ಹತ್ತಿರದಲ್ಲೇ (ಅವರಿಗೆ ಹಲವಾರು ಗಣ್ಯರಿಗೆ ಕೆಲವರು ಮಾಹಿತಿಗಳನ್ನು ಒದಗಿಸುವ ಕೆಲಸವಿತ್ತು) ಇದ್ದು ಮನೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುವುದಾಗಿ ಭರವಸೆಯ ಮಾತಾಡಿದರು.

ಸಾಯಂಕಾಲ ೭-೩೦ ಕ್ಕೆ ಬೆಂಗಳೂರಿನ ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ :

ಆಗ ಅತ್ಯಂತ ಬೇಡಿಕೆಯಲ್ಲಿದ್ದ ಸಿನಿಮಾತಾರೆ, ಕುಮಾರಿ ವೈಜಯಂತಿ ಮಾಲಾ ರವರಿಂದ ಭರತನಾಟ್ಯ ಕಾರ್ಯಕ್ರಮವಿತ್ತು. ಸರ್ ಎಂ.ವಿ. ಯವರಿಗೆ ಓಡಾಡಲು ಬಹಳ ಕಷ್ಟವಾಗಿತ್ತು ಆ ಸಮಯಕ್ಕೆ ಒಂದು ವೇಳೆ ಏನಾದರೂ MVಯವರು ಅಲ್ಲಿಗೆ ಬಂದರೆ, ಅವರನ್ನು ಟೌನ್ ಹಾಲಿನ ಹಿಂದಿನ ದ್ವಾರದಿಂದ ಒಳಗೆ ನೇರವಾಗಿ ಕುರ್ಚಿಯಲ್ಲಿ ಕೂಡಿಸಿಕೊಂಡು ಕರೆತಂದು, ದಣಿವಾದಾಗ ನೀರು ಕುಡಿಸಿ ಕಾರ್ಯಕ್ರಮ ಮುಗಿಯುವ ವರೆಗೆ ಅವರ ಯೋಗಕ್ಷೇಮವನ್ನು ಸರಿಯಾಗಿ ನಿರ್ವಹಿಸುವುದು, ನಾವು ನಾಲ್ವರ ಕಾರ್ಯವಾಗಿತ್ತು. ಟೌನ್ ಹಾಲಿನ ಮುಖ್ಯದ್ವಾರದಲ್ಲಿ ೫೦ ಮೆಟ್ಟಿಲು ಹತ್ತಿ ಬರುವುದು ಸಾಧ್ಯವಿಲ್ಲದ ಮಾತಾಗಿತ್ತು. ಆದರೆ ಸರ್. ಎಂ. ವಿ ರವರಿಗೆ ಸಾಯಂಕಾಲ ಬರಲು ಸಾಧ್ಯವಾಗಲಿಲ್ಲ ಅವರ ಮನೋಧಾರಢ್ಯ ಸ್ವಲ್ಪ ಕುಂದಿರಬಹುದೆಂದು ಅನ್ನಿಸಿತು. ನಾವು ನಾಲ್ವರು ಅವರ ಮನೆಗೆ ಹೋಗಿದ್ದೆವು. ಆದರೆ ಅವರು ನಮ್ಮ ಜೊತೆಗೆ ಬರಲು ಏನೂ ಆಸಕ್ತಿ ತೋರಿಸಲಿಲ್ಲ ಮಂಚದಮೇಲೆ ಕಾಲು ಚಾಚಿ ಮಲಗಿದವರು, ಕಣ್ಮುಚ್ಚಿ ಕಣ್ಣನ್ನೂ ತೆರೆಯಲಿಲ್ಲ; ಆಯಾಸವಾಗಿರುವಂತೆ ತೋರಿತು. ಸ್ವಲ್ಪ ಹೊತ್ತು ಮೌನವಾಗಿದ್ದರು. ನುರುವರ್ಷಗಳ ಜೀವನದ ವಯೋ ಭಾರದಲ್ಲಿ ಅವರು ಸ್ವಲ್ಪ ಸೋತಂತೆ ಕಾಣಿಸುತ್ತಿದ್ದರು. ನಾವೆಲ್ಲ ಅವರಿಗೆ ಮನಸ್ಸಿನಲ್ಲೇ ವಂದಿಸಿ ವಾಪಸ್ಸಾದೆವು. ನಮ್ಮ ಮನಸ್ಸಿನಲ್ಲೇ ಯಾವುದೊ ಮಹತ್ ಕಾರ್ಯವನ್ನು ಸಾಧನೆ ಮಾಡಿದ ಸಮಾಧಾನ, ಧನ್ಯತೆ, ಮಧುರ ಭಾವನೆಗಳು ನಮ್ಮನ್ನು ಆವರಿಸಿದ್ದವು.

ಸರ್ ಎಂ ವಿಶ್ವೇಶ್ವರಯ್ಯ | My Blog
ಸರ್ ಎಂ.ವಿಶ್ವೇಶ್ವರಯ್ಯ ಅವರ 158ನೇ ಜನ್ಮದಿನಾಚರಣೆ | Prajavani

ಬೆಳಿಗ್ಯೆ ಜರುಗಿದ Lalbagh Glass house ಕಾರ್ಯಕ್ರಮವನ್ನು ಅತ್ಯಂತ ಕರಾರುವಾಕ್ಕಾಗಿ ನಿರ್ವಹಿಸಿದೆವು. ನಮ್ಮಲ್ಲಿ ಇಬ್ಬರು ವಿಶ್ವೇಶ್ವರಯ್ಯ ನವ ರನ್ನು ಕುರ್ಚಿಯಲ್ಲಿ ಕೂಡಿಸಿ, ಎರಡೂ ಬದಿಯಲ್ಲಿ ಹಿಡಿದಿದ್ದರು. ನಾನು ಎಂ. ವಿ. ರವರ ತಲೆಯನ್ನು ಹುಷಾರಾಗಿ ಹಿಡಿದು ಅವರ ಜೊತೆ ಜೋರಾಗಿ ನಡೆಯುತ್ತಾ ಬಂದು, ಅವರನ್ನು ವೇದಿಕೆಯ ಮೇಲೆ ಕರೆದೊಯ್ಯುವುದಲ್ಲಿ ಪಾತ್ರವಹಿಸಿದ್ದೆ. ಮೊದಲು ಮೈಸೂರು ರಾಜ್ಯದ ಮುಖ್ಯಮಂತ್ರಿ ಶ್ರೀ ಬಿ.ಡಿ. ಜತ್ತಿಯವರು ಮಾತಾಡಿದರು. ನಂತರ ಜವಾಹರ್ ಲಾಲ್ ನೆಹರುರವರು ಎಂ.ವಿ ರವರನ್ನು ವಂದಿಸಿ ಭಾಷಣಮಾಡಿದರು. ಕೇಂದ್ರದ ಮಂತ್ರಿಗಳಲ್ಲೊಬ್ಬರಾಗಿದ್ದ ತಾರಕೇಶ್ವರಿ ಸಿಂಹ ಮಾತಾಡಿದರು. ಮೈಸೂರು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ ಶ್ರೀ. ಜೆ. ಬಿ. ಮಲ್ಲಾರಾಧ್ಯ, ಮಾಜಿ ಮುಖ್ಯ ಮಂತ್ರಿ, ಶ್ರೀ. ನಿಜಲಿಂಗಪ್ಪನವರು ,ಮೈಸೂರು ರಾಜ್ಯದ ಗವರ್ನರ್ ಶ್ರೀ. ಜಯಚಾಮರಾಜ ವೊಡೆಯರ್, ಮೊದಲಾದವರು ಅಂತಹ ಸಂದರ್ಭದಲ್ಲಿ ಸರ್ ಎಂ ವಿ ರವರ ಬಗ್ಗೆ ನಡೆದುಕೊಂಡ ರೀತಿ ನನಗೆ ಹೆಮ್ಮೆ ಎನ್ನಿಸುತ್ತದೆ. ಹತ್ತಿರ ನಿಂತು ಅವರನ್ನು ತದೇಕ ದೃಷ್ಟಿಯಿಂದ ನೋಡುತ್ತಿದ್ದೆ. ಅವರ ಹೊಳೆಯುತ್ತಿದ್ದ ಮುಖವನ್ನು, ಚೂಪುಮೂಗನ್ನು, ಭಾರವಾದ ದಪ್ಪ ಪೇಟದಿಂದ ಎಂ.ವಿ. ರವರ ಕುತ್ತಿಗೆ ಎಲ್ಲಿ ಮುರಿದುಹೋಗುವುದೋ ಎನ್ನುವ ಆತಂಕ ನಮಗೆಲ್ಲ ಆವರಿಸಿತ್ತು. ಸಧ್ಯ, ಏನೂ ಅಂತಹ ಅವಘಡ ಯಾವುದೂ ಆಗದೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಸಂಪನ್ನಗೊಂಡಿತು. ಸರ್. ಎಂ ವಿ. ರವರನ್ನು ಅತಿ ಹತ್ತಿರದಿಂದ ನೋಡಿದ ನಾನು ಧನ್ಯನಾದೆನೆಂದು ಭಾವಿಸಿದ್ದೇನೆ. ಚೆನ್ನಾಗಿ ಇಸ್ತ್ರಿಮಾಡಿದ ಸೂಟ್, ಮಿರಿ-ಮಿರಿ ಮಿಂಚುವ ಶೂಸ್, ದೊಡ್ಡ ಮೈಸೂರ್ ಪೇಟ ಧರಿಸಿದ ಎಂ ವಿ ನಮಗೆ ‘ಒಬ್ಬ ಮಹಾನ್ ಸಾಧಕ ಸಂತ ವ್ಯಕ್ತಿ’ಯಂತೆ ಕಂಡರು ! ಆಳವಾದ ಗೂಡಿನಲ್ಲಿ ಮಿನುಗುವ ದೀಪಗಳಂತೆ ಎರಡು ಮಿನುಗುವ ಕಣ್ಣುಗಳು, ಚೂಪಾದ ಉದ್ದ ಮೂಗು, ಹೊಳೆಯುವ ಮುಖ, ಭಾರವಾದ ಪೇಟ, ನೂರುವರ್ಷಗಳ ಸಾರ್ಥಕ ಜೀವನದ ಪರಿಪೂರ್ಣ ಜನಪರ ಸೇವೆಗಳ ತೂಕದಿಂದ ಬಾಗಿದ ದಪ್ಪ ತಲೆ, ಇವು ಸರ್. ಎಂ. ವಿ. ಯವರ ಗುರುತಿಸುವಿಕೆಗಳು. ಇಂದಿಗೂ ಆ ಆತಂಕದ-ಮಧುರ ಅನುಭವದ ಕ್ಷಣಗಳು ನನ್ನ ಮೈ ನವಿರೇಳಿಸುತ್ತದೆ. Glass house ನಲ್ಲಿ ದಿನವಿಡೀ ಎಂ.ವಿ. ಯವರ ಬಗ್ಗೆ ಕಮ್ಮಟಗಳು (Work-shops) ನಡೆಯುತ್ತಲೇ ಇದ್ದವು.

ಕೈಗಾರಿಕೀಕರಣ ಹೊಂದಿ ಇಲ್ಲವೇ ನಾಶವಾಗಿ (Industrialize or perish) ಎನ್ನುವುದು ಸರ್. ಎಂ. ವಿ ರವರ ಘೋಷ ವಾಕ್ಯ. ಭಾರತ ಕಂಡ ಶ್ರೇಷ್ಠ ಸಿವಿಲ್ ಇಂಜಿನಿಯರ್, ಅಣೆಕಟ್ಟು ನಿರ್ಮಾತೃ, ಅರ್ಥಶಾಸ್ತ್ರಜ್ಞ, ದಿವಾನರಾಗಿ ಗುರುತಿಸಿಕೊಂಡಿದ್ದರು, ಮಾತ್ರವಲ್ಲದೇ ದೇಶ ಕಟ್ಟುವ ನಿಟ್ಟಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.

 ಮುದ್ದೇನಹಳ್ಳಿಯಲ್ಲಿ ಕರ್ನಾಟಕ ಸರ್ಕಾರದ ನಿಗರಾನಿನಲ್ಲಿ ಸ್ಥಾಪಿಸಿರುವ ‘ವಿಶ್ವೇಶ್ವರಯ್ಯ  ವಸ್ತು ಸಂಗ್ರಹಾಲಯ’

ನಾನು ಮತ್ತು ನನ್ನ ಪರಿವಾರ ವರ್ಷ ೨೦೧೭ ರಲ್ಲಿ ಮುದ್ದೇನಹಳ್ಳಿಗೆ ಹೋಗಿ ವಿಶ್ವೇಶ್ವರಯ್ಯನವರ ಸ್ಮಾರಕ ನೋಡಿ ಬಂದೆವು.

ಮುದ್ದೇನಹಳ್ಳಿಯಲ್ಲಿ ಕರ್ನಾಟಕ ಸರ್ಕಾರದ ನಿಗರಾನಿನಲ್ಲಿ ಸ್ಥಾಪಿಸಿರುವ ‘ವಿಶ್ವೇಶ್ವರಯ್ಯ ವಸ್ತು ಸಂಗ್ರಹಾಲಯ’

ವೆಂಕಟೇಶ್, ವಿಶ್ವೇಶ್ವರಯ್ಯ ಸ್ಮಾರಕದ ಮುಖದ್ವಾರದಲ್ಲಿ ನಿಂತಿರುವುದು
ಸರ್. ಎಂ. ವಿ. ರವರ ಪ್ರತಿಮೆ

ಮುದ್ದೇನಹಳ್ಳಿ ವಿಶ್ವೇಶ್ವರಯ್ಯ ಸ್ಮಾರಕದ ಹತ್ತಿರದಲ್ಲಿ ನೋಡಬೇಕಾದ ಸ್ಥಳಗಳು: ೧. ಸ್ಮಾರಕ ಸ್ಮಾರಕಕ್ಕೆ ಒಳ ದಾರಿ. ೨. ವಾಸಮಾಡುತ್ತಿದ್ದ ಮನೆ. ೩. ಸರ್. ಎಂ. ವಿ. ರವರ ಪ್ರತಿಮೆ .

ಜನನ :

ವಿಶ್ವೇಶ್ವರಯ್ಯನವರು ಜನಿಸಿದ್ದು ಸೆಪ್ಟೆಂಬರ್ ೧೫, ೧೮೬೦ ರಲ್ಲಿ. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಎಂಬ ಚಿಕ್ಕ ಹಳ್ಳಿಯಲ್ಲಿ. ವಿಶ್ವೇಶ್ವರಯ್ಯನವರ ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಟಲಕ್ಷ್ಮಮ್ಮ. ಅವರ ಪೂರ್ವಜರು ಈಗಿನ ಆಂದ್ರಪ್ರದೇಶದ ‘ಮೋಕ್ಷಗುಂಡಂ’ ಎಂಬ ಸ್ಥಳದಿಂದ ವಲಸೆ ಬಂದು ಮುದ್ದೇನಹಳ್ಳಿಯಲ್ಲಿ ನೆಲಸಿ ವಾಸವಾಗಿದ್ದ ಕಾರಣ ‘ಮೋಕ್ಷಗುಂಡಂ’ ಎಂಬ ಪದ ಅವರ ಹೆಸರಿನ ಜೊತೆ ಸೇರಿಕೊಂಡಿದೆ. ವಿಶ್ವೇಶ್ವರಯ್ಯ ನವರ ತಂದೆ ೧೫ ವರ್ಷದವರಿರುವಾಗಲೇ ನಿಧನರಾದರು. ದಟ್ಟ ದಾರಿದ್ರ್ಯದ ಬದುಕು. ತಾಯಿ ಅವರಿವರ ಮನೆಯಲ್ಲಿ ದುಡಿಯುತ್ತ ಮಗನನ್ನು ಸಾಕಿ ಸಲಹಿದರು. ಸೋದರ ಮಾವ, ಎಚ್ ರಾಮಯ್ಯನವರ ಸಹಾಯದಿಂದ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನ ‘ವೆಸ್ಲಿ ಮಿಶನ್ ಹೈಸ್ಕೂಲ್’ ನಲ್ಲಿ ೧೮೭೫ ರಲ್ಲಿ ನಡೆಯಿತು. ೧೮೮೧ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಬಿ.ಎ ಪದವಿಯನ್ನು ಪಡೆದು ನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆದರು.

ಪುಣೆಯ ‘College of Engineering Pune’ ನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ, ಸರ್ ಎಂ.ವಿ, ಮುಂಬೈನ ವಿಭಾಗಕ್ಕೆ ಲೋಕೋಪಯೋಗಿ ಇಲಾಖೆಗೆ ಸೇರಿದರು. ತಮ್ಮ ೨೪ ವರ್ಷಗಳ ಸೇವಾವಧಿಯಲ್ಲಿ ವಿಶ್ವೇಶ್ವರಯ್ಯನವರು ೧೪ ವರ್ಷ ಪುಣೆಯಲ್ಲಿಯೇ ಕಳೆದಿದ್ದರು. ಮುಂಬಯಿ ಸರಕಾರ ಅವರನ್ನು ಅಸಿಸ್ಟೆಂಟ್‌ ಇಂಜಿನಿಯರ್‌ ಆಗಿ ೧೮೮೪ ರ ಫೆಬ್ರವರಿಯಲ್ಲಿ ನೇಮಿಸಿತು. ಅಲ್ಲಿ ಅವರು ಸೂಪರಿಂಟೆಂಡೆಂಟ್‌ ಇಂಜಿನಿಯರ್‌ವರೆಗೆ ಹಲವು ಹುದ್ದೆ ನಿರ್ವಹಿಸಿದರು. Indian Irrigation commission ನೇಮಕವಾಯಿತು. ಆ ಕಮಿಷನ್‌ಗೆ ಮುಂಬಯಿ ಪ್ರಾಂತ್ಯದ ನೀರಾವರಿಯ ಸಂಪೂರ್ಣ ಚಿತ್ರ, ಚರಿತ್ರೆಯ ಬಗ್ಗೆ ಎಂ.ವಿ. ವರದಿ ಸಲ್ಲಿಸಿದರು. ೧೯೦೧ ರಲ್ಲಿ ಎಂ. ವಿ ಒಂದು ವರ್ಷ ಬೊಂಬಾಯಿ ಪ್ರಾಂತ್ಯದ Sanitary Engineer ಆಗಿ ಕೆಲಸ ನಿರ್ವಹಿಸಿದ್ದರು. ಆ ಅಧಿಕಾರ ಪಡೆದ ಪ್ರಥಮ ಭಾರತೀಯರು.

ಇದೇ ಸಂದರ್ಭದಲ್ಲಿ, ಅವರು, ‘ಸ್ವಯಂಚಾಲಿತ ನೀರಿನ ಪ್ರವಾಹದ ಗೇಟ್‌ಗಳನ್ನು ವಿನ್ಯಾಸ’ಗೊಳಿಸಿದರು. ಅದಕ್ಕೆ ಅವರಿಗೆ Patent ಕೂಡ ಸಿಕ್ಕಿತು. ಈ ಹೊಸ ವಿನ್ಯಾಸದ ಗೇಟ್ ಗಳನ್ನು ಮೊತ್ತ ಮೊದಲ ಬಾರಿಗೆ, ೧೯೦೩ ರಲ್ಲಿ ಪುಣೆಯ ಸಮೀಪದ ‘ಖಡಕ್ವಾಸ್ಲಾ’ ಜಲಾಶಯದಲ್ಲಿ ಅಳವಡಿಸಲಾಯಿತು. ಇದು ಯಶಸ್ವಿಯಾಗಿದೆಯೆಂದು ಖಾತ್ರಿಯಾದಮೇಲೆ ಟೈಗ್ರಾ ಅಣೆಕಟ್ಟು ಮತ್ತು ಮಂಡ್ಯದ ಕೃಷ್ಣ ರಾಜಸಾಗರ ಆಣೆಕಟ್ಟು ನಿರ್ಮಾಣದಲ್ಲೂ ಬಳಸಲಾಯಿತು. ೧೯೦೬-೦೭ ರ ಅವಧಿಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಯಲ್ಲಿನ ನವೀನ ತಂತ್ರಜ್ಞಾನಗಳನ್ನು ಅಧ್ಯಯನ ಮಾಡಲು ಸರ್.ಎಂ.ವಿ ಅವರನ್ನು, Yemen ದೇಶದ Aden ನಗರಕ್ಕೆ ಕಳುಹಿಸಲಾಯಿತು. ತದನಂತರ Hyderabad ನಗರವನ್ನು ಅವರು ತಮ್ಮ ದೂರ ದೃಷ್ಟಿಯ ಯೋಜನೆ ಮೂಲಕ ಪ್ರವಾಹ ಮುಕ್ತಗೊಳಿಸಿದರು. ಇದು ಅವರಿಗೆ ಭಾರಿ ಪ್ರಸಿದ್ದಿ ತಂದು ಕೊಟ್ಟಿತು.

ನಂತರ ಅವರು ಭಾರತೀಯ ನೀರಾವರಿ ಆಯೋಗಕ್ಕೆ ಸೇರಿದರು. ಅಲ್ಲಿ ಅವರು Deccan ಪ್ರದೇಶದಲ್ಲಿ ಕೆಲವು ಯಶಸ್ವಿ ನೀರಾವರಿ ತಂತ್ರಜ್ಞಾನ ಬಳಸಿಕೊಂಡು, ಜನಪ್ರಿಯರಾದರು.೧೯೦೯ ರ ಏಪ್ರಿಲ್‌ನಲ್ಲಿ ಎಂವಿ ಹೈದರಾಬಾದ್ ನಲ್ಲಿ ಕೆಲಸ ವಹಿಸಿಕೊಂಡರು ಹೈದರಾಬಾದ್‌ನ ಮಧ್ಯಭಾಗದಲ್ಲಿ ಹರಿಯುವ ಮೂಸಿ ನದಿ, ೧೯೦೮ ರ ಸೆಪ್ಟೆಂಬರ್‌ ಬಂದ ಅತಿವೃಷ್ಟಿಯಿಂದಾಗಿ ಉಕ್ಕಿತು. ೧,೫೦೦ ಜನ ಮೃತಪಟ್ಟರು. ಮುಂದೆ ಈ ರೀತಿಯ ಅವಘಡ ಆಗದಂತೆ ಸೂಕ್ತ ಯೋಜನೆ ನೀಡಲು ಸರಕಾರ ವಿಶ್ವೇಶ್ವರಯ್ಯನವರನ್ನು ಕೋರಿತು. ಮೊದಲು ಮೈಸೂರು ರಾಜ್ಯದ ಮುಖ್ಯ ಎಂಜಿನಿಯರ್ ಆಗಿ, ತದನಂತರ ೧೯೧೨ ರಲ್ಲಿ ದಿವಾನರಾಗಿ, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ನೀಡಿದ ಕೊಡುಗೆ ಅನನ್ಯ. ಶಿಕ್ಷಣ, ಕೈಗಾರಿಕೆ, ಕೃಷಿ, ನೀರಾವರಿ, ವಿದ್ಯುತ್ ಉತ್ಪಾದನೆ, ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ‘ಪವಾಡ ಸದೃಶ ಸಾಧನೆ’ ಮಾಡಿದರು. ಲಕ್ಷಾಂತರ ರೈತರ ಪಾಲಿಗೆ ಆಶಾಕಿರಣವಾದ ಕೃಷ್ಣರಾಜ ಜಲಾಶಯವನ್ನು ಕೇವಲ ೩ ವರ್ಷಗಳ ಅವಧಿಯಲ್ಲಿ ರೂಪಿಸಿ, ಅನುಷ್ಠಾನಗೊಳಿಸಿದರು. ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ ; ಆಧುನಿಕ ಮೈಸೂರಿನ ನಿರ್ಮಾಣಕ್ಕೆ ಕಾರಣರಾದವರು

ಸರ್‌ ಎಂ.ವಿಯವರ ಯೋಜನೆಗಳು –

Weather update: Rivers in MP open gates of these dams due to rising water  level
-KRS ಅಣೆಕಟ್ಟು

-KRS ಅಣೆಕಟ್ಟು
-ಭದ್ರಾವತಿ ಕಬ್ಬಿಣ ಉಕ್ಕಿನ ಕಾರ್ಖಾನೆ
-ಮೈಸೂರು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ
-ಮೈಸೂರು ವಿಶ್ವವಿದ್ಯಾಲಯ
-ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು
-ಮೈಸೂರು, ಬೆಂಗಳೂರು ಸಾರ್ವಜನಿಕ ಗ್ರಂಥಾಲಯಗಳು
-ಕನ್ನಡ ಸಾಹಿತ್ಯ ಪರಿಷತ್ತು
-ಜಯಚಾಮರಾಜೇಂದ್ರ ತಾಂತ್ರಿಕ ವಿದ್ಯಾಲಯ
-ಹೆಬ್ಬಾಳ ಕೃಷಿ ವಿದ್ಯಾಲಯ
-ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಕಾಲೇಜು

ಸರ್‌ ಎಂವಿಯವರ ಕೆಲವು ಪ್ರಮುಖ ಕೃತಿಗಳು :

-Memories of my working life-Planned economy for India.

  • Unemployment in India
  • Nation building
    -A five years plan for provinces

ನಿವೃತ್ತಿ :

೧೯೦೮ ರಲ್ಲಿ ವಿಶ್ವೇಶ್ವರಯ್ಯನವರು ನೌಕರಿಯಿಂದ ನಿವೃತ್ತರಾದರು.

Sir M Visvesvaraya: Dreamer, thinker, man of action | Deccan Herald

ಆದರೆ ಆಗಿನ ಮಹಾರಾಜ ಕೃಷ್ಣರಾಜೇಂದ್ರ ಒಡೆಯರ್‌ ರವರಿಗೆ ವಿಶ್ವೇಶ್ವರಯ್ಯ ಅವರು ನಿವೃತ್ತರಾಗಿ ಮನೆಗೆ ಮನೆಯಲ್ಲಿ ಕೂಡುವುದು ಇಷ್ಟವಿರಲಿಲ್ಲ. ಧಣಿಗಳ ಒತ್ತಾಸೆಯಂತೆ ಸರ್‌ಎಂವಿ ಅವರು ಮೈಸೂರಿನ ಅಭಿಯಂತರಾದರು. ವಿಶ್ವೇಶ್ವರಯ್ಯನವರದು ದಣಿವರಿಯದ ಪ್ರತಿಭೆ ! ಸವಾಲುಗಳನ್ನು ಎದುರಿಸಿ ಅದರಲ್ಲಿ ಯಶಸ್ಸನ್ನು ಕಾಣುವುದು ವಿಶ್ವೇಶ್ವರಯ್ಯನವರಿಗೆ ಇಷ್ಟ. ಮೈಸೂರಿನ ಪ್ರತಿ ಪ್ರಜೆಯೂ ಕಡ್ಡಾಯ ಪ್ರಾಥಮಿಕ ಶಿಕ್ಷಣಕ್ಕೆ ಹಕ್ಕುದಾರನೆಂದು ಘೋಷಿಸಿದರು. ಸ್ವಾತಂತ್ರ್ಯಪೂರ್ವದಲ್ಲಿಯೇ ಸ್ತ್ರೀ ಶಿಕ್ಷಣ ನೀತಿಗಳನ್ನು ಸರ್‌ಎಂವಿಯವರು ಪ್ರತಿಪಾದಿಸಿದ್ದರು. ಆಸ್ಟ್ರೇಲಿಯಾ ಮತ್ತು ಕೆನಡಾದಲ್ಲಿ ವಿಶ್ವ ವಿದ್ಯಾಲಯಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಹಾಗೆಯೇ ಮೈಸೂರು ವಿಶ್ವ ವಿದ್ಯಾಲಯವೂ ಲಕ್ಷಾಂತರ ವಿದ್ಯಾರ್ಥಿಗಳನ್ನು ಏಕೆ ರೂಪಿಸಬಾರದು ಎಂದು ಪ್ರಶ್ನಿಸುತ್ತಿದ್ದ ಸರ್‌.ಎಂವಿ- ಬೆಂಗಳೂರು ಮತ್ತು ಮೈಸೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ನಿರ್ಮಿಸಲು ಶ್ರಮಪಟ್ಟರು. ವಿಶ್ವ ಪ್ರಸಿದ್ಧ ಕನ್ನಂಬಾಡಿ ಅಣೆಕಟ್ಟೆ, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಹಾಗೂ ಏಷ್ಯಾದ ಅತಿದೊಡ್ಡ ಪಾಲಿಟೆಕ್ನಿಕ್‌ ಎನ್ನುವ ಅಗ್ಗಳಿಕೆಯ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌, ವಿಶ್ವೇಶ್ವರಯ್ಯನವರ ದಕ್ಷತೆ ಹಾಗೂ ಬುದ್ಧಿಮತ್ತೆಯ ಕುರುಹಾಗಿ ಇಂದಿಗೂ ನಮ್ಮೊಂದಿಗಿವೆ.

ವಿಶಾಖಪಟ್ಟಣಂ ನಲ್ಲಿ :

ಬಳಿಕ ಅವರ, ಯೋಜನೆ, ಯೋಚನೆ, ಹಾಗು ಸಲಹೆ, ಸಮುದ್ರ ಕೊರೆತದಿಂದ, ಆಂಧ್ರದ ಇನ್ನೊಂದು ನಗರ ವಿಶಾಖಪಟ್ಟಣಂ ಅನ್ನು ರಕ್ಷಿಸಿತು. 90 ನೇ ವಯಸ್ಸಿನಲ್ಲಿಯೂ ಅವರು ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ನಿರ್ಮಿಸುವ ಮತ್ತು ವಿನ್ಯಾಸಗೊಳಿಸುವುದರಲ್ಲಿ ಅವರು ಕ್ರಿಯಾ ಶೀಲರಾಗಿದ್ದರು.

ಮೈಸೂರಿನ ದಿವಾನರಾಗಿ ಸರ್‌ ಎಂ ವಿಶ್ವೇಶ್ವರಯ್ಯ :

ಮೈಸೂರಿನ ದಿವಾನರಾಗಿ ಸೇವೆ ಸಲ್ಲಿಸಲು ಆರಂಭಿಸುವ ಮೊದಲು, ಸರ್‌ ಎಂ ವಿಶ್ವೇಶ್ವರಯ್ಯನವರು ಹೈದರಾಬಾದ್‌ನ ದಿವಾನರಾಗಿ ಅಲ್ಲಿ ಸದಾಕಾಲ ಜನ ಸಾಮಾನ್ಯರ ಮನಸ್ಸಿನಲ್ಲಿ ನೆನಪಿನಲ್ಲಿ ಉಳಿಯುವ ಕೆಲಸ ಮಾಡಿದ್ದರು. ಮೈಸೂರಿನ ದಿವಾನರಾಗಿ ಅವರ ಸೇವಾವಧಿಯಲ್ಲಿ ಅವರು ಮೈಸೂರು ಸಾಬೂನು ಕಾರ್ಖಾನೆ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕೇಂದ್ರ ಗ್ರಂಥಾಲಯ, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಮತ್ತು ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಂತಹ ಹಲವಾರು ಶ್ರೇಷ್ಠ ಸಂಸ್ಥೆಗಳನ್ನು ಆರಂಭಿಸಿದರು. ಮೊದಲು ತಮ್ಮ ಬಂಧು ಬಳಗವನ್ನೆಲ್ಲ ಕರೆದು ಸಮಾಲೋಚನೆ ಮಾಡಿದರು. ತಮ್ಮ ಕರ್ತವ್ಯದ ಜವಾಬ್ದಾರಿ ಭಾರವನ್ನು ಬಂಧುಗಳಿಗೆ ಮನದಟ್ಟು ಮಾಡಿಸುವುದಕ್ಕಾಗಿ. ದಿವಾನ ಪದವಿಯಲ್ಲಿರುವ ತಮ್ಮನ್ನು ಯಾವುದೇ ಶಿಫಾರಸುಗಳಿಗೆ ಅಥವಾ ಕೆಲಸಗಳಿಗೆ ಒತ್ತಾಯಿಸಬಾರದು. ಪದವಿಯನ್ನುಪಯೋಗಿಸಿಕೊಂಡು ನೆರವು ನೀಡುವಂತೆ ಯಾರೂ ತಮ್ಮ ಬಳಿ ಬರಬಾರದು, ಎಂದು ಹೇಳುವುದಕ್ಕೆ. ಅವರು ದಿವಾನರಾಗಿದ್ದ ಅವಧಿಯಲ್ಲಿ, ಆಗಿನ ಮೈಸೂರು ರಾಜ್ಯದಲ್ಲಿ ಇನ್ನಿತರ ಅನೇಕ ಕೈಗಾರಿಕೆಗಳು ಆರಂಭವಾದವು. ಸರ್‌ ಎಂವಿ ಯವರು ಅವರ ಸಮಯ ಪರಿಪಾಲನೆ, ಸಂಕೀರ್ಣ ಕಲ್ಪನೆಗಳು-ವಿನ್ಯಾಸಗಳು, ಸಮರ್ಪಣಾಭಾವ ಮೊದಲಾದ ಗುಣಧರ್ಮಗಳಿಗೆ ಹೆಸರಾದವರು. ಸರ್‌ ಎಂವಿ ಕನ್ನಡ ಭಾಷೆಯನ್ನು ಪೋಷಿಸಿ, ಬೆಳೆಸುವುದರಲ್ಲೂ ಮಹತ್ವದ ಪಾತ್ರ ನಿಭಾಯಿಸಿದರು. ಏಷ್ಯಾ ಖಂಡದಲ್ಲೇ ವಿನ್ಯಾಸಗೊಳಿಸಲ್ಪಟ್ಟ ಅತ್ಯುತ್ತಮ ವಾಸ ಪ್ರದೇಶ ಎನ್ನಲಾಗುವ ದಕ್ಷಿಣ ಬೆಂಗಳೂರಿನ ಜಯನಗರ ಬಡಾವಣೆಯನ್ನು ಸರ್‌ ಎಂವಿಯವರು ವಿನ್ಯಾಸಗೊಳಿಸಿದ್ದರು.

ಬೆಂಗಳೂರು- ಚಿಕ್ಕಬಳ್ಳಾಪುರ ಲಘು ರೈಲ್ವೆ :

ಸರ್ ಎಂ ವಿ ಅವರ ಕಾರ್ಯಾವಧಿಯಲ್ಲಿ, ಮೈಸೂರಿನ ಹೊರನೋಟವೇ ಬದಲಾಯಿತು. ಹಲವು ಕೈಗಾರಿಕೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳನ್ನು ಆರಂಭಿಸಿದರು. ಜನರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ದೊರೆತವು. ಅವರು, ರಾಜ್ಯದ ಮೊದಲ ತಾಂತ್ರಿಕ ಕಾಲೇಜು-ಸರಕಾರಿ ಎಂಜಿನಿಯರಿಂಗ್‌ ಕಾಲೇಜ್‌, ಬೆಂಗಳೂರನ್ನು ೧೯೧೭ ರಲ್ಲಿ ಆರಂಭಿಸುವಲ್ಲೂ ಮಹತ್ವದ ಪಾತ್ರ ವಹಿಸಿದರು. ಬಳಿಕ, ಈ ಕಾಲೇಜನ್ನು ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ (UVCI) ಎಂದು ಅವರ ಗೌರವಾರ್ಥವಾಗಿ ಮರುನಾಮಕರಣ ಮಾಡಲಾಗಿದೆ.
ಸರ್‌ ಎಂ ವಿಶ್ವೇಶ್ವರಯ್ಯನವರು ಮೈಸೂರಿನ ದಿವಾನರಾಗಿದ್ದ ಕಾಲದಲ್ಲಿ ಐತಿಹಾಸಿಕ ಬೆಂಗಳೂರು- ಚಿಕ್ಕಬಳ್ಳಾಪುರ ಲಘು ರೈಲ್ವೇ ಯೋಜನೆ. ಇದನ್ನು ೧೯೦೯ ರಲ್ಲಿ ಎರಡು ಅಡಿ ಆರು ಇಂಚಿನ ಗೇಜ್‌ ರೈಲ್ವೇ ಹಳಿಯ ದಾರಿಯಾಗಿ ಮಂಜೂರು ಮಾಡಲಾಗಿತ್ತು.

ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ವಿಭಾಗ ೧೯೧೫ ರ ಆಗಸ್ಟ್‌ ೧ ರ ವೇಳೆಗೆ ಓಡಾಟಕ್ಕೆ ಸಿದ್ಧವಾಗಿತ್ತು. ಇದು ಖಾಸಗಿ ಉದ್ಯಮದಿಂದ ಸಿದ್ಧವಾದ ಮೊದಲ ರೈಲ್ವೇ ಹಳಿಯಾಗಿದೆ.ಒಂದು ವೇಳೆ ಕಂಪನಿ ಬಂಡವಾಳದ 5 ಶೇಕಡಾ ಕಡಿಮೆ ಆದಾಯ ಗಳಿಸಿದರೆ, ಮೈಸೂರು ರಾಜ ಸಂಸ್ಥಾನ ಈ ವ್ಯತ್ಯಾಸದ ಮೊತ್ತವನ್ನು ಭರಿಸುವ ಭರವಸೆಯೊಂದಿಗೆ ಇದಕ್ಕೆ ಚಾಲನೆ ದೊರೆಯಿತು. ಇದೇ ವೇಳೆ, ಗಳಿಸಿದ ಹೆಚ್ಚುವರಿ ಆದಾಯವನ್ನು ಕಂಪನಿ ಮತ್ತು ಸರ್ಕಾರಗಳ ನಡುವೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತಿತ್ತು. ಪ್ರಸಿದ್ಧ ನಂದಿ ಹಾಲ್ಟ್‌, ಇದೇ ರೈಲ್ವೆ ಮಾರ್ಗದಲ್ಲಿದೆ. ಕಟ್ಟಡದ ಗೋಡೆಗಳು, ಮತ್ತು ಭವನದ ವಿನ್ಯಾಸದ ಹೆಗ್ಗಳಿಕೆ ಸರ್‌ ಎಂ. ವಿಶ್ವೇಶ್ವರಯ್ಯನವರಿಗೆ ಸಲ್ಲಬೇಕು.

ಸರ್ ಎಂ. ವಿಶ್ವೇಶ್ವರಯ್ಯನವರ ಸೇವಾವಧಿ :

  • ೧೮೮೪ ರಲ್ಲಿ ಸಹಾಯಕ ಎಂಜಿನಿಯರ್‌, ಮುಂಬೈ ಸರ್ಕಾರಿ ಸೇವೆ
  • ಮುಖ್ಯ ಎಂಜಿನಿಯರ್‌, ಹೈದ್ರಾಬಾದ್‌ ರಾಜ್ಯ (ಅವರು ಏಪ್ರಿಲ್‌ ೧೫, ೧೯೦೯ ರಿಂದ ಕೇವಲ ಏಳು ತಿಂಗಳ ಕಾಲ ಸೇವೆ ಸಲ್ಲಿಸಿದರು)
  • ಮುಖ್ಯ ಎಂಜಿನಿಯರ್‌, ಮೈಸೂರು ರಾಜ್ಯ (ನವೆಂಬರ್‌ ೧೫, ೧೯೦೯). ಅವರು ರೈಲ್ವೇಸ್‌ನ ಕಾರ್ಯದರ್ಶಿಯೂ ಆಗಿದ್ದರು.
  • ಮೈಸೂರು ರಾಜ್ಯದ ಶಿಕ್ಷಣ ಮತ್ತು ಕೈಗಾರಿಕಾ ಅಭಿವೃದ್ಧಿ ಸಮಿತಿಗಳ ಅಧ್ಯಕ್ಷರು.
  • ೧೯೧೨ ರಲ್ಲಿ ಮೈಸೂರಿನ ದಿವಾನರಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು.
  • ಭದ್ರಾವತಿ ಉಕ್ಕು ಕಾರ್ಖಾನೆಯ ಮುಖ್ಯಸ್ಥರಾಗಿ,
  • ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು.
  • ಟಾಟಾ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಸದಸ್ಯರು (TISCO)
  • ಲಂಡನ್‌ನ Back bay investigation organisation ಸದಸ್ಯರು.
  • ಭಾರತದ ರಾಜ್ಯಗಳ ಭವಿಷ್ಯದ ಕುರಿತು ಶಿಫಾರಸು ಮಾಡಲು ೧೯೧೭ ರಲ್ಲಿ ರಚಿಸಲಾದ ಸಮಿತಿಯ ಸದಸ್ಯರು.
  • ಸರ್‌ ಎಂವಿ ೧೯೦೮ ನಿವೃತ್ತಿ ಹೊಂದಿದರು ಮತ್ತು ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಕೃಷ್ಣರಾಜೇಂದ್ರ ಒಡೆಯರ್‌ ಮೈಸೂರಿಗೆ ವಿಶ್ವೇಶ್ವರಯ್ಯನವರ ಸೇವೆಯನ್ನು ಪಡೆದುಕೊಳ್ಳಲು ಕಾತರರಾಗಿದ್ದರು. ಒಡೆಯರ್ ಕೋರಿಕೆ ಮೇರೆಗೆ ಅವರು ಮೈಸೂರಿನಲ್ಲಿ ಮುಖ್ಯ ಎಂಜಿನಿಯರ್‌ ಆಗಿ ಸೇರಿದರು. ಏಕೆಂದರೆ ಅವರಿಗೆ ಸವಾಲಿನ ಅವಕಾಶಗಳು ಬೇಕಿದ್ದವು. ಸರ್‌ ಎಂ.ವಿ.ಯವರು ತಮ್ಮ ನಿಯತ್ತು, ಪರಿಪೂರ್ಣತೆ, ಸಾಮರ್ಥ್ಯ ಮತ್ತು ಬುದ್ಧಿವಂತಿಕೆಗಾಗಿ ಎಲ್ಲೆಡೆ ಗೌರವಕ್ಕೆ ಪಾತ್ರರಾಗಿದ್ದರು. ಅವರು ರಾಜ್ಯದಲ್ಲಿ ಕಡ್ಡಾಯ ಶಿಕ್ಷಣವನ್ನು ಜಾರಿಗೊಳಿಸಿದ್ದರು ಮತ್ತದನ್ನು ನಂತರ ಸ್ವತಂತ್ರ ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಸೇರಿಸಲಾಯಿತು. ಸರ್.ಎಂ.ವಿ- ಅಭಿವೃದ್ಧಿಯ ದಾರ್ಶನಿಕರೆಂದು.

ಸರ್.ಎಂ.ವಿ. ಅವರ ನೇತೃತ್ವದಲ್ಲಿ ಜಾರಿಗೊಂಡ, ಹಲವಾರು ಪ್ರಮುಖ ಯೋಜನೆಗಳ ವಿವರಗಳು :

  • ಕೃಷ್ಣರಾಜಸಾಗರ ಅಣೆಕಟ್ಟು ಅಥವಾ KRS ಅಥವಾ ಬೃಂದಾವನ ಉದ್ಯಾನವನದ ವಾಸ್ತುಶಿಲ್ಪಿ . ಇದು ಭಾರತದ ಅತ್ಯಂತ ದೊಡ್ಡ ನೀರಾವರಿ ಅಣೆಕಟ್ಟುಗಳಲ್ಲಿ ಒಂದಾಗಿದ್ದು, ಒಂದು ಲಕ್ಷದ ಇಪ್ಪತ್ತು ಸಾವಿರ ಎಕರೆ ಭೂಪ್ರದೇಶಕ್ಕೆ ನೀರುಣಿಸುತ್ತದೆ. ಇದನ್ನು ರೂಪಾಯಿ ೨.೫ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಬಂಜರು ಭೂಮಿಯಾಗಿದ್ದ ಮಂಡ್ಯ ಜಿಲ್ಲೆಯನ್ನು ನಮ್ಮ ರಾಜ್ಯದ ಭತ್ತದ ಬಟ್ಟಲ ನ್ನಾಗಿಸಿದೆ. ಮೈಸೂರು ಮತ್ತು ಬೆಂಗಳೂರಿಗೆ ಕುಡಿಯುವ ನೀರನ್ನೂ ಈ ಅಣೆಕಟ್ಟಿನಿಂದಲೇ ಪೂರೈಸಲಾಗುತ್ತದೆ.
  • Bhadravati Iron & Steel factory ನೆಯ ಮುಖ್ಯಸ್ಥರಾಗಿ, ಕಾರ್ಖಾನೆ ಮುಚ್ಚಿ ಹೋಗುವುದರಿಂದ, ಅದನ್ನು ರಕ್ಷಿಸಿದರು.
  • ಮೈಸೂರು ಗಂಧದ ಎಣ್ಣೆ ಕಾರ್ಖಾನೆ, ಮತ್ತು ಮೈಸೂರು ಸಾಬೂನು ಕಾರ್ಖಾನೆ.
  • Mysore University “ಆಸ್ಟ್ರೇಲಿಯಾ ಮತ್ತು ಕೆನಡಾದಂತಹ ದೇಶಗಳು ೧೦ ಲಕ್ಷಕ್ಕಿಂತಲೂ ಕಡಿಮೆ ಜನರಿಗೆ ಸ್ವಂತ ವಿಶ್ವವಿದ್ಯಾನಿಲಯಗಳನ್ನು ಹೊಂದುತ್ತವೆ.
  • ಹೆಚ್ಚಿನ ಜನಸಂಖ್ಯೆಯಿರುವ ಮೈಸೂರು ರಾಜ್ಯ ಸ್ವಂತ ವಿಶ್ವವಿದ್ಯಾನಿಲಯವನ್ನು ಏಕೆ ಹೊಂದಬಾರದು?” ಎಂಬುದು ಸರ್‌ ಎಂ ವಿಯವರ ಪ್ರಶ್ನೆಯಾಗಿತ್ತು.
  • State bank of Mysore (ಮೊದಲು ಇದನ್ನು “The Bank of Mysore ” ಕರೆಯಲಾಗುತ್ತಿತ್ತು”).
  • Public Libraries in Mysore & Bengaluru
  • ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ.
  • Mysore Chamber of Commerce
  • ಕನ್ನಡ ಸಾಹಿತ್ಯ ಪರಿಷತ್‌.
  • Shri. Jayachamarajendra Polytechnic Institute ಭದ್ರಾವತಿ ಕಬ್ಬಿಣ ಕಾರ್ಖಾನೆಯನ್ನು ಉಳಿಸಿ ತಾವು ಗಳಿಸಿದ್ದ ಸಂಪೂರ್ಣ ಮೊತ್ತವನ್ನು [ರೂ. 2,00,000] ಅನುದಾನವಾಗಿ ಬಳಸಿದ್ದರು.
  • ‘ಹೆಬ್ಬಾಳ ಕೃಷಿ ಶಾಲೆ’ಯನ್ನು ೧೯೧೨ ರಲ್ಲಿ ಸ್ಥಾಪಿಸಿದ್ದರು, ಅದೀಗ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯವಾಗಿ ಬೆಳೆದುನಿಂತಿದೆ.
  • ಸರ್ ಎಂ ವಿ ೧೯೦೩ ರಲ್ಲಿ ಸ್ವಯಂಚಾಲಿತ ವೀರ್ಡ್‌ ವಾಟರ್‌ ಫ್ಲಡ್‌ಗೇಟ್‌ಗಳನ್ನು ವಿನ್ಯಾಸಗೊಳಿಸಿದರು ಮತ್ತು ಅವುಗಳನ್ನು ಕಡಕ್ವಾಸ್ಲ ಜಲಾಶಯಕ್ಕೆ ಅಳವಡಿಸಿದರು.
    ಅವರು ಕರ್ನಾಟಕದಲ್ಲಿ ನೀರಾವರಿ ವ್ಯವಸ್ಥೆಯನ್ನು ಜಾರಿಗೊಳಿಸಿದರು.
  • ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ (ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯ)
  • ದಿ ಸೆಂಚುರಿ ಕ್ಲಬ್‌ , ಬೆಂಗಳೂರು.
  • ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು, ಬೆಂಗಳೂರು
  • ಸರ್‌ ಎಂವಿಯವರು ಯಾವತ್ತೂ ಖ್ಯಾತಿ ಅಥವಾ ಜನಪ್ರಿಯತೆಯಲ್ಲಿ ಆಸಕ್ತಿ ಹೊಂದಿದವರಲ್ಲ. ಆದರೆ ಅವೆಲ್ಲವೂ ಅವರಿಗೆ ತಾನಾಗಿಯೇ ಒಲಿದು ಬಂದವು. ಭಾರತದ ಎಲ್ಲಾ ವಿಶ್ವವಿದ್ಯಾನಿಲಯಗಳ ಗೌರವಗಳು ಅವರನ್ನು ಹುಡುಕಿಕೊಂಡು ಬಂದವು. ಅಲಹಾಬಾದ್‌, ಆಂಧ್ರ, ಬಾಂಬೆ, ಕಲ್ಕತ್ತ, ಜಾಧವ್‌ಪುರ, ಮೈಸೂರು, ಪಾಟ್ನಾ ಮತ್ತು ವಾರಣಾಸಿಯ ವಿಶ್ವವಿದ್ಯಾನಿಲಯಗಳು ಇವುಗಳಲ್ಲಿ ಸೇರಿವೆ.

ಸರ್ ಎಂ ವಿ ರವರಿಗೆ ಸಂದ ಗೌರವಗಳು, ಪ್ರಶಸ್ತಿಗಳು :

  • ೧೯೧೧ ರಲ್ಲಿ ಬ್ರಿಟಿಶ್ ಸರಕಾರವು CIE ಬಿರುದು ನೀಡಿ ಗೌರವಿಸಿತು.
  • ೧೯೧೫ ರಲ್ಲಿ ಬ್ರಿಟಿಶ್ ಸರಕಾರವು KCIE ಬಿರುದು ನೀಡಿ ಸನ್ಮಾನಿಸಿತು. ಅವರು ದಿವಾನರಾಗಿದ್ದಾಗ ಬ್ರಿಟಿಶ್ ಸರಕಾರ ಅವರಿಗೆ ‘ಸರ್’ ಪದವಿಯನ್ನು ನೀಡಿತು.
  • ೧೯೧೯ ರಲ್ಲಿ ಅವರು ಜಪಾನ್, ಕೆನಡಾ, ಅಮೇರಿಕಾ ಪ್ರವಾಸದಲ್ಲಿದ್ದರು. ೧೯೨೧ ರಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯ D.Sc; ನೀಡಿ ಗೌರವಿಸಿತು.
  • ೧೯೩೧ ರಲ್ಲಿ Bombay University ದಿಂದ L.L.D 1937ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಅವರಿಗೆ D.Lit; ಪದವಿ ನೀಡಿ ಗೌರವಿಸಿತು.
  • ೧೯೪೮ ರಲ್ಲಿ ಎಮ್. ವಿ. ಅವರ ಸಾದನೆಗಳನ್ನು ಗುರುತಿಸಿ ಮೈಸೂರು ವಿಶ್ವವಿದ್ಯಾಲಯವು ಅವರಿಗೆ Doctorate ನೀಡಿ ಗೌರವಿಸಿತು.
  • ೧೯೫೫ ರಲ್ಲಿ ಭಾರತ ಸರಕಾರ ಅತ್ತ್ಯುನ್ನತ ಗೌರವ ಪ್ರಶಸ್ತಿ, ‘ಭಾರತ ರತ್ನ’ ನೀಡಿತು.

ನಿಧನ :

೧೯೬೨ ರ ಏಪ್ರಿಲ್‌ ೧೨ ರಂದು ವಿಶ್ವೇಶ್ವರಯ್ಯ ತಮ್ಮ ೧೦೨ ವರ್ಷದ ಸಾರ್ಥಕ ಬದುಕನ್ನು ಮುಗಿಸಿದರು. ಆದರೆ, ಅವರ ಕನ್ನಡನಾಡಿಗಾಗಿ ಮಾಡಿದ ಸೇವೆಗಳ ಸವಿ ನೆನಪುಗಳು ಕನ್ನಡದ ಜನ-ಜಲ-ನೆಲಗಳಲ್ಲಿ ಸದಾ ಹಸಿರಾಗಿ ಉಳಿದಿದೆ. ಮುಂದೆಯೂ ಇರುತ್ತದೆ.

ಕೊನೆಯ ಮಾತು :

ಕೇವಲ ಸರ್. ಎಂ. ವಿಶ್ವೇಶ್ವರಯ್ಯನವರ ಸಾನ್ನಿಧ್ಯದಲ್ಲಿ ಕೆಲವು ಗಂಟೆಗಳ ಸಮಯ ಕಳೆದೆವೆಂಬ ಭಾವ, ನಾವು ನಾಲ್ಕು ಗೆಳೆಯರಿಗೂ ‘ಮೈ ಮನಗಳಲ್ಲಿ ಆವರಿಸಿತ್ತು’. ಇಂದಿಗೂ ನಾವೆಲ್ಲ ಯಾವಾಗಲಾದರೂ ಭೇಟಿಯಾದಾಗ, ಆ ಸಂತಸದ ಕ್ಷಣಗಳನ್ನು ಒಂದು ಗಂಟೆಯಾದರೂ ಚರ್ಚಿಸದೆ ಇರುವುದಿಲ್ಲ. (ದುರ್ದೈವದಿಂದ ನಾವು ನಾಲ್ವರಲ್ಲಿ ಇಬ್ಬರು ಜೀವಂತವಾಗಿಲ್ಲ)

Reference: Courtesy : wikimedia commons.